Saturday, October 3, 2015

ಕ್ಷಮೆಯಿರಲಿ ಸ್ನೇಹದಲಿ...





        ಭಾವನೆಗಳ ಮಹಾಪೂರದಲ್ಲಿ ಮಿಂದೆದ್ದು ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳುವಾಗ ಗೆಳೆಯಾ ನಿನಗೆ ಈ ಮಾತುಗಳ ಹೇಳಬೇಕೆಂದುಕೊಳ್ಳುತ್ತೇನೆ. ಇವತ್ತು ಅಲ್ಲೆಲ್ಲೋ ಮತ್ತೊಂದು ಸ್ನೇಹದ ಸಾವಾಗಿದೆ. ಇನ್ನೊಂದು ಪ್ರೀತಿ ಮಣ್ಣುಕಚ್ಚಿದೆ. ನೋವು ಜಲಪಾತವಾಗಿ ಕಂಬನಿ ಜಿನುಗುತ್ತಿದೆ.. ಎಲ್ಲದರ ನಡುವೆ ನಾನಿಂತು ಮೌನವಾಗಿ ನೋಡುತ್ತಿದ್ದೇನೆ. ಮನುಷ್ಯ ಸಾವುಗಳು ಸಂಕಟದ್ದು. ಅದನ್ನು ಭಗವಂತನೂ ತಡೆಯಲಾರ.. ಆದರೆ ಪ್ರೀತಿ ಹೀಗೆ ಸೋಲುವುದು ಆತ್ಮಹತ್ಯೆಯಂತೆ ನೋವಾಗುತ್ತದೆ. ಅದೆಷ್ಟು ಒಳ್ಳೆಯ ಸ್ನೇಹ  ಪ್ರೀತಿಗಳು ತನ್ನ ಅಹಂನ ಬೆಂಕಿಯಲ್ಲಿ ಬೆಂದುಹೋಗುತ್ತಿವೆ! ಮನುಷ್ಯ ಮನುಷ್ಯನ ನಂಬುವ ಕಾಲವಲ್ಲ ಅಂತಾರೆ. ನಾವೇ ಪ್ರೀತಿಸಿದ ಸ್ನೇಹವನ್ನ ಪ್ರೀತಿಯನ್ನ ನಂಬದಿರುವಷ್ಟು ಕಾಲ ಕೆಟ್ಟಿತೇ?


             ಒಂದಿನ ನನ್ನಲ್ಲೂ ಭಾವನೆಗಳಿರಲಿಲ್ಲ.ನಂಬಿಕೆಗಳಿರಲಿಲ್ಲ. ಪ್ರೀತಿಯಿರಲಿಲ್ಲ. ನೋವಿನ ಎಳೆಯೊಂದ ತಂತಿಯೊಂದು ಬಿಗಿದು ಬಂಧಿಸಿದಂತೆ ಭಾವಗಳ ಗಂಟುಮೂಟೆ ಕಟ್ಟಿ ಬದಿಗೆ ಬಿಸಾಕಿದ್ದೆ. ನೀ ಬಂದು ನನ್ನ ಅದೇ ಮೂಟೆಯಿಂದ ಬಿಚ್ಚಿ ಎಷ್ಟೊಂದು ಮುತ್ತು ಹೆಕ್ಕಿ ಕೊಟ್ಟೆ! ಬದುಕು ಬರೀ ಮುತ್ತಿನ ಹಾರದ ಶೃಂಗಾರವೇನಲ್ಲ. ಅಲ್ಲಲ್ಲಿ ಪೋಣಿಸಿದ ಒಂದೊಂದೇ ಮುತ್ತುಗಳಿವೆ. ಆಯ್ದಿಟ್ಟುಕೋ ಅಂದೆ. ಹುಂ. ಪ್ರೀತಿಗೆ ಇದೆಲ್ಲ ಕರಗಿಸುವ ಶಕ್ತಿ ಇದೆ ನೋಡು. ಎಷ್ಟೆಲ್ಲ ಜಗಳ ಕದನ ಕೋಪ ತಾಪದ ನಡುವೆ ಇಂದಿಗೂ ಅದೇ ಪ್ರೀತಿ ನನ್ನ ಮೊದಲ ಆಯ್ಕೆ. ಸ್ನೇಹ ನನ್ನ ಕೊಂಡುಕೊಳ್ಳಬಲ್ಲಂತದ್ದು.ಹಾಗಾಗೇ ಒಳ್ಳೆಯ ಸ್ನೇಹ ಪ್ರೀತಿಗಳು ಕಡಿದುಕೊಂಡಾಗೆಲ್ಲ ನನಗೂ ನೋವಾಗುತ್ತದೆ. ಪ್ರೀತಿಯಲ್ಲಿ ಯಾರನ್ನೂ ನಂಬೋಕಾಗಲ್ಲ ಅನ್ನುವ ಜನ ಕೂಡ ನಮ್ಮವರನ್ನು ನಂಬಲೇಬೇಕಲ್ಲ. ಮನುಷ್ಯ ಎಂದಿಗೂ ಪರಿಪೂರ್ಣ ಅಲ್ಲ ಅನ್ನುವ ಮಾತು ಇವರಿಗ್ಯಾಕೆ ಗೊತ್ತಾಗೋದಿಲ್ಲ! ಒಂದು ಸಾರೀ, ಒಂದು ಥ್ಯಾಂಕ್ಯೂ ಪದಗಳು  ಎಂಥೆಂಥ ದೊಡ್ಡ ತಪ್ಪುಗಳನ್ನು ಕ್ಷಮಿಸುವಂತೆ ಮಾಡುತ್ತವೆ! ಹೃದಯಗಳನ್ನ ಜೋಡಿಸಿಡುತ್ತವೆ! ಸ್ನೇಹದಲ್ಲಂತೂ ಈ ಸಾರೀ ಮತ್ತು ಥ್ಯಾಂಕ್ಯೂ ಪದಗಳಿಗೆ ಅರ್ಥವಿಲ್ಲ ಎಂದವನಿಗೆ ನನ್ನ ಆಕ್ಷೇಪವಿದೆ. ಪ್ರೀತಿ ಪಾತ್ರರ ತಪ್ಪು ಒಪ್ಪುಗಳನ್ನ ಒಪ್ಪಿಕೊಂಡು ಕ್ಷಮಿಸುವುದರಲ್ಲಿ, ಸಹಕಾರಗಳನ್ನು ಅಭಿನಂದಿಸುವದರಲ್ಲಿ ಬಾಂಧವ್ಯದ ಗಟ್ಟಿತನವಿದೆ. ಯಾಕೋ ಅರ್ಥವಾಗಲ್ಲ ಬಹಳ ಜನರಿಗೆ..


     ಹುಡುಗರ ಗೆಳೆತನ ಹಾಳಾಗುವುದು ಹುಡುಗಿಯರ ವಿಷಯದಿಂದ ಎಂಬ ಮಾತೊಂದಿದೆ. ಸ್ವಲ್ಪ ನಿಜವೇನೋ. ಆದರೆ ಒಂದಿಷ್ಟು ಜಗಳವಾಡಿಯಾದರೂ ಸರಿ ಮನಸು ಬಿಚ್ಚಿ ಮಾತಾಡ್ಕೊಂಡು ಹಗುರಾಗಿ ಅಮೇಲೊಂದು ಸಾರೀ ಹೇಳ್ಕೊಂಡು ಹೆಗಲಮೇಲೆ ಕೈಯಿಟ್ಕೊಂಡು ಹೋಗಬಲ್ಲವರು ಹುಡುಗರು ಮಾತ್ರ. ನಿಜವಾದ ಸ್ನೇಹಿತರ ಭಿನ್ನಾಭಿಪ್ರಾಯಗಳು ಕೂಡ ಸ್ನೇಹವನ್ನು ಮುರಿಯೋದಿಲ್ಲ. ಹಾಗಿದ್ದಾಗ ವಷರ್ಾನುಗಳ ಬಂಧ ಕಡಿದುಕೊಳ್ಳುವ ಮೊದಲೊಂದು ಅವಕಾಶ ಅಥವಾ ಒಂದು ಬಿಚ್ಚು ಮನಸ್ಸಿನ ಮಾತು ಮತ್ತೆ ಕಾರಣಗಳ ಹೇಳಿ ತಪ್ಪಾಗಿದ್ದರೆ ತಿದ್ದಿಕೊಳ್ಳುವ ಮನಸ್ಸು ಯಾವತ್ತೂ ಉಳಿಸ್ಕೊಬೇಕಲ್ವಾ? ಸ್ನೇಹ ಮತ್ತು ಪ್ರೀತಿಯನ್ನು ಅಹಂ ಗಿಂತ ಸ್ವಲ್ಪ ಮೇಲಿಟ್ಟು ನೋಡಬೇಕಲ್ವಾ? ಒಳ್ಳೆಯ ಸ್ನೇಹಿತ ಯಾವತ್ತೂ ಇಂತಹ ಅವಕಾಶಗಳನ್ನು ಮುಚ್ಚಿಹಾಕಬಾರದು. ಬದುಕಿನ ಪ್ರತೀ ಹಂತದಲ್ಲೂ ಮನುಷ್ಯ ಬೇರೆ ಬೇರೆಯೇ ಇರಬಹುದು. ಎಲ್ಲಿಯೋ ತಪ್ಪುಗಳು ನಡೆದಿರಬಹುದು. ಅಥವಾ ಏನೋ ಒಂದು ಮಾತು ಬಂದು ಹೋಗಿರಬಹುದು. ಅವನ್ನೆಲ್ಲ ಗಂಟುಕಟ್ಟಿ ಎಷ್ಟುಕಾಲ ಇಟ್ಟುಕೊಳ್ಳಲು ಸಾಧ್ಯ? ಅವನ ಕಡೆಗೂ ನಮ್ಮ ಬಗ್ಗೆ ನೂರೆಂಟು ಪೂರ್ವಾಗ್ರಹಗಳು ತುಂಬಿಕೊಂಡಿರಬಹುದು. ಅಂತದ್ದೆಲ್ಲ ಮರೆಯುವಷ್ಟು ದೊಡ್ಡವರಾಗಬೇಕು. ಬದುಕು ನಮ್ಮನ್ನ ಬೆಳೆಸಲು ಇಂತವೆಲ್ಲ ಪೂರಕ.


      ಇನ್ನು ಪ್ರೀತಿ ಪ್ರೇಮದಲ್ಲಂತೂ ಇಂತದ್ದು ನೂರು. ವಾಸ್ತವದ ವಿಶ್ಲೇಷಣೆ ಮಾಡುವುದೇ ಇಲ್ಲ. ಹುಡುಗ ಕೈಕೊಟ್ಟ ಹುಡುಗಿ ಕೈಕೊಟ್ಲು ಅನ್ನುವುದಕ್ಕಿಂತ ಹೆಚ್ಚಿನ ವಾಸ್ತವ ಏನಿರಬಹುದು ಪರಿಸ್ತಿತಿ ಇಲ್ಲಿಯವರೆಗೆ ಯಾಕೆ ಹೋಗಿರಬಹುದು ಹಿನ್ನಲೆ ಕಾರಣಗಳ ಕುರಿತು ಯಾವ ಚಿಂತನೆಯೂ ಇಲ್ಲ. ಆಮೇಲೆ ಸ್ವಲ್ಪದಿನ ಸ್ಮಶಾನ ವೈರಾಗ್ಯ, ಮತ್ತೆ ಇದ್ದ ಬದ್ದವರ ಮೇಲೆಲ್ಲ ಆರೋಪ ತಾನೊಬ್ಬನೇ ಪ್ರಪಂಚದಲ್ಲಿ ಬೇರೆ ಅನ್ನುವಂತ ನಡವಳಿಕೆ ಮನಸ್ಸಿನ ಮೂಲೆಯಲ್ಲಿ ಕಹಿಯೊಂದಿಷ್ಟು ಗಂಟುಕಟ್ಟಿಕೊಂಡು ತನ್ನ ಮೂಗಿನ ನೇರಕ್ಕೆ ಕಂಡದ್ದಷ್ಟೇ ನಿಜವೆಂದು ಭ್ರಮಿಸಿಕೊಂಡು ಎಲ್ಲ ಬಾಗಿಲು ಮುಚ್ಚಿಕೊಂಡು ಬದುಕನ್ನು ಮತ್ತೇನೋ ದಾರಿಹಿಡಿಸುವಿಕೆಯಿದೆಯಲ್ಲ ಇದು ಕೂಡ ನೋವಲ್ಲದೇ ಇನ್ನೇನನ್ನೂ ಉಳಿಸದು. ಬದಲು ಸಕಾರಣ ವಿವರಗಳ ಅರಿತುಕೊಂಡು ಸಾಧ್ಯವಾದರೆ ಜೊತೆಯಲ್ಲಿ ಆಗಿದಿದ್ದರೆ ಬಲವಂತದ ಪ್ರೀತಿ ಬದುಕು ಸಾಧ್ಯವಿಲ್ಲವೆಂಬುದ ಅರ್ಥೈಸಿಕೊಂಡು ತಮ್ಮ ತಮ್ಮ ಬದುಕನ್ನು ಚಂದಕ್ಕೆ ಕಟ್ಟಿಕೊಳ್ಳುವುದು ಯಾಕೆ ಸಾಧ್ಯವಾಗದು? ಒಂದಷ್ಟು ದಿನ ಪೊಸೆಸಿವ್ ನ ಉಸಿರುಗಟ್ಟಿಸುವಿಕೆ, ಇನ್ನಷ್ಟು ದಿನ ಸತ್ತರೆ ಸಾಯಿ ಇದ್ದರೆ ಇರು ಅನ್ನುವ ನಿರ್ಲಕ್ಷ್ಯ ಇವೆಲ್ಲ ಪ್ರೀತಿಯಲ್ಲಿ ವಿಶ್ವಾಸದ ಕೊರತೆಯಲ್ಲದೇ ಇನ್ನೇನಲ್ಲ. ಬದುಕು ಇವತ್ತಿಗೆ ಹೆಣ್ಣಿಗಾಗಲೀ ಗಂಡಿಗಾಗಲೀ ಸ್ವತಂತ್ರ್ಯ. ಪ್ರೀತಿ ವಿಶ್ವಾಸಗಳೇ ಇಲ್ಲಿ ಬಂಧನ. ಬಾಂಧವ್ಯದ ಉಸಿರು. 


 ಯಾಕೋ  ಯಾವಬಂಧವೇ ಆಗಲಿ ಶಾಶ್ವತ ಎಂಬ ನಂಬಿಕೆಗಳು ನನಗಿಲ್ಲ. ಒಂದೊಂದು ಹಂತದಲ್ಲಿ ಒಂದೊಂದು ತನ್ನಂತಾನೇ ಕಳಚಿಕೊಳ್ಳುವುದುರಬಹುದು. ಎಲ್ಲವೂ ಒಳ್ಳೆಯ ಸ್ನೇಹಗಳಾಗಿ ಉಳಿಯುವುದೂ ಇಲ್ಲ. ಆದರೆ ಒಳ್ಳೆಯ ಸ್ನೇಹ, ಪ್ರೀತಿ ಅಂತ ನಾವೆಲ್ಲೋ ಹೃದಯದಿಂದ ಆಯ್ಕೆ ಮಾಡಿಕೊಂಡವುಗಳನ್ನು ಸಾಯಿಸಬಾರದು. ಅಂತಹ ಪ್ರೀತಿ ಮತ್ತೆಲ್ಲೂ ಯಾವತ್ತೂ ಇನ್ನೊಂದು ದೊರೆಯುವುದಿಲ್ಲ. ಒಲವು ಸಹ ಇಂತದ್ದೊಂದು ಅವಕಾಶಕ್ಕೆ ಮುಕ್ತವಾಗಿರಲಿ. ನಮ್ಮ ನಮ್ಮ ಅಹಂಗಳಿಂದಾಗಿ ನಮ್ಮದೇ ಮನಸುಗಳು ನಲುಗದಿರಲಿ. ಇಷ್ಟೆಲ್ಲ ಹೇಳಿದ್ದು ಸ್ನೇಹದಿಂದ ಸ್ನೇಹಕ್ಕಾಗಿ..   ಸರೋವರದಲ್ಲಿಂದು ಜಿನುಗು ಮಳೆ... ತಂಪಾಗಿಸಲಿ ಎಲ್ಲ ಮನಸುಗಳ..