Tuesday, July 10, 2012

ಭಾವಬಿಂಬದೊಳಗೆ...


(ಚಿತ್ರಕೃಪೆ: ದಿಗ್ವಾಸ್ )


ಇಂದಿನ ಸರೋವರದಂಚಿಗೆ...

        ತುಂಬಾ ಆಪ್ತವಾದ ಮಾತೊಂದಕ್ಕೆ ಕೈಕೊಡು. ಈ ಅಂಗೈ ತುಂಬ ಬೆಚ್ಚನೆಯ ಕೈ ಜೋಡಿಸಿ ಸುಮ್ಮನೇ ಕೂತುಕೊಳ್ಳೋಣ.....ಈ ಸಂಜೆ ಮತ್ತೊಂದು ಚಿತ್ತಾರವಾಗಲಿ.... ಭವಿತವ್ಯಕ್ಕೆ ಮತ್ತಿಷ್ಟು ಬಣ್ಣ ತುಂಬಲಿ....


            ಬೆರಗು ಬೆರಗಿನ ಎಷ್ಟೆಲ್ಲ ಬಣ್ಣದ ಭಾವದ ಪ್ರಪಂಚವಿದು! ಇಂತಹ ಹಸಿರು ಹಸಿರಾದ ಪ್ರಪಂಚದಲ್ಲಿ ನಾವೊಂದು ಯಾತ್ರೆ ಹೊರಟಿದ್ದೇವೆ! ನಮ್ಮ ಯಾನ ಅನಂತ. ನಮ್ಮ ಗುರಿ ಅಸಾಮಾನ್ಯದ್ದು. ವ್ಯಕ್ತಿತ್ವದ ಬೆಳವಣಿಗೆ, ವಾಸ್ತವ ಪ್ರಜ್ಞೆ, ಪ್ರಪಂಚದೊಡನೆಯ ಎಲ್ಲ ಒಡನಾಟ, ಯಶಸ್ಸು, ಆಥರ್ಿಕ, ಸಾಮಾಜಿಕ ಬಲವರ್ಧನೆ,ಕೌಟಂಬಿಕ ಸಮತೋಲನ, ಶಾಂತಿ, ಮತ್ತೆ ಮಾನಸಿಕ ಪ್ರಬುದ್ಧತೆ, ಮಾನಸಿಕ ಶಾಂತಿ, ಪ್ರಪಂಚದಾಚೆಗಿನ ಸತ್ಯ..... ಎಷ್ಟೆಲ್ಲ ಇದೆ! ನಮ್ಮೆದುರು.!! ಕಾಲವೆಂಬುದು ಒಂದು ಚಿಕ್ಕ ಘಟ್ಟ. ಕ್ಷಣಕ್ಷಣ ಒಂದು ಸಂಭಾವ್ಯ ಶೃತಿ.. ನಡಿತಾ ಇರೋದು  ಭೂಮಿ ಮೇಲೆ.. ಕಾಣ್ತಾ ಇರೋ ಕನಸು ಆಕಾಶದ್ದು...  ನಾವು ಸೇರದಿರೋ ಆಕಾಶ ಭೂಮಿಗಳ ಹುಡುಕಿ ಹೊರಟಿಲ್ಲ! ಸರಿಯಾಗಿ ಗಮನಿಸು..
ಭೂಮಿಯ ಮೇಲಿದ್ದು ಆಕಾಶಕ್ಕೆ ರೆಕ್ಕೆ ಕಟ್ಟಿ ಹಾರುವ ಪ್ರಯತ್ನದಲ್ಲಿದ್ದೇವೆ. ಅಸಂಭವವೇನಲ್ಲ. ಪ್ರಯತ್ನಕ್ಕೆ ಫಲ ಸಿಗತ್ತೋ ಬಿಡತ್ತೋ ಎಂಬುದು ಗೊತ್ತಿಲ್ಲ. ಆದರೆ ನಮಗೆ ಗೊತ್ತಿದೆ. ನಮ್ಮ ಗುರಿ ಮತ್ತು ಗುರಿಯೆಡೆಗಿನ ಸಾಧನೆ, ಶ್ರಮ ಬುದ್ಧಿವಂತಿಕೆ ಎಲ್ಲವೂ ನಮ್ಮದು.   ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರದು.. ಅಹಂ... ಹಾಗೆಂದೆನಿಸಿಕೊಳ್ಳುವ ಅದೇ ಹಠ ನಮ್ಮನ್ನ  ಒಂದಿನ ಆಕಾಶದೆತ್ತರಕ್ಕೆ ಒಯ್ಯುತ್ತದೆ.. ಆ ನಂಬಿಕೆ ನನ್ನದು.

     ಕಾಣ್ತಾ ಇರೋ ಸರೋವರದ ಅಲೆಗಳ ಗಮನಿಸು.ದೂರದಿಂದ ನೋಡುತ್ತಿದ್ದರೆ ಅಲ್ಲಿ ನಿನ್ನ ಬಿಂಬ ಕಾಣದು. ಅದು ನಿರಂತರ ಅಲೆಗಳ ತೆರೆಗಳ ಒಂದು ಜೀವಂತ ಕಾರಂಜಿ. ಅಲ್ಲಿ ಚಿಮ್ಮುವಿಕೆಯಿಲ್ಲ. ಸಾಗರದಂತ ಅಬ್ಬರ ಏರಿಳಿತಗಳಿಲ್ಲ. ಮನಸು ನಿರ್ಮಲಗೊಳಿಸಿ ತದೇಕವಾಗಿ ನೋಡಿದರೆ ಅದೇ ಸ್ಪಟಿಕದ ಕನ್ನಡಿಯಲ್ಲಿ ನಿನ್ನ ಬಿಂಬದ ಸ್ಪಷ್ಟತೆಯಿದೆ. ನೆನಪಿಡು. ಅದು ನೀ ಬಯಸುವ ನಿನ್ನ ಬಿಂಬವಲ್ಲ. ನೀ ಇದ್ದಂತೆ ತೋರುವ ನಿನ್ನ ಬಿಂಬ. ಯಾಕೆ ಈ ಮಾತು ಹೇಳ್ತಿದ್ದೀನಿ ಗೊತ್ತಾ? ಕನ್ನಡಿಯೆಂಬ ಕನ್ನಡಿಯ ನೋಡೋದಕ್ಕೊಂದು ಮನಸು ಬೇಕು. ಆ ಕನ್ನಡಿ ತೋರೋ ಪ್ರತಿಬಿಂಬವನ್ನೇ ಗಮನಿಸುವ ಮತ್ತದನ್ನ ಒಪ್ಪಿಕೊಳ್ಳೂವ ದಾಷ್ಟ್ರ್ಯ ಕೂಡ ಬೇಕು.. ಇದು ನನ್ನಂತ ನಿನಗೆ ನಾ ಹೇಳುವ ವಿಷಯವಲ್ಲ. ಆದರೆ ಹೇಳಬೇಕಾದದ್ದು ಇನ್ನಷ್ಟಿದೆ. ಅದೇ ಕನ್ನಡಿಯಲ್ಲಿ ನೀ ನೋಡಿಕೊಳ್ಳಬೇಕಾದ ಬಹಳಷ್ಟು ಸತ್ಯವಿದೆ. ಅದನ್ನು ನೋಡೋದಕ್ಕೆ ನೀ ಇಲ್ಲಿಯವರೆಗೂ ಬರಬೇಕು. ಕೂತು ಮನಸು ಅರಳಿಸಿ ನೋಡಬೇಕು. ಏನಿದೆ ನಿನ್ನ ಬಿಂಬದಲ್ಲಿ? ಅಂತಹ ಪ್ರಯತ್ನಕ್ಕೂ ಮನಸು ಮಾಡಬೇಕು!

     ನಿನಗೆ ನೆನಪಿದೆಯಲ್ಲವಾ? ಸದಾ ಅಸಾಮಾನ್ಯದೆಡೆಗೇ ತುಡಿತ ನಮ್ಮದು. ಆದರೆ ವಾಸ್ತವದಲ್ಲಿ ನೆಲೆಗೊಳ್ಳದ ಯಾವುದನ್ನೂ ನಾನು ಒಪ್ಪಲಾರೆ. ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ ಗೌರವಿಸಲ್ಪಡುವ ಮನಸಿದು. ನಿರ್ವಹಣೆಯ ಭಾರದಿಂದ ನಲುಗಿದರೆ ಎತ್ತಿ ಹಿಡಿಯಬಹುದು. ಆದರೆ ನಿರ್ವಹಣೆಯ ಅಗತ್ಯವೇ ಇಲ್ಲದೆ ನಿರ್ಲಕ್ಷ್ಯಕ್ಕೊಳಪಡೋದನ್ನು ಸಹಿಸಲಾಗದು.
ಯಾಕೆಂದರೆ ಸಂಬಂಧಗಳು ವ್ಯಕ್ತಿ ಮೂಲದ್ದಲ್ಲ. ವ್ಯಕ್ತಿತ್ವದ ಮೂಲದ್ದು. ವ್ಯಕ್ತಿಯ ನಿರ್ಲಕ್ಷ್ಯ ವ್ಯಕ್ತಿತ್ವದ ನಿರ್ಲಕ್ಷ್ಯವಾಗತೊಡಗಿದರೆ ಎಚ್ಚರ ಅತ್ಯವಶ್ಯಕ.. ಅಲ್ಲವಾ? ಯೋಚನೆ ಮಾಡು.


     ನಿಜವೆಂದರೆ  ನಿನ್ನ ಅಂತರಂಗದ ಯುದ್ಧಗಳೇನಿವೆಯೋ ಅದು ನಿನ್ನ ಹಠ...  ಆ ಹಠಕ್ಕೆ ನಿನಗೆ ನೀನೇ ಕೊಟ್ಟುಕೊಳ್ತಿರೋ ಶಿಕ್ಷೆಯದು. ಎಷ್ಟೋ ಸಲ ಇದೇ ಹಠ ನಿನ್ನ ಕುರುಡಾಗಿಸುತ್ತದೆ. ಫಫರ್ೆಕ್ಷನ್, ಯಶಸ್ಸು ಇವೆರಡನ್ನೂ ನಾವು ಯಾವ ಮಾನದಲ್ಲಿ ಅಳೆಯುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ನಿನ್ನ ಈ ಹೋರಾಟ ಹೇಗಿದೆಯೆಂದರೆ ನಿನ್ನೆದುರಿನ ಯಶಸ್ಸು ಅಥವಾ ನೀ ನಿನ್ನ ಗುರಿ ತಲುಪಿದಾಗ ನಿನ್ನ ಜೊತೆ ಯಾರೂ ಇರೋದಿಲ್ಲ. ಈಗ ನಿನಗೆ ಅನ್ನಿಸುತ್ತಿರಬಹುದು. ಆ ಯಶಸ್ಸು ದೊರೆತಾದ ಮೇಲೆ ನನಗೆ ಇನ್ನೇನೂ ಬೇಡ ಅಂತ. ಉಹುಂ ಯಶಸ್ಸೆನ್ನುವುದು ಮುಗಿವ ಹಂತವೂ ಅಲ್ಲ. ಮತ್ತೊಂದು ವಿಷಯ. ಇವತ್ತಿನ ಈ ಸಂಬಂಧಗಳು, ಮನಸುಗಳು ಇಲ್ಲದಿದ್ದರೆ ಅವತ್ತು ನಿನ್ನ ಆನಂದಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಮತ್ತದನ್ನು ನೀನು ಆನಂದಿಸಲಾರೆ... ಗೊತ್ತು ಒಂದು ಹಂತದ ನಂತರ ಯಶಸ್ಸೆಂಬುದು ಸಹಜ, ಸೋಲು ಅಸಹಜವೆನ್ನಿಸುತ್ತವೆ. ಆದರೆ ಯಶಸ್ಸಿನತ್ತ ಹೊರಟ ಪ್ರತಿಯೊಬ್ಬನಿಗೂ ಸೋಲಿನ ಅನುಭವವೇ ಯಶಸ್ಸಿನ ಆನಂದವನ್ನು ಹೆಚ್ಚಿಸುವುದು.
ಅಷ್ಟೇ ಅಲ್ಲ ಸೋಲು ಸಹ ನಮ್ಮದೇ ಮಾಪನದಲ್ಲಿ ಅಳೆಯುವ ಒಂದು ಕೌಶಲವಷ್ಟೇ..

  ತುಂಬಾ ಪ್ರಾಮಾಣಿಕವಾದ ನಿನ್ನ ಮನಸ್ಸಿನ ಕನ್ನಡಿಯಲ್ಲಿ ನಿನ್ನದೇ ಬಿಂಬವಿದೆ ಇಂದು. ಒಪ್ಪುತ್ತೇನೆ. ಪ್ರಾಮಾಣಿಕತೆಯನ್ನು, ಅದರ ಹಿಂದಿರುವ ಮನಸ್ಸಿನ ಎಲ್ಲ ಸತ್ಯಗಳ ಸಹಜತೆಗಳ.. ಆದರೆ ಅದರರ್ಥ ಒಂದು ವ್ಯಕ್ತಿತ್ವವಾಗಿ ದೋಷಗಳನ್ನು ಒಪ್ಪಿಕೊಳ್ಳುವುದು  ಎಂದರೆ ನಾನು ಅಪ್ರಾಮಾಣಿಕಳಾದಂತೆ. ತಿದ್ದಿಕೊಳ್ಳೋದು ಬಿಡೋದು ನಿನ್ನದು. ಆದರೆ ತೋರಿಸುವುದು ಕನ್ನಡಿಯ ಗುಣಧರ್ಮವೇ... ಮತ್ತೆ ಮತ್ತೆ ಅನ್ನಿಸುತ್ತದೆ. ಬಹುಶಃ ನಾವೆಂದೂ ಶಾಂತ ಪಯಣಿಗರಲ್ಲ. ನಮ್ಮದು ಸದಾ ಗುದ್ದಾಟದ ನಡೆ. ಬಹುಶಃ ಆ ಕಾರಣಕ್ಕೇ
ಮನಸು ಮನಸಿನ ಈ ಹೋರಾಟ ನಿರಂತರ.... ಸರೋವರ ನಿನ್ನೆದುರು ಇರುತ್ತದೆ ಸದಾ... ನಿನ್ನದಾಗಿ.. ಅದು ಹರಿದು ಬರದು... ನಿನಗೆ ಬೇಕಾದಾಗ ನೀನೆ ಬಂದು ಮೊಗೆದುಕೋ.. ನಿನಗೆ ಬೇಕಾದಷ್ಟನ್ನು ಆಯ್ದುಕೋ... ಇಂತಹ ಒಂದು
ಮನಸ್ಸೆಂಬ ಸರೋವರ ಇದ್ದರೆ ಅದು ನಮ್ಮೊಳಗೆ ಮಾತ್ರ. ಅದಕ್ಕೆಂದೇ ಈ ಮಾನಸ ಸರೋವರ ನನಗಷ್ಟು ಆಪ್ತ.

       ಇವತ್ತು ಜಿಡಿಜಿಡಿ ಮಳೆ. ಮನಸಿನೊಳಗೂ ಅಂತದ್ದೇ ಜಿಡಿಜಿಡಿ ಮಳೆ... ಈ ಮಳೆಯಂತೆ ಅಸ್ತವ್ಯಸ್ತವಾಗಿ ಬದುಕಿಬಿಡುವಲ್ಲೂ ಎನೋ ಸುಖವಿದೆ ಅನ್ನಿಸುವ ಹೊತ್ತಿಗೆ ಸ್ನೇಹಿತೆಯೊಬ್ಬಳು ಫೋನ್ ಮಾಡಿದಾಗ ರಾಧೆಯ ಕುರಿತಾಗಿ
ಮಾತನಾಡುತ್ತಿದ್ದಳು... ಈ ರಾಧೆ, ಮತ್ತು ಮೀರೆಯರ ಕುರಿತು ನನಗೊಂತರಾ ಹುಚ್ಚು..... ಅದು ಭಕ್ತಿಯೋ,
ಪ್ರೇಮವೋ, ಭ್ರಮೆಯೋ... ಯಾವುದೋ ಗೊತ್ತಿಲ್ಲ. ಆದರೆ ಸರಸರ ಎದೆಯೊಳಗೆ ಓಡಾಡುವ ಅಂತರಂಗದ ಜೀವಂತ ರಸಗಳವು..
ಒಮ್ಮೊಮ್ಮೆ ಅನ್ನಿಸುತ್ತದೆ.. ನಾನೂ ಎಂತಹ ಹುಚ್ಚಿ ಅಲ್ಲವಾ ಅಂತ! ಭಾವಜೀವಿಗಳ ಪ್ರಪಂಚವೆಂದರೆ ಅದೊಂದು ಹುಚ್ಚರ ಸಂತೆಯೇ ಸರಿ. ಆದರೂ
ಉಹುಂ.... ಭಾವಗಳನ್ನ ಬದುಕುವ ವಾಸ್ತವಕ್ಕೆ ಹೊಂದಿಸಿಕೊಳ್ಳುವ ವ್ಯಕ್ತಿತ್ವಗಳ ಪ್ರಪಂಚ ನಮ್ಮದು. ಹೇಳ ಹೊರಟಿದ್ದು ಅಂತ ಇವತ್ತಿನ ಒಂದಿಷ್ಟು
ಮಾತುಗಳನ್ನೇ.........


           ಎಲ್ಲಕ್ಕೂ ಮಿತಿಯಿದೆ. ಹಾಗೇ ವಿಪರೀತವಾಗುವ ಎಲ್ಲಕ್ಕೂ ಒಂದೊಂದು ಆಣೆಕಟ್ಟು ಕಟ್ಟದಿದ್ದರೆ ಅದು ವ್ಯರ್ಥವಾಗುವ ನೀರಾಗಿ
ಕೊಚ್ಚಿಹೋದೀತಷ್ಟೆ. ಅದನ್ನು ಸದ್ಭಳಕೆ ಮಾಡುವವನು ನಿಜವಾಗಿ ಜಾಣ. ಅಂತಹ ಒಂದು ಸುಮ್ಮನೇ ಮಾತಾಡೋಣ ಇವತ್ತು. ತುಂಬ ದಿನದ ನಂತರ
ಈ ತೀರಕ್ಕೆ ನೀನು ನೀನಾಗಿ ನನ್ನ ಕರೆದುಕೊಂಡಿದ್ದಿ.. ಈ ಮಾನಸ ಸರೋವರದಲ್ಲಿ ಇಂತಹ ಅದೆಷ್ಟೋ ಸಂಜೆಗಳು ಕಳೆದಿವೆ. ಆದರೆ ಇವತ್ತಿನದೇ ಪ್ರತ್ಯೇಕ. ಯಾಕೆ ಗೊತ್ತಾ? ಬದುಕಿನ ಬಿಂಬ ಈ ನೀರಕನ್ನಡಿಯಲ್ಲಿ ಎಷ್ಟು ಸ್ಪಷ್ಟ ಮೂಡುತ್ತಿದೆ ನೋಡು.ಸರೋವರದ ತೀರಗಳಲ್ಲಿ ಗಾಳಿ, ಮಳೆ ಮತ್ತೆ ಅಬ್ಬರದ ಮಿಂಚುಗುಡುಗು ಇಷ್ಟುದಿನ ಬಂದಿರಬಹುದು!! ಆದರೆ ಇವತ್ತಲ್ಲಿ ಸ್ಪಷ್ಟಬಿಂಬವಿದೆ.   ಸಮಯವೆಂಬುದು ಒಂದು ಸಾದೃಶ್ಯ.. ಶ್ರಮಕ್ಕೂ ಸಾಧನೆಗೂ ಫ್ರತಿಫಲವಿದೆ. ಆತ್ಮವಿಶ್ವಾಸ ಸಾಧಿಸದ ಯಾವುದು ಇದೆ ಹೇಳು? ಹಾಂ.. ಒಂದಿನ ಇದೇ ಆತ್ಮವಿಶ್ವಾಸದ ಜಾಗೃತಿಮೂಡಿದ್ದು ಇದೇ ಸರೋವರದ ತಟಗಳಲ್ಲಿ ಎಂದಾದರೆ ಅದೇ ಸರೋವರದ ಅಂತರಂಗದಲ್ಲಿ ಮನುಷ್ಯತ್ವದ ಅದ್ಭುತ ಬಿಂಬವೇನಿದೆಯೋ ಅದು ನಿನ್ನದೇ.  ಆದರೆ
ನನಗಷ್ಟೆ  ಸಮಾಧಾನವಲ್ಲ. ಖಂಡಿತವಾಗಿ ಹೇಳಬೇಕೆಂದರೆ ಬದುಕಿಗೆ ಅಗತ್ಯವಾದ ವಾಸ್ತವವನ್ನು
ಜೀವಿಸಲು, ನಿರ್ವಹಿಸಲು ಕಲಿತಂತೂ ನನಗಿಷ್ಟೇ ಸಮಾಧಾನ ಅನ್ನಿಸದು. ಹುಡುಗಾಟ, ಅಸಮಾಧಾನ, ಓರೆ ಕೋರೆಗಳೆಲ್ಲ ಸಹಜವೆಂದೇ ಸ್ವೀಕರಿಸಬಲ್ಲೆನಾದರೂ ಇದೇ ಸಹಜವೆಂಬುದು ಪ್ರಾಮಾಣಿಕವೆಂಬುದೂ ನಿಜವಾದರೂ ಮತ್ತೆ ಮತ್ತೆ ಇಂತದ್ದೇ ತಪ್ಪುಗಳನ್ನು ಅದು ಸಹಿಸೋದಿಲ್ಲ. ಫಫರ್ೆಕ್ಷನ್ ಗಾಗಿ ಒದ್ದಾಡೋ ಮನಸುಗಳಲ್ಲಿ ಇದೂ ಒಂದು. ವಾಸ್ತವದ ನಿಭಾವಣೆಯಿಂದ ಅದೆಷ್ಟು ದಿನ ದೂರ ಓಡಬಹುದು? ನಮ್ಮವರು ನಮ್ಮನ್ನು ಹೇಗಿದ್ದರೂ ಒಪ್ಪಿಕೊಳ್ಳುತ್ತಾರೆನ್ನುವುದು ಹೇಗೇಗೋ ಇರಲಿಕ್ಕೆ ಫಮರ್ಿಷನ್ ಅಲ್ಲವಲ್ಲ !

           ಒಂದು ಮಾತು ಹೇಳಬೇಕು. ತುಂಬ ಅಸಹಜ ಅನ್ನಿಸಬಹುದು. ನಾಳೆಗಳಿಗಾಗೇ ಬದುಕುವ, ಬದುಕು ಕಟ್ಟುವ, ಹೋರಾಟಗಳು ನಮ್ಮದು. ಆದರೆ ಆ ನಾಳೆಗಳು ನಮಗಿದೆಯೋ ಇಲ್ಲವೋ ಅನ್ನೋದೇ ಇಂದಿನ ಅನಿಶ್ಚತತೆ!! ನಾಳಿನ ಎಲ್ಲ ಕನಸುಗಳಿಗಾಗಿ ಹೋರಾಟ ನಮ್ಮದು.! ಆ ಕನಸುಗಳನ್ನು ನನಸಾಗಿಸಿದ ಮೇಲೆ ನಿನಗೆ ಸಂಭ್ರಮ ಪಡೋದಕ್ಕೆ ನಿನ್ನ ಸುತ್ತಲೂ ನಿನ್ನವರಿರಬೇಕು! ಇಲ್ಲ. ನಿನ್ನ ವಿಜಯಗಳೆಂದೂ ನಿನ್ನ ಸಂಭ್ರಮವಾಗದು! ಸಮಯವೆನ್ನುವ ಮಾಯೆಯಲ್ಲಿ ನಮ್ಮನ್ನು ನಮ್ಮವರನ್ನು ಕಳೆದುಕೊಳ್ಳಬಾರದು! ಅಸಮಾಧಾನದ ಪರ್ವದಲ್ಲಿ ನಿರ್ವಹಣೆ ಪ್ರಾಮಾಣಿಕ ಪ್ರಯತ್ನವೇ ಅಲ್ಲವಾ?ಹಾಂ... ಈ ಮಾನಸ ಸರೋವರದಲ್ಲಿ ಮತ್ತದೇ ಮೊದಲಿನ ಹಾಗೆ ನಿನಗಿಷ್ಟವಾಗುವ ನೀನು ಬಯಸುವ ಪ್ರತಿಬಿಂಬವನ್ನು ಮಾತ್ರ ನೋಡಲು ಬಯಸಬೇಡ ಮನವೇ... ವಕ್ರತೆಗಳನ್ನೂ ತಿದ್ದಿಕೊಳ್ಳೋ ಪ್ರಯತ್ನಮಾಡು. ಪ್ರಪಂಚದಲ್ಲಿ ಎಲ್ಲದಕ್ಕಿಂತ
ದೊಡ್ಡ ಸಾಧನೆಯೆಂದರೆ ಮನುಷ್ಯ ಮನುಷ್ಯನಾಗಿ ಬದುಕುವುದು....

     ಒಳಗಿನ ಯುದ್ಧಕ್ಕೆ ಹೊರಗಿನ ವಾಸ್ತವ ಸಾಥ್ ನೀಡದ ಸ್ಥಿತಿಯಲ್ಲಿ ಏನು ಮಾಡಬೇಕೆನ್ನುತ್ತೀ? ನಿಜಕ್ಕೆ ನೋಡಿದರೆ  ಏನೋ ಕಳೆದುಹೋಯಿತೆಂಬ ನೋವಿಗೆ ಆಸ್ಪದವೇ ಇಲ್ಲ.  ಆಯ್ಕೆಯ ಪಡೆದುಕೊಳ್ಳುವುದು ನಿದರ್ಿಷ್ಟವಾಗಿದ್ದಾಗ... ಯೋಚನೆ ಮಾಡು.. ಒಳಗಿನ ಅಸಹನೆ
ಹಿಂದಿರುವುದಕ್ಕಲ್ಲ. ಯಾವುದು ಹಿಂದೆ ಮತ್ತು ಯಾವುದು ಮುಂದೆ ಅಂತ ನಿದರ್ಿಷ್ಟವಾಗಿ ನಿರ್ಣಯಿಸಬಲ್ಲೆವಲ್ಲವಾ ನಾವು? ಯಾರೋ ನಮಗಿಂತ ಮುಂದೆ ಮುಂದೆ ಹೋದವರು ಎಲ್ಲಿಯವರೆಗೆ ಹೋದಾರು? ಬಹಳ ಬೇಗ ದಾರಿ ಮುಗಿದೀತು ಅವರದ್ದು! ಗುರಿ ದೂರ, ಪಯಣ ಅನಂತ ಆಯ್ಕೆ ಮಾಡಿಕೊಂಡವರಿಗೆ ಅದಕ್ಕೆ ಬೇಕಾದ ಬುತ್ತಿಯ ತಯಾರಿಯೂ ಅಷ್ಟೇ ಆಗಬೇಕಲ್ಲವಾ? ಹೋದವರ ದಾರಿಯಲ್ಲಿ ನೀನೂ ಓಡಿ ಮುಂದೋಗಿ ಮುಗಿದುಹೋಗಬೇಕೆನ್ನುತ್ತೀಯಾ?  ಬದುಕಿನ ಅನಂತ ಪ್ರಯಾಣಕ್ಕೆ ಒಂದಿಷ್ಟು ಸತ್ವಯುತವಾದ ಆಹಾರ ಬೇಕಲ್ಲವಾ? ಹಾಗೇ ಇದು......
                 ಅಸಹನೆಗಳ ಕುದಿಯಲ್ಲಿ ಪಾಕ ಹುಟ್ಟುವ ಸಮಯಕ್ಕೆ ಕಾಯುತ್ತೇನೆ ನಾನು... ಆದರೆ ಅಸಹನೆಯೇ, ಕುದಿಯೇ ಒಂದು ಸ್ವಭಾವ ಆಗುವುದನ್ನು ವಿರೋಧಿಸುತ್ತೇನೆ. ಮೊದಲೇ ಹೇಳಿದಂತೆ ಎಲ್ಲಕ್ಕೂ ಮಿತಿಯಿದೆ. ಮಿತಿ ಮೀರುವ ಮೊದಲು ಎಚ್ಚೆತ್ತುಕೊಳ್ಳಲೇಬೇಕು. ಅದು ನಾನಾದರೂ ನೀನಾದರೂ..... ನಿನ್ನೊಂದಿಗೆ ಮಾತಿಗೆ ಕೂತರೆ ಅದಕ್ಕೆ ಕೊನೆಯೆಂಬುದಿಲ್ಲ. ಬದುಕಿನ ಪುಟಪುಟಕ್ಕು ಅನ್ವಯವಾಗುವ ವಾಸ್ತವಗಳ ಜೊತೆ ಸಮೀಕರಣವಾದಾಗಲೇ ಭಾವನೆಗಳಿಗೆ ಬೆಲೆ ಮತ್ತು ಬಲ ಬರೋದು. ಅಂತಹ ಸಮೀಕರಣ ನಮ್ಮದಾಗಲಿ ಎಂಬ ಕೋರಿಕೆ ಈ ಪುಟ್ಟ ಅಂಗೈಯಲ್ಲಿ.. ಸಿಗೋಣ ಮತ್ತೆ ಇದೇ ತೀರಗಳಲ್ಲಿ............