Wednesday, May 14, 2014

ನಿಮ್ಮದೊಂದು ಉತ್ಸಾಹದ ನಗುಮುಖ ಸ್ಪೂರ್ತಿಯಾಗಲಿ ಜಗಕೆ....     ಇತ್ತೀಚೆಗೆ ಬದುಕು ಅನೇಕ ಒತ್ತಡಗಳಲ್ಲಿ ಸಿಲುಕಿಸಿದೆ. ಸಮಯದ ಅಭಾವ ಪ್ರತಿಯೊಬ್ಬರನ್ನೂ ಕಾಡುತ್ತಿರುವುದು ಸುಳ್ಳಲ್ಲ. ಹಾಗಿದ್ದೂ ಒಂದಿಷ್ಟು ಕಮಿಟ್ಮೆಂಟ್ಗಳ ಕುರಿತು ಮಾತನಾಡಬೇಕು. ಯಾಕೆಂದರೆ ಪದೇ ಪದೇ ನನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಈ ಮಾತುಗಳನ್ನು ಹೇಳಲಾಗದೇ ಹೇಳದಿರಲಾಗದೇ ಒದ್ದಾಡಿದ್ದೇನೆ. ಹೇಳಿದರೆ ಕಟು ಎನ್ನಿಸುವ ಹೇಳದಿದ್ದರೆ ಬದುಕನ್ನೇ ವೃಥಾ ಸಮಯಹರಣವನ್ನಾಗಿಸುವ ಜನಗಳ ಮಧ್ಯೆ ಒಂದಿಷ್ಟು ಕಹಿಯೆನ್ನಿಸಿದರೂ ಹೇಳಬೇಕಾದುದನ್ನು ಹೇಳಿ ಹಗುರಾಗಲು ಈ ನನ್ನ ಡೈರಿಯಂತ ಮನಸಿನ ಮನೆಯೇ ಸೂಕ್ತ ಎನ್ನಿಸಿತು. ಇದು ಒಂದು ಅರ್ಥದಲ್ಲಿ ನಮ್ಮ ನಿಮ್ಮೆಲ್ಲರನ್ನೂ ಆಗಾಗ ಕಾಡುವ ಸಮಸ್ಯೆಯೇ ಆಗಿರುವುದರಿಂದ ಸಾರ್ವತ್ರಿಕವೂ ಆಗಿದೆಯೆಂಬುದು ಸತ್ಯ.

     ಮೊದಲೆಲ್ಲ ಯಾರಾದರೂ ಕಷ್ಟ ಹೇಳಿಕೊಂಡರೆ ಕೇಳಿ ಸಂತೈಸುವ ತಾಳ್ಮೆ ತುಂಬ ಇತ್ತು. ನೊಂದವರಿಗಾಗಿ ನೋವಿನಲ್ಲಿ ಇರುವ ಸ್ನೇಹಿತರಿಗಾಗಿ ಇಂದಿಗೂ ನನ್ನ ಹೃದಯದಲ್ಲಿ ಅವರನ್ನು ಕೇಳಿಸಿಕೊಳ್ಳುವ ತಾಳ್ಮೆ ಉಳಿದಿದೆ. ಆದರೆ ಈ ತಾಳ್ಮೆಯ ಪರೀಕ್ಷೆಯೂ ಇತ್ತೀಚೆಗೆ ತುಂಬಾನೇ ಆಗುತ್ತಿದೆ.  ನೋವು ಯಾರಿಗಿಲ್ಲ? ಎಲ್ಲರಿಗೂ ಒಂದಲ್ಲ ಒಂದು ನೋವು. ಕೆಲವರಿಗೆ ಸಂಬಂಧಗಳ ಸಮಸ್ಯೆ, ಇನ್ನು ಕೆಲವರಿಗೆ ಬದುಕಿನ ಸಮಸ್ಯೆ. ಇನ್ನೂ ಕೆಲವರಿಗೆ ಪ್ರೀತಿಯ ಸಮಸ್ಯೆ, ಇನ್ನೂ  ಬಹಳಷ್ಟು ಜನರಿಗೆ ಲವ್ ಒಂದು ಸಮಸ್ಯೆ... ಹೌದು ಪ್ರೀತಿ ಪ್ರೇಮ ಬದುಕು ಸೋತಾಗೆಲ್ಲ ಸ್ನೇಹಿತರಾಗಿ ಅವರ ದುಃಖ ಅರ್ಥ ಮಾಡಿಕೊಂಡು ಅವರನ್ನು ಸಂತೈಸಬೇಕಾದ ಅವಶ್ಯಕತೆ ಖಂಡಿತ ಇದೆ. ಪ್ರೀತಿ ಪ್ರೇಮಗಳು ಸೋತಾಗ ಬದುಕು ಮುಗಿಯಿತು ಅಂದುಕೊಳ್ಳುವ ಭಾವ ಆವರಿಸುತ್ತದೆ! ಅದರಿಂದ ಹೊರಬರಲು ಬಹಳ ದಿನಗಳೂ ಬೇಕು. ಮತ್ತು ತುಂಬಾ ಆತ್ಮಬಲ ಬೇಕು. ಎಲ್ಲೋ ಸ್ವಲ್ಪ ಸ್ನೇಹದ ಆಸರೆ ಸಿಕ್ಕರೆ ಅವರು ಬಹುಬೇಗ ಅದರಿಂದ ಹೊರಬಂದು ಜೀವನವನ್ನು ಚಂದವಾಗಿಯೇ ರೂಪಿಸಿಕೊಳ್ಳಬಹುದು.
    ಕಟುವಾದರೂ ಸತ್ಯವಾದ ಮಾತೊಂದಿದೆ. ಸಾವು ಸಹ ಯಾರ ಬದುಕನ್ನೂ ನಿಲ್ಲಿಸಲಾಗದು. ಹಾಗಿದ್ದ ಮೇಲೆ ಮುರಿದ ಸಂಬಂಧಗಳಿಗಾಗಿ ಬದುಕನ್ನು ಹಾಳುಮಾಡಿಕೊಳ್ಳುವುದರಲ್ಲಿ ಯಾವ ಅರ್ಥವಿದೆ? ಯಾವುದು ನಮ್ಮದಾಗಿಲ್ಲವೋ ಅದನ್ನು ಪಡೆಯುವ ಹಟ ಬಿಟ್ಟು ನಮ್ಮದಾಗಿರುವುದರ ಹುಡುಕುವ ಛಲ ಒಳ್ಳೆಯದಲ್ಲವೇ? ನೋವು ಸಹಜ, ನೋವಿನ ದಿನಗಳೂ ಸಹಜ, ಪ್ರೀತಿ ಎಷ್ಟು ಸಹಜವೋ ನೋವೂ ಅದರ ಭಾಗವೇ ಆಗಿದೆ. ಆದರೆ ಕಾಲ ಎಲ್ಲವನ್ನೂ ಮರೆಸುವ ಶಕ್ತಿ ಹೊಂದಿದೆ. ಕಾಲದ ಅಪಾರ ಮಹಿಮೆ ಅದು. ಹಾಗಿದ್ದೂ ಕಾಲಕ್ಕೆ ನಮ್ಮನ್ನು ಒಡ್ಡಿಕೊಳ್ಳಬೇಕಾದ ಸಹಜತೆ ಕೂಡ ನಮಗೆ ಇರಬೇಕು. ಯಾಕೆಂದರೆ ಕಾಲವೆಷ್ಟೇ ಕಳೆದರೂ ವಾಸ್ತವವನ್ನು ಒಪ್ಪಿಕೊಳ್ಳದೆ  ಭ್ರಮೆಯಲ್ಲೇ ಬದುಕುವವರ ಬಗ್ಗೆ ಕಾಲ ಕೂಡ ಏನನ್ನೂ ಮಾಡಲಾಗದು! ನಿಸ್ಸಾಯಕತೆಯಲ್ಲಿ ನೋಡುವುದ ಬಿಟ್ಟು. 

  ಒಮ್ಮೊಮ್ಮೆ ತುಂಬಾ ಮೈ ಉರಿಯುವಷ್ಟು ಕೋಪ ಬರುತ್ತದೆ ನನಗೆ. ಯಾರೂ ಹೇಳೀ ಕೇಳೀ ಪ್ರೀತಿಸುವುದಿಲ್ಲ. ಆದರೆ ನೊಂದವರಿಗೆ ಸಾಂತ್ವನ ನೀಡಲೆಂದೇ ನಾವು ಕೊಟ್ಟ ಸಮಯ, ನಾವು ಕೊಡುವ ವಾತ್ಸಲ್ಯ ಎಲ್ಲವೂ ಬೆಲೆಯಿಲ್ಲದೇ ಹೋದಾಗ ಮಾತ್ರ ತುಂಬ ಕೋಪಬರುತ್ತದೆ. ಯಾರೇ ಆಗಲೀ ಯಾರಿಗೂ ಪೂರ್ಣ ಸಮಾಧಾನ  ಕೊಡುವ ಶಕ್ತಿ ಇರುವುದಿಲ್ಲ. ಭಗವಂತನೊಬ್ಬನ ಬಿಟ್ಟು ಅಂತಹ ಚೈತನ್ಯವನ್ನು ನಮ್ಮೊಳಗಿಂದ ನಾವೇ ಪಡೆದುಕೊಳ್ಳಬೇಕು. ನಮ್ಮ ಮಾತು ಎಲ್ಲ ಕೇಳುತ್ತಾರೆ. ನಮ್ಮಪ್ರೀತಿಯೂ ಅವರಿಗೆ ಅರ್ಥವಾಗುತ್ತಿರುತ್ತದೆ. ಮೂರೇ ದಿನ. ನಾಲ್ಕನೇದಿನ ಅವರ ಮೂಡ್ ಮತ್ತೆ ಆಫ್. ಕೇಳೀದರೆ ನೂರು ಕಾರಣ.  ನಮಗೇನು ಕೆಲಸವಿಲ್ಲವಾ? ಅಥವಾ ನಮ್ಮ ಮಾತಿಗೆ ಅಷ್ಟು ಬೆಲೆಯಿಲ್ಲದಮೇಲೆ ಯಾಕೆ ಮಾತಾಡಿದೆವು ಅನ್ನಿಸಿಬಿಡುತ್ತದೆ. ನೋಯುವುದನ್ನು ಭ್ರಮೆಯಲ್ಲಿ ಬದುಕುವುದನ್ನು ಅಭ್ಯಾಸಮಾಡಿಕೊಂಡವರಿಗೆ ಈ ಬಗೆಯ ಸಂತೈಸುವಿಕೆ ವ್ಯರ್ಥ ಎಂಬುದು ಇತ್ತೀಚೆಗೆ ನನಗೆ ಅರ್ಥವಾಗಿರುವ ಸತ್ಯ. ಬದುಕಲ್ಲಿ ಒಪ್ಪಿಕೊಂಡ ಕೆಲಸಗಳನ್ನು ನಿರ್ದಿಷ್ಟ ಸಮಯಕ್ಕೆ ಮುಗಿಸುವಲ್ಲಿ ಸಹ ಇವರಿಗೆ ಭಾವನೆಗಳು ಅಡ್ಡಬರುತ್ತವೆ.

     ನನ್ನ ಮಟ್ಟಿಗೆ ತನ್ನನ್ನು ತಾನು ಗೆಲ್ಲಲಾರದವ ಎಲ್ಲಿಯೂ  ಏನನ್ನೂ ಗೆಲ್ಲಲಾರ. ಭಾವನೆಗಳು ಬೇಕು ಬದುಕಿಗೆ ಆದರೆ ಭಾವನಗೆಳೇ ಬದುಕಲ್ಲ. ಪ್ರಪಂಚದ ಜೊತೆ ಇರುವ ಎಲ್ಲ ಕಮಿಟ್ಮೆಂಟ್ ಗಳನ್ನೂ ವಾಸ್ತವದಲ್ಲಿ ಬದುಕುವವ ಮಾತ್ರ ಯಶಸ್ವಿಯಾಗುತ್ತಾನೆ. ತಾನೇನು ಮತ್ತು ತನ್ನ ಗುರಿಯೇನು ಎಂಬುದು ಸ್ಪಷ್ಟವಾಗಿರುವ ಮನುಷ್ಯಮಾತ್ರ ಭಾವನಗೆಳನ್ನು ಗೆದ್ದು ಮೇಲೆ ಬರುತ್ತಾನೆ.  ಆಕಸ್ಮಿಕಗಳು ಸಂಭವಿಸಿದಾಗ ಕೈ ಚೆಲ್ಲಿ ನಿಲ್ಲುವವನು ಎಂದೂ ಗಟ್ಟಿಯಾಗಲಾರ. ಎಂಥ ನೋವೇ ಇರಲಿ ಹೊರಬರುತ್ತೇನೆಂಬ ಆತ್ಮವಿಶ್ವಾಸ ಇರುವವನಿಗೆ ಬದುಕು ಸದಾ ಕ್ರಿಯಾಶೀಲ. ಮತ್ತು ಯಶಸ್ಸಿನ ಮಾಪಕ. ಪ್ರೀತಿಸಿದ ಸಂತೈಸಿದ ಕ್ಷಣಗಳು ಸಾರ್ಥಕ. ಬೇರೆ ಯಾರೂ ನಿರಂತರ ನಿಮ್ಮ ಶಕ್ತಿಮೂಲಗಳಲ್ಲ. ನಮಗೆ ನಾವೇ ಗೆದ್ದು ಬರುವ ಚಿಂತನಶೀಲ ವ್ಯಕ್ತಿತ್ವವಿಟ್ಟುಕೊಂಡವರು ಮಾದರಿಯಾಗುತ್ತಾರೆ.


    ಈ ಸಮಾಜ, ಜಗತ್ತು ಕ್ರಿಯಾಶೀಲವಾದುದು. ಇದು ನಮ್ಮನಮ್ಮ ಕರ್ಮಗಳನ್ನು ಮಾತ್ರ ನಿದರ್ೇಶಿಸುತ್ತದೆ. ಬದುಕಲ್ಲಿ ಹದವಾಗಿ ಭಾವಗಳ ಬೆರೆಸಿಕೊಳ್ಳಬೇಕು. ಆನಂದಕ್ಕೆ ಭಾವನಗೆಳು ಮೂಲ. ಸಂಭಂಧಗಳು ಮೂಲ. ಆದರೆ ಕರ್ಮ(ಕೆಲಸ)ವಿಲ್ಲದೇ ಆನಂದವಿಲ್ಲ. ಉದಾಹರಣೆಗೆ ಪ್ರೀತಿ ಹೊಟ್ಟೆತುಂಬಿಸುವುದಿಲ್ಲ. ಪ್ರೀತಿಸಿದವರ ಹೊಟ್ಟೆತುಂಬಿಸಲು ಸಾಧ್ಯವಾಗದಿದ್ದರೆ ಪ್ರೀತಿ ಇದ್ದು ಏನು ಫಲ?  ಯಾವುದೇ ದಿಕ್ಕಿಗೆ ಮುಖ ಮಾಡಿದರೂ ಕೆಲಸ ಮೊದಲು ಎನ್ನುವ ಸಾಕಷ್ಟು ಪಾಠ ಪೃಕೃತಿಯಲ್ಲದೆ. ಆದರೆ ನಾವದನ್ನು ಕಲಿಯುವುದಿಲ್ಲ. ಕೆಲಸಗಳ್ಳತನಕ್ಕೆ ಕಾರಣ ಹುಡುಕುತ್ತಲೇ ಇರುತ್ತೇವೆ. 
ದೊಡ್ಡ ನೆಪವೆಂದರೆ ಭಾವನೆಗಳು. ಮೂಡ್ ಇಲ್ಲ ಎಂದುಬಿಡುವುದು. ಕೆಲವು ಸಲ ಎಷ್ಟು ಯೋಚನಾಹೀನರಾಗಿರುತ್ತೇವೆ ಎಂದರೆ ಒಪ್ಪಿಕೊಂಡ ಕಮಿಟ್ಮೆಂಟ್, ಕೆಲಸಗಳನ್ನು ಅವರ ಅನಿವಾರ್ಯತೆ, ಅಥವಾ ಅಗತ್ಯವನ್ನೂ  ಕಡೆಗಣಿಸಿ ನಮ್ಮ ಮೂಡ್ ಮೇಲೆ ಅವನ್ನು ಹಾಕಿಬಿಡುತ್ತೇವೆ, ಒಂದು ಮಾತು, ಒಂದು ನಿದರ್ಿಷ್ಟತೆಯಿಲ್ಲದ ಈ ಬದುಕಿನ ವಿಧಾನಗಳಿಗೆ ನನ್ನ ತೀವ್ರ ಅಸಮಾಧಾನವಿದೆ.  ನನ್ನ ಎಷ್ಟೋ ಸ್ನೇಹಿತರಿಗೆ ಸೋತಾಗೆಲ್ಲ ಧೈರ್ಯ ಹೇಳಿದ ಅದೇ ನಿಮ್ಮ ಅಕ್ಕ ಇವತ್ತು ಸಹನೆ ಮೀರಿ ಬರೆಯುತ್ತಿದ್ದೇನೆ. ಎಲ್ಲಿ ಹೋದವು ನಿಮ್ಮ ಬದ್ಧತೆಗಳು?  ಸೋತವರು ಗೆದ್ದುಬಂದು  ಸಾಧಿಸಬೇಕಾದ ಎಲ್ಲ ಕೆಲಸಗಳ ಯಾಕೆ ಮರೆತಿರಿ? ಕೈಯಲ್ಲಿ ಪುಡಿಗಾಸು ಇಲ್ಲದಿರುವಾಗಲೂ ಇದ್ದ ಕನಸುಗಳು ಈಗ ಎಲ್ಲಿ ಹೋದವು? ನಿಮ್ಮ ನಿಮ್ಮ ಕನಸುಗಳೊಂದಿಗೆ ನೀವೇ ರಾಜಿಯಾಗಿಬಿಟ್ಟಿರಾ? ಅಥವಾ ನಿಮ್ಮದೇ ಭಾವಗಳು ನಿಮಗಿಂದು ವಜ್ರ್ಯವಾ?  ಸದಾಕಾಲ ನಿಮ್ಮನ್ನು  ನಿಮ್ಮ ಮಾತುಗಳಿಗೆ ಸಮಯವನ್ನೂ ಒದಗಿಸಲಾಗದೇ ಇರಬಹುದು ನಾನು. ಯಾಕೆಂದರೆ ನನ್ನ ಬದುಕಿಗೂ ಒಂದಿಷ್ಟು ನನ್ನದಾದ ಸಮಯಗಳು ಬೇಕಿತ್ತು. ಹಾಗಿದ್ದೂ ನಿಮ್ಮ ಮೇಲಿನ ಯಾವ ಪ್ರೀತಿಯೂ ಕಮ್ಮಿಯಾಗಿರಲಿಲ್ಲ. ನಾನು ನಿಮ್ಮ ಅಗತ್ಯಗಳಿಗೆಲ್ಲ ನನ್ನ ಕೈಲಾದಮಟ್ಟಿಗೆ ಇಂದಿಗೂ ಒದಗುತ್ತಲೇ ಇರುತ್ತೇನೆ. ಹಾಗಿದ್ದೂ ಸಹ ಸೋತ ಪೆಚ್ಚು ಹರಿವ ನಿಮ್ಮ ಮುಖದ ಖಳೆ ಮಾಸುವುದೇ ಇಲ್ಲ. ನನಗಿದು ಅಸಹನೀಯ. ಅಥವಾ ಅಂತಾ ಪೆಚ್ಚು ಮುಖ ಹಾಕಿದಾಗ ಮಾತ್ರ ನಾನು ನೆನಪಾಗುತ್ತೇನಾ 
ಅನ್ನುವುದೂ ನನಗೆ ತಿಳಿದಿಲ್ಲ. ಯಾರ ಬದುಕನ್ನು  ಯಾರ ಭಾವಗಳನ್ನೂ ಯಾರೂ ಕಟ್ಟಿಕೊಡಲಾರೆವು. ಕೈ ಕೈ ಜೋಡಿಸಿ ಕಟ್ಟಬೇಕಾದ ಕನಸುಗಳಿಗೆ ಮಾತ್ರ ಕೈಚೆಲ್ಲಿ ಕೂತವರು! 

       ಪ್ರೀತಿ, ಸ್ನೇಹ, ಸಾಹಿತ್ಯ, ಕವಿತೆ, ಬಾಂಧವ್ಯಗಳೆಲ್ಲವೂ ನಮ್ಮನ್ನು ಸಂಭ್ರಮಿಸಲು ನಾವು ಕಂಡುಕೊಂಡ ಮಾರ್ಗಗಳಷ್ಟೇ. ಹೊರತಾಗಿ ಯಾರು ಯಾರಿಗೆ ಹೆಚ್ಚು ಯಾರು ಕಡಿಮೆ ಎಂಬ ಮಾಪನಗಳು ಇಲ್ಲಿ ಅನಗತ್ಯ. ಚಿಕ್ಕವರಂತೆ ಬೆರಳಿಗೆ ಅಂಟಿಕೊಂಡಿರುವ ಯಾವ ಅವಶ್ಯಕತೆಗಳೂ ಇಲ್ಲ. ಆದರೂ ನಡೆದು ಬಂದ ಹಾದಿಯಲ್ಲಿ ಒಂದಿಷ್ಟು ನೆನಪುಗಳಿವೆ.  ಕಲಿತದ್ದು ಬಹಳವಿದೆ. ಕಲಿಯಬೇಕಾದದ್ದು ಇನ್ನೂ ಇದೆ. ದಿನದಿಂದ ದಿನಕ್ಕೆ ಸಣ್ಣತನಗಳ ಬಿಟ್ಟು ನೇರವಂತಿಕೆ ಹಾಗೂ ಎಷ್ಟು ವಿಶಾಲಮನೋಭಾವ ಬೆಳೆಸಿಕೊಂಡೆವು  ಎಂಬುದು ನಮ್ಮ ಪ್ರೌಢತೆಗೆ ಸಾಕ್ಷಿಯಾಗಬೇಕು. ಇನ್ನೂ ಅದೇ ಅದೇ ಯಾವುದೋ ನಿನ್ನೆಗಳು ಹಳಸಿದ ಅದೇ ಕ್ಷಣಗಳ ಎಳೆದು ಜಗ್ಗಿ ಜೀವಂತಗೊಳಿಸುತ್ತ ಮತ್ತೆ ಯಾವುದೋ ರೇಖೆ ಎಳೆದುಕೊಳ್ಳುತ್ತ ನಮ್ಮಷ್ಟಕ್ಕೆ ನಾವು ಲೆಕ್ಕಾಚಾರಗಳಲ್ಲಿ ಸೋತರೆ ನಾವು ಎಂದಿಗೂ ಮುಂದೆ ಸಾಗುವುದಿಲ್ಲ. ಹೌದು. ತಪ್ಪುಗಳು ಪಾಠಗಳಾಗಿವೆ.
ಆದರೆ ದೊಡ್ಡವರಾಗುವುದೆಂದರೆ  ಹಳೆಯ ಕೊಳೆಯ ಮರೆತು ಹೊಸ ನಗುವಿನಲ್ಲಿ ಭಾಗಿಯಾಗಬೇಕು. ಮತ್ತಷ್ಟು ಸಮಾಜಮುಖಿಯಾಗಬೇಕು. ಹೆಸರು, ಹಣ ಕೀರ್ತಿಗಳು ನಮ್ಮ ಕೆಲಸಕ್ಕೆ  ತನ್ನಂತಾನೇ ಸಲ್ಲಬೇಕೇವಿನಃ ಅದರ ಹಿಂದೆ ಬೀಳಬಾರದು. ನಮ್ಮ ನಮ್ಮಲ್ಲೇ ಒಬ್ಬರ ಯಶಸ್ಸಿಗೆ ಸಂಭ್ರಮ ಇನ್ನೊಬ್ಬರ ಯಶಸ್ಸಿಗೆ ಹೊಟ್ಟೆಕಿಚ್ಚು ಇದು ಸಲ್ಲದು.
ಇಷ್ಟಕ್ಕೂ ಯಾರ ಪ್ರತಿಭೆ ಯಾರ ಗಂಟು? ಎಲ್ಲರೂ ಪ್ರೀತಿಪಾತ್ರರೇ.  ಬದುಕನ್ನು ಪ್ರೀತಿಸಲು ಕಲಿಯಬೇಕು. ಯಾವುದೇ ಸೋಲು ವಜ್ರ್ಯವಲ್ಲ. ಸೋಲು ಗೆಲುವಿಗೆ ಸೋಪಾನ. ನಿಧಾನಕ್ಕೇ ಆದರೂ ಮುನ್ನೆಡೆಯುವ ಸಾಮರ್ಥ್ಯ ನಮಗೆ ನಾವೇ ರೂಢಿಸಿಕೊಳ್ಳಬೇಕು. ಕೈ ಹಿಡಿದೆತ್ತುವವರು ಒಮ್ಮೆ ಮಾತ್ರ ಎತ್ತಿನಿಲ್ಲಿಸಬಲ್ಲರು. ನಡೆಯುವವರು ಸದಾ ನಾವೇ..
ಎದ್ದರೂ ಬಿದ್ದರೂ ನಮ್ಮ ಪಯಣ ನಿಲ್ಲದಿರಲಿ. ನಮ್ಮ ಕಾಲುಗಳ ಸತ್ವಗುಂದದಿರಲಿ. ಇತರರ ಆಸರೆ ಭಾವನಾತ್ಮಕವಾಗಿಯೂ ಭೌತಿಕವಾಗಿಯೂ ಬಯಸದಿರುವಂತ ಆತ್ಮಬಲವಿರಲಿ. ನಾಲ್ಕು ಜನರಿಗೆ ಕೈ ಕೊಟ್ಟು ಎದ್ದು ನಿಲ್ಲಿಸುವ ಆತ್ಮಬಲ ನಮಗೇ ಬರಲಿ. ಇದು ನಮ್ಮೆಲ್ಲರ ಬದುಕಿಗೆ ಶಕ್ತಿಯಾಗಲಿ.. 


     ಓರ್ವ ತಾಯಿ  ಮಗುವಿಗೆ ನಡೆಯಲು ಕಲಿಸುತ್ತಾಳೆ.  ಮೊದಮೊದಲು ಕೈ ನೀಡಿ. ಆಮೇಲೆ ಮಗು ಸ್ವತಂತ್ರವಾಗೇ ನಡೆಯಲು ಕಲಿಯುತ್ತದೆ. ಏಳು ಬೀಳುಗಳ ಜೊತೆ. ಬಿದ್ದಾಗ ಸ್ವಲ್ಪಗಾಯಸವರಿ ಬುದ್ದಿ ಹೇಳುತ್ತಾಳೆ. ನಡೆಯುವ ಪ್ರಯತ್ನ ಜಾರಿಯಲ್ಲಿರುತ್ತದೆ. ಅದು ಬದುಕಿನೆಡೆಗೆ ನಮ್ಮೆಲ್ಲರ ನಡಿಗೆಯ ಮಾದರಿ. ತಂದೆ, ತಾಯಿ, ಬಂಧು ಬಳಗ,  ಸಮಾಜ, ಗುರು ಹಿರಿಯರು, ಸ್ನೇಹಿತರು, ನಾವು ನಕ್ಕಾಗ ನಕ್ಕ ಎಷ್ಟೊ ಮನಸುಗಳು. ಅತ್ತಾಗ ಸಂತೈಸಿದ ಕೈಗಳು ಎಲ್ಲವೂ ಈ  ಬದುಕಿನ ಕೊಡುಗೆ. ಇವೆಲ್ಲದರ  ಬಗ್ಗೆ ಅರಿವಿರುವವ  ಬದುಕಿನ ಬಗ್ಗೆ  ಸದಾ ಆಸಕ್ತನಾಗಿರುತ್ತಾನೆ. ಯಾವುದೇ ಒಂದು ಬಿಂದುವಿನಲ್ಲಿ ಅವನ ಜೀವಂತಿಕೆ ಮುಗಿದುಹೋಗುವುದಿಲ್ಲ. ನನ್ನ ಕಾಳಜಿಯಿಷ್ಟೇ. ಕನಸುಗಳ ನನಸಾಗಿಸುವ ಕ್ರಿಯಾಶೀಲ  ಮನುಷ್ಯರಾಗಿ. ಚೈತನ್ಯ ಬಿತ್ತುವ ಉತ್ಸಾಹೀ  ಮನುಷ್ಯರಾಗಿ.  ನಿಮ್ಮನ್ನು ನೋಡಿ ನಾಲ್ಕು ಜನ ಕುಶಿ ಪಡುವಂತೆ ನಿಮ್ಮ ಜೀವನ ಉತ್ಸಾಹವಿರಲಿ. ಬದುಕು ಬಂಗಾರವಾಗುತ್ತದೆ. ನಿಮ್ಮದೂ. ನಿಮ್ಮನ್ನು ನಂಬಿದವರದ್ದೂ ಮತ್ತು ನಿಮ್ಮ ಸುತ್ತ ಮುತ್ತಲಿನವರಿಗೆ ಮಾದರಿಯೂ ಆಗುತ್ತೀರಿ. 

   ಇಲ್ಲೆಲ್ಲಿಯೂ  ನಾನು ನಿಮ್ಮ ನೋವನ್ನು ಅಲ್ಲಗಳೆಯುತ್ತಿಲ್ಲ. ಅಥವ ಅದರ ಭಾರವನ್ನು ಅಲಕ್ಷ್ಯಮಾಡುತ್ತಿಲ್ಲ. ನೋವು ಸಹಜ, ಅದು ಮಾಸುವುದಕ್ಕೆ ಸಮಯವೂ ಬೇಕು. ಒಂದಿಷ್ಟು ಕಾಲ ಎಲ್ಲವೂ ತೀವ್ರವಾಗೇ ಕಾಡುತ್ತವೆ. ಎಲ್ಲ ಸೋಲುಗಳು ಅಹಂನ್ನು, ಮನಸ್ಸನ್ನು ಘಾಸಿಮಾಡಿಯೇ ಮಾಡುತ್ತವೆ.  ಆದರೆ ನೀವು ಅಲ್ಲಿಯೇ ನಿಂತುಬಿಡಬೇಡಿ.  ಅಲ್ಲಿಂದ ಹೊರಬರುವ ಮಾರ್ಗ ನಿಮಗೆ ಮಾತ್ರ ಗೊತ್ತು. ಹುಡುಕಿ ಅದನ್ನು. ಆದಷ್ಟು ಬೇಗ ಹೊರಗೆ ಬನ್ನಿ. ಪ್ರಪಂಚ ವಿಶಾಲವಾಗಿದೆ, ಕನಸು ಅನಂತವಾಗಿದೆ, ಬೇಕಾಗಿದ್ದು ಸಂಕಲ್ಪ  ಮತ್ತು ಕ್ರಿಯೆ. ನಮಗಾಗಿ ನಾವು ಬದುಕುವುದು ಸ್ವಾರ್ಥವೇನಲ್ಲ.  ನಿಜಕ್ಕೂ ನೀವು ಕುಶಿಯಾಗಿದ್ದ ದಿನ ಎಲ್ಲರನ್ನೂ ಕುಶಿಯಾಗಿಡಬಲ್ಲಿರಿ. ಈ ಎಲ್ಲ ಮಾತುಗಳಿಗೆ ನಾನು ಕೂಡ ಅತೀತವೇನಲ್ಲ. 

ಮನಸಿನ ಮಾತು ಮನಸಿನೆದುರು ಬಿಚ್ಚಿಟ್ಟು ಹಗುರಾಗುವ ಹಂಬಲವಿದು. ತೀರದಲ್ಲಿ ತೇಲಿಬಿಟ್ಟ ಪುಟ್ಟ ಅಕ್ಷರದ ದೋಣಿಯಿದು. 

ಮತ್ತೆ ಸಿಗುವ ನಗುಮೊಗದೊಂದಿಗೆ..