Wednesday, June 20, 2012


ಜೊತೆ ಜೊತೆಯಲಿ.......


                      "Communication is the lifeline of any relationship."
                       When u stop communicating, u start losing ur valuable
                       relationships..

          ಮೊನ್ನೆ ಮೊನ್ನೆಯಷ್ಟೇ ಶ್ರೀ ಚರಣ ದಿಂದ ಈ ನುಡಿಗಳನ್ನ ಓದಿ ತುಂಬ ಇಷ್ಟವಾಯಿತು. ಒಂದೊಂದಾಗಿ ಉರುಳಿ ಹೋದ ಸಂಬಂಧಗಳ ಲೆಕ್ಕ ಹಾಕ ತೊಡಗಿದರೆ ಬದುಕಲ್ಲಿ ಇವತ್ತಿರುವ ಸಂಬಂಧಗಳು ಬೆರಳೆಣಿಕೆಯಷ್ಟು ಮಾತ್ರ. ಹಾಗಂತ ಕಳೆದುಹೋದ ಸಂಬಂಧಗಳೆಲ್ಲ ಕಳೆದು ಹೋದಂತವೇನಲ್ಲ. ಯಾವ ಸಂಬಂಧಗಳೂ ಪೂರ್ಣ ಪ್ರಮಾಣದಲ್ಲಿ ತೊರೆದುಕೊಂಡಿವೆ ಎಂದು ನನಗನ್ನಿಸುವುದಿಲ್ಲ.ಸಂಬಂಧಗಳ ಆಯಾಮ ಬದಲಾಗಿದೆ. ಇದು ಎಲ್ಲರ ಜೀವನದಲ್ಲೂ ಹೀಗೆ ಎಂದೂ ಎಲ್ಲರ ಬದುಕಿನ ಒಂದೊಂದು ಚರಣಗಳಲ್ಲಿ ಕೆಲವು ಕೆಲವಷ್ಟೇ ಸಂಬಂಧಗಳು ಉಳಿದುಕೊಳ್ಳುತ್ತವೆ ಎಂಬುದು ನಾನೆಂದೋ ಅರಿತುಕೊಂಡಿದ್ದೇನೆ. ಎಷ್ಟೋ ಸಲ ನಿನ್ನೊಂದಿಗೆ ಈ ವಿಷಯದ ಚಚರ್ೆಯಾಗಿದೆ! ಸಂಬಂಧಗಳು ಮತ್ತದರ ಬಂಧಗಳ ಕುರಿತಾಗಿ.. ಒಂದು ವಿಸ್ಮಯವೆಂದರೆ ಆಗ ನಾ ಹೇಳುತ್ತಿದ್ದದ್ದನ್ನೆಲ್ಲ ಈಗ ನೀ ಹೇಳುತ್ತಿದ್ದಿ! ಯಾವುದು ಶಾಶ್ವತ ಸಂಬಂಧಗಳೆದು ನಾವು ಬ್ರಮಿಸಿಕೊಳ್ಳುತ್ತೇವೋ ಆ ಸಂಬಂಧಗಳಿಗೂ ಒಂದೊಂದು ಎಲ್ಲೆಯಿದೆ!
 ಇವತ್ತು ಮಾತ್ರ ನಮ್ಮದು. ನಾಳೆಗಳು ನಮ್ಮದೆಂಬ ಯಾವ ಗ್ಯಾರಂಟಿ ಇಲ್ಲಿಲ್ಲ. ಹಾಗಂತ ನಾವು ಕ್ಷಣಕ್ಷಣವೂ   ನಾಳೆ ನಿರೀಕ್ಷೆಯ  ಜೊತೆಯಲ್ಲಿಯೇ ಕನಸಿನ ಜೊತೆಯಲ್ಲೇ ಬದುಕುತ್ತೇವೆ.
 ಹಾಗಿದ್ದೂ ಈ ಬದುಕಿನ ದೂರದೂರದ ಪಯಣದವೆರೆಗೆ ಯಾರಾದರೂ ನಮ್ಮ ಜೊತೆ ಉಳಿದಾರೆಂದರೆ ಅದೂ ಒಂದು ಅದೃಷ್ಟ ಕೂಡ.
         ಸಂವಹನದ ಮಾಧ್ಯಮಗಳು ದಿನದಿನಕೆ ಹೆಚ್ಚಾಗುತ್ತಿವೆ! ಸಂವಹನದ ರೂಪಗಳೂ
ಹೆಚ್ಚಾಗುತ್ತಿವೆ. ಕಳೆದುಕೊಂಡೆವೆಂದು ನಾವೆಂದುಕೊಂಡ ಯಾವ ಸಂಬಂಧಗಳನ್ನು ನಿಜವಾಗಿ
ನಾವು ಕಳೆದುಕೊಂಡಿಲ್ಲ. ಕಳೆದುಕೊಂಡಿದ್ದರೆ ಅದು ಕಮ್ಯುನಿಕೇಶನ್ ಮಾತ್ರ. ಬದಲಾದ ಬದುಕಿನ
ವೇಗಗಳಲ್ಲಿ ಬದಲಾದ ವೇಗದ ಸಂವಹನವನ್ನು ನಾವು ಸದಾಕಾಲ ಎಲ್ಲರ ಜೊತೆ ಇಟ್ಟುಕೊಳ್ಳಲಾರೆವು
ಎಂಬುದು ಒಂದು ಸತ್ಯವಾದರೆ ಇನ್ನೊಂದು ಬದಲಾದ ಮನಸ್ಥಿತಿಯನ್ನು ಒಪ್ಪಿಕೊಳ್ಳದೇ
ಹೋಗುವುದೂ ಸಹ. ಹಾಂ ಇವತ್ತಿನದಿಷ್ಟೇ ಎಂಬುದು ಅರಿವಾದರೆ ಎಷ್ಟೋ ಮನಸುಗಳು
ನೆಮ್ಮದಿಯಿಂದ ಇವತ್ತನ್ನು ಕಳೆಯಬಲ್ಲವು.
 ಈ ಸಮಯದಲ್ಲಿ ನಾನು ತುಂಬಾ ಚಿಕ್ಕವಳಿರುವಾಗ  ಸೋದರತ್ತೆಯೊಬ್ಬರು ಮುಂಬೈ ಮಹಾನಗರದ
ಪುಟ್ಟ ಕೋಣೆಯೊಂದರಲ್ಲಿ ಹೇಳಿದ ಒಂದು ಪುಟ್ಟ ವಾಕ್ಯ ನನ್ನ ಸ್ಪೂತರ್ಿಯಾಗಿ ಸದಾ ಮನದಾಳದಲ್ಲಿ
ನಿಂತಿರುತ್ತದೆ.ಎದುರಿಗೆ ಬೋರ್ಗರೆಯುವ ಸಾಗರದ ಅಲೆಗಳ ತೋರಿಸುತ್ತ ಅವರೆಂದಿದ್ದರು! 
''ಮಗಳೇ ಬದುಕೂ ಈ ಸಾಗರದ ಅಲೆಗಳ ಹಾಗೆ. ಇಲ್ಲಿ ಎಲ್ಲ ಸಂಬಂಧಗಳೂ ಅಷ್ಟೆ. ಪ್ರತೀ
ಸಂಬಂಧವೂ ಆ ಆ ಕಾಲದಲ್ಲಿ ಹೊಸದಾದ ಅಲೆ ಮತ್ತು ಅಷ್ಟೇ ಸತ್ಯ. ಆದರೆ ಒಂದೇ ತೆರನಾಗಿ ತೋರುವ ಈ ಅಲೆಗಳೆಲ್ಲ ಒಂದೇ ಎಂದೂ ಮತ್ತೂ ಯಾವತ್ತೂ ಒಂದೇ ಆಗಿರುತ್ತವೆ ಎಂದೂ
ನಿರೀಕ್ಷಿಸಬೇಡ. ನಾನು ಚಿಕ್ಕವಳಿರುವಾ ಅಪ್ಪ ನನ್ನ ತುಂಬಾ ಪ್ರೀತಿಸುತ್ತಿದ್ದರು. ದೊಡ್ಡವಳಾದಂತೆ
ಅಣ್ಣಂದಿರು ನನ್ನ ಸೇವೆಗೆ ಸದಾ ನಿಲ್ಲುತ್ತಿದ್ದರು. ಅಕ್ಕ ತಂಗಿಯರು ಗೆಳತಿಯರಂತೆ ಇದ್ದೆವು. ಇವತ್ತು
ಅಂದು ಓಟದ ಸ್ಪಧರ್ೆಯಲ್ಲಿ ಗೆದ್ದು ಬಂದ ದಿನ ನನ್ನ ಕಾಲೊತ್ತಿಕೊಡುತ್ತಿದ್ದ ಅದೇ ಅಣ್ಣನಿಗೆ ನಾನು
ಮೂರುವರ್ಷಕ್ಕೊಮ್ಮೆ ಊರಿಗ ಬಂದರೂ ಮಾತನಾಡಲು ಮನೆಯಲ್ಲಿರಲು ಪುರುಸೊತ್ತಿಲ್ಲವಾದರೂ
ನಾನು ದುಃಖಿಸುವಂತಿಲ್ಲ. ಅವನು ಅವನ ಹೆಂಡತಿಯ ಜೊತೆ ಆರಾಮಕ್ಕಿದ್ದಾನೆ. ಅಂತ ಕುಶಿಪಡಬೇಕೆ ಹೊರತು ನಾನು ನನ್ನ ಬದುಕಿನ ಹಳೇ ದಿನಗಳ ನೆನಪಿಸಿಕೊಂಡು ಅತ್ತು ಏನು ಪ್ರಯೋಜನ?
 ಅಕ್ಕ ತಂಗಿಯರೂ ಬದುಕಿನ ಹೋರಾಟದಲ್ಲಿ ಬ್ಯುಸೀ ಆಗಿಬಿಟ್ಟಿದ್ದಾರೆ! ಹಾಗೆ ನನ್ನ ಬದುಕಲ್ಲೂ ಎಷ್ಟೊಂದು ಬದಲಾವಣೆಗಳಾಗಿವೆ!
 ನನ್ನ ಬದುಕಲ್ಲಿ ಮೊದಲಿದ್ದವರ ಎಲ್ಲರ ಇಂಪಾಟರ್ೆನ್ಸ್ ಬದಲಾಗಿ ಹೊಸ ವ್ಯಕ್ತಿಗಳೇ ಆಕ್ರಮಿಸಿಕೊಂಡಿದ್ದಾರೆ!
 ಪತಿ, ಮಕ್ಕಳು ಹೀಗೆ............ ಜೀವನ ಹೀಗೆ ಪುಟ್ಟಿ. ಯಾವತ್ತೂ
ಮರೀಬೇಡ. ಇದರ ಮಧ್ಯೆ ಯಾವತ್ತೋ ಇದಿರಾದರೆ ಮನಸ್ಸಾದರೆ ಮನಬಿಚ್ಚಿ ಮಾತಾಡುವಂತ
ಕೆಲವು ಸಂಬಂಧಗಳನ್ನಾದರೂ ಉಳಿಸಿಕೊಳ್ಳುವುದು ನಮ್ಮೊಳಗಿನ ಅಗತ್ಯ. ಅಂತಹ ಅಗತ್ಯವನ್ನು ಪೂರ್ಣಗೊಳಿಸುವ ಸ್ನೇಹವಿದ್ದರೆ ಎಂದಿಗೂ ಅದನ್ನು ದೂರ ಮಾಡಿಕೊಳ್ಳಬೇಡ. ಸ್ನೇಹಗಳು ಸಹ
ನಮಗೆ ಅಗತ್ಯವಿದ್ದಾಗಷ್ಟೇ ನೆನಪಿಸಿಕೊಳ್ಳುತ್ತೇನೆ ಎಂದರೆ ಸದಾ ಉಳಿಯಲಾರವು. ಮಗಳೇ ಅವರ ಅಗತ್ಯವನ್ನು ಆಲಿಸುತ್ತಿದ್ದಾಗಲೇ  ನಮ್ಮ ಸ್ನೇಹ ಆತ್ಮೀಯತೆ ಉಳಿಯೋದು. ಹಾಂ ಅಂತವರ ಜೊತೆ
ಸದಾ ಸಂವಹನವನ್ನು ಕಾಪಾಡಿಕೊಳ್ಳುವುದೂ ಸಹ ಅಗತ್ಯ. ಇಂತಹ ಸ್ನೇಹಗಳು ಬದುಕಲ್ಲಿ ದೊರೆತರೆ
ಒಂದೋ ಎರಡೋ.. ಅವನ್ನೆಂದೂ ನಿಭಾಯಿಸಿಕೊಂಡಿರು. ಒಂದಲ್ಲ ಒಂದು ದಿನ ನಮಗಿದರ ಅಗತ್ಯ ಖಂಡಿತ ಬೀಳತ್ತೆ. ಮನಸು ತೆರೆದುಕೊಳ್ಳಬಹುದಾದ ಸ್ನೇಹದ್ದು. ಆ ದಿನ ನೀ ಒಂಟಿ ಅನ್ನಿಸಬಾರದು........................''
 ಇಷ್ಟೆಲ್ಲ ವರ್ಷಗಳ ನಂತರವು ಪದೇ ಪದೇ ನೆನಪಾಗುವುದ ಆ ಸಂಜೆಯ ಆ ಕಿರಿದಾದ ಕೋಣೆಯಲ್ಲಾಡಿದ ಅವರ ಮಾತುಗಳೆಷ್ಟು ಸತ್ಯ ಎಂಬುದು! ಅಳುವ ಮನಸ್ಸನ್ನು ಉಪದೇಶ
ಸಾಂತ್ವನಿಸುವುದಿಲ್ಲ. ಅದಕ್ಕೆ ಬೇಕಾದದ್ದು ಮುದ್ದು ಪ್ರೀತಿಗಳೇ... ಹಾಗೆ ಪ್ರೀತಿಯ ಅಗತ್ಯವೆಲ್ಲಿ
ಉಪದೇಶಗಳ ಅಗತ್ಯವೆಲ್ಲಿ ಅಂತ ನಿರ್ಣಯಿಸಬಹುದಾದೆ ಎಂಬುದು ಈ ಹೊತ್ತಿನ ಸಮಾಧಾನಕ್ಕೂ
ಕಾರಣ.

    ಮನಸಿನ ಹುಡುಕಾಟದಲ್ಲಿ ಮೊದಲು ಹುಡುಕುವುದೇ ಪ್ರೀತಿ. ಅದು ಹೆಚ್ಚಾಯಿತೆಂದಿಲ್ಲ.ಸಾಕಾಯಿತು ಎಂಬುದಿಲ್ಲ. ಉಸಿರುಗಟ್ಟಿಸುವ, ಬಲವಂತದ ಪ್ರೀತಿಯೊಂದಾಗದಿದ್ದರೆ
ಮೊಗೆದಷ್ಟೂ ಸುರುವಿಕೊಳ್ಳುವ ಮನಸ್ಸಿನ ಅಗತ್ಯವಿದು! ಹಾಗಂತ ಕಂಡಕಂಡವರನ್ನೆಲ್ಲ ಪ್ಲೀಸ್ ಪ್ರೀತ್ಸು
ಅನ್ನುವ ದೈನ್ಯಕ್ಕೂ ಬೀಳಬಾರದಲ್ಲ.ಮನಸ್ಸು ಹಾಗೆ ಹೇಳೀದರೂ ಹೇಳಬಹುದು. ಆದರೆ ಬುದ್ದಿ ಅದನ್ನು
ಒಪ್ಪುವುದಿಲ್ಲ. ಪ್ರೀತಿಯ ಹರಿಯುವಿಕೆ ಸಮಾನಾಂತರವಾಗಿರಬಹುದು ಇಲ್ಲ ಒಮ್ಮುಕವೇ ಆಗಿರಬಹುದು. ಆದರೆ ಅದು ದೈನ್ಯವೂ ಭಿಕ್ಷೆಯೂ ಆಗಬಾರದು. ಕರುಣೆಯೂ ಅನುಕಂಪವೂ ಅನ್ನಿಸಬಾರದು.
ಪ್ರೀತಿಗೆ ಸ್ನಿಗ್ಧತೆಯಿದೆ, ಮುಗ್ಧತ್ವವಿದೆ.  ಬುದ್ಧಿವಂತಿಕೆಯ ಎಷ್ಟೇ ಗಾಳಿಸುವಿಕೆ(ಜರಡಿ ಹಿಡಿವುದು) ಇದ್ದರೂ ಪ್ರೀತಿ ತನ್ನ ಪ್ರೀತಿಯನ್ನು ಶುದ್ಧರೂಪದಲ್ಲೇ ಬಯಸುತ್ತದೆ. ಮತ್ತ್ತೆ ಪ್ರೀತಿ ಪ್ರೀತಿಯಾಗುವುದು ಸಹ
 ತನ್ನ ಶುದ್ಧ ಭಾವಗಳಲ್ಲಿ. ಈ ಭಾವನೆಗಳ ನೋಡುವ ದೃಷ್ಟಿಯೂ ಅಷ್ಟೇ ಮುಖ್ಯ. ಒಂದುವೇಳೆ ಪ್ರೀತಿಯಾಗಲೀ ಸ್ನೇಹವಾಗಲಿ ಸ್ವಾತಂತ್ರ್ಯ ಬಯಸುತ್ತಿದ್ದರೆ ಅದನ್ನ ಅಷ್ಟೇ ವಿಶ್ವಾಸದಿಂದ ಕೊಡಬಹುದಾದರೆ
ಮಾತ್ರ ಅಂತಹ ಪ್ರೀತಿ ಹೆಚ್ಚು ಗೌರವಯುತವೆನ್ನಿಸುತ್ತದೆ.

 ಯಾಕೋ ಈ ಪ್ರೀತಿಯ ಪುರಾಣ ಮುಗಿಯದ ಕತೆ ಮನವೇ....... ಎಂದಿಗೂ ಮುಗಿಯದ ಕತೆ.
ಕಮ್ಯುನಿಕೇಶನ್ ಎಂಬುದು ಒಂದು ಸಂಬಂಧದ ಜೀವಾಳ. ಎಂಬ ನುಡಿ ಕೇಳಿ ಹಾಂ ಅಂತ ಬರೆಯೋಕೆ ಕುಳಿತೆ ನೋಡು... ಬರೆದದ್ದು ಸಾಲುಸಾಲಾಯಿತು. ಸಂಬಂಧಗಳು ಉಳಿಯಬೇಕಿಲ್ಲ ಅನ್ನಿಸಿದಾಗ
ಕಮ್ಯುನಿಕೇಶನ್ ನಿಲ್ಲಿಸಿಕೊಂಡರಾಯಿತು! ಖಂಡಿತ ಸಂಬಂಧಗಳು ಉಳಿಯುವುದಿಲ್ಲ. ಬೇಕಾದ ಸಂಬಂಧಗಳಿಗೋಸ್ಕರ ನಾವು ಸಮಯವನ್ನೂ ಸಂವಹನವನ್ನೂ ಉಳಿಸಿಕೊಳ್ಳೋದು ಅನಿವಾರ್ಯ.
ಬೇಡದ್ದನ್ನು ದೂರಮಾಡಿಕೊಳ್ಳುವುದೂ ಈ ಜೀವನಕ್ರಮದ ಅಗತ್ಯವೇ ನೋಡು. ಅದನ್ನೂ
ಗೌರವಿಸಲೇಬೇಕಲ್ಲವಾ? ಅಂತಹ  ಎಲ್ಲ ಮುನ್ನೋಟಗಳಿಗೂ ಬದ್ಧರಾಗುತ್ತಾ ಈ ಸರೋವರದ ತೀರದಲ್ಲಿ ಕುಳಿತು ಮಾತನಾಡಿದ ಈ ಸಂಜೆಗಳೇನೂ ಶಾಶ್ವತವಲ್ಲ ಎಂಬ ಅರಿವಿನೊಂದಿಗೇ ಇಂದಿನ
ಮಾತು ಮುಗಿಸಲಾ? ಶುಭಸಂಜೆ..