Thursday, November 8, 2012

ಬಣ್ಣದ ಕನ್ನಡಕದೊಳಗಿಂದ...




ಚಿತ್ರ ಕೃಪೆ: ಅಂತರ್ಜಾಲ



                                   ಚಿಕ್ಕವರಿದ್ದಾಗ ಸ್ನೇಹ ಸಂಬಂಧಗಳು ಎಷ್ಟೊಂದು ಮಧುರ ಮತ್ತು ನಿಷ್ಕಲ್ಮಷವಾಗಿದ್ದವು! ನಾವೆಲ್ಲ ದೊಡ್ಡವರಾಗುತ್ತಿದ್ದಂತೆ ಯಾಕೆ ಅವು ತಮ್ಮ ಮುಗ್ಧತೆ ಕಳೆದುಕೊಂಡು ಅಗತ್ಯಗಳಾಗಿ, ಅಗತ್ಯಗಳಿಗಾಗಿ ಬದಲಾದವು? ಹೀಗೇ ನೂರು ಯೋಚನೆಗಳ ಹರಿವನ್ನು ನಿನ್ನೆಡೆಯಲ್ಲಿ ತಂದಿದ್ದೇನೆ. ಮನಸು ಮನಸಿನ ಮಾತಿನ ತೀರಕ್ಕೆ..............


              ಭಾವ ಸ್ಪೂರ್ತಿಗಾಗಿ ಕಾದು ಕುಳಿತಿರಬೇಕಾದ ಅಗತ್ಯವಿಲ್ಲದಿದ್ದರೂ  ಹೇಗೆಂದರೆ ಹಾಗೆ ಈ  ತೀರದಲ್ಲಿ ಕುಳಿತಿರಲಾಗದ್ದು ಬಹುಶಃ ಈ ಸರೋವರದ  ಪಾವಿತ್ರ್ಯತೆಯ ಸಂಕೇತವೆಂದುಕೊಳ್ಳೋಣ. ಹಿಮಾಲಯವೆಂಬ ಅಖಂಡ ಶಿಖರಕ್ಕೆ ಅಗಾಧತೆಗೆ ಎದುರಾಗಿ ಶಾಂತವಾಗಿ  ಹರಿದು ನಿಂತಿರುವ ಈ ಸರೋವರಕ್ಕೆ ಅಂತದ್ದೊಂದು
ಪವಿತ್ರತೆ ಬಂದಿದ್ದರೆ ಆಶ್ಚರ್ಯವೇನಿಲ್ಲ. ಆದರೆ  ಅದಕ್ಕೆಂದೇ ಇರಬೇಕು. ಮನಸು ಸಹ ಅಷ್ಟು ನಿರ್ಮಲಲವಾಗಿಟ್ಟುಕೊಳ್ಳದೇ ನಾವು ಈ ತೀರದಲ್ಲಿ ಕುಳಿತು ಬರೆದುಕೊಳ್ಳಲಾರೆವು!  ಬರೆದುಕೊಂಡಂತೆ ಮಾತಾಡಿಕೊಳ್ಳಲಾರೆವು!



            ಇತ್ತೀಚೆಗೆ ಅನುಮಾನವೆಂಬ ಹಳದಿ ಕನ್ನಡಕವನ್ನು ಪದೇ ಪದೇ ಧರಿಸಿಕೊಳ್ಳುತ್ತಿದ್ದೇವೆ ನಾವೆಲ್ಲ. ಪ್ರತೀ ಮನುಷ್ಯ, ಪ್ರತೀ ವಿಷಯ, ಪ್ರತೀ ಸಂದರ್ಭಗಳನ್ನು ಅನುಮಾನದ ಹಳದಿಕನ್ನಡಕದಲ್ಲಿ ನೋಡುವುದು ಚಟವಾಗಿಬಿಟ್ಟಿದೆ. ನಮ್ಮ ಮನಸ್ಸನ್ನೇ ನಾವು ಈ ಕನ್ನಡಕದ ಮೇಲೆ ಕನ್ನಡಕ ಇಟ್ಟುಕೊಂಡು ನೋಡುವ ಅಭ್ಯಾಸ ಅಷ್ಟೇನೂ ಒಳ್ಳೆಯದೆಂದು
ನಂಗನ್ನಿಸುತ್ತಿಲ್ಲ. ನಿನ್ನೆ ನೋಡುವಾಗ ಕೇಳುವಾಗ ಬೆಳ್ಳಗಾಗಿದ್ದ ಸ್ಪಷ್ಟವಾಗಿದ್ದ ಎಲ್ಲ ವಸ್ತುಗಳು ಇವತ್ಯಾಕೆ ಬಣ್ಣ ಕಳೆದುಕೊಂಡವು ಅಂತ ಯೋಚನೆ ಮಾಡುತ್ತಿಲ್ಲ. ನಿಜಕ್ಕೂ ಅದರ ಬಣ್ಣ ಬದಲಾಯಿತಾ? ಅಥವಾ ನಮ್ಮ ನೋಟ ಬದಲಾಯಿತಾ? ದೃಷ್ಟಿವಿಶಾಲತೆಯ ಬಗ್ಗೆ ಮಾತನಾಡುವ ಎಲ್ಲರೂ ನಮ್ಮವರೆಂಬುವರ ಬಗ್ಗೆ ಇಂತದ್ದೊಂದು ಬಣ್ಣದ ಕನ್ನಡಕ
ಧರಿಸಿಕೊಂಡೇ ನೋಡುವ ಅಭ್ಯಾಸ ಮಾಡಿಕೊಂಡಿದ್ದೇವಾ ಅನ್ನುವ ಅನುಮಾನ ಇತ್ತೀಚೆಗೆ ಬಲವಾಗುತ್ತಿದೆ. ಉದಾಹರಣೆಗೆ ವಿಶ್ವಾಸದ ನೆಲೆಯಲ್ಲಿ ನೋಡುವ ಸಂಬಂಧಗಳೆ
ಏನಾದರೂ ನಮ್ಮ ವಿಚಾರಗಳಿಗೆ ವಿರುದ್ಧವಾದ ಅಭಿಪ್ರಾಯಗಳ ವ್ಯಕ್ತಪಡಿಸಿದರೆ ಅದು ಬರೀ ವಿಚಾರಬೇಧವಾಗಿ ಅಥವಾ ಒಂದು ಸಾಮಾನ್ಯನೆಲೆಯಲ್ಲಿ ನೋಡುವುದಿಲ್ಲ ನಾವು!
ನಮ್ಮವರು ಅಂತಂದುಕೊಂಡಮೇಲೆ ಅವರು ನಾವು ಹೇಗಿದ್ದರೂ ಒಪ್ಪಿಕೊಳ್ಳಲೇಬೇಕೆಂಬ, ನಮ್ಮ ವಿಚಾರಗಳನ್ನು ಮಾನ್ಯತೆಮಾಡಬೇಕೆಂಬ ಚೌಕಟ್ಟಿಗೆ ಒಳಪಡಿಸಿಕೊಂಡುಬಿಡುತ್ತೇವೆ.
ನಿಜವೆಂದರೆ ಹಾಗೆ ಒಂದು ಕುರುಡುತನವನ್ನು ನಾವೂ ಇಟ್ಟುಕೊಳ್ಳಲಾಗದು. ನಮ್ಮವರೂ ಇಟ್ಟುಕೊಳ್ಳಲಾಗದು. ಅನಿಸಿಕೆಯನ್ನು ಹೇಳುವ ಹಾಗೇ ಅದನ್ನು ಯಾಕೆ ಹೇಳಿದ್ದಾರೆಂದು
ವಿಚಾರಿಸಿ ಯೋಚಿಸುವ ಸ್ಥಿತಿ ಎಂದಿಗೂ ಸಂಬಂಧಗಳನ್ನು ಮತ್ತು ಮಾನವಸ್ನೇಹಗಳನ್ನು ಹೆಚ್ಚು ಬಲಿಷ್ಟವಾಗಿಸಿ ಹೆಚ್ಚುಕಾಲ ಬಾಳುವಂತೆ ಮಾಡುವುದು ಎಂದು ನನಗನಗನಿಸುತ್ತದೆ.


                 ಯಾಕೋ ಪದೇ ಪದೇ ಇಂತದ್ದೇ ವಿಷಯಗಳು ಸಂಬಂಧಗಳ ಕುರಿತು ಹೆಚ್ಚು ಯೋಚನೆ ಮೂಡುತ್ತದೆ! ಬದುಕಿಗೆ ಸಂಬಂಧ, ಸ್ನೇಹಗಳು ಎಷ್ಟು ಮುಖ್ಯ! ಅವೆಷ್ಟು ಅವಿನಾಭಾವ! ಹಾಗಿದ್ದೂ ಒಂದು ಹಂತದಲ್ಲಿ ಪ್ರತಿಯೊಬ್ಬರೂ ಒಂಟಿ ಎಂದೇ ಎನ್ನಿಸುತ್ತದೆ. ನಾನೂ ನೀನೂ ಒಂದೇ ಅನ್ನುವ ಪ್ರೀತಿ ಸಹ ಎಂದೂ ಒಂದೇ ಆಗಲು ಬಿಡದು!
ಮನುಷ್ಯ ಅಸ್ತಿತ್ವ ಎನ್ನುವುದು ಇದೇ ಕಾರಣಕ್ಕಿರಬಹುದೇ? ಪ್ರತಿ ವ್ಯಕ್ತಿಯಲ್ಲಿನ ಒಳಗೊಂದು ಸ್ಪಷ್ಟ ಏಕತಾ ಭಾವ ಇದೆಯಾ? ಅದು ಅಹಂ ಎಂಬ ಕಾರಣವಿರಬಹುದು! ಅರ್ಪಣೆ ಸಹ ಒಂದು ಹಂತದವರೆಗಿನ ಏಕತೆಯನ್ನು ಸೃಷ್ಟಿಸಿದರೂ ಮೂಲತಃ ವ್ಯಕ್ತಿ ಸ್ವಯಂ ಕೇಂದ್ರಿತ.  ಮತ್ತು ವ್ಯಕ್ತಿಮೂಲದ ಸಂಬಂಧಗಳು ಸ್ವಯಂ ಕೇಂದ್ರಿತವಾಗಿಯೇ ಮುಂದುವರೆಯುತ್ತದೆ. ಈ ಎಲ್ಲ ನೆಲೆಗಳಲ್ಲಿ ಯೋಚಿಸುತ್ತ ಹೋದಂತೆ ನನಗೆ ವಿಶ್ವಾಸ ಅಥವಾ ನಂಬಿಕೆಯ ನೆಲೆಗಟ್ಟು ಎಂಬುದು ಹೆಚ್ಚು ಅರ್ಥಪೂರ್ಣ ಅನ್ನಿಸುತ್ತದೆ.


                          ಇವನ್ನೆಲ್ಲ ಮಾತಾಡಬೇಕೆನ್ನಿಸಿದ್ದು ಮತ್ತೆ ಮತ್ತೆ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಹುಚ್ಚು ಮನಸ್ಸಿನದೇನೋ... ಪ್ರೀತಿಯ ರೂಪ ದಿನದಿನಕ್ಕೂ ಬದಲಾಗುತ್ತದೆ ಎಂಬುದನ್ನು ಒಪ್ಪಿಕೊಂಡಷ್ಟು ಸುಲಭವಾಗಿ ಅದರ ವ್ಯಕ್ತವಾಗುವಿಕೆಯಲ್ಲಿನ ಬದಲಾವಣೆಯನ್ನು ಒಪ್ಪಿಕೊಂಡಷ್ಟು ಸುಲಭವಾಗಿ ಪ್ರೀತಿಯಲ್ಲಿ ಉಂಟಾಗುವ ನಿರ್ಲಕ್ಷ್ಯವನ್ನು ಮತ್ತು ವ್ಯಕ್ತಿತ್ವದ ಅನುಮಾನವನ್ನು ಜೀಣರ್ಿಸಿಕೊಳ್ಳುವುದು ಸುಲಭವಾಗುವುದಿಲ್ಲ. ಅಂಟಿಕೊಳ್ಳುವಿಕೆ ಅಂಟಿಕೊಳ್ಳದಿರುವಿಕೆಯ ಮಧ್ಯೆ ಎಲ್ಲೋ ಒಂದು ಜೀವತಂತು ಉಳಿದುಕೊಂಡಿದ್ದರೆ ಅದು ವಿಶ್ವಾಸವೆಂಬ ಗಟ್ಟಿ ಎಳೆ. ಅದನ್ನೇ ಅನುಮಾನದ ಕನ್ನಡಕದಲ್ಲಿ ನೋಡುವ ಮತ್ತು ಸಂಬಂಧಗಳ ವಿಷಯದಲ್ಲಿ ಪೂವರ್ಾಗ್ರಹಗಳ ಬೆಳೆಸಿಕೊಳ್ಳುವ ಮನಸುಗಳಿಗೆ ಇಂತದ್ದೊಂದು ಸಹಜ ಪ್ರಕ್ರಿಯೆಗೆ ಅನಿವಾರ್ಯ ಒಡ್ಡಿಕೊಳ್ಳಬೇಕಾಗುತ್ತದೆ. ವಿಶ್ವಾಸದ ಬಲದಿಂದ ಗೆದ್ದುಕೊಳ್ಳಬಹುದಾದ ಸಣ್ಣತನಗಳ ಮತ್ತಷ್ಟು ಬಣ್ಣ ಬಣ್ಣದ  ಕನ್ನಡಕಗಳ ತೊಟ್ಟು ನೋಡುವುದು ಕಮ್ಮಿ ಮಾಡಿಕೊಂಡರೆ ನಾವು ಹೆಚ್ಚು ನಿರಾಳವೂ ನಿರುಮ್ಮಳವೂ ಆಗಬಹುದು!


                 ಈ ಪ್ರೀತಿಯ ಕುರಿತು ಇನ್ನೊಂದು ಮಾತು ಹೇಳಬೇಕೆನ್ನಿಸುತ್ತದೆ. ಇತ್ತೀಚೆಗೆ ಎಲ್ಲಾ ಪ್ರೀತಿಗಳೂ ಬರೀ ಬಣ್ಣಬಣ್ಣದ ನಿಯಾನ್ ದೀಪಗಳಂತೆ ಅನ್ನಿಸುತ್ತದೆ!ಎಲ್ಲಾ ಸಂಬಂಧಗಳಲ್ಲಿ, ಎಲ್ಲಾ ಪ್ರೀತಿಯಲ್ಲಿ ಮುಖ್ಯವಾಗಿ ಇರಬೇಕಾದ ಕಾಳಜಿ (ಕೇರ್), ಗೌರವ ಹಾಗೂ ಅವುಗಳಿಗೆ ನೀಡಬೇಕಾದ ಕನಿಷ್ಟ ಸಮಯವನ್ನೂ ನೀಡಲಾಗದಂತ ಪ್ರೀತಿಗಳಿಗೆ ಅರ್ಥವೇ ಇಲ್ಲ ಎನ್ನಿಸುತ್ತದೆ. ಗೆಳತಿಯೊಬ್ಬಳ ಮಾತು ಪೂರಕವಾಗಿ ನೆನಪಾಗುತ್ತದೆ. "ಇಂದು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರೀತಿಯ ಹಪಾಹಪಿ ಆರಂಭವಾಗಿದೆ. ಪ್ರೀತಿಯ ತುಡಿತ, ಕುದಿತ ಪ್ರತಿಯೊಬ್ಬರಿಗೂ ಬೇಕು. ಆದರೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವ ಪ್ರೀತಿಯನ್ನು ನೋಡಲಾಗದವರೇ ಹೆಚ್ಚು.  ಯಾಕೆಂದರೆ ಪ್ರೀತಿ ಬಣ್ಣ ಬಣ್ಣದ ಮಾತುಗಳ ಸರಕೆಂದುಕೊಂಡವರೇ ಹೆಚ್ಚು.  ಅದಕ್ಕೆಂದೇ ಮಾಕರ್ೆಟ್ಟಿನಲ್ಲಿ ಬಿಕರಿಯಾಗುವ ವಸ್ತುವಿನಂತೆ ಪ್ರೀತಿಯನ್ನು ಕೊಂಡುಕೊಳ್ಳಬಯಸುತ್ತಾರೆ! ಗೊತ್ತಿಲ್ಲ ಅವರಿಗೆ. ಪ್ರೀತಿ  ಅಂತಹ ವಸ್ತುವಲ್ಲ. ಅದೊಂದು  ತೆಗೆದುಕೊಳ್ಳುವುದಕ್ಕಿಂತ ಕೊಡಲ್ಪಡುವ ತಪಸ್ಸು ಎಂಬುದು!" ಈ  ಮಾತು ನಿಜವೆನ್ನಿಸುತ್ತದೆ ಹಲವು ಬಾರಿ...



         ಅದೇನೇ ಇರಲಿ ಮನವೇ... ನೀನೆಂದು ಈ ತಪದ ನಡಿಗೆಯಲ್ಲಿ ಸೋಲಬೇಡ. ನಿನ್ನೊಳಗು ಈ ಪದ ಜೀವಂತವಾಗಿರಲಿ...  ದೀಪಗಳ ಹಬ್ಬ ಎದುರಿಗಿದೆ.. ಪುಟ್ಟ ಮಣ್ಣಿನ ಹಣತೆಗಳಿಗಾಗಿ  ಹಸಿ ಮಣ್ಣು ಮೆತ್ತಿದ್ದೇನೆ. ಮತ್ತಷ್ಟು ಪುಟ್ಟ ಹಣತೆಗಳ ಹಿಡಿದು ಬರುತ್ತೇನೆ. ಈ ಸರೋವರದ ಅಲೆಗಳಲ್ಲಿ ತೇಲಿಬಿಡೋಣ.. ನಮ್ಮ ಬೊಗಸೆಗಳಲ್ಲಿ...

ಅಲ್ಲಿಯವರೆಗೆ ಕಾಯುತ್ತಿರು ನಿನ್ನಂಜಲಿಯಲ್ಲಿ ಎಣ್ಣೆ ಆರದಿರಲಿ....







 

7 comments:

  1. ಮನುಷ್ಯ ಮನುಷ್ಯರ ನಡುವೆ ಪ್ರಕೃತಿ ಕಳೆದಿದೆ, ಬಣ್ಣ ತುಂಬಿದೆ... ಬಣ್ಣದ ಕನ್ನಡಕದ ತಿಳಿವು ಬದುಕಿನ ಸಹಜತೆಗೂ ದಾರಿಯಾಗಲಿ, ಕನ್ನಡಕಗಳು ಕಳೆಯಲಿ...

    ReplyDelete
  2. ತುಂಬಾ ಧನ್ಯವಾದಗಳು ಮಾನಸ ಸರೋವರದ ತೀರಕ್ಕೆ ಬಂದು ವಿಹರಿಸಿದ್ದಕ್ಕೆ... ರಘುನಂದನ್ ಕೆ. ಹೆಗಡೆಯವರೆ.

    ReplyDelete
  3. Superb..... Belakin putta hanate bannada kannadakadolaginda kanuva satya vadantaha Bhaavane tereda puta dante moodide. Chennagide.

    ReplyDelete
  4. ಮಾನವ ಸಂಬಂಧಗಳ ಕುರಿತ ನಿಮ್ಮ ಲೇಖನ ಬಹಳಷ್ಟು ವಿಚಾರಗಳನ್ನು ಅನಾವರಣ ಗೊಳಿಸಿದೆ. ಕೃತಕ ಕನ್ನಡಕಗಳನ್ನು ಕಿತ್ತೆಸೆದು ಸಹಜ ದೃಷ್ಟಿ ಹರಿಸಿದಾಗ ವಾಸ್ತವ ದರ್ಶನ ಆಗುತ್ತದೆ. ಒಳ್ಳೆಯ ಲೇಖನ, ಧನ್ಯವಾದಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  5. ಧನ್ಯವಾದಗಳು ಬಾಲು ಸರ್ ಹಾಗೂ ವಿನಾಯಕ್ ಭಾಗ್ವತ್ ಅವರಿಗೆ.. ನಿಮ್ಮ ಸಲಹೆ ಸೂಚನೆಗಳು ಪ್ರೀತಿ ನಿರಂತರವಾಗಿರಲಿ..

    ReplyDelete
  6. This comment has been removed by the author.

    ReplyDelete
  7. ತುಂಬಾ ಸುಂದರವಾದ ಲೇಖನ ಅಕ್ಕ.. ಹಳದಿ ಕನ್ನಡಕ ದಿಂದ.. ನೋಡಿದವರ ಕಣ್ಣಿಗೆ ಮಾತ್ರ ಎದುರಿನವು..ಹಳದಿಯಾಗಿ ಕಾಣಬಹುದು.. ಆದರೆ.. ಪ್ರಪಂಚದವರೇಲ್ಲಾ ಹಳಿದಿ ಯಾಗಿ ಕಾಣಲು ಸಾದ್ಯವಿಲ್ಲ.. .ನಾಡ್ ನುಡಿಯಂತೆ. ಕಾಮಾಲೆ ಕಣ್ಣಿ ದ್ದವರಿಗೆ ಜಗತ್ತೇ..ಹಳದಿ ಯಾಗಿ ಕಾಣತ್ತೆ..ಅಲ್ವ??

    ಸುಂದರ್ ಬರಹಗಳು.. ಇನ್ನು ನಿಮ್ ಮನದಾಳದ ಅಲೆಗಳು ಇ ಸಮುದ್ರವನ್ನು ತಟ್ಟಿ ಎಚ್ಹೇರಿಸಲಿ

    "ಇಂದು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರೀತಿಯ ಹಪಾಹಪಿ ಆರಂಭವಾಗಿದೆ. ಪ್ರೀತಿಯ ತುಡಿತ, ಕುದಿತ ಪ್ರತಿಯೊಬ್ಬರಿಗೂ ಬೇಕು. ಆದರೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವ ಪ್ರೀತಿಯನ್ನು ನೋಡಲಾಗದವರೇ ಹೆಚ್ಚು. ಯಾಕೆಂದರೆ ಪ್ರೀತಿ ಬಣ್ಣ ಬಣ್ಣದ ಮಾತುಗಳ ಸರಕೆಂದುಕೊಂಡವರೇ ಹೆಚ್ಚು. ಅದಕ್ಕೆಂದೇ ಮಾಕರ್ೆಟ್ಟಿನಲ್ಲಿ ಬಿಕರಿಯಾಗುವ ವಸ್ತುವಿನಂತೆ ಪ್ರೀತಿಯನ್ನು ಕೊಂಡುಕೊಳ್ಳಬಯಸುತ್ತಾರೆ! ಗೊತ್ತಿಲ್ಲ ಅವರಿಗೆ. ಪ್ರೀತಿ ಅಂತಹ ವಸ್ತುವಲ್ಲ. ಅದೊಂದು ತೆಗೆದುಕೊಳ್ಳುವುದಕ್ಕಿಂತ ಕೊಡಲ್ಪಡುವ ತಪಸ್ಸು ಎಂಬುದು!"...

    ReplyDelete