Saturday, November 5, 2016

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ...



ತುಂಬಾ ದಿನಗಳ ನಂತರ ಬರೆಯಬೇಕೆಂಬ ಒತ್ತಡಕ್ಕೆ ಬಿದ್ದಿದ್ದೇನೆ. ಹೌದು. ನನ್ನ ಮೌನಗೊಳಿಸುವ ನಿಟ್ಟಿನಲ್ಲಿ ನಿನ್ನದು ಪ್ರಯತ್ನವಾ ಅಥವಾ ನನ್ನ ಸುಮ್ಮನುಳಿಸುವ ತಂತ್ರವಾ ಗೊತ್ತಿಲ್ಲ ನನಗೆ. ಆದರೆ ಒಮ್ಮೆ ಮೌನವಾಗುವ ಹಂಬಲಕ್ಕೆ ಬಿದ್ದರೆ ಮತ್ತೆ ನಿನಗೂ ನನ್ನ ಹತ್ತಿರ ಬರೋಕಾಗಲ್ಲ ಎಂಬುದು ನಿನಗೆ ಗೊತ್ತಿದೆಯಲ್ಲ. ಅತಿಯಾದ ಆತ್ಮವಿಶ್ವಾಸ ಅತಿಯಾದ ಹಟ ಅತಿಯಾದ ಎಲ್ಲವನ್ನೂ ಮಾಡಿ ನನ್ನ ಒತ್ತಡಕ್ಕೂ ನನ್ನ ಮನಸ್ಸಿನ ಒತ್ತಡಕ್ಕೂ ಕಾರಣವಾದ ಎಲ್ಲವನ್ನೂ ನಾನು ಇನ್ನಿಲ್ಲ ಎನ್ನುವಂತೆ ತೊರೆದಿದ್ದೇನೆ. ಸ್ವಲ್ಪ ಕಷ್ಟ ನನಗೆ ನಿಜ. ಆದರೆ ಹಠಕ್ಕೆ ಬಿದ್ದರೆ ಎಲ್ಲವನ್ನೂ ಬಿಡುತ್ತೇನೆ. ಯಾಕೆಂದರೆ ನಾನು ಒಪ್ಪಿಕೊಳ್ಳುತ್ತೇನೆ. ಇದು ನನಗೆ ಆಗೋದಿಲ್ಲ ಅಂತ. ಮೊದಲಾದರೆ ತುಂಬಾ ಕಾಲ ನೋಯ್ತಾ ಇರ್ತಿದ್ದೆ. ಆದರೆ ಈಗ ಹಾಗಿಲ್ಲ. ಅತಿಯಾದ ನೋವಾಗತ್ತೆ. ಆದ್ರೆ ದೇವರು ಇದನ್ನೇ ಬರ್ದಿದ್ದಾನೆ ಅಂತ ಅನ್ಕೊಂಡು ಆರಾಮಾಗ್ತೆನೆ. ಹೌದು. ಮಾತು ನನ್ನ ಅಗತ್ಯ. ಬದುಕಿಗೆ ಅನಿವಾರ್ಯ ಕೂಡ. ಎಲ್ಲೊ ನನಗೆ ಪ್ರೀತಿ ಹರಿಸೋಕೆ ಒಂದು ಜೀವ ಬೇಕು. ಅದು ನನ್ನಷ್ಟೇ ಆಪ್ತವಾಗಿ ತಬ್ಬಿಕೊಳ್ಳುವ ಜೀವ ಆಗಿರಬೇಕು ಎಂಬುದು ನನ್ನೊಳಗೆ ನನಗೇ ಅರಿವಿಲ್ಲದಷ್ಟು ಅಂಟಿಕೊಂಡಿರುವ ಸತ್ಯ. ಹಾಗಂತ ಅಗತ್ಯವಿಲ್ಲ ಅಂದವರಿಗೆ ಅದನ್ನೂ ಹರಿಸಲಾರೆ. ಹೆಜ್ಜೆ ಹೆಜ್ಜೆಗೆ ನನ್ನ ನೋಯುಸುವುದನ್ನು ಚಟವಾಗಿಸಿಕೊಂಡವರ ಜೀವಕ್ಕಿಂತ ಪ್ರೀತಿಸುತ್ತಿದ್ದರೂ ತೊರೆದಿದ್ದೇನೆ. ಎಲ್ಲಿ ನನ್ನ ಖುಶಿಗೆ ಜಾಗವಿಲ್ಲವೋ ಎಲ್ಲಿ ನನಗೆ ಅಸ್ತಿತ್ವವಿಲ್ಲವೋ ಅಲ್ಲಿ ನಾ ಹೇಗಿರಲಿ? ನನಗೆ ಅವ್ಯಕ್ತವೆನ್ನುವುದು ಅಭಿವ್ಯಕ್ತವಲ್ಲದಿದ್ದರೆ ಅದೂ ಬೇಡ. ನೀನು ಆಧ್ಯಾತ್ಮದ ಮಾತಾಡುತ್ತಿ!  ಒಂದ್ವೇಳೆ ನನ್ನ ಕೂಡ ಸಹಿಸಲಾಗದಷ್ಟು ಅಸಹನೆ ನಿನ್ನೊಳಗಿದೆ ಅಂತಾದರೆ ನಿನ್ನೊಳಗೆ ಇನ್ನೆಷ್ಟು ಬೆಂಕಿ ಇರಬಹುದು!! ಅವನ್ನೆಲ್ಲ ಇಟ್ಟುಕೊಂಡು ಹೇಗೆ ನೀನು ಜೋಗಿಯಾಗಲು ಸಾಧ್ಯ? ಮನಸು ಶಿವ ಆಗಬೇಕೆಂದರೆ ಅದರೊಳಗೆ ಶಾಂತಿ ನೆಲಸಿರಬೇಕು. ಅಥವಾ ನಿರ್ಲಿಪ್ತವಾಗಬೇಕು. ನಿನ್ನನ್ನು  ಕದಲಿಸದಷ್ಟು ಸಹನೆ ತುಂಬಿಕೊಳ್ಳಬೇಕು. ಆದರೆ ನೀನೋ ಪಕ್ಕದಲ್ಲಿ ಶಿಲೆಯಂತೆ ನಿಲ್ಲಬಲ್ಲ ನನ್ನನ್ನೂ ದೂರ ಇರು ಅಂತ ದೂರ ಮಾಡಿಕೊಳ್ಳುತ್ತಿ. ಸರಿ ಬಿಡು ನನಗಾದರೂ ಏನಗತ್ಯ? ಒಂದ್ವೇಳೆ ಅಗತ್ಯವೇ ಆಗಿದ್ದರೆ ಅದು ನನ್ನ ಮನಸ್ಸಿನದು. ಅದಕ್ಕೆ ದಕ್ಕದ ನೀನು ಇದ್ದರೆಷ್ಟು ಇಲ್ಲಗಿದ್ದರೆಷ್ಟು!!?? ಇದು ವಾಸ್ತವವಾದರೆ ನಾನು ಪ್ರೀತಿಸುವ ಎಲ್ಲ ಜೀವಗಳು ನನ್ನವೇ. ಅವು ಹೇಗಿರಲಿ ಎಲ್ಲಿರಲಿ. ನನ್ನದೇ ಎಂಬಂತೆ ಬದುಕುತ್ತೇನೆ ನಾ. ಅದನ್ನೆಲ್ಲ ಸಹಿಸುವಷ್ಟು ಸಹನೆಯೂ ಇದೆ. ಶಾಂತಿಯೂ ಇದೆ. ದಕ್ಕಿಸಿಕೊಳ್ಳುತ್ತೇನೆ ಎಲ್ಲವನ್ನು. ಅರಗಿಸಿಕೊಳ್ಳುತ್ತೇನೆ ಅಖಂಡ ಮೌನದಲ್ಲಿ.



 ಒಮ್ಮೊಮ್ಮೆ ಸುಮ್ಮನಿರು ಸುಮ್ಮನಿರು ಅನ್ನುತ್ತ ನನ್ನ ಬಾಯಿ  ಸುಮ್ಮನಾಗಿಸುವ ಪರಿಯಲ್ಲಿ ನನಗೆ ನಿನ್ನ ಮುದ್ದೇ ಕಾಣುತ್ತದೆ! ಇದು ನನ್ನ ಭ್ರಮೆ ಯೆಂಬುದು ನಿನ್ನ ಮಾತಾಗಿರುತ್ತದೆ ಅಂತಾನು ಗೊತ್ತು ನಂಗೆ. ಮಾತಿನಲ್ಲಿ ನಿನ್ನ ಸೋಲಿಸಲಾಗದು! ಹಾಗಂತ ನಿನ್ನ ಬಾಯ್ಮುಚ್ಚಿಸುವಿಕೆಯಲ್ಲಿ ತೆರೆದ ತುಟಿಯ ಅಂದವೆಲ್ಲಿ ಖಾಲಿಯಾಗುವುದೇನೋ ಎಂಬ ಅವಸರದಲ್ಲಿ ಮುಚ್ಚಿಟ್ಟುಕೊಳ್ಳುವ ಮಳ್ಳನಂತೆ ಅಪ್ಪಟ ಮುದ್ದಿನ ಹುಡುಗ ಅನ್ನಿಸಿಬಿಡುತ್ತದೆ! ಹೀಗೆಲ್ಲ ಅನ್ನುವುದು ನಿಶಿದ್ಧವೇನಲ್ಲವಲ್ಲ. ಆದರೆ ನಿನ್ನ ವಿಷಯಕ್ಕೆ ಅಂದುಕೊಳ್ಳುವುದು ನಿಷಿದ್ಧ. ನಾನಾದರೂ ಯಾಕೆ ಅಂದುಕೊಳ್ಳಬೇಕು ಹೇಳು! ಅದು ನಿಜವೆಂದು ನೀನೇನು ಒಪ್ಪಿಕೊಳ್ಳಬೇಕಾಗಿಲ್ಲ. ಹಲವು ಒಪ್ಪಿತವಾದ ಭಾವಗಳು ಖುಶಿಕೊಡುವುದಾದರೆ ನನಗಿರಲಿ ಅಂತ ಮುಗ್ಧ ಮುದ್ದು ಭಾವಗಳು..



 ಸುಖಾಸುಮ್ಮನೆ ಕಾಡುವುದು ಪ್ರೀತಿಸುವುದು ಸುಮ್ಮನೆ ಖುಶಿಕೊಡುವ ಮಾತಾಡುವುದು ಇವೆಲ್ಲ ನನಗಿಷ್ಟ. ಯಾರನ್ನಾದರೂ ಹರ್ಟ್ ಮಾಡೋದಕ್ಕೆ ಶ್ರಮ ಬೇಡ. ಆದರೆ ಖುಶಿಯಾಗಿಟ್ಟುಕೊಳ್ಳೋದಕ್ಕೆ ಶ್ರಮ ಬೇಕು. ನನ್ನ ಮಟ್ಟಿಗೆ ಅಂತ ಪ್ರಯತ್ನ ಸುತ್ತ ಮುತ್ತ ಇದ್ದರೆ ಸಾಕು. ಎನೋ ಅಮಲಿನ ಘಂ ಇರಬೇಕು ಅನ್ನೋ ಹಂಗೆ ಬದುಕಬೇಕು.

ಎಷ್ಟು ಜನ ಇಳಿವಯಸ್ಸಲ್ಲು ತಮ್ಮ ಸುತ್ತ ಅಂತದ್ದೊಂದು ಪರಿಮಳ ತುಂಬ್ಕೊಂಡಿದ್ದಾರೆ ಅಂದ್ಕೊಳ್ತಾ ಉತ್ಸಾಹ ನನ್ನೊಳಗೆ ಜೀವಂತ ಆಗತ್ತೆ. ಆದರೆ ದುದರ್ೈವವಶಾತ್  ನನ್ನ ಪ್ರೀತಿಸುವ ಅಥವಾ ನಾನು ಪ್ರೀತಿಸುವ ಜನರಿಗೆ ನನ್ನ ನಗು ಮುಖ ಬೇಕು ಅಷ್ಟೆ, ನನ್ನೊಳಗೆ ನಿಜಕ್ಕೂ ಸಂಭ್ರಮದ ದೀಪ ಉರಿವುದು ಬೇಡ. ಹಾಗೆ ನಾನು ಖುಶಿಪಡಲು ಆರಂಭಿಸಿದಾಗೆಲ್ಲ ನನ್ನಮ್ಮ  ನನ್ನ ಇನ್ನಿಲ್ಲದಂತೆ ಬಡಿದುಹಾಕಿದ್ದಾಳೆ. ಎಲ್ಲ ಪ್ರೀತಿ ಪಾತ್ರಗಳ ರೂಪದಲ್ಲಿ. ಅಂದ್ಮೇಲೆ ಅನುಭವ ನಲ್ವತ್ತು ವರ್ಷ ಆಗಿದೆ. ಈಗ ಹೊಸದೇನಿಲ್ಲ. ಇನ್ನೂ ಯಾರನ್ನಾದರೂ ದೂಷಿಸಬೇಕೆಂದೆಲ್ಲ ಅನ್ನಿಸ್ತಾ ಇಲ್ಲ. ನಮ್ಮ ಹಣೆಬರಹ ನಮ್ಮ ದೇವರು. ವೇದಾಂತ ಹೇಳುವುದ ವೇದಾಂತ ಬದುಕುವುದು ಎರಡೂ ವಿರುದ್ದ ಪದಗಳು. ನೀನು ಹೇಳ್ತಾ ಇರೋ ಜಂಗಮ ಬದುಕನ್ನ ನಾನು ಆಗಲೇ ಬದುಕಲಾರಂಭಿಸಿದ್ದೇನೆ. ಅಪ್ಪಟ ಮನುಷ್ಯನ ಅಸ್ತಿತ್ವದಲ್ಲಿ. ಎಲ್ಲ ಬಲಹೀನತೆಗಳ ಜೊತೆ. ಕಣ್ಣಲ್ಲಿ ಒಂದಿಷ್ಟು ಗಂಗೆ, ಎದೆಯಲ್ಲಿ ಒಂದಿಷ್ಟು ನಿಟ್ಟುಸುರು, ಒಲವು ಮತ್ತೆ ಸಮಯದ ಜೊತೆ ಗುದ್ದಾಟ ಎಲ್ಲವನ್ನೂ ಇಟ್ಟುಕೊಂಡು


ಅದೆಷ್ಟೋ ಡೈರಿಯ ಪದರಗಳು ಹಳೆತಾದವು. ಓದಿದರೆ ಮತ್ತೆ ಮನಸ್ಸು ಹಸಿಯಾಗಿ ಭೋರ್ಗರೆದೀತು!!ಏನೆ ಆಗಲಿ ಬದುಕಿಗೆ ಪ್ರತಿಯೊಂದು ಪಾಠವೇ.. ಅನುಭವಗಳೇ ನನ್ನ ಇದುವರೆಗೆ ಬೆಳೆಸಿದ್ದು. ಬಿದ್ದು ಬಿದ್ದೇ ಕಲಿತದ್ದು ನಾ. ಮೈ ಮನಸಿನ ತುಂಬ ಬೇಕಾದಷ್ಟು ಮಣ್ಣಿನ ಅಚ್ಚಿವೆ. ತೊಳೆದುಕೊಂಡರು ಮಾಸದ ಗಾಯದ ಕಲೆಗಳೂ ಇವೆ. ನೀ ಕೂಡ ಒಂದು ಅನುಭವ.



  ನಲ್ವತ್ತರ ಅಂಚಿನಲ್ಲಿ ನಾನು ಕಲಿಯಬೇಕೆಂದಿತ್ತು ಇದನ್ನೆಲ್ಲ ಅನ್ನಿಸತ್ತೆ. ಅಲ್ಲಿಗೆ ನನ್ನ ಮುಗ್ಧತೆ ಹುಡುಗಾಟ, ಮನಸಿನ ಆದ್ರ್ರತೆ ಇನ್ನೂ ಮಾಯವಾಗಿಲ್ಲ ಅನ್ನಬಹುದು. ಅಷ್ಟರ ಮಟ್ಟಿಗೆ ನಾನಿನ್ನು ಜೀವಂತ ಎಲ್ಲರ ಎದುರಿಗೆ ಎನ್ನುವುದು ನನಗೆ ಒಂದಿಷ್ಟು ಕೋಡು ಮೂಡಿಸಬಹುದು. ನಿಜ ಅಂದರೆ  ಪೆದ್ದಿ. ನೀ ಮನಸ್ಸಲ್ಲೆ ಅಂದುಕೊಳ್ತಿದ್ದೆ ಈ ಪೆದ್ದಿಗೆ
ಏನೂ ಗೊತ್ತಾಗಲ್ಲ ಅಂತ. ಹೌದಲ್ಲ. ಒಂದಷ್ಟು ಪೆದ್ದುತನ ಮುದ್ದು ಮುಗ್ಧತೆ ಇವನ್ನೆಲ್ಲ ಇಟ್ಟುಕೊಳ್ಳದಿದ್ದರೆ ಬದುಕು ಘನಘೋರ ಗಂಭೀರ ಆಗ್ಬಿಡತ್ತೆ. ನಿನ್ನಂತವರ ಎಲ್ಲ ಮಾತುಗಳು ಸೀದಾ ಅಹಂಗೆ ನಾಟತ್ತೆ. ಅದಕ್ಕೆಲ್ಲ ಅರ್ಥ ಹುಡುಕುತ್ತಾ ಅನಿಸಿಕೆ ಬರೆಯುತ್ತಾ ಕುಳಿತರೆ ಬದುಕಲೆಲ್ಲಿ ಸಮಯ!! ಬದುಕೇ ಮುಗಿದುಹೋಗಿರುತ್ತಲ್ಲ!ಅದಕ್ಕೆಂದೇ
ಬದುಕುವ ಬದುಕಿನ ಹುಚ್ಚಿಗೆ ಬಿದ್ದಿದ್ದೆ ಜೀವ. ಅದಕ್ಕೆ ಯಾರೂ ಅನಿವಾರ್ಯವಲ್ಲ. ಆದರೂ ಎಲ್ಲರೂ ಅನಿವಾರ್ಯ.



ಮತ್ತೆ ಮಾನಸ ಸರೋವರದಲ್ಲಿ ಅಲೆಗಳಿವೆ. . ನನ್ನೆದೆಯ ಹಾಡು.. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ  ಹರಿವಿಗೆ ಎಳೆಎಳೆಯ ಸಂಭ್ರಮದೊಂದಿಗೆ..