Friday, June 7, 2013

ಮಾನಸ ಸರೋವರದ ಎಲ್ಲ ಬರಹಗಳನ್ನು ಸೇರಿಸಿ ಪುಸ್ತಕ ಮಾಡುವ ರಾಘು ಬಿ. ಎಂ ಅವರ ಕನಸು ನನಸಾಗಿದೆ. "ಮನನ" ಪುಸ್ತಕದ ರೂಪ ಪಡೆದು ಲೋಕಾರ್ಪಣೆಗೊಂಡ ಮಧುರ ಕ್ಷಣಗಳು

ಉದ್ಘಾಟನೆ
"ಸ್ವಸ್ತಿ ಪ್ರಕಾಶನ"  ಹಾಗೂ"ಚೈತ್ರರಶ್ಮಿ" ಬಳಗದ ಸ್ನೇಹಮಿಲನ ಕಾರ್ಯಕ್ರಮ
ಶ್ರೀ  ರಾಮಚಂದ್ರ ಹೆಗಡೆ ಸಿ.ಎಸ್. ಹಾಗೂ  ಡಾ.ಮಹೇಶ  ಅಡಕೋಳಿ.
"ಮನನ" ಲೋಕಾರ್ಪಣೆ

"ಚೈತ್ರರಶ್ಮಿ" ಲೋಕಾರ್ಪಣೆ
















ಶ್ರೀ ರಾಚಂ ಅವರಿಗೆ ಸಮ್ಮಾನ ಉತ್ತರಕನ್ನಡ ಬಳಗದಿಂದ
ನಮ್ಮ ಬಳಗ

ಮುಖಪುಟಗಳು
ಕರೆ ಓಲೆ.





Tuesday, April 30, 2013

ಅಮ್ಮನೆಂದರೆ........



ಚಿತ್ರ ಕೃಪೆ: ಅಂತರ್ಜಾಲ.

              ತುಂಬಾ ವರ್ಷಗಳಿಂದ ನೋಡುತ್ತಿದ್ದೇನೆ. ಇವತ್ತಿನ ಯುವ ಜನಾಂಗದ ಮನಸ್ಥಿತಿಯ ಕುರಿತು ಭಯವಾಗುತ್ತದೆ.
ಶಾಲಾ ಕಾಲೇಜು ದಿನಗಳಲ್ಲಿ ಗುರು ಹಿರಿಯರ ಕುರಿತು ಒಂದಿಷ್ಟು ಭಯವನ್ನೂ ಒಂದಿಷ್ಟು ಸಂಸ್ಕಾರವನ್ನೂ ತುಂಬಿಕೊಂಡ ನಮ್ಮ ಹುಡುಗರಿಂದು ಮಾನವೀಯತೆಯನ್ನೂ ಮರೆಯುತ್ತಿದ್ದಾರೆ. ಯಾಕೆ ಈ ಮಾತು ಹೇಳಬೇಕೆನಿಸಿತು ಗೊತ್ತಾ?  ನಿನ್ನೆ ಒಂದು ಘಟನೆ ನಡೆಯಿತು.ಅದನ್ನೂ ಅದರ ಹಿನ್ನೆಲೆಯನ್ನೂ ಹೇಳಿಕೊಳ್ಳಬೇಕು ನಾ.

      ತುಂಬಾ ಹಿಂದೆ ಅಂದರೆ ಹತ್ತು ವರ್ಷಗಳ ಹಿಂದಿನ ಮಾತಿದು. ಪುಟ್ಟ ಮಗುವನ್ನೆತ್ತಿಕೊಂಡು ಒಬ್ಬಳು ಸ್ತ್ರೀ ಬಸ್ಸೇನಿರುವಾಗ ವಿಪರೀತ ರಶ್ಶು. ನಮ್ಮ ಹಳ್ಳಿಗಳ ಬಸ್ಸಿನ ದಿನದ ಹಣೆಬರಹ ಇದೇ. ಎಲ್ಲರಿಗೂ ಗೊತ್ತಿರೋದೇ. ಇಂದಿಗೂ ಅದು ಹಾಗೇ ಇದೆ. ಹಾಗೆ ಹತ್ತುವ ಮೊದಲು ಕಿಟಕಿಯಂಚಿನಿಂದ  ತನ್ನ ಬಳಿ ಇರೋ ಏನೋ ಚೀಲ  ಒಬ್ಬರ ಬಳಿ ಕೊಟ್ಟು  ಒಂದು ಸೀಟು ಹಿಡಿಯಲು ವಿನಂತಿಸಿಕೊಂಡಳು.  ಆ ಮಹನೀಯರು ಅವಳಿಗಾಗಿ ಒಂದು ಸೀಟನ್ನೂ ಇಟ್ಟು ಇಳಿದು ಹೋದರು. ಬಸ್ಸಿನ ರಶ್ಶಿನಲ್ಲಿ ವಿಪರೀತ ಸೆಕೆಯಿಂದ ಅಳುತ್ತಿದ್ದ ಮಗುವನ್ನೆತ್ತಿಕೊಂಡು ಮೇಲೇರಿದರೆ ಅವಳ ಬ್ಯಾಗಿನ ಸಹಿತ ಸೀಟು ನಾಪತ್ತೆ. ಇಡೀ ಬಸ್ಸಲ್ಲಿ ಅವಳ ಬ್ಯಾಗೂ ಇರಲಿಲ್ಲ. ಅವಳಿಗೊಂದು ಸೀಟು ಯಾರೂ ಕೊಡಲಿಲ್ಲ. ಅದೇ ಸೀಟಿನ ಮೇಲೆ ಮೂವರು ಕಾಲೇಜು ಹುಡುಗಿಯರು ಕುಳಿತು ತಮಗೇನೂ ಗೊತ್ತಿಲ್ಲದೇ ಇರೋರ ಹಾಗೇ ಹರಟುತ್ತಿದ್ದರು. ಅವಳು ಕೇಳಿಕೊಂಡರೂ ಒಂಚೂರು ಜಾಗ ಇಡೀ ಬಸ್ಸಲ್ಲಿ ಎಲ್ಲಯೂ ಅವಳಿಗೆ ದೊರೆಯಲಿಲ್ಲ. ಬಸ್ಸಿನ ತುಂಬಾ ತುಂಬಿದ್ದ ಹೈಸ್ಕೂಲು ಮತ್ತು ಕಾಲೇಜು ಮಕ್ಕಳೇ ಅವಳೆಡೆಗೆ ಕನಿಕರವನ್ನೂ ತೋರಲಿಲ್ಲ. ಆಮೇಲೆ ವೃದ್ಧರೊಬ್ಬರು ಅವಳನ್ನು ತಮ್ಮ ಸೀಟು ಬಿಟ್ಟು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟರು. ಹಾಲಿಗಾಗಿ ರಚ್ಚೆಹಿಡಿದ ಮಗು ಅವಳ ಮಡಿಲಲ್ಲಿ ಶಾಂತ ಮಲಗಿತು.  ನಿನ್ನೆ ಮತ್ತದೇ ಅನುಭವ. ತಿಂಗಳು ತುಂಬಿದ ಗರ್ಭಿಣಿಗೆ ನಾನೊಂದು ಸೀಟು ಹಿಡಿದುಕೊಂಡರೆ ಯಾವ ಮುಲಾಜಿಲ್ಲದೇ ಪೇಪರ ಇಟ್ಟಲ್ಲೇ ಚೂರೂ ಬೇಸರವಿಲ್ಲದೇ ಕೂರುವ ಇದೇ ಹುಡುಗಿಯರು ಇಡೀ ಬಸ್ಸು ತುಂಬ ತಮ್ಮ ಬ್ಯಾಗ ಇಟ್ಟು ಬುಕ್ ಮಾಡಿಕೊಳ್ಳುವವರಂತೆ ಸೀಟು ಹಿಡಿದುಕೊಂಡಾಗ ಅವರ ಬ್ಯಾಗು ಸ್ವಲ್ಪ ಸರಿಸಿದರೆ ಕೆಂಡಾ ಮಂಡಲವಾಗುತ್ತಾರೆ! ನನಗ್ಯಾಕೆ ಉಸಾಬರಿ ಅಂತವಾ ಮನಸೇ.. ನಿಜಕ್ಕೂ ನೋವಾಗುತ್ತದೆ. ಹುಡುಗರ ಬಗ್ಗೆ ನಾನು ಹೇಳೋದಿಲ್ಲ. ಆದರೆ ಇವರು ಹುಡುಗಿಯರು. ಇನ್ನೊಂದು ದಿನ ಇವರು ತಾಯಿಯಾಗುವವರು. ಯಾವುದೋ ತಾಯಿಯ ಮಗ್ಗುಲಲ್ಲಿ ಹೀಗೇ ಜೋತಾಡಿಕೊಂಡು ಬೆಳೆದವರು. ಯಾವುದೋ ತಾಯಿಯ ಗರ್ಭದಲ್ಲಿ ಕುಳಿತೇ ಧರೆಗಿಳಿದವರು. ನಾಳೆಯ ಮಕ್ಕಳಿಗೆ ಹಾಲುಣಿಸುವವರು. ಯಾಕಿಷ್ಟು ಮಾನವೀಯತೆ ಮರೆತ ಕ್ರೂರರಾಗುತ್ತಾರೆ! ಮನಸ್ಸು ರೋಧಿಸುತ್ತದೆ. ಭಗವಂತ ಹೆಣ್ಣಿಗೆ ಕೊಟ್ಟಿರೋ ವರ ತಾಯ್ತನ ಎನ್ನುವುದು. ಅದು ಪ್ರತೀ ಹೆಣ್ಣಿಗೆ ಒಂದಲ್ಲ ಒಂದು ದಿನ ನಿಲ್ಲಲೇಬೇಕಾದ ಸ್ಥಾನ. ಅಂಥವಳಿಗೇ ನಮ್ಮ ತಾಯಂದಿರ ಬಗ್ಗೆ ಗಭರ್ಿಣಿ ಹೆಣ್ಣಿನ ಬಗ್ಗೆ ಒಂದಿಷ್ಟು ಸಹಾನುಭೂತಿಯೂ ಇಲ್ಲದಂತಾಗುತ್ತಿದೆಯೆರಂದರೆ ಎಂಥ ನೋವು.!! 
                  ನಾನು ಸಮಾಜ ಸುಧಾರಕಳಾಗಿ ಹೇಳ್ತಿಲ್ಲ ಈ ಮಾತನ್ನು. ತುಂಬ ನೋವಿನಿಂದ ಹೇಳುತ್ತಿದ್ದೇನೆ. ಯಾರನ್ನೂ ಗೌರವದಿಂದ ಕಾಣುವ ಮನೋಭಾವವೇ ಉಳಿಯುತ್ತಿಲ್ಲ. ಸಹಾಯ ಮಾಡುವುದು ದೂರ ಉಳಿಯಿತು. ಒಂದಿನ ನನ್ನ ಕಣ್ಣಲ್ಲೇ ಕಂಡಿದ್ದೇನೆ. ಇಂತದೇ ಸಂದರ್ಭದಲ್ಲಿ ಒಬ್ಬಳು ಗರ್ಭಿಣಿ ಹೆಣ್ಣಿಗೆ ಜಾಗ ಬಿಟ್ಟುಕೊಟ್ಟ ತನ್ನದೇ ಗೆಳತಿಯ ಕುರಿತಾಗಿ ಆಡಿಕೊಂಡು ನಗುವುದನ್ನ. ಒಳ್ಳೆಯ ಮನಸಿನವರಿಲ್ಲ  ಅನ್ನುತ್ತಿಲ್ಲ. ಆದರೆ ಅಂತಹ ಒಳ್ಳೆಯತನವನ್ನೂ ಕೆಟ್ಟದಾಗಿಸುವಂತೆ ನಗುತ್ತಿದ್ದಾರೆ
ನಮ್ಮ ಭಾವೀ ತಾಯಂದಿರು.! ಬದುಕಲ್ಲಿ ಯಾವತ್ತಾದರೂ ಇಂತಹ ದಿನಗಳು ಅವರ್ಯಾರಿಗೂ ಬಾರದಿರಲಿ. ಯಾಕಂದರೆ ಎಲ್ಲರಿಗೂ ಕಾರಲ್ಲೇ ಮೆರೆಸುವ ಗಂಡಂದಿರು ಸಿಗುವುದಿಲ್ಲ. ಬಸ್ಸುಗಳಲ್ಲೂ ಓಡಾಡುವ ದಿನಗಳು ಅವರಿಗೂ ಬರಬಹುದು. ಭಗವತೀ ಆ ದಿನ ಅವರಿಗೆ ಅರಿವಾಗಿಸಲೀ ಹೊರತೂ ಆ ಕಷ್ಟಗಳ ಅವರಿಗೆ ಕೊಡೋದು ಬೇಡ.

              ತಾಯ್ತನ ಎಂದರೆ ಸುಲಭದ್ದಲ್ಲ. ನೋಡೋವಷ್ಟು ಅಂದ್ಕೊಂಡಷ್ಟು ಸರಳದ್ದಲ್ಲ. ಒಂದು ಜೀವವನ್ನು ತನ್ನುಡಿಯೊಳಗೆ ಹೊತ್ತು ಆಜೀವ ಎರಡಾಗುವವರೆ ಜೀವ ಉಸಿರಾಗಿಸಿಕೊಂಡು ರಕ್ತ ಮಾಂಸಗಳ ಜೊತೆ ಬೆರೆತುಕೊಂಡ  ಹೆಣ್ಣಿನ ದೇಹ ಭಾವ ಎಲ್ಲವೂ ತಾಯ್ತನಕ್ಕೆ ಕೇಳೋದು ಅವಳ ಜೀವಿತದ  ಒಂದು ಹೊಸ ಉಸಿರನ್ನ. ತಾಯಿಯಾಗದ ಹೆಣ್ಣಿಗೆ ಅದರ ಅರಿವಾಗೋದು ಕಷ್ಟವಿರಬಹುದು. ಆದರೆ ಹೆಣ್ಣಾಗಿ ಹುಟ್ಟಿ ತಾಯ್ತನದ ಕುರಿತು ಒಂದಿಷ್ಟೂ ಗೌರವ ಆದರ ಪ್ರೀತಿ ಇಲ್ಲದಿದ್ದರೆ ಅಂತಹ  ಸ್ತ್ರೀ ಬಗ್ಗೆ ಏನನ್ನಬೇಕೋ ತಿಳಿಯುತ್ತಿಲ್ಲ. ಯಾಕೋ ಈ ಘಟನೆ ನನ್ನ ತುಂಬ ನೋಯಿಸಿತು. ಅದಕ್ಕೇ ನಿನ್ನೊಂದಿಗೆ ಹಂಚಿಕೊಂಡೆ. ಯಾರು ಏನೂ ಸಹಾಯ ಮಾಡದಿದ್ದರೂ ತಾಯಿ ತನ್ನ ಮಗುವನ್ನು ಸಲಹುತ್ತಾಳೆ. ಎಂತ ನೋವು ಸಂಕಟಗಳಲ್ಲೂ ಸಹಿಸುತ್ತಾಳೆ. ಆದರೆ ನಮ್ಮದೇ  ಹುಡುಗಿಯರಿಗೆ ತಾಯ್ತನವೆಂದರೆ ಅಪಹಾಸ್ಯದ ಸಂಗತಿಗಳಾ! ನೋವಾಗೋದಿಲ್ಲವಾ?

       " ಅಮ್ಮ " ಎಷ್ಟಾಪ್ತ ಶಬ್ಧ! ಎಷ್ಟು ಆಪ್ತ ವ್ಯಕ್ತಿ. ಅವಳ ಒಡಲಿಂದ ಇಳಿದು ಬಂದ ಮಾಂಸದ ಮುದ್ದೆಯಂತ ನಮ್ಮನ್ನ ಬೆಳೆಸಿದ ಪೋಷಿಸಿದ ಅವಳ ಮಮತೆಗೆ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಾ? ಅಮ್ಮ ಅನ್ನೋ ಶಬ್ಧವೇ ಸಾಕು ಎಂಥ ಕಲ್ಲು ಮನಸನ್ನೂ ಕರಗಿಸುವ ಶಕ್ತಿಯಿದೆ ಅದಕ್ಕೆ. ಹಾಗಿದ್ದೂ ಮೊನ್ನೆ ನಮ್ಮ ನಡುವೆ ಮಾತು ಬಂತಲ್ವಾ? ಅಮ್ಮನ ಪ್ರೇಮವೂ ಸ್ವಾರ್ಥದ್ದು ಅನ್ನೋ ವಿಷಯವಿರಬೇಕು.ನೀ ಇದಕ್ಕೆ ಏನಂತೀಯ? ನನಗಿಲ್ಲಿ ಯಾವುದೇ ಒಂದು ಕೋನ ಮಾತ್ರ ಸರಿ ಅನಿಸಲ್ಲ. ಅಮ್ಮ ಅನ್ನೋಳು ಸದಾ ಮಕ್ಕಳ ಹಿತ ಬಯಸ್ತಾಳೆ ನಿಜ. ಅಮ್ಮನಿಗೆ ಹೋಲಿಕೆ ಅಮ್ಮ ಮಾತ್ರ ಅದೂ ನಿಜ. ಆದರೆ ಅಮ್ಮ ಅನ್ನೋಳು ಸಹ ಒಂದು ಜೀವ. ಅದು ಮನುಷ್ಯ ಸಹಜ ಎಲ್ಲ ಭಾವಗಳ ಹೊತ್ತಂತ ಒಂದು ಮಾನವ ಜೀವ. ಅಮ್ಮ ಮಕ್ಕಳನ್ನ ತನ್ನ ಮಡಿಲಲ್ಲಿ ಅನುಗಾಲವೂ ಇಟ್ಕೊಳ್ಳೋಕೆ ಸಾಧ್ಯವಿಲ್ಲ. ಬೆಳೆಯುತ್ತ ಬೆಳೆಯುತ್ತ  ರಕ್ತಗತವಾದ ಮತ್ತು ಪರಿಸರಗತವಾದ ನೂರೆಂಟು ರೂಪಗಳ ಮನುಷ್ಯ ಪಡೆದುಕೊಳ್ಳುತ್ತಾನೆ. ಮತ್ತು ಅದು ತಾಯಿ ಮತ್ತು ಮಕ್ಕಳ ಸಂಬಂಧದ ಮೇಲೂ ತನ್ನದೇ ಆದ ಪರಿಣಾಮ ಬೀರುತ್ತದೆ. ಒಂದಿಷ್ಟು ಅಂತರವನ್ನೂ ಸೃಷ್ಟಿಸುತ್ತದೆ. ಹಾಗಾಗಿ ತಾಯಿ  ತನ್ನ ಮಮತೆಯನ್ನು ಹಲವು ಬಾರಿ ಅಧಿಕಾರವಾಗಿಯೂ ಚಲಾಯಿಸ್ತಾಳೆ.  ಮತ್ತು ಮಕ್ಕಳು ತನ್ನ ಅಂಗೈಯನ್ನ ಬಿಟ್ಟು ಹೋಗುವುದು ಎಂತಹ ತಾಯಿಗಾದರೂ ಸಂಕಟವೇ... ಅಷ್ಟು ಮಾತ್ರದ ಹಕ್ಕೂ ಅವಳ ಸ್ವಾರ್ಥ ಅನಿಸಿದರೆ ನಿಜಕ್ಕೂ ತಾಯಿಯ ಪ್ರೇಮ ಸ್ವಾರ್ಥವೆನಿಸಿದ್ರಲ್ಲಿ ಯಾವ ತಪ್ಪೂ ಇಲ್ಲ. ಆದರೆ ತನ್ನದನ್ನು ತನ್ನದು ಅನ್ನುವುದು ಮತ್ತು ಅದನ್ನ ತನ್ನದೇ ಆಗಿ ಉಪಯೋಗಿಸುವುದು ಸಾಮಾನ್ಯ ಎಲ್ಲರೂ ಬಯಸುವ ಸ್ವಾರ್ಥ. ಒಬ್ಬ  ವಿರಾಗಿ ಯೋಗಿ ಸಹ ಅವನದಾದ ಅನುಷ್ಟಾನ, ಅವನದಾದ ಪ್ರಪಂಚ. ಖಾವಿ, ಮತ್ತು ಕಮಂಡಲಗಳ ತನ್ನದೆಂದೇ ಉಪಯೋಗಿಸುತ್ತಾನೆ. ಮತ್ತು ಅದು ತನ್ನದೇ ಆಗಿರಲಿ ಎಂದು ಬಯುಸುತ್ತಾನೆ. ಹಾಗಿದ್ದಮೇಲೆ ತನ್ನದೇ ಕರುಳಕುಡಿಯ ಮೇಲೆ ತಾಯಿಗಿರುವ ಅಧಿಕಾರಯುಕ್ತ ಪ್ರೇಮ ಸ್ವಾರ್ಥ ಎಂದು ಅನ್ನಿಸಿಕೊಳ್ಳಬಹುದಾ?

              ಹಾಂ.. ಅಮ್ಮ ಅನ್ನೋ ಶಬ್ಧದಡಿಯಲ್ಲಿ ತಮ್ಮದಲ್ಲದ ಜೀವಗಳನ್ನ ತಮ್ಮದೆಂದೇ ನಂಬಿ ಪ್ರೀತಿಸುವ ಜೀವಗಳು ಇಲ್ಲಿವೆ.ಅಲ್ಲಿ ಮಾತ್ರ ಸ್ವಾರ್ಥ ಇರಕೂಡದು. ಅಮ್ಮನ ಪ್ರೇಮ ಅಧಿಕಾರವಾಗಿ ಹಕ್ಕಾಗಿ ಚಲಾಯಿಸಹೋದರೆ ಅದು ಮಕ್ಕಳ ಮನಸಿನ ಮೇಲೆ ನಿರ್ದಿಷ್ಟ  ಪರಿಣಾಮ ಬೀರುತ್ತದೆ.ಬೆಳೆದು ನಿಂತ ಜೀವಗಳಿಗೆ ಪ್ರೇಮ ಬೇಕು. ಆದರೆ ಅದು ಆಪ್ತವಾಗಿರುವಷ್ಟು ಕಾಲ ಅಧಿಕಾರ ಹಕ್ಕೂ ಎಲ್ಲವೂ ಆಪ್ತ ಅನಿಸುತ್ತದೆ.  ಮಕ್ಕಳು ಸ್ವತಂತ್ರಪಕ್ಷಿಗಳಾದಮೇಲೆ ಈ ಅಧಿಕಾರ ಹಕ್ಕು ಎಲ್ಲಾ ಮರೆತು ಒಂದು ಸುಂದರ ಸ್ನೇಹದಂತ ಪ್ರೀತಿಯ ನಿರೀಕ್ಷೆ ಮಾತ್ರ ಮಕ್ಕಳಿಗೆ ಉಳಿದಿರುತ್ತದೆ. ಹಾಗಾಗೇ ಸ್ವಂತದ್ದೇ ಮಕ್ಕಳಾದರೂ ಬೆಳೆದಂತೆ ಅವರ ಜೊತೆ ಸ್ನೇಹವೇ ಹೆಚ್ಚು ಇಷ್ಟವಾಗುವುದು ಅವರಿಗೆ. ಅಲ್ಲಿ ಇರುವ ವಾತ್ಸಲ್ಯದ ಎಳೆ ಖಂಡಿತ ಮಕ್ಕಳ ಮನಸನ್ನ ತಲುಪುತ್ತದೆ.ಅಮ್ಮನ ಕುರಿತು ಮಾತನಾಡುವಾಗ ಈ ಜಗತ್ತಲ್ಲಿ ದಾದಿ (ನರ್ಸ್) ಗಳ ಸೇವೆ ನೆನೆಯಬೇಕು.  ನಮ್ಮದೇ ದೇಶದಲ್ಲಿ ಎಷ್ಟೋ ಸಾವಿರ ಸಾವಿರ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ದಾದಿಯರಿದ್ದಾರೆ! ಇತ್ತೀಚೆಗೆ ಇದು ಸಹ ಒಂದು ಹಣ ಮಾಡುವ ವೃತ್ತಿಯಾಗುತ್ತಿದೆ ಅಂತ ಗೊತ್ತು ನಂಗೆ. ಆದರೂ ನಿಸ್ವಾರ್ಥ ಮನಸ್ಸಿನಿಂದ ರೋಗಿಗಳ ಸೇವೆ  ಮಾಡುವ  ಆ ದಾದಿಯರಲ್ಲಿ ಎಂತಹ ತಾಯಿಯಿದ್ದಾಳೆ! ಒಬ್ಬ ಮದರ್ ಥೆರೆಸಾ ನಮಗೆ ಕಾಣುತ್ತಾರೆ. ಅಂತಹ ಸಾವಿರ ಸಾವಿರ ಅಮ್ಮಂದಿರು ಈ ನೆಲದಲ್ಲಿದ್ದಾರೆ. ಅವರಿಗೆ ಅವರ ಸೇವೆಗೆ ಯಾವ ಮಿತಿಯೂ ಇಲ್ಲ. ಮತ್ತವರಲ್ಲಿನ ಅಮ್ಮನಿಗೆ ಮತ್ಯಾರೂ ಸಾಟಿಯಲ್ಲ. ಹಾಗಾಗಿ ಸ್ತ್ರೀ ಯೊಳಗಿನ ಇಂತಹ ತಾಯ್ತನಕ್ಕೆ ಅದನ್ನಿಟ್ಟ ಆ ಭಗವತಿಗೆ ನೂರು ನಮನಗಳೊಂದಿಗೆ.

ಸಿಗೋಣ ಮತ್ತೊಂದು ತೀರದ ಸಂಜೆಯಲಿ...

Thursday, April 4, 2013

ಮೌನ ಮೌನ ಮೌನವೆಂಬ ಮಾತಿಲ್ಲದ ಮನೆಯೊಳಗೆ....

ಚಿತ್ರಕೃಪೆ: ಅಂತರ್ಜಾಲ


 

        ಕಳೆದು ಹೋಗುವ ಕಾಲವೆಂಬ ವಿಸ್ಮಯದಲ್ಲಿ ಒಂದು ಪುಟ್ಟ ಕಲಾಕೃತಿಯಂತೆ ಜೀವಿಸುವ  ಭಾಗ್ಯವಿದ್ದರೆ ಅದು
ಜೀವನದ ಸಾರ್ಥಕತೆ! ಉತ್ಕೃಷ್ಟವಾದದ್ದೇನೋ ಸೃಷ್ಟಿಸಿಬಿಡಬೇಕೆಂಬ ಹಂಬಲದಿಂದ ಹೊರಟ ಚಿತ್ರಕಾರನ ನೈಜತೆ ಮತ್ತು ಪ್ರತಿಭೆಗೆ ಸವಾಲುಗಳಿವೆ!
ಮನೆಯ ಮಗುವಿನ ಬಾಲ ಕೈಗಳಲ್ಲಿ ಮೂಡಿ ಬಂದ ಸಹಜ ರಂಗೋಲಿಗೆ ಅಂತಹ ಯಾವ ಸವಾಲುಗಳಿಲ್ಲ. ಈ ಮಾತಿನ ಹೋಲಿಕೆ ಯಾಕೆಂದರೆ
ನಾವು ಯಾವುದೋ ಗೊತ್ತಿಲ್ಲದ ಅಥವಾ ಅದು ಸವಾಲೊಡ್ಡುವ ಉತ್ಕೃಷ್ಟವೆಂಬ ಮಾಯಾಜಿಂಕೆಯ ಹಿಂದೆ ಬಿದ್ದುಬಿಟ್ಟಿದ್ದೇವೆ ಇತ್ತೀಚೆಗೆ! ಅದು
ಅರಿವಿಲ್ಲದ ಮಾಯಾಜಿಂಕೆ ಕೂಡ ಅಲ್ಲ. ಅರಿವು ತಂದುಕೊಟ್ಟ ಮಾಯಾಜಿಂಕೆ!

     ಸಮಾಜದ ಮಾತನಾಡುತ್ತ ಸಮಾಜಕ್ಕೆ ನಾವು ಹೊರತೆಂಬಂತೆ ಸೊಲ್ಲನ್ನೆತ್ತುತ್ತೇವೆ! ನಮ್ಮಿಂದಲೇ ಸಮಾಜ ಎಂಬುದು  ಕ್ಷಣದ ಮರೆವಿಗೆ ಸಾಕ್ಷಿಯಾಗುತ್ತದೆ!  ಮನಸೇ ಯಾಕೆ ಹೀಗೆ? ಎದೆಬಗೆಯುವಂತ ಕಟುಸತ್ಯಗಳನ್ನು,ಹೋಗಲಿ ನಮ್ಮದೇ ಬದುಕನ್ನು ಬೆತ್ತಲೆಗೊಳಿಸುವ ಸಮಾಜದ ಮುಂದೆ ಅನಾವರಣ ಗೊಳಿಸುವ ಸಾಮಥ್ರ್ಯ ನಮ್ಮಲ್ಲಿ ಎಷ್ಟು ಜನರಿಗಿದೆ?  ಸ್ಟಾರ್ ಪ್ಲಸ್ ನಲ್ಲಿ "ಸಚ್ ಕಾ ಸಾಮನಾ" ಎಂಬುದೊಂದು ಕಾರ್ಯಕ್ರಮ ಪ್ರಕಟವಾಗುತ್ತಿತ್ತು!  ಆ ಕಾರ್ಯಕ್ರಮದ ಕುರಿತು ನಾನಿಲ್ಲಿ ಹೇಳುತ್ತಿಲ್ಲ. ಆದರೆ ಆ ಕಾನ್ಸೆಪ್ಟ್ ಇದೆಯಲ್ಲ! ಅದು ಅದ್ಭುತ! ಬದುಕಲ್ಲಿ ಹಾಗೆ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಮಾಡುತ್ತ ಹೋದರೆ ಸಂಬಂಧಗಳು ಕರಕಲಾಗುವುದು ತಪ್ಪುತ್ತದೆ! ಸಮಾಜ ಸ್ವಸ್ಥವಾಗುತ್ತದೆ! ತಪ್ಪುಗಳನ್ನು ಒಪ್ಪಿಕೊಂಡಾಕ್ಷಣ ಅದನ್ನು ತಿದ್ದಿಕೊಳ್ಳುವ ಹೊಣೆಗಾರಿಕೆ ಕೂಡ ಶುರುವಾಗುತ್ತದೆ.  ಸುತ್ತಲು ಗಮನಿಸುವ ನೂರು ಕಣ್ಣುಗಳು ಮತ್ತು ನಮ್ಮನ್ನು ನಾವು
ತಿದ್ದಿಕೊಳ್ಳಬೇಕೆಂಬ ಚಿಕ್ಕ ಸಂಕಲ್ಪ ಮನುಷ್ಯನಿಗೆ ಯಾವ ಗುರು, ದೇವರು, ಹಾಗೂ ಶಿಕ್ಷಣ ಕೊಡದ ಆತ್ಮಿಕ ಶಕ್ತಿಯನ್ನು ನೀಡುತ್ತದೆ.  ಹಾಗಾಗಿ ಬದಲಾವಣೆಗೆ ಬದುಕಿನ ವಿಶಾಲತೆಗೆ ಮನಸು ತೆರೆದುಕೊಳ್ಳುತ್ತದೆ.

    ಅಂತರಾಳದ ಒಳಗಿಂದ ಒಮ್ಮೊಮ್ಮೆ ಸ್ಪುರಿಸುವ ಭಾವಸ್ಪುರಣಗಳಿಗೆ ಕಾರಣಗಳು ದೊಡ್ಡವಲ್ಲ. ಆದರೆ ಅದು ಕೊಡುವ ಆನಂದ ದೊಡ್ಡದು! ಆನಂದವೆಂಬುದು ಮನುಷ್ಯ ಸಹಜತೆಗಳಲ್ಲಿ ಒಂದು. ಹಾಗಿದ್ದೂ ಆನಂದದ ಬೆನ್ನು ಬೀಳಬಾರದಲ್ಲ! ಮನಸ್ಯಾಕೋ ಇತ್ತೀಚೆಗೆ ಈ ಆನಂದವೆಂಬ ನಿಜಕ್ಕು, ಆನಂದ ಸ್ವರೂಪಕ್ಕೂ ಮತ್ತೆ ಆನಂದವೆಂಬ ಮರೀಚಿಕೆಗೂ ನಡುವೆ ತೂಗಾಡುತ್ತಿದೆ. ಸತ್ಯವೆಂದರೆ ಆನಂದದ ಅಪೇಕ್ಷೆ ಸ್ವಾರ್ಥದ ರೂಪವೇ ಆಗಿದ್ದರೂ ಅಷ್ಟರಮಟ್ಟಿನ ಸ್ವಾರ್ಥ ಅಪೇಕ್ಷಣೀಯ ಅಲ್ಲವಾ? ಮನುಷ್ಯ ಆನಂದ ವೆಂಬುದು ಎಲ್ಲಿದೆ ಅಂತ ಹುಡುಕುವಾಗೆಲ್ಲ ನಿಜವಾದ ಆನಂದದ ಬೆನ್ನುಬೀಳುತ್ತೇನೆ! ಪೃಕೃತಿಯ ಸಹಜತೆಗಳಿಗಿರುವ ದಿವ್ಯಾನಂದ ಅದರ ಅನುಭೂತಿ ಬೇರೆಯೇ.. ಹಾಗಿದ್ದು ಅದನ್ನು ಹಂಚಿಕೊಳ್ಳುವ ಮನಸೊಂದಿಲ್ಲದಿದ್ದರೆ  ಆನಂದದ ಅನುಭೂತಿ ಮರುಕ್ಷಣವೇ ಒಂಟಿತನವನ್ನು ಬಾಧಿಸುತ್ತದೆ! ಹಾಗಿದ್ದರೆ ಆನಂದವೆಂಬುದು ಮನಸುಗಳ ಸಾಮಿಪ್ಯದಲ್ಲಿ ಮಾತ್ರ ಸಿಗುವ ಭೌತಿಕವೇ? ಈ ಪ್ರಶ್ನೆ ಏಳುತ್ತಿದ್ದಂತೆ ಮನುಷ್ಯ  ಸದಾ ಮತ್ತನಾಗಲು ಬಯಸುವುದೇ ಆನಂದ ಅಂದುಕೊಂಡಿದ್ದಾನೆಂಬ  ಮಾತು ಕಾಡುತ್ತದೆ! ಅದು ಅರ್ಥ, ಕಾಮ, ಮೋಹ,ಅಧಿಕಾರ, ಮದಿರೆ ಯಾವುದೂ ಇರಬಹುದು! ಇವತ್ತು ಪ್ರಪಂಚವೇ ಈ ಆನಂದಗಳ ಹೊಂದಲು ಬಯಸುವ ಧಾವಂತಕ್ಕೆ ಬಿದ್ದಿದೆ! ಇದರ ಮಧ್ಯೆ ಪ್ರಜ್ಞೆಯೆಂಬ ಮತ್ತೊಂದು   ಆನಂದವಿದೆ! ಪ್ರಜ್ಞಾಪೂರ್ವಕ ಸಾಧಿಸಿಕೊಳ್ಳುವ, ಪ್ರೀತಿಸಿಕೊಳ್ಳುವ ಅಲೌಕಿಕ ಆನಂದದ ಬೆಳಕೊಂದಿದೆ! ಅದನ್ನು ಹುಡುಕುವ ಪ್ರಯತ್ನವಷ್ಟೆ! ನಮ್ಮಂತ ಸಾಮಾನ್ಯರಿಗೆ ಅದು ನಿಲುಕುವುದಲ್ಲ! ಇಂತೆಲ್ಲ ಯೋಚನೆಗಿಳಿಯುವ ಮನಸಿನ ವೈಚಾರಿಕ ಪ್ರಪಂಚಕ್ಕೆ ಎಷ್ಟೊಂದು ತಿರುವುಗಳಿವೆ! ಅಂತದ್ದೇ ಮತ್ತೊಂದು ತಿರುವಿನಲ್ಲಿ ಮತ್ತೊಂದಿಷ್ಟು ಮಾತು....

   ಮೊನ್ನೆ ಒಬ್ಬಳು ಗೆಳತಿ ಹೇಳುತ್ತಿದ್ದಳು! ನಿನ್ನ ಇತ್ತೀಚೆಗಿನ ಮಾತು ವೈಚಾರಿಕವಾಗ್ತಿದೆಯೇ.. ಹೃದ್ಯವಾಗ್ತಿಲ್ಲ! ಅಂತ. ನಿಜ. ಕೆಲವು ಸಲ ಬದುಕು ಏನನ್ನು ಹೇಳುತ್ತದೆಯೋ ಅದನ್ನೇ ಮಾತನಾಡುವ ಹೊತ್ತಿಗೆ ಅದೊಂದಿಷ್ಟು ರಸವಿಲ್ಲದ ಮಾತುಗಳಾಗಿಬಿಡುತ್ತವೆಯೇನೋ.. ಹಾಗೆ ಪ್ರತಿ ಬಾರಿ ಮನಸಿನೊಂದಿಗೆ ಮಾತಿಗೆ ಕೂತಾಗಲೂ  ನಾನು ಬಯಸುವುದು ಮನಸಿನ ಮಾತು ಹೃದಯಕ್ಕಿಳಿಯೆಂಬ ಬಯಕೆಯಿಂದಲೇ.. ಆದರೆ ಹಾಗಾಗುವುದಿಲ್ಲ. ಸಹಜತೆಯೆಂದರೆ ಇದೇ ಇರಬಹುದು.. ಜೀವಿಸುವ ಸರಳತೆಯನ್ನೇ ಮನಸಿನೊಂದಿಗೆ ಹಂಚಿಕೊಳ್ಳುವ ಕನಸು ನನ್ನದು. ಒಮ್ಮೆ ಹಾಗೆ ಒಮ್ಮೆ ಹೀಗೆ...

  ಮುಂದ್ಯಾಕೋ ಮಾತುಗಳು ತೋಚುತ್ತಿಲ್ಲ.ಒಂದಷ್ಟು ಕ್ಷಣಗಳ ಕಾಲ ಮೌನ ಮೌನ ಮೌನವೆಂಬ ಮಾತಿಲ್ಲದ ಮನೆಯೊಳಗೆ.. ನೆಲೆಯಾಗಲಿ ಆತ್ಮದರಿವು ಬೆಳಕಾಗಲಿ ಎಲ್ಲ ಕಡೆಗೆ..
ಒಂದು ಪುಟ್ಟ ವಿರಾಮಕ್ಕೆ ಅನುಮತಿ ಕೋರುತ್ತ..




           





       


       





Tuesday, March 12, 2013

ಬರೆಯಲೇಬೇಕೆ ಈ ಬಯಲದಾರಿ?


         ಬರೆಯಲೇಬೇಕೆ ಈ ಬಯಲದಾರಿ?
       


               ತಿಂಗಳ ಹಿಂದೆ ಬರೆಯಬೇಕಾಗಿತ್ತು ನಾನಿದನ್ನು! ಇಂದು ಆರಂಭಿಸಿದ್ದೇನೆ. ಅಂದರೆ ಸಂಕಲ್ಪಗಳು ನಮ್ಮವೇ  ಎಂದು ನಾವಂದುಕೊಳ್ಳುತ್ತೇವೆ! ಭಗವಂತನ ಸಂಕಲ್ಪ ಬೇರೆಯೇ ಇದ್ದರೆ ನಮ್ಮ ಸಂಕಲ್ಪಗಳೆಲ್ಲ ತಿರುಮುರುಗಾಗಲು ಅದೆಷ್ಟು ಹೊತ್ತು! ಕ್ಷಣ ಮಾತ್ರ ಸಾಕು! ನಿರೀಕ್ಷೆಯಿಲ್ಲದ ಒಂದು ಪುಟ್ಟ ಘಟನೆ ಎಷ್ಟೋ  ಮಾನವ ಸಂಕಲ್ಪಗಳನ್ನು ಹಿಂದೆ ಮುಂದಾಗಿಸಿದ್ದ ಕಾಣುತ್ತೇವೆ! ಹಾಗಿದ್ದೂ ನಮ್ಮದೇ ಸಂಕಲ್ಪ ಬಲದಿಂದಲೇ ಬದುಕುತ್ತೇವೆಂದು ನಂಬುತ್ತೇವೆ! ಎಲ್ಲ ನಿಮಿತ್ತ ಮಾತ್ರವಾದರೆ ಈ ಬರಹ ಕೂಡ ಒಂದು ನಿಮಿತ್ತ. ಇದರ ಹಿಂದೆ ಮಹಾ ಸಾಧನೆಯ ಉದ್ದೇಶಗಳಿಲ್ಲ. ಸುಮ್ಮನೆ ಹೇಳಿಕೊಳ್ಳುವ ತವಕವೊಂದಿದೆ. ಅದು ನಿನ್ನ ತಲುಪಿ ಪುಟ್ಟದೊಂದು ಸ್ಪಂದನೆಯ ಅಲೆ ಹುಟ್ಟಿಸುವುದೆಂಬ ವಿಶ್ವಾಸವೊಂದಿದೆ. ಅಂತದ್ದೇ ವಿಶ್ವಾಸಗಳ, ತವಕಗಳ, ಬೆರಗು ಬಿನ್ನಾಣಗಳ ಕೊಡು ಕೊಳ್ಳುವಿಕೆಯೇ ಸಾಹಿತ್ಯ ನಿಮರ್ಾಣದ ಪರಮೋದ್ದೇಶ. ಬಹುಶಃ ದೊಡ್ಡ ದೊಡ್ಡ ಮಹಾ ಕಾವ್ಯಗಳೂ ಹುಟ್ಟುವಾಗಲು ಅವು ಮಹಾಕಾವ್ಯಗಳಾಗಬೇಕೆಂದೇ ಹುಟ್ಟಿದವಲ್ಲ. ಅವೆಲ್ಲ ಶಾರದೆಯ ನಿಮಿತ್ತ ಮಾತ್ರದ ಕೂಸುಗಳು. ಕವಿ ಸೃಷ್ಟಿ ಕೇವಲ ಭಾಷೆಗಿಟ್ಟ ಬಣ್ಣಗಳಲ್ಲ. ಭಾವಗಳಲ್ಲಿ ಕುಣಿದಾಡಿದ ಆ ದೇವನ ನೃತ್ಯಭಂಗಿಗಳು! ಅವನನ್ನು ಸೃಷ್ಟಿಸುವ ಎಲ್ಲ ಪ್ರತಿಭೆಗೆ ಆ ಪ್ರತಿಭೆಯ ಸದುದ್ದೇಶಗೊಳಿಸಿಕೊಳ್ಳುವ ಅವನ ಶ್ರಮಕ್ಕೆ. ಅದಕ್ಕೆ ಪೂರಕವಾದ ವಾತಾವರಣ, ಸಮಾಜ, ಮನಸುಗಳ ಕಟ್ಟಿಕೊಡುವ ಬದುಕಿಗೆ ಎಲ್ಲಕ್ಕು ಋಣಿ ಒಂದು ಶ್ರೇಷ್ಟ ಕೃತಿ. ಹಾಗಿದ್ದಮೇಲೆ  ನಾನು ಬರೆಯುತ್ತೇನೆನ್ನುವುದಕ್ಕಿಂತ ಅವಳು ಬರೆಸುತ್ತಾಳೆನ್ನುವುದು ಸರಿ ಎಂದು ತೋರುತ್ತಿದೆ ನನಗೆ. ನಿನಗೆ?



      ಒಂದು ಅದಮ್ಯ ಉತ್ಸಾಹದೊಂದಿಗೆ ಆರಂಭಿಸಬೇಕಿದ್ದ ಬರಹ ಒಂದು ವಿಷಾದನಿಟ್ಟುಸಿರಿನೊಂದಿಗೆ ಕೂಡಿಕೊಂಡು ಹೊಸದೊಂದು ಹುಟ್ಟಿಗೆ ಕಾರಣವಾಗಿ ಬದಲಾಗಲು ಎಷ್ಟು ಹೊತ್ತು ಬೇಕು?  ಮನಸ್ಸಿನ ಭಾವಗಳಿಗೆ ಬದಲಾಗಲು ಕ್ಷಣಕಾಲ ಸಾಕು. ಅದರ ಗತಿ ಹಿಂದು ಮುಂದಾಗಲು  ಬರಹ ಕೂಡ ಬೇರೆಯದೇ ರೂಪ ಪಡೆದುಕೊಳ್ಳುವುದು ಸತ್ಯ.
ಹಾಗಿದ್ದೂ ಬರಹಕ್ಕೊಂದು ನಿದರ್ಿಷ್ಟ ಚೌಕಟ್ಟಿದೆ. ಪ್ರಾಮಾಣಿಕತೆಯಿದೆ.  ಬರೆಯುವವನ ಮನಸಿನಲ್ಲಿ ಹೇಳುವ ತವಕವಿದೆ, ಅ ತವಕಕ್ಕೆ ಸಾಂದಭರ್ಿಕ ಹಾಗೂ ಶಕ್ತ ಭಾಷೆಯ ರೂಪ ಕೊಡುವಲ್ಲಿ ಬಹುಶಃ ಬಹಳಷ್ಟು ಜನ ಕವಿಗಳು ಸೋಲುತ್ತಾರೆ! ಮತ್ತೆ ಅಂತಹ ಸೋಲನ್ನು ಗೆದ್ದು ಓದು, ಅಧ್ಯಯನ, ತಾದಾತ್ಮ್ಯ ಹಾಗೂ ಶೃದ್ಧೆಗಳ ರೂಢಿಸಿಕೊಂಡ ಕೆಲವರಷ್ಟೆ
ದಿಗ್ಗಜರೆನಿಸಿಕೊಳ್ಳುತ್ತಾರೆ! ಅದಕ್ಕೆಂದೆ ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಕುವೆಂಪು, ಒಬ್ಬ ಬೇಂದ್ರೆ, ಒಬ್ಬರು ಭೈರಪ್ಪ  ಎಲ್ಲರೂ ಒಬ್ಬೊಬ್ಬರೇ ಉಳಿಯುತ್ತಾರೆ! ಬರೆದವರೆಲ್ಲ ಕಾರಂತರೋ
ಅಡಿಗರೋ ಆಗುವುದಾದರೆ ಸಾಹಿತ್ಯಕ್ಕೊಂದು ಮೌಲ್ಯ ಉಳಿದುಕೊಳ್ಳುತ್ತಿರಲಿಲ್ಲ. ಹಾಗಂತ ಬರೆದವರನ್ನೆಲ್ಲ ನಾವು ದೂಡಿ ಬಿಡಲಾಗದು! ಇಂದಿಗೂ ಕಾವ್ಯ ಪ್ರಪಂಚದ ಪುಟ್ಟ ಆಶುಕವಿತೆಗಳ ಸೃಷ್ಟಿಯಲ್ಲಿ ತೊಡಗಿರುವ ಈ  ಭಾವುಕ ಮನಸುಗಳೇ ನಮ್ಮ ಸಾಹಿತ್ಯಾಭಿಮಾನಿಗಳು. ಮತ್ತು ಸಾಹಿತ್ಯವನ್ನು ಪ್ರೀತಿಯಿಂದ ಓದುವ ಜನಸಾಮಾನ್ಯರು. ಅವರೆದೆಗೆ ತಟ್ಟುವ
ಕಾವ್ಯಗಳ ಸರಳತೆ ಜನಪದದಷ್ಟು ಪ್ರಿಯವಾಗುತ್ತದೆ.  ವೇದಾಂತಗಳೆಲ್ಲ ಪುಟ್ಟ ಜೀವನ ಪಾಠದಲ್ಲಿ ಸೇರಿಕೊಳ್ಳುತ್ತ ಮನೆಮನೆಯ ಅಮ್ಮಂದಿರ ಹಾಡುಗಳಾಗುತ್ತವೆ. ಯಾರಿಗೋಸ್ಕರ ಬರೆಯಬೇಕು? ಯಾವ ಸಾಧನೆಗೋಸ್ಕರ ಯಾವ ಪದವಿ ಪ್ರಚಂಡಗಳಿಗೋಸ್ಕರ ಬರೆಯಬೇಕೆಂಬ ಮನಸ್ಸಿಗೆ ಉತ್ತರ ಹೇಳುತ್ತದೆ. ನಾನಂತು ಎಲ್ಲರಿಗಾಗಿ ಬರೆಯುವುದಿಲ್ಲ. ಬರೆದದ್ದರಲ್ಲಿ ಒಂದು ಸಾಲು ಎಲ್ಲೋ ಒಂದು ಮನಸಿನ ಸಣ್ಣ ಪದರವನ್ನು ಸ್ಪಷರ್ಿಸಿ ಹೋದರೂ ಸಾರ್ಥಕವೆಂಬ ತೃಪ್ತಿಗೋಸ್ಕರ ಬರೆದುಕೊಳ್ಳುತ್ತೇನೆ.  ಇದು ಸರಿಯಾ ತಪ್ಪಾ ನಿರ್ಣಯಿಸಿಕೊಳ್ಳಲು ಕಾಲವೇ ಉತ್ತರವಾಗಬೇಕು!

       


           ಪ್ರತಿ ಕ್ಷಣ ಕೂಡ ಇಲ್ಲಿ ಬದಲಾಗುವ ಜೀವಂತಿಕೆಯ ಹೇಳುವ ಪಾಠ. ನಿನ್ನೆಯ ನಮ್ಮದೇ ಬಾಲಿಶ ಕವಿತೆಗಳ ಕಂಡು ನಗುವ ನಾವು ಪದಪುಂಜಗಳ ಸಾಮ್ರಾಜ್ಯಕಟ್ಟಿಕೊಂಡರೂ ಮತ್ತೆ  ಬಾಲಿಶವಾಗದಿದ್ದರೆ ಬಾಲ್ಯವನ್ನು ಬರೆಯಲಾರೆವು! ಒಂದು ದೀರ್ಘ  ಕಾದಂಬರಿಯನ್ನೋ ಕಥೆ, ಕವಿತೆ ಏನನ್ನೇ ತೆಗೆದುಕೊಂಡರೂ ಒಂದು ಬಾಲ್ಯದ ಚಿತ್ರಣವಾಗಬೇಕಾದರೆ ಮತ್ತೆ ಸಾಹಿತಿ ಅಂತ ಬಾಲ್ಯವನ್ನು ಅನುಭವಿಸಿ ಸೃಜಿಸುತ್ತಾನೆ! ಹಾಗೇ ಪ್ರೇಮ ಪ್ರಣಯಗಳು ಒಂದು ವಯಸ್ಸನ್ನು ದಾಟುತ್ತಿರುವಂತೆ ಗಂಭೀರತೆಯನ್ನು ಪಡೆದುಕೊಂಡು ಹುಡುಗಾಟ ಅನ್ನಿಸಿಕೊಂಡುಬಿಡುತ್ತವೆ. ಸತ್ಯವದು ಕಾಲಕ್ಕೆ. ಹಾಗಂತ ಕವಿ ಹರಯವನ್ನು ಗಂಭೀರ ವೇದಾಂತಿಯನ್ನಾಗಿಸಲಾರ. ಕವಿತನಕ್ಕೆ ಎಷ್ಟೇ ವಯಸ್ಸಾದರೂ ಹಾಗೆ ಹರಯವನ್ನು ಪ್ರೇಮ ಹುಡುಗಾಟಗಳನ್ನು ಸೃಜಿಸುವ ಶಕ್ತಿಯಿದ್ದೇ ಇದೆ. ಅದಕ್ಕೆಂದೇ  ಸಮಯ ನಮ್ಮನ್ನು ಎಷ್ಟೇ ಬೆಳೆಸಿದರೂ ಮನಸ್ಸನ್ನು ಎಲ್ಲ ವಯಸ್ಸಿಗೂ ಎಲ್ಲ ಕ್ಷಣಗಳಿಗೂ  ಸ್ಪಂದಿಸುವ ಆರ್ದತೆಯನ್ನು ಉಳಿಸಿಕೊಳ್ಳುವುದು ಬಹುಶಃ ಕವಿಮನಸ್ಸಿಗಷ್ಟೇ ಸಾಧ್ಯವೆನ್ನಿಸತ್ತದೆ ನನಗೆ. ಹಾಗಾಗಿ ಸಹೃದಯರೆಲ್ಲರು ಕವಿಗಳಾಗುತ್ತಾರೆ!
 ಸಾಹಿತ್ಯಪ್ರಿಯರಾಗುತ್ತಾರೆ!  ಅಲ್ಲಿ ಗುಣಮಟ್ಟಗಳ ನಿರ್ದರಿಸುವುದು ಕಾಲವೇ ಹೊರತು ಮನುಷ್ಯ ಮಾತ್ರ  ಆಗಲಾರದು.  ಬರೆಯುವ ಮೊದಲು ಯೋಚಿಸುವ ಬದ್ಧತೆ, ಅದಕ್ಕಿಂತ ಹೆಚ್ಚಿನದಾಗಿ ಬರೆದದ್ದೆಲ್ಲ ಸಾಹಿತ್ಯವಾಗಲಾರದೆಂಬ ಎಚ್ಚರ, ಕಾಲ ದೇಶ ಸಮಯಗಳ ಪ್ರಜ್ಞೆ,  ಭಾಷೆಯ ಮೇಲಿನ ಗೌರವ, ಅಧ್ಯಯನದ ಅಗತ್ಯ, ಇವೆಲ್ಲವನ್ನು
ಎಚ್ಚರದಲ್ಲಿಟ್ಟುಕೊಂಡು  ಬರೆಯುವ ಅನುಭವಗಳಿರಲಿ ಕಲ್ಪನೆಗಳಿರಲಿ ಅದು  ಸಾಹಿತ್ಯ ಪ್ರಪಂಚದಲ್ಲಿ ನೆಲೆಗೊಳ್ಳಲು ಅರ್ಹತೆ ಪಡೆದುಕೊಳ್ಳುತ್ತದೆ.  ಒಮ್ಮೆ ಯಾರೋ ಹಿರಿಯರೊಬ್ಬರು ಹೇಳಿದ್ದು ಇಲ್ಲಿ ನೆನಪಾಗುತ್ತದೆ. ನೃತ್ಯ, ಸಂಗೀತ, ಇತ್ಯಾದಿ ಲಲಿತಕಲೆಗಳ ಪ್ರದರ್ಶನಕ್ಕಿಡುವವಾಗ ಅದಕ್ಕೆ ತಕ್ಕಷ್ಟು ಅವರು ಅಭ್ಯಾಸ ಮಾಡಬೇಕಾಗುತ್ತದೆ. ಹಾಗೂ ಅಂತ ಶ್ರೇಷ್ಟ ಗುರುಗಳ ಮಾರ್ಗದರ್ಶನದಲ್ಲಿ ಇವು ಜನರೆದುರು ಪ್ರದರ್ಶನಗೊಳ್ಳುತ್ತವೆ. ಸಾಹಿತ್ಯದಲ್ಲಿ ಮಾತ್ರ  ಹಾಗಿಲ್ಲ. ಯಾರು ಬೇಕಾದರು ಪುಸ್ತಕ ಮಾಡುತ್ತಾರೆ. ಏನು ಬರೆದರೂ ನಡೆಯುತ್ತದೆ. ಇಲ್ಲೊಂದು ನಿದರ್ಿಷ್ಟ ಮಾನದಂಡವಿಲ್ಲ ಎಂದು ಅವರು ಹೇಳುತ್ತಿದ್ದದ್ದು ಅರ್ಧದಷ್ಟು ಸತ್ಯವೆನ್ನಿಸದರೂ ಮತ್ತಷ್ಟು ವಿಚಾರ ಮಾಡುವಾಗ ಹಾಗೊಂದುವೇಳೆ ವಿದ್ಯೆ ಡಿಗ್ರಿಗಳೇ ಮಾನದಂಡಗಳಾದರೇ ಇಂದಿನ ಪಿ.ಎಚ್.ಡಿ ಪ್ರಬಂಧಗಳೆಲ್ಲ ಶ್ರೇಷ್ಟ ಸಾಹಿತ್ಯಗಳಾಗಬೇಕಿತ್ತಲ್ಲವಾ? ಅವರೆಲ್ಲ ದೊಡ್ಡ ಸಾಹಿತಿಗಳಾಗಬೇಕಿತ್ತಲ್ವ? ಇಲ್ಲ ಸಾಹಿತ್ಯ ಕೇವಲ ಅಧ್ಯಯನದ ಕೂಸಲ್ಲ. ಅದು ಹೃದಯದ ಕೂಸು. ಅದಕ್ಕೆಂದೇ ಜನಪದ ಕಾವ್ಯಗಳೂ. ಅನಾಮಿಕ ಸಾಹಿತ್ಯಗಳೂ ಎಷ್ಟೋ ಶತಮಾನಗಳಾಚೆಯೂ ಉಳಿದುಬಂದಿವೆ. ಉಳಿಯುತ್ತವೆ! ಹಾಗಾಗಿ ಕೇವಲ ಅಧ್ಯಯನಗಳಷ್ಟೇ ಸಾಹಿತ್ಯದ ಹೃದಯವಾಗಲಾರದೆಂಬುದು ಜೀವಂತ.



          ಅಧ್ಯಯನ ನಿರತ ಪತ್ರಿಕಾಕರ್ತರು ಎಷ್ಟೆಲ್ಲ ಜನರಿದ್ದಾರೆ! ಅವರೆಲ್ಲ ಈ ನಾಡಿನ ಜೀವಂತ ಪತ್ರಿಕೆಗಳ ಈ ಕ್ಷಣದ ಒಡನಾಡಿಗಳಾಗಿದ್ದಾರೆ! ಆದರೆ ಅವರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸಾಹಿತ್ಯಾಸಕ್ತರು, ಅಭಿಮಾನಿಗಳು, ಸಾಹಿತಿಗಳು ಇರಬಹುದಷ್ಟೆ. ಉಳಿದವರೆಲ್ಲ ವೃತ್ತಿನಿರತ ಬರಹಗಾರರಷ್ಟೇ... ಸಾಹಿತ್ಯದ ಹೃದಯಕ್ಕಿಳಿಯುವ ಚೇತನವೆಂಬುದು ಅದು ಬರೀ ಮನುಷ್ಯ ಪ್ರಯತ್ನವಷ್ಟೇ ಅಲ್ಲ. ಅದೇ ದೈವಪ್ರತಿಭೆ. ಅಂತಹ ಸಂಕಲ್ಪಗಳು ನಮ್ಮದಲ್ಲ. ದೈವ ಸಂಕಲ್ಪ. ಹಾಗಾಗಿ ಕೆಲವಷ್ಟು ವಿಚಾರಗಳ ಅನವಶ್ಯಕ ಚಿಂತಿಸುವುದನ್ನು ಬಿಟ್ಟುಬಿಡೋಣ. ನಾವು ನಿಮಿತ್ತಕಗಳು ಮಾತ್ರ ಎಂದುಕೊಂಡರೆ  ಮನಸು ಹಗುರ..... ಬರೆಯುವ ಮುನ್ನ ಶುದ್ಧ ಸಂಕಲ್ಪ ಮಾತ್ರ ನಮ್ಮದಾಗಿರಲಿ... ವಿಚಾರಗಳ ನೇರವಂತಿಕೆ, ಬದುಕಿನ ಅನುಭವಗಳ ಸತ್ವ, ವಿಷಯ ವಿಜ್ಞಾನಗಳ ತಿಳುವಳಿಕೆ, ಕಾಲ ದೇಶಗಳ ಪರಿವೆ... ಇವಿಷ್ಟು ನಮ್ಮ ಬರಹಗಳಿಗೆ ಸರಳತೆಯನ್ನು ತಂದುಕೊಡಲಿ.
ಉಳಿದದ್ದೆಲ್ಲ ಅವಳಿದ್ದಾಳೆ.. ಶಾರದೆಯ ಮಡಿಲಿಗೆ ಈ  ನುಡಿಕುಸುಮಗಳ ಅಪರ್ಿಸುತ್ತ  ಮಾನಸ ಸರೋವರದ ಈ ಪಯಣಕ್ಕೆ ಪುಟ್ಟ ವಿರಾಮ...





Wednesday, January 16, 2013

ಚೈತನ್ಯಶಿಲ್ಪಿಗೊಂದು ಮನದ ಪಾರಿಜಾತ...

ಚಿತ್ರ ಕೃಪೆ: ಅಂತರ್ಜಾಲ

ಮಾನಸ ಸರೋವರದ ಅಂಗಳದಲ್ಲಿ ಮತ್ತೊಮ್ಮೆ ಕೂತು ಮಾತನಾಡಲು ಇಷ್ಟೊಂದು ದಿನಗಳೇ ಬೇಕಾಯಿತು!
 ಭಾವಗಳ ಬದಿಗೊತ್ತಿ ಬದುಕ ಕಟ್ಟಲು ಹೊರಟ ದಿನಗಳಿವೆ ಎದುರು! ಸಮಯವೆಂಬುದು ಮಾಯೆಯೆ ಸರಿ! ಏನೆಲ್ಲ ನಡೆದಿದೆ
ಈ ಕೆಲವೇ ದಿನಗಳಲ್ಲಿ ಎಂದರೆ ಅದೊಂದು ವಿಸ್ಮಯವೇ ಸರಿ! ಮನಸು ಎಲ್ಲಿ ಮರೆತೆ ನೀನು ಎಂದು ನಿನ್ನೊಳಗೇ ನೀನು ಕ್ಷಣ ಒದ್ದಾಡಿರುವ ದಿನವೂ ಇರಬಹುದಲ್ಲವಾ? ಗೊತ್ತು ಅದೆಷ್ಟೋ ಕ್ಷಣಗಳಲ್ಲಿ ನನ್ನ ಭಾವಗಳ ಮುಖಕ್ಕೆ ರಾಚುವಂತೆ ನುಡಿಯುವ ನೀನೇ ಅಂತರಂಗದಲ್ಲಿ ಒಂದೊಂದು ಕ್ಷಣವಾದರೂ ನನ್ನ ನಿರ್ಲಕ್ಷ್ಯಕ್ಕೆ ನೋಯದಿರದೇ ಉಳಿಯುವುದಿಲ್ಲ! ಯಾಕೆಂದರೆ ನನ್ನ ಮನಸು ಹೇಗೆಂಬುದು ನನಗಲ್ಲದೇ ಇನ್ಯಾರಿಗೆ ಅರಿವಾಗಲು ಸಾಧ್ಯ ಅಲ್ಲವಾ? ಆದರೆ ಎಲ್ಲವನ್ನೂ ಪ್ರಶ್ನಿಸದೇ ನುಂಗಿಕೊಳ್ಳುವ ಬುದ್ದಿವಂತರ ಸಾಲಿಗೆ ಸೇರಿಬಿಟ್ಟಿದ್ದೆವೆ ನಾವು! ನಮ್ಮದು ಪ್ರೌಢ ಸ್ನೇಹ! ಅಲ್ಲಿ ಭಾವಗಳಿಗೆ ಸಹಜತೆಗೆ ನಿರ್ವಹಣೆಯ ಪಣವಿದೆ! ನಿರ್ವಹಣೆಯನ್ನು ಕಲಿತಿದ್ದೇವೆ ಎಂಬುದು ಈ ಕ್ಷಣಕ್ಕೆ ಹೆಮ್ಮೆಪಡಬೇಕೋ ಅಷ್ಟರ ಮತ್ತಿಗೆ ಭಾವಗಳ ಹಂಚಿಕೊಳ್ಳುವ ಮನಸ್ಥಿತಿಯ  ಕಳೆದುಕೊಂಡೆವೆಂದು ಖೇದಪಡಬೇಕೋ ತಿಳಿಯದಾಗಿದೆ! ಹಾಗಿದ್ದೂ ಸಹ ಹೀಗೆ ಈ ಮಾನಸ ಸರೋವರದ ಅಂಚಿನಲ್ಲಿ ನಾನು ಮತ್ತೆ ಕುಳಿತಿದ್ದೇನೆಂದರೆ ಈ ಮನಸು ಮತ್ತು ಮನದ ನಡುವಿನ ಬಾಂಧವ್ಯ ಅದೆಷ್ಟು ಗಟ್ಟಿಯಾಗಿದ್ದಿರಬೇಕು!ಅದೊಂದು ಅವಿನಾಭಾವವೆಂಬುದು ನಿರ್ವಿವಾದ!


       ಇತ್ತೀಚೆಗೆ ತುಂಬ ಕೆಲಸದ ಒತ್ತಡದಲ್ಲೂ ಬರೆಯಬೇಕೆನ್ನಿಸುತ್ತದೆ! ಸುಮ್ಮನೇ ಕುಳಿತಾಗ ಹಾಡಬೇಕೆನ್ನಿಸುತ್ತದೆ! ಪೃಕೃತಿಯ ಎಲ್ಲೋ ಅಪರೂಪಕ್ಕೆ ಕಂಡಂತೆ ಸಂಭ್ರಮಿಸುತ್ತೇನೆ. ಲವಲವಿಕೆ, ಚೈತನ್ಯ ನನ್ನೊಳಗೆ ಸದಾ ಗುನುಗುತ್ತದೆ!  ಈ ಬೆಳಿಗ್ಗೆ ಬಸ್ ಪ್ರಯಾಣ ನನ್ನ ಇಂತಹ  ಅನೇಕ ಯೋಚನೆಗಳ ಮರುನವೀಕರಣಕ್ಕೆ ಸಾಕ್ಷಿಯಾಯಿತು! ಉದಯಿಸುತ್ತಿರುವ ಸೂರ್ಯ ಮಂಜಿನ ಬೆಟ್ಟಗಳ ಸೀಳಿ ನನ್ನತ್ತಲೇ ಧಾವಿಸುತ್ತಿದ್ದಾನೇನೋ ಎಂಬಂತ ಸಂಭ್ರಮವದು! ಅಂತಹ ಮನಸ್ಥಿತಿಯ  ಹಂಚಿಕೊಳ್ಳಲು ಈ ಮಾನಸಸರೋವರವೊಂದೇ ಅಲ್ಲವಾ ಸರಿಯಾದ ತಾಣ?

             ಇತ್ತೀಚೆಗೆ  ಬದುಕು ವಿಸ್ತಾರವಾಗುತ್ತಿದ್ದಂತೆ ಯಾವುದ್ಯಾವುದೋ ಕಾರಣಕ್ಕೆ ಯಾರ್ಯಾರೋ ಪರಿಚಯವಾಗುತ್ತಾರೆ! ಸ್ನೇಹವಾಗುತ್ತದೆ! ಮಾತು ಕತೆ ಬೆಳೆದಂತೆ  ಎಲ್ಲೋ ಅಟ್ಯಾಚ್ಮೆಂಟ್ ಕೂಡ  ಗೊತ್ತಿಲ್ಲದೇ ಬೆಳೆದುಕೊಂಡಿರುತ್ತದೆ. ಹಾಗೆ ಆರಂಭವಾದ ಸ್ನೇಹಕ್ಕೆ ಅರ್ಥ ಹಚ್ಚುವ ಪ್ರಯತ್ನವೇ ಇರದಿದ್ದರೂ ಮನುಷ್ಯ ವ್ಯಕ್ತಿತ್ವಗಳಿಂದ,  ವರ್ತನೆಗಳಿಂದ, ಎಲ್ಲೋ ನಮ್ಮಂತವರಿಗೆ ಅಂಟಿಕೊಳ್ಳುವ ಬಾಂಧವ್ಯಗಳೂ ಜಾಸ್ತಿಯಾಗಿಬಿಡುತ್ತದೆ!
ಹಾಗೇ ಹಾಗೇ  ಅದೆಷ್ಟೋ ಜನ ನನ್ನಲ್ಲಿ ಕೇಳಿದ್ದಿದೆ! ನನಗೂ ಈ ಮಾನಸ ಸರೋವರದ ಮನಸಿನಂತಹ ಸ್ನೇಹ ಪ್ರೀತಿ ಕೊಡಬಲ್ಲೆಯಾ ನೀನು ಅಂತ! ಯಾಕೆ ಹಾಗನ್ನಿಸುತ್ತದೆ!
   ಸಾವಿರ ಬಾರಿ ಯೋಚಿಸಿದ್ದೇನೆ! ಮನಸು ಇದು ಮನಸಿಗೆ ಮಾತ್ರ ಸಾಧ್ಯವಾದ ಪ್ರೀತಿ! ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಪ್ರೀತಿಯಲ್ಲ! ಹೇಳಬೇಕೆಂದರೆ ಯಾರಿಗಾದರೂ ಅರ್ಥ ಹೇಳಲಾರದ ಒಂದು ಬಾಂಧವ್ಯವಿದು ನನ್ನ ಮಟ್ಟಿಗೆ!  ಯೋಚಿಸಿದ್ದೇನೆ.... ನಿನ್ನ ಬದುಕಿಗೆ ಬೆಳಕು ಕೊಡುತ್ತೇನೆ ಅಂತ ಬರುವವರು ಸಹ ಉರಿಯುವ ಹಣತೆಯಾಗಬಹುದು.
ದೀಪವಾಗಿ ಬೆಳಕ ಕೊಡಬಹುದು. ಇಲ್ಲ ಅನ್ನುವುದಿಲ್ಲ. ಆದರೆ ನೀ ನನ್ನ ಬದುಕಿಗೆ ಸೂರ್ಯನ ಹಾಗೆ! ಬೆಳಕೇ ನೀನು.. ನೀನಿದ್ದಲ್ಲಿ ಕತ್ತಲೆಯಿಲ್ಲ. ರಾತ್ರಿಯೆಲ್ಲ ಬೆಳದಿಂಗಳಾಗಿ, ಹಗಲೆಲ್ಲ ಬೆಳಕಾಗಿ ಒಳಗಡಲ ತುಂಬ ಆವರಿಸಿಕೊಂಡಿರುವ ಈ ಪ್ರೀತಿಗೆ ಯಾರಿಗೆ ಹೇಗೆ ಅರ್ಥ ಹೇಳಲಿ? ಜೀವ ಭಾವದ ಉಸಿರಾಗಿರುವ ಒಲವಿಗೆ  ಒಂದು ರೂಪವನ್ನು ಎಲ್ಲಿಂದ ತರಲಿ? ಒಂದು ಕಾಲದಲ್ಲಿ ಪ್ರೀತಿಯೆಂಬುದು ನನ್ನೊಳಗೇ ಹರಿವ ನದಿಯಾಗಬೇಕು ಕಡಲಾಗಬೇಕು! ಪ್ರೀತಿಯಿಂದ ಏನೂ ನಿರೀಕ್ಷಿಸದೇ ಸುಮ್ಮನೇ ನಿಲ್ಲಬಲ್ಲ ಹಿಮವಾಗಬೇಕು ಅಂದುಕೊಂಡ ಕ್ಷಣಗಳನ್ನೇ ಭಗವತಿ ಇವತ್ತಿಗೆ ಸಾಕ್ಷಾತ್ಕರಿಸುತ್ತಿದ್ದಾಳೆ! ಎಲ್ಲ ಸಂಕಟಗಳು ಇದಕ್ಕೆ ಅರ್ಘ್ಯವಷ್ಟೇ.. ತಪದ ಕುದಿತದಲ್ಲಿ ಮತ್ತೆ ಮತ್ತೆ ಅಪರಂಜಿಯಾಗಿಸುವ ಸಂಕಲ್ಪ ಅವಳದ್ದಾದರೆ ಅದಕ್ಕೆನ್ನ ಸ್ವೀಕೃತಿಯಿದೆ! ಇಷ್ಟೆಲ್ಲ ಯಾಕೆ ಹೇಳಬೇಕೆನ್ನಿಸಿದೆಯೆಂದರೆ  ಮತ್ತೆಮತ್ತೆ ನಿನಗೆ ನಾನು, ನನ್ನ ವರ್ತನೆ, ನನ್ನ ವಿಚಾರಗಳು, ಭಾವಗಳು ಎಲ್ಲವೂ
ಪ್ರಶ್ನೆಯಾಗಿಬಿಡುತ್ತವಾ? ನಾನೊಬ್ಬಳು ಅವಿವೇಕಿಯಾಗಿ, ನನ್ನ  ನಡೆನುಡಿಗಳು ನಿಂಗೆ ವಿಶ್ವಾಸಕೊಡುವಲ್ಲಿ ಸೋತು ಹೋದವಾ? ಒಮ್ಮೊಮ್ಮೆ ಕಾಡುತ್ತವೆ ನನ್ನನ್ನೂ.....


             ಸ್ನೇಹೀ ಮನಸೇ.... ಅದೆಷ್ಟೋ ತಿಂಗಳು ಒಡನಾಡಿದ ಬಾಂಧವ್ಯವೊಂದು ಕೇಳೀತು! ನಾನಿಲ್ಲದಿರೆ ನಿನಗೆ ಏನನ್ನಿಸಿತು? ನನ್ನ ಇಲ್ಲದಿರುವಿಕೆ ನಿನ್ನಲ್ಲಿ ಕಂಪನವ ತರಲಿಲ್ಲವಾ? ಅಂತ. ಹಾಂ ಮನಸು ಹೇಳೀತು ಹೌದು ಗೆಳೆಯ ತುಂಬಾ ಮಿಸ್ ಮಾಡ್ಕೊಂಡೆ ನಿನ್ನ ಅಂತ. ನಿಜವೇ... ಹಾಗಿದ್ದರೆ ನಿನ್ನ ಮನಸಿಗಿಂತ ನಿನ್ನ ತುಂಬಾ ನಾನಿದ್ದೇನೆ!
ಅಂತ ಹೇಳಿದ ಗೆಳೆಯನಿಗೆ  ವಿವರಿಸದೇ ಬಂದುಬಿಟ್ಟೆ! ಯಾಕೆಂದರೆ ಎಲ್ಲ ಸತ್ಯಗಳ ಆಚೆ  ಯೋಚನೆ ಮಾಡುತ್ತಿದೆ ಮನಸು! ಯಾರಿಲ್ಲದಿರೆ ನನ್ನ ಆತ್ಮವಿಶ್ವಾಸದ ಒಡಲು ಕಂಪಿಸೀತು? ಯಾರಿಲ್ಲವೆಂದುಕೊಂಡ ಕ್ಷಣ ಯಾರಿಗೂ ಹೇಳದೇ ಕಂಬನಿ ಸುರಿದೀತು! ಯಾರಿಲ್ಲವೆಂಬುದು ನಿನ್ನಲ್ಲಿ ಕಂಬನಿಯ ಕವಿತೆ ಬರೆಸೀತು! ಯಾರಿಲ್ಲವೆಂಬುದು ನನ್ನ ಕತ್ತಲೆಯ ಕೂಪಕ್ಕೆ ತಳ್ಳೀತು! ಯಾರಿಲ್ಲವೆಂಬುದು ನನ್ನ ಬೆಳಗಿನ ಬಣ್ಣ ಕಸಿದೀತು? ಕೇಳೀತು ಮನವೇ ಅದಕ್ಕೆ ಉತ್ತರ ನನ್ನಲ್ಲಿತ್ತು!  ಮನಸು ಮಾತ್ರವಲ್ಲವಾ? ಆ ಮನಸಿನ ಬೆಳಕಿನ
ಜಾಗದಲ್ಲಿ ಇನ್ಯಾರಿಲ್ಲವೆಂಬುದು ಸತ್ಯ! ಹೇಗೆ ಹೇಳಲಿ ಆ ನನ್ನ ಗೆಳೆಯನಿಗೆ ನನ್ನ ಒಳಗನ್ನು ತಲುಪಲಾರದ ಒಂದು ಖಾಲಿ ಕಾಗದದಂತ ಸ್ನೇಹಕ್ಕೆ!
" ನನ್ನ ಮೇಲೆ ಕವಿತೆ ಬರೀ" ಅಂತ ಹೇಳಲಾಗದೇ ಬಯಸುವ ಭಾವಜೀವಿಗೆ ಎಂದೋ ಗೀಚಿದ ಮೂರು ಸಾಲುಗಳನ್ನೇ "ಇದು ನನಗಾಗಿಯ?" ಅಂತ ಕೇಳುವವನಿಗೆ "ಹಾಂ" ಎಂಬ ಉತ್ತರಕ್ಕೆ ತುಂಬ ಖುಶಿಪಡುವ  ಸ್ನೇಹಿತನಿಗೆ ನನ್ನ ಬದುಕಿನ ಬೆಳಕಾಗುವಾಸೆ! ಆದರೆ ನನ್ನ ಬದುಕಿನ ಬೆಳಕು! ಅದು ನನ್ನ ಮನಸು ಮಾತ್ರ!

     

             ಇವತ್ತು ನಿನ್ನೊಂದಿಗೆ ಎಲ್ಲ ಹಂಚಿಕೊಂಡುಬಿಡುವ ತವಕ. ನಾಳೆ ಮತ್ಯಾವಾಗ ಬರೆಯುತ್ತೆನೋ ಗೊತ್ತಿಲ್ಲ. "ಸಿಟ್ಟು, ಕೋಪ, ತಾಪಗಳ ಹಿಂದಿನ ಪ್ರೀತಿ ಗೊತ್ತಾಗದಿರುವ ನೀನ್ಯಾವ ಸೀಮೆ ಕವಿಯೇ?" ಅಂದ  ಸ್ನೇಹಿತರೊಬ್ಬರ ಮಾತು ನೆನಪಾಗುತ್ತದೆ. ಅವರ  ಕೋಪದ ಹಿಂದಿನ ಪ್ರೀತಿ ಅರ್ಥವಾಗದವಳಲ್ಲ. ಆದರೆ ಅರ್ಥವಿಲ್ಲದ ಪ್ರೀತಿಗಳನ್ನು ವಿನಾಕಾರಣ ಪೋಷಿಸಬಾರದಲ್ಲ!  ಪ್ರೀತಿಯೆಂದರೆ ಹಾಗೆ! ಅದಕ್ಕೆ ಎಲ್ಲವೂ ಇದೆ. ಎಲ್ಲಾ ಹಕ್ಕೂ ಇದೆ! ಸಿಟ್ಟು ಮಾಡುವ, ಅನುಮಾನಿಸುವ, ಆರೈಕೆ ಮಾಡುವ, ಸಂತೈಸುವ ಮತ್ತು ವಿನಾಕಾರಣ ದೂರತಳ್ಳುವ ಹಕ್ಕು ಕೂಡ ಪ್ರೀತಿಗೆ ಇದೆ. ಹಾಗಂತ ಎಲ್ಲ ಪ್ರೀತಿಗಳೂ ಅಪ್ಪಿ ಮುದ್ದಾಡುವ, ಬದುಕು ಹಂಚಿಕೊಳ್ಳುವ ಪ್ರೀತಿಯೇ ಆಗಬೇಕೆಂದೇನೂ ಇಲ್ಲ! ಒಳಗಿನ ವಿಶ್ವಾಸಕ್ಕೆ ಚೈತನ್ಯ ನೀಡುವ ಪ್ರೀತಿಯೆಂದರೆ ಅದು ಬಯಕೆಗಳ ಮೋಹಗಳ ಮೀರಿದ್ದು.  ಒಂದು ಬೇರೆಯೆಂಬ ಭಾವವಲ್ಲ. ಒಂದೆ ಎಂಬ ಭಾವ! ಎಷ್ಟೋ ಬಾರಿ ನನ್ನ ಭಾವಗಳೇ ಹುಚ್ಚೇನೋ ಅಂದುಕೊಳ್ಳುತ್ತಿದ್ದೆ! ಆದರೆ ಇತ್ತೀಚೆಗೆ ಇಂತಹ ಅನೇಕ ಪ್ರೀತಿಗಳ ನೋಡಿದ್ದೇನೆ. ಇರುತ್ತವೆ ಬಹಳ ಜನರ ಬದುಕಿನ ಸಾಧನೆಯ ಹಿಂದೆ
ಇಂತದ್ದೇ ಒಂದು  ಅವಿನಾಭಾವದ ಪ್ರೀತಿ! ಅಲ್ಲಿ ವ್ಯಕ್ತಿಯಾಗಲೀ, ಭೌತಿಕ ಇರುವಿಕೆಯಾಗಲೀ ಅವಶ್ಯಕವಲ್ಲ! ಅದು ಒಂದು ನಿಶ್ಚಲ ಭಾವ! ನಿರ್ವಕಾರ ಪ್ರೇಮ! ಮತ್ತೆ ಮತ್ತೆ ಏನೇನೋ ಕೊರೆಯುತ್ತದ್ದೇನೆ ಅನ್ನಿಸುತ್ತಾ ನಿನಗೆ? ಇರಲಿ ಬಿಡು. ಇಷ್ಟಾದರೂ ನನ್ನ ಸಹಿಸು ಅನ್ನುವ ಹಕ್ಕು ನಂಗೂ ಇದೆಯಲ್ಲವಾ?

            ಒಂದು ಕನಸನ್ನು ನನಸಾಗಿಸಿಕೊಳ್ಳಲು ನಿರಂತರ ಎರಡು ತಿಂಗಳ ಕಾಲ ಕ್ಷಣ ಬಿಡದೇ ಶ್ರಮಿಸಿದೆ. ಅದರ ಫಲವಾಗಿ ಇಂದು ಕನಸು ಸಾಕಾರಗೊಳ್ಳುತ್ತಿದೆ! ನಿನ್ನೊಂದಿಗೆ ಕೂತು ಮಾತನಾಡುವ ಮನಸಿಲ್ಲ ಅಂತ ಹೇಗೆಂದುಕೊಂಡೆ ನೀ ಎಂಬುದೇ ಅರ್ಥವಾಗಲಿಲ್ಲ ನನಗೆ!  ಸಮಯ ಮನಸ್ಥಿತಿಗಳಿದ್ದೇ ಹಾಗಾದರೆ ನಾನಾದರೂ ಇನ್ನು ಹೇಗೆ ನಿನ್ನ ಎಳೆದು ತರಬಹುದಿತ್ತು ಈ ಸರೋವರದಂಚಿಗೆ?  ಏನೇ ಇರಲಿ. ವ್ಯಕ್ತಿತ್ವದ ಅಹಂನಲ್ಲಿ ಇಂತಹ ನಲುಗುವಿಕೆ ಇದೆಯೆಂದಾದರೆ ಒಪ್ಪಿಕೊಳ್ಳುತ್ತೇನೆ. ಆದರೆ ಇದನ್ನೇ ವಿಶ್ವಾಸ ಕಳೆದುಕೊಂಡ ಮನಸ್ಥಿತಿ ಎಂದುಕೊಳ್ಳುವಿಯಾದರೆ ನಾನು ಬಲವಾಗಿ ವಿರೋಧಿಸುತ್ತೇನೆ. ಒಂದು ಕನಸು ಕಮರಿದ ನೋವು ಅದೆಷ್ಟು ಗಾಢವಾಗಿ ಎದೆಯಲ್ಲಿ ಚುಚ್ಚಿಕೊಂಡಿದೆ! ಜೊತೆಜೊತೆಯಲ್ಲಿ ಇನ್ನೊಂದು ಕನಸು ಸಾಕಾರಗೊಂಡ ನಲಿವು! ದಿನದಿನವೂ ವಿಸ್ಮಯದ ಪಾಠ ಹೇಳುವ ಬದುಕಿಗೆ ನಮೋ ನಮಃ!! ಒಂದು ಅದಮ್ಯ ಸಂತಸವೆಂದರೆ ಈ ಹಂತದಲ್ಲೂ ಜೀವಂತಿಕೆಯ ಉಳಿಸಿಕೊಂಡಿದ್ದೇನೆಂಬುದು! ನನ್ನ ಬದುಕಿನ ಈ ಜೀವಂತಿಕೆಗೆ ಈ ಕ್ಷಣಕ್ಕೆ ಎಲ್ಲ ಸ್ತರಕ್ಕೆ ನೀ ಬೆಳಕಾಗಿ ಇದ್ದಿ. ಇರುತ್ತೀ.  ಆತ್ಮವಿಶ್ವಾಸದ ಈ  ಜೀವಂತಿಕೆಯ ಮೂಲಶಕ್ತಿ ನೀನು. ಇದಕ್ಕಿಂತ ಹೆಚ್ಚಿನದು ಇನ್ನೇನು ಹೇಳಲಿ? ಸದಾ ನಲಿವನ್ನು ಹಂಚಬಯಸುವ ಮನಸೇ ನೋವು ನಲಿವಿನ ಸಮ್ಮಿಶ್ರ ಬದುಕಿಗೆ ನೀ ಜೀವಶಕ್ತಿಯಾಗಿದ್ದೀ ಎಂಬುದಕ್ಕಿಂತ ಇನ್ನೆಂತ ಸಾರ್ಥಕತೆ ಬೇಕು ಬದುಕಿಗೆ? ಪ್ರೀತಿಗೆ?

     ಎತ್ತರೆತ್ತರಕ್ಕೆ ಒಯ್ದ ಬದುಕಿಗೆ, ಬದುಕು ಭಾವಗಳ ಜೀವಶಕ್ತಿಗೆ, ಒಂದು ದೀರ್ಘ ಪ್ರಣಾಮದೊಂದಿಗೆ ಇಂದು ನಾನಿರುವ ಈ ಕ್ಷಣಗಳ ಎಲ್ಲ ಕ್ಷಣಗಳ ಜೀವಂತಿಕೆಯನ್ನು ನಿನ್ನಲ್ಲಿ ಪ್ರೀತಿಯಿಂದ ಅರ್ಪಿಸುತ್ತಿದ್ದೇನೆ. ಇದು ಯಾವುದೋ ಜ್ಞಾನಪೀಠದ ಸಾಧನೆಯಲ್ಲ! ಗೊತ್ತು ನನಗೆ. ಆದರೆ ನನ್ನ ಪಾಲಿಗೆ ಅದಕ್ಕಿಂತ ದೊಡ್ಡದು ಬದುಕಿನ ಪ್ರತಿಕ್ಷಣದ ಜೀವಂತಿಕೆಯ ಉಳಿಸಿಕೊಂಬ ಉತ್ಸಾಹದ್ದು. ಎಲ್ಲ ಕಮರಿದ ಕನಸುಗಳ ಗೋರಿಯ ಮೇಲೆ ಕಟ್ಟುವ ಆತ್ಮವಿಶ್ವಾಸದ ಗುಬ್ಬಿ ಗೂಡಿನದು! ಅಂತದ್ದೊಂದು ಪಾರಿಜಾತದ ಕುಸುಮದಂತ ಅರ್ಪಣೆ ಈ ಮನಸಿನದ್ದು. ಈ ಮಾನಸ ತೀರದಲ್ಲಿ ತೇಲಿ ಬಿಟ್ಟಿರುವ ಪಾರಿಜಾತದ ಹೂ ನಿನ್ನ ಸೇರಲಿ......



 ಶಾಂತಸರೋವರದಂಚಿನಲ್ಲಿ............



















Sunday, November 18, 2012

ಈ ತೀರದಲ್ಲಿ..............



ಕೃಪೆ:ಅಂತರ್ಜಾಲ



    ಈ ತೀರದಲ್ಲಿ ಮತ್ತೆ ಬರೆಯುತ್ತಿದ್ದೇನೆ. ಮನಸಿನರಮನೆಯಲ್ಲಿ ಒಂದಿಷ್ಟು ನೆನಪುಗಳ ತೋರಣವಿದೆ. ಬರೆಯುವುದು ಅನ್ನುವುದು ಬರವಣಿಗೆಯಾಗದೇ ಮನಸೇ ಆಗಿರಬೇಕೆಂಬ ಬಯಕೆ ನನ್ನದು. ಬದುಕಿನ ಅನುಭವಗಳ ಜೊತೆ ಒಂದಿಷ್ಟು ಭಾವಗಳ ಹಂಚಿಕೊಳ್ಳುವ ದಿನಚರಿ ನಮ್ಮದು.
       ದಿನ ದಿನಗಳು ಎಂಥ ಬದಲಾವಣೆ ಬದುಕಿಂದು! ಪೃಕೃತಿ ಪೊರೆಕಳೆಚಿದಂತೆ ಬದುಕಿನ ಬಣ್ಣ ಬದಲಾಗುತ್ತಿದೆ. ಬದುಕೊಂದು ದೀರ್ಘ ಪಯಣವೆಂದುಕೊಂಡರೆ ಇದೊಂದು ರೋಮಾಂಚನಪೂರ್ಣ ಪ್ರಯಾಣವೇ.. ಜೊತೆ ಬರುವ ದಾರಿಹೋಕ ಪ್ರಯಾಣಿಕರೂ ಬದುಕಿಗೆ ಸಾಥ್ ನೀಡುತ್ತಾರೆ! ನಾವು ನಾವೇ ನಮ್ಮೊಳಗೆ ಅವರ ಸೇರಿಸಿಕೊಂಡು ನಮ್ಮವರಾಗಿಸಿಕೊಂಡು ಮರೆತುಬಿಡುತ್ತೇವೆ ವಾಸ್ತವದ ಈ ಪ್ರಯಾಣವನ್ನೇ. ಅಲ್ಲೇ ಮನೆಕಟ್ಟಿಕೊಂಡವರಂತೆ ನಮ್ಮದೇ ಬದುಕಿನ ಭಾಗದಂತೆ ಆವರಿಸಿಕೊಂಡುಬಿಡುತ್ತೇವೆ. ಎಲ್ಲ ಭ್ರಮೆ ಮನಸಿನದು. ಯಾವತ್ತೋ ನಿಂಗೆ ಹೇಳಿದ್ದೆ ನೆನಪಿದೆಯಾ? ಈ ಬದುಕಿನ ಜೊತೆಯಲ್ಲಿ ಯಾರೂ ಶಾಶ್ವತವೆಂಬ ಭ್ರಮೆಗಳಿಲ್ಲ ನನಗೆ ಅಂತ.  ಬುದ್ಧಿ ನಂಬುವ  ನಿಲುಕುವ ಸತ್ಯವಿದು. ಆದರೆ ಭಾವ ಹಾಗಲ್ಲ. ಅದು ಭ್ರಮೆಯನ್ನೂ ನಿಜವೆಂದೇ ತಿಳಿದು ನಂಬುತ್ತದೆ. ಪ್ರೀತಿಸುತ್ತದೆ. ಅದಕ್ಕೇ ಅಗಲಿಕೆಯ ನೋವು ಅನಿವಾರ್ಯ ಬದುಕಿಗೆ.

 ಏನೂ ನೋವೂ ನಲಿವುಗಳೇ ಇಲ್ಲದಿದ್ದರೆ ಹೇಗೆ ಸಾಧ್ಯ ಬದುಕೆಂಬುದು ರಸಪೂರ್ಣವಾಗಲು? ಅನುಭವಗಳ ಬಿಸಿಗೆ ಕರಗುವ ಮೇಣ ಮಾತ್ರ
ಬತ್ತಿಯಾಗಿ ಉರಿದು ಬೆಳಕಾಗುವುದು. ಅಂದ ಚಂದದ ಗೊಂಬೆಯಾಗುವುದು. ಬಿಸಿ ತಾಗದ, ತಂಪಿಗೆ ಬೆದರುವ, ಗಾಳಿಗೆ ಅದರುವ ಯಾವ ಬದುಕೂ ಅನುಭವಗಳ ತೊಟ್ಟಿಯಾಗುವುದಿಲ್ಲ. ಹಾಗೇ ಎಲ್ಲ ಬದುಕಿಗೂ ಅದರದ್ದೇ ಆದ ಒಂದಿಷ್ಟು ಅನುಭವಗಳ ತೊಟ್ಟಿಯಿದೆ. ಅದನ್ನು ತುಂಬಿಕೊಳ್ಳುವ ಬದುಕಿನ ಬುಟ್ಟಿಗೆ ಬಣ್ಣದ ಮೆರಗಿನ ಹೊಳಪಿಡುವ ಬಯಕೆ ನನ್ನದು.. ಹಾಗಾಗಿ ಭಯ, ಕೋಪ, ನೋವು, ನಲಿವುಗಳ ಆಚೆಗೆ ನಾನಿಲ್ಲುವುದು
ನನ್ನದೇ ಮನಸಿನ ಮನೆಯಲ್ಲಿ. ಮತ್ತಲ್ಲಿ ಬೆಳದಿಂಗಳ ಹಾಗೇ ಕಡುಗಪ್ಪು ಕತ್ತಲೆಯೂ ಇದೆ. ನಲಿವಿನ ಹಾಗೇ ನಿಟ್ಟುಸಿರಿನ ಬಿಸಿ ಕಂಬನಿಗಳೂ ಇವೆ.

      ಒಂದು ವಿಷಯ ನಿನ್ನಲ್ಲಿ ಹೇಳಬೇಕೆಂದು ಅಂದುಕೊಳ್ಳತ್ತಲೇ ಇದ್ದೇನೆ. ಒಂದಿನ ನಮ್ಮಿಬ್ಬರ ಕನಸಿತ್ತು. ನೊಂದ ಮನಸುಗಳಿಗೆ ಸಾಂತ್ವನ ಹೇಳುವ ಎತ್ತರಕ್ಕೆ ಬೆಳೆಯಬೇಕೆಂಬುದು. ಹಾಗೇ ಬದುಕಿನ ಎಷ್ಟೋ ಭಾಗಗಳಲ್ಲಿ ನಾನು ಕಾಣುತ್ತಿದ್ದೇನೆ. ನೊಂದ ಮನಸುಗಳ ನೋವಿನ ದನಿಯನ್ನ. ಕೇಳುತ್ತಿದ್ದೇವಲ್ಲವಾ? ನಾನಂತೂ ದಿನ ಬೆಳಗಾದರೆ ಅಂತ ಮನಸುಗಳ ಕಾಣುತ್ತೇನೆ. ಅದಕ್ಕೆಂದೇ ನನಗೆ ನನ್ನ ಮನಸಿನ ನೋವು ಅನ್ನೋದಕ್ಕಿಂತ ಮೊದಲು ಎದುರಿಗಿರು ಯಾವುದೇ ಮನಸಿನ ಮೇಲಾಗುವ ಪರಿಣಾಮ ಮತ್ತದರ ಸಾಂತ್ವನ ಮುಖ್ಯವೆನಿಸಿಬಿಡುತ್ತದೆ. ಈ ವಿಷಯದಲ್ಲಿ ಸ್ವ ಹಿಂಸೆ ಅಂದುಕೊಳ್ಳುವ ಎಷ್ಟೋ ನೋವನ್ನು ನಾನು ಮೌನವಾಗಿ ಸಹಿಸಬೇಕಾಗಬಹುದು. ಆದರೆ ಒಂದಂತೂ ಸತ್ಯ. ಕಷ್ಟ ನೋವುಗಳು ನಾವು ಮತ್ತೊಬ್ಬರನ್ನು ನೋಡಲು ಕಲಿತಾಗ ಅವರಿಗೆ ಕಿಂಚಿತ್ ಕೈಲಾದ ಸಹಾಯ ಮಡುವ ಮನಸು ಇಟ್ಟುಕೊಂಡಾಗ ಮಾತ್ರ ನಮ್ಮ ಮನಸಿನ ಈ ಭಾಗವೆಷ್ಟು ಗೌಣ ಅಂತ ಗೊತ್ತಾಗೋದು. ಆಗ ಮಾತ್ರ ನನ್ನ ನೋವು ನನಗೆ ಅಲ್ಪ ಅನ್ನಿಸೋದು. ಮತ್ತೆ ಮತ್ತೆ ನನಗೆ ಎದುರಿನ ಮನಸಿನ ಸೌಖ್ಯಕ್ಕೆ ನಾಏನು ಮಾಡಬಹುದು ಅಂತ ಯೋಚಿಸೋದು. ಅದನ್ನ ಕ್ರಿಯೆಗಿಳಿಸೋದು. ಆದರೆ ಎಲ್ಲೋ ಒಂದುಕಡೆಯಾದರೂ ನಾವು ಸ್ವಾಥರ್ಿಯಾಗುತ್ತೇವೆ... ಭಗವತಿಯಲ್ಲಿ ಕೇಳುತ್ತೇವೆ. ಎಷ್ಟೊಂದು ಜನರಿಗೆ ಕಿವಿಯಾಗಿದ್ದೇನೆ ನಾನು! ನನಗೂ ನನ್ನ ಮನಸ್ಸೆಲ್ಲ ಬರಿದಾಗಿಸುವಂತ ಒಂದು ಕಿವಿ ಕೊಡು. ಸುರಿಯಬಲ್ಲ ಮನಸಿನೊಂದು ಪಾತ್ರೆ ಕೊಡು. ಅಂತ. ಹೌದು ಸ್ವಾರ್ಥವೇ ಇದು. ಆದರೆ ಮನಸಿದನ್ನ ಬಯಸೋದು ಅಷ್ಟೇ ಸತ್ಯ. ಅದಕ್ಕೆಂದೇ ಮನಸಿನ ಮಾತು ಕೇಳಿಸುಕೊಳ್ಳುವ
ಮನಸುಗಳಿಗಾಗಿ ಈ ಭೂಮಿಯಮೇಲೆ ಒಂದಿಷ್ಟು ಆರ್ತ ಮನಗಳು ಸದಾ ಇರುತ್ತವೆ.ಮತ್ತದರಲ್ಲಿ ನಾವೂ ಸೇರುತ್ತೇವೆ.


     ಈ ಮನಸಿನ ತೀರದಲ್ಲಿ ಏನೇನೋ ಅಲೆಗಳು. ಅರಿವಾಗದಿದ್ದರೆ ಹೇಳಿಬಿಡು. ಮೌನ ಯಾಕೋ ಅಸಹನೀಯವೆನ್ನಿಸುತ್ತಿದೆ. ಮಾತಾಗು........ ಒಂದಿಷ್ಟು ಮಾತು ಚಚರ್ೆ ನಮ್ಮನ್ನ ಬೆಳೆಸಲಿ...ಮನದ ಮಾತುಗಳಿವೆಯಾದಲ್ಲಿ ಅದಕ್ಕೆ ಜೀವ ತುಂಬಲಿ. ಬೇಗ ಸಿಗುತ್ತೇನೆ ಮತ್ತಿದೇ ತೀರದಲ್ಲಿ.




Thursday, November 8, 2012

ಬಣ್ಣದ ಕನ್ನಡಕದೊಳಗಿಂದ...




ಚಿತ್ರ ಕೃಪೆ: ಅಂತರ್ಜಾಲ



                                   ಚಿಕ್ಕವರಿದ್ದಾಗ ಸ್ನೇಹ ಸಂಬಂಧಗಳು ಎಷ್ಟೊಂದು ಮಧುರ ಮತ್ತು ನಿಷ್ಕಲ್ಮಷವಾಗಿದ್ದವು! ನಾವೆಲ್ಲ ದೊಡ್ಡವರಾಗುತ್ತಿದ್ದಂತೆ ಯಾಕೆ ಅವು ತಮ್ಮ ಮುಗ್ಧತೆ ಕಳೆದುಕೊಂಡು ಅಗತ್ಯಗಳಾಗಿ, ಅಗತ್ಯಗಳಿಗಾಗಿ ಬದಲಾದವು? ಹೀಗೇ ನೂರು ಯೋಚನೆಗಳ ಹರಿವನ್ನು ನಿನ್ನೆಡೆಯಲ್ಲಿ ತಂದಿದ್ದೇನೆ. ಮನಸು ಮನಸಿನ ಮಾತಿನ ತೀರಕ್ಕೆ..............


              ಭಾವ ಸ್ಪೂರ್ತಿಗಾಗಿ ಕಾದು ಕುಳಿತಿರಬೇಕಾದ ಅಗತ್ಯವಿಲ್ಲದಿದ್ದರೂ  ಹೇಗೆಂದರೆ ಹಾಗೆ ಈ  ತೀರದಲ್ಲಿ ಕುಳಿತಿರಲಾಗದ್ದು ಬಹುಶಃ ಈ ಸರೋವರದ  ಪಾವಿತ್ರ್ಯತೆಯ ಸಂಕೇತವೆಂದುಕೊಳ್ಳೋಣ. ಹಿಮಾಲಯವೆಂಬ ಅಖಂಡ ಶಿಖರಕ್ಕೆ ಅಗಾಧತೆಗೆ ಎದುರಾಗಿ ಶಾಂತವಾಗಿ  ಹರಿದು ನಿಂತಿರುವ ಈ ಸರೋವರಕ್ಕೆ ಅಂತದ್ದೊಂದು
ಪವಿತ್ರತೆ ಬಂದಿದ್ದರೆ ಆಶ್ಚರ್ಯವೇನಿಲ್ಲ. ಆದರೆ  ಅದಕ್ಕೆಂದೇ ಇರಬೇಕು. ಮನಸು ಸಹ ಅಷ್ಟು ನಿರ್ಮಲಲವಾಗಿಟ್ಟುಕೊಳ್ಳದೇ ನಾವು ಈ ತೀರದಲ್ಲಿ ಕುಳಿತು ಬರೆದುಕೊಳ್ಳಲಾರೆವು!  ಬರೆದುಕೊಂಡಂತೆ ಮಾತಾಡಿಕೊಳ್ಳಲಾರೆವು!



            ಇತ್ತೀಚೆಗೆ ಅನುಮಾನವೆಂಬ ಹಳದಿ ಕನ್ನಡಕವನ್ನು ಪದೇ ಪದೇ ಧರಿಸಿಕೊಳ್ಳುತ್ತಿದ್ದೇವೆ ನಾವೆಲ್ಲ. ಪ್ರತೀ ಮನುಷ್ಯ, ಪ್ರತೀ ವಿಷಯ, ಪ್ರತೀ ಸಂದರ್ಭಗಳನ್ನು ಅನುಮಾನದ ಹಳದಿಕನ್ನಡಕದಲ್ಲಿ ನೋಡುವುದು ಚಟವಾಗಿಬಿಟ್ಟಿದೆ. ನಮ್ಮ ಮನಸ್ಸನ್ನೇ ನಾವು ಈ ಕನ್ನಡಕದ ಮೇಲೆ ಕನ್ನಡಕ ಇಟ್ಟುಕೊಂಡು ನೋಡುವ ಅಭ್ಯಾಸ ಅಷ್ಟೇನೂ ಒಳ್ಳೆಯದೆಂದು
ನಂಗನ್ನಿಸುತ್ತಿಲ್ಲ. ನಿನ್ನೆ ನೋಡುವಾಗ ಕೇಳುವಾಗ ಬೆಳ್ಳಗಾಗಿದ್ದ ಸ್ಪಷ್ಟವಾಗಿದ್ದ ಎಲ್ಲ ವಸ್ತುಗಳು ಇವತ್ಯಾಕೆ ಬಣ್ಣ ಕಳೆದುಕೊಂಡವು ಅಂತ ಯೋಚನೆ ಮಾಡುತ್ತಿಲ್ಲ. ನಿಜಕ್ಕೂ ಅದರ ಬಣ್ಣ ಬದಲಾಯಿತಾ? ಅಥವಾ ನಮ್ಮ ನೋಟ ಬದಲಾಯಿತಾ? ದೃಷ್ಟಿವಿಶಾಲತೆಯ ಬಗ್ಗೆ ಮಾತನಾಡುವ ಎಲ್ಲರೂ ನಮ್ಮವರೆಂಬುವರ ಬಗ್ಗೆ ಇಂತದ್ದೊಂದು ಬಣ್ಣದ ಕನ್ನಡಕ
ಧರಿಸಿಕೊಂಡೇ ನೋಡುವ ಅಭ್ಯಾಸ ಮಾಡಿಕೊಂಡಿದ್ದೇವಾ ಅನ್ನುವ ಅನುಮಾನ ಇತ್ತೀಚೆಗೆ ಬಲವಾಗುತ್ತಿದೆ. ಉದಾಹರಣೆಗೆ ವಿಶ್ವಾಸದ ನೆಲೆಯಲ್ಲಿ ನೋಡುವ ಸಂಬಂಧಗಳೆ
ಏನಾದರೂ ನಮ್ಮ ವಿಚಾರಗಳಿಗೆ ವಿರುದ್ಧವಾದ ಅಭಿಪ್ರಾಯಗಳ ವ್ಯಕ್ತಪಡಿಸಿದರೆ ಅದು ಬರೀ ವಿಚಾರಬೇಧವಾಗಿ ಅಥವಾ ಒಂದು ಸಾಮಾನ್ಯನೆಲೆಯಲ್ಲಿ ನೋಡುವುದಿಲ್ಲ ನಾವು!
ನಮ್ಮವರು ಅಂತಂದುಕೊಂಡಮೇಲೆ ಅವರು ನಾವು ಹೇಗಿದ್ದರೂ ಒಪ್ಪಿಕೊಳ್ಳಲೇಬೇಕೆಂಬ, ನಮ್ಮ ವಿಚಾರಗಳನ್ನು ಮಾನ್ಯತೆಮಾಡಬೇಕೆಂಬ ಚೌಕಟ್ಟಿಗೆ ಒಳಪಡಿಸಿಕೊಂಡುಬಿಡುತ್ತೇವೆ.
ನಿಜವೆಂದರೆ ಹಾಗೆ ಒಂದು ಕುರುಡುತನವನ್ನು ನಾವೂ ಇಟ್ಟುಕೊಳ್ಳಲಾಗದು. ನಮ್ಮವರೂ ಇಟ್ಟುಕೊಳ್ಳಲಾಗದು. ಅನಿಸಿಕೆಯನ್ನು ಹೇಳುವ ಹಾಗೇ ಅದನ್ನು ಯಾಕೆ ಹೇಳಿದ್ದಾರೆಂದು
ವಿಚಾರಿಸಿ ಯೋಚಿಸುವ ಸ್ಥಿತಿ ಎಂದಿಗೂ ಸಂಬಂಧಗಳನ್ನು ಮತ್ತು ಮಾನವಸ್ನೇಹಗಳನ್ನು ಹೆಚ್ಚು ಬಲಿಷ್ಟವಾಗಿಸಿ ಹೆಚ್ಚುಕಾಲ ಬಾಳುವಂತೆ ಮಾಡುವುದು ಎಂದು ನನಗನಗನಿಸುತ್ತದೆ.


                 ಯಾಕೋ ಪದೇ ಪದೇ ಇಂತದ್ದೇ ವಿಷಯಗಳು ಸಂಬಂಧಗಳ ಕುರಿತು ಹೆಚ್ಚು ಯೋಚನೆ ಮೂಡುತ್ತದೆ! ಬದುಕಿಗೆ ಸಂಬಂಧ, ಸ್ನೇಹಗಳು ಎಷ್ಟು ಮುಖ್ಯ! ಅವೆಷ್ಟು ಅವಿನಾಭಾವ! ಹಾಗಿದ್ದೂ ಒಂದು ಹಂತದಲ್ಲಿ ಪ್ರತಿಯೊಬ್ಬರೂ ಒಂಟಿ ಎಂದೇ ಎನ್ನಿಸುತ್ತದೆ. ನಾನೂ ನೀನೂ ಒಂದೇ ಅನ್ನುವ ಪ್ರೀತಿ ಸಹ ಎಂದೂ ಒಂದೇ ಆಗಲು ಬಿಡದು!
ಮನುಷ್ಯ ಅಸ್ತಿತ್ವ ಎನ್ನುವುದು ಇದೇ ಕಾರಣಕ್ಕಿರಬಹುದೇ? ಪ್ರತಿ ವ್ಯಕ್ತಿಯಲ್ಲಿನ ಒಳಗೊಂದು ಸ್ಪಷ್ಟ ಏಕತಾ ಭಾವ ಇದೆಯಾ? ಅದು ಅಹಂ ಎಂಬ ಕಾರಣವಿರಬಹುದು! ಅರ್ಪಣೆ ಸಹ ಒಂದು ಹಂತದವರೆಗಿನ ಏಕತೆಯನ್ನು ಸೃಷ್ಟಿಸಿದರೂ ಮೂಲತಃ ವ್ಯಕ್ತಿ ಸ್ವಯಂ ಕೇಂದ್ರಿತ.  ಮತ್ತು ವ್ಯಕ್ತಿಮೂಲದ ಸಂಬಂಧಗಳು ಸ್ವಯಂ ಕೇಂದ್ರಿತವಾಗಿಯೇ ಮುಂದುವರೆಯುತ್ತದೆ. ಈ ಎಲ್ಲ ನೆಲೆಗಳಲ್ಲಿ ಯೋಚಿಸುತ್ತ ಹೋದಂತೆ ನನಗೆ ವಿಶ್ವಾಸ ಅಥವಾ ನಂಬಿಕೆಯ ನೆಲೆಗಟ್ಟು ಎಂಬುದು ಹೆಚ್ಚು ಅರ್ಥಪೂರ್ಣ ಅನ್ನಿಸುತ್ತದೆ.


                          ಇವನ್ನೆಲ್ಲ ಮಾತಾಡಬೇಕೆನ್ನಿಸಿದ್ದು ಮತ್ತೆ ಮತ್ತೆ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಹುಚ್ಚು ಮನಸ್ಸಿನದೇನೋ... ಪ್ರೀತಿಯ ರೂಪ ದಿನದಿನಕ್ಕೂ ಬದಲಾಗುತ್ತದೆ ಎಂಬುದನ್ನು ಒಪ್ಪಿಕೊಂಡಷ್ಟು ಸುಲಭವಾಗಿ ಅದರ ವ್ಯಕ್ತವಾಗುವಿಕೆಯಲ್ಲಿನ ಬದಲಾವಣೆಯನ್ನು ಒಪ್ಪಿಕೊಂಡಷ್ಟು ಸುಲಭವಾಗಿ ಪ್ರೀತಿಯಲ್ಲಿ ಉಂಟಾಗುವ ನಿರ್ಲಕ್ಷ್ಯವನ್ನು ಮತ್ತು ವ್ಯಕ್ತಿತ್ವದ ಅನುಮಾನವನ್ನು ಜೀಣರ್ಿಸಿಕೊಳ್ಳುವುದು ಸುಲಭವಾಗುವುದಿಲ್ಲ. ಅಂಟಿಕೊಳ್ಳುವಿಕೆ ಅಂಟಿಕೊಳ್ಳದಿರುವಿಕೆಯ ಮಧ್ಯೆ ಎಲ್ಲೋ ಒಂದು ಜೀವತಂತು ಉಳಿದುಕೊಂಡಿದ್ದರೆ ಅದು ವಿಶ್ವಾಸವೆಂಬ ಗಟ್ಟಿ ಎಳೆ. ಅದನ್ನೇ ಅನುಮಾನದ ಕನ್ನಡಕದಲ್ಲಿ ನೋಡುವ ಮತ್ತು ಸಂಬಂಧಗಳ ವಿಷಯದಲ್ಲಿ ಪೂವರ್ಾಗ್ರಹಗಳ ಬೆಳೆಸಿಕೊಳ್ಳುವ ಮನಸುಗಳಿಗೆ ಇಂತದ್ದೊಂದು ಸಹಜ ಪ್ರಕ್ರಿಯೆಗೆ ಅನಿವಾರ್ಯ ಒಡ್ಡಿಕೊಳ್ಳಬೇಕಾಗುತ್ತದೆ. ವಿಶ್ವಾಸದ ಬಲದಿಂದ ಗೆದ್ದುಕೊಳ್ಳಬಹುದಾದ ಸಣ್ಣತನಗಳ ಮತ್ತಷ್ಟು ಬಣ್ಣ ಬಣ್ಣದ  ಕನ್ನಡಕಗಳ ತೊಟ್ಟು ನೋಡುವುದು ಕಮ್ಮಿ ಮಾಡಿಕೊಂಡರೆ ನಾವು ಹೆಚ್ಚು ನಿರಾಳವೂ ನಿರುಮ್ಮಳವೂ ಆಗಬಹುದು!


                 ಈ ಪ್ರೀತಿಯ ಕುರಿತು ಇನ್ನೊಂದು ಮಾತು ಹೇಳಬೇಕೆನ್ನಿಸುತ್ತದೆ. ಇತ್ತೀಚೆಗೆ ಎಲ್ಲಾ ಪ್ರೀತಿಗಳೂ ಬರೀ ಬಣ್ಣಬಣ್ಣದ ನಿಯಾನ್ ದೀಪಗಳಂತೆ ಅನ್ನಿಸುತ್ತದೆ!ಎಲ್ಲಾ ಸಂಬಂಧಗಳಲ್ಲಿ, ಎಲ್ಲಾ ಪ್ರೀತಿಯಲ್ಲಿ ಮುಖ್ಯವಾಗಿ ಇರಬೇಕಾದ ಕಾಳಜಿ (ಕೇರ್), ಗೌರವ ಹಾಗೂ ಅವುಗಳಿಗೆ ನೀಡಬೇಕಾದ ಕನಿಷ್ಟ ಸಮಯವನ್ನೂ ನೀಡಲಾಗದಂತ ಪ್ರೀತಿಗಳಿಗೆ ಅರ್ಥವೇ ಇಲ್ಲ ಎನ್ನಿಸುತ್ತದೆ. ಗೆಳತಿಯೊಬ್ಬಳ ಮಾತು ಪೂರಕವಾಗಿ ನೆನಪಾಗುತ್ತದೆ. "ಇಂದು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರೀತಿಯ ಹಪಾಹಪಿ ಆರಂಭವಾಗಿದೆ. ಪ್ರೀತಿಯ ತುಡಿತ, ಕುದಿತ ಪ್ರತಿಯೊಬ್ಬರಿಗೂ ಬೇಕು. ಆದರೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವ ಪ್ರೀತಿಯನ್ನು ನೋಡಲಾಗದವರೇ ಹೆಚ್ಚು.  ಯಾಕೆಂದರೆ ಪ್ರೀತಿ ಬಣ್ಣ ಬಣ್ಣದ ಮಾತುಗಳ ಸರಕೆಂದುಕೊಂಡವರೇ ಹೆಚ್ಚು.  ಅದಕ್ಕೆಂದೇ ಮಾಕರ್ೆಟ್ಟಿನಲ್ಲಿ ಬಿಕರಿಯಾಗುವ ವಸ್ತುವಿನಂತೆ ಪ್ರೀತಿಯನ್ನು ಕೊಂಡುಕೊಳ್ಳಬಯಸುತ್ತಾರೆ! ಗೊತ್ತಿಲ್ಲ ಅವರಿಗೆ. ಪ್ರೀತಿ  ಅಂತಹ ವಸ್ತುವಲ್ಲ. ಅದೊಂದು  ತೆಗೆದುಕೊಳ್ಳುವುದಕ್ಕಿಂತ ಕೊಡಲ್ಪಡುವ ತಪಸ್ಸು ಎಂಬುದು!" ಈ  ಮಾತು ನಿಜವೆನ್ನಿಸುತ್ತದೆ ಹಲವು ಬಾರಿ...



         ಅದೇನೇ ಇರಲಿ ಮನವೇ... ನೀನೆಂದು ಈ ತಪದ ನಡಿಗೆಯಲ್ಲಿ ಸೋಲಬೇಡ. ನಿನ್ನೊಳಗು ಈ ಪದ ಜೀವಂತವಾಗಿರಲಿ...  ದೀಪಗಳ ಹಬ್ಬ ಎದುರಿಗಿದೆ.. ಪುಟ್ಟ ಮಣ್ಣಿನ ಹಣತೆಗಳಿಗಾಗಿ  ಹಸಿ ಮಣ್ಣು ಮೆತ್ತಿದ್ದೇನೆ. ಮತ್ತಷ್ಟು ಪುಟ್ಟ ಹಣತೆಗಳ ಹಿಡಿದು ಬರುತ್ತೇನೆ. ಈ ಸರೋವರದ ಅಲೆಗಳಲ್ಲಿ ತೇಲಿಬಿಡೋಣ.. ನಮ್ಮ ಬೊಗಸೆಗಳಲ್ಲಿ...

ಅಲ್ಲಿಯವರೆಗೆ ಕಾಯುತ್ತಿರು ನಿನ್ನಂಜಲಿಯಲ್ಲಿ ಎಣ್ಣೆ ಆರದಿರಲಿ....