Saturday, August 4, 2012

ಹ್ಯಾಪೀ ಪ್ರೆಂಡ್ ಶಿಪ್ ಡೇ.....



ಕೃಪೆ: ಅಂತರ್ಜಾಲ.


          ಮತ್ತೊಮ್ಮೆ  ತೀರದ ಈ ವಿಹಾರಕ್ಕೆ ಸ್ವಾಗತ.


     ಸ್ನೇಹಿತರ ದಿನಾಚರಣೆಯ ಸಂದರ್ಭದಲ್ಲಿ ನನ್ನ ಅತ್ಯುತ್ತಮ ಸ್ನೇಹದೊಂದಿಗೆ ಒಂದು ಪ್ರೀತಿಯ ಪತ್ರ.

            ಓ ಸ್ನೇಹೀ ಒಲವೇ........

   ನಮ್ಮ ಸ್ನೇಹವೆಂಬುದು ಒಂದು ದಿನಾಚರಣೆಯ ಸೀಮಿತ ಪ್ರದರ್ಶನಲ್ಲ ಎಂಬ ಅರಿವಿನೊಂದಿಗೇ  ಹೀಗೊಂದಿಷ್ಟು ಮಾತು
ಹಂಚಿಕೊಳ್ಳಬೇಕೆನ್ನಿಸುತ್ತಿದೆ.! ಸ್ನೇಹದ ಅದೆಷ್ಟೋ ವ್ಯಾಖ್ಯಾನಗಳ ಹೊರತಾಗಿ ಸ್ನೇಹ ಬದುಕಿನ ವಾಸ್ತವಕ್ಕೆಷ್ಟು ಮುಖ್ಯ ಎಂಬುದೂ
ಮತ್ತೆ ಮತ್ತೆ ನೆನಪಾಗುತ್ತದೆ.  ಯಾವುದ್ಯಾವುದೋ ಕಾರಣವಿಲ್ಲದ ಕಾರಣಕ್ಕೆ ಅಳುವಾಗುವ, ಸುಮ್ಮ ಸುಮ್ಮನೇ ಬಿಕ್ಕುವ, ವಿನಾಕಾರಣ
ಪುಟ್ಟ ಸಂದೇಶಗಳೊಂದಿಗೆ ಖುಶಿಗೊಳ್ಳುವ, ಸಂಭ್ರಮಕ್ಕೆ ಸೇರುವ, ಬೊಗಸೆಯಂತಹ ಸ್ನೇಹಗಳಿರುವಾಗ ಮನಸೆಂದೂ ಭಾರವಲ್ಲ. ಮುಕ್ತ ಅಷ್ಟೇ
ವಿಶ್ವಾಸಪೂರ್ಣ ಸ್ನೇಹಕ್ಕೆ ಅಪನಂಬಿಕೆಗಳಾಗಲೀ, ಅಡೆತಡೆಗಳಾಗಲೀ ಕಾಡುವುದಿಲ್ಲ. ತಪ್ಪುಗಳ ಸರಿಪಡಿಸಿಕೊಳ್ಳಲು, ನಾವು ಬೆಳೆಯಲು,
ಮನಸು ಅತ್ತರೆ ಸಮಾಧಾನಗೊಳ್ಳಲು ಸ್ನೇಹದಂತ ಇನ್ನೊಂದು ಸಂಬಂಧ ಯಾವುದೂ ಇಲ್ಲ.  ಸ್ನೇಹ ಒಮ್ಮುಖವೂ ಅಲ್ಲ. ಅದೂ ನೀ ನನಗಿದ್ದರೆ ನಾನಿನಗೆ ಎನ್ನುವಂತ
ಒಂದು ಒಪ್ಪಂದ.


   ಎಷ್ಟೋ ಜನ  ಅಂದುಕೊಳ್ಳುತ್ತಾರೆ. ಸ್ನೇಹವೆಂದರೆ ಪಿಕ್ನಿಕ್, ಸಿನೆಮಾ ತಿರುಗಾಟಕ್ಕೆ ಜೊತೆಯಾಗುವ ಒಂದು ತಂಡ ಅಂದುಕೊಳ್ಳುತ್ತಾರೆ. ಸಂಭ್ರಮಕ್ಕೆ ಜೊತೆಯಾಗುವ
ಗೆಳೆಯ ಗೆಳತಿಯರು ಎಷ್ಟೋ ಜನರಿರುತ್ತಾರೆ. ನಮ್ಮನ್ನು ಹೊಗಳುವ ನಮ್ಮನ್ನು ಮೆಚ್ಚುವ ಎಷ್ಟೋ ಜನ ನಮ್ಮ ಸ್ನೇಹಿತರಾಗುತ್ತಾರೆ. ಆದರೆ ಬದುಕಲ್ಲಿ ಬಂದವರೆನ್ನಲ್ಲರೂ
ಒಳ್ಳೆಯ ಸ್ನೇಹಿತರೇ ಆಗುತ್ತಾರೆಂದು ನಂಬಲಾಗುವುದಿಲ್ಲ. ಕೆಲವೊಮ್ಮೆ ಅಚಾನಕ್ ಪರಿಚಯವೂ ಒಂದೊಳ್ಳೆ ಸ್ನೇಹವಾಗಿ ಬದುಕಿನ ಅತ್ಯಮೂಲ್ಯ ಸ್ನೇಹವಾಗುಳಿಯಬಹುದು.
ಇವೆಲ್ಲವೂ ಸ್ನೇಹವನ್ನು ಕಾಯ್ದುಕೊಳ್ಳುವ ವ್ಯಕ್ತಿಯ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ.ಆದರೆ ಸ್ನೇಹವೆಂಬುದು ಒಂದು ಕಾಲ್ಪನಿಕ ಸಂಬಂಧವಲ್ಲ. ಅದಕ್ಕೆ ನಿಭಾವಣೆಯ ಅಗತ್ಯವಿದೆ.


     ಎಷ್ಟೋ ಜನ ಸ್ನೇಹದಲ್ಲಿ ವ್ಯವಹಾರ ನಿಷಿದ್ಧ ಅನ್ನುತ್ತಾರೆ. ವ್ಯವಹಾರ ಅನೇಕ ಸಂಬಂಧಗಳನ್ನು ಹಾಳು ಮಾಡುತ್ತದೆ. ಆದರೆ ಕಷ್ಟಕಾಲದಲ್ಲಿ ಆಗುವವನೇ ನಿಜವಾದ ಸ್ನೇಹಿತ ಆಗಿರುತ್ತಾನೆ. ಬರಿಯ ಬಾಯಿ ಮಾತಿನ ಸಹಾನುಭೂತಿ, ಸಮಾಧಾನಗಳು ಎಲ್ಲ ಕಾಲಕ್ಕೂ ಅನ್ವಯವಾಗುವುದಿಲ್ಲ. ವಾಸ್ತವದ ಬದುಕಿಗೆ ಸಮೀಕರಣಗೊಳ್ಳದ ಸ್ನೇಹ ಒಮ್ಮೊಮ್ಮೆ
ಅರ್ಥಕಳೆದುಕೊಳ್ಳುತ್ತದೆ. ಅಹಂ ಅಥವಾ ಇನ್ಯಾವುದೇ ಕಾರಣಕ್ಕೆ ಸ್ನೇಹ ಅಲಂಕಾರವೆನ್ನಿಸಿದರೆ ಅದು ಸಂಭ್ರಮ ಹಂಚಿಕೊಳ್ಳುವ ಒಂದು ವ್ಯವಸ್ಥೆ ಮಾತ್ರ ಅನ್ನಿಸಿದರೆ ಸ್ನೇಹ
ಪೂರ್ಣ ಅನ್ನಿಸುವುದಿಲ್ಲ. ಸ್ನೇಹ ಪೂರ್ಣವೆನ್ನಿಸಬೇಕಾದರೆ  ವಿಶ್ವಾಸವಿಡುವ ಹಾಗೂ ಕಷ್ಟ ಸುಖದಲ್ಲಿ ಕೈ ಕೊಟ್ಟು ಜೊತೆಯಾಗಬಲ್ಲ  ಸ್ನೇಹಿತರಾಗಬೇಕಾಗುತ್ತದೆ. ಇಂದು
ಸ್ನೇಹವೆಂಬುದು ಸ್ವಾರ್ಥ ಸಾಧನೆಗೆ ಬಳಸುವ ತಂತ್ರವೂ ಆಗಿರುವುದನ್ನು ನಾವು ಕಾಣುತ್ತೇವೆ. ಯಾವುದಾದರೂ ವ್ಯಕ್ತಿಯ ಸ್ನೇಹ ಮಾಡುವುದೆಂದರೆ ಅವರಿಂದ ಎಷ್ಟು ಪ್ರಯೋಜನವೆಂಬುದನ್ನೇ  ಮೊದಲು ಲೆಕ್ಕ ಹಾಕುತ್ತಾರೆ! ಇಂತಹ ಸ್ನೇಹಗಳು ಕೇವಲ ಸ್ನೇಹಗಳಷ್ಟೆ. ಅವಕ್ಕೆ ಅರ್ಥವಿರುವುದಿಲ್ಲ. ಸ್ವಾರ್ಥ ಮಾತ್ರವಿರುತ್ತದೆ.

     ಸ್ನೇಹಿತನೆಂದರೆ ಸದಾ ಒಬ್ಬರ ಮನಸನ್ನು, ಮಾತನ್ನು ಕೇಳುವುದಲ್ಲ.  ಒಬ್ಬರ ಕಷ್ಟ ಸುಖಗಳು ಮಾತ್ರ ಮುಖ್ಯವಾಗುವುದಲ್ಲ. ಪರಿಸ್ಥಿತಿಯ ಒತ್ತಡಗಳಿಗೆ ಸದಾ ಅರ್ಥ ಮಾಡಿಕೊಂಡು ಸ್ಪಂದಿಸಬಲ್ಲವನು ಸ್ನೇಹಿತ. ಎಷ್ಟೋ ಬಾರಿ ಒಳ್ಳೆಯ ಸ್ನೇಹಿತರ ನಡುವೆ  ಕಟು ಮಾತುಗಳು ಬರುತ್ತವೆ. ಅವು ಸದಾ ಪರಸ್ಪರ ಒಬ್ಬರಿಗೊಬ್ಬರು ಹಿತವನ್ನೇ ಬಯಸುತ್ತಿದ್ದಾಗ ತಪ್ಪುಗಳನ್ನು ಖಂಡಿಸುವುದು, ತಿದ್ದುವುದೂ ಸಹ ಸ್ನೇಹಧರ್ಮದ ಒಂದು ಭಾಗವೇ ಆಗಿರುತ್ತದೆ. ಅಂತಹ ಸಂದರ್ಭಗಳು ಸ್ನೇಹಿತರನ್ನು ಅನುಮಾನಿಸಬಾರದು.
ಅಪಮಾನಿಸಬಾರದು. ಸ್ನೇಹಿತರು ಹೇಳಿದ ವಿಷಯದ ಗಂಭೀರ ಚಿಂತನೆ ಮಾಡುವುದು, ಚಚರ್ೆ ಮಾಡುವುದು  ಇಬ್ಬರನ್ನೂ ಮುಕ್ತವನ್ನಾಗಿಸಿ ತಿಳಿಗೊಳಿಸುತ್ತದೆ.

   ಇಂದಿನ  ಎಸ್ ಎಂ ಎಸ್ ಸ್ನೇಹಗಳು, ಫೇಸ್ಬುಕ್ಕ್ ಸ್ನೇಹಗಳು  ಹೀಗೆ ಪ್ರಪಂಚದ ಹಲವು ಜನರ ಪರಿಚಯ, ವಿಭಿನ್ನ ದೃಷಿಕೋನದ ಜನರ ಸ್ನೇಹ ನಮ್ಮ ಮೂಲ ಹಾಗೂ
ಆತ್ಮೀಯ ಸ್ನೇಹದ ಜಾಗವನ್ನು ಕದಲಿಸಬಾರದು.  ಸ್ನೇಹ ಪ್ರಪಂಚ ವಿಶಾಲವಾದಂತೆ ನಾವು ಬದುಕನ್ನು ವಿಶಾಲಗೊಳಿಸಿಕೊಂಡಂತೆ ನಮ್ಮ ನಿಜವಾದ ಸ್ನೇಹವನ್ನು ಗುರುತಿಸಿಕೊಳ್ಳಲು
ಮರೆಯಬಾರದು. ಒಂದೇ ಮನಸುಗಳುಳ್ಳ ಅನೇಕ ಸ್ನೇಹಿತರು ದೊರೆತಾಗ, ನಾವೆಲ್ಲೋ ಕೆಲಸದ ಪ್ರಪಂಚದಲ್ಲಿ ಮುಳುಗಿದಾಗ ದಿನದಿನವೂ ನಾವು ನೆನಪಿಸಿಕೊಳ್ಳಲಾಗದಿದ್ದರೂ ಎಂದೋ ಒಂದಿನ ನಮ್ಮನಮ್ಮ ಸ್ನೇಹಿತರ ನೆನಪು ಮಾಡಿಕೊಳ್ಳುವುದು ಮರೆಯಬಾರದು. ಅವರ ಕಷ್ಟ ಸುಖಗಳ, ಅವರ ಮನಸು ಮತ್ತು ಬದುಕಿನ ಒತ್ತಡಗಳ ಜೊತೆ
ನಮ್ಮ ಚೂರು ನೆನಪು, ಮಾತು, ಬದುಕನ್ನು ತುಂಬ ಸಂಭ್ರಮಗೊಳಿಸುವುದು. ಹಾಗೆ ನೆನಪಿಸಿಕೊಳ್ಳುವ ಸ್ನೇಹವೇ ನಮ್ಮ ಅತ್ಯುತ್ತಮ ಸ್ನೇಹಗಳಾಗಿ ಜೀವನ ಪೂರ್ಣ ಜೊತೆಯಲ್ಲಿರುವುದು. ಇದು ವಾಸ್ತವ ಬದುಕಿಗೂ ನಮ್ಮ  ಭಾವನೆಗಳಿಗೂ ಹೊಂದಾಣಿಕೆ ಆಗಬಲ್ಲ ಸ್ನೇಹ ಪ್ರಪಂಚದಲ್ಲಿ ಮಾತ್ರ ಸಾಧ್ಯ.


   ಇಂತಹ  ಅದೆಷ್ಟೋ ಸ್ನೇಹಗಳ ಜೊತೆ ಜೊತೆ ಬದುಕುವ ನಾವು ಸ್ನೇಹಿತರ ದಿನಾಚರಣೆಯ ಅಗತ್ಯವಿಲ್ಲದೆಯೂ ಅಗತ್ಯವೆಂದುಕೊಳ್ಳುತ್ತ ಶುಭಾಷಯಗಳ ನೆನಪಿಸಿಕೊಳ್ಳುತ್ತ, ನೆನಪಿಸಿಕೊಂಡು ಸಂಭ್ರಮಪಡಲು ಇಂತಹ ದಿನವೊಂದು ಸಾಕ್ಷಿಗಳಾಗಲಿ ಎನ್ನುತ್ತ...   ಒಲವು ಪ್ರೇಮ ಸ್ನೇಹವೆಂಬುದು ಜೀವಂತವಾಗಿರಲಿ...


            ಸ್ನೇಹದ ಬಗ್ಗೆ ಹೇಳ ಹೊರಟರೆ ಮುಗಿಯದಷ್ಟು ಮಾತುಗಳು... ಇಷ್ಟೆಲ್ಲ ಹೇಳಲು ನಿನ್ನಂತ ಸ್ನೇಹಕ್ಕೆ ಅಗತ್ಯವೇ ಇಲ್ಲ ಎಂದು ನನಗೆ ಗೊತ್ತು. ಯಾಕಂದರೆ ನನ್ನಲ್ಲಿ ಈ ಸ್ನೇಹದ  ಭಾಷ್ಯ ಬರೆದದ್ದೇ ನೀನು. ನಿನ್ನ ಗೆಳೆತನವೇ ನಾನಿದನ್ನೆಲ್ಲ ಹೀಗೆ ಕೂತು ಮಾತನಾಡಲು ಸಾಧ್ಯವಾಗಿಸಿದ್ದು. ಒಂದು ಅಸೀಮ ಪ್ರೇಮವನ್ನು ಕರಗಿಸಿಕೊಂಡ ಈ ಸರೋವರದಂಚಲ್ಲಿ ನಾ ನಿನ್ನ ಸ್ನೇಹದ ನೆನಹುಗಳ ತೇಲಿಬಿಡುತ್ತಿದ್ದೇನೆ. ಈ ಪುಟ್ಟ ದೋಣಿಗಳು ನಿನ್ನೊಂದಿಗೆ ಮಾತನಾಡಲಿ.. ಹಾಂ.. ಈ ದೋಣಿಗಳಲ್ಲಿ ಇಂದಿಗೆ ನನ್ನ ಬದುಕಿಗೆ ಬಂದ ಎಲ್ಲ ಸ್ನೇಹಗಳಿಗೆ ಒಂದು ಪುಟ್ಟ ಧನ್ಯವಾದಗಳೊಂದಿಗೆ....

ಸಿಗೋಣ ಸ್ನೇಹೀ ಮತ್ತಿದೇ ತೀರಗಳಲ್ಲಿ......


















No comments:

Post a Comment