Saturday, November 29, 2014

ಗದ್ದಲ ಒಳಗೂ ಹೊರಗೂ...




           ಮನನ ಹೆಚ್ಚಾದರೂ ಮಾತು ಕಮ್ಮಿಯಾದಂತೆ ಅಪರೂಪಕ್ಕೆಂಬಂತೆ ಇಲ್ಲಿಗೆ ಬರಬೇಕಿದೆ. ಇದು ಕೂಡ ಆರಂಭವೂ ಅಲ್ಲದ ಅಂತ್ಯವೂ ಅಲ್ಲದ ಒಂದು ಮಥನ ಮಂಥನ. ಮನೆಯಲ್ಲಿ ಟೀವಿ ಯ ಕೇಬಲ್ ಕಟ್ ಮಾಡುವವರೆಗೂ ಮಹಾ ಗದ್ದಲವಿತ್ತು. ಬೇಕಾ ಬೇಡವಾ ಎಂಬುದರ ಬಗ್ಗೆ ಚಚರ್ೆಯದೇ ಗಲಾಟೆ ಕೆಲವು ದಿನವಿತ್ತು. ಆದರೆ ಈಗ
ನನಗಂತೂ ಮನೆಯಲ್ಲಿ ಶಾಂತಿಯ ತಂದಿಟ್ಟುಕೊಂಡ ಕುಶಿಯಾಗಿದೆ. ಬದುಕಿಗೆ ಅನಿವಾರ್ಯವಾದ ಕೆಲವು ವಸ್ತುಗಳು ಕೂಡ ಹೇಗೆ ಒಂದು ದಿನ ಅನುಪಯುಕ್ತ ಅನ್ನಿಸಲು ಆರಂಭಿಸುತ್ತವೆ ಎನ್ನುವುದಕ್ಕೆ ಇದೂ ಒಂದು ನಿದರ್ಶನವೆಂದುಕೊಂಡೆ.  ಬೆಳಗಾದರೆ ಅಂಗಡಿಯ ಕೀಲಿ ಕೈ ಜೊತೆಗೆ ಎತ್ತಿಕೊಳ್ಳುವ ಪೇಪರ್ ಗಳೂ ಬಹುಶಃ ಇದೇ ತರ ಅಸಹನೀಯವೆನ್ನಿಸಿ
ದೂರವಿಡುವ ಸ್ಥಿತಿ ಎದುರಾಗಬಹುದು ಕೆಲವೇ ದಿನಗಳಲ್ಲಿ. ಇದಕ್ಕೆ ಒಂದು ಕಾರಣ ಬೆರಳ ತುದಿಯಲ್ಲಿ ಸಿಗುವ ಮೊಬೈಲ್ ನ್ಯೂಸ್ ಗಳು ಮತ್ತು ಇನ್ನೊಂದು ಕಾರಣ ಪತ್ರಿಕೆಗಳ ಅಸಹನೀಯ ಸುದ್ದಿ ಸಂಭ್ರಮಗಳು. ಮನುಷ್ಯ ರೇಜಿಗೆಗೆ ಒಳಪಡುವಷ್ಟು ಅಸಹನೀಯ ಸುದ್ದಿಗಳ ಬಿತ್ತರಿಕೆ.. ಬ್ರೇಕಿಂಗ್ ನ್ಯೂಸ್ ಗಳ ಭರಾಟೆ...  ಪ್ರತೀ ಮನುಷ್ಯನ ಪ್ರೈವೇಸಿಯಲ್ಲಿ ಇಣುಕುವ ಅಣಕು ಸಂಭ್ರಮ..


      ಈ ಬರಹಕ್ಕೂ ಮುನ್ನ ಒಂದು ಸವಾಲು ಕಾಡುತ್ತಿದೆ. ಹೇಳಬೇಕನ್ನಿಸುತ್ತಿರುವ ವಿಷಯದ ವ್ಯಾಪ್ತಿ ದೊಡ್ಡದು. ಹೇಳಿ ಹಗುರಾಗುವ ಮನಸ್ಥಿತಿಯ ಒತ್ತಡ ಇನ್ನೊಂದು. ಸಾಮಾಜಿಕ ಪ್ರತಿಕ್ರಿಯೆಗಳ ಗೊಂದಲದೆಡೆಗೆ ವಿಚಾರಮಾಡುವಷ್ಟು ಸಹನೆ ಕಾಣಿಸುತ್ತಿಲ್ಲ. ಯಾವುದು ಮೊದಲು ಮತ್ತು ಯಾವುದು ಕೊನೆಗೆ ಎಂಬುದಕ್ಕೂ ನಿದರ್ಿಷ್ಟತೆಯಿಲ್ಲ.ಇಲ್ಲಿ ನನ್ನ ಅನಿಸಿಕೆಗಳೇ ಅಂತಿಮ ಸತ್ಯವೆಂಬ ಹುಂಬತನ ಕೂಡ ನನಗಿಲ್ಲ. ಆದರೂ ಕಾಡುವ ನೂರೆಂಟು ಪ್ರಶ್ನೆಗಳು..

 ಮೊನ್ನೆ ಮೊನ್ನೆ ನಡೆದ ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣ. ಪ್ರೇಮಲತಾ ಪ್ರಕರಣ, ನಿತ್ಯಾನಂದ ನ ಪ್ರಕರಣ,  ಅಲ್ಲೆಲ್ಲೋ ಮಡೆಸ್ನಾನದ ಪ್ರಕರಣ, ಮತ್ತೆಲ್ಲೋ ದಲಿತರ ಮೇಲಿನ ದೌರ್ಜನ್ಯ, ಇನ್ನೊಂದೆಡೆ ಪುಟ್ಟಪುಟ್ಟ ಮಕ್ಕಳಮೇಲಿನ ಬಲಾತ್ಕಾರ... ಮುಚ್ಚಿ ಹಾಕುವ ಅದೆಷ್ಟೋ ಪ್ರಕರಣಗಳು.  ನೈತಿಕ ಪೋಲಿಸ್ರು, ಪಕ್ಕಾ ಬಂಡಾಯ ಪಂಥದವರು..
ಇವೆಲ್ಲವೂ ಒಂದಿಲ್ಲೊಂದು ಅನ್ಯಾಯದ ವಿರುದ್ಧದ ಹೋರಾಟವೆಂದೇ ಭಾವಿಸೋಣ. ಇದರಲ್ಲಿ ಅನ್ಯಾಯಕ್ಕೊಳಗಾದ ವ್ಯಕ್ತಿ ಮತ್ತು ಅಪರಾಧದ ಆರೋಪಕ್ಕೊಳಗಾದವರು ಎರಡು ಭಾಗ ಸಾಮಾನ್ಯ. ಕಾನೂನಿನ ಭಾಷೆಯಲ್ಲಿ ಹೇಳುವುದಾದರೆ ಆರೋಪಿ ಪ್ರತ್ಯಾರೋಪಿ ಅನ್ನಬಹುದು.  ಇವೆರಡೇ  ಜನ ನ್ಯಾಯಾಲಯದ ಕಟೆಕಟೆಯಲ್ಲಿ ನಿಂತರೆ  ಖಂಡಿತ ನ್ಯಾಯ
ಗೆಲ್ಲಬಹುದು. ಆದರೆ ಈ ಭಾಗವೆನ್ನುವುದು ದೇಶ, ಭಾಷೆ, ಸಮಾಜದ ಜನರನ್ನೇ ಇಬ್ಬಾಗವನ್ನಾಗಿ ನಿಲ್ಲಿಸುತ್ತಿರುವುದು ವಿಪರ್ಯಾಸವಾದರೂ ಸತ್ಯ. ಹೊಡೆದಾಡುತ್ತಿರುವವರು ಯಾರಿಗಾಗಿ ಹೊಡೆದಾಡುತ್ತಿದ್ದಾರೆ ಎಂಬುದೂ ಗೊತ್ತಿಲ್ಲದಷ್ಟು ಅವಿವೇಕಿಗಳಂತೆ ಹೊಡೆದಾಡುತ್ತಾರೆ ಒಮ್ಮೊಮ್ಮೆ.  ಒಂದೇ ಒಂದು ಪ್ರಕರಣದಲ್ಲಿ ಕೂಡ ನ್ಯಾಯ ದೊಡ್ಡದು. ತಪ್ಪಿತಸ್ಥರು ಯಾರೇ ಇದ್ದರು ಶಿಕ್ಷೆಯಾಗಲಿ. ನ್ಯಾಯಾಲಯವನ್ನು ಗೌರವಿಸುತ್ತೇವೆ ಎಂಬ ನುಡಿ ಕೂಡ ಕೇಳಿಬರುವುದಿಲ್ಲ. ಯಾಕೆಂದರೆ ನ್ಯಾಯಾಲಯದ ವ್ಯವಸ್ಥೆಯ ಮೇಲೇ ನಮ್ಮ ಸಮಾಜಕ್ಕೆ ಭರವಸೆ ವಿಶ್ವಾಸ ಉಳಿದಿಲ್ಲ. ಇದೊಂದು ಸಮಾಜದ ದುರ್ಗತಿಯೆಂದೆ ನನಗನ್ನಿಸುತ್ತದೆ. ಒಬ್ಬ ನಿರಪರಾಧಿಯಾಗಿದ್ದು ನ್ಯಾಯಾಲಯದಿಂದ ನಿರಪರಾಧಿಯೆಂದು ಬಿಡುಗಡೆಗೊಂಡರೆ  ಜನ ಅವನನ್ನು ನ್ಯಾಯ ಕೊಂಡುಕೊಂಡವನ ತರ ನೋಡುತ್ತಾರೆಂದರೆ ಇದು ವ್ಯವಸ್ಥೆಯ ಕುರಿತಾದ ನಿರಾಶಾವಾದವೇ.  ಆದರೆ ವಸ್ತುಸ್ತಿತಿ ಹಾಗಿರುವುದಿಲ್ಲ.
 ವ್ಯವಸ್ಥೆಯ ಒತ್ತಡಗಳಿಗೆ ನ್ಯಾಯವ್ಯವಸ್ಥೆ ಕಾರಣವಲ್ಲ. ನಾವೇ ಕಾರಣ. ಪ್ರತಿಯೊಂದು ಪ್ರಕರಣ ನಡೆದಾಗಲೂ ನಮ್ಮ ಮೂಗು ತೂರಿಸಲು ವ್ಯವಸ್ಥೆಯ ದುರುಪಯೋಗ ಎಲ್ಲೆಲ್ಲಿ ಪಡೆದುಕೊಳ್ಳಬಹುದೆಂದು ಆಲೋಚಿಸಿ ಒಳ ಮಾರ್ಗಗಳ ಬೆಂಬತ್ತುವ ನಾವೇ ಅಲ್ಲವೆ ಈ ವ್ಯವಸ್ಥೆಯ ರೂವಾರಿಗಳು! ನಿಜವಾದ ನ್ಯಾನ ಅನ್ಯಾಯ ಎರಡೂ ಲೆಕ್ಕಕ್ಕಿಲ್ಲದೇ ಹೋಗುತ್ತದೆ. ರಾಮಚಂದ್ರಾಪುರ ಮಠದ ವಿಷಯ ತೆಗೆದುಕೊಂಡರೂ ನನಗನ್ನಿಸುವುದು ಇದೇ ಇರುವ ನಾಲ್ಕಾರು ಹವ್ಯಕ ಮಠಗಳಗಳ ನಡುವೆ ಒಂದು ಅಪನಂಬಿಕೆಯ ವೃತ್ತ ಹುಟ್ಟಿಕೊಂಡಿದ್ದಲ್ಲದೇ ಇನ್ನುಳಿದ ಸಮಾಜದ ಅನುಮಾನದ ದೃಷ್ಟಿಯಲ್ಲಿ ಹವ್ಯಕ ಸಮುದಾಯವೇ ನಿಲ್ಲುವಂತಾದದ್ದು ದುರದೃಷ್ಟಕರ. ಸತ್ಯಾಸತ್ಯತೆಯು ಸಾಕ್ಷ್ಯ ಹಾಗೂ ನ್ಯಾಯಾಲಯದಲ್ಲಿ ನಿರ್ಧರಿತವಾಗುತ್ತದೆ. ಒಂದು ವೇಳೆ ನಮ್ಮ ನಮ್ಮ ನಂಬಿಕೆ ಶೃದ್ಧೆಗಳು ಅಚಲವೇ ಆಗಿದ್ದಲ್ಲಿ ಈ ಯಾವ ಸಂಗತಿ ನ್ಯೂಸ್ಛಾನೆಲ್ಗಳ ಪ್ರವಾಹ ಅಥವಾ ಇನ್ಯಾವ ಒತ್ತಡಗಳ ನಮ್ಮ  ಶೃದ್ಧೆಯನ್ನು ಬದಲಾಯಿಸಲಾಗದು. ದಿನಕ್ಕೊಬ್ಬರು ದಿನಕ್ಕೊಂದು ಹೇಳಿಕೆ ಕೊಡುವುದರಮೂಲಕ ಎಷ್ಟು ಕೆಟ್ಟದಾಗಿದೆ ನಮ್ಮ ಸ್ಥಿತಿಯೆಂದರೆ ಅಲ್ಲಿಯ  ಘಟ್ಟದ ಮೇಲಿನ ಹೆಣ್ಣುಮಕ್ಕಳು ತವರಿಗೆ ಹೋದರೆ ಮುಖ ಬಾಡಿಸಿ ಬರಬೇಕು. ಅಲ್ಲಿಯವರು ಇಲ್ಲಿಗೆ ಬಂದರೆ ಇಲ್ಲೂ ಅದೇ ಗತಿ. ನಮ್ಮ ನಮ್ಮ ಮನೆಮನೆಯಲ್ಲೂ ಅದೇ ಭಕ್ತ ಮನಸುಗಳಿವೆ. ಅವರ ನಂಬಿಕೆಯ ನೋಯಿಸಬಾರದೆನ್ನುವ ಅಲ್ಪ ಮತಿಯೂ ಇಲ್ಲದ ಬುದ್ದಿವಂತರಾದರೆ ನಮ್ಮ ಜನ! ನಮ್ಮ ನಮ್ಮ ಅಹಂ ತೃಪ್ತಿಗೋಸ್ಕರ ಒಂದು ಮಠ ಒಂದಷ್ಟು ಶೃದ್ಧೆ ಭಕ್ತಿ ನಂಬಿಕೆಗಳಿಗೆ  ಬಾಯಿಗೆ ಬಂದ ಮಾತನಾಡಿ ಚಪಲ ತೀರಿಸಿಕೊಳ್ಳುವುದಾದರೆ ಇದು ಯಾವ ಸಂಸ್ಕೃತಿ?  ಹೆಣ್ಣುಗಳಿಗೋಸ್ಕರ ಪರದಾಡುವಂತ ಸ್ಥಿತಿ ನಿಮರ್ಾಣವಾಗಿದ್ದು ಕೂಡ ಇದೇ ಅತಿಯಾದ ಬುದ್ಧಿವಂತಿಕೆಯಿಂದ. ಮತ್ತು ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಮನಸ್ಸಿಗೆ ಬಂದಂತೆ ಮಾತನಾಡುವುದರ ಮೂಲಕ ಇದೇ ಜನ ನಮ್ಮ ಹೆಣ್ಣುಮಕ್ಕಳಿಗೆ ಪೇಟೆ ಒಳ್ಳೆಯದು ಅನ್ನಿಸೋದಕ್ಕೆ ಕಾರಣರಾದವರೂ ಇದೇ ಜನ. ಈ ಮಾತನ್ನು ಒಬ್ಬ ತಾಯಿಯಾಗಿ  ಯೋಚನೆಮಾಡಿ ಹೇಳಲಿಕ್ಕೆ ಬೇಸರವೆನ್ನಿಸುತ್ತದೆ. ಹಳ್ಳಿಯ ಹುಡುಗರಿಗೆ ಹುಡುಗಿಯರ ಕೊಡಲು ಹಿಂದೇಟು ಹಾಕುತ್ತಿರುವುದು ಹುಡುಗಿಯ ಕಾರಣಕ್ಕಲ್ಲ. ಹುಡುಗನ ಕಾರಣಕ್ಕೂ ಅಲ್ಲ.  ಅಂತ ಒಂದು ತಲೆಮಾರಿನ ತಾಯಂದಿರು ಈ ಹಳ್ಳಿಯ ಬದುಕಿನಲ್ಲಿ
ಪಟ್ಟ ಕಷ್ಟ ಕಾರ್ಪಣ್ಯಗಳ ಪ್ರತಿಫಲವಿದು. ಇಲ್ಲಿ ಸೊಸೆಯಂದಿರು ಮಗಳಾಗುವುದು ಬಹಳ ಅಪರೂಪ. ಇತ್ತೀಚೆಗೆ ಎಷ್ಟು ಸುಧಾರಿಸಿದೆ ವ್ಯವಸ್ಥೆ ಬದಲಾಗಿದೆ ಎಂದುಕೊಂಡರೂ
ಇಲ್ಲಿ ಹೆಂಗಸರಿಗಿರುವ ಗೌರವ ಎಷ್ಟು ಎಂಬುದು ಇಲ್ಲಿಯೇ ಬದುಕುವ ಎಲ್ಲ ಹೆಣ್ಣುಗಳ ಅನುಭವ.  ಯಾವ ತಾಯಿಯಾದರೂ ತನ್ನ ಕಷ್ಟ ಮಗಳಿಗೆ ಬರದಿರಲಿ. ಅವಳು ಗೌರವಯುತವಾಗಿ ಬದುಕಲೆಂದು ಆಶಿಸಿ ವಿದ್ಯೆ  ಆ ಮೂಲಕ ಹೊರ ಪ್ರಪಂಚದ ಬೆನ್ನು ಬಿದ್ದರೆ ಅದು ಯಾರ ತಪ್ಪು?  ಬೆಂಕಿಯಿಂದ ಬಾಣಲೆಗೆ ಕಳಿಸುತ್ತಿದ್ದೇವೆ ಎಂಬ ಜ್ಞಾನ ಕೂಡ ಇರದ ಮುಗ್ಧ ತಾಯಂದಿರ ಕತೆಯಿದು.  ಮಠವೆಂಬ ಪವಿತ್ರ ಕ್ಷೇತ್ರದಲ್ಲಿ ತನ್ನ ಭಾವ ಭಕ್ತಿಗಳ ಶೃದ್ಧೆಯ ಕಂಡುಕೊಂಡ ನಮ್ಮೆಲ್ಲ ತಾಯಂದಿರಿಗೆ ಅಕ್ಕ ತಂಗಿಯರಿಗೆ
" ಮಠಕ್ಕೋಪವರೆಲ್ಲ ಇಂಥವರೇ" ಅಂತ ಮಾತನಾಡುವವರಿಗೆ ಪ್ರಜ್ಞೆ ಬೇಕು.

     ಇನ್ನು ಸ್ತ್ರೀ ಕುರಿತಾಗಿ ಇರುವ ಇನ್ನೂ ಅನೇಕ ಅಸಂಗತಿಗಳ ನಾವಿಲ್ಲಿ ಗಮನಿಸಬಹುದು.  ಒಂದೆಡೆ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಬಂಡಾಯವೇಳು ಎನ್ನುವ ಮನಸ್ಥಿತಿ. ಇನ್ನೊಂದೆಡೆ ಸ್ತ್ರೀ ಮಗುವಿನ ಸ್ಪರ್ಷದಿಂದಲೂ ಸಂನ್ಯಾಸ ಹಾಳಾಗುತ್ತದೆ ಎಂಬ ಗುಮಾನಿ! ಸಾವಿರಾರು ಸ್ತ್ರೀಯರು ಸೇರುವ ಎಲ್ಲರ ದನಿ ಭಾವಗಳಿಗಿಲ್ಲ ಬೆಲೆ. ಅನ್ಯಾಯವೇ ನಡೆದಿದ್ದರೆ ಅದಕ್ಕೂ ಒಂದು ಕಾರಣವಿರಬೇಕಲ್ಲವೆ? ನನ್ನಲ್ಲಿ ಅನೇಕರು ಹೇಳಿದ್ದಾರೆ. ನೀನು ಸ್ತ್ರೀ ಯರ ದನಿಯಾಗಬೇಕು. ಅವರ ಮೇಲಿನ ದೌರ್ಜನ್ಯ ಖಂಡಿಸಬೇಕು. ಅದನ್ನು ಬರೆಯಬೇಕು. ಕಾವ್ಯವನ್ನು ಖತ್ತಿಯಾಗಿಸಿಕೊಳ್ಳಬೇಕು ಎಂದೆಲ್ಲ. ಹಾಗಿದ್ದೂ ಅನ್ಯಾಯಕ್ಕೊಳಗಾದ ಗೆಳತಿಯ ಬದುಕಿಗೆ ನಾನು ನೀನು ಬಂಡಾಯವೇಳು. ಮನೆ ಬಿಟ್ಟು ಬಾ. ಕೇಸ್ ಹಾಕು.  ಡೈವೋರ್ಸ ಕೊಡು ಅಂತ ಸಲಹೆ ನೀಡಲಾರೆ. ಯಾಕೆಂದರೆ ನನಗಿದರಲ್ಲಿ ನಂಬಿಕೆಯಿಲ್ಲ. ಅತೀ ಅನಿವಾರ್ಯದ ಹೊರತು ಸಂಬಂಧಗಳ ಬಿಟ್ಟು ಹೊರನಡೆಯುವಲ್ಲಿ ಗೆಲುವು ಖಂಡಿತ ಇಲ್ಲ.  ಅದರ ಬದಲು ಆತ್ಮವಿಶ್ವಾಸ ಬೆಳೆಸಿಕೋ. ನಿನ್ನ ಹಣ ನೀನು ದುಡಿ. ಬದುಕಿನ ಹೊಸಹೊಸ ದಾರಿ ನೋಡು. ಗಟ್ಟಿಯಾಗಿ ನಿಲ್ಲು. ನಿನ್ನವರೆಲ್ಲರ ಹೆಗಲಾಗು. ಮಕ್ಕಳಿಗೆ ಬದುಕು ಕೊಡು
ನಂಬಿದ ತತ್ವಗಳ ಆಚರಿಸು. ಅಂತ ಸಲಹೆ ಕೊಡುತ್ತೇನೆ. ಅನ್ಯಾಯ ನಡೆಯುತ್ತದೆ ಅಂತಾದರೆ ಅದು ನಮ್ಮ ದೌರ್ಬಲ್ಯದಿಂದ. ಅದನ್ನು ನಾವೇ ಗೆದ್ದುಕೊಂಡ ದಿನ ಯಾರಿಗೆ ಯಾರೂ ಅನ್ಯಾಯ ಮಾಡಲಾಗದು. ಬಲಪ್ರದರ್ಶನಕ್ಕೆ ಹೊರಟವರ ವಿರುದ್ಧ ಇದು ಪ್ರಯೋಜನಕ್ಕೆ ಬರದಿರಬಹುದು. ಆದರೆ ಬದುಕಿಗೆ ನಮ್ಮಂತ ಹಳ್ಳೀ ಜನರ ವಾಸ್ತವಕ್ಕೆ ಇದೇ ಸೂಕ್ತ ಅನ್ನಿಸುತ್ತದೆ ನನಗೆ.


         ಬಂಡಾಯವಾದಿಗಳ ಕುರಿತಾಗಿ ಒಂದು ಮಾತು ಹೇಳಲೇಬೇಕು. ಸ್ನೇಹಿತನೊಬ್ಬ ನನ್ನ ಪ್ರೊಫೈಲ್ ನಲ್ಲಿ ಇತ್ತೀಚೆಗೆ ಅವರೇ ಕಾಣಿಸುತ್ತಿದ್ದಾರೆ ಅಂತ ನನಗೆ ಎಚ್ಚರಿಕೆ ಹೇಳಿದ. ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳುವವರೆಗೂ ನನಗೆ ಯಾರೂ ವಿರೋಧಿಗಳಲ್ಲ. ನಾನ್ಯಾರನ್ನು ವಿನಾಕಾರಣ ದ್ವೇಷಿಸಲಾರೆ. ಆದರೆ ಆಗಲೇ ಹೇಳಿದಂತೆ ಮಾದ್ಯಮಗಳು ಹೇಗೆ ತನ್ನ ಮಿತಿಮೀರುವಿಕೆಯಿಂದ ರೇಜಿಗೆ ಹುಟ್ಟಿಸುತ್ತವೆಯೋ ಹಾಗೆ ಮಿತಿ ಮೀರುವ ಭಾಷೆ, ಟ್ಯಾಗ್ ಗಳು ಇನ್ನೊಬ್ಬರ ದೂಷಣೆ, ಬೈಗುಳ ಇದೇ ಇದ್ದರೆ ಅವರು ಯಾರೇ ಇರಲಿ ನಾನು ಬ್ಲಾಕ್ ಮಾಡುತ್ತೇನೆ. ನನಗೆ ನನ್ನ ನೆಮ್ಮದಿಯ ಕೆಡಿಸುವಂತ  ಪೋಸ್ಟ್ ಗಳನ್ನು ನನ್ನ ಪ್ರೊಫೈಲ್ ನಲ್ಲಿ ನೋಡುವುದು ಇಷ್ಟವಾಗುವುದಿಲ್ಲ.ಇದರಿಂದಾಗಿ ಕೆಲವರನ್ನು ಬ್ಲಾಕ್ ಮಾಡುವುದು ಅನಿವಾರ್ಯವಾಗುತ್ತದೆ. ಅವರು ಲೆಪ್ಟಸ್ಟ್ ಗಳೇ ಆಗಬೇಕೆಂದೇನಿಲ್ಲ.

   ನಗು ತರಿಸುತ್ತವೆ ಒಮ್ಮೊಮ್ಮೆ.  ಬಹುಶಃ ಭೈರಪ್ಪನಂತ ಸಾಹಿತಿ ಬ್ರಾಹ್ಮಣ ಸಮಾಜದ ಒಳಗಿನ ಹುಳುಕು ಕೊಳಕನ್ನೆಲ್ಲ ಸಾದೃಶ್ಯವಾಗಿ ವಿವರಿಸಿದಂತೆ ಮನುಷ್ಯನೊಳಗಿನ ತಣ್ಣಗಿನ ಕಾಮ ಕ್ರೌರ್ಯ ವಿವರಿಸಿದಂತೆ ಇನ್ಯಾರೂ ವಿವರಿಸಿಲ್ಲ. ಅಥವಾ ನಾನು ಓದಿಲ್ಲ. ಆದರೆ ಅವರನ್ನು ಎಡಪಂಥೀಯ ಸಮಾಜ ಒಪ್ಪುವುದಿಲ್ಲ. ಈ ಪಂಥೀಯರ ಸಿದ್ಧಾಂತದ ನೆಲೆ ಯಾವುದು ಎಂಬುದು ನನಗೀಗಲೂ ನಿದರ್ಿಷ್ಟವಾಗಿ ಗೊತ್ತಿಲ್ಲ. ಬ್ರಾಹ್ಮಣರನ್ನು ಮಾತ್ರ ದ್ವೇಷಿಸುವುದೇ? ಅಥವಾ ಬ್ರಾಹ್ಮಣ ಸಿದ್ಧಾಂತದವಿರೋಧಿಗಳೇ? ಸಮಾಜ ಸಿದ್ಧಾಂತ ಈ ಶತಮಾನದಲ್ಲಿ ಅನೇಕ ಬದಲಾವಣೆ ಕಂಡಿದೆ. ಬ್ರಾಹ್ಮಣನೊಬ್ಬ ಮಾಂಸ ತಿಂದರೆ ಮಧ್ಯ ಸೇವಿಸಿದರೆ ಸಮಾನತೆ ಸಾಧಿಸಿದಂತಾಯಿತೆಂದೆ? ಅಥವಾ ಇತರೆ ಸಮಾಜದಲ್ಲಿ ಅನ್ಯಾಯ ಅಧರ್ಮ ಜಾತಿ ದೌರ್ಜನ್ಯಗಳೇ ಇಲ್ಲವೆಂದೆ? ಬ್ರಾಹ್ಮಣ ಬ್ರಾಹ್ಮಣದಲ್ಲೂ ಪಂಥ ಮತ ಸಂಸ್ಕೃತಿ ಬೇಧವಿದೆ. ಇತರೆ ಜನರಲ್ಲೂ ಇದೆ. ಎಲ್ಲರಲ್ಲೂ ಒಂದು ಮಾನವೀಯ ಸಿದ್ಧಾಂತ ಬೆಳೆಸುವ ಯಾವ ಸಿದ್ದಾಂತ ನಮಗಿದೆ ಹೇಳಿ? ಇರುವ ವ್ಯವಸ್ಥೆಯಲ್ಲಿ ಒಬ್ಬರೊಬ್ಬರನ್ನು ಗೌರವಿಸುವುದನ್ನು ಕಲಿಸಬೇಕಾದ ಶಿಕ್ಷಣ ಅದೇ ನೆಲಕಚ್ಚಿದೆ. ಎಷ್ಟೋ ಬ್ರಾಹ್ಮಣರು ಬ್ರಾಹ್ಮಣ್ಯ ಬಿಟ್ಟಾಗಿದೆ.  ಏನು ಸಾಧಿಸಿದರು ಅವರೆಲ್ಲ? ಅಥವಾ ಉಳಿದವರಿಗೆ ಏನು ಸಿಕ್ಕಿದೆ ಅದರಿಂದ?  ಈ ಎಲ್ಲ ಹೊಡೆದಾಟ ತಿಕ್ಕಾಟ, ಚಚರ್ೆ ಇನ್ಯಾವುದರಿಂದಲೂ ಸಮಾಜದ ನೈತಿಕಮೌಲ್ಯ ಬೆಳೆದಿದೆಯೇ? ಎಲ್ಲ ಧರ್ಮದಲ್ಲೂ ಎಲ್ಲ ಜಾತಿಯಲ್ಲೂ ಒಂದು ನೈತಿಕ ಸಿದ್ಧಾಂತವೆಂದರೆ ಪಾಲಿಸಬೇಕಾದ ಕಾನೂನು. ಅದನ್ನಾದರೂ ನಾವು ಪಾಲಿಸುತ್ತೇವೆಯೇ? ಮನುಷ್ಯನೊಳಗಿನ
ಯಾವ ಬೆಂಕಿಯ ಕರಗಿಸುವುದು ಇವೆಲ್ಲ? ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವ ಮೊದಲು ಯೋಚಿಸಬೇಕು. ಹಾಗಿದ್ದರೆ ಒಂದಷ್ಟು ಜನರ ನಂಬಿಕೆ, ವಿಶ್ವಾಸ, ಶೃದ್ಧೆಯ ಬಗ್ಗೆ  ಮಾತನಾಡುವ ಮೊದಲು ಎಷ್ಟು ಯೋಚಿಸಬೇಡ? ಅದರಲ್ಲೂ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವವರ ಮಾತಿಗೆ ಖಡಿವಾಣ ಅಗತ್ಯವಿದೆ. ಸತ್ಯ ಎಂದಿಗೂ ಸತ್ಯವೇ.
ನಾವು ಹೇಳಿದರೆ ಮಾತ್ರ ಸತ್ಯವಲ್ಲ. ಅದು ನಮಗೆ ನಮ್ಮ ತಿಳುವಳಿಕೆಗೆ ನಿಲುಕಿದ್ದಾದರೆ ವಿಶ್ವಾಸವಿಡಬೇಕು. ಬೆಳಕು ಬಂದೇ ಬರುತ್ತದೆ. ವಿಶ್ವಾಸವಿಲ್ಲದಿದ್ದರೆ ಕಾದು ನೋಡಬೇಕು.
ಅಪ್ರಬುದ್ಧ ಹೇಳಿಕೆಗಳ ಕೊಟ್ಟು  ಸತ್ಯದ ಬೆಳಕಿಗೆ ನಾವೇನೋ ದೊಡ್ಡ ದೀಪ ಹಿಡಿದಿದ್ದೇವೆ ಎಂಬ ಭ್ರಮೆಗೊಳಗಾಬಾರದು. ಎಲ್ಲರಿಗೂ ಅವರವರ ಸತ್ಯ ನಂಬಿಕೆಗಳು ಇದ್ದೇ ಇರುತ್ತವೆ.ಹಿರಿಯರು ಹೇಳಿದ ಮಾತು ನೆನಪಿಸಿಕೊಳ್ಳಬೇಕಿಲ್ಲಿ. ಕಣ್ಣಾರೆ ಕಂಡರೂ ಪರಾಮಶರ್ಿಸಿ ನೋಡು ಎನ್ನುವ ಮಾತು ಸತ್ಯ.. ನಾವು ನೋಡುವುದಕ್ಕಿಂತ ತಿಳಿದಿರುವುದಕ್ಕಿಂತ
ಅಥರ್ೈಸಿಕೊಂಡಿರುವುದಕ್ಕಿಂತ ಬೇರೆಯಾದುದು ಕೂಡ ಇರಬಹುದು. ಬೇರೆಯವರ ವಿಚಾರಗಳ ಹಗುರಾಗಿಸುವುದಕ್ಕಿಂತ ನಮ್ಮಷ್ಟಕ್ಕೆ ಸುಮ್ಮನಿರುವುದು ಲೇಸಲ್ಲವೆ?


     ಈ ಹೊತ್ತಿಗಿಷ್ಟು. ಮತ್ತೆಂದಾದರೂ ಸಿಗೋಣ ಇದೇ ಸರೋವರದ ತೀರದಲ್ಲಿ..