Tuesday, July 21, 2015

ಮನಸಾರೆ ವಂದಿಸುತ್ತ......



         ಬರೆಯೋದೇ ಬೇಡ ಅನ್ನಿಸಿ ಪೆನ್ನು ಬದಿಗಿಟ್ಟಾಗೆಲ್ಲ ಮತ್ತೆ ಬರೆಯುವ ಒತ್ತಡ ಹುಟ್ಟುವಂತೆ ಮಾಡುವುದು ಎಲ್ಲರಿಗೂ ಸಾಧ್ಯವಿರೋದಲ್ಲ. ತೀರಾ ನಮ್ಮವರು, ಆತ್ಮೀಯರು ಅಥವಾ ನಮ್ಮನ್ನು ಅಭಿಮಾನಿಸುವವರು ಎಲ್ಲೋ ಒಂದು ಒತ್ತಾಸೆಯ ನುಡಿಯಾಡಿದರೆ ಮಾತ್ರ ಬರೆಯಬೇಕನ್ನಿಸುತ್ತದೆ. ಓದುವುದು ನಮಗೆ ನಾವೇ ಮಾಡಿಕೊಳ್ಳುವ ಅಭ್ಯಾಸಬಲ. ಆದರೆ ಬರವಣಿಗೆ ಒಳಗಿನಿಂದ ಬರಬೇಕು. ಬರೆಯಬೇಕೆನ್ನಿಸುವ ಹಂಬಲ ಒತ್ತಡವಾಗಿಯೇ ಬರುವವರೆಗೆ ಅದು  ತನ್ನ ಸಹಜತೆಯನ್ನು ಪಡೆದುಕೊಳ್ಳುವುದಿಲ್ಲ. ಆದರೆ ಎಲ್ಲೋ ನನ್ನಂತೆ ಆಗಾಗ ಪೆನ್ನು ಬದಿಗಿಟ್ಟು ಕಣಿ ಕೇಳುವ ಮೂಡಿನವರಿಗೆ ಯಾಕೆ ಬರೆಯುವುದು ಬರೆದೇನಾಗಬೇಕಿದೆ ಎಂಬ ಭಾವ ತುಂಬಿಕೊಳ್ಳುವವರೆಗೆ ಯಾವತ್ತೋ ನಾವೇ ಬರೆದ ನುಡಿಯೊಂದು ಎತ್ತಿ ತಂದು ಅಕ್ಕಾ ನಿನ್ನೀ ಮಾತು ನನ್ನ ಖುಶಿಗೊಳಿಸಿತು ಎಂಬ ಪುಟ್ಟದೊಂದು ಅನಿಸಿಕೆ ಮತ್ತೆ ಬರೆಯುವುದಕ್ಕೆ ಸ್ಪೂರ್ತಿಯಾಗಬಹುದು. ಅದಲ್ಲದೇ  ಯಾರು ಓದಲಿ ಬಿಡಲಿ ನಿನಗನ್ನಿಸಿದ ಭಾವಗಳನ್ನು ಬರೆದು ಬಿಡು ಗೆಳತೀ ಅಂತ ಸಣ್ಣದೊಂದು ಬುದ್ದಿಮಾತು ಬರೆಯಬೇಕೆನ್ನುವ ಒತ್ತಡವ ಹುಟ್ಟುಹಾಕಬಹುದು.  ನನ್ನದಾಗಿದ್ದೂ ನನ್ನದಲ್ಲದ ನಿನ್ನೆಗಳ ನಡುವೆ ಕಳೆದುಹೋಗುವ ಕನಸುಗಳಿಗೆಲ್ಲ ಮತ್ತೊಂದು ಮನಸು  ಹೆಗಲುತಟ್ಟಿ ಬರೆಸಬಹುದು.
               ಹಾಗೆಲ್ಲ ನಡೆಯಬೇಕೆಂದರೆ ನುಡಿಸುವ ಯಾವುದೋ ಮನಸುಗಳ ಒಲುಮೆ ಬೇಕು. ಪ್ರೀತಿ ಬೇಕು. ಇಂದಿಗೆ ನನ್ನ ಮತ್ತೊಮ್ಮೆ ಓದಿಸುವ ಬರೆಸುವ ಕೈಗಳಿಗೆಲ್ಲ ನನ್ನದೊಂದು ಪುಟ್ಟ ನಮನವಿದೆ.  ಮೊನ್ನೆ ಮೊನ್ನೆಯವರೆಗೂ ಬ್ಲಾಗ್  ಅಪ್ಡೇಟ್ ಮಾಡದೇ ಸುಮ್ಮನಿದ್ದ ಮನಸ್ಸಿಗೆ ಬದರಿ ಸರ್ ಕಳೆದುಹೋದವರ ಲೀಸ್ಟ್ ಲ್ಲಿ ನನ್ನ ಹೆಸರು ನೋಡಿದ್ದೇ ಯಾಕೋ ಸಣ್ಣದೊಂದು ಅಳುಕು ಹುಟ್ಟಿತ್ತು. ಮತ್ತೆ ಬರೆಯಬಲ್ಲೆನಾ ಅಂತ. ಯಾಕೆಂದರೆ ಬರೆಯಲು ನನ್ನಲ್ಲಿ ಏನೂ ಇರಲಿಲ್ಲ. ಅಥವಾ ನನ್ನ ಬರೆಯುವ ಹವ್ಯಾಸವೇ ನನಗೊಂದು ಹುಚ್ಚು ಅನ್ನಿಸಿಬಿಟ್ಟಿತ್ತು. ಅಕ್ಷರಶಃ  ಅಕ್ಷರಗಳು ಮೂಡದ ಮನಸ್ಸಾಗಿಬಿಟ್ಟಿತ್ತು. ಈ ನಡುವೆ ಬತ್ತಿಸಿಕೊಳ್ಳೋದಕ್ಕೆ ಭಾವಗಳು ಇರಲಿಲ್ಲ. ಹುಟ್ಟಿಸಿಕೊಳ್ಳೊದಕ್ಕೆ ಕನಸುಗಳು ಇರಲಿಲ್ಲ. ಕಾವ್ಯ ಪ್ರೀತಿಯ ಬಯಕೆ ಬತ್ತಿದಮೇಲೆ ಬರೆಯುವ ಮೂಢ ಕೆಲಸ ಮಾಡಿರಲಿಲ್ಲ. ಸುಮ್ಮನಿರಬೇಕೆನ್ನಿಸಿದರೆ ಸುಮ್ಮನಿದ್ದುಬಿಡಬೇಕೆ ವಿನಃ ಈ ಜೀವವಿರದ ಬರಹಗಳು ನನಗೇ ರುಚಿಸುತ್ತಿರಲಿಲ್ಲ.


        ಈ ಮಳೆಗಾಲದಲ್ಲಿ ಸರೋವರದಲ್ಲಿ ಮತ್ತೆ ನೀರುಕ್ಕಲಿ. ಯಾರೋ ನೋಡಬೇಕೆಂದು ಓದಬೇಕೆಂದು ಬರೆಯುವುದಲ್ಲ. ನಮ್ಮದೇ ಮನಸು ಹಸುರಾಗಿಸಲು, ಹಗುರಾಗಿಸಲು ಬರೆದುಬಿಡು ಅಂದ ಗೆಳೆಯ ಶ್ರೀವತ್ಸನ ಮಾತು, ಪುಟ್ಟಿ ಸಂಧ್ಯಾಳ ಪ್ರೀತಿ, ಆತ್ಮೀಯ ಗೆಳತಿ ರಜನಿಯ ನಿರಂತರ ಪ್ರೋತ್ಸಾಹ ಮತ್ತೊಮ್ಮೆ ಲೇಖನಿ ಹಿಡಿಸುವಂತೆ ಮಾಡಿತ್ತು! ಈ ಹಿಂದಿನ ಲೇಖನದ ಗಂಭೀರತೆಯೊ ಅಥವಾ ಅದರ ವಿಷಯವೋ ಬಹಳ ಜನರನ್ನು ತಲುಪಿದ್ದು ಸುಳ್ಳು. ಅಥವಾ ರುಚಿಸದಿರಬಹುದು. ಆದರೆ  ಮತ್ತೆ ಮತ್ತೆ ಬಣ್ಣ ಬದಲಿಸುವ ಪೃಕೃತಿಯಂತೆ ಬರಹದ ಶೈಲಿ ವಿಷಯಗಳು ಕೂಡ ಬದಲಾಗಿದೆ ಸರೋವರದಲ್ಲಿ. ಮನಸುಗಳ ಮಾತೀಗ ಭಾವದಂಗಳ ದಾಟಿ ಒಳಜಗುಲಿಯ ವಿಚಾರತೋರಣಕ್ಕೆ ಕಾಲಿಟ್ಟಿದೆ. ನಿಮ್ಮ ಅನಿಸಿಕೆಗಳು ಮೊದಲಿನಂತೆ ಇರಲಿ ಎಂಬ ವಿನಂತಿ. ಇಷ್ಟವಾಗದಿದ್ದದ್ದನ್ನೂ ಹೇಳಬಹುದು. ಮತ್ತೆ ಮನಸುಗಳು ಮಾತಾಡಲಿ...


      ಪ್ರೀತಿ ಒಲವು ಸ್ನೇಹ, ಬಯಕೆ, ಭಾವ, ಬಂಧ, ಸಂಬಂಧಗಳಿಗೆ ಹೊರತಾದ ಪ್ರಪಂಚ ಯಾವುದಿದೆ? ಎಲ್ಲವೂ ಇಲ್ಲಿಯೇ ಹುಟ್ಟಿ ಇಲ್ಲಿಯೇ  ಮುಗಿಯುತ್ತದೆ. ಮತ್ತಷ್ಟುಯ ವಿಜ್ಞಾನ, ತಾಂತ್ರಿಕತೆ, ನಾಗರಿಕತೆ,ಇತಿಹಾಸಗಳ ಬೇರೆ ಬೇರೆ ವಿಷಯಗಳಿರಬಹುದು. ಅಲ್ಲೂ ಕೂಡ ಮಾನವರ ಮನಸುಗಳೇ ಕೆಲಸ ಮಾಡುತ್ತಿವೆ. ಬುದ್ಧಿ ಅಭಿವೃದ್ಧಿಗೆ ಕಾರಣವಾಗಿದೆ. ಜಗತ್ತಿನ ಎಲ್ಲ ಅಭಿವೃದ್ಧಿಗೂ ಮೂಲ ಮನುಷ್ಯ  ಬುದ್ಧಿಗಳೇ.. ಮನುಷ್ಯನೆಂದಮೇಲೆ ಅದೊಂದು ವಯಕ್ತಿಕ ಪ್ರಪಂಚವಿದ್ದೇಇದೆ.  ಅಂತಹ ಮಾನಸಿಕ ಹಾಗೂ ತಾತ್ವಿಕ ಪ್ರಪಂಚದ ಒಳಹೊರಗುಗಳನ್ನು  ಸೂಕ್ಷ್ಮವಾಗಿ ಅವಲೋಕಿಸುವದೇ ನಮ್ಮಂತವರ ಬರಹಕ್ಕೆ ವಿಷಯ. ಹೀಗೆಲ್ಲ ಹೇಳಿದರೆ ಮತ್ತಷ್ಟು ಗೊಂದಲವಾಗಬಹುದೇನೋ. ರೈತನೊಬ್ಬನ ಬದುಕು, ಕಮ್ಮಾರನೊಬ್ಬನ ಮನಸು, ಶಿಲ್ಪಿಯೊಬ್ಬನ ಒಳಗು ಇಂತದ್ದನ್ನೇ ನಾವಿಂದು ಸಾಹಿತ್ಯಪ್ರಪಂಚದ ಉತ್ತಮ ಕಥೆಗಳಲ್ಲಿ ವಸ್ತುಗಳಾಗಿ ನೋಡುತ್ತಿರುವುದು. ಮುಂದಿನ ದಿನಗಳಲ್ಲಿ ಈ ಕಥಾಪ್ರಪಂಚದ ಇನ್ನಷ್ಟು ಪುಟಗಳೊಂದಿಗೆ ನಿಮ್ಮೆದುರು ಬರುತ್ತೇನೆ. ಅಲ್ಲಿಯವರೆಗೆ ಬದರಿ ಸರ್, ಸಂಧ್ಯಾ ಪುಟ್ಟಿ, ಶ್ರೀವತ್ಸ, ರಜನೀ ನಿಮಗೂ ನಿಮ್ಮಂತ ಪ್ರೀತಿ ತೋರಿದ ಎಲ್ಲರಿಗೂ ಮನಸಾರೆ ವಂದಿಸುತ್ತ.


ಸಣ್ಣದೊಂದು ವಿರಾಮ.  

Wednesday, July 8, 2015

ವೈಚಾರಿಕತೆಯ ವೈರುಧ್ಯ.




     ಮನುಷ್ಯ ತನ್ನ ವೈಚಾರಿಕ ವಿಚಾರಗಳನ್ನೆಲ್ಲ ಇನ್ನೊಬ್ಬರ ಮೇಲೆ ಹೇರಲು ಅವಕಾಶ ಸಿಕ್ಕಾಗೆಲ್ಲ ಪ್ರಯತ್ನಿಸುತ್ತಲೇ ಇರುತ್ತಾನೆ, ಒಂದು ಸೃಷ್ಟಿ ಇನ್ನೊಂದು ಪ್ರತಿಸೃಷ್ಟಿಯಂತ ಕಲಾತ್ಮಕ ವಿಚಾರಗಳನ್ನೇ ಇಟ್ಟುಕೊಂಡರೂ ತನ್ನದಾದ ಯಾವುದೋ ಒಂದು ನಿಲುವಿಗೆ ಬದ್ಧನಾದಂತೆ ತೋರುತ್ತಾ ಇನ್ನೊಂದಷ್ಟು ನಿಲುವುಗಳ ವಿರೋಧಿಸುತ್ತಿರುತ್ತಾನೆ. ಹೌದು ವೈಚಾರಿಕತೆಯೆಂಬ ಬಿಸಿ ತುಪ್ಪವೇ ಹಾಗೇ.. ಅದು ಒಳಗೂ ಸುಡುವ ಹೊರಗೂ ಸುಡುವ ಬೂದಿಮುಚ್ಚಿದ ಕೆಂಡದಂತೆ. ಅದನ್ನು ಬಾಯಿಬಿಟ್ಟು ಆಡಿದರೆ ಬಹಳಷ್ಟು ಜನರ ವಿರೋಧ ಕಟ್ಟಿಕೊಳ್ಳಬೇಕು. ಸುಮ್ಮನಿದ್ದರೆ  ಯಾವುದೂ ಹಿತವೆನ್ನಿಸದಂತ ಕುದಿ ಒಳಗಿಂದ ಕುದಿಯುತ್ತಲೇ ಇರುತ್ತದೆ. ಅದು ಸುಮ್ಮನೆ ಕುಳಿತಿರಲಾಗದಷ್ಟು ಸುಡುತ್ತದೆ. ಒಂದಲ್ಲ ಒಂದು ದಿನ ಅದು ಲಾವಾದಂತೆ ಉರಿದು ಹೊರಬೀಳುತ್ತದೆ.. ಯಾವುದೋ ಒಂದನ್ನು ಸುಡುವುದಂತೂ ಸತ್ಯ.

     ಒಂದುಕಾಲಕ್ಕೆ ವೈಚಾರಿಕತೆಯೊಂದು ಬೆಳವಣಿಗೆಯ ಸಾಧನ. ಇನ್ನೊಂದು ಕಾಲಕ್ಕೆ ವೈಚಾರಿಕತೆ ಎಂಬುದು ಬದುಕುವ ಸಾಧನ, ಮತ್ತೂ ಒಂದು ಕಾಲಕ್ಕೆ ವೈಚಾರಿಕತೆಯ  ಪಾಠ ಮತ್ತಷ್ಟು ಕಾಲಕ್ಕೆ ಅದೊಂದು ಅನುಭವ. ಎಲ್ಲ ಕಾಲಕ್ಕೂ ಬದುಕಿಗೆ ನಿಲ್ಲುವುದು ಬರೀ ಅವರವರದ್ದೇ ಆದ ಒಂದು ಕಟು ಕಟು ವಾಸ್ತವ ಮತ್ತದರ ಆಗು ಹೋಗುಗಳಾಚೆ ಮನಸ್ಸಿನ ಆವೇಗಗಳ ನಿರ್ಧರಿಸುವ ಭಾವತೀವ್ರತೆಯ ಅಲೆಗಳಷ್ಟೆ. ಅತ್ಯಾಚಾರ ಕೂಡ ಇಂತದ್ದೇ ಒಂದು ಮನಸ್ಸಿನ ಒಂದು ವಾಸ್ತವದ ಘಟನೆ ಒಬ್ಬರಿಗಾದರೆ ಇನ್ನೊಬ್ಬರಿಗೆ ಅದು ಬದುಕಿಡೀ ಮಾಯದ ಗಾಯ.. ಚಿತ್ರ ವಿಚಿತ್ರವೆನ್ನಿಸುವ ನೂರೆಂಟು ಸತ್ಯಗಳಿಗೆಲ್ಲ ವೈಚಾರಿಕತೆಯಾಗಲೀ ತರ್ಕವಾಗಲೀ ಸ್ಪಷ್ಟನೆ ಕೊಡದು. ಮತ್ತದನ್ನು ನಿಯಂತ್ರಿಸಲಾಗದು. ಎಲ್ಲವನ್ನೂ ತನ್ನ ಕೈಯೊಳಗೇ ಅಂದುಕೊಳ್ಳುವ ಮಾನವ ಅಸಹಾಯಕನಾಗುವುದು ಇಂತ ಪ್ರತೀ ಸಂದರ್ಭಗಳಲ್ಲೂ. ಬೇಡ ಬೇಡವೆಂದರೂ ವಿಜ್ಞಾನದ ಸ್ಪೋಟಗಳಲ್ಲೂ, ಚಂದ್ರ ಗ್ರಹ ಯಾತ್ರೆಯಲ್ಲೂ, ರಾಕೆಟ್ಟು ಉಡ್ಡಯನದಲ್ಲೂ, ಅಮೇರಿಕ ಇಂಗ್ಲೆಂಡಲ್ಲೂ, ಗ್ರೀಕ್ ರೋಮನ್ನುಗಳಲ್ಲೂ ಮುಂದುವರಿದ ಎಲ್ಲ ಪ್ರಪಂಚದಲ್ಲೂ ಮಾನವ ಈ ನಿಸ್ಸಾಹಯಕ ಸ್ಥಿತಿಯಲ್ಲಿ  ದೇವರೇ! ಎನ್ನುತ್ತಾನೆ!! ಮತ್ತೆ ಅದು ಯಾವುದೋ ಒಂದು ಹೆಸರಿಲ್ಲದ ಕಣ್ಣಿಗೆ ಕಾಣದ ಪ್ರಪಂಚವನ್ನೆಲ್ಲ ನಿಯಂತ್ರಿಸುವ ಇಂದ್ರಿಯಗಳಿಗೆ ನಿಲುಕದ ಶಕ್ತಿಯನ್ನು ನಂಬುತ್ತಾನೆ. ದೇವರೆಂದರೆ ಧರ್ಮ ಜಾತಿ, ಶಬ್ಧ, ವಾಕ್ಯಗಳಿಗೆ ಮೀರಿದ್ದು. ಅದನ್ನು ವಿವರಿಸುವ ಮೂರ್ಖತನ ಬೇಡ. ದೇವರ ಹೆಸರಿನಲ್ಲಿ ನೆಮ್ಮದಿಯ ಕಂಡುಕೊಳ್ಳುವ ಮನಸುಗಳನ್ನೂ ಮತ್ತದರ ವೈಚಾರಿಕ ಮುಖಗಳನ್ನೂ ನೋಡಿ ತಿಳಿಯಬೇಕಷ್ಟೆ.


    ಬರಹಗಾರ ಅಥವಾ ಓದುಗ, ಕಲೆಗಾರ ಅಥವಾ ಕಲೋಪಾಸಕ, ಯಾವುದೇ ವಿಷಯತಜ್ಞ ಮತ್ತು ವಿಷಯಗ್ರಾಹಕ ಇಬ್ಬರೂ ಒಂದು ಸಂಪೂರ್ಣ ಸತ್ವಯುತವಾದದ್ದನ್ನು ಆಯ್ದುಕೊಳ್ಳಬೇಕಾದರೆ, ನಿಜವಾದ ಸತ್ಯ ತಿಳಿಯಬೇಕಾದರೆ, ರಸಸ್ವಾದನೆ ಸಾಧ್ಯವಾಗಬೇಕಾದರೆ ಅವನ್ನು ಪೂರ್ಣ ಅರಿತಿರಬೇಕು. ಕೇವಲ ಉತ್ತಮವನ್ನು  ಆಯ್ಕೆ ಮಾಡಿಕೊಳ್ಳುತ್ತೇನೆಂಬುದು ಸಾಧ್ಯವಾಗುವುದಿಲ್ಲ. ಎರಡೂ ಮುಖಗಳ ಅರಿವು ಮಾತ್ರ ಸರಿ/ತಪ್ಪು, ಒಳ್ಳೆಯದು/ ಕೆಟ್ಟದ್ದು ನಿರ್ಣಯಿಸಬಲ್ಲದು. ಹಾಗೇ ಒಬ್ಬ ಮನುಷ್ಯ ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿ ಇರಲಾರ ಯೋಚಿಸಲಾರ ಎಂಬುದು ಸತ್ಯವಾದಲ್ಲಿ ಇನ್ನೊಬ್ಬರ ಆಸ್ವಾದನ ಮಟ್ಟವನ್ನು, ಬೇರೆಯವರ ಪರಿಕಲ್ಪನೆಗೆಷ್ಟೇ ನಿಲುಕಿದ ಅಲ್ಪ ವಿಷಯಗಳನ್ನೂ ಗೌರವಿಸಲೇ ಬೇಕು. ಈ ಪ್ರಪಂಚದಲ್ಲಿ ಎಲ್ಲರೂ ಶೇಕ್ಸ್ ಪಿಯರ್ ಆಗಲಾರರು. ಎಲ್ಲರೂ ರವಿವರ್ಮ  ಆಗಲಾರರು, ಎಲ್ಲರೂ ಪಂಡಿತ್ ರವಿಶಂಕರ್ ಆಗಲಾರರು. ಅವರಂತಾಗುವ ಪ್ರಯತ್ನದಲ್ಲಿ ಇನ್ನೊಬ್ಬರು ಹುಟ್ಟಬಹುದಷ್ಟೆ ಹೊರತು ಕಾಪಿ ಪೇಸ್ಟ್ ಸಾಧ್ಯವಾಗದು. ಅದಕ್ಕೆಂದೇ ಇದು ದೇವರ ನಿರ್ಮಿತಿ!

 ಒಂದೇ ಮನೆಯಲ್ಲಿರುವ ಮೂರು ನಾಲ್ಕು ಜನ ಒಂದೇ ರೀತಿ ಇರುವುದಿಲ್ಲ. ಹೊಟ್ಟೆಯಲ್ಲಿ ಹಂಚಿಕೊಂಡ ಮಕ್ಕಳು ತಂದೆ ತಾಯಿ ಎಲ್ಲವೂ ಬೇರೆಬೇರೆಯೇ ವ್ಯಕ್ತಿ, ಬೇರೆ ಬೇರೆ ವ್ಯಕ್ತಿತ್ವ. ಹಾಗಿರುವಾಗ ನಮ್ಮಂತೆ ಜಗತ್ತೆಲ್ಲ ಯೋಚಿಸಬೇಕೆನ್ನುಂದುಕೊಳ್ಳುವುದು ಮೂರ್ಖತನವಲ್ಲವೆ? ಸಮಾನ ಮನಸ್ಕರು ಎಂದರೆ ಸಮಾನ ಆಸಕ್ತಿಯುಳ್ಳವರಾಗಬಹುದೇ ಸಮಾನ ವಿಚಾರಗಳುಳ್ಳವರು ಆಗುವುದಿಲ್ಲ. ಯಾವುದೋ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಈ ಸಮಾನತೆ ಕಾಣಬಹುದಾದರೂ ಉಳಿದಂತೆ ಪ್ರತಿಯೊಬ್ಬರಲ್ಲೂ ವಿಭಿನ್ನ ವಿಚಾರಗಳಿದ್ದೇ ಇವೆ.  ಹಾಗೆ ನೋಡಿದರೆ ಈ ವೈಚಾರಿಕತೆ, ಯೋಚನೆಗಳು, ಭಾವನೆಗಳು ಪ್ರತಿಯೊಂದೂ ವ್ಯಕ್ತಿಗೂ ಕಾಲಕ್ಕೂ ದೇಶಕ್ಕೂ ಬೇರೆ ಬೇರೆಯೇ. ಮನುಷ್ಯ ವಿಶ್ವಾಸದ ಮೇಲೆ ಮಾತ್ರ ಸ್ನೇಹ, ಸಂಬಂಧಗಳು ನಿಲ್ಲುತ್ತವೆ. ಅಥವಾ ಅವುಗಳನ್ನು ಕಾಯ್ದುಕೊಳ್ಳಲೇಬೇಕಾದ ಒಂದು ವ್ಯವಸ್ಥೆಯಲ್ಲಿ ಬಂಧಿಸಿಕೊಂಡು ಬದುಕುತ್ತೇವೆ. ಬೇಡ ಎಂದುಕೊಂಡ ಮರುಕ್ಷಣ ಮನಸು ಎಲ್ಲದರಿಂದ ಹೊರನಿಲ್ಲಬಲ್ಲ ಸಾಮಥ್ರ್ಯವನ್ನೂ ಹೊಂದುತ್ತದೆ. 

ಸಾಮಾಜಿಕ ಬದುಕು ಮತ್ತು ವೈಚಾರಿಕ ಪ್ರಪಂಚದ ಅಬ್ಬರದ ಭರಾಟೆಯಲ್ಲಿ ಸ್ವಲ್ಪ ಸಂಯಮವಿಲ್ಲದ ಮನಸುಗಳು ಅಥವಾ ಪ್ರಜ್ಞೆ ಕಳೆದುಕೊಳ್ಳುವ ಬಲಹೀನ ಮನಸುಗಳು ಈಗ ಬಹುತೇಕ ದ್ವಂದ್ವದಲ್ಲಿ ಸಿಲುಕಿಕೊಂಡಿವೆ. ಯಾವುದು ಹಿತ ಯಾವುದು ಅಹಿತ ಎನ್ನುವುದರ ನಡುವೆ ಬುದ್ದಿ ಮತ್ತು ಮನಸಿನ ನೇರ ಹೋರಾಟವನ್ನೇ ಇಂದು ಎದುರಿಸುತ್ತಿವೆ. ಬರಹಗಾರ ಪ್ರತಿಯೊಬ್ಬನೂ ತನ್ನನ್ನು ತಾನು ಅತ್ಯುತ್ತಮನೆಂದು ಜಗತ್ತಿಗೆ ಏನೋ ಕೊಡುವ ಮಹಾನ್ ಎಂದುಕೊಳ್ಳುವ ಮೊದಲು ಈ ಮೊದಲು ಜಗತ್ತಿಗೆ ಏನೆಲ್ಲ ಕೊಟ್ಟವರ ಅಸ್ತಿತ್ವ, ಅವರ ಅಸ್ಮಿತೆಯನ್ನು ಅರಿಯಬೇಕು. ಇದ ಮಿತ್ಥಂ ಅನ್ನುವುದಕ್ಕೆ ಹೊರತಾಗಿಯೂ ಯೋಚಿಸುವ ಕಲ್ಪಿಸುವ ಮತ್ತು ಸೃಜಿಸುವ ವಿಶಾಲತೆಯನ್ನು ಹೊಂದಿರಬೇಕು. ನಾನು ನೋಡಿದ್ದು ಸತ್ಯವೆಂಬುದಾದರೆ ನೋಡದಿರುವ ನೂರು ಸತ್ಯಗಳೂ ಇರಬಹುದು. ನನ್ನೆಣಿಕೆಗೆ ಸಿಗದಿರುವ ಅಗಣಿತ ತಾರಾಗಣಗಳಿವೆ ಇಲ್ಲಿ ಎಂಬುದು ಅರಿವಿನ ಮೊದಲ ಹೆಜ್ಜೆ,  ವೈಚಾರಿಕ ವಿರೋಧವೆಂಬುದು ವಿರೋಧಿಸುವುದು ಮತ್ತು ಮುಗಿಬೀಳುವುದರ ಮೇಲೇ ನಿಂತುಹೋಗುವ ಅಪಾಯವಿದೆ. ವಿಷಯದ ಮಂಥನವಾದಲ್ಲಿ ವಿಷ ಅಮೃತಗಳು ಹೊರಚೆಲ್ಲುವವರೆಗೂ ಕಾಯುವ ತಾಳ್ಮೆ ಬೇಕು. ಎಲ್ಲಕ್ಕಿಂತ ವಿಶಾಲತೆಯ ಅರಿವು ಬೇಕು. ಇಷ್ಟೆಲ್ಲದರ ನಡುವೆ ಕಳೆದುಹೋಗದ ಭಾವಗಳು, ಬದುಕಿನ ಕಟು ಸತ್ಯಗಳು, ವಾಸ್ತವದ  ನೆಲೆಯ ಮೇಲೆ ನಿರಂತರದ ಹೋರಾಟದ ಈ ಯುದ್ಧಗಳೇ ನಮ್ಮನ್ನು ಬೆಳೆಸುವಂತದ್ದು. ಕಾಡುವಂತದ್ದು, ಕೊಡುವಂತದ್ದು. 



ಇಂದಿಗಿಷ್ಟು ಮಳೆ...
ಮತ್ತೆ ಸಿಗುವಾ.