Monday, March 12, 2012

ಸ್ವೀಕೃತಿ....

ಮನಸಿನ ಮನೆತುಂಬ
ಒಣ ಒಣ ಮೌನವ ಸುರಿಸಿ
ನೀ ನೆಮ್ಮದಿಯಾಗಿರಬಲ್ಲೆಯಾದರೆ
ಹಾಂ... ಅದೂ ಸ್ವೀಕಾರವೇ....
ನಿನ್ನೊಲವಿನ ಹೊಳೆಯಲ್ಲಿ
ಕಲ್ಲುಗಳೇ ಅಲೆಗಳಾದರೆ
ಅದಕ್ಕೂ
ಕೆನ್ನೆಯೊಡ್ಡುತ್ತೇನೆ..

ಚುಂಬಿಸುವ ಹನಿಮುತ್ತು
ಸಿಗದೇ ಉಳಿದೀತು!
ನಿನ್ನದಾದರೆ ಅದು
ಗೀರಿದ ಗಾಯವಿಳಿಸಿದ
ಬಿಂದುರಕ್ತವಾದರೇನು?
ಸಾಕೆನಗೆ ಕೃಷ್ಣ ನಿನ್ನ ನೆನಹು..
ಉಳಿದೀತು ಜೀವ ಉರಿದುಉರಿದು!!

Tuesday, February 14, 2012

ಉಳಿವುದಿಷ್ಟೇ ಈ ಪ್ರೇಮದಂತ್ಯದಲಿ....



ನಾನು ಸೋತಾಗೆಲ್ಲ ನಿನ್ನ ಅರಸುತ್ತೇನೆ.
ಪಕ್ಕದಲ್ಲಿ ನೀನಿದ್ದರೆ ಅದೇನೋ ನೆಮ್ಮದಿ
ಹುಡುಕುವ ಹಾಗಿಲ್ಲ
ಗೊತ್ತು ಬುದ್ದಿಗೆ ಅಲ್ಲಿ ನೀನಿರುವುದಿಲ್ಲ.
ನಾ ಒಂಟಿ ಅಂದುಕೊಳ್ಳುವ ಸತ್ಯ
ಮನಸ್ಸಿಗೆ ಹಿತವಲ್ಲ.
ಅದಕ್ಕೆಂದೇ ಸತ್ಯಕ್ಕೆ ಕುರುಡಾಗಿ
ಕಣ್ಣು ಮುಚ್ಚಿಬಿಡುತ್ತೇನೆ.
ನೀನಿದ್ದಿ ಎಂಬ ಭ್ರಮೆಯಿಂದ ಬದುಕುತ್ತೇನೆ.
ಬದುಕಿಸುವುದು ಭ್ರಮೆಯಾದರೇನು?
ಎಲ್ಲಕ್ಕಿಂತ ದೊಡ್ಡದು ಬದುಕುವುದೇ ಅಲ್ಲವಾ?
ಉದ್ದೇಶ ವಿಲ್ಲದಿದ್ದರೂ ಬದುಕುವುದು
ಅನಿವಾರ್ಯ!!
ಅವತ್ತೆಲ್ಲ ಒಂಟಿತನವೇ ಬದುಕಾಗಿದ್ದಾಗ
ಬದುಕಲ್ಲಿ ಇಂತ ನಿರೀಕ್ಷೆಗಳಿಗೆ
ಜಾಗವೇ ಇರಲಿಲ್ಲ!!
ಇದೀಗ ನಿರೀಕ್ಷೆಗಳಿಗೆ ಜೀವವಿದೆ!
ನೀನಿಲ್ಲ ಎಂಬ ಸತ್ಯಕ್ಕೂ
ಜೀವವಿದೆ!
ಅದಕ್ಕೆಂದೇ ಅಳುವಿದೆ.
ಕಂಬನಿಯಿದೆ.
ಹಠವಿದೆ.
ಮತ್ತೆ  ಮಡಿಲಾಗು ಅಂತ ಕೇಳಲಾಗದ ಅಸಹಾಯಕತೆಯಿದೆ.
ಮಡಿಲಾಗಬೇಕಾದ ಮನಸುಗಳಿಗೆಲ್ಲ
ಅವರದ್ದೇ ಆದ ಬದುಕಿದೆ.
ಕನಸಿದೆ. ಸಂಭ್ರಮವಿದೆ.
ಅದರಲ್ಲಿ
ನನ್ನೀ ಅಳುವಿನ ಸಾಂತ್ವನವಿಲ್ಲ.
ನನ್ನ ಸೋತ ಸೊರಗುವಿಕೆಯ ಕಹಿ
ನಗುವಿಲ್ಲ.
ಬೇಡ... ಬದುಕು ಒಂಟಿಯೇ....
ನನಗೆ ಯಾರಿಲ್ಲ.
ಯಾರಿಲ್ಲ ನನಗೆ.
ಯಾರೂ ಬೇಡ..
ಬೇಡ ನನಗ್ಯಾರೂ...................

Monday, July 4, 2011

ನುಡಿಸು ಬಾರೋ ಕಿನ್ನರಿ

ಎದೆಯ ತಂಬೂರಿಯಲೊಂದು ಗಾನ
ನುಡಿಸು ಬಾರೋ ಕಿನ್ನರಿ
ಕಾವ್ಯವಾಗಲಿ ನನ್ನೊಳಗಿನ
ಚೇತನಗಳ ನುಡಿಸಿರಿ.

ಬೆಳದಿಂಗಳ ದಿಬ್ಬದೆಡೆಗೆ
ಕೊಳಲೂದುತ ಕರೆದವನೆ
ಹೃದಯಾಬ್ಧಿಯ ತೋಟದೊಳಗೆ
ಮೈ ಮರೆಸಿದ ಉಸಿರವನೆ!

ಚಂಚಲತೆಯ ಈ ಕಂಗಳು
ಕಾಣದಿರದೇ ಬಳಲಿವೆ
ಬಾ ಬೆಳಕಿನ ಹಣತೆಯೊಲವೆ
ತಂಪಾಗಲಿ ಕಣ್ಣೆವೆ.

ನೀರವತೆಯ ಸಂಜೆತೀರ
ಅಲೆಅಲೆಗಳ ನರ್ತನ
ನಿಶ್ಯಬ್ಧದ ಚುಂಬನದಲಿ
ಮನವಾಗಲಿ ಚೇತನ

ಪಾಂಚಜನ್ಯದೊಡೆಯ ಚೆಲುವ
ಮೋಹನ ನೀ ಮುರಳೀಧರ
ಮಾಧವನೇ ಬಾ ಸೇರಿಕೋ
ಮೀರೆ ಪ್ರೇಮಸಾಗರ.

Sunday, April 3, 2011



ಮಾತಿಗ್ಯಾಕೋ ಬಿಂಕ! ಮನಸುಗಳ ನಾವೆಯಲ್ಲಿ ಮೌನ ಹರಿದಾಡಿದಾಗ ಮತ್ತೊಮ್ಮೆ ಮಾತುಗಳಿಗೆ ಕೂತುಬಿಡಬೇಕು ಆದರೆ ಉಹೂಂ.. ಹಾಗೆ ಹುಟ್ಟುವುದಲ್ಲ ಮಾತು.ಬಿಡು ಮಾತು ಮೌನದ ನಡುವೆ ಸೋತು ಹೋಗದಿರಲಿ ಪ್ರೀತಿ. ಸಲಹು ಅದನ್ನ ಪ್ರೀತಿಯಿಂದ. ಸಹನೆಯಿಂದ, ಶಾಂತಿಯಿಂದ. ಅದಾಗಿ ಒಂದರಗಳಿಗೆ ನಿನ್ನೊಳಗಿನ ಎಲ್ಲವನು ಮರೆತುಬಿಡು. ನಿರ್ಮಲ ಮನದಿಂದ ತುಂಬು ಹೃದಯದ ಹಾರೈಕೆಯೊಂದ ಹಾರೈಸಿಬಿಡು. ಕಳೆದೆಲ್ಲ ಕಹಿಗಳು ಅಳಿಸಿ ಹೋಗಲಿ. ಸಿಹಿ ಸಿಹಿಯಾದ ನಗೆ ಮೂಡಲಿ. ದಿವ್ಯ ಬೆಳದಿಂಗಳಂತೆ. ಬೆಳಗು ಬೆಳಕಾಗಲಿ. ನವೋದಯದ ಈ ನವ ವರುಷದಲ್ಲಿ. ಯುಗಾದಿಯ ಈ ಹೊಸ ಹರುಷದಲ್ಲಿ.


 ವಿಕೃತಿಯ ಕಹಿಯೆಲ್ಲ ಕಳೆದು ಬಿಡು ನಿನ್ನೆಗೆ.
ನವಕೃತಿಯು ಮೂಡಲಿ ನಿನ್ನೊಳಗೆ ಗೆಳೆಯಾ
ಚಿಗುರಿದೆಡಯಲ್ಲೆಲ್ಲ ಹೊಸ ಬೆಳಗು ಕಾಣಲಿ
ಕೋಗಿಲೆಯ ಇಂಪಿನಲಿ ಈ ಹೊಸ ಉದಯಾ....


ಯುಗಾದಿ ಹಬ್ಬದ  ಆತ್ಮೀಯ ಶುಭಾಶಯಗಳೊಂದಿಗೆ
.......

Sunday, February 27, 2011

ಕತ್ತಲೆಯೇ......



 ಕಡು ಕಪ್ಪು ಕತ್ತಲೆಯೇ
ಕ್ಷಣ ನಿಂತು ನೇವರಿಸು
ನನ್ನೆದೆಗೆ...
ತಂಪು ಸುರಿಸು..
ಹನಿ ಹನಿಯ ಮಳೆ ಸಾಕು
ಈ ಮನದ ತೇವಕ್ಕೆ..


ನಕ್ಷತ್ರಗಳು ನಗದ
ಈ ರಾತ್ರಿಯಂತದ್ದು
ಇನ್ನೊಂದು ಈಬದುಕು
ಮತ್ತೆ ಸುರುಳಿ ಸುತ್ತಿದ
ನಿಟ್ಟುಸಿರ ಬಿಗಿಯಲ್ಲಿ
ಅವಡುಗಚ್ಚಿದರೆ ಸೆರಗು ಒದ್ದೆ.


ಯಾರ್ಯಾರೋ ಬದುಕುವರು ಹೇಗೆ ಹೇಗೋ..
ನನಗ್ಯಾಕೆ ನೋವಿಲ್ಲಿ ನಿಟ್ಟುಸಿರು!
ಬೆತ್ತಲೆಯ ಬಯಕೆಯಿರದ
ಕತ್ತಲೆಗಳೇ ನನ್ನ ಅಣುಕಿಸುತ್ತೀರಾ
ನೀವು! ನನಗ್ಯಾಕೆ ಬಯಕೆಗಳು
ಸುಡಲಿಲ್ಲ ಎಂದು!


Tuesday, February 1, 2011

ಗೆಳೆಯಾ..


ನಾನೊಂದು ಪುಟ್ಟ ಚಿಗುರು,
ಮೊಗ್ಗು, ಅರಳಿ ನಿಂತ ಹೂ.
ನೀನೋ ಆಕಾಶದಲ್ಲಿ
ಸ್ವಪ್ರಭೆಯ ಬೀರುತಿರೋ ಭಾನು....


ನಿನ್ನ ಕಿರಣಗಳ ಸ್ಪರ್ಶ
ಸಾಕು ನನ್ನ ಜೀವಂತಿಕೆಗೆ
ನಿನ್ನ ಪ್ರೇಮದೊಂದು ನೋಟ
ನನ್ನ ಎದೆಯ ಪಲ್ಲವಕ್ಕೆ.

ಎದೆ ತುಂಬ ನೂರು ಮಾತು
ಏನ ಹೇಳಲಿ?
ಏನ ಬರೆಯಲಿ ಗೆಳೆಯಾ
ಯಾವುದು ಮೊದಲು ಮತ್ತು
ಯಾವುದು ಕೊನೆ?

ಎಲ್ಲೆಲ್ಲೋ ಸುಳಿದು ಮತ್ತೆ
ನನ್ನೊಳಗೆ ಹರಿವ ತೊರೆ
ಅದ್ಯಾವ ನೀರು!
ನನಗೂ ನಿನಗೂ ಗೊತ್ತು
ಅದರ ಹೆಸರು!