Wednesday, January 16, 2013

ಚೈತನ್ಯಶಿಲ್ಪಿಗೊಂದು ಮನದ ಪಾರಿಜಾತ...

ಚಿತ್ರ ಕೃಪೆ: ಅಂತರ್ಜಾಲ

ಮಾನಸ ಸರೋವರದ ಅಂಗಳದಲ್ಲಿ ಮತ್ತೊಮ್ಮೆ ಕೂತು ಮಾತನಾಡಲು ಇಷ್ಟೊಂದು ದಿನಗಳೇ ಬೇಕಾಯಿತು!
 ಭಾವಗಳ ಬದಿಗೊತ್ತಿ ಬದುಕ ಕಟ್ಟಲು ಹೊರಟ ದಿನಗಳಿವೆ ಎದುರು! ಸಮಯವೆಂಬುದು ಮಾಯೆಯೆ ಸರಿ! ಏನೆಲ್ಲ ನಡೆದಿದೆ
ಈ ಕೆಲವೇ ದಿನಗಳಲ್ಲಿ ಎಂದರೆ ಅದೊಂದು ವಿಸ್ಮಯವೇ ಸರಿ! ಮನಸು ಎಲ್ಲಿ ಮರೆತೆ ನೀನು ಎಂದು ನಿನ್ನೊಳಗೇ ನೀನು ಕ್ಷಣ ಒದ್ದಾಡಿರುವ ದಿನವೂ ಇರಬಹುದಲ್ಲವಾ? ಗೊತ್ತು ಅದೆಷ್ಟೋ ಕ್ಷಣಗಳಲ್ಲಿ ನನ್ನ ಭಾವಗಳ ಮುಖಕ್ಕೆ ರಾಚುವಂತೆ ನುಡಿಯುವ ನೀನೇ ಅಂತರಂಗದಲ್ಲಿ ಒಂದೊಂದು ಕ್ಷಣವಾದರೂ ನನ್ನ ನಿರ್ಲಕ್ಷ್ಯಕ್ಕೆ ನೋಯದಿರದೇ ಉಳಿಯುವುದಿಲ್ಲ! ಯಾಕೆಂದರೆ ನನ್ನ ಮನಸು ಹೇಗೆಂಬುದು ನನಗಲ್ಲದೇ ಇನ್ಯಾರಿಗೆ ಅರಿವಾಗಲು ಸಾಧ್ಯ ಅಲ್ಲವಾ? ಆದರೆ ಎಲ್ಲವನ್ನೂ ಪ್ರಶ್ನಿಸದೇ ನುಂಗಿಕೊಳ್ಳುವ ಬುದ್ದಿವಂತರ ಸಾಲಿಗೆ ಸೇರಿಬಿಟ್ಟಿದ್ದೆವೆ ನಾವು! ನಮ್ಮದು ಪ್ರೌಢ ಸ್ನೇಹ! ಅಲ್ಲಿ ಭಾವಗಳಿಗೆ ಸಹಜತೆಗೆ ನಿರ್ವಹಣೆಯ ಪಣವಿದೆ! ನಿರ್ವಹಣೆಯನ್ನು ಕಲಿತಿದ್ದೇವೆ ಎಂಬುದು ಈ ಕ್ಷಣಕ್ಕೆ ಹೆಮ್ಮೆಪಡಬೇಕೋ ಅಷ್ಟರ ಮತ್ತಿಗೆ ಭಾವಗಳ ಹಂಚಿಕೊಳ್ಳುವ ಮನಸ್ಥಿತಿಯ  ಕಳೆದುಕೊಂಡೆವೆಂದು ಖೇದಪಡಬೇಕೋ ತಿಳಿಯದಾಗಿದೆ! ಹಾಗಿದ್ದೂ ಸಹ ಹೀಗೆ ಈ ಮಾನಸ ಸರೋವರದ ಅಂಚಿನಲ್ಲಿ ನಾನು ಮತ್ತೆ ಕುಳಿತಿದ್ದೇನೆಂದರೆ ಈ ಮನಸು ಮತ್ತು ಮನದ ನಡುವಿನ ಬಾಂಧವ್ಯ ಅದೆಷ್ಟು ಗಟ್ಟಿಯಾಗಿದ್ದಿರಬೇಕು!ಅದೊಂದು ಅವಿನಾಭಾವವೆಂಬುದು ನಿರ್ವಿವಾದ!


       ಇತ್ತೀಚೆಗೆ ತುಂಬ ಕೆಲಸದ ಒತ್ತಡದಲ್ಲೂ ಬರೆಯಬೇಕೆನ್ನಿಸುತ್ತದೆ! ಸುಮ್ಮನೇ ಕುಳಿತಾಗ ಹಾಡಬೇಕೆನ್ನಿಸುತ್ತದೆ! ಪೃಕೃತಿಯ ಎಲ್ಲೋ ಅಪರೂಪಕ್ಕೆ ಕಂಡಂತೆ ಸಂಭ್ರಮಿಸುತ್ತೇನೆ. ಲವಲವಿಕೆ, ಚೈತನ್ಯ ನನ್ನೊಳಗೆ ಸದಾ ಗುನುಗುತ್ತದೆ!  ಈ ಬೆಳಿಗ್ಗೆ ಬಸ್ ಪ್ರಯಾಣ ನನ್ನ ಇಂತಹ  ಅನೇಕ ಯೋಚನೆಗಳ ಮರುನವೀಕರಣಕ್ಕೆ ಸಾಕ್ಷಿಯಾಯಿತು! ಉದಯಿಸುತ್ತಿರುವ ಸೂರ್ಯ ಮಂಜಿನ ಬೆಟ್ಟಗಳ ಸೀಳಿ ನನ್ನತ್ತಲೇ ಧಾವಿಸುತ್ತಿದ್ದಾನೇನೋ ಎಂಬಂತ ಸಂಭ್ರಮವದು! ಅಂತಹ ಮನಸ್ಥಿತಿಯ  ಹಂಚಿಕೊಳ್ಳಲು ಈ ಮಾನಸಸರೋವರವೊಂದೇ ಅಲ್ಲವಾ ಸರಿಯಾದ ತಾಣ?

             ಇತ್ತೀಚೆಗೆ  ಬದುಕು ವಿಸ್ತಾರವಾಗುತ್ತಿದ್ದಂತೆ ಯಾವುದ್ಯಾವುದೋ ಕಾರಣಕ್ಕೆ ಯಾರ್ಯಾರೋ ಪರಿಚಯವಾಗುತ್ತಾರೆ! ಸ್ನೇಹವಾಗುತ್ತದೆ! ಮಾತು ಕತೆ ಬೆಳೆದಂತೆ  ಎಲ್ಲೋ ಅಟ್ಯಾಚ್ಮೆಂಟ್ ಕೂಡ  ಗೊತ್ತಿಲ್ಲದೇ ಬೆಳೆದುಕೊಂಡಿರುತ್ತದೆ. ಹಾಗೆ ಆರಂಭವಾದ ಸ್ನೇಹಕ್ಕೆ ಅರ್ಥ ಹಚ್ಚುವ ಪ್ರಯತ್ನವೇ ಇರದಿದ್ದರೂ ಮನುಷ್ಯ ವ್ಯಕ್ತಿತ್ವಗಳಿಂದ,  ವರ್ತನೆಗಳಿಂದ, ಎಲ್ಲೋ ನಮ್ಮಂತವರಿಗೆ ಅಂಟಿಕೊಳ್ಳುವ ಬಾಂಧವ್ಯಗಳೂ ಜಾಸ್ತಿಯಾಗಿಬಿಡುತ್ತದೆ!
ಹಾಗೇ ಹಾಗೇ  ಅದೆಷ್ಟೋ ಜನ ನನ್ನಲ್ಲಿ ಕೇಳಿದ್ದಿದೆ! ನನಗೂ ಈ ಮಾನಸ ಸರೋವರದ ಮನಸಿನಂತಹ ಸ್ನೇಹ ಪ್ರೀತಿ ಕೊಡಬಲ್ಲೆಯಾ ನೀನು ಅಂತ! ಯಾಕೆ ಹಾಗನ್ನಿಸುತ್ತದೆ!
   ಸಾವಿರ ಬಾರಿ ಯೋಚಿಸಿದ್ದೇನೆ! ಮನಸು ಇದು ಮನಸಿಗೆ ಮಾತ್ರ ಸಾಧ್ಯವಾದ ಪ್ರೀತಿ! ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಪ್ರೀತಿಯಲ್ಲ! ಹೇಳಬೇಕೆಂದರೆ ಯಾರಿಗಾದರೂ ಅರ್ಥ ಹೇಳಲಾರದ ಒಂದು ಬಾಂಧವ್ಯವಿದು ನನ್ನ ಮಟ್ಟಿಗೆ!  ಯೋಚಿಸಿದ್ದೇನೆ.... ನಿನ್ನ ಬದುಕಿಗೆ ಬೆಳಕು ಕೊಡುತ್ತೇನೆ ಅಂತ ಬರುವವರು ಸಹ ಉರಿಯುವ ಹಣತೆಯಾಗಬಹುದು.
ದೀಪವಾಗಿ ಬೆಳಕ ಕೊಡಬಹುದು. ಇಲ್ಲ ಅನ್ನುವುದಿಲ್ಲ. ಆದರೆ ನೀ ನನ್ನ ಬದುಕಿಗೆ ಸೂರ್ಯನ ಹಾಗೆ! ಬೆಳಕೇ ನೀನು.. ನೀನಿದ್ದಲ್ಲಿ ಕತ್ತಲೆಯಿಲ್ಲ. ರಾತ್ರಿಯೆಲ್ಲ ಬೆಳದಿಂಗಳಾಗಿ, ಹಗಲೆಲ್ಲ ಬೆಳಕಾಗಿ ಒಳಗಡಲ ತುಂಬ ಆವರಿಸಿಕೊಂಡಿರುವ ಈ ಪ್ರೀತಿಗೆ ಯಾರಿಗೆ ಹೇಗೆ ಅರ್ಥ ಹೇಳಲಿ? ಜೀವ ಭಾವದ ಉಸಿರಾಗಿರುವ ಒಲವಿಗೆ  ಒಂದು ರೂಪವನ್ನು ಎಲ್ಲಿಂದ ತರಲಿ? ಒಂದು ಕಾಲದಲ್ಲಿ ಪ್ರೀತಿಯೆಂಬುದು ನನ್ನೊಳಗೇ ಹರಿವ ನದಿಯಾಗಬೇಕು ಕಡಲಾಗಬೇಕು! ಪ್ರೀತಿಯಿಂದ ಏನೂ ನಿರೀಕ್ಷಿಸದೇ ಸುಮ್ಮನೇ ನಿಲ್ಲಬಲ್ಲ ಹಿಮವಾಗಬೇಕು ಅಂದುಕೊಂಡ ಕ್ಷಣಗಳನ್ನೇ ಭಗವತಿ ಇವತ್ತಿಗೆ ಸಾಕ್ಷಾತ್ಕರಿಸುತ್ತಿದ್ದಾಳೆ! ಎಲ್ಲ ಸಂಕಟಗಳು ಇದಕ್ಕೆ ಅರ್ಘ್ಯವಷ್ಟೇ.. ತಪದ ಕುದಿತದಲ್ಲಿ ಮತ್ತೆ ಮತ್ತೆ ಅಪರಂಜಿಯಾಗಿಸುವ ಸಂಕಲ್ಪ ಅವಳದ್ದಾದರೆ ಅದಕ್ಕೆನ್ನ ಸ್ವೀಕೃತಿಯಿದೆ! ಇಷ್ಟೆಲ್ಲ ಯಾಕೆ ಹೇಳಬೇಕೆನ್ನಿಸಿದೆಯೆಂದರೆ  ಮತ್ತೆಮತ್ತೆ ನಿನಗೆ ನಾನು, ನನ್ನ ವರ್ತನೆ, ನನ್ನ ವಿಚಾರಗಳು, ಭಾವಗಳು ಎಲ್ಲವೂ
ಪ್ರಶ್ನೆಯಾಗಿಬಿಡುತ್ತವಾ? ನಾನೊಬ್ಬಳು ಅವಿವೇಕಿಯಾಗಿ, ನನ್ನ  ನಡೆನುಡಿಗಳು ನಿಂಗೆ ವಿಶ್ವಾಸಕೊಡುವಲ್ಲಿ ಸೋತು ಹೋದವಾ? ಒಮ್ಮೊಮ್ಮೆ ಕಾಡುತ್ತವೆ ನನ್ನನ್ನೂ.....


             ಸ್ನೇಹೀ ಮನಸೇ.... ಅದೆಷ್ಟೋ ತಿಂಗಳು ಒಡನಾಡಿದ ಬಾಂಧವ್ಯವೊಂದು ಕೇಳೀತು! ನಾನಿಲ್ಲದಿರೆ ನಿನಗೆ ಏನನ್ನಿಸಿತು? ನನ್ನ ಇಲ್ಲದಿರುವಿಕೆ ನಿನ್ನಲ್ಲಿ ಕಂಪನವ ತರಲಿಲ್ಲವಾ? ಅಂತ. ಹಾಂ ಮನಸು ಹೇಳೀತು ಹೌದು ಗೆಳೆಯ ತುಂಬಾ ಮಿಸ್ ಮಾಡ್ಕೊಂಡೆ ನಿನ್ನ ಅಂತ. ನಿಜವೇ... ಹಾಗಿದ್ದರೆ ನಿನ್ನ ಮನಸಿಗಿಂತ ನಿನ್ನ ತುಂಬಾ ನಾನಿದ್ದೇನೆ!
ಅಂತ ಹೇಳಿದ ಗೆಳೆಯನಿಗೆ  ವಿವರಿಸದೇ ಬಂದುಬಿಟ್ಟೆ! ಯಾಕೆಂದರೆ ಎಲ್ಲ ಸತ್ಯಗಳ ಆಚೆ  ಯೋಚನೆ ಮಾಡುತ್ತಿದೆ ಮನಸು! ಯಾರಿಲ್ಲದಿರೆ ನನ್ನ ಆತ್ಮವಿಶ್ವಾಸದ ಒಡಲು ಕಂಪಿಸೀತು? ಯಾರಿಲ್ಲವೆಂದುಕೊಂಡ ಕ್ಷಣ ಯಾರಿಗೂ ಹೇಳದೇ ಕಂಬನಿ ಸುರಿದೀತು! ಯಾರಿಲ್ಲವೆಂಬುದು ನಿನ್ನಲ್ಲಿ ಕಂಬನಿಯ ಕವಿತೆ ಬರೆಸೀತು! ಯಾರಿಲ್ಲವೆಂಬುದು ನನ್ನ ಕತ್ತಲೆಯ ಕೂಪಕ್ಕೆ ತಳ್ಳೀತು! ಯಾರಿಲ್ಲವೆಂಬುದು ನನ್ನ ಬೆಳಗಿನ ಬಣ್ಣ ಕಸಿದೀತು? ಕೇಳೀತು ಮನವೇ ಅದಕ್ಕೆ ಉತ್ತರ ನನ್ನಲ್ಲಿತ್ತು!  ಮನಸು ಮಾತ್ರವಲ್ಲವಾ? ಆ ಮನಸಿನ ಬೆಳಕಿನ
ಜಾಗದಲ್ಲಿ ಇನ್ಯಾರಿಲ್ಲವೆಂಬುದು ಸತ್ಯ! ಹೇಗೆ ಹೇಳಲಿ ಆ ನನ್ನ ಗೆಳೆಯನಿಗೆ ನನ್ನ ಒಳಗನ್ನು ತಲುಪಲಾರದ ಒಂದು ಖಾಲಿ ಕಾಗದದಂತ ಸ್ನೇಹಕ್ಕೆ!
" ನನ್ನ ಮೇಲೆ ಕವಿತೆ ಬರೀ" ಅಂತ ಹೇಳಲಾಗದೇ ಬಯಸುವ ಭಾವಜೀವಿಗೆ ಎಂದೋ ಗೀಚಿದ ಮೂರು ಸಾಲುಗಳನ್ನೇ "ಇದು ನನಗಾಗಿಯ?" ಅಂತ ಕೇಳುವವನಿಗೆ "ಹಾಂ" ಎಂಬ ಉತ್ತರಕ್ಕೆ ತುಂಬ ಖುಶಿಪಡುವ  ಸ್ನೇಹಿತನಿಗೆ ನನ್ನ ಬದುಕಿನ ಬೆಳಕಾಗುವಾಸೆ! ಆದರೆ ನನ್ನ ಬದುಕಿನ ಬೆಳಕು! ಅದು ನನ್ನ ಮನಸು ಮಾತ್ರ!

     

             ಇವತ್ತು ನಿನ್ನೊಂದಿಗೆ ಎಲ್ಲ ಹಂಚಿಕೊಂಡುಬಿಡುವ ತವಕ. ನಾಳೆ ಮತ್ಯಾವಾಗ ಬರೆಯುತ್ತೆನೋ ಗೊತ್ತಿಲ್ಲ. "ಸಿಟ್ಟು, ಕೋಪ, ತಾಪಗಳ ಹಿಂದಿನ ಪ್ರೀತಿ ಗೊತ್ತಾಗದಿರುವ ನೀನ್ಯಾವ ಸೀಮೆ ಕವಿಯೇ?" ಅಂದ  ಸ್ನೇಹಿತರೊಬ್ಬರ ಮಾತು ನೆನಪಾಗುತ್ತದೆ. ಅವರ  ಕೋಪದ ಹಿಂದಿನ ಪ್ರೀತಿ ಅರ್ಥವಾಗದವಳಲ್ಲ. ಆದರೆ ಅರ್ಥವಿಲ್ಲದ ಪ್ರೀತಿಗಳನ್ನು ವಿನಾಕಾರಣ ಪೋಷಿಸಬಾರದಲ್ಲ!  ಪ್ರೀತಿಯೆಂದರೆ ಹಾಗೆ! ಅದಕ್ಕೆ ಎಲ್ಲವೂ ಇದೆ. ಎಲ್ಲಾ ಹಕ್ಕೂ ಇದೆ! ಸಿಟ್ಟು ಮಾಡುವ, ಅನುಮಾನಿಸುವ, ಆರೈಕೆ ಮಾಡುವ, ಸಂತೈಸುವ ಮತ್ತು ವಿನಾಕಾರಣ ದೂರತಳ್ಳುವ ಹಕ್ಕು ಕೂಡ ಪ್ರೀತಿಗೆ ಇದೆ. ಹಾಗಂತ ಎಲ್ಲ ಪ್ರೀತಿಗಳೂ ಅಪ್ಪಿ ಮುದ್ದಾಡುವ, ಬದುಕು ಹಂಚಿಕೊಳ್ಳುವ ಪ್ರೀತಿಯೇ ಆಗಬೇಕೆಂದೇನೂ ಇಲ್ಲ! ಒಳಗಿನ ವಿಶ್ವಾಸಕ್ಕೆ ಚೈತನ್ಯ ನೀಡುವ ಪ್ರೀತಿಯೆಂದರೆ ಅದು ಬಯಕೆಗಳ ಮೋಹಗಳ ಮೀರಿದ್ದು.  ಒಂದು ಬೇರೆಯೆಂಬ ಭಾವವಲ್ಲ. ಒಂದೆ ಎಂಬ ಭಾವ! ಎಷ್ಟೋ ಬಾರಿ ನನ್ನ ಭಾವಗಳೇ ಹುಚ್ಚೇನೋ ಅಂದುಕೊಳ್ಳುತ್ತಿದ್ದೆ! ಆದರೆ ಇತ್ತೀಚೆಗೆ ಇಂತಹ ಅನೇಕ ಪ್ರೀತಿಗಳ ನೋಡಿದ್ದೇನೆ. ಇರುತ್ತವೆ ಬಹಳ ಜನರ ಬದುಕಿನ ಸಾಧನೆಯ ಹಿಂದೆ
ಇಂತದ್ದೇ ಒಂದು  ಅವಿನಾಭಾವದ ಪ್ರೀತಿ! ಅಲ್ಲಿ ವ್ಯಕ್ತಿಯಾಗಲೀ, ಭೌತಿಕ ಇರುವಿಕೆಯಾಗಲೀ ಅವಶ್ಯಕವಲ್ಲ! ಅದು ಒಂದು ನಿಶ್ಚಲ ಭಾವ! ನಿರ್ವಕಾರ ಪ್ರೇಮ! ಮತ್ತೆ ಮತ್ತೆ ಏನೇನೋ ಕೊರೆಯುತ್ತದ್ದೇನೆ ಅನ್ನಿಸುತ್ತಾ ನಿನಗೆ? ಇರಲಿ ಬಿಡು. ಇಷ್ಟಾದರೂ ನನ್ನ ಸಹಿಸು ಅನ್ನುವ ಹಕ್ಕು ನಂಗೂ ಇದೆಯಲ್ಲವಾ?

            ಒಂದು ಕನಸನ್ನು ನನಸಾಗಿಸಿಕೊಳ್ಳಲು ನಿರಂತರ ಎರಡು ತಿಂಗಳ ಕಾಲ ಕ್ಷಣ ಬಿಡದೇ ಶ್ರಮಿಸಿದೆ. ಅದರ ಫಲವಾಗಿ ಇಂದು ಕನಸು ಸಾಕಾರಗೊಳ್ಳುತ್ತಿದೆ! ನಿನ್ನೊಂದಿಗೆ ಕೂತು ಮಾತನಾಡುವ ಮನಸಿಲ್ಲ ಅಂತ ಹೇಗೆಂದುಕೊಂಡೆ ನೀ ಎಂಬುದೇ ಅರ್ಥವಾಗಲಿಲ್ಲ ನನಗೆ!  ಸಮಯ ಮನಸ್ಥಿತಿಗಳಿದ್ದೇ ಹಾಗಾದರೆ ನಾನಾದರೂ ಇನ್ನು ಹೇಗೆ ನಿನ್ನ ಎಳೆದು ತರಬಹುದಿತ್ತು ಈ ಸರೋವರದಂಚಿಗೆ?  ಏನೇ ಇರಲಿ. ವ್ಯಕ್ತಿತ್ವದ ಅಹಂನಲ್ಲಿ ಇಂತಹ ನಲುಗುವಿಕೆ ಇದೆಯೆಂದಾದರೆ ಒಪ್ಪಿಕೊಳ್ಳುತ್ತೇನೆ. ಆದರೆ ಇದನ್ನೇ ವಿಶ್ವಾಸ ಕಳೆದುಕೊಂಡ ಮನಸ್ಥಿತಿ ಎಂದುಕೊಳ್ಳುವಿಯಾದರೆ ನಾನು ಬಲವಾಗಿ ವಿರೋಧಿಸುತ್ತೇನೆ. ಒಂದು ಕನಸು ಕಮರಿದ ನೋವು ಅದೆಷ್ಟು ಗಾಢವಾಗಿ ಎದೆಯಲ್ಲಿ ಚುಚ್ಚಿಕೊಂಡಿದೆ! ಜೊತೆಜೊತೆಯಲ್ಲಿ ಇನ್ನೊಂದು ಕನಸು ಸಾಕಾರಗೊಂಡ ನಲಿವು! ದಿನದಿನವೂ ವಿಸ್ಮಯದ ಪಾಠ ಹೇಳುವ ಬದುಕಿಗೆ ನಮೋ ನಮಃ!! ಒಂದು ಅದಮ್ಯ ಸಂತಸವೆಂದರೆ ಈ ಹಂತದಲ್ಲೂ ಜೀವಂತಿಕೆಯ ಉಳಿಸಿಕೊಂಡಿದ್ದೇನೆಂಬುದು! ನನ್ನ ಬದುಕಿನ ಈ ಜೀವಂತಿಕೆಗೆ ಈ ಕ್ಷಣಕ್ಕೆ ಎಲ್ಲ ಸ್ತರಕ್ಕೆ ನೀ ಬೆಳಕಾಗಿ ಇದ್ದಿ. ಇರುತ್ತೀ.  ಆತ್ಮವಿಶ್ವಾಸದ ಈ  ಜೀವಂತಿಕೆಯ ಮೂಲಶಕ್ತಿ ನೀನು. ಇದಕ್ಕಿಂತ ಹೆಚ್ಚಿನದು ಇನ್ನೇನು ಹೇಳಲಿ? ಸದಾ ನಲಿವನ್ನು ಹಂಚಬಯಸುವ ಮನಸೇ ನೋವು ನಲಿವಿನ ಸಮ್ಮಿಶ್ರ ಬದುಕಿಗೆ ನೀ ಜೀವಶಕ್ತಿಯಾಗಿದ್ದೀ ಎಂಬುದಕ್ಕಿಂತ ಇನ್ನೆಂತ ಸಾರ್ಥಕತೆ ಬೇಕು ಬದುಕಿಗೆ? ಪ್ರೀತಿಗೆ?

     ಎತ್ತರೆತ್ತರಕ್ಕೆ ಒಯ್ದ ಬದುಕಿಗೆ, ಬದುಕು ಭಾವಗಳ ಜೀವಶಕ್ತಿಗೆ, ಒಂದು ದೀರ್ಘ ಪ್ರಣಾಮದೊಂದಿಗೆ ಇಂದು ನಾನಿರುವ ಈ ಕ್ಷಣಗಳ ಎಲ್ಲ ಕ್ಷಣಗಳ ಜೀವಂತಿಕೆಯನ್ನು ನಿನ್ನಲ್ಲಿ ಪ್ರೀತಿಯಿಂದ ಅರ್ಪಿಸುತ್ತಿದ್ದೇನೆ. ಇದು ಯಾವುದೋ ಜ್ಞಾನಪೀಠದ ಸಾಧನೆಯಲ್ಲ! ಗೊತ್ತು ನನಗೆ. ಆದರೆ ನನ್ನ ಪಾಲಿಗೆ ಅದಕ್ಕಿಂತ ದೊಡ್ಡದು ಬದುಕಿನ ಪ್ರತಿಕ್ಷಣದ ಜೀವಂತಿಕೆಯ ಉಳಿಸಿಕೊಂಬ ಉತ್ಸಾಹದ್ದು. ಎಲ್ಲ ಕಮರಿದ ಕನಸುಗಳ ಗೋರಿಯ ಮೇಲೆ ಕಟ್ಟುವ ಆತ್ಮವಿಶ್ವಾಸದ ಗುಬ್ಬಿ ಗೂಡಿನದು! ಅಂತದ್ದೊಂದು ಪಾರಿಜಾತದ ಕುಸುಮದಂತ ಅರ್ಪಣೆ ಈ ಮನಸಿನದ್ದು. ಈ ಮಾನಸ ತೀರದಲ್ಲಿ ತೇಲಿ ಬಿಟ್ಟಿರುವ ಪಾರಿಜಾತದ ಹೂ ನಿನ್ನ ಸೇರಲಿ...... ಶಾಂತಸರೋವರದಂಚಿನಲ್ಲಿ............