Friday, January 14, 2011

ಮಕರ ಸಂಕ್ರಮಣದ ಶುಭಸಮಯದಿ ಎಲ್ಲರಿಗೂ ಶುಭಾಶಯಗಳು..

.


          ಕವಿತೆಗಳು ಎಲ್ಲೆಲ್ಲೂ ಕುಣಿದಾಡುವಾಗ ಮನಸು ಕಥೆ ಬರೆಯೋಕೆ ಹೊರಟಿದೆ. ಕಥೆಯೆಂದರೆ ಅದು ಕಥೆಯಲ್ಲ. ಕಾವ್ಯವೆಂದರೆ ಕಾವುವೂ ಅಲ್ಲ.
ಸುಮ್ಮನೇ  ಬರೆದುಕೊಂಡ ಸಾಲು ಸಾಲು ಭಾವಗಳು. ಯಾಕೋ ಇತ್ತೀಚೆಗೆ ಬರೆಯೋದು ಓದೋದು ಎಷ್ಟು ಆಪ್ತವೋ ಅದಕ್ಕಿಂತ ಬದುಕು ಹೆಚ್ಚು ಆಪ್ತ ಎನಿಸುತ್ತದೆ.
ನೀವೂ ಯೋಚನೆಮಾಡಿ. ನಿಮ್ಮ ಬದುಕನ್ನ ನಿಮ್ಮದೇ ಶೈಲಿಯಲ್ಲಿ ಬದುಕುತ್ತಿದ್ದರೆ ಅದೂ ತುಂಬಾ ಆಪ್ತವಾಗಿರುತ್ತದೆ. ಯಾರೂ ಇಲ್ಲದ ನಮ್ಮದೇ ಪ್ರಪಂಚ ಕಟ್ಟಿಕೊಳ್ಳುವ ಸುಖ ನಿಮಗೆ ಗೊತ್ತಾ? ಆಶ್ಚರ್ಯವಾ? ಸ್ವಲ್ಪ ಕಷ್ಟವಿರಬಹುದು. ಆದರೆ ಇದು ನಿಜಕ್ಕೂ ತುಂಬಾ ಸುಂದರವಾಗಿದೆ.

   ಜೋಗಿಯಂತೆ ಬದುಕೋದು ಅಂದರೆ ಇದೇನಾ? ಹಾಂ. ಯಾರ ಬಗ್ಗೆಯೂ ಯೋಚಿಸದೇ ಯಾರ ಒಳಿತು ಕೆಡಕುಗಳ, ಸುಳ್ಳು ಸತ್ಯಗಳ ಹೊರೆಯಿಲ್ಲದೇ
ಯಾವ ಜವಾಬ್ಧಾರಿಯೆಂಬ ಮುಸುಕಿಲ್ಲದೇ ಎಲ್ಲವನೂ ಕಳೆದುಕೊಂಡು ಆ ಗಿರಿಧರನ ನಂಬಿ ಬದುಕೋದು ಮತ್ತು ಬದುಕಿನ ಎಲ್ಲ ಆಗು ಹೋಗುಗಳ ಅವನಿಗೆ ಬಿಟ್ಟು ಆತ್ಮದ ಅನುಸಂಧಾನಕ್ಕೆ ತೊಡಗಿಕೊಳ್ಳೋದು ಎಂದಾದರೂ ಸಾಧ್ಯವಾಗಬಲ್ಲದಾದರೆ ಅದು ಇಂತಹ ಧ್ಯಾನದ ದಿನಗಳಲ್ಲಿ. ತಪಸ್ಸಿಗೆ ಯಾವ ಬೆಟ್ಟ ಕಾಡುಗಳು, ಹಿಮಾಲಯಗಳೂ ಬೇಕಾಗಿಲ್ಲ. ಇದ್ದಕ್ಕಿದ್ದಲ್ಲೇ ಹಿಮವಾಗುವ ಮೌನ.. ಶಿಲೆಯಾಗುವ ಜೀವ, ಕರಗಿದರೆ ಶುದ್ಧ ಗಂಗೆ, ಗಟ್ಟಿಯಾದರೆ ಹಿಮಶಿಲೆ. ಇಂತಹ ಬದುಕಿನ ಸಾಕಾರ
ಸಾಧ್ಯವಾದರೆ  ಬದುಕು ಸಾರ್ಥಕ ಅಲ್ಲವಾ?

    ನಾನು  ಭೌತಿಕ ಬದುಕಿನ ತೊರೆಯುವಿಕೆಯನ್ನು ಮಾತಾಡುತ್ತಿದ್ದೇನೆ ಅಂದುಕೊಂಡಿರಾ? ಇಲ್ಲ. ಇದು ಬದುಕಿನೊಳಗಿನ ಸಂತೆ ಎಂಬ ಅರಿವಿನೊಂದಿಗೆ ಬರೆಯುತ್ತಿದ್ದೇನೆ. ಕರ್ಮಗಳಿಗೆಲ್ಲ ನಾವು ಹೊಣೆಯಾದರೆ ಧರ್ಮಗಳಿಗೂ ನಾವೇ ಹೊಣೆ. ಪ್ರೀತಿಯೆಂಬ ಭಾವದ ಬಂಧಕ್ಕೆ ಬೀಳುವ ನಾವೆಲ್ಲ ನಮ್ಮನ್ನು ಪ್ರೀತಿಸುವಷ್ಟು ಇನ್ಯಾರನ್ನೂ ಪ್ರೀತಿಸುವುದಿಲ್ಲ. ಹಾಗೇ ನಮ್ಮನ್ನ ನಾವು ನೋಯಿಸಿಕೊಳ್ಳುವಷ್ಟು ನಮ್ಮನ್ನು ಇನ್ಯಾರೂ ನೋಯಿಸೋದಿಲ್ಲ. ಒಂದಿನವಿತ್ತು. ನಂಬಿಕೆ ಸ್ನೇಹ ಪ್ರೀತಿ ಅಂದರೆ ಬದುಕು ಅನ್ನೋದು ನನ್ನ ಮನಸಲ್ಲೂ ತುಂಬ್ಕೊಂಡಿತ್ತು. ಈ ಬದುಕಿಗೆ ಅನಿವಾರ್ಯ ಈ ಪ್ರೀತಿ ಅಂತ ನಾನಂದುಕೊಂಡಿದ್ದೆ. ಇಲ್ಲ ನನ್ನೊಳಗಿನ ಭಗವದ್ಪ್ರೀತಿಯ ಹೊರತಾಗಿ ಯಾವ ಪ್ರೀತಿಯೂ ಬದುಕಿಗೆ ಅನಿವಾರ್ಯ ಅಲ್ಲ. ನನ್ನೊಳಗೆ ಅದಿರುವವರೆಗೆ ಮಾತ್ರ ನಾನಿರುತ್ತೇನೆ. ಯಾರಿರಲಿ ಇಲ್ಲದಿರಲಿ ಬದುಕು ಸಾಗುತ್ತದೆ. ಉದಾಹರಣೆಗೆ ಎಷ್ಟೋ ಕಾಲ ನಮ್ಮನ್ನ ಹೆತ್ತು ಹೊತ್ತು ಪ್ರೀತಿ ಪಾಲನೆ ಮಾಡಿದ ಹೆತ್ತವರೇ ಇರದಿದ್ದಾಗಲೂ ನಾವು ಕೆಲವು ದಿನಗಳ ವ್ಯಸ್ಥತೆಯ ಆಚೆಗೆ ಸಖಲ ಸುಖ ಬೋಗಗಳ ಜೊತೆ ಬದುಕುತ್ತೇವೆ. ಅಂದರೆ ನಮ್ಮ ಬದುಕಿನ ಆ ಭಾಗ ನನಗಿಂತ ಯಾವತ್ತೂ ದೊಡ್ಡದಾಗೋದಿಲ್ಲ. ಮತ್ತು ಶಾಶ್ವತ ನೋವಿಗೆ ಗುರಿಮಾಡೋದಿಲ್ಲ. ಅದೊಂದು ಬದುಕಿನ ಸತ್ಯ ಎಂಬುದ ಮನಸಿಗೆ ಒಪ್ಪಿಕೊಳ್ಳುತ್ತೇವೆ.

  ಮತ್ತೊಂದಷ್ಟು ಮನಸಿಗನ್ನಿಸಿದ್ದನ್ನ ಹಂಚಿಕೊಳ್ಳುತ್ತೇನೆ.ನಿಮಗೆ ಇಷ್ಟವಾಗಬಹುದು, ಆಗದಿರಬಹುದು.  ಇದು ಸಾರ್ವಕಾಲಿಕ ಸತ್ಯಗಳಲ್ಲ. ಇವತ್ತಿಗೆ ತೋರುವ ಮುಖಗಳಷ್ಟೇ. ಪ್ರೀತಿ ಮನುಷ್ಯನನ್ನಾಳುವ ಬಲ. ಅದಕ್ಕಿರೋ ಶಕ್ತಿ ಊಹಿಸಲಸಾಧ್ಯ. ಏನೆನೆಲ್ಲಾ ಮಾಡೋದು ಹಿಡಿ ಪ್ರೀತಿಗಾಗಿ, ಅದು ಅಪ್ಪ ಅಮ್ಮಂದಾಗಲಿ, ಅಣ್ಣ, ತಮ್ಮಂದಾಗಲೀ, ಅಕ್ಕ ತಂಗಿಯರದ್ದಾಗಲೀ, ಪತಿ ಪತ್ನಿಯರದ್ದರಿಲೀ, ಸ್ನೇಹ, ಪ್ರೇಮದ್ದಿರಲಿ. ಎಲ್ಲರಿಗೂ ಪ್ರೀತಿ ಬೇಕು. ಎಲ್ಲಾ ತರದ ಪ್ರೀತಿ ಬೇಕು. ಪ್ರೀತಿ ಇಲ್ಲಾಂದರೆ
ನೋವು ಸಹಜ.  ನಾವು ಎಲ್ಲರನ್ನೂ ಎಲ್ಲ ಸಮಯದಲ್ಲೂ ಪ್ರೀತಿಸೋದಿಲ್ಲ. ಮತ್ತು ಪ್ರೀತಿಸದಿರೋದೂ ಇಲ್ಲ. ಇದೂ ಕೂಡ ಸತ್ಯ. ಎಂತದ್ದೇ ಪ್ರೀತಿ ಬದುಕಿನ ವಾಸ್ತವಕ್ಕೆ ಬಂದಾಗ ಬೆಲೆ ಕಳೆದುಕೊಳ್ಳುತ್ತೋ ಆ ಪ್ರೀತಿಗೆ ಯಾವ ಅರ್ಥವೂ ಇರೋದಿಲ್ಲ. ಪ್ರೀತಿ ಇದೆ ತುಂಬಾ... ಅಂದ ಮಾತ್ರಕ್ಕೆ ಕಟು ವಾಸ್ತವ ಬದುಕಿನಲ್ಲಿ ಕೈ ಬಿಡೋ ಪ್ರೀತಿಗಾಗಿ ನಿಜಕ್ಕೂ ಅರ್ಥವಿಲ್ಲದ್ದು. ಆದರೂ ನೋಯ್ತೇವೆ. ಯಾಕೆಂದರೆ ನಾವು ಪ್ರೀತಿಸಿರುತ್ತೇವೆ. ನಂಬಿರುತ್ತೇವೆ ಅಷ್ಟು.

   ಇದಕ್ಕೊಂದು ಚಿಕ್ಕ ಕಥೆಯ ಉದಾಹರಣೆ ಹೇಳಬೇಕೆಂದರೆ, ಒಬ್ಬ ಅಜ್ಜ ಮೊಮ್ಮಗನ ತುಂಬಾ ಪ್ರೀತಿಸುತ್ತಿದ್ದ. ಅವನೇ ಸಾಕಿ ಸಲಹಿ ಉನ್ನತ ವಿದ್ಯಾಭ್ಯಾಸ ಪಡೆದು
ದೂರದ ಊರಲ್ಲಿ ನೌಕರಿ ಹಿಡಿದು ಅಜ್ಜನ ತುಂಬಾ ಖುಶಿಪಡಿಸಿದ. ಕಷ್ಟ ಪಟ್ಟ ಅಜ್ಜ ಮೊಮ್ಮಗನ ದೂರದ ದೇಶಕ್ಕೆ ಕಳಿಸಿ ಸಂಭ್ರಮಪಟ್ಟ. ಕೆಲವು ದಿನಗಳ ನಂತರ ಅಜ್ಜ ಕಾಯಿಲೆ ಬಿದ್ದ. ಮತ್ತು ಮೊಮ್ಮಗನಿಗೆ ಒಮ್ಮೆ ಬಂದು ನೋಡುವಂತೆ ಪತ್ರ ಬರೆದ. ಮೊಮ್ಮಗನಿಗೂ ಅಜ್ಜನೆಂದರೆ ಬಲು ಪ್ರೀತಿಯೇ.. ಆದರೆ ಅವನ ಒತ್ತಡಗಳಲ್ಲಿ ಅವನಿಗೆ ಬರಲು ಆಗಲಿಲ್ಲ. ಹಾಗೇ ಹೇಳುತ್ತಿದ್ದ ಕೂಡ. ಅಜ್ಜನೆಂದರೆ ನನಗೆ ಬಹಳ ಪ್ರೀತಿ ಅಂತಾ ಎಲ್ಲರ ಕಡೆ ಹೇಳ್ಕೊಂಡ. ಹೀಗೇ ಅಜ್ಜ, ಮೊಮ್ಮಗ ಇಬ್ಬರೂ ಪ್ರೀತಿ ಪ್ರೀತಿ ಅಂತ ಹೇಳಿಕೊಳ್ಳುತ್ತಲೇ ದಿನಕಳೆಯಿತು. ಕೊನೆಗೂ ಮೊಮ್ಮಗ ಬರುವ ಮುನ್ನವೇ ಅಜ್ಜ ಪ್ರಾಣ ಬಿಟ್ಟ. ನಂತರ ಬಂದ ಮೊಮ್ಮಗ ಅಜ್ಜನ ಚಿತೆಗೆ ಬೆಂಕಿಯಿಟ್ಟು
ನನಗೆ ಅವನೆಂದರೆ ಬಹಳ ಪ್ರೀತಿ ಇತ್ತು. ಅಜ್ಜನ ಆತ್ಮ ನೋಡ್ತಾ ಇದೆ ಅಜ್ಜ ಸತ್ತು ಹೋದರೂ ಅಂತ ಸಮಾಧಾನ ಮಾಡ್ಕೊಂಡ. ಆದರೆ ನಿಜಕ್ಕೂ ಬದುಕಿದ್ದಾಗ ಒಂದೇ ಒಂದು ಸಲ ಬಂದು ನೋಡದ ಅಜ್ಜನ ಮನಸ್ಸಿಗೆ ಒಳಗೊಳಗಾದ ನೋವಿಗೆ ಮೊಮ್ಮಗನಿಗೆ ಅರ್ಥ ಆಗುವುದೇ? ಅಜ್ಜ ಸತ್ತ ಮೇಲೆ ಲಕ್ಷಾಂತರ ರೂಪಾಯಿಕೊಟ್ಟು ದಾನ ಧರ್ಮ ಮಾಡಿದರೂ ಅಜ್ಜನ  ಆತ್ಮಕ್ಕೆ ಸಮಾಧಾನ ಸಿಗಬಲ್ಲದೇ? ಸಾಯೋಕ್ಕಿಂತ ಮೊದ್ಲು ಅದನ್ನ ವ್ಯಕ್ತಪಡಿಸಿದ್ರೆ ಅಜ್ಜ ನೆಮ್ಮದಿಯಾಗಿ ಕಣ್ಮುಚ್ಚುತ್ತಿದ್ದ. ಅದು ಅವನ ಪ್ರೀತಿಯ ತೋರಿಸಬೇಕಾದ ರೀತಿಯಾಗಿತ್ತು. ಬದಲಾಗಿ ಸತ್ತು ಹೋದ ಮೇಲೆ ನಂಗೆ ಬಹಳ ಪ್ರೀತಿಯಿತ್ತು! ಅನ್ನೋ ಪ್ರೀತಿಗಳಲ್ಲಿ ಯಾವ ಅರ್ಥವಿದೆ ನೀವೇ ಹೇಳಿ. ಅದಕ್ಕೆಂದೇ ನನಗನ್ನಿಸಿದ್ದು ನನ್ನೊಳಗಿನ ಪ್ರೀತಿ ಮಾತ್ರ ನನ್ನದು. ಉಳೀದದ್ದೆಲ್ಲ ಕಟ್ಟಿಗೆ ಬಾರದ ಕೈಗೆ ನಿಲುಕದ ಪ್ರೀತಿ. ನಿನಗೆ ಪ್ರೀತಿಸೋ ಮನಸಿದ್ದರೆ ಪ್ರೀತಿಸು. ಅದನ್ನ ನಿಭಾಯಿಸೋ ತಾಕತ್ತಿದ್ದರೆ ಅದನ್ನ ವ್ಯಕ್ತಪಡಿಸು ಇಲ್ಲಂದ್ರೆ ಸುಮ್ಮನೇ ಉಳಿದುಬಿಡು. ಬೇರೆಯವರ ಪ್ರೀತಿನ ನಂಬಿ ಯಾವತ್ತೂ ನಿನ್ನ ಪ್ರೀತಿನ ನೋಯಿಸ್ಕೋಬೇಡ ಅಂತ ಮನಸು ಹೇಳಿದ್ದನ್ನೇ ಬರೆದೆ ಇಲ್ಲಿ. 

      ಹೇಳಿದಷ್ಟು ಸುಲಭವಾಗಿ ಬದುಕಲಾಗುವ ಸತ್ಯಗಳಲ್ಲ ಇವು. ಆದರೆ ಸಧ್ಯಕ್ಕೆ ಮಾನಸ ಸರೋವರ ಈ ಸತ್ಯದೆಡೆಗೆ ನೆಲೆಯಾಗುತ್ತಿದೆ. ಭೌತಿಕ ಒತ್ತಡಗಳ ಹೊರತಾಗಿ ಮನಸು ನೆಲೆನಿಂತ ಶಾಂತ ಸರೋವರದ ನೆಲೆಯಾಗುತ್ತಿದೆ. ನೋಡುತ್ತಿರೋ ಮನಸುಗಳಿಗೆಲ್ಲ ಇದೊಂದು ವೈಪರೀತ್ಯವಾ? ಅಥವಾ ಗಜಿಬಿಜಿ ಅಲೆಗಳ
ಕೊಳವಾ ಅನ್ನಿಸಬಹುದು. ಮೇಲೆ ನಿಂತಂತೆ ತೊರ್ತಾ ಇರೋ ಅಗ್ನಿ ಸರೋವರವಾ ಅನ್ನೋ ಪ್ರಶ್ನೆ ಕೂಡ ಏಳಬಹುದು. ಆದರೆ ಹೀಗೆ ಶಾಂತವಾಗುವ ಮುನ್ನ ಒಂದಿಷ್ಟು ಅಲೆಗಳು  ಕುಣಿದಾಡಿ ನತರ್ಿಸಿ ದಣಿದು ವಿಶ್ರಮಿಸುವುದು  ಮಾನಸ ಸರೋವರದ ಮೂಲಗುಣವೇ ಆಗಿದೆ. ಅಮನಸಿನ ನರ್ತನದಲೆಗಳ ಜೊತೆ ನೀವೂ ಹೆಜ್ಜೆ ಹಾಕಿ.
ಮತ್ತೆ ವಿಶ್ರಮಿಸಿ... ಶಾಂತ ಶಾಂತವಾಗಿ... ಆ ಶಿವಾಲಯವು ನೆಲೆಗೊಳ್ಳಲಿ ಅಂತರಂಗದ ಪರ್ವತಗಳಲಿ...

Tuesday, January 4, 2011

    ಸ್ನೇಹಿತರೇ ಇದೊಂದು ಸ್ತ್ರೀ ಚಿಂತನೆಯ  ಬರಹವಾದರೂ ಸ್ತ್ರೀ ವಾದಿಯ  ಬರಹ ಅಲ್ಲ ಎಂಬ ಸ್ಪಷ್ಟನೆಯೊಂದಿಗೆ ವಿಚಾರಗಳ ಮಟ್ಟದಲ್ಲಿ ಇದನ್ನು
ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕಾರಣ ಸ್ತ್ರೀ ಮನಸಿನ ಯಾವುದೇ ನೋವು ನಲಿವುಗಳನ್ನು ಬರೆದರು ಅದಕ್ಕೆ ಸ್ತ್ರೀವಾದಿಯೆಂಬ ಹಣೆಪಟ್ಟಿಯೊಂದಿಗೆ
ಅದಕ್ಕಿಂತ ಮುಂದೆ ಎಂದೂ ನಮ್ಮ ಆಲೋಚನೆಗಳು ಸಾಗದೇ ನಿಂತುಹೋಗುತ್ತಿವೆ ಇಂದು. ನನಗೆ ಯಾವುದೇ ಇಸಂ ಗಳ ಅಥವಾ ವಾದಿಗಳ ಕುರಿತು ಆಸಕ್ತಿಯಿಲ್ಲ.
ಆದರೆ ನನಗೆ ಮಾನವೀಯ ಮೌಲ್ಯಗಳ ಕುರಿತು ಆಸಕ್ತಿಯಿದೆ. ಅದು ಸ್ತ್ರೀ ಯಿರಲಿ ಪುರುಷ, ದಲಿತ ಬಂಡಾಯ ಯಾರೇ ಇರಲಿ. ಹಾಗಾಗಿ ನನ್ನ ಬರಹದ ಮುಂದಿನ ಎಲ್ಲ ಬರಹಗಳಿಗೂ ಮುನ್ನುಡಿಯಾಗೇ ಈ ಮಾತನ್ನು ಹೇಳಬಯಸುತ್ತೇನೆ. ದಯವಿಟ್ಟು ಇದನ್ನು ಗಮನದಲ್ಲಿಟ್ಟುಕೊಂಡೇ ನಿಮ್ಮ ಪ್ರತಿಕ್ರಿಯೆಗಳಿರಲಿ ಎಂಬ ವಿನಂತಿಯೊಂದಿಗೆ...



          ಮೊನ್ನೆ ಟೀವಿ ಸೀರಿಯಲ್ ನ ಒಂದು ಭಾಗದಲ್ಲಿ ಹುಡುಗಿಯೊಬ್ಬಳು ಹೇಳುತ್ತಾಳೆ. ತನ್ನ ಪ್ರೇಮಿಯೊಂದಿಗೆ. "ನನ್ನ ಬದುಕಿನ ಎಲ್ಲ ಯೋಚನೆಗಳು ಯೋಜನೆಗಳು ಆಸೆಗಳು ನಿನ್ನಿಂದ ಆರಂಭವಾಗಿ ನಿನ್ನಲ್ಲಿಗೇ ಮುಗಿದುಹೋಗುತ್ತವೆ. ನಿನ್ನ ಸಂತೋಷಕ್ಕಾಗಿ ಪ್ರಾಣವನ್ನೇ ಬಿಡ್ತೀನಿ." ಟೀವಿ ಸೀರಿಯಲ್ ನ ಮಾತುಗಳು ಅಂತ ಹಗುರವಾಗಿ ಪರಿಗಣಿಸಬೇಡಿ. ಇವತ್ತಿಗೂ ಸಮಾಜದ ಪ್ರತೀ ಹಂತದಲ್ಲೂ ಸ್ತ್ರೀ ಹೀಗೆ ತನ್ನ ಬದುಕನ್ನು ಪುರುಷನ ಕುಶಿಯಾಗಿಡುವುದಕ್ಕೋಸ್ಕರ ಬದುಕುತ್ತಿರುವ ಸಾವಿರ ಉದಾಹರಣೆಗಳಿವೆ ನಮ್ಮಲ್ಲಿ. ಅದು ತಪ್ಪು ಅಂತಾನೂ ನಾನು ಹೇಳ್ತಿಲ್ಲ. ತನ್ನ ಬದುಕಿನ ಸಾರ್ಥಕತೆಯನ್ನು ಆಮೂಲಕವೇ ಕಂಡುಕೊಳ್ಳುವ ಸಂಸ್ಕೃತಿ ನಮ್ಮದು. ಗಂಡನ ಬದುಕಿನ ಸಹಚಾರಿಣಿಯಾಗುವುದು ಹೆಣ್ಣಿಗೆ ಅವಮಾನವೂ ಅಲ್ಲ. ಕೆಲವೇ ಸ್ತ್ರೀಯರು ಇದನ್ನು ದೌರ್ಜನ್ಯ ಎಂದು ಕೂಗಾಡಿಕೊಂಡರೂ ಬಹುತೇಕ ಸ್ತ್ರೀಯರು ಇಂತಹ ಹಿಡಿ ಪ್ರೀತಿಗಾಗೇ ಬದುಕುತ್ತಾರೆ. ಮತ್ತು ಬದುಕಿಂದ ಅವರಿಗೆ ಇನ್ನೇನೂ ಅಪೇಕ್ಷೆಗಳಿರುವುದಿಲ್ಲ.
      ಕವಲು ಪ್ರಕಟವಾದಾಗ  ಸ್ತ್ರೀಯರು ಅದನ್ನು ಸಾರಾಸಗಟಾಗಿ ವಿರೋಧಿಸಿದರು. ಇಲ್ಲ. ಕೆಲವರು ಅದರ ಸತ್ಯವನ್ನೂ ಒಪ್ಪಿಕೊಂಡವರಿದ್ದಾರೆ. ಏನೇ ಓದಲಿ, ಮಾತಾಡಲಿ, ನಮ್ಮ ಸಮಾಜ ಆಗುವ ಹಾಗೇ ಆಗುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಅನ್ಯಾಯಕ್ಕೊಳಗಾದ ಪುರುಷಪ್ರಪಂಚವೂ ಇದೆ. ದೌರ್ಜನ್ಯಕ್ಕೊಳಗಾದ ಸ್ತ್ರೀ ಪ್ರಪಂಚವೂ ಇದೆ. ದಲಿತರೊಂದೇ ಅಲ್ಲ ಬ್ರಾಹ್ಮಣರೂ ಇಂದು ಬೇಕಾದಷ್ಟು ಅನ್ಯಾಯಕ್ಕೊಳಗುತ್ತಿದ್ದಾರೆ. ಎಲ್ಲ ಕಡೆ ಎಲ್ಲವೂ ಇದೆ. ಆದರೆ ನಮ್ಮ ಹೋರಾಟ ಮಾತ್ರ
ಏಕಮುಖ ನ್ಯಾಯವಾಗಿಲ್ಲ. ಅದು ಅನ್ಯಾಯದ ವಿರುದ್ಧ ಅಂತಿಲ್ಲ. ಅದು ಇಸಂಗಳ ಆಧಾರದ ಮೇಲೆ ನಿಂತಿದೆ. ಮಾನವತೆಯನ್ನು ಪ್ರೀತಿಸುವ ಮಾತು ನಾವು ಆಡುವುದಿಲ್ಲ
ಕೇವಲ ಮಾತು ಬಲ್ಲವರಂತೆ ಆಡುತ್ತೇವೆ.ಇದಕ್ಕೆಂದೇ ಸ್ತ್ರೀ ಪರ ಚಿಂತನೆಗಳಿಗೆ ಇವತ್ತು ಯಾವ ಬೆಲೆಯೂ ದೊರೆಯುತ್ತಿಲ್ಲ. ಯಾಕೆಂದರೆ ನಿಜವಾದ ಚಿಂತನೆ ದಾರಿ ತಪ್ಪಿದೆ.



        ನಿನ್ನಿಂದ ಆರಂಭವಾಗಿ ನಿನ್ನಲ್ಲಿಗೇ ಮುಗಿದುಹೋಗುವ ದಿನ ಬದಲಾಗಿದೆ ಇಂದು. ಸ್ತ್ರೀ ಭಾವನೆಗಳು ಈಗ ವಿಚಾರವಾಗಿ ಬದಲಾಗಿವೆ. ಬದುಕು ವಿಸ್ತಾರವಾಗಿದೆ. ನಾವು ಪ್ರಜ್ಞಾವಂತರಾಗಿದ್ದೇವೆ. ಆದರೆ ಭಾವಗಳ ಲೋಕವಿನ್ನೂ ಹಾಗೇ ಇದೆ. ಪುರುಷ ಸ್ತ್ರೀಗಾಗಿ ಸ್ತ್ರೀ ಪುರುಷನಿಗಾಗಿ ಬದುಕುವ ನಿಯಮಗಳು ನಿಯತಿಯಂತಿವೆ. ಆದರೂ  ಸಮಾಜದ ಬೇರೆ ಬೇರೆ ಹಂತಗಳಲ್ಲಿ ನಾವು ಸ್ತ್ರೀ ಯನ್ನು ಹೀಗೇ ನೋಡಬಹುದಾಗಿದೆ.
     ಶ್ರೀಮಂತರ ಮನೆಯ ಸುಸಂಸ್ಕೃತ ಗೃಹಿಣಿಯರು ಹೊರಗೆ ದುಡಿಯುವುದಕ್ಕಿಂತ ಖಚರ್ು ಮಾಡುವುದನ್ನು ರೂಢಿಸಿಕೊಳ್ಳುತ್ತಾರೆ. ಅವರಿಗೆ ಬದುಕು ಎಷ್ಟೇ ಶ್ರೀಮಂತಿಕೆ ಕೊಟ್ಟಿರಲಿ ಅವರೂ ತನ್ನ ಮನೆಯ ಗಂಡನ ಜೊತೆ ಒಂದಿಷ್ಟು ನೆಮ್ಮದಿಯ ಬದುಕು ಬಯಸುತ್ತಾರೆ. ಕೊನೆಯ ಇಚ್ಚೆ ಪತಿಯ ಪ್ರೇಮವೇ.ಒಂದು ಹಿತ ಸಂಸಾರವೇ. ಇನ್ನು ಮಧ್ಯ ವರ್ಗದ ಸ್ತ್ರೀ ತನ್ನ ಬದುಕಿನ ಹೋರಾಟಕ್ಕಾಗಿ ಗಂಡನಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಕ್ಕಾಗಿ ಹೋರಾಡುತ್ತಾಳೆ. ಹೊರಗೂ ಒಳಗೂ ದುಡಿಯುತ್ತಾಳೆ. ಮಕ್ಕಳಿಗೋಸ್ಕರ ಕನಸು ಕಟ್ಟುತ್ತಾಳೆ. ತನಗಿಂತ ಹೆಚ್ಚು ಹಣಕ್ಕೇ ಪ್ರಾಮುಖ್ಯತೆ ಕೊಟ್ಟುಕೊಳ್ಳುತ್ತ ತನ್ನ ಸಂಸಾರ ತನ್ನ ಬದುಕಿಗೋಸ್ಕರ ಇರುವ ಬಂಧು ಬಾಂಧವರನ್ನು ಸಹ ವಿರೋಧಿಸಿ ತನ್ನ ಮನೆಗಾಗಿ ಬದುಕುತ್ತಾಳೆ. ಅವಳಿಗೆ ಬದುಕು ನಿತ್ಯ ಹೋರಾಟ. ಇನ್ನು ಬಡವರು.. ಇನ್ನೂ ಅವಿದ್ಯಾವಂತರು, ಕುಡುಕರು ಕೂಲಿಗಳಿಂದ ತುಂಬಿದ ನಮ್ಮವರು ಅಲ್ಲಿನ ಸ್ತ್ರೀಯರ ಪರಿಸ್ತಿತಿ ನೋಡಿದರೆ ಭಯವಾಗುತ್ತದೆ. ಕಲಿತ ಮಹಿಳೆಯರ ಕುರಿತು ಬರೆದ ಬೈರಪ್ಪನವರು ಒಮ್ಮೆ ಈ ಕೂಲಿ ಮಹಿಳೆಯರ ಬದುಕಿನ ಮಜಲುಗಳನ್ನು ಬಿಚ್ಚಿಟ್ಟರೆ ದೌರ್ಜನ್ಯದ ಅರ್ಥ ಇನ್ನಷ್ಟು ಜನರಿಗೆ ಇನ್ನೂ ಹೆಚ್ಚಾಗಿ ಆದೀತು. ಹಗಲಿಡೀ ದುಡಿತ , ರಾತ್ರಿ ಗಂಡನ ಬಡಿತ, ಮೇಲಿಂದ ಸಂಸಾರದ ಹೊರೆ ಹೊರೆ ಭಾರ ಇವನ್ನೆಲ್ಲ ಸಾಗಿಸುವ ಮಹಿಳೆಯರು ನೈತಿಕತೆಯ ಕುರಿತು ಯೋಚನೆ ಮಾಡಲು ಅವರ ಬದುಕಿಗೆ ಬಿಡುವೇ ಇಲ್ಲ. ಅವರು ಬದುಕಿನ ಸುಖವನ್ನು ಕಂಡಲ್ಲಿ ಸಿಕ್ಕಂಗೆ ಸುರಿದುಕೊಳ್ಳಬೇಕೇ ವಿನಃ ನಮ್ಮಂತೆ ಕೂತು ಮಾತನಾಡಲು ಅವರಿಗೆ ಬದುಕು ಅವಕಾಶ ಕೊಟ್ಟಿಲ್ಲ. ಆದರೂ ಅವರು ಬದುಕುತ್ತಾರೆ.
ಮತ್ತು ಬದುಕನ್ನ ಪ್ರೀತಿಸುತ್ತಾರೆ. ಯಾರಿಗಾಗಿ ಗೊತ್ತಾ? ತನ್ನ ಗಂಡ ಮನೆ ಮಕ್ಕಳಿಗಾಗಿ. ಸ್ವಾಥರ್ಿಗಳಾಗಿ ತನ್ನ ಸ್ವಾರ್ಥಕ್ಕೆ ಕಾನೂನು ಬಳಸಿಕೊಳ್ಳುವ ಮತ್ತು ಪಬ್ ಬಾರ್ ಸಂಸ್ಕೃತಿಗಳಿಗೆ ಮಾರುಹೋದ ಸಾವಿರಾರು ಹುಡುಗಿಯರು ನಮ್ಮಲ್ಲಿರಬಹುದು. ಆದರೆ ಹೀಗೇ ತನ್ನೆಲ್ಲ ಸಂಕಟಗಳನ್ನ ಮೌನವಾಗಿ ಅನುಭವಿಸುತ್ತ ತನ್ನ ಬದುಕನ್ನೇ ಮನೆ ಗಂಡ ಮಕ್ಕಳಿಗಾಗಿ ಸವೆಸುತ್ತಿರುವ ಕೋಟ್ಯಾಂತರ ಹೆಣ್ಣುಮಕ್ಕಳ ತವರು ಈ ಭಾರತೀಯ ನೆಲ. ಅವರ ಸಹನೆಗೆ, ಆ ಬದುಕಿನ ಗಟ್ಟಿತನಕ್ಕೆ ಅವರ ಶ್ರಮತೆಗೆ ನಾನು ಹ್ಯಾಟ್ಸಪ್ ಹೇಳಬಯಸುತ್ತೇನೆ.

       ವಿದ್ಯಾವಂತರೆನಿಸಿಕೊಂಡು ಕಾಲೇಜಿನಲ್ಲಿ ಲೆಕ್ಚರ್ ಬೈದನೆಂದು, ಯಾರೋ ಲವರ್ ಕೈಕೊಟ್ಟನೆಂದು ಯಾವುದೋ ಬಸ್ಸಲ್ಲಿ ಯಾರೋ ಚುಡಾಯಿಸಿದರೆಂದು,
ಪ್ರೀತಿ ಮಾಡ್ತೀವಿ ಅಂತ ಹೆತ್ತ ತಂದೆ ತಾಯಿಯರನ್ನೂ ಬಂಧು ಬಾಂಧವರನ್ನು  ದೂರ ಮಾಡುವವರನ್ನು ಚಿಕ್ಕ ಪುಟ್ಟದ್ದಕ್ಕೆ ಮನಸು ಕೆಟ್ಟೋಯ್ತು ಅಂತ ಅಳುತ್ತ ಕೂರುವ ಇವತ್ತಿನ ವಿದ್ಯಾವಂತ ನಾಗರಿಕರಿಗೆ ಇದೆಯಾ ನಮ್ಮ ನಾಡಿನ ಮನೆ ಮನೆಗಳಲ್ಲಿ ತಮ್ಮವರಿಗೋಸ್ಕರ ಬದುಕುತ್ತಿರುವ ಆ ಸ್ತ್ರೀಯರ ಸಹನೆ?
ಅತೀ ಸೂಕ್ಷ್ಮತೆಯನ್ನು ಪಡೆದುಕೊಳ್ತಿರೋ ಇವತ್ತಿನ ಜನಾಂಗಕ್ಕೆ ಆ ಸೂಕ್ಮತೆಗೆ ಬೇಕಾದ ಸ್ಥೈರ್ಯ, ಅದನ್ನು ಎದುರಿಸುವ ಜಾಣ್ಮೆ, ಅದರ ಹಿಂದಿನ ವಾಸ್ತವ ಯಾವುದಾದರೂ ಅರಿವಿದೆಯಾ? ನಮ್ಮಲ್ಲಿ ದಿನ ದಿನ ಆತ್ಮಹತ್ಯೆಗಳು, ಡೈವೋರ್ಸಗಳು ಹೆಚ್ಚುತ್ತಿವೆ. ಮನಸಿಗೆ ಬಂದಂತೆ ಬದುಕುವ ಸ್ವಾತಂತ್ರ್ಯ ತಂದುಕೊಟ್ಟ ಅನಾಹುತವಿದು. ನಿನಗಾಗಿ ಬದುಕಲು ಬಾರದ ದುರಂತವಿದು. ಎಲ್ಲವೂ ತನಗಾಗಿ, ತನ್ನ ಸ್ವಾರ್ಥಕ್ಕಾಗಿ.... ಒಂದಿಷ್ಟೂ ಸಹನೆಯಿರದ ನಮ್ಮದೇ ಬದುಕಿನ ದುರಂತವಿದು.



    ಟೀವಿ ಸೀರಿಯಲ್ಗಳನ್ನು ಹಿಗ್ಗಾ ಮುಗ್ಗಾ ಬೈಯುವ ಜನರನ್ನು ಇವತ್ತು ನಾವು  ನೋಡ್ತಿದ್ದೇವೆ. ಯಾಕೆಂದರೆ ಸೀರಿಯಲ್ಗಳು ಅಷ್ಟು ಕೆಟ್ಟದಾಗಿವೆ ಅಂತ. ಆದರೆ
ಸಮಾಜದ ಸ್ಥಿತಿ ಕೂಡ ಅದಕ್ಕಿಂತ ಸುಧಾರಿಸಿಲ್ಲ. ಮನೆ ಮನೆಯ ರಾಮಾಯಣವೇ ಅಲ್ಲಿ ತೋರ್ತಿದೆ. ಮತ್ತೂ ಒಂದು ವಿಚಾರ ಗಮನಿಸಬೇಕು. ಟೀವಿ ಸ್ತ್ರೀಯರ ಬದುಕಿನ ಅವಿಭಾಜ್ಯ ಅಂಗ ಆಗ್ತಿದೆ. ಮುದುಕರು, ಮಹಿಳೆಯರು ಕೆಲಸವಿಲ್ಲದ ಎಲ್ಲರೂ ಟೀವಿಯ ವೀಕ್ಷಕರಾಗುತ್ತಿದ್ದಾರೆ. ಅಷ್ಟೇ ಆದರೆ ಪರ್ವಾಗಿಲ್ಲವಾಗಲೀ ಇದ್ದ ಕೆಲಸ ಬಿಟ್ಟು ಟೀವಿ ನೋಡುವ ಹಂತಕ್ಕೆ ತಲುಪ್ತಾ ಇರೋದು ದುರಂತ. ಇದಕ್ಕೆಂದೇ ಹಿರಿಯರು ಹೇಳಿದ್ದೇನೋ ಅತಿಯಾದರೆ ಅಮೃತವೂ ವಿಷವೇ ಅಂತ.



             ಒಂದು ಕಾಲಕ್ಕೆ ಬದುಕಿನ ಸಹನೆಯನ್ನು ಹೇಳಿಕೊಡುತ್ತಿದ್ದ ನಮ್ಮ ತಾಯಂದಿರು  ಈಗ ಅಸಹನೆಯನ್ನೇ ಹೇಳಿಕೊಡುತ್ತಿದ್ದಾರೆ! ಪ್ರೀತಿ ಒಂದು ಕನವರಿಕೆ ಆಗಿದೆ. ಪ್ರೀತಿ ಎಂಬ ಒಂದು ಪದಕ್ಕೋಸ್ಕರವೇ ಜನನ, ಮರಣಗಳಾಗುತ್ತಿವೆ. ಪ್ರೀತಿಗಾಗಿ ಏನೆಲ್ಲ ಮಾಡಲು ಹಿಂಜರಿಯುವುದಿಲ್ಲ. ಪ್ರೀತಿ ಎಂಬ ಭಾವುಕತೆಗಾಗಿ
ಮನಸು, ದೇಹ, ಬದುಕು ಯಾವುದನ್ನೂ ವಿಚಾರಿಸದೇ ನಡೆಯುತ್ತಾರೆ. ನಿಜಕ್ಕೂ ಅದು ಪ್ರೀತಿಯಾ!!??. ಪ್ರೀತಿಯ ಹೆಸರಿನ ಮೋಸಗಳಿಗೆ ಬಲಿಯಾಗುತ್ತಾರೆ.
ಭಾವಗಳ ನಾವೆಯ ಜೊತೆ ಆಡುವವರ ಕುತಂತ್ರಗಳಿಗೆ ಬಲಿಯಾಗುತ್ತಾರೆ. ಅರ್ಥ ಆಗುವವರೆಗೆ ಕಾಲ ಮೀರಿ ಹೋಗಿರುತ್ತದೆ. ಇದರಲ್ಲಿ ಹೆಣ್ಣು ಗಂಡು ಬೇಧವಿಲ್ಲ. ಯಾರೂ ಇಂತಹ ಮೋಸಗಳಿಗೆ ಒಳಗಾದವರಿರಬಹುದು.  ಇದು ಪ್ರತಿಯೊಬ್ಬರೂ ಇರುವ ಇಂದಿನ ಸಮಾಜ. ನಾವಿದರ ರೂವಾರಿಗಳು. ಮತ್ತಿಲ್ಲಿ ನಾವೇ ಅನುಭವಿಸುವವರು.

          ಪ್ರೀತಿಯನ್ನ ನಿವರ್ಾಜ್ಯ ಮನಸಿಂದ ಹಂಚಬಲ್ಲ ಪಾಲಕರು, ಸಮಾಜದ ಕಟ್ಟುಪಾಡುಗಳನ್ನ ಅಥರ್ೈಸಿಕೊಳ್ಳುತ್ತ ಅದನ್ನ ಕಾಲಕಾಲಕ್ಕೆ ಗೌರವಿಸುತ್ತ, ಸಮಾಜದ ಹಿತರಕ್ಷಣೆಗೆ ಬೇಕಾದ ಹಾಗೆ ನಮ್ಮ ಮಕ್ಕಳನ್ನು ನಾವು ಬೆಳೆಸಿದರೆ ಸಾಕು. ಒಂದು ಸಂಸ್ಕೃತಿ ಉಳಿಯುತ್ತದೆ. ನಾವು ಉಳಿಯುತ್ತೇವೆ.ಸ್ತ್ರೀ ಪರ ಹೋರಾಟಮಾಡುವ  ಯಾರೇ ಇರಲಿ ಸ್ತ್ರೀಯರ ಸ್ವಾವಲಂಭಿ ಬದುಕಿನ ದಾರಿ ತೋರಿಸಬೇಕಾದ ಅಗತ್ಯವಿದೆಯೇ ವಿನಃ ಭಾಷಣಗಳಲ್ಲ. ಆ ನಿಟ್ಟಿನಲ್ಲಿ ಉಲ್ಲೇಕಿಸಬಹುದಾದ ಹೆಸರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯದು. ಅದು ಮಾಡ್ತಿರೋ ಕೆಲಸಗಳು ನಿಜಕ್ಕೂ ಸ್ತ್ರೀಯ ರ ಮನೆ ಮನೆ ತಲುಪಿವೆ. ಮತ್ತವರ ಕಷ್ಟ ಸುಖಗಳಿಗೆ ಸ್ಪಂದಿಸಿವೆ. ಆ ಜನರ ಅನುಭವಗಳ ಕೇಳಿದರೆ ಈ ನಾಡಿನ ಸ್ತ್ರೀಯರ ಕುರಿತು ತುಂಬಾ ಮಾಹಿತಿ ದೊರೆಯುತ್ತದೆ.


         ಈ ಎಲ್ಲ ಮಾತುಗಳ ಹೇಳಿದ ಕಾರಣವಿಷ್ಟೇ. ನೋವು ನಲಿವು ಎಲ್ಲ ಕಡೆ ಇದೆ. ಅಥರ್ೈಸಿಕೊಳ್ಳುವ ಸಹನೆ ತಾಳ್ಮೆ ಎಲ್ಲರಿಗೂ ಬೇಕು. ಬಲವಿದ್ದಲ್ಲಿ ದೌರ್ಜನ್ಯವಿದ್ದೇ ಇದೆ. ಹಣ, ಅಧಿಕಾರ ಅಂತಸ್ತು  ಇದ್ದು ಮದ ಇದ್ದಲ್ಲಿ ಜಾತಿ ಮತ ಬೇಧವಿಲ್ಲದೆ ದೌರ್ಜನ್ಯ ಹುಟ್ಟಿಕೊಳ್ಳುತ್ತದೆ. ಮಾನವೀಯತೆ ಮಾತ್ರ ನಮ್ಮನ್ನೆಲ್ಲ ಪ್ರೀತಿಯಿಂದ ಇಡುವ ಮಂತ್ರ. ಮನುಷ್ಯರನ್ನ ಮನುಷ್ಯರಂತೆ ಪ್ರೀತಿಯಿಂದ ನೋಡುವ ಕಾಲ ಸಾಕು.
    ಸ್ನೇಹಿತರೇ  ಹೇಳ್ತಾನೇ ಹೋದ್ರೆ ಮುಗಿಯದು. ಸಾಕಿಷ್ಟು ಇವತ್ತಿಗೆ. ಮತ್ತೊಮ್ಮೆ  ನನ್ನ ವಿಚಾರಗಳೊಂದಿಗೆ ಬರುವವರೆಗೆ ನಿಮ್ಮ ಅಭಿಪ್ರಾಯ ತಿಳಿಸ್ತೀರಲ್ಲ.
ವಂದನೆಗಳು.


           
         
      

Monday, January 3, 2011

ಹಟ

 ಬೇಡ ಬೇಡವೆಂದರೂ ಯಾಕೀ
ನೆನಪುಗಳ ಕಾಟ!
ನನ್ನದೇ ಅನುಭೂತಿಗಳು
ನನ್ನನ್ನೇ ಕಾಡುವ ಕೆಟ್ಟ ಚಟ.

  ಬುದ್ದಿಗೆ ಗೊತ್ತಿದೆ
  ಭಾವಕ್ಕೂ ಗೊತ್ತಿದೆ.
 ಅವೆರಡರ ಕನ್ಣಮುಚ್ಚಾಲೆ!
ಸಾಯುತ್ತಿರುವುದು ನಾನಲ್ಲೆ!
  
ಕಣ್ಣಂಚ ಕೊನೆಯಲ್ಲಿ
   ಆರುವುದಿಲ್ಲ ತಂಪು
   ಕೈಬೆರಳು ಇಲ್ಲ
 ಅದನೊರೆಸಲು ಗೊತ್ತು
 ಆದರೂ ಯಾಕೀ ಹಟ ಕಣ್ಣಿಗೆ!

 ಗೆದ್ದರೆ ಗೆದ್ದುಬಿಡುವೆ ನಿನ್ನನ್ನೇ..
ನನ್ನನ್ನೇ...
ಉಳಿಯುವುದಿಲ್ಲ ಹನಿ ನೀರು.
ಮತ್ತೆ ಅಳು ಬೇಡ ನಿನಗೆ
ನಾಳೆ ನಗುವಿಲ್ಲ.!

 ಅರ್ಥ ಆಗಿ ಹೋದರೆ
ಉಳಿವುದೇನು ಬದುಕಲಿ?
ಅದಕ್ಕೆಂದೇ ಅರ್ಥವಾಗದಿರು
ಅತ್ತರೂ ಕಾರಣ ಹೇಳದಿರು,

 ಕತ್ತಲಲಿ ಕಣ್ಮುಚ್ಚಿ ಕುಳಿತು
ಚಿತ್ತದೆಲ್ಲವ ಮರೆ.
ಮರೆತ ದಿನ ನನಗೂ ಹೇಳು.
ನಾನೂ ಪ್ರಯತ್ನಿಸುವೆ.

ಸಾಕು ಈ ಬದುಕಿನಾಟ
ಒಂದಷ್ಟು ಶಾಂತವಾಗು.
ಚಿರನಿದ್ರೆ ಸಿಗುವವರೆಗೆ
ಪ್ರಶಾಂತಿ ನೆಲೆ ನಿಲ್ಲಲಿ.

Saturday, January 1, 2011

ಹೊಸವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ.............

ಹೊಸವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ.............

ಮನಸಿನಂಗಣದಲ್ಲಿ ಒಂದೊಂದು ರಿಂಗಣ... ಮಾತೇ ಬರದಂತ ಮೂಕ ರೋಧನ. ಯಾವ ಶಾಪವೋ ಯಾವ ತಾಪವೋ ಒಲವಿನ ಪೂಜೆಗೆ ಸಿಕ್ಕ ಫಲವೋ.
ಸಾವಿರ ಸಾವಿರ ದಿನಗಳ ಕನಸುಗಳು ಕಳೆದು ಒಂದು ನನಸಾದ ಕನಸು ಹುಟ್ಟಿಕೊಂಡಾಗ ಮನಸು ಹಾಡಿತ್ತು. " ತು ಮೇರೀ ಆಂಕೋಂಖಾ ಪೆಹೆಲೆ ಸಪ್ನೆ.
ರಂಗೀನ ಸಪ್ನೆ.. ಮಾಸೂಮ ಸಪ್ನೆ... " ಹೌದು ಹುಟ್ಟುವಾಗದು ಎಷ್ಟು ಅಂದದ ಮುಗ್ಧ ಮಗುವಂತದ್ದು! ಕನಸೇ ಹಾಗೇ ಸ್ವಪ್ನಗಳು ನಿಜವಾದಾಗ ಮನಸು ನಂಬುವುದಿಲ್ಲ. ಅಂತಹ ಕನಸುಗಳು ಕೈಯಲ್ಲಿ!

   ರಾಗ, ನದಿಯಾಗಿ ಹರಿದು ಒಲವು ಮನಸು ಮೃದುವಾಗಿ ಮಿಡಿದು ಆನಂದದ ಬೊಗಸೆಯಲಿ ಅಂದದ ದೀಪವನೆತ್ತಿ ಮುಂಬಾಗಿಲ ಒಳಗೆ ನಿಂತು
ಮನಸೇ ಭಗವತಿಯಲಿ ಆರಾಧಿಸಿತ್ತು. ಈ ದೀಪ ನಂದಾದೀಪದ ಹಾಗೆ ಉರಿಯುತ್ತಿರಲಿ ಅಂತ. ಆ ನಂದಾದೀಪವೇ ಇಂದು ಈ ಬದುಕಿಗೆ ಬೆಳಕು.
ಎಷ್ಟೇ ಅಲೆಗಳ ಬೋರ್ಗರೆತವಿರಲಿ ಶರಧಿಯ ಅಲೆಗಳ ಏರಿಳಿತಗಳಿರಲಿ ಈ ದೀಪ ಹೀಗೆ ಉರಿಯುತ್ತಿರಲಿ....ಈ ಹೊಸವರ್ಷದ ಹೊಂಬೆಳಕಿನಲಿ ಇದೊಂದೇ
ಪ್ರಾರ್ಥನೆ...ಮಾನಸ ಸರೋವರದಲಿ ಅಕ್ಷರ ಹಚ್ಚಿದ ಈ ದೀಪವನ್ನು ಆ ಶಾರದೆ ಬೆಳಗಿಸುತ್ತಿರಲಿ. ಅಂದದ ಮನಸುಗಳ ಸಾಮಿಪ್ಯವಿರಲಿ. ಚಂದದ ಬಂಧಗಳ, ಬಂಧುಗಳ
ಜೊತೆಯಿರಲಿ.ಸದಾ ಸರೋವರದ ಅಂಗಣ ತುಂಬುವಂತೆ ಅನುಭವದ ಆನಂದದ ಬುತ್ತಿಗಳಿರಲಿ. ಹೊಸವರ್ಷಕ್ಕೆ ಹೊಸ ಕನಸಿನೊಂದಿಗೆ........
ನಿಮ್ಮ ಮನಸು