Sunday, December 4, 2016

ಭಾಷೆ -ಬಳಕೆ.

ಮತ್ತೊಮ್ಮೆ ನಿಮ್ಮೆದುರಿನಲ್ಲಿ.... ಈಗಷ್ಟು ಬರೆಯೋದಕ್ಕೆ ನೂರು ಕನಸುಗಳಿವೆ. ಹೇಳೋದಕ್ಕೆ ಸಾವಿರ ಮಾತುಗಳಿವೆ. ಆದರೆ ಕೇಳೋರೊಬ್ಬರು ಬೇಕಲ್ಲ!! ಯಾರಿಲ್ಲದಿದ್ದರೂ ಏನಂತೆ. ಊದೋ ಶಂಖ ಊದೋದೆ. ಬಾರ್ಸೊ ಜಾವಟೆ ಬಾರ್ಸೋದೆ. ಹಂಗನ್ಕೊಂಡ್ಮೇಲೆ ಬರವಣಿಗೆ ಹಗುರ ಅನ್ನಿಸಿದೆ. ಓದು ಆಪ್ತ ಅನ್ನಿಸಿದೆ. ಸುತ್ತ ಮುತ್ತ ಸಿಕ್ಕಾಪಟ್ಟೆ ಬುದ್ದಿವಂತರು ಬುದ್ದಿಜೀವಿಗಳು ಪಂಡಿತರು
ಎಲ್ಲ ತುಂಬ್ಕೊಂಡು ನಾನೇ ನನ್ನಷ್ಟೊತ್ತಿಗೆ ಗಿಲ್ಟ್ ಫೀಲ್ ಮಾಡ್ತಾ ಬರೀಲೋ ಬೇಡ್ವೋ ಯಾರನ್ಕೊತಾರೋ ಅನ್ಕೊಳ್ತಾ ಒಳಗೊಳಗೆ ಸಣ್ಣಗೆ ಬೆವರ್ತಾ ಬದ್ಕು ಒಂಥರಾ ಕಟ್ಟಿ ಹಾಕ್ಕೊಂಡಿರೋ ಹೊತ್ತಿಗೆ ಹೀಗೆಲ್ಲ ಜ್ಞಾನೋದಯ ಆಗಿ ನಿಮಗೆಲ್ಲಾ ಕಷ್ಟ ಕೊಡ್ತಿದ್ದೀನಿ ಅನ್ನಿಸ್ತಿದ್ರೂ ಸ್ವಸ್ವಲ್ಪ ಸಹಿಸ್ಕೋಳ್ತ ಸ್ವಸ್ವಲ್ಪ ಬೈಕೊಳ್ತ  ಓದ್ತಾ ಇರುವಾಗ ಇವತ್ತಿನ ವಿಷಯಕ್ಕೆ ಬಂದ್ಬಿಡೋಣ.


 ಇತ್ತೀಚೆಗೆ  ಭಾಷಾ ಸಂಸ್ಕೃತಿ ನೆ ಮರ್ತು ಹೋಗಿರೋ ಹಾಗೆ ಅನ್ನಿಸ್ತಾ ಇರತ್ತೆ ನನಗೆ ಆಗಾಗ. ನನಗೊಬ್ಬಳಿಗೆ ಹೀಗಾ ಅಥವಾ ನಿಮಗೆಲ್ಲರಿಗೂ ಹೀಗಾ ಗೊತ್ತಿಲ್ಲ. ಬಯಲ ಸೀಮೆ ಅಜ್ಜಪ್ಪ ಬಸ್ಯಾ ಕರ್ಯಾ ಮತ್ತೆ ಅದೆಂತೆಂತದೋ ಆ ಮಗನೆ ಈ ಮಗ್ನೆ ಅಂದ್ರೆ ಏನೂ ಅನ್ಸಲ್ಲ. ಕೆಲಸಕ್ಕೋಸ್ಕರ ಎಲ್ಲೆಂದಿದ್ಲೋ ಬಂದಿರೋ ಜನ ಕುಡ್ಕೊಂಡು ರಸ್ತೆ ಬದಿಯಲ್ಲಿ ಬಾಯಿಗೆ ಬಂದಂತೆ ಮಾತಾಡೋ ಜನ, ಬೀದಿ ಅಂಚಲ್ಲಿ ಬೋರಿಂಗ್ ಬಾವಿ ನೀರಿಗೆ ನಿಂತ ಹೆಂಗಸರು ಕಿತ್ತಾಡೋ  ಭಾಷೆ ಎಲ್ಲ ಸಹನೀಯ. ಭಾಷೆ ಕೂಡ ಮನುಷ್ಯನ ಹುಟ್ಟು ಪರಿಸರದೊಂದಿಗೆ ಅವಿನಾಭಾವದ ಸಂಬಂಧ. ಕನ್ನಡವನ್ನ ಕೆಟ್ಟಕೆಟ್ಟದಾಗಿ ಆಡೋ ಬೇರೆ ಬೇರೆ ಜನರನ್ನೂ ನಾವು ಸಹಿಸ್ಕೊಳ್ತೇವೆ. ಉತ್ತರಕರ್ನಾಟಕ, ಮೈಸೂರ ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಹವ್ಯಕ ಕನ್ನಡ ಅಂತೆಲ್ಲ ಸಾವಿರ ವಿಂಗಡಣೆಯ ಮಾಡಿಯೂ ನಾವೆಲ್ಲ ಭಾಷೆಯ ವಿಷಯದಲ್ಲಿ  ಭಾವ ನೋಡಿ ಸಮಾಧಾನ ಪಟ್ಟುಕೊಳ್ತೇವೆ. ಅನಕ್ಷರಸ್ತರು ಕಾಡು ಜನರು ಹೇಗೆ ಮಾತನಾಡಿದರೂ ಅವರ ಅಭ್ಯಾಸ ಅದು ಅಂತ ಬಿಟ್ಟುಬಿಡ್ತೇವೆ. ಆದರೆ ಈ ನಾಗರಿಕರು, ವಿದ್ಯಾವಂತರು, ಸುಸಂಸ್ಕೃತರು ಅನ್ನೋರು ಬಳಸುವ ಭಾಷೆಗಳನ್ನ, ಉಪಯೋಗಿಸುವ ಶಬ್ಧಗಳು ಮಾತ್ರ ತುಂಬಾ ಕಸಿವಿಸಿಯುಂಟುಮಾಡುತ್ತದೆ! ಯಾಕೆ? ಅಂತ ನಾನೇ ನೂರಾರುಬಾರಿ ಅನ್ಕೊಳ್ತೇನೆ!


 ಶಬ್ಧಗಳ ವಿಷಯದಲ್ಲಿ ಮಡಿವಂತಿಕೆ ಸಲ್ಲದು ಎಂಬುದು ನಿಜವಾದರೂ ಸಾಮಾಜಿಕ ಸ್ಥಳಗಳಲ್ಲಿ ವಿದ್ಯಾವಂತರು ಉಪಯೋಗಿಸುವ ಭಾಷೆಗೆ ಸೌಜನ್ಯವಿರಬೇಕು ಎಂಬುದು ಅಲಿಖಿತ ಮನಸ್ತಿತಿಯೇನೋ.  ಅಥವಾ ವಿದ್ಯೆ ಅಷ್ಟಾದರೂ ಸೌಜನ್ಯ, ಸಂಸ್ಕಾರ ಕಲಿಸಿರಬೇಕೆಂಬುದು ಕೂಡ ನಮ್ಮಂತವರ ರಿಸ್ಟ್ರಿಕೆಡ್ ಮನಸ್ತಿಯೇ ಇರಬಹುದು. ಮನೆಯಲ್ಲಿ ಕೂತು ಓದುವ ಪುಸ್ತಕಗಳಲ್ಲಿ ಶಬ್ಧಗಳು ಹೇಗಿದೆ ಎಂಬುದಕ್ಕಿಂತ ವಿಷಯವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹಾಗಿದ್ದೂ   ಸಾರ್ವಜನಿಕ ಮಾತು, ಸಭೆ,  ಎಪ್ ಬಿ ಅಂತ ಜಾಗಗಳಲ್ಲಿ  ಭಾಷಾ ಸಭ್ಯತೆಯನ್ನು ಗಮನಿಸಲಾಗುತ್ತದೆ. ಅದು ಅವರ ನಾಗರಿಕ ಮನಸ್ತಿತಿಯ ಮುಖವಾಣಿಯೆಂದೇ ನಂಬಲಾಗುತ್ತದೆ. ಇವೆಲ್ಲ ಎಷ್ಟು ಸರಿ ಎಷ್ಟು ತಪ್ಪು ಎಂದು ಇನ್ನೊಬ್ಬರು ಲೆಕ್ಕ 
ಹಾಕಲು ಸಾಧ್ಯವಾಗದು. ಅವರವರದ್ದೇ  ಗುಣಾಕಾರಗಳು ಅಲ್ಲಿರೋದು. 

   ಇಷ್ಟೆಲ್ಲ ಹೇಳೋಕ್ ಮುಂಚೆ ನನಗೂ ಗೊತ್ತಿಲ್ಲ. ಯಾವುದು ಸರಿ ಯಾವ್ದು ತಪ್ಪು ಅಂತೆಲ್ಲ. ಮಾತಿನಾಚೆಗೆ ಮನಸೇ ಮುಖ್ಯ ಅನ್ನೋ ನನ್ನನ್ನು ಮಾತು ಹರ್ಟ್ ಮಾಡತ್ತೆ .  ಭಾಷೆಯ ಬಳಕೆ ತಪ್ ತಪ್ಪಾಗಿ  ಮಾತಾಡಿದ್ರೆ ಮೈ ಉರಿಯತ್ತೆ
ಅನ್ನೋದು ನೂರಕ್ಕೆ ನೂರು ಸತ್ಯ. ಮಾತು ಕೃತಿ ಎರಡೂ ಒಂದಷ್ಟು ಸಾಮ್ಯತೆ ಕಾಣದಿದ್ದರೆ ಅದೊಂದು ನಾಟಕೀಯ ಅನ್ನಿಸೋಕೆ ಎಷ್ಟೊತ್ತು ಬೇಡ. ಆಮೇಲಿಂದು ಅವರವರಿಗೆ  ಬಿಟ್ಟ ವಿಷಯ. 

 ಇವತ್ತಿಗೆ ಇದಿಷ್ಟೇ, ನಿಮಗೂ ನನ್ನಂಗೆ ಹೀಗೆಲ್ಲಾ ಅನ್ನಿಸ್ತಾ ಇದ್ರೆ ಹೇಳದೆ ಇರ್ಬೇಡಿ. ಮುಕ್ತಾಯಕ್ಕೊಂದು ಶರಾ ಬರೆಯೋ ವಿಷಯ ಅಂತೂ ಇದಲ್ಲ.

ಸಿಗುವಾ ಮತ್ತೊಮ್ಮೆ ನಾಳೆಗಳಿದ್ದರೆ.. 

Saturday, November 5, 2016

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ...ತುಂಬಾ ದಿನಗಳ ನಂತರ ಬರೆಯಬೇಕೆಂಬ ಒತ್ತಡಕ್ಕೆ ಬಿದ್ದಿದ್ದೇನೆ. ಹೌದು. ನನ್ನ ಮೌನಗೊಳಿಸುವ ನಿಟ್ಟಿನಲ್ಲಿ ನಿನ್ನದು ಪ್ರಯತ್ನವಾ ಅಥವಾ ನನ್ನ ಸುಮ್ಮನುಳಿಸುವ ತಂತ್ರವಾ ಗೊತ್ತಿಲ್ಲ ನನಗೆ. ಆದರೆ ಒಮ್ಮೆ ಮೌನವಾಗುವ ಹಂಬಲಕ್ಕೆ ಬಿದ್ದರೆ ಮತ್ತೆ ನಿನಗೂ ನನ್ನ ಹತ್ತಿರ ಬರೋಕಾಗಲ್ಲ ಎಂಬುದು ನಿನಗೆ ಗೊತ್ತಿದೆಯಲ್ಲ. ಅತಿಯಾದ ಆತ್ಮವಿಶ್ವಾಸ ಅತಿಯಾದ ಹಟ ಅತಿಯಾದ ಎಲ್ಲವನ್ನೂ ಮಾಡಿ ನನ್ನ ಒತ್ತಡಕ್ಕೂ ನನ್ನ ಮನಸ್ಸಿನ ಒತ್ತಡಕ್ಕೂ ಕಾರಣವಾದ ಎಲ್ಲವನ್ನೂ ನಾನು ಇನ್ನಿಲ್ಲ ಎನ್ನುವಂತೆ ತೊರೆದಿದ್ದೇನೆ. ಸ್ವಲ್ಪ ಕಷ್ಟ ನನಗೆ ನಿಜ. ಆದರೆ ಹಠಕ್ಕೆ ಬಿದ್ದರೆ ಎಲ್ಲವನ್ನೂ ಬಿಡುತ್ತೇನೆ. ಯಾಕೆಂದರೆ ನಾನು ಒಪ್ಪಿಕೊಳ್ಳುತ್ತೇನೆ. ಇದು ನನಗೆ ಆಗೋದಿಲ್ಲ ಅಂತ. ಮೊದಲಾದರೆ ತುಂಬಾ ಕಾಲ ನೋಯ್ತಾ ಇರ್ತಿದ್ದೆ. ಆದರೆ ಈಗ ಹಾಗಿಲ್ಲ. ಅತಿಯಾದ ನೋವಾಗತ್ತೆ. ಆದ್ರೆ ದೇವರು ಇದನ್ನೇ ಬರ್ದಿದ್ದಾನೆ ಅಂತ ಅನ್ಕೊಂಡು ಆರಾಮಾಗ್ತೆನೆ. ಹೌದು. ಮಾತು ನನ್ನ ಅಗತ್ಯ. ಬದುಕಿಗೆ ಅನಿವಾರ್ಯ ಕೂಡ. ಎಲ್ಲೊ ನನಗೆ ಪ್ರೀತಿ ಹರಿಸೋಕೆ ಒಂದು ಜೀವ ಬೇಕು. ಅದು ನನ್ನಷ್ಟೇ ಆಪ್ತವಾಗಿ ತಬ್ಬಿಕೊಳ್ಳುವ ಜೀವ ಆಗಿರಬೇಕು ಎಂಬುದು ನನ್ನೊಳಗೆ ನನಗೇ ಅರಿವಿಲ್ಲದಷ್ಟು ಅಂಟಿಕೊಂಡಿರುವ ಸತ್ಯ. ಹಾಗಂತ ಅಗತ್ಯವಿಲ್ಲ ಅಂದವರಿಗೆ ಅದನ್ನೂ ಹರಿಸಲಾರೆ. ಹೆಜ್ಜೆ ಹೆಜ್ಜೆಗೆ ನನ್ನ ನೋಯುಸುವುದನ್ನು ಚಟವಾಗಿಸಿಕೊಂಡವರ ಜೀವಕ್ಕಿಂತ ಪ್ರೀತಿಸುತ್ತಿದ್ದರೂ ತೊರೆದಿದ್ದೇನೆ. ಎಲ್ಲಿ ನನ್ನ ಖುಶಿಗೆ ಜಾಗವಿಲ್ಲವೋ ಎಲ್ಲಿ ನನಗೆ ಅಸ್ತಿತ್ವವಿಲ್ಲವೋ ಅಲ್ಲಿ ನಾ ಹೇಗಿರಲಿ? ನನಗೆ ಅವ್ಯಕ್ತವೆನ್ನುವುದು ಅಭಿವ್ಯಕ್ತವಲ್ಲದಿದ್ದರೆ ಅದೂ ಬೇಡ. ನೀನು ಆಧ್ಯಾತ್ಮದ ಮಾತಾಡುತ್ತಿ!  ಒಂದ್ವೇಳೆ ನನ್ನ ಕೂಡ ಸಹಿಸಲಾಗದಷ್ಟು ಅಸಹನೆ ನಿನ್ನೊಳಗಿದೆ ಅಂತಾದರೆ ನಿನ್ನೊಳಗೆ ಇನ್ನೆಷ್ಟು ಬೆಂಕಿ ಇರಬಹುದು!! ಅವನ್ನೆಲ್ಲ ಇಟ್ಟುಕೊಂಡು ಹೇಗೆ ನೀನು ಜೋಗಿಯಾಗಲು ಸಾಧ್ಯ? ಮನಸು ಶಿವ ಆಗಬೇಕೆಂದರೆ ಅದರೊಳಗೆ ಶಾಂತಿ ನೆಲಸಿರಬೇಕು. ಅಥವಾ ನಿರ್ಲಿಪ್ತವಾಗಬೇಕು. ನಿನ್ನನ್ನು  ಕದಲಿಸದಷ್ಟು ಸಹನೆ ತುಂಬಿಕೊಳ್ಳಬೇಕು. ಆದರೆ ನೀನೋ ಪಕ್ಕದಲ್ಲಿ ಶಿಲೆಯಂತೆ ನಿಲ್ಲಬಲ್ಲ ನನ್ನನ್ನೂ ದೂರ ಇರು ಅಂತ ದೂರ ಮಾಡಿಕೊಳ್ಳುತ್ತಿ. ಸರಿ ಬಿಡು ನನಗಾದರೂ ಏನಗತ್ಯ? ಒಂದ್ವೇಳೆ ಅಗತ್ಯವೇ ಆಗಿದ್ದರೆ ಅದು ನನ್ನ ಮನಸ್ಸಿನದು. ಅದಕ್ಕೆ ದಕ್ಕದ ನೀನು ಇದ್ದರೆಷ್ಟು ಇಲ್ಲಗಿದ್ದರೆಷ್ಟು!!?? ಇದು ವಾಸ್ತವವಾದರೆ ನಾನು ಪ್ರೀತಿಸುವ ಎಲ್ಲ ಜೀವಗಳು ನನ್ನವೇ. ಅವು ಹೇಗಿರಲಿ ಎಲ್ಲಿರಲಿ. ನನ್ನದೇ ಎಂಬಂತೆ ಬದುಕುತ್ತೇನೆ ನಾ. ಅದನ್ನೆಲ್ಲ ಸಹಿಸುವಷ್ಟು ಸಹನೆಯೂ ಇದೆ. ಶಾಂತಿಯೂ ಇದೆ. ದಕ್ಕಿಸಿಕೊಳ್ಳುತ್ತೇನೆ ಎಲ್ಲವನ್ನು. ಅರಗಿಸಿಕೊಳ್ಳುತ್ತೇನೆ ಅಖಂಡ ಮೌನದಲ್ಲಿ. ಒಮ್ಮೊಮ್ಮೆ ಸುಮ್ಮನಿರು ಸುಮ್ಮನಿರು ಅನ್ನುತ್ತ ನನ್ನ ಬಾಯಿ  ಸುಮ್ಮನಾಗಿಸುವ ಪರಿಯಲ್ಲಿ ನನಗೆ ನಿನ್ನ ಮುದ್ದೇ ಕಾಣುತ್ತದೆ! ಇದು ನನ್ನ ಭ್ರಮೆ ಯೆಂಬುದು ನಿನ್ನ ಮಾತಾಗಿರುತ್ತದೆ ಅಂತಾನು ಗೊತ್ತು ನಂಗೆ. ಮಾತಿನಲ್ಲಿ ನಿನ್ನ ಸೋಲಿಸಲಾಗದು! ಹಾಗಂತ ನಿನ್ನ ಬಾಯ್ಮುಚ್ಚಿಸುವಿಕೆಯಲ್ಲಿ ತೆರೆದ ತುಟಿಯ ಅಂದವೆಲ್ಲಿ ಖಾಲಿಯಾಗುವುದೇನೋ ಎಂಬ ಅವಸರದಲ್ಲಿ ಮುಚ್ಚಿಟ್ಟುಕೊಳ್ಳುವ ಮಳ್ಳನಂತೆ ಅಪ್ಪಟ ಮುದ್ದಿನ ಹುಡುಗ ಅನ್ನಿಸಿಬಿಡುತ್ತದೆ! ಹೀಗೆಲ್ಲ ಅನ್ನುವುದು ನಿಶಿದ್ಧವೇನಲ್ಲವಲ್ಲ. ಆದರೆ ನಿನ್ನ ವಿಷಯಕ್ಕೆ ಅಂದುಕೊಳ್ಳುವುದು ನಿಷಿದ್ಧ. ನಾನಾದರೂ ಯಾಕೆ ಅಂದುಕೊಳ್ಳಬೇಕು ಹೇಳು! ಅದು ನಿಜವೆಂದು ನೀನೇನು ಒಪ್ಪಿಕೊಳ್ಳಬೇಕಾಗಿಲ್ಲ. ಹಲವು ಒಪ್ಪಿತವಾದ ಭಾವಗಳು ಖುಶಿಕೊಡುವುದಾದರೆ ನನಗಿರಲಿ ಅಂತ ಮುಗ್ಧ ಮುದ್ದು ಭಾವಗಳು.. ಸುಖಾಸುಮ್ಮನೆ ಕಾಡುವುದು ಪ್ರೀತಿಸುವುದು ಸುಮ್ಮನೆ ಖುಶಿಕೊಡುವ ಮಾತಾಡುವುದು ಇವೆಲ್ಲ ನನಗಿಷ್ಟ. ಯಾರನ್ನಾದರೂ ಹರ್ಟ್ ಮಾಡೋದಕ್ಕೆ ಶ್ರಮ ಬೇಡ. ಆದರೆ ಖುಶಿಯಾಗಿಟ್ಟುಕೊಳ್ಳೋದಕ್ಕೆ ಶ್ರಮ ಬೇಕು. ನನ್ನ ಮಟ್ಟಿಗೆ ಅಂತ ಪ್ರಯತ್ನ ಸುತ್ತ ಮುತ್ತ ಇದ್ದರೆ ಸಾಕು. ಎನೋ ಅಮಲಿನ ಘಂ ಇರಬೇಕು ಅನ್ನೋ ಹಂಗೆ ಬದುಕಬೇಕು.

ಎಷ್ಟು ಜನ ಇಳಿವಯಸ್ಸಲ್ಲು ತಮ್ಮ ಸುತ್ತ ಅಂತದ್ದೊಂದು ಪರಿಮಳ ತುಂಬ್ಕೊಂಡಿದ್ದಾರೆ ಅಂದ್ಕೊಳ್ತಾ ಉತ್ಸಾಹ ನನ್ನೊಳಗೆ ಜೀವಂತ ಆಗತ್ತೆ. ಆದರೆ ದುದರ್ೈವವಶಾತ್  ನನ್ನ ಪ್ರೀತಿಸುವ ಅಥವಾ ನಾನು ಪ್ರೀತಿಸುವ ಜನರಿಗೆ ನನ್ನ ನಗು ಮುಖ ಬೇಕು ಅಷ್ಟೆ, ನನ್ನೊಳಗೆ ನಿಜಕ್ಕೂ ಸಂಭ್ರಮದ ದೀಪ ಉರಿವುದು ಬೇಡ. ಹಾಗೆ ನಾನು ಖುಶಿಪಡಲು ಆರಂಭಿಸಿದಾಗೆಲ್ಲ ನನ್ನಮ್ಮ  ನನ್ನ ಇನ್ನಿಲ್ಲದಂತೆ ಬಡಿದುಹಾಕಿದ್ದಾಳೆ. ಎಲ್ಲ ಪ್ರೀತಿ ಪಾತ್ರಗಳ ರೂಪದಲ್ಲಿ. ಅಂದ್ಮೇಲೆ ಅನುಭವ ನಲ್ವತ್ತು ವರ್ಷ ಆಗಿದೆ. ಈಗ ಹೊಸದೇನಿಲ್ಲ. ಇನ್ನೂ ಯಾರನ್ನಾದರೂ ದೂಷಿಸಬೇಕೆಂದೆಲ್ಲ ಅನ್ನಿಸ್ತಾ ಇಲ್ಲ. ನಮ್ಮ ಹಣೆಬರಹ ನಮ್ಮ ದೇವರು. ವೇದಾಂತ ಹೇಳುವುದ ವೇದಾಂತ ಬದುಕುವುದು ಎರಡೂ ವಿರುದ್ದ ಪದಗಳು. ನೀನು ಹೇಳ್ತಾ ಇರೋ ಜಂಗಮ ಬದುಕನ್ನ ನಾನು ಆಗಲೇ ಬದುಕಲಾರಂಭಿಸಿದ್ದೇನೆ. ಅಪ್ಪಟ ಮನುಷ್ಯನ ಅಸ್ತಿತ್ವದಲ್ಲಿ. ಎಲ್ಲ ಬಲಹೀನತೆಗಳ ಜೊತೆ. ಕಣ್ಣಲ್ಲಿ ಒಂದಿಷ್ಟು ಗಂಗೆ, ಎದೆಯಲ್ಲಿ ಒಂದಿಷ್ಟು ನಿಟ್ಟುಸುರು, ಒಲವು ಮತ್ತೆ ಸಮಯದ ಜೊತೆ ಗುದ್ದಾಟ ಎಲ್ಲವನ್ನೂ ಇಟ್ಟುಕೊಂಡು


ಅದೆಷ್ಟೋ ಡೈರಿಯ ಪದರಗಳು ಹಳೆತಾದವು. ಓದಿದರೆ ಮತ್ತೆ ಮನಸ್ಸು ಹಸಿಯಾಗಿ ಭೋರ್ಗರೆದೀತು!!ಏನೆ ಆಗಲಿ ಬದುಕಿಗೆ ಪ್ರತಿಯೊಂದು ಪಾಠವೇ.. ಅನುಭವಗಳೇ ನನ್ನ ಇದುವರೆಗೆ ಬೆಳೆಸಿದ್ದು. ಬಿದ್ದು ಬಿದ್ದೇ ಕಲಿತದ್ದು ನಾ. ಮೈ ಮನಸಿನ ತುಂಬ ಬೇಕಾದಷ್ಟು ಮಣ್ಣಿನ ಅಚ್ಚಿವೆ. ತೊಳೆದುಕೊಂಡರು ಮಾಸದ ಗಾಯದ ಕಲೆಗಳೂ ಇವೆ. ನೀ ಕೂಡ ಒಂದು ಅನುಭವ.  ನಲ್ವತ್ತರ ಅಂಚಿನಲ್ಲಿ ನಾನು ಕಲಿಯಬೇಕೆಂದಿತ್ತು ಇದನ್ನೆಲ್ಲ ಅನ್ನಿಸತ್ತೆ. ಅಲ್ಲಿಗೆ ನನ್ನ ಮುಗ್ಧತೆ ಹುಡುಗಾಟ, ಮನಸಿನ ಆದ್ರ್ರತೆ ಇನ್ನೂ ಮಾಯವಾಗಿಲ್ಲ ಅನ್ನಬಹುದು. ಅಷ್ಟರ ಮಟ್ಟಿಗೆ ನಾನಿನ್ನು ಜೀವಂತ ಎಲ್ಲರ ಎದುರಿಗೆ ಎನ್ನುವುದು ನನಗೆ ಒಂದಿಷ್ಟು ಕೋಡು ಮೂಡಿಸಬಹುದು. ನಿಜ ಅಂದರೆ  ಪೆದ್ದಿ. ನೀ ಮನಸ್ಸಲ್ಲೆ ಅಂದುಕೊಳ್ತಿದ್ದೆ ಈ ಪೆದ್ದಿಗೆ
ಏನೂ ಗೊತ್ತಾಗಲ್ಲ ಅಂತ. ಹೌದಲ್ಲ. ಒಂದಷ್ಟು ಪೆದ್ದುತನ ಮುದ್ದು ಮುಗ್ಧತೆ ಇವನ್ನೆಲ್ಲ ಇಟ್ಟುಕೊಳ್ಳದಿದ್ದರೆ ಬದುಕು ಘನಘೋರ ಗಂಭೀರ ಆಗ್ಬಿಡತ್ತೆ. ನಿನ್ನಂತವರ ಎಲ್ಲ ಮಾತುಗಳು ಸೀದಾ ಅಹಂಗೆ ನಾಟತ್ತೆ. ಅದಕ್ಕೆಲ್ಲ ಅರ್ಥ ಹುಡುಕುತ್ತಾ ಅನಿಸಿಕೆ ಬರೆಯುತ್ತಾ ಕುಳಿತರೆ ಬದುಕಲೆಲ್ಲಿ ಸಮಯ!! ಬದುಕೇ ಮುಗಿದುಹೋಗಿರುತ್ತಲ್ಲ!ಅದಕ್ಕೆಂದೇ
ಬದುಕುವ ಬದುಕಿನ ಹುಚ್ಚಿಗೆ ಬಿದ್ದಿದ್ದೆ ಜೀವ. ಅದಕ್ಕೆ ಯಾರೂ ಅನಿವಾರ್ಯವಲ್ಲ. ಆದರೂ ಎಲ್ಲರೂ ಅನಿವಾರ್ಯ.ಮತ್ತೆ ಮಾನಸ ಸರೋವರದಲ್ಲಿ ಅಲೆಗಳಿವೆ. . ನನ್ನೆದೆಯ ಹಾಡು.. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ  ಹರಿವಿಗೆ ಎಳೆಎಳೆಯ ಸಂಭ್ರಮದೊಂದಿಗೆ..

Saturday, October 3, 2015

ಕ್ಷಮೆಯಿರಲಿ ಸ್ನೇಹದಲಿ...

        ಭಾವನೆಗಳ ಮಹಾಪೂರದಲ್ಲಿ ಮಿಂದೆದ್ದು ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳುವಾಗ ಗೆಳೆಯಾ ನಿನಗೆ ಈ ಮಾತುಗಳ ಹೇಳಬೇಕೆಂದುಕೊಳ್ಳುತ್ತೇನೆ. ಇವತ್ತು ಅಲ್ಲೆಲ್ಲೋ ಮತ್ತೊಂದು ಸ್ನೇಹದ ಸಾವಾಗಿದೆ. ಇನ್ನೊಂದು ಪ್ರೀತಿ ಮಣ್ಣುಕಚ್ಚಿದೆ. ನೋವು ಜಲಪಾತವಾಗಿ ಕಂಬನಿ ಜಿನುಗುತ್ತಿದೆ.. ಎಲ್ಲದರ ನಡುವೆ ನಾನಿಂತು ಮೌನವಾಗಿ ನೋಡುತ್ತಿದ್ದೇನೆ. ಮನುಷ್ಯ ಸಾವುಗಳು ಸಂಕಟದ್ದು. ಅದನ್ನು ಭಗವಂತನೂ ತಡೆಯಲಾರ.. ಆದರೆ ಪ್ರೀತಿ ಹೀಗೆ ಸೋಲುವುದು ಆತ್ಮಹತ್ಯೆಯಂತೆ ನೋವಾಗುತ್ತದೆ. ಅದೆಷ್ಟು ಒಳ್ಳೆಯ ಸ್ನೇಹ  ಪ್ರೀತಿಗಳು ತನ್ನ ಅಹಂನ ಬೆಂಕಿಯಲ್ಲಿ ಬೆಂದುಹೋಗುತ್ತಿವೆ! ಮನುಷ್ಯ ಮನುಷ್ಯನ ನಂಬುವ ಕಾಲವಲ್ಲ ಅಂತಾರೆ. ನಾವೇ ಪ್ರೀತಿಸಿದ ಸ್ನೇಹವನ್ನ ಪ್ರೀತಿಯನ್ನ ನಂಬದಿರುವಷ್ಟು ಕಾಲ ಕೆಟ್ಟಿತೇ?


             ಒಂದಿನ ನನ್ನಲ್ಲೂ ಭಾವನೆಗಳಿರಲಿಲ್ಲ.ನಂಬಿಕೆಗಳಿರಲಿಲ್ಲ. ಪ್ರೀತಿಯಿರಲಿಲ್ಲ. ನೋವಿನ ಎಳೆಯೊಂದ ತಂತಿಯೊಂದು ಬಿಗಿದು ಬಂಧಿಸಿದಂತೆ ಭಾವಗಳ ಗಂಟುಮೂಟೆ ಕಟ್ಟಿ ಬದಿಗೆ ಬಿಸಾಕಿದ್ದೆ. ನೀ ಬಂದು ನನ್ನ ಅದೇ ಮೂಟೆಯಿಂದ ಬಿಚ್ಚಿ ಎಷ್ಟೊಂದು ಮುತ್ತು ಹೆಕ್ಕಿ ಕೊಟ್ಟೆ! ಬದುಕು ಬರೀ ಮುತ್ತಿನ ಹಾರದ ಶೃಂಗಾರವೇನಲ್ಲ. ಅಲ್ಲಲ್ಲಿ ಪೋಣಿಸಿದ ಒಂದೊಂದೇ ಮುತ್ತುಗಳಿವೆ. ಆಯ್ದಿಟ್ಟುಕೋ ಅಂದೆ. ಹುಂ. ಪ್ರೀತಿಗೆ ಇದೆಲ್ಲ ಕರಗಿಸುವ ಶಕ್ತಿ ಇದೆ ನೋಡು. ಎಷ್ಟೆಲ್ಲ ಜಗಳ ಕದನ ಕೋಪ ತಾಪದ ನಡುವೆ ಇಂದಿಗೂ ಅದೇ ಪ್ರೀತಿ ನನ್ನ ಮೊದಲ ಆಯ್ಕೆ. ಸ್ನೇಹ ನನ್ನ ಕೊಂಡುಕೊಳ್ಳಬಲ್ಲಂತದ್ದು.ಹಾಗಾಗೇ ಒಳ್ಳೆಯ ಸ್ನೇಹ ಪ್ರೀತಿಗಳು ಕಡಿದುಕೊಂಡಾಗೆಲ್ಲ ನನಗೂ ನೋವಾಗುತ್ತದೆ. ಪ್ರೀತಿಯಲ್ಲಿ ಯಾರನ್ನೂ ನಂಬೋಕಾಗಲ್ಲ ಅನ್ನುವ ಜನ ಕೂಡ ನಮ್ಮವರನ್ನು ನಂಬಲೇಬೇಕಲ್ಲ. ಮನುಷ್ಯ ಎಂದಿಗೂ ಪರಿಪೂರ್ಣ ಅಲ್ಲ ಅನ್ನುವ ಮಾತು ಇವರಿಗ್ಯಾಕೆ ಗೊತ್ತಾಗೋದಿಲ್ಲ! ಒಂದು ಸಾರೀ, ಒಂದು ಥ್ಯಾಂಕ್ಯೂ ಪದಗಳು  ಎಂಥೆಂಥ ದೊಡ್ಡ ತಪ್ಪುಗಳನ್ನು ಕ್ಷಮಿಸುವಂತೆ ಮಾಡುತ್ತವೆ! ಹೃದಯಗಳನ್ನ ಜೋಡಿಸಿಡುತ್ತವೆ! ಸ್ನೇಹದಲ್ಲಂತೂ ಈ ಸಾರೀ ಮತ್ತು ಥ್ಯಾಂಕ್ಯೂ ಪದಗಳಿಗೆ ಅರ್ಥವಿಲ್ಲ ಎಂದವನಿಗೆ ನನ್ನ ಆಕ್ಷೇಪವಿದೆ. ಪ್ರೀತಿ ಪಾತ್ರರ ತಪ್ಪು ಒಪ್ಪುಗಳನ್ನ ಒಪ್ಪಿಕೊಂಡು ಕ್ಷಮಿಸುವುದರಲ್ಲಿ, ಸಹಕಾರಗಳನ್ನು ಅಭಿನಂದಿಸುವದರಲ್ಲಿ ಬಾಂಧವ್ಯದ ಗಟ್ಟಿತನವಿದೆ. ಯಾಕೋ ಅರ್ಥವಾಗಲ್ಲ ಬಹಳ ಜನರಿಗೆ..


     ಹುಡುಗರ ಗೆಳೆತನ ಹಾಳಾಗುವುದು ಹುಡುಗಿಯರ ವಿಷಯದಿಂದ ಎಂಬ ಮಾತೊಂದಿದೆ. ಸ್ವಲ್ಪ ನಿಜವೇನೋ. ಆದರೆ ಒಂದಿಷ್ಟು ಜಗಳವಾಡಿಯಾದರೂ ಸರಿ ಮನಸು ಬಿಚ್ಚಿ ಮಾತಾಡ್ಕೊಂಡು ಹಗುರಾಗಿ ಅಮೇಲೊಂದು ಸಾರೀ ಹೇಳ್ಕೊಂಡು ಹೆಗಲಮೇಲೆ ಕೈಯಿಟ್ಕೊಂಡು ಹೋಗಬಲ್ಲವರು ಹುಡುಗರು ಮಾತ್ರ. ನಿಜವಾದ ಸ್ನೇಹಿತರ ಭಿನ್ನಾಭಿಪ್ರಾಯಗಳು ಕೂಡ ಸ್ನೇಹವನ್ನು ಮುರಿಯೋದಿಲ್ಲ. ಹಾಗಿದ್ದಾಗ ವಷರ್ಾನುಗಳ ಬಂಧ ಕಡಿದುಕೊಳ್ಳುವ ಮೊದಲೊಂದು ಅವಕಾಶ ಅಥವಾ ಒಂದು ಬಿಚ್ಚು ಮನಸ್ಸಿನ ಮಾತು ಮತ್ತೆ ಕಾರಣಗಳ ಹೇಳಿ ತಪ್ಪಾಗಿದ್ದರೆ ತಿದ್ದಿಕೊಳ್ಳುವ ಮನಸ್ಸು ಯಾವತ್ತೂ ಉಳಿಸ್ಕೊಬೇಕಲ್ವಾ? ಸ್ನೇಹ ಮತ್ತು ಪ್ರೀತಿಯನ್ನು ಅಹಂ ಗಿಂತ ಸ್ವಲ್ಪ ಮೇಲಿಟ್ಟು ನೋಡಬೇಕಲ್ವಾ? ಒಳ್ಳೆಯ ಸ್ನೇಹಿತ ಯಾವತ್ತೂ ಇಂತಹ ಅವಕಾಶಗಳನ್ನು ಮುಚ್ಚಿಹಾಕಬಾರದು. ಬದುಕಿನ ಪ್ರತೀ ಹಂತದಲ್ಲೂ ಮನುಷ್ಯ ಬೇರೆ ಬೇರೆಯೇ ಇರಬಹುದು. ಎಲ್ಲಿಯೋ ತಪ್ಪುಗಳು ನಡೆದಿರಬಹುದು. ಅಥವಾ ಏನೋ ಒಂದು ಮಾತು ಬಂದು ಹೋಗಿರಬಹುದು. ಅವನ್ನೆಲ್ಲ ಗಂಟುಕಟ್ಟಿ ಎಷ್ಟುಕಾಲ ಇಟ್ಟುಕೊಳ್ಳಲು ಸಾಧ್ಯ? ಅವನ ಕಡೆಗೂ ನಮ್ಮ ಬಗ್ಗೆ ನೂರೆಂಟು ಪೂರ್ವಾಗ್ರಹಗಳು ತುಂಬಿಕೊಂಡಿರಬಹುದು. ಅಂತದ್ದೆಲ್ಲ ಮರೆಯುವಷ್ಟು ದೊಡ್ಡವರಾಗಬೇಕು. ಬದುಕು ನಮ್ಮನ್ನ ಬೆಳೆಸಲು ಇಂತವೆಲ್ಲ ಪೂರಕ.


      ಇನ್ನು ಪ್ರೀತಿ ಪ್ರೇಮದಲ್ಲಂತೂ ಇಂತದ್ದು ನೂರು. ವಾಸ್ತವದ ವಿಶ್ಲೇಷಣೆ ಮಾಡುವುದೇ ಇಲ್ಲ. ಹುಡುಗ ಕೈಕೊಟ್ಟ ಹುಡುಗಿ ಕೈಕೊಟ್ಲು ಅನ್ನುವುದಕ್ಕಿಂತ ಹೆಚ್ಚಿನ ವಾಸ್ತವ ಏನಿರಬಹುದು ಪರಿಸ್ತಿತಿ ಇಲ್ಲಿಯವರೆಗೆ ಯಾಕೆ ಹೋಗಿರಬಹುದು ಹಿನ್ನಲೆ ಕಾರಣಗಳ ಕುರಿತು ಯಾವ ಚಿಂತನೆಯೂ ಇಲ್ಲ. ಆಮೇಲೆ ಸ್ವಲ್ಪದಿನ ಸ್ಮಶಾನ ವೈರಾಗ್ಯ, ಮತ್ತೆ ಇದ್ದ ಬದ್ದವರ ಮೇಲೆಲ್ಲ ಆರೋಪ ತಾನೊಬ್ಬನೇ ಪ್ರಪಂಚದಲ್ಲಿ ಬೇರೆ ಅನ್ನುವಂತ ನಡವಳಿಕೆ ಮನಸ್ಸಿನ ಮೂಲೆಯಲ್ಲಿ ಕಹಿಯೊಂದಿಷ್ಟು ಗಂಟುಕಟ್ಟಿಕೊಂಡು ತನ್ನ ಮೂಗಿನ ನೇರಕ್ಕೆ ಕಂಡದ್ದಷ್ಟೇ ನಿಜವೆಂದು ಭ್ರಮಿಸಿಕೊಂಡು ಎಲ್ಲ ಬಾಗಿಲು ಮುಚ್ಚಿಕೊಂಡು ಬದುಕನ್ನು ಮತ್ತೇನೋ ದಾರಿಹಿಡಿಸುವಿಕೆಯಿದೆಯಲ್ಲ ಇದು ಕೂಡ ನೋವಲ್ಲದೇ ಇನ್ನೇನನ್ನೂ ಉಳಿಸದು. ಬದಲು ಸಕಾರಣ ವಿವರಗಳ ಅರಿತುಕೊಂಡು ಸಾಧ್ಯವಾದರೆ ಜೊತೆಯಲ್ಲಿ ಆಗಿದಿದ್ದರೆ ಬಲವಂತದ ಪ್ರೀತಿ ಬದುಕು ಸಾಧ್ಯವಿಲ್ಲವೆಂಬುದ ಅರ್ಥೈಸಿಕೊಂಡು ತಮ್ಮ ತಮ್ಮ ಬದುಕನ್ನು ಚಂದಕ್ಕೆ ಕಟ್ಟಿಕೊಳ್ಳುವುದು ಯಾಕೆ ಸಾಧ್ಯವಾಗದು? ಒಂದಷ್ಟು ದಿನ ಪೊಸೆಸಿವ್ ನ ಉಸಿರುಗಟ್ಟಿಸುವಿಕೆ, ಇನ್ನಷ್ಟು ದಿನ ಸತ್ತರೆ ಸಾಯಿ ಇದ್ದರೆ ಇರು ಅನ್ನುವ ನಿರ್ಲಕ್ಷ್ಯ ಇವೆಲ್ಲ ಪ್ರೀತಿಯಲ್ಲಿ ವಿಶ್ವಾಸದ ಕೊರತೆಯಲ್ಲದೇ ಇನ್ನೇನಲ್ಲ. ಬದುಕು ಇವತ್ತಿಗೆ ಹೆಣ್ಣಿಗಾಗಲೀ ಗಂಡಿಗಾಗಲೀ ಸ್ವತಂತ್ರ್ಯ. ಪ್ರೀತಿ ವಿಶ್ವಾಸಗಳೇ ಇಲ್ಲಿ ಬಂಧನ. ಬಾಂಧವ್ಯದ ಉಸಿರು. 


 ಯಾಕೋ  ಯಾವಬಂಧವೇ ಆಗಲಿ ಶಾಶ್ವತ ಎಂಬ ನಂಬಿಕೆಗಳು ನನಗಿಲ್ಲ. ಒಂದೊಂದು ಹಂತದಲ್ಲಿ ಒಂದೊಂದು ತನ್ನಂತಾನೇ ಕಳಚಿಕೊಳ್ಳುವುದುರಬಹುದು. ಎಲ್ಲವೂ ಒಳ್ಳೆಯ ಸ್ನೇಹಗಳಾಗಿ ಉಳಿಯುವುದೂ ಇಲ್ಲ. ಆದರೆ ಒಳ್ಳೆಯ ಸ್ನೇಹ, ಪ್ರೀತಿ ಅಂತ ನಾವೆಲ್ಲೋ ಹೃದಯದಿಂದ ಆಯ್ಕೆ ಮಾಡಿಕೊಂಡವುಗಳನ್ನು ಸಾಯಿಸಬಾರದು. ಅಂತಹ ಪ್ರೀತಿ ಮತ್ತೆಲ್ಲೂ ಯಾವತ್ತೂ ಇನ್ನೊಂದು ದೊರೆಯುವುದಿಲ್ಲ. ಒಲವು ಸಹ ಇಂತದ್ದೊಂದು ಅವಕಾಶಕ್ಕೆ ಮುಕ್ತವಾಗಿರಲಿ. ನಮ್ಮ ನಮ್ಮ ಅಹಂಗಳಿಂದಾಗಿ ನಮ್ಮದೇ ಮನಸುಗಳು ನಲುಗದಿರಲಿ. ಇಷ್ಟೆಲ್ಲ ಹೇಳಿದ್ದು ಸ್ನೇಹದಿಂದ ಸ್ನೇಹಕ್ಕಾಗಿ..   ಸರೋವರದಲ್ಲಿಂದು ಜಿನುಗು ಮಳೆ... ತಂಪಾಗಿಸಲಿ ಎಲ್ಲ ಮನಸುಗಳ.. 

Friday, August 14, 2015

ದೇಶಾ ನನ್ನದು ನನ್ನದೀ ದೇಶ....


ಯಾಕೆ ಸುಮ್ಮನೆ? ಬರೆದು, ಮಾತಾಡಿ  ಏನು ಸಾಧಿಸುವುದಿದೆ  ಅಂತ ಸಾವಿರಬಾರಿ ಅನ್ನಿಸುತ್ತದೆ. ಹಾಗಿದ್ದೂ ಒಮ್ಮೊಮ್ಮೆ  ಬರೆಯದಿರಲಾಗದ
ಅಸಹನೆ ಕಾಡುತ್ತದೆ. ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸಿಗುವ ಅನವಶ್ಯಕ ವಿಷಯಗಳ ಕಂಡಾಗ, ದೊಡ್ಡ ದೊಟಡ್ಡವರೆನ್ನಿಸಿಕೊಂಡವರು ಸಣ್ಣತನಗಳ ಮೆರೆವಾಗ, ಭೌತಿಕ, ಆಧ್ಯಾತ್ಮಿಕ ಸಂಪತ್ತುಗಳಿಂದ ತುಂಬಿರುವ ಈ ನೆಲವನ್ನು ದೇಶವನ್ನು ಹೀನಾಯವಾಗಿ ನೋಡುವಾಗ, ನಮ್ಮದೇ  ಮನಸ್ಥಿತಿಯ ಜನರು ಇದ್ದಕ್ಕಿದ್ದಂತೆ ಕಳೆದು ಹೋಗುವಾಗ,  ಮಾನವೀಯ ಸಂಬಂಧಗಳು ಮೌಲ್ಯ ಕಳೆದುಕೊಳ್ಳುವಾಗ, ಒಳ್ಳೆಯದೆಲ್ಲವೂ ಕೆಟ್ಟದೆಂಬಂತೆ ಬಿಂಬಿಸಲ್ಪಟ್ಟಾಗ  ಬರೆದು ಹಗುರಾಗುವ ತವಕ
ಹುಟ್ಟಿಕೊಳ್ಳುತ್ತದೆ. ಯಾರನ್ನೋ ಸುಧಾರಿಸಿಬಿಡುವ ಆವೇಶವಲ್ಲ ಇದು. ನನ್ನೊಳಗನ್ನು ಹಗುರಾಗಿಸಿಕೊಳ್ಳುವ ಸ್ವಾರ್ಥವೇ ಇರಬಹುದು. ಆದರೆ ಹೌದು ಒಮ್ಮೊಮ್ಮೆ ಮೌನ ಮುರಿದುಬಿಡಬೇಕು.  "ಛೆ" ಅನ್ನಿಸಿದರೆ ಹೇಳಿಬಿಡಬೇಕು. 

     ಸಮಾಜದಲ್ಲಿ ಒಳ್ಳೆಯದು ಏನೂ ಇಲ್ಲವಾ? ಎಂಬುದು ನನ್ನ ಪ್ರಶ್ನೆ. ಹಿಂದೂ ಇರಲಿ ಮುಸಲ್ಮಾನ ಅಥವಾ ಇನ್ಯಾವುದೇ ಧರ್ಮವಿರಲಿ. ಏನೂ ಇಲ್ಲವಾ ಒಳ್ಳೆಯದು?ಯಾಕೆ ಒಳ್ಳೆಯ ವಿಚಾರಗಳು ಪ್ರಚಲಿತವಾಗುವುದಿಲ್ಲ? ಯಾಕೆ ಒಳ್ಳೆಯ ವಿಷಯಗಳು ಪದೇ ಪದೇ ನಮ್ಮ  ಕಿವಿಗಳ ಮೇಲೆ ಬೀಳುವುದು ನಿಂತು ಹೋದವು?

ಎಲ್ಲಾದರೂ ಏನಾದರೂ ಸಮಾಜಪೂರ್ಣ ಕುಳಿತು ಕೇಳುವ  ವಿಷಯ ನಡೆಯುತ್ತಿದ್ದರೆ ಮೊಸರಲ್ಲಿ ಕಲ್ಲು ಹುಡುಕಲು ಪ್ರಾರಂಭಿಸುತ್ತೇವೆ. ನಾವೇ. ನಮ್ಮ ನೆಲದಲ್ಲಿರುವ ಹುಳುಕುಗಳ ಮುಚ್ಚಿಟ್ಟು ಮತ್ತೊಬ್ಬರ ಬದುಕಿನ ನೊಣ ಹುಡುಕುವ ಕೆಲಸ ಸಮಾಜಮುಖಿ ಎಂಬಂತೆ ನಡೆಯುತ್ತದೆ. ಮತ್ತದನ್ನು ಪ್ರಚಾರಪಡಿಸಿ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಕಾದಿರುವ ಮಾದ್ಯಮಗಳು ಮತ್ತೆ ಮತ್ತೆ ಅದನ್ನೇ ಕಿವಿಗಿಂಪು ಎಂಬಷ್ಟು ಅನವಶ್ಯಕ ಚಚರ್ೆಗಳಲ್ಲಿ ಮುಳುಗುವ ಬುದ್ಧಿವಂತರು...

    ಬುದ್ಧೀಜೀವಿಗಳೆಂದು ಕರೆಸಿಕೊಳ್ಳುವವರೊಂದೇ ಅಲ್ಲ. ನಿಜವಾಗಿ ಬುದ್ಧ್ದಿ ಜೀವಿಗಳು ಎನ್ನಿಸಿಕೊಂಡವರು ಕೂಡ ಈ ಬಗ್ಗೆ ಚಕಾರವೆತ್ತುವುದಿಲ್ಲ. ಅವರಿಗೆ ಅವರಷ್ಟಕ್ಕೆ ಇರುವುದ ಬಹಳ ದೊಡ್ಡತನ. ತಾನು  ತನ್ನದು ತನಗೆ ಗೊತ್ತಿದೆ ಎಂಬ ಆತ್ಮವಿಶ್ವಾಸ ಅಹಂಕಾರವಾಗಿ ಬದಲಾಗಿದ್ದೂ ಗೊತ್ತಾಗದಂತ ಅವಸ್ಥೆಯೆನ್ನಬೇಕೇನೋ. ಸಹಜತೆಗಿಂತ ಅಲ್ಲಿ
ದೊಡ್ಡತನ ಯಾವುದೂ ಇಲ್ಲ ಎಂಬುದನ್ನು ಮರೆತುಬಿಡುವ ಈ ದೊಡ್ಡವರೆದುರು ನೀವು ಎಂಥದ್ದೇ ತೆಗೆದುಕೊಂಡು ಹೋದರೂ ಅದೊಂದು ಯಕಶ್ಚಿತ್ ಎಂಬಂತೆ ಮಾತನಾಡುವ ಕಲೆ ಅವರಿಗೆ ಅವರ ಬೌದ್ಧಿಕ ಸಾಮಥ್ರ್ಯ ಕೊಟ್ಟಿರುತ್ತದೆ. ನಾನು ರಾಜಕಾರಣಿಗಳನ್ನು ಉದ್ದೇಶಿಸಿ ಯಾವ ಮಾತನ್ನೂ ಹೇಳುತ್ತಿಲ್ಲ. ಅವರು ಬೇರೆಯೇ ವರ್ಗದ ಜನ ಬಿಡಿ. ಸಮಾಜದ ಇನ್ನಿತರ ದೊಡ್ಡವರು ಮತ್ತು ಸಮಾಜ ಚಿಂತಕರ ಕುರಿತು ಹೇಳುತ್ತಿದ್ದೇನೆ. 

        ಯಾವುದನ್ನಾದರೂ ಸರಿಯಿಲ್ಲ ಕೆಟ್ಟದ್ದು ಅಂತ ತೀಮರ್ಾನಿಸುವಾಗ ಸರಿ ತಪ್ಪು ಅರಿವಿದ್ದವರಾಗಿರಲೇಬೇಕು. ಹಾಗಿದ್ದರೆ ತಪ್ಪು ಅಂತ ಹೇಳುವವರು ಸರಿಯಾದ ಮಾರ್ಗ ತೋರುವ ಸಾಮಥ್ರ್ಯ ಇದ್ದವರಾಗಿರಬೇಕು. ಅವರು ಹೇಳದೇ ಉಳಿದರೆ ಅಂತಹ ಜ್ಞಾನ ಸಮಾಜಕ್ಕೆ
ಉಪಯೋಗವಾಗದಿದ್ದರೆ ಅದಿದ್ದು ಪ್ರಯೋಜನವೇನು? ನನಗೆ ತಿಳಿದಂತೆ
ಇದು ಜ್ಞಾನಿಗಳ ನಾಡು. ವೃಥಾ ಆರೋಪ ಪ್ರತ್ಯಾರೋಪಗಳಲ್ಲಿ ಕಳೆಯುವ ಮಾಧ್ಯಮಗಳಿಗೆ ಇಂತ ಜ್ಞಾನಿಗಳ್ಯಾರೂ ಹೋಗುವುದಿಲ್ಲ.   ಎಲ್ಲರೂ ಓದುವಂತ ಮನಸಿಗೆ ತಲುಪುವಂತ ಯಾವ ಸರಳ ಜ್ಞಾನವನ್ನೂ ಈ ಬುದ್ದಿವಂತರು ಸಮಾಜಕ್ಕೆ ಕೊಡಲು ಇಷ್ಟಪಡುವುದಿಲ್ಲ. ಸದಾ ಪೌರೋಹಿತ್ಯಶಾಹಿಗಳು  ಎಂದು ಜರಿಯಲ್ಪಡುವ ಒಂದೇ ಕಾರಣವೂ
ಇದೇ ಅನ್ನಿಸುತ್ತದೆ ನನಗೆ. ವೇದಗಳ ಕುರಿತು ನಿಷ್ಠೆ ಸರಿ. ಕಟ್ಟು ನಿಟ್ಟಾಗಿ ಆಚರಿಸಲ್ಪಡಬೇಕೆಂಬುದು ಸರಿ. ಆದರೆ ಅದನ್ನೇ ವಿಷದವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ತರುವ ಸಾಮಥ್ರ್ಯ ನಮ್ಮ ಪಂಡಿತರಿಗೆ ಇರಲಿಲ್ಲವಾ? ಒಂದುವೇಳೆ ಇವೆಲ್ಲವೂ ಯಾರಿಗಾದರೂ ಅನರ್ಹ ಎಂದು ವೇದ ಸಾರಿದೆಯಾ? ಇಲ್ಲ. ವೇದ ಏನೂ ಇಂತಹದನ್ನು
ಹೇಳುವುದಿಲ್ಲ ಎಂದು ವೇದಪಂಡಿತರೇ ಹೇಳುತ್ತಾರೆ. ಹಾಗಾದರೆ ನಮ್ಮಲ್ಲಿಯ ಜ್ಞಾನಬಂಡಾರ, ನಮ್ಮ ದೇಶದ ಸಂಸ್ಕೃತಿ, ನಮ್ಮ ಮೂಲಗಳು ನಮ್ಮ  ನಾಡಿನ ಇಂದಿನ ಈ ಬೌದ್ದಿಕ ಅನಾಚಾರವನ್ನು ಯಾಕೆ ತಡೆಯಲು ಸಾಧ್ಯವಾಗುತ್ತಿಲ್ಲ? ಮಾನವೀಯ ಮೌಲ್ಯಗಳ ಮೂಲವೇ ಆದ ನಮ್ಮ ಸಂಸ್ಕೃತಿಯ ಪ್ರಬಂಧಕರು ಯಾಕೆ ಇವನ್ನು ಮಾದ್ಯಮಗಳ ಮೂಲಕ ಜನಸಾಮಾನ್ಯರ ಮನಸಿಗೆ ತಲುಪಿಸಲು ಶಕ್ಯರಾಗುತ್ತಿಲ್ಲ?  ಅವರ ಅಹಂ  ಅಡ್ಡಬರುತ್ತಿದೆಯಾ? ಅವರ ಜ್ಞಾನವೇ ಸಮಾಜದಲ್ಲಿ ಸಹಜವಾಗಿ ಸರಳ ಬದುಕಿನ ಸೂತ್ರಗಳ ಹೇಳಲು ಅವರಿಂದ ಸಾಧ್ಯವಾಗುತ್ತಿಲ್ಲವಾ? ಕೆಟ್ಟದ್ದನ್ನು ಬಾಯಿ ಬಿರಿದು ಬೊಬ್ಬಿರುವ ಜನ ಒಂದು ವರ್ಗವೇ ಸೃಷ್ಟಿಯಾಗಿದೆ. ಓಕೆ. ಅದು ಸಮಾಜದ ಒಂದು ಮುಖ. ಆದರೆ
ಒಳ್ಳೆಯದಕ್ಕೆ ಸಮಾಜದಲ್ಲಿ ಜಾಗವೇ ಇಲ್ಲದಂತಾಗಿದ್ದರೆ  ಅದು ಬರೀ ಆ ವರ್ಗದವರ ತಪ್ಪಲ್ಲ.  ಬಾಯಿಬಿಡದೇ ಕೂತಿರುವ ಒಳ್ಳೆಯವರ ತಪ್ಪು ಕೂಡ ಹೌದು.

   ಸಮಯ ಬಂದಾಗ ಸಮಾಜದ ಪ್ರತಿಯೊಬ್ಬರೂ ಮುಖ್ಯವಾಹಿನಿಯಲ್ಲಿ ಸೇರಿಕೊಂಡು ಕೆಲಸ ನಿರ್ವಹಿಸಬೇಕು. ಮೋದಿ ಈ ಕಾರಣಕ್ಕೆ ನನಗೆ ಇಷ್ಟವಾಗುತ್ತಾರೆ. ಅವರು ಮ್ಯಾಜಿಕ್
ಮಾಡುತ್ತಾರೆಂದಲ್ಲ. ಹಿಂದೂ ಧರ್ಮ ಉದ್ಧಾರ ಮಾಡುತ್ತಾರೆಂದೂ ಅಲ್ಲ. ದೇಶದ ಎಲ್ಲಾ ಸಮಸ್ಯೆ ಪರಿಹರಿಸಿಬಿಡಬೇಕೆಂದೂ ಅಲ್ಲ. ದೇಶದ ಕೊನೆ ಕೊನೆಯಲ್ಲಿರುವ ಮನುಷ್ಯನ ಎದೆಯಲ್ಲಿ ದೇಶ ಎಂಬ ನುಡಿ ಮಾರ್ದನಿಸುವಂತೆ ಎಚ್ಚರಗೊಳಿಸುತ್ತಾರೆ. ಎಲ್ಲ ಹೃದಯದಲ್ಲೂ ಒಬ್ಬ ಮನುಷ್ಯ ಜೀವಂತವಾಗಿದ್ದಾನೆ. ಆ ಮನುಷ್ಯನ ಜೀವಂತಿಕೆಯ ಕೇಂದ್ರವನ್ನು
ಎಚ್ಚರಗೊಳಿಸುವ ಸಾಮಥ್ರ್ಯ ಅವರ ನುಡಿಯಲ್ಲಿ ಮಾರ್ದನಿಸುತ್ತದೆ. ದೇಶ, ಭಾಷೆ,  ನನ್ನದು ಎಂಬ ಆ ಭಾವ ಮನುಷ್ಯನಲ್ಲಿ ಮೂಲದಲ್ಲಿ ಜಾಗೃತವಾದರೆ ತನ್ನಿಂದತಾನೇ ಮನುಷ್ಯನಲ್ಲಿ ಮಾನವತೆ ಜಾಗೃತಗೊಳ್ಳುತ್ತದೆ. ಅವನು ಸಮಾಜಮುಖಿ ಮತ್ತು ಮನುಷ್ಯನಾಗಿ ಬೆಳೆಯುವ ಹಾದಿಯಲ್ಲಿ ನಡೆಯುತ್ತಾನೆ. ಪ್ರತಿ ಹೃದಯವನ್ನೂ ಜೀವಂತಗೊಳಿಸಬಲ್ಲ ವಿವೇಕಾನಂದರ ಮಾತುಗಳಲ್ಲಿ ಇವತ್ತಿಗೂ ನಾವು ಕಾಣುವುದು ಇದೇ ಮೂಲ ಶಕ್ತಿಯನ್ನು.  ಬುದ್ಧಿವಂತರಿಗೆ, ವಿಷಯ ಜ್ಞಾನಿಗಳಿಗೆ, ಸಮಾಜದ ಪರಿವೆಯಿದ್ದರೆ ಈ ದೇಶದ ನೆಲ ಪಾವನವಾಗುತ್ತದೆ. ಅವರು ಸ್ವಾಥರ್ಿಗಳೂ ಮೌನಿಗಳೂ ಆದರೆ ಎಂಥ ಸಾಧಕರು ಜ್ಞಾನಿಗಳಿದ್ದರೂ ದೇಶ ನೆಲಕಚ್ಚುತ್ತದೆ.

  ಅಳಿಲುಸೇವೆ ರಾಮಾಯಣದಲ್ಲಿ ನನಗಿಷ್ಟವಾಗುವ ಪಾಠ. ನಮ್ಮದು  ಅಳಿಲುಸೇವೆಯಾಗಲಿ ಈ ಭೂಮಿಗೆ. ಹುಟ್ಟಿದ, ಬದುಕಿದ ಮಣ್ಣಿಗೆ ಋಣ ತೀರಿಸಲು ಸಾಧ್ಯವಿಲ್ಲ. ಅವರವರ ಕೈಲಾದ ಸೇವೆ ಸಾಕು. ಎಷ್ಟೋ  ಅಂತಹ ಪಾಠಶಾಲೆಗಳಿವೆ ನಮ್ಮಲ್ಲಿ, ಗುರುಕುಲ, ಆಶ್ರಮಗಳಿವೆ. ಸೇವೆ ಮಾಡುವ ದಾದಿಯಿಂದ ಹಿಡಿದು ವೈದ್ಯನ ವರೆಗೆ, ನರ್ಸರಿ ಶಿಕ್ಷಕಿಯಿಂದ ಹಿಡಿದು ಉಪನ್ಯಾಸಕರವರೆಗೆ  ಎಲ್ಲ ಕ್ಷೇತ್ರಗಳ ಎಲ್ಲ ಕೆಲಸಗಳ ಗೌರವಿಸುವ ಮನಸ್ಥಿತಿ ನಮ್ಮದಾಗಲಿ, ಚಕ್ರವತರ್ಿ ಸೂಲಿಬೆಲೆಯವರ ಜಾಗೋ ಭಾರತ್ ದಲ್ಲಿ ತುಂಬ
ಒಳ್ಳೆಯ ಮಾತು ಹೇಳುತ್ತಾರೆ! ಅವರು ನನ್ನ ದೇಶ ಜಗತ್ತಿನಲ್ಲಿಯೇ ನಂಬರ್ ಒನ್ ಇದೆ ಅನ್ನುವ ಸಾಲು ಸಾಲು ಆ ಮಾತುಗಳ ಕೇಳುತ್ತಿದ್ದರೆ ಎಂತವನ ಮನದಲ್ಲಾದರೂ ಹೆಮ್ಮೆ ಸುಳಿಯದಿರದು. ಭಾರತದ ಸಾಧನೆಗಳ ಮಹಾ ಪಟ್ಟಿಯಲ್ಲಿ ನಮ್ಮ ಜ್ಞಾನಿ  ಹಾಗೂ ಮೌನಿ ಪಂಡಿತರೂ ಸೇರುವಂತಾಗಲೀ. ಮುಖ್ಯವಾಹಿನಿಗಳಲ್ಲಿ ಅವರು ರಾರಾಜಿಸಲಿ. ಆಗ
ಸಮಾಜದಲ್ಲಿ  ಭಾವೀ ಸಮಾಜದಲ್ಲೀ ಮಕ್ಕಳ ಕಿವಿಗಳ ಮೇಲೆ ಒಳ್ಳೆಯದು ಪದೇ ಪದೇ ಬೀಳುತ್ತದೆ. ಮತ್ತು ಅದು ಅವರಲ್ಲಿ ಅಚ್ಚಾಗಿ ಉಳಿದು ಸತ್ಪ್ರಜೆಗಳ ನಿಮರ್ಾಣಕ್ಕೆ ಕಾರಣವಾಗುತ್ತದೆ. ಮನೆ, ತಾಯಿ, ಎಲ್ಲರನ್ನೂ ದೂಷಿಸುವ ಸಮಾಜದಲ್ಲಿ ಇನ್ನೂ ಅದೇ ಕುಟುಂಬವ್ಯವಸ್ಥೆ ಉಳಿದಿದ್ದರೆ ಅದೇ ಹೆಣ್ಣು
ಮಗಳಿಂದ. ಕೆಟ್ಟು ಹೋಗಿರುವ ನೂರು ಜನರ ನಡುವೆ ಲಕ್ಷ ತಾಯಂದಿರ ವಾತ್ಸಲ್ಯ ನಮಗೆ ಕಾಣದುಳಿದರೆ ಅದು ನಮ್ಮ ತಾಯಂದಿರ ದೌಭರ್ಾಗ್ಯವಲ್ಲವೆ? 

     ಸಮಾಜದ ಅತಿ ಸಾಧಾರಣ ಕೆಲಸ ನಿರ್ವಹಿಸುವ ಸ್ವಾರ್ಥ ತೊರೆದು ಸಮಾಜಕ್ಕೋಸ್ಕರ ಬದುಕುವದು ಹೆಮ್ಮೆಯ ವಿಚಾರ ಆಗುವವರೆಗೆ ಇದು  ಸರ್ವಮಾನ್ಯವಾಗಲಾರದು. ಪಂಡಿತನಲ್ಲದ ಒಬ್ಬ ಕೂಲಿ ಸಹ ಸಮಾಜಕ್ಕೆ ಉತ್ತಮವಾದದ್ದನ್ನು ಕೊಡಬಲ್ಲ. ಅಂತವರೆಲ್ಲರ ಗೌರವಿಸುವ ದೊಡ್ಡತನ ನಮಗೆ ಬರಲಿ. ಸನ್ಮಾನ ಮಾಡಬೇಕೆಂದು ಅವರೂ ಬಯಸುವುದಿಲ್ಲ. ಅವನ ಕೆಲಸ ಮಾನವೀಯ ಗೌರವಕ್ಕೆ ಅರ್ಹ ಎಂಬ ಪ್ರಜ್ಞೆ ಸಾಕು. ಕೆಲವರನ್ನು ಕೇಳಿ ನೋಡಿ. ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವವರೂ  ಜ್ಞಾನಿಗಳು ಎಂದು ಹೆಸರಿಸಿಕೊಂಡವರೂ ಕೂಡ  ಇನ್ಯಾರೋ ಒಬ್ಬ ಜನಸಾಮಾನ್ಯ ಅಥವಾ ಪಂಡಿತನ ಬಗ್ಗೆ ಅವನ ಸಾಮಾಜಿಕ ಸ್ವಾಸ್ಥ್ಯದ ಪ್ರಯತ್ನದ ಬಗ್ಗೆ.
ಮಾತನಾಡುವುದು ತೀರಾ ಕೇವಲವಾಗಿ. ವಿಶೇಷವೆನ್ನಿಸುವುದು ಇಲ್ಲಿಯೇ. ಪಂಡಿತರು ಸಮಾಜಕ್ಕೆ ಹೆಚ್ಚೆಂದರೆ ಒಂದಿಷ್ಟು ಪುಸ್ತಕಗಳನ್ನು ಕೊಡಬಹುದು. ಆದರೆ ಪ್ರಯತ್ನಶೀಲರು
ಸಮಾಜದ ಜನಮಾನಸದಲ್ಲಿ ಬೆರೆತು ನಾಲ್ಕೇ ಜನರಿಗಾದರೂ ಒಳ್ಳೆಯ ಬದುಕು ಕಲ್ಪಿಸಲು ನೆರವಾಗುತ್ತಾರೆ. 

 ಕೆಟ್ಟದ್ದು ಅತಿಯಾದ ಕಾಲದಲ್ಲಿ ಒಳ್ಳೆಯದ ಹುಡುಕಬೇಕಾಗಿದೆ. ಇದು ಕಾಲದ ಅನಿವಾರ್ಯತೆ.. 

Saturday, August 1, 2015

ಬದುಕು ನಡೆಸಿದತ್ತ ಪಯಣ...
ಚಿತ್ರಕೃಪೆ: ಅಂತರ್ಜಾಲ.


        ಮಾನಸ ಸರೋವರದಲ್ಲಿ  ವೈಚಾರಿಕ ಮಾತಿಗಿಂತ ಮನಸಿನ ಮಾತಿಗೆ ಹೆಚ್ಚು ಒಲವು ಅಲ್ಲವಾ ಮನಸೇ?  ಮನಸೆಂಬ ಒಲವಿನ ಮೂಟೆಯೆದುರು ಮತ್ತೊಮ್ಮೆ ಹರವಿಕೊಳ್ಳುವ ಭಾವಸಾಗರದಲ್ಲಿ ನೀನು ಬಂದು ಕೂರುವುದೇನೂ ಬೇಡಬಿಡು. ಒಮ್ಮೊಮ್ಮೆಯಾದರೂ ಒಂಟಿಯಾಗಿ ಕೂತು ಮಾತನಾಡಿಕೊಳ್ಳಬೇಕೆನ್ನಿಸಿದೆ. ಹೀಗೆ...

    ಯಾವ ಚೆಲುವಿನೊಳಗೂ ನಮ್ಮೊಳಗಿನ ಸಮ್ಮೋಹನಗೊಳಿಸುವ ನಶೆಯಿರಲಿಲ್ಲ. ಹೂವುಗಳೆದೆಯಲ್ಲಿ ಗಂಧ ಹರಡಿಕೊಂಡಂತೆ  ಭಾವದ ಹೂ ಅರಳಿಕೊಂಡಿತಿಲ್ಲಿ. ಮನಸಿನಂಗಳದಲ್ಲಿ.. ನಿನ್ನ ಒಲಿಸುವ ನನ್ನ ರಮಿಸುವ ಮಾತಿಗೆ ಎಂದಿಗೂ ಎಡೆಯಿರಲಿಲ್ಲ.  ಮುಗಿಲಂತೆ ಚಾಚಿಕೊಂಡಿತು ಒರವಶರಧಿಯಲ್ಲಿ... ಮಾತು ಮಾತಿಗೆ ಮುನಿಸು ನಿತ್ಯ ನಿರೀಕ್ಷೆಯ ಕನಸು ಯಾವುದೂ ಇರಲಿಲ್ಲ.  ನಾದವಾಯಿತು ನಮ್ಮೊಳಗಿನ ಚಿಂತನೆಗಳೆಲ್ಲ! ಎಲ್ಲ ಮೀರಿರುವಾಗ ಎಲ್ಲಿ  ಅಡಗಲಿ ಹೇಳು? ಮಾಧವನೆಡೆಗೆ ಮೀರೆಯ ಒಲವಿರುವಂತೆ ಕೊಳಲಿನ ಕರೆಗೆ ಗಂಗೆ ಗೌರಿ ಬರುವಂತೆ ಈ ಮನಸು ನಿನ್ನದಾಯಿತಲ್ಲ! 

 ನೀನೊಂದು ಕ್ಷಣ ಮನಸಿಂದ ಮರೆಯಾದರೆ ಸಾಕು ಯಾಕೋ  ಮಾತು ಮೌನ ಪ್ರೀತಿ ಕಾವ್ಯ ಬರಹ, ಬದುಕು ಎಲ್ಲವೂ ಮುಗಿಸಿಬಿಡಬೇಕೆಂದು ಹಟ ಹಿಡಿದಿಯುತ್ತಿದೆ ಮನಸು.. ಅದೇ ಮನಸು ಬೆಳದಿಂಗಳಲ್ಲಿ ಈಗ ತಾನೇ ಹೊಯ್ತಾ ಇರೋ ಮಳೆ ನೀರಲ್ಲಿ ರಮಿಸಿ ಆನಂದಿಸುತ್ತದೆ. ಕವಿತೆ ಬರೆಯುತ್ತದೆ. ಸುಡುವ ವಿರಹದ ಚಂದ್ರನಿಗಾಗಿ ಅಳಲಿಕೆಯಿದೆ ಈ ಬುವಿಯ ಕಳವಳದಲ್ಲಿ. ಕತ್ತಲಿಗೆ ಬೆಳಕಿಗೆ ಸಾಂಗತ್ಯಕ್ಕೆ ತೊರೆಯಿದೆ ಇಲ್ಲಿ... ಹೌದು  ಪ್ರೀತಿಸದೇ ಉಳಿಯಲಾರೆ ನಾನು. ನೀ ಕೂಡ. ಆದರೆ ವ್ಯಕ್ತವಾಗುವಿಕೆಯನ್ನು ಕಟ್ಟಿ ಹಾಕಬೇಕೀಗ. ನಾನೂ ಹಾಗೆ ಮಾಡಿದರೆ  ನಮ್ಮ ನಡುವೆ ಸಂವಹನ ಯಾವತ್ತೋ ನಿಂತುಹೋಗುತ್ತಿತ್ತು. ಮಾನಸಿಕ ಸಂವಹನದ ಜೊತೆ ಭೌತಿಕ ಸಂವಹನವೂ ನಿಂತು ಹೋಗುತ್ತಿತ್ತಲ್ಲವಾ! ನನ್ನ ನಿನ್ನ ಹಾದಿ ಎಷ್ಟೇ ಬೇರೆಯಾಗಲೀ ಅದು  ಸಂಧಿಸಲೇ ಬೇಕು ನಾವು ಮತ್ತೆಮತ್ತೆ. ಕೃಷ್ಣಾ ಉರಿದು ಹೋಗಲಿ ಎಲ್ಲ ಕಾಯ ಎಂದುಕೊಂಡ ಭಾವಕ್ಕೆ ಬದುಕನ್ನೇ ದೀಕ್ಷೆಯಜ್ಞವಾಗಿಸಿಬಿಟ್ಟಿದ್ದೀ. ಸಾಕು ಅಂದರೆ ಬಿಡುವುದಲ್ಲ. ಬೇಕು ಅಂದರೆ ಸಿಗುವುದಲ್ಲ! ಎಂಥಾ ಜಾಗದಲ್ಲಿ ನನ್ನ ನಿಲ್ಲಿಸಿದೆ ನೀ! ನಗಲಾಗದ ಅಳಲಾಗದ ಮರುಗಲಾಗದ, ಖುಶಿಪಡಲಾಗದ ಬೇರೆ ಎಲ್ಲೋ ಏನೋ ಖುಶಿ ಕಂಡುಕೊಳ್ಳಲಾಗದ ನನ್ನ ಸ್ಥಿತಿ ನಿನಗೇ ಪ್ರೀತಿ. ಬಯಸಿದರೆ ಏನೆಲ್ಲವನ್ನೂ ಬೇಕಾದಲ್ಲಿ ಪಡೆಯಬಲ್ಲೆ ನಾನು. ಉಹುಂ. ಬಯಕೆಗಳೇ ಇಲ್ಲ. ಭಾವಗಳೂ ಇಲ್ಲ. ಎಷ್ಟೆಲ್ಲ ಬರಿದಾಗಿಸಿಕೊಂಡೆ ನನ್ನ ಒಳಗನ್ನು... ಬರಿದಾಗಿಸಿಕೊಂಡಷ್ಟೂ ನೀನೇ ತುಂಬಿಕೊಂಡುಬಿಟ್ಟೆ. ನನಗೆ ಗೊತ್ತಿಲ್ಲದೇ. ನನ್ನ ಅರಿವಿಲ್ಲದೇ.. ನನ್ನ ಬದುಕಿನ ಈ ಅಂಕವನ್ನು ಹಂಚಿಕೊಳ್ಳುವ ಕವಿತೆ ಕೂಡ ಬರೆಯಲಾರೆ ಇವತ್ತಿಗೆ ನಾನು. ಅದಕ್ಕೆಂದೇ ಇವನ್ನೆಲ್ಲ ಹೀಗೆ ಬರೆದು ಮನಸು ಹಗುರಾಗಿಸಿಕೊಳ್ಳುತ್ತಿದ್ದೇನೆ. ನನ್ನ ಕಣ್ಣಲ್ಲಿ ಹನಿ ನೀರಿಲ್ಲ, ಕನಸಿಲ್ಲ, ಖುಶಿಯಿಲ್ಲ. ಕತೆಯಿಲ್ಲ, ಕವಿತೆಯಿಲ್ಲ, ಆದರೆ ಎಲ್ಲವನ್ನೂ ಮರುಸೃಷ್ಟಿಸಿಕೊಳ್ಳುತ್ತೇನೆ. ಮತ್ತೆ ಜೀವನ್ಮುಖಿಯಾಗುತ್ತೇನೆ. ನನ್ನ ಭಾವಗಳ ನಾನು ಜೀವಂತ ಪೋಷಿಸಿಕೊಳ್ಳ್ಳುತ್ತೇನೆ. ಮತ್ತೆ ನಾನು ಜೀವಂತಿಕೆಯ ಉಸಿರು ಹಿಡಿಯುತ್ತೇನೆ. ತೊರೆಯುವಿಯಾದರೆ ಎಲ್ಲಿಯವರೆಗೆ?  ಈ ಭೂಮಿ ಆಕಾಶಗಳು ಮುಗಿಯುವವರೆಗೆ...  ನಿರೀಕ್ಷೆಯಾದರೂ ಏನಿತ್ತು ಇಲ್ಲಿ? ಪ್ರೀತಿ ತಾನೇ? ನನ್ನ ಪ್ರೀತಿಸಲು ನೀನ್ಯಾಕೆ ಬೇಕು ನನಗೆ? ನಾನೇ ನೀನೆಂಬ ಮನಸಾಗಿ ನನ್ನೊಳಗೆ ನೀನಿರುವವರೆಗೆ ಭೌತಿಕವಾದ ಯಾವ ಅಗತ್ಯಗಳೂ ನನ್ನ ಕಾಡದಿರುವವರೆಗೆ ನೀನೆಂಬ ನೀನು ನಾನೇ ಆಗಿ ನನ್ನ ಬದುಕೆಲ್ಲ ನಿನ್ನ ಸುಗಂಧವೇ ಪಸರಿಸಿ ಪ್ರೀತಿಸಿಕೊಳ್ಳುತ್ತಲೇ ಬದುಕುತ್ತೇನೆ. ಜೀವನ್ಮುಖಿಯಾಗಿ..ಇದು ನನ್ನ ಹಟ ಮಾತ್ರವಲ್ಲ. ಭಾವಗಳ ಮರುಸೃಷ್ಟಿಸಿಕೊಳ್ಳುವ ಮನಸ್ಸಿನ ನಿರಂತರ ಪ್ರಯತ್ನವೂ ಹೌದು. ಒಳಗನ್ನು ತುಂಬಿಕೊಂಡ ಅಗತ್ಯಗಳು ಮೀರಿದ ಒಲವಿದು.. ಇಷ್ಟಕ್ಕೂ ನೀ ನನಗೆ ಒಲವಿನ ಒರತೆ..ನಿನ್ನೊಳಗೆ ಎಲ್ಲವನ್ನೂ ನಾನೇ ಪಡೆದುಕೊಳ್ಳುವ ನಿರಂತರ ಜ್ಯೋತಿ..  ಪ್ರೀತಿ, ಭಕ್ತಿ, ಆನಂದ, ಪ್ರಜ್ಞೆ, ಮನಸು ಎಲ್ಲದರ ನೆಲೆ ನೀನು..ನಿನ್ನ ಹೊರತು ನಾನು ಏನು? ಇದಕ್ಕಿಂತ ಹೆಚ್ಚಿನ ತೃಪ್ತಿ ಬದುಕಿಗೆ ಏನು ಬೇಕು ಹೇಳು. ಏನು ಬೇಕು ನನಗೆ? ಇದೇ   ನನ್ನದೇ ಮನಸಿನ ಜೊತೆ  ಈ ಪಯಣ ನಿರಂತರ. ಇದು ನನ್ನ ಭ್ರಮೆಯಲೋಕವೆನ್ನಿಸದರೆ ಹೌದು. ಬದುಕಿಸುವುದು ಭ್ರಮೆಯಾದರೇನು ಕನಸಾದರೇನು? ನೀನೇ ಹಚ್ಚಿಟ್ಟ ಹಣತೆಯಿದೆ. ನನ್ನೊಲವಿನ ಕೈದೀಪವಿದೆ. ಸಾಕು ಬಿಡು. ಇನ್ನೆಂತ ಬರೆಯಲೀ... ಬದುಕ ಪ್ರೀತಿಸಲು ಹಟವೊಂದಿರಲೀ...
ಮೌನಕ್ಕೆ ಧ್ಯಾನಕ್ಕೆ ಆತ್ಮಶಕ್ತಿ ಕೊಡಲಿ.. ಕೃಷ್ಣ ನನ್ನ ಹೋರಾಟಕ್ಕೆ ಬಲವನ್ನೀಯಲಿ.. ಬದುಕು ತೋರಿದತ್ತ.. 
  

Tuesday, July 21, 2015

ಮನಸಾರೆ ವಂದಿಸುತ್ತ......         ಬರೆಯೋದೇ ಬೇಡ ಅನ್ನಿಸಿ ಪೆನ್ನು ಬದಿಗಿಟ್ಟಾಗೆಲ್ಲ ಮತ್ತೆ ಬರೆಯುವ ಒತ್ತಡ ಹುಟ್ಟುವಂತೆ ಮಾಡುವುದು ಎಲ್ಲರಿಗೂ ಸಾಧ್ಯವಿರೋದಲ್ಲ. ತೀರಾ ನಮ್ಮವರು, ಆತ್ಮೀಯರು ಅಥವಾ ನಮ್ಮನ್ನು ಅಭಿಮಾನಿಸುವವರು ಎಲ್ಲೋ ಒಂದು ಒತ್ತಾಸೆಯ ನುಡಿಯಾಡಿದರೆ ಮಾತ್ರ ಬರೆಯಬೇಕನ್ನಿಸುತ್ತದೆ. ಓದುವುದು ನಮಗೆ ನಾವೇ ಮಾಡಿಕೊಳ್ಳುವ ಅಭ್ಯಾಸಬಲ. ಆದರೆ ಬರವಣಿಗೆ ಒಳಗಿನಿಂದ ಬರಬೇಕು. ಬರೆಯಬೇಕೆನ್ನಿಸುವ ಹಂಬಲ ಒತ್ತಡವಾಗಿಯೇ ಬರುವವರೆಗೆ ಅದು  ತನ್ನ ಸಹಜತೆಯನ್ನು ಪಡೆದುಕೊಳ್ಳುವುದಿಲ್ಲ. ಆದರೆ ಎಲ್ಲೋ ನನ್ನಂತೆ ಆಗಾಗ ಪೆನ್ನು ಬದಿಗಿಟ್ಟು ಕಣಿ ಕೇಳುವ ಮೂಡಿನವರಿಗೆ ಯಾಕೆ ಬರೆಯುವುದು ಬರೆದೇನಾಗಬೇಕಿದೆ ಎಂಬ ಭಾವ ತುಂಬಿಕೊಳ್ಳುವವರೆಗೆ ಯಾವತ್ತೋ ನಾವೇ ಬರೆದ ನುಡಿಯೊಂದು ಎತ್ತಿ ತಂದು ಅಕ್ಕಾ ನಿನ್ನೀ ಮಾತು ನನ್ನ ಖುಶಿಗೊಳಿಸಿತು ಎಂಬ ಪುಟ್ಟದೊಂದು ಅನಿಸಿಕೆ ಮತ್ತೆ ಬರೆಯುವುದಕ್ಕೆ ಸ್ಪೂರ್ತಿಯಾಗಬಹುದು. ಅದಲ್ಲದೇ  ಯಾರು ಓದಲಿ ಬಿಡಲಿ ನಿನಗನ್ನಿಸಿದ ಭಾವಗಳನ್ನು ಬರೆದು ಬಿಡು ಗೆಳತೀ ಅಂತ ಸಣ್ಣದೊಂದು ಬುದ್ದಿಮಾತು ಬರೆಯಬೇಕೆನ್ನುವ ಒತ್ತಡವ ಹುಟ್ಟುಹಾಕಬಹುದು.  ನನ್ನದಾಗಿದ್ದೂ ನನ್ನದಲ್ಲದ ನಿನ್ನೆಗಳ ನಡುವೆ ಕಳೆದುಹೋಗುವ ಕನಸುಗಳಿಗೆಲ್ಲ ಮತ್ತೊಂದು ಮನಸು  ಹೆಗಲುತಟ್ಟಿ ಬರೆಸಬಹುದು.
               ಹಾಗೆಲ್ಲ ನಡೆಯಬೇಕೆಂದರೆ ನುಡಿಸುವ ಯಾವುದೋ ಮನಸುಗಳ ಒಲುಮೆ ಬೇಕು. ಪ್ರೀತಿ ಬೇಕು. ಇಂದಿಗೆ ನನ್ನ ಮತ್ತೊಮ್ಮೆ ಓದಿಸುವ ಬರೆಸುವ ಕೈಗಳಿಗೆಲ್ಲ ನನ್ನದೊಂದು ಪುಟ್ಟ ನಮನವಿದೆ.  ಮೊನ್ನೆ ಮೊನ್ನೆಯವರೆಗೂ ಬ್ಲಾಗ್  ಅಪ್ಡೇಟ್ ಮಾಡದೇ ಸುಮ್ಮನಿದ್ದ ಮನಸ್ಸಿಗೆ ಬದರಿ ಸರ್ ಕಳೆದುಹೋದವರ ಲೀಸ್ಟ್ ಲ್ಲಿ ನನ್ನ ಹೆಸರು ನೋಡಿದ್ದೇ ಯಾಕೋ ಸಣ್ಣದೊಂದು ಅಳುಕು ಹುಟ್ಟಿತ್ತು. ಮತ್ತೆ ಬರೆಯಬಲ್ಲೆನಾ ಅಂತ. ಯಾಕೆಂದರೆ ಬರೆಯಲು ನನ್ನಲ್ಲಿ ಏನೂ ಇರಲಿಲ್ಲ. ಅಥವಾ ನನ್ನ ಬರೆಯುವ ಹವ್ಯಾಸವೇ ನನಗೊಂದು ಹುಚ್ಚು ಅನ್ನಿಸಿಬಿಟ್ಟಿತ್ತು. ಅಕ್ಷರಶಃ  ಅಕ್ಷರಗಳು ಮೂಡದ ಮನಸ್ಸಾಗಿಬಿಟ್ಟಿತ್ತು. ಈ ನಡುವೆ ಬತ್ತಿಸಿಕೊಳ್ಳೋದಕ್ಕೆ ಭಾವಗಳು ಇರಲಿಲ್ಲ. ಹುಟ್ಟಿಸಿಕೊಳ್ಳೊದಕ್ಕೆ ಕನಸುಗಳು ಇರಲಿಲ್ಲ. ಕಾವ್ಯ ಪ್ರೀತಿಯ ಬಯಕೆ ಬತ್ತಿದಮೇಲೆ ಬರೆಯುವ ಮೂಢ ಕೆಲಸ ಮಾಡಿರಲಿಲ್ಲ. ಸುಮ್ಮನಿರಬೇಕೆನ್ನಿಸಿದರೆ ಸುಮ್ಮನಿದ್ದುಬಿಡಬೇಕೆ ವಿನಃ ಈ ಜೀವವಿರದ ಬರಹಗಳು ನನಗೇ ರುಚಿಸುತ್ತಿರಲಿಲ್ಲ.


        ಈ ಮಳೆಗಾಲದಲ್ಲಿ ಸರೋವರದಲ್ಲಿ ಮತ್ತೆ ನೀರುಕ್ಕಲಿ. ಯಾರೋ ನೋಡಬೇಕೆಂದು ಓದಬೇಕೆಂದು ಬರೆಯುವುದಲ್ಲ. ನಮ್ಮದೇ ಮನಸು ಹಸುರಾಗಿಸಲು, ಹಗುರಾಗಿಸಲು ಬರೆದುಬಿಡು ಅಂದ ಗೆಳೆಯ ಶ್ರೀವತ್ಸನ ಮಾತು, ಪುಟ್ಟಿ ಸಂಧ್ಯಾಳ ಪ್ರೀತಿ, ಆತ್ಮೀಯ ಗೆಳತಿ ರಜನಿಯ ನಿರಂತರ ಪ್ರೋತ್ಸಾಹ ಮತ್ತೊಮ್ಮೆ ಲೇಖನಿ ಹಿಡಿಸುವಂತೆ ಮಾಡಿತ್ತು! ಈ ಹಿಂದಿನ ಲೇಖನದ ಗಂಭೀರತೆಯೊ ಅಥವಾ ಅದರ ವಿಷಯವೋ ಬಹಳ ಜನರನ್ನು ತಲುಪಿದ್ದು ಸುಳ್ಳು. ಅಥವಾ ರುಚಿಸದಿರಬಹುದು. ಆದರೆ  ಮತ್ತೆ ಮತ್ತೆ ಬಣ್ಣ ಬದಲಿಸುವ ಪೃಕೃತಿಯಂತೆ ಬರಹದ ಶೈಲಿ ವಿಷಯಗಳು ಕೂಡ ಬದಲಾಗಿದೆ ಸರೋವರದಲ್ಲಿ. ಮನಸುಗಳ ಮಾತೀಗ ಭಾವದಂಗಳ ದಾಟಿ ಒಳಜಗುಲಿಯ ವಿಚಾರತೋರಣಕ್ಕೆ ಕಾಲಿಟ್ಟಿದೆ. ನಿಮ್ಮ ಅನಿಸಿಕೆಗಳು ಮೊದಲಿನಂತೆ ಇರಲಿ ಎಂಬ ವಿನಂತಿ. ಇಷ್ಟವಾಗದಿದ್ದದ್ದನ್ನೂ ಹೇಳಬಹುದು. ಮತ್ತೆ ಮನಸುಗಳು ಮಾತಾಡಲಿ...


      ಪ್ರೀತಿ ಒಲವು ಸ್ನೇಹ, ಬಯಕೆ, ಭಾವ, ಬಂಧ, ಸಂಬಂಧಗಳಿಗೆ ಹೊರತಾದ ಪ್ರಪಂಚ ಯಾವುದಿದೆ? ಎಲ್ಲವೂ ಇಲ್ಲಿಯೇ ಹುಟ್ಟಿ ಇಲ್ಲಿಯೇ  ಮುಗಿಯುತ್ತದೆ. ಮತ್ತಷ್ಟುಯ ವಿಜ್ಞಾನ, ತಾಂತ್ರಿಕತೆ, ನಾಗರಿಕತೆ,ಇತಿಹಾಸಗಳ ಬೇರೆ ಬೇರೆ ವಿಷಯಗಳಿರಬಹುದು. ಅಲ್ಲೂ ಕೂಡ ಮಾನವರ ಮನಸುಗಳೇ ಕೆಲಸ ಮಾಡುತ್ತಿವೆ. ಬುದ್ಧಿ ಅಭಿವೃದ್ಧಿಗೆ ಕಾರಣವಾಗಿದೆ. ಜಗತ್ತಿನ ಎಲ್ಲ ಅಭಿವೃದ್ಧಿಗೂ ಮೂಲ ಮನುಷ್ಯ  ಬುದ್ಧಿಗಳೇ.. ಮನುಷ್ಯನೆಂದಮೇಲೆ ಅದೊಂದು ವಯಕ್ತಿಕ ಪ್ರಪಂಚವಿದ್ದೇಇದೆ.  ಅಂತಹ ಮಾನಸಿಕ ಹಾಗೂ ತಾತ್ವಿಕ ಪ್ರಪಂಚದ ಒಳಹೊರಗುಗಳನ್ನು  ಸೂಕ್ಷ್ಮವಾಗಿ ಅವಲೋಕಿಸುವದೇ ನಮ್ಮಂತವರ ಬರಹಕ್ಕೆ ವಿಷಯ. ಹೀಗೆಲ್ಲ ಹೇಳಿದರೆ ಮತ್ತಷ್ಟು ಗೊಂದಲವಾಗಬಹುದೇನೋ. ರೈತನೊಬ್ಬನ ಬದುಕು, ಕಮ್ಮಾರನೊಬ್ಬನ ಮನಸು, ಶಿಲ್ಪಿಯೊಬ್ಬನ ಒಳಗು ಇಂತದ್ದನ್ನೇ ನಾವಿಂದು ಸಾಹಿತ್ಯಪ್ರಪಂಚದ ಉತ್ತಮ ಕಥೆಗಳಲ್ಲಿ ವಸ್ತುಗಳಾಗಿ ನೋಡುತ್ತಿರುವುದು. ಮುಂದಿನ ದಿನಗಳಲ್ಲಿ ಈ ಕಥಾಪ್ರಪಂಚದ ಇನ್ನಷ್ಟು ಪುಟಗಳೊಂದಿಗೆ ನಿಮ್ಮೆದುರು ಬರುತ್ತೇನೆ. ಅಲ್ಲಿಯವರೆಗೆ ಬದರಿ ಸರ್, ಸಂಧ್ಯಾ ಪುಟ್ಟಿ, ಶ್ರೀವತ್ಸ, ರಜನೀ ನಿಮಗೂ ನಿಮ್ಮಂತ ಪ್ರೀತಿ ತೋರಿದ ಎಲ್ಲರಿಗೂ ಮನಸಾರೆ ವಂದಿಸುತ್ತ.


ಸಣ್ಣದೊಂದು ವಿರಾಮ.  

Wednesday, July 8, 2015

ವೈಚಾರಿಕತೆಯ ವೈರುಧ್ಯ.
     ಮನುಷ್ಯ ತನ್ನ ವೈಚಾರಿಕ ವಿಚಾರಗಳನ್ನೆಲ್ಲ ಇನ್ನೊಬ್ಬರ ಮೇಲೆ ಹೇರಲು ಅವಕಾಶ ಸಿಕ್ಕಾಗೆಲ್ಲ ಪ್ರಯತ್ನಿಸುತ್ತಲೇ ಇರುತ್ತಾನೆ, ಒಂದು ಸೃಷ್ಟಿ ಇನ್ನೊಂದು ಪ್ರತಿಸೃಷ್ಟಿಯಂತ ಕಲಾತ್ಮಕ ವಿಚಾರಗಳನ್ನೇ ಇಟ್ಟುಕೊಂಡರೂ ತನ್ನದಾದ ಯಾವುದೋ ಒಂದು ನಿಲುವಿಗೆ ಬದ್ಧನಾದಂತೆ ತೋರುತ್ತಾ ಇನ್ನೊಂದಷ್ಟು ನಿಲುವುಗಳ ವಿರೋಧಿಸುತ್ತಿರುತ್ತಾನೆ. ಹೌದು ವೈಚಾರಿಕತೆಯೆಂಬ ಬಿಸಿ ತುಪ್ಪವೇ ಹಾಗೇ.. ಅದು ಒಳಗೂ ಸುಡುವ ಹೊರಗೂ ಸುಡುವ ಬೂದಿಮುಚ್ಚಿದ ಕೆಂಡದಂತೆ. ಅದನ್ನು ಬಾಯಿಬಿಟ್ಟು ಆಡಿದರೆ ಬಹಳಷ್ಟು ಜನರ ವಿರೋಧ ಕಟ್ಟಿಕೊಳ್ಳಬೇಕು. ಸುಮ್ಮನಿದ್ದರೆ  ಯಾವುದೂ ಹಿತವೆನ್ನಿಸದಂತ ಕುದಿ ಒಳಗಿಂದ ಕುದಿಯುತ್ತಲೇ ಇರುತ್ತದೆ. ಅದು ಸುಮ್ಮನೆ ಕುಳಿತಿರಲಾಗದಷ್ಟು ಸುಡುತ್ತದೆ. ಒಂದಲ್ಲ ಒಂದು ದಿನ ಅದು ಲಾವಾದಂತೆ ಉರಿದು ಹೊರಬೀಳುತ್ತದೆ.. ಯಾವುದೋ ಒಂದನ್ನು ಸುಡುವುದಂತೂ ಸತ್ಯ.

     ಒಂದುಕಾಲಕ್ಕೆ ವೈಚಾರಿಕತೆಯೊಂದು ಬೆಳವಣಿಗೆಯ ಸಾಧನ. ಇನ್ನೊಂದು ಕಾಲಕ್ಕೆ ವೈಚಾರಿಕತೆ ಎಂಬುದು ಬದುಕುವ ಸಾಧನ, ಮತ್ತೂ ಒಂದು ಕಾಲಕ್ಕೆ ವೈಚಾರಿಕತೆಯ  ಪಾಠ ಮತ್ತಷ್ಟು ಕಾಲಕ್ಕೆ ಅದೊಂದು ಅನುಭವ. ಎಲ್ಲ ಕಾಲಕ್ಕೂ ಬದುಕಿಗೆ ನಿಲ್ಲುವುದು ಬರೀ ಅವರವರದ್ದೇ ಆದ ಒಂದು ಕಟು ಕಟು ವಾಸ್ತವ ಮತ್ತದರ ಆಗು ಹೋಗುಗಳಾಚೆ ಮನಸ್ಸಿನ ಆವೇಗಗಳ ನಿರ್ಧರಿಸುವ ಭಾವತೀವ್ರತೆಯ ಅಲೆಗಳಷ್ಟೆ. ಅತ್ಯಾಚಾರ ಕೂಡ ಇಂತದ್ದೇ ಒಂದು ಮನಸ್ಸಿನ ಒಂದು ವಾಸ್ತವದ ಘಟನೆ ಒಬ್ಬರಿಗಾದರೆ ಇನ್ನೊಬ್ಬರಿಗೆ ಅದು ಬದುಕಿಡೀ ಮಾಯದ ಗಾಯ.. ಚಿತ್ರ ವಿಚಿತ್ರವೆನ್ನಿಸುವ ನೂರೆಂಟು ಸತ್ಯಗಳಿಗೆಲ್ಲ ವೈಚಾರಿಕತೆಯಾಗಲೀ ತರ್ಕವಾಗಲೀ ಸ್ಪಷ್ಟನೆ ಕೊಡದು. ಮತ್ತದನ್ನು ನಿಯಂತ್ರಿಸಲಾಗದು. ಎಲ್ಲವನ್ನೂ ತನ್ನ ಕೈಯೊಳಗೇ ಅಂದುಕೊಳ್ಳುವ ಮಾನವ ಅಸಹಾಯಕನಾಗುವುದು ಇಂತ ಪ್ರತೀ ಸಂದರ್ಭಗಳಲ್ಲೂ. ಬೇಡ ಬೇಡವೆಂದರೂ ವಿಜ್ಞಾನದ ಸ್ಪೋಟಗಳಲ್ಲೂ, ಚಂದ್ರ ಗ್ರಹ ಯಾತ್ರೆಯಲ್ಲೂ, ರಾಕೆಟ್ಟು ಉಡ್ಡಯನದಲ್ಲೂ, ಅಮೇರಿಕ ಇಂಗ್ಲೆಂಡಲ್ಲೂ, ಗ್ರೀಕ್ ರೋಮನ್ನುಗಳಲ್ಲೂ ಮುಂದುವರಿದ ಎಲ್ಲ ಪ್ರಪಂಚದಲ್ಲೂ ಮಾನವ ಈ ನಿಸ್ಸಾಹಯಕ ಸ್ಥಿತಿಯಲ್ಲಿ  ದೇವರೇ! ಎನ್ನುತ್ತಾನೆ!! ಮತ್ತೆ ಅದು ಯಾವುದೋ ಒಂದು ಹೆಸರಿಲ್ಲದ ಕಣ್ಣಿಗೆ ಕಾಣದ ಪ್ರಪಂಚವನ್ನೆಲ್ಲ ನಿಯಂತ್ರಿಸುವ ಇಂದ್ರಿಯಗಳಿಗೆ ನಿಲುಕದ ಶಕ್ತಿಯನ್ನು ನಂಬುತ್ತಾನೆ. ದೇವರೆಂದರೆ ಧರ್ಮ ಜಾತಿ, ಶಬ್ಧ, ವಾಕ್ಯಗಳಿಗೆ ಮೀರಿದ್ದು. ಅದನ್ನು ವಿವರಿಸುವ ಮೂರ್ಖತನ ಬೇಡ. ದೇವರ ಹೆಸರಿನಲ್ಲಿ ನೆಮ್ಮದಿಯ ಕಂಡುಕೊಳ್ಳುವ ಮನಸುಗಳನ್ನೂ ಮತ್ತದರ ವೈಚಾರಿಕ ಮುಖಗಳನ್ನೂ ನೋಡಿ ತಿಳಿಯಬೇಕಷ್ಟೆ.


    ಬರಹಗಾರ ಅಥವಾ ಓದುಗ, ಕಲೆಗಾರ ಅಥವಾ ಕಲೋಪಾಸಕ, ಯಾವುದೇ ವಿಷಯತಜ್ಞ ಮತ್ತು ವಿಷಯಗ್ರಾಹಕ ಇಬ್ಬರೂ ಒಂದು ಸಂಪೂರ್ಣ ಸತ್ವಯುತವಾದದ್ದನ್ನು ಆಯ್ದುಕೊಳ್ಳಬೇಕಾದರೆ, ನಿಜವಾದ ಸತ್ಯ ತಿಳಿಯಬೇಕಾದರೆ, ರಸಸ್ವಾದನೆ ಸಾಧ್ಯವಾಗಬೇಕಾದರೆ ಅವನ್ನು ಪೂರ್ಣ ಅರಿತಿರಬೇಕು. ಕೇವಲ ಉತ್ತಮವನ್ನು  ಆಯ್ಕೆ ಮಾಡಿಕೊಳ್ಳುತ್ತೇನೆಂಬುದು ಸಾಧ್ಯವಾಗುವುದಿಲ್ಲ. ಎರಡೂ ಮುಖಗಳ ಅರಿವು ಮಾತ್ರ ಸರಿ/ತಪ್ಪು, ಒಳ್ಳೆಯದು/ ಕೆಟ್ಟದ್ದು ನಿರ್ಣಯಿಸಬಲ್ಲದು. ಹಾಗೇ ಒಬ್ಬ ಮನುಷ್ಯ ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿ ಇರಲಾರ ಯೋಚಿಸಲಾರ ಎಂಬುದು ಸತ್ಯವಾದಲ್ಲಿ ಇನ್ನೊಬ್ಬರ ಆಸ್ವಾದನ ಮಟ್ಟವನ್ನು, ಬೇರೆಯವರ ಪರಿಕಲ್ಪನೆಗೆಷ್ಟೇ ನಿಲುಕಿದ ಅಲ್ಪ ವಿಷಯಗಳನ್ನೂ ಗೌರವಿಸಲೇ ಬೇಕು. ಈ ಪ್ರಪಂಚದಲ್ಲಿ ಎಲ್ಲರೂ ಶೇಕ್ಸ್ ಪಿಯರ್ ಆಗಲಾರರು. ಎಲ್ಲರೂ ರವಿವರ್ಮ  ಆಗಲಾರರು, ಎಲ್ಲರೂ ಪಂಡಿತ್ ರವಿಶಂಕರ್ ಆಗಲಾರರು. ಅವರಂತಾಗುವ ಪ್ರಯತ್ನದಲ್ಲಿ ಇನ್ನೊಬ್ಬರು ಹುಟ್ಟಬಹುದಷ್ಟೆ ಹೊರತು ಕಾಪಿ ಪೇಸ್ಟ್ ಸಾಧ್ಯವಾಗದು. ಅದಕ್ಕೆಂದೇ ಇದು ದೇವರ ನಿರ್ಮಿತಿ!

 ಒಂದೇ ಮನೆಯಲ್ಲಿರುವ ಮೂರು ನಾಲ್ಕು ಜನ ಒಂದೇ ರೀತಿ ಇರುವುದಿಲ್ಲ. ಹೊಟ್ಟೆಯಲ್ಲಿ ಹಂಚಿಕೊಂಡ ಮಕ್ಕಳು ತಂದೆ ತಾಯಿ ಎಲ್ಲವೂ ಬೇರೆಬೇರೆಯೇ ವ್ಯಕ್ತಿ, ಬೇರೆ ಬೇರೆ ವ್ಯಕ್ತಿತ್ವ. ಹಾಗಿರುವಾಗ ನಮ್ಮಂತೆ ಜಗತ್ತೆಲ್ಲ ಯೋಚಿಸಬೇಕೆನ್ನುಂದುಕೊಳ್ಳುವುದು ಮೂರ್ಖತನವಲ್ಲವೆ? ಸಮಾನ ಮನಸ್ಕರು ಎಂದರೆ ಸಮಾನ ಆಸಕ್ತಿಯುಳ್ಳವರಾಗಬಹುದೇ ಸಮಾನ ವಿಚಾರಗಳುಳ್ಳವರು ಆಗುವುದಿಲ್ಲ. ಯಾವುದೋ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಈ ಸಮಾನತೆ ಕಾಣಬಹುದಾದರೂ ಉಳಿದಂತೆ ಪ್ರತಿಯೊಬ್ಬರಲ್ಲೂ ವಿಭಿನ್ನ ವಿಚಾರಗಳಿದ್ದೇ ಇವೆ.  ಹಾಗೆ ನೋಡಿದರೆ ಈ ವೈಚಾರಿಕತೆ, ಯೋಚನೆಗಳು, ಭಾವನೆಗಳು ಪ್ರತಿಯೊಂದೂ ವ್ಯಕ್ತಿಗೂ ಕಾಲಕ್ಕೂ ದೇಶಕ್ಕೂ ಬೇರೆ ಬೇರೆಯೇ. ಮನುಷ್ಯ ವಿಶ್ವಾಸದ ಮೇಲೆ ಮಾತ್ರ ಸ್ನೇಹ, ಸಂಬಂಧಗಳು ನಿಲ್ಲುತ್ತವೆ. ಅಥವಾ ಅವುಗಳನ್ನು ಕಾಯ್ದುಕೊಳ್ಳಲೇಬೇಕಾದ ಒಂದು ವ್ಯವಸ್ಥೆಯಲ್ಲಿ ಬಂಧಿಸಿಕೊಂಡು ಬದುಕುತ್ತೇವೆ. ಬೇಡ ಎಂದುಕೊಂಡ ಮರುಕ್ಷಣ ಮನಸು ಎಲ್ಲದರಿಂದ ಹೊರನಿಲ್ಲಬಲ್ಲ ಸಾಮಥ್ರ್ಯವನ್ನೂ ಹೊಂದುತ್ತದೆ. 

ಸಾಮಾಜಿಕ ಬದುಕು ಮತ್ತು ವೈಚಾರಿಕ ಪ್ರಪಂಚದ ಅಬ್ಬರದ ಭರಾಟೆಯಲ್ಲಿ ಸ್ವಲ್ಪ ಸಂಯಮವಿಲ್ಲದ ಮನಸುಗಳು ಅಥವಾ ಪ್ರಜ್ಞೆ ಕಳೆದುಕೊಳ್ಳುವ ಬಲಹೀನ ಮನಸುಗಳು ಈಗ ಬಹುತೇಕ ದ್ವಂದ್ವದಲ್ಲಿ ಸಿಲುಕಿಕೊಂಡಿವೆ. ಯಾವುದು ಹಿತ ಯಾವುದು ಅಹಿತ ಎನ್ನುವುದರ ನಡುವೆ ಬುದ್ದಿ ಮತ್ತು ಮನಸಿನ ನೇರ ಹೋರಾಟವನ್ನೇ ಇಂದು ಎದುರಿಸುತ್ತಿವೆ. ಬರಹಗಾರ ಪ್ರತಿಯೊಬ್ಬನೂ ತನ್ನನ್ನು ತಾನು ಅತ್ಯುತ್ತಮನೆಂದು ಜಗತ್ತಿಗೆ ಏನೋ ಕೊಡುವ ಮಹಾನ್ ಎಂದುಕೊಳ್ಳುವ ಮೊದಲು ಈ ಮೊದಲು ಜಗತ್ತಿಗೆ ಏನೆಲ್ಲ ಕೊಟ್ಟವರ ಅಸ್ತಿತ್ವ, ಅವರ ಅಸ್ಮಿತೆಯನ್ನು ಅರಿಯಬೇಕು. ಇದ ಮಿತ್ಥಂ ಅನ್ನುವುದಕ್ಕೆ ಹೊರತಾಗಿಯೂ ಯೋಚಿಸುವ ಕಲ್ಪಿಸುವ ಮತ್ತು ಸೃಜಿಸುವ ವಿಶಾಲತೆಯನ್ನು ಹೊಂದಿರಬೇಕು. ನಾನು ನೋಡಿದ್ದು ಸತ್ಯವೆಂಬುದಾದರೆ ನೋಡದಿರುವ ನೂರು ಸತ್ಯಗಳೂ ಇರಬಹುದು. ನನ್ನೆಣಿಕೆಗೆ ಸಿಗದಿರುವ ಅಗಣಿತ ತಾರಾಗಣಗಳಿವೆ ಇಲ್ಲಿ ಎಂಬುದು ಅರಿವಿನ ಮೊದಲ ಹೆಜ್ಜೆ,  ವೈಚಾರಿಕ ವಿರೋಧವೆಂಬುದು ವಿರೋಧಿಸುವುದು ಮತ್ತು ಮುಗಿಬೀಳುವುದರ ಮೇಲೇ ನಿಂತುಹೋಗುವ ಅಪಾಯವಿದೆ. ವಿಷಯದ ಮಂಥನವಾದಲ್ಲಿ ವಿಷ ಅಮೃತಗಳು ಹೊರಚೆಲ್ಲುವವರೆಗೂ ಕಾಯುವ ತಾಳ್ಮೆ ಬೇಕು. ಎಲ್ಲಕ್ಕಿಂತ ವಿಶಾಲತೆಯ ಅರಿವು ಬೇಕು. ಇಷ್ಟೆಲ್ಲದರ ನಡುವೆ ಕಳೆದುಹೋಗದ ಭಾವಗಳು, ಬದುಕಿನ ಕಟು ಸತ್ಯಗಳು, ವಾಸ್ತವದ  ನೆಲೆಯ ಮೇಲೆ ನಿರಂತರದ ಹೋರಾಟದ ಈ ಯುದ್ಧಗಳೇ ನಮ್ಮನ್ನು ಬೆಳೆಸುವಂತದ್ದು. ಕಾಡುವಂತದ್ದು, ಕೊಡುವಂತದ್ದು. ಇಂದಿಗಿಷ್ಟು ಮಳೆ...
ಮತ್ತೆ ಸಿಗುವಾ.