Sunday, May 27, 2012

ತೀರದಲ್ಲೊಂದು ಮನವಿ.........

 

ಬರೆಯಬೇಕೆನಿಸಿದರೂ ಬರೆಯಲಾಗದಷ್ಟು ದೂರ! ಹೇಳಬೇಕೆನಿಸಿದ್ದನ್ನು ಹೇಳಲಾಗದಷ್ಟು ದೂರ! ಅಳಬೇಕೆನಿಸಿದರೆ ಅಳಲಾಗದಷ್ಟು ದೂರ,!
 ನಗಬೇಕನಿಸಿದರೆ ನಗಲಾರದಷ್ಟು ದೂರ! ಮನಸಿನ ಭಾವಗಳಿಗೇ ದೂರ ನಿಂತು ಹತ್ತಿರ ಹತ್ತಿರ ಎಂಬುದಕ್ಕೆ ಅರ್ಥವೇ  ಉಳಿಯದಷ್ಟು ದೂರ ನಿಂತು
ಸಮಾಧಾನ ಸಂಬಂಧಗಳಿಗೆ ಅರ್ಥ ಹುಡುಕುವ ಈ ಪ್ರಯತ್ನಗಳೇ ಅತೀವ ಹಿಂಸೆ ಅಲ್ಲವ? ಮನಸ್ಯಾಕೆ ಹೀಗೆ! ಇಲ್ಲ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ.
ಹಾಗೇ ಇರುವುದನ್ನು ಒಪ್ಪಿಕೊಳ್ಳುವುದಿಲ್ಲ.ಇದ್ದುದೆಲ್ಲವ ಬಿಟ್ಟು ಇರದಿದ್ದುರೆಡೆಗೆ ತುಡಿವುದೇ ಜೀವನ ಎಂದು ದಾರ್ಶನಿಕರು ಹೇಳಿದ್ದು ಇದಕ್ಕಾಗೇ ಏನೋ..

         ನನ್ನ ಕೃಷ್ಣ ಭ್ರಮೆಗಳನ್ನು ತೊಲಗಿಸುವವ.! ಬೆಳಕಿನತ್ತ ನಡೆಸುವವ.!...... ಮೋಹದ ಪರದೆಯ ಹರಿದು ನಿವರ್ಿಕಾರ ಪ್ರಪಂಚಕ್ಕೆ
ನಡೆಸುವವ. ಅವನಿಗ್ಯಾಕೆ ಅಥರ್ೈಸುವ ಹುಚ್ಚು ನನಗೆ!   ಆದರೂ ಕೃಷ್ಣ ನನ್ನಂತೆ ಮನುಷ್ಯನಲ್ಲ! ಅವನಿಗೆ ಮನುಷ್ಯ ಬಯಕೆಗಳ ನಿರೀಕ್ಷೆಗಳ
ಕುರಿತು ಗೊತ್ತಿಲ್ಲ! ಅಹಂಕಾರದ ದಮನವಷ್ಟೇ ಗೊತ್ತು. ಅಹಂನ ಪೋಷಿಸಿಕೊಂಡ ಪ್ರೇಮದ ಕುರಿತು ಗೊತ್ತಿಲ್ಲ! ಏನಂತ ಬರಲಿ ನನ್ನ ನೋವು ನಲಿವುಗಳಿಗೆ
ಅರ್ಥವೇ ಇಲ್ಲದವನ ಬಳಿ!  ಹಾಂ ಪ್ರೇಮವಿದೆ ಆ ಕಂಗಳ ಕೊಳದಲ್ಲಿ! ಇಲ್ಲ ಅನ್ನುವುದಿಲ್ಲ.. ಆದರೆ  ಆ ಪ್ರೇಮ ನನ್ನ ತಲುಪುವದಕ್ಕೆಂದೇ ಅಲ್ಲ! ಅಂದರೆ
ನನ್ನದಲ್ಲ! ನನ್ನ ತಲುಪುವ ಪ್ರೇಮವೆಂದರೆ ಅದು ನನ್ನ ನೋವು ನಲಿವುಗಳ ನನ್ನ ಕೋಪ ಅಸಹನೆಗಳ ಜೊತೆ ತುಂಬ ಸಹಜವಾದ ಸಂವಹನ ಬಯಸುವಂತದ್ದು!
ನಾ ಇದ್ದ ಹಾಗೆ ನನ್ನ ಸ್ವೀಕರಿಸಬೇಕಾದದ್ದು! ಅವನ ಕುರಿತಾಗಿ ನಾ ಇಟ್ಟಂತದ್ದೇ ಒಂದು ಆದರದ ನಂಬಿಕೆಯ ಎಳೆಯನ್ನು ಹಿಡಿದುಕೊಂಡಾದರೂ ಒಂದಿಷ್ಟು
ಮಾನವಸಹಜ ಸಂವಹನದ ಜೊತೆಯಿರಬೇಕಾದದ್ದು! ನಾ ಅತ್ತರೆ ಅಂಜಲಿಯಾಗಬೇಕಾದಂತದ್ದು! ನಾ ನಕ್ಕರೆ ಸಿಹಿಯಾಗಬೇಕಾದಂತದ್ದು!
ನನ್ನ ಸಂಭ್ರಮವಾಗಲಿ ದುಃಖವಾಗಲಿ ಹೇಗೆ ಹಂಚಿಕೊಳ್ಳಬೇಕೆಂಬುದನ್ನು ನಾನೇ ಹೇಳಿಕೊಡಬೇಕೆಂದರೆ ಅವನ ಬಳಿ ನಾನು ಹೇಗೆ ಹೋಗಲು ಸಾಧ್ಯ? ಆ ಕೃಷ್ಣ
ಎಲ್ಲವನ್ನು ಬಲ್ಲವನಂತೆ! ನನಗೇನೋ ಬಲ್ಲವನನ್ನಿಸುವುದಿಲ್ಲ! ನನ್ನಂತ ಭಾವುಕ ಮನಸುಗಳನ್ನಿಟ್ಟು ಆಟವಾಡುವ ಪುಟ್ಟ ಮಗುವಿನಂತೆ ತೋರುತ್ತಾನೆ!
ಹೇಳಬೇಕೆಂದರೆ ನನ್ನಂತ ಅಮ್ಮನ ವಾತ್ಸಲ್ಯವೂ ಅವನಿಗೆ ಅರ್ಥವಾಗುವುದಿಲ್ಲ!  ಹಾಗಿದ್ದಮೇಲೆ ನನಗಲ್ಲಿ ಜಾಗ ಎಲ್ಲಿ?

                ಅವನಬಳಿಯೂ ನಿನ್ನ ಅಹಂ ಏನೇ? ಅನ್ನಬೇಡ ಮನವೇ? ಈ ಕೃಷ್ಣನಿಗೆ ಅರ್ಥವಾಗದ ನಾನು ನನ್ನ ಅಥರ್ೈಸಲೆಂದೇ ಹೋಗಲಾರೆ ಅವನಬಳಿ..
ಅವನೋ ಜಗದ್ಪಾಲಕ! ನಾನೋ ಮನುಷ್ಯಮಾತ್ರಳು! ನನ್ನ ಮನುಷ್ಯಬುದ್ದಿ ಬಿಡುವುದಾದರೂ ಹೇಗೆ? ನನಗೆ ನನ್ನ ಸುತ್ತ ಕಾಲುಸುತ್ತುವ ಮನುಷ್ಯಜೀವಗಳ ಮೋಹ!ನನ್ನ
ಸೆರಗಿನಂಚಿಗೆ ಜೋತುಕೊಳ್ಳುವ, ನನ್ನ ಕಿರುಬೆರಳ ತುದಿಯಲ್ಲಿ ಅಂಗೈಹಿಡಿದಿರುವ, ಅಷ್ಟೇ ಅಲ್ಲ ನನಗೆ ನೋವಾದರೆ ತಾನು ಹಾ! ಎನ್ನುವ, ನನಗೆ ಕುಶಿಯಾದರೆ
ತಾನು ನೆಲಬಿಟ್ಟು ಕುಣಿಯುವ, ತನ್ನ ವಿಜಯಗಳ ಜೊತೆ ಗಂಭೀರ ನಗೆ ಚೆಲ್ಲುವ, ತುಟಿಯಂಚ ಕೊನೆಯಲ್ಲಿ ಸದಾ ನನ್ನ ಕರೆಯಬಲ್ಲ ಮನುಷ್ಯ ಜೀವಗಳ ಮೋಹ ನನಗೆ!
ಹೇಗೆ ತೊರೆಯಲಿ ಆ ಜಗದ್ಫಾಲಕನ ಮೌನದಲ್ಲಿ ಮನುಷ್ಯಜೀವಗಳ ಈ ಮೋಹವ! ನಾನೇ ಮೌನವಾದರೆ ನನ್ನ ಮೌನಕ್ಕೂ ಅರ್ಥ ಕಾಣದವನಬಳಿ ಏನಂತ ಅರುಹಲಿ ನನ್ನ ಪ್ರೇಮವ?
ಇದು ಮಾತಿಗೂ ಮೌನಕ್ಕೂ ನಿಲುಕದ್ದು! ಆಕಾರಕ್ಕೂ ನಿರಾಕಾರಕ್ಕೂ ನಡುವಿನದ್ದು! ಅವನಿಲ್ಲದೇ ನಾನಿಲ್ಲ! ನಾನವನಿಗೆ ಏನೂ ಅಲ್ಲ. ಈ ವಿಶಾಲ ಸೃಷ್ಟಿಯಲ್ಲಿ
ಅಣುಮಾತ್ರದ ನಾನು! ಮತ್ತು ಪ್ರಪಂಚವೇ ಅವನು!
              ಯಾಕೋ ಒಮ್ಮೆ ಒದರಿಬಿಡಬೇಕನ್ನಿಸುತ್ತದೆ!   ಸದಾ ನಗುತ್ತಿರು, ನನ್ನನ್ನೇ "ಆನಂದಿಯಾಗಿರು" ಅಂತ ಬಯಸುವ ನಿನಗೆ ನನ್ನ ಆನಂದದ ಮೂಲವೇ
ಗೊತ್ತಿಲ್ಲ! ನನ್ನ ಆನಂದಿಯಾಗಿಸಬಲ್ಲ ಯಾವುದೂ ನಿನ್ನಲ್ಲಿಲ್ಲವಾ? ಉಹೂಂ ನಿಜಕ್ಕೂ ನಿನಗದು ಬೇಕಾಗಿದೆ ಅಂತಲೂ ನನಗನ್ನಿಸದ ಹಾಗೆ ನೀ ಇರುವಾಗ ನನ್ನ ಆನಂದದ ಮೂಲವೆಲ್ಲಿ!
 ನಿನಗೆ ಬೇಕಾಗಿದ್ದು ನಿನ್ನೆಡೆಗಿನ ನನ್ನ ಪ್ರೀತಿ,ಭಕ್ತಿಯಲ್ಲಿ ವ್ಯತ್ಯಾಸವಿಲ್ಲದ ಜಲಪಾತದಂತೇ ಹರಿಯಬೇಕೆಂಬುದಷ್ಟೇ.. ನಿನ್ನನ್ನು ನಂಬುವ, ನಿನ್ನನ್ನು ಪ್ರಶ್ನಿಸದಿರುವ,
ನಿನಗೆ ಎಲ್ಲಿಯೂಸುತ್ತಿಕೊಳ್ಳಲಾರದ, ನಿನ್ನನ್ನು ಬಂಧಿಸದಂತ ಪ್ರೀತಿಯ ನಿರೀಕ್ಷೆ ನಿಂದಲ್ಲವಾ ಕೃಷ್ಣ! ಉಹೂಂ... ನಾನು ನಿನ್ನಂತೆ ದೇವರಲ್ಲ! ದೇವರಾಗಲು ಮನಸೂ ಇಲ್ಲ.
ನನಗೆ ಮನುಷ್ಯಳಾಗಲು ಬಯಕೆ! ಮನುಷ್ಯ ಪ್ರೀತಿಯ ಎಲ್ಲ ಮಜಲುಗಳನ್ನು ಹಾಯ್ದು ಬರುವ ತವಕ... ನೋವು ನಲಿವುಗಳ ಕಂಬನಿಯ ಜೊತೆಬೆರೆಸಿ ಕುಡಿಯುತ್ತ ಬದುಕುತ್ತೇನೆ.
ಎಲ್ಲ ಕಷ್ಟಗಳ ನನ್ನದೇ ನಂಬಿಕೆಗಳಡಿಯಲ್ಲಿ ಗೆದ್ದು ಬರುತ್ತೇನೆ! ಬಿದ್ದು ಬಿದ್ದು ತಪ್ಪುಗಳ ಜೊತೆಜೊತೆಗೆ ಕಲಿಯುತ್ತ ಸಾಗುತ್ತೇನೆ. ಮನುಷ್ಯಳಾಗೇ ಮನುಷ್ಯಳಂತೇ
ನಿನ್ನ ಪ್ರೀತಿಸುತ್ತೇನೆ! ದೇವರಾಗುವುದು ಬೇಡ ನನಗೆ! ಕೃಷ್ಣ ಮನುಷ್ಯರಂತೇ ಇರಲು ನನ್ನ ಬಿಡು. ಅದೇ ನನ್ನ ಸಹಜತೆಯ ಮಂತ್ರ... ಸಾಧ್ಯವಾದರೆ ನನ್ನ ಹೀಗೇ ಮನುಷ್ಯಳಂತೇ
ಸ್ವೀಕರಿಸು. ಇಲ್ಲ ನೀ ದೇವರಾಗು. ನಾ ದೂರವೇ ನಿಂತು ನಿನ್ನ ಪೂಜಿಸುವ ಭಕ್ತಳಾಗುತ್ತೇನೆ!
         


6 comments:

 1. ಕೃಷ್ಣ ಎನಬಾರದೇ.. ..ಕೃಷ್ಣ .. ನೆನದರೆ ..ಬಯವೊಂದಿಲ್ಲಾ,,..ಅಲ್ವ ಅಕ್ಕಾ.

  ReplyDelete
 2. ಸು೦ದರವಾಗಿ ನಿಮ್ಮ ಭಾವನೆಗಳನ್ನು ತುಮುಲಗಳನ್ನು ಕೃಷ್ಣನಲ್ಲಿ ನಿವೇದಿಸಿಕೊ೦ಡಿದ್ದೀರಿ..

  ReplyDelete
 3. dhanyavadagalu chukki avare...

  ReplyDelete
 4. ದೇವನಾಗಲಾರೆ ನಾನು...ನನ್ನತನಗಳಲಿ ಜೀವಿಸುವ ಸಾಮಾನ್ಯರಲ್ಲಿ ಸಾಮಾನ್ಯ ಮನುಜನಾಗಿರುವುದೇ ನನ್ನ ಬಯಕೆ...
  ಈ ಭಾವ ನನ್ನದೂ...
  ನೀವು ಅದನ್ನು ನಿವೇದಿಸಿದ ಪರಿ ಚಂದ ಚಂದ...

  ReplyDelete