ಬರೆಯಲೇಬೇಕೆ ಈ ಬಯಲದಾರಿ?
ತಿಂಗಳ ಹಿಂದೆ ಬರೆಯಬೇಕಾಗಿತ್ತು ನಾನಿದನ್ನು! ಇಂದು ಆರಂಭಿಸಿದ್ದೇನೆ. ಅಂದರೆ ಸಂಕಲ್ಪಗಳು ನಮ್ಮವೇ ಎಂದು ನಾವಂದುಕೊಳ್ಳುತ್ತೇವೆ! ಭಗವಂತನ ಸಂಕಲ್ಪ ಬೇರೆಯೇ ಇದ್ದರೆ ನಮ್ಮ ಸಂಕಲ್ಪಗಳೆಲ್ಲ ತಿರುಮುರುಗಾಗಲು ಅದೆಷ್ಟು ಹೊತ್ತು! ಕ್ಷಣ ಮಾತ್ರ ಸಾಕು! ನಿರೀಕ್ಷೆಯಿಲ್ಲದ ಒಂದು ಪುಟ್ಟ ಘಟನೆ ಎಷ್ಟೋ ಮಾನವ ಸಂಕಲ್ಪಗಳನ್ನು ಹಿಂದೆ ಮುಂದಾಗಿಸಿದ್ದ ಕಾಣುತ್ತೇವೆ! ಹಾಗಿದ್ದೂ ನಮ್ಮದೇ ಸಂಕಲ್ಪ ಬಲದಿಂದಲೇ ಬದುಕುತ್ತೇವೆಂದು ನಂಬುತ್ತೇವೆ! ಎಲ್ಲ ನಿಮಿತ್ತ ಮಾತ್ರವಾದರೆ ಈ ಬರಹ ಕೂಡ ಒಂದು ನಿಮಿತ್ತ. ಇದರ ಹಿಂದೆ ಮಹಾ ಸಾಧನೆಯ ಉದ್ದೇಶಗಳಿಲ್ಲ. ಸುಮ್ಮನೆ ಹೇಳಿಕೊಳ್ಳುವ ತವಕವೊಂದಿದೆ. ಅದು ನಿನ್ನ ತಲುಪಿ ಪುಟ್ಟದೊಂದು ಸ್ಪಂದನೆಯ ಅಲೆ ಹುಟ್ಟಿಸುವುದೆಂಬ ವಿಶ್ವಾಸವೊಂದಿದೆ. ಅಂತದ್ದೇ ವಿಶ್ವಾಸಗಳ, ತವಕಗಳ, ಬೆರಗು ಬಿನ್ನಾಣಗಳ ಕೊಡು ಕೊಳ್ಳುವಿಕೆಯೇ ಸಾಹಿತ್ಯ ನಿಮರ್ಾಣದ ಪರಮೋದ್ದೇಶ. ಬಹುಶಃ ದೊಡ್ಡ ದೊಡ್ಡ ಮಹಾ ಕಾವ್ಯಗಳೂ ಹುಟ್ಟುವಾಗಲು ಅವು ಮಹಾಕಾವ್ಯಗಳಾಗಬೇಕೆಂದೇ ಹುಟ್ಟಿದವಲ್ಲ. ಅವೆಲ್ಲ ಶಾರದೆಯ ನಿಮಿತ್ತ ಮಾತ್ರದ ಕೂಸುಗಳು. ಕವಿ ಸೃಷ್ಟಿ ಕೇವಲ ಭಾಷೆಗಿಟ್ಟ ಬಣ್ಣಗಳಲ್ಲ. ಭಾವಗಳಲ್ಲಿ ಕುಣಿದಾಡಿದ ಆ ದೇವನ ನೃತ್ಯಭಂಗಿಗಳು! ಅವನನ್ನು ಸೃಷ್ಟಿಸುವ ಎಲ್ಲ ಪ್ರತಿಭೆಗೆ ಆ ಪ್ರತಿಭೆಯ ಸದುದ್ದೇಶಗೊಳಿಸಿಕೊಳ್ಳುವ ಅವನ ಶ್ರಮಕ್ಕೆ. ಅದಕ್ಕೆ ಪೂರಕವಾದ ವಾತಾವರಣ, ಸಮಾಜ, ಮನಸುಗಳ ಕಟ್ಟಿಕೊಡುವ ಬದುಕಿಗೆ ಎಲ್ಲಕ್ಕು ಋಣಿ ಒಂದು ಶ್ರೇಷ್ಟ ಕೃತಿ. ಹಾಗಿದ್ದಮೇಲೆ ನಾನು ಬರೆಯುತ್ತೇನೆನ್ನುವುದಕ್ಕಿಂತ ಅವಳು ಬರೆಸುತ್ತಾಳೆನ್ನುವುದು ಸರಿ ಎಂದು ತೋರುತ್ತಿದೆ ನನಗೆ. ನಿನಗೆ?
ಒಂದು ಅದಮ್ಯ ಉತ್ಸಾಹದೊಂದಿಗೆ ಆರಂಭಿಸಬೇಕಿದ್ದ ಬರಹ ಒಂದು ವಿಷಾದನಿಟ್ಟುಸಿರಿನೊಂದಿಗೆ ಕೂಡಿಕೊಂಡು ಹೊಸದೊಂದು ಹುಟ್ಟಿಗೆ ಕಾರಣವಾಗಿ ಬದಲಾಗಲು ಎಷ್ಟು ಹೊತ್ತು ಬೇಕು? ಮನಸ್ಸಿನ ಭಾವಗಳಿಗೆ ಬದಲಾಗಲು ಕ್ಷಣಕಾಲ ಸಾಕು. ಅದರ ಗತಿ ಹಿಂದು ಮುಂದಾಗಲು ಬರಹ ಕೂಡ ಬೇರೆಯದೇ ರೂಪ ಪಡೆದುಕೊಳ್ಳುವುದು ಸತ್ಯ.
ಹಾಗಿದ್ದೂ ಬರಹಕ್ಕೊಂದು ನಿದರ್ಿಷ್ಟ ಚೌಕಟ್ಟಿದೆ. ಪ್ರಾಮಾಣಿಕತೆಯಿದೆ. ಬರೆಯುವವನ ಮನಸಿನಲ್ಲಿ ಹೇಳುವ ತವಕವಿದೆ, ಅ ತವಕಕ್ಕೆ ಸಾಂದಭರ್ಿಕ ಹಾಗೂ ಶಕ್ತ ಭಾಷೆಯ ರೂಪ ಕೊಡುವಲ್ಲಿ ಬಹುಶಃ ಬಹಳಷ್ಟು ಜನ ಕವಿಗಳು ಸೋಲುತ್ತಾರೆ! ಮತ್ತೆ ಅಂತಹ ಸೋಲನ್ನು ಗೆದ್ದು ಓದು, ಅಧ್ಯಯನ, ತಾದಾತ್ಮ್ಯ ಹಾಗೂ ಶೃದ್ಧೆಗಳ ರೂಢಿಸಿಕೊಂಡ ಕೆಲವರಷ್ಟೆ
ದಿಗ್ಗಜರೆನಿಸಿಕೊಳ್ಳುತ್ತಾರೆ! ಅದಕ್ಕೆಂದೆ ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಕುವೆಂಪು, ಒಬ್ಬ ಬೇಂದ್ರೆ, ಒಬ್ಬರು ಭೈರಪ್ಪ ಎಲ್ಲರೂ ಒಬ್ಬೊಬ್ಬರೇ ಉಳಿಯುತ್ತಾರೆ! ಬರೆದವರೆಲ್ಲ ಕಾರಂತರೋ
ಅಡಿಗರೋ ಆಗುವುದಾದರೆ ಸಾಹಿತ್ಯಕ್ಕೊಂದು ಮೌಲ್ಯ ಉಳಿದುಕೊಳ್ಳುತ್ತಿರಲಿಲ್ಲ. ಹಾಗಂತ ಬರೆದವರನ್ನೆಲ್ಲ ನಾವು ದೂಡಿ ಬಿಡಲಾಗದು! ಇಂದಿಗೂ ಕಾವ್ಯ ಪ್ರಪಂಚದ ಪುಟ್ಟ ಆಶುಕವಿತೆಗಳ ಸೃಷ್ಟಿಯಲ್ಲಿ ತೊಡಗಿರುವ ಈ ಭಾವುಕ ಮನಸುಗಳೇ ನಮ್ಮ ಸಾಹಿತ್ಯಾಭಿಮಾನಿಗಳು. ಮತ್ತು ಸಾಹಿತ್ಯವನ್ನು ಪ್ರೀತಿಯಿಂದ ಓದುವ ಜನಸಾಮಾನ್ಯರು. ಅವರೆದೆಗೆ ತಟ್ಟುವ
ಕಾವ್ಯಗಳ ಸರಳತೆ ಜನಪದದಷ್ಟು ಪ್ರಿಯವಾಗುತ್ತದೆ. ವೇದಾಂತಗಳೆಲ್ಲ ಪುಟ್ಟ ಜೀವನ ಪಾಠದಲ್ಲಿ ಸೇರಿಕೊಳ್ಳುತ್ತ ಮನೆಮನೆಯ ಅಮ್ಮಂದಿರ ಹಾಡುಗಳಾಗುತ್ತವೆ. ಯಾರಿಗೋಸ್ಕರ ಬರೆಯಬೇಕು? ಯಾವ ಸಾಧನೆಗೋಸ್ಕರ ಯಾವ ಪದವಿ ಪ್ರಚಂಡಗಳಿಗೋಸ್ಕರ ಬರೆಯಬೇಕೆಂಬ ಮನಸ್ಸಿಗೆ ಉತ್ತರ ಹೇಳುತ್ತದೆ. ನಾನಂತು ಎಲ್ಲರಿಗಾಗಿ ಬರೆಯುವುದಿಲ್ಲ. ಬರೆದದ್ದರಲ್ಲಿ ಒಂದು ಸಾಲು ಎಲ್ಲೋ ಒಂದು ಮನಸಿನ ಸಣ್ಣ ಪದರವನ್ನು ಸ್ಪಷರ್ಿಸಿ ಹೋದರೂ ಸಾರ್ಥಕವೆಂಬ ತೃಪ್ತಿಗೋಸ್ಕರ ಬರೆದುಕೊಳ್ಳುತ್ತೇನೆ. ಇದು ಸರಿಯಾ ತಪ್ಪಾ ನಿರ್ಣಯಿಸಿಕೊಳ್ಳಲು ಕಾಲವೇ ಉತ್ತರವಾಗಬೇಕು!
ಪ್ರತಿ ಕ್ಷಣ ಕೂಡ ಇಲ್ಲಿ ಬದಲಾಗುವ ಜೀವಂತಿಕೆಯ ಹೇಳುವ ಪಾಠ. ನಿನ್ನೆಯ ನಮ್ಮದೇ ಬಾಲಿಶ ಕವಿತೆಗಳ ಕಂಡು ನಗುವ ನಾವು ಪದಪುಂಜಗಳ ಸಾಮ್ರಾಜ್ಯಕಟ್ಟಿಕೊಂಡರೂ ಮತ್ತೆ ಬಾಲಿಶವಾಗದಿದ್ದರೆ ಬಾಲ್ಯವನ್ನು ಬರೆಯಲಾರೆವು! ಒಂದು ದೀರ್ಘ ಕಾದಂಬರಿಯನ್ನೋ ಕಥೆ, ಕವಿತೆ ಏನನ್ನೇ ತೆಗೆದುಕೊಂಡರೂ ಒಂದು ಬಾಲ್ಯದ ಚಿತ್ರಣವಾಗಬೇಕಾದರೆ ಮತ್ತೆ ಸಾಹಿತಿ ಅಂತ ಬಾಲ್ಯವನ್ನು ಅನುಭವಿಸಿ ಸೃಜಿಸುತ್ತಾನೆ! ಹಾಗೇ ಪ್ರೇಮ ಪ್ರಣಯಗಳು ಒಂದು ವಯಸ್ಸನ್ನು ದಾಟುತ್ತಿರುವಂತೆ ಗಂಭೀರತೆಯನ್ನು ಪಡೆದುಕೊಂಡು ಹುಡುಗಾಟ ಅನ್ನಿಸಿಕೊಂಡುಬಿಡುತ್ತವೆ. ಸತ್ಯವದು ಕಾಲಕ್ಕೆ. ಹಾಗಂತ ಕವಿ ಹರಯವನ್ನು ಗಂಭೀರ ವೇದಾಂತಿಯನ್ನಾಗಿಸಲಾರ. ಕವಿತನಕ್ಕೆ ಎಷ್ಟೇ ವಯಸ್ಸಾದರೂ ಹಾಗೆ ಹರಯವನ್ನು ಪ್ರೇಮ ಹುಡುಗಾಟಗಳನ್ನು ಸೃಜಿಸುವ ಶಕ್ತಿಯಿದ್ದೇ ಇದೆ. ಅದಕ್ಕೆಂದೇ ಸಮಯ ನಮ್ಮನ್ನು ಎಷ್ಟೇ ಬೆಳೆಸಿದರೂ ಮನಸ್ಸನ್ನು ಎಲ್ಲ ವಯಸ್ಸಿಗೂ ಎಲ್ಲ ಕ್ಷಣಗಳಿಗೂ ಸ್ಪಂದಿಸುವ ಆರ್ದತೆಯನ್ನು ಉಳಿಸಿಕೊಳ್ಳುವುದು ಬಹುಶಃ ಕವಿಮನಸ್ಸಿಗಷ್ಟೇ ಸಾಧ್ಯವೆನ್ನಿಸತ್ತದೆ ನನಗೆ. ಹಾಗಾಗಿ ಸಹೃದಯರೆಲ್ಲರು ಕವಿಗಳಾಗುತ್ತಾರೆ!
ಸಾಹಿತ್ಯಪ್ರಿಯರಾಗುತ್ತಾರೆ! ಅಲ್ಲಿ ಗುಣಮಟ್ಟಗಳ ನಿರ್ದರಿಸುವುದು ಕಾಲವೇ ಹೊರತು ಮನುಷ್ಯ ಮಾತ್ರ ಆಗಲಾರದು. ಬರೆಯುವ ಮೊದಲು ಯೋಚಿಸುವ ಬದ್ಧತೆ, ಅದಕ್ಕಿಂತ ಹೆಚ್ಚಿನದಾಗಿ ಬರೆದದ್ದೆಲ್ಲ ಸಾಹಿತ್ಯವಾಗಲಾರದೆಂಬ ಎಚ್ಚರ, ಕಾಲ ದೇಶ ಸಮಯಗಳ ಪ್ರಜ್ಞೆ, ಭಾಷೆಯ ಮೇಲಿನ ಗೌರವ, ಅಧ್ಯಯನದ ಅಗತ್ಯ, ಇವೆಲ್ಲವನ್ನು
ಎಚ್ಚರದಲ್ಲಿಟ್ಟುಕೊಂಡು ಬರೆಯುವ ಅನುಭವಗಳಿರಲಿ ಕಲ್ಪನೆಗಳಿರಲಿ ಅದು ಸಾಹಿತ್ಯ ಪ್ರಪಂಚದಲ್ಲಿ ನೆಲೆಗೊಳ್ಳಲು ಅರ್ಹತೆ ಪಡೆದುಕೊಳ್ಳುತ್ತದೆ. ಒಮ್ಮೆ ಯಾರೋ ಹಿರಿಯರೊಬ್ಬರು ಹೇಳಿದ್ದು ಇಲ್ಲಿ ನೆನಪಾಗುತ್ತದೆ. ನೃತ್ಯ, ಸಂಗೀತ, ಇತ್ಯಾದಿ ಲಲಿತಕಲೆಗಳ ಪ್ರದರ್ಶನಕ್ಕಿಡುವವಾಗ ಅದಕ್ಕೆ ತಕ್ಕಷ್ಟು ಅವರು ಅಭ್ಯಾಸ ಮಾಡಬೇಕಾಗುತ್ತದೆ. ಹಾಗೂ ಅಂತ ಶ್ರೇಷ್ಟ ಗುರುಗಳ ಮಾರ್ಗದರ್ಶನದಲ್ಲಿ ಇವು ಜನರೆದುರು ಪ್ರದರ್ಶನಗೊಳ್ಳುತ್ತವೆ. ಸಾಹಿತ್ಯದಲ್ಲಿ ಮಾತ್ರ ಹಾಗಿಲ್ಲ. ಯಾರು ಬೇಕಾದರು ಪುಸ್ತಕ ಮಾಡುತ್ತಾರೆ. ಏನು ಬರೆದರೂ ನಡೆಯುತ್ತದೆ. ಇಲ್ಲೊಂದು ನಿದರ್ಿಷ್ಟ ಮಾನದಂಡವಿಲ್ಲ ಎಂದು ಅವರು ಹೇಳುತ್ತಿದ್ದದ್ದು ಅರ್ಧದಷ್ಟು ಸತ್ಯವೆನ್ನಿಸದರೂ ಮತ್ತಷ್ಟು ವಿಚಾರ ಮಾಡುವಾಗ ಹಾಗೊಂದುವೇಳೆ ವಿದ್ಯೆ ಡಿಗ್ರಿಗಳೇ ಮಾನದಂಡಗಳಾದರೇ ಇಂದಿನ ಪಿ.ಎಚ್.ಡಿ ಪ್ರಬಂಧಗಳೆಲ್ಲ ಶ್ರೇಷ್ಟ ಸಾಹಿತ್ಯಗಳಾಗಬೇಕಿತ್ತಲ್ಲವಾ? ಅವರೆಲ್ಲ ದೊಡ್ಡ ಸಾಹಿತಿಗಳಾಗಬೇಕಿತ್ತಲ್ವ? ಇಲ್ಲ ಸಾಹಿತ್ಯ ಕೇವಲ ಅಧ್ಯಯನದ ಕೂಸಲ್ಲ. ಅದು ಹೃದಯದ ಕೂಸು. ಅದಕ್ಕೆಂದೇ ಜನಪದ ಕಾವ್ಯಗಳೂ. ಅನಾಮಿಕ ಸಾಹಿತ್ಯಗಳೂ ಎಷ್ಟೋ ಶತಮಾನಗಳಾಚೆಯೂ ಉಳಿದುಬಂದಿವೆ. ಉಳಿಯುತ್ತವೆ! ಹಾಗಾಗಿ ಕೇವಲ ಅಧ್ಯಯನಗಳಷ್ಟೇ ಸಾಹಿತ್ಯದ ಹೃದಯವಾಗಲಾರದೆಂಬುದು ಜೀವಂತ.
ಅಧ್ಯಯನ ನಿರತ ಪತ್ರಿಕಾಕರ್ತರು ಎಷ್ಟೆಲ್ಲ ಜನರಿದ್ದಾರೆ! ಅವರೆಲ್ಲ ಈ ನಾಡಿನ ಜೀವಂತ ಪತ್ರಿಕೆಗಳ ಈ ಕ್ಷಣದ ಒಡನಾಡಿಗಳಾಗಿದ್ದಾರೆ! ಆದರೆ ಅವರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸಾಹಿತ್ಯಾಸಕ್ತರು, ಅಭಿಮಾನಿಗಳು, ಸಾಹಿತಿಗಳು ಇರಬಹುದಷ್ಟೆ. ಉಳಿದವರೆಲ್ಲ ವೃತ್ತಿನಿರತ ಬರಹಗಾರರಷ್ಟೇ... ಸಾಹಿತ್ಯದ ಹೃದಯಕ್ಕಿಳಿಯುವ ಚೇತನವೆಂಬುದು ಅದು ಬರೀ ಮನುಷ್ಯ ಪ್ರಯತ್ನವಷ್ಟೇ ಅಲ್ಲ. ಅದೇ ದೈವಪ್ರತಿಭೆ. ಅಂತಹ ಸಂಕಲ್ಪಗಳು ನಮ್ಮದಲ್ಲ. ದೈವ ಸಂಕಲ್ಪ. ಹಾಗಾಗಿ ಕೆಲವಷ್ಟು ವಿಚಾರಗಳ ಅನವಶ್ಯಕ ಚಿಂತಿಸುವುದನ್ನು ಬಿಟ್ಟುಬಿಡೋಣ. ನಾವು ನಿಮಿತ್ತಕಗಳು ಮಾತ್ರ ಎಂದುಕೊಂಡರೆ ಮನಸು ಹಗುರ..... ಬರೆಯುವ ಮುನ್ನ ಶುದ್ಧ ಸಂಕಲ್ಪ ಮಾತ್ರ ನಮ್ಮದಾಗಿರಲಿ... ವಿಚಾರಗಳ ನೇರವಂತಿಕೆ, ಬದುಕಿನ ಅನುಭವಗಳ ಸತ್ವ, ವಿಷಯ ವಿಜ್ಞಾನಗಳ ತಿಳುವಳಿಕೆ, ಕಾಲ ದೇಶಗಳ ಪರಿವೆ... ಇವಿಷ್ಟು ನಮ್ಮ ಬರಹಗಳಿಗೆ ಸರಳತೆಯನ್ನು ತಂದುಕೊಡಲಿ.
ಉಳಿದದ್ದೆಲ್ಲ ಅವಳಿದ್ದಾಳೆ.. ಶಾರದೆಯ ಮಡಿಲಿಗೆ ಈ ನುಡಿಕುಸುಮಗಳ ಅಪರ್ಿಸುತ್ತ ಮಾನಸ ಸರೋವರದ ಈ ಪಯಣಕ್ಕೆ ಪುಟ್ಟ ವಿರಾಮ...