Monday, July 4, 2011

ನುಡಿಸು ಬಾರೋ ಕಿನ್ನರಿ

ಎದೆಯ ತಂಬೂರಿಯಲೊಂದು ಗಾನ
ನುಡಿಸು ಬಾರೋ ಕಿನ್ನರಿ
ಕಾವ್ಯವಾಗಲಿ ನನ್ನೊಳಗಿನ
ಚೇತನಗಳ ನುಡಿಸಿರಿ.

ಬೆಳದಿಂಗಳ ದಿಬ್ಬದೆಡೆಗೆ
ಕೊಳಲೂದುತ ಕರೆದವನೆ
ಹೃದಯಾಬ್ಧಿಯ ತೋಟದೊಳಗೆ
ಮೈ ಮರೆಸಿದ ಉಸಿರವನೆ!

ಚಂಚಲತೆಯ ಈ ಕಂಗಳು
ಕಾಣದಿರದೇ ಬಳಲಿವೆ
ಬಾ ಬೆಳಕಿನ ಹಣತೆಯೊಲವೆ
ತಂಪಾಗಲಿ ಕಣ್ಣೆವೆ.

ನೀರವತೆಯ ಸಂಜೆತೀರ
ಅಲೆಅಲೆಗಳ ನರ್ತನ
ನಿಶ್ಯಬ್ಧದ ಚುಂಬನದಲಿ
ಮನವಾಗಲಿ ಚೇತನ

ಪಾಂಚಜನ್ಯದೊಡೆಯ ಚೆಲುವ
ಮೋಹನ ನೀ ಮುರಳೀಧರ
ಮಾಧವನೇ ಬಾ ಸೇರಿಕೋ
ಮೀರೆ ಪ್ರೇಮಸಾಗರ.