Thursday, April 4, 2013

ಮೌನ ಮೌನ ಮೌನವೆಂಬ ಮಾತಿಲ್ಲದ ಮನೆಯೊಳಗೆ....

ಚಿತ್ರಕೃಪೆ: ಅಂತರ್ಜಾಲ


 

        ಕಳೆದು ಹೋಗುವ ಕಾಲವೆಂಬ ವಿಸ್ಮಯದಲ್ಲಿ ಒಂದು ಪುಟ್ಟ ಕಲಾಕೃತಿಯಂತೆ ಜೀವಿಸುವ  ಭಾಗ್ಯವಿದ್ದರೆ ಅದು
ಜೀವನದ ಸಾರ್ಥಕತೆ! ಉತ್ಕೃಷ್ಟವಾದದ್ದೇನೋ ಸೃಷ್ಟಿಸಿಬಿಡಬೇಕೆಂಬ ಹಂಬಲದಿಂದ ಹೊರಟ ಚಿತ್ರಕಾರನ ನೈಜತೆ ಮತ್ತು ಪ್ರತಿಭೆಗೆ ಸವಾಲುಗಳಿವೆ!
ಮನೆಯ ಮಗುವಿನ ಬಾಲ ಕೈಗಳಲ್ಲಿ ಮೂಡಿ ಬಂದ ಸಹಜ ರಂಗೋಲಿಗೆ ಅಂತಹ ಯಾವ ಸವಾಲುಗಳಿಲ್ಲ. ಈ ಮಾತಿನ ಹೋಲಿಕೆ ಯಾಕೆಂದರೆ
ನಾವು ಯಾವುದೋ ಗೊತ್ತಿಲ್ಲದ ಅಥವಾ ಅದು ಸವಾಲೊಡ್ಡುವ ಉತ್ಕೃಷ್ಟವೆಂಬ ಮಾಯಾಜಿಂಕೆಯ ಹಿಂದೆ ಬಿದ್ದುಬಿಟ್ಟಿದ್ದೇವೆ ಇತ್ತೀಚೆಗೆ! ಅದು
ಅರಿವಿಲ್ಲದ ಮಾಯಾಜಿಂಕೆ ಕೂಡ ಅಲ್ಲ. ಅರಿವು ತಂದುಕೊಟ್ಟ ಮಾಯಾಜಿಂಕೆ!

     ಸಮಾಜದ ಮಾತನಾಡುತ್ತ ಸಮಾಜಕ್ಕೆ ನಾವು ಹೊರತೆಂಬಂತೆ ಸೊಲ್ಲನ್ನೆತ್ತುತ್ತೇವೆ! ನಮ್ಮಿಂದಲೇ ಸಮಾಜ ಎಂಬುದು  ಕ್ಷಣದ ಮರೆವಿಗೆ ಸಾಕ್ಷಿಯಾಗುತ್ತದೆ!  ಮನಸೇ ಯಾಕೆ ಹೀಗೆ? ಎದೆಬಗೆಯುವಂತ ಕಟುಸತ್ಯಗಳನ್ನು,ಹೋಗಲಿ ನಮ್ಮದೇ ಬದುಕನ್ನು ಬೆತ್ತಲೆಗೊಳಿಸುವ ಸಮಾಜದ ಮುಂದೆ ಅನಾವರಣ ಗೊಳಿಸುವ ಸಾಮಥ್ರ್ಯ ನಮ್ಮಲ್ಲಿ ಎಷ್ಟು ಜನರಿಗಿದೆ?  ಸ್ಟಾರ್ ಪ್ಲಸ್ ನಲ್ಲಿ "ಸಚ್ ಕಾ ಸಾಮನಾ" ಎಂಬುದೊಂದು ಕಾರ್ಯಕ್ರಮ ಪ್ರಕಟವಾಗುತ್ತಿತ್ತು!  ಆ ಕಾರ್ಯಕ್ರಮದ ಕುರಿತು ನಾನಿಲ್ಲಿ ಹೇಳುತ್ತಿಲ್ಲ. ಆದರೆ ಆ ಕಾನ್ಸೆಪ್ಟ್ ಇದೆಯಲ್ಲ! ಅದು ಅದ್ಭುತ! ಬದುಕಲ್ಲಿ ಹಾಗೆ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಮಾಡುತ್ತ ಹೋದರೆ ಸಂಬಂಧಗಳು ಕರಕಲಾಗುವುದು ತಪ್ಪುತ್ತದೆ! ಸಮಾಜ ಸ್ವಸ್ಥವಾಗುತ್ತದೆ! ತಪ್ಪುಗಳನ್ನು ಒಪ್ಪಿಕೊಂಡಾಕ್ಷಣ ಅದನ್ನು ತಿದ್ದಿಕೊಳ್ಳುವ ಹೊಣೆಗಾರಿಕೆ ಕೂಡ ಶುರುವಾಗುತ್ತದೆ.  ಸುತ್ತಲು ಗಮನಿಸುವ ನೂರು ಕಣ್ಣುಗಳು ಮತ್ತು ನಮ್ಮನ್ನು ನಾವು
ತಿದ್ದಿಕೊಳ್ಳಬೇಕೆಂಬ ಚಿಕ್ಕ ಸಂಕಲ್ಪ ಮನುಷ್ಯನಿಗೆ ಯಾವ ಗುರು, ದೇವರು, ಹಾಗೂ ಶಿಕ್ಷಣ ಕೊಡದ ಆತ್ಮಿಕ ಶಕ್ತಿಯನ್ನು ನೀಡುತ್ತದೆ.  ಹಾಗಾಗಿ ಬದಲಾವಣೆಗೆ ಬದುಕಿನ ವಿಶಾಲತೆಗೆ ಮನಸು ತೆರೆದುಕೊಳ್ಳುತ್ತದೆ.

    ಅಂತರಾಳದ ಒಳಗಿಂದ ಒಮ್ಮೊಮ್ಮೆ ಸ್ಪುರಿಸುವ ಭಾವಸ್ಪುರಣಗಳಿಗೆ ಕಾರಣಗಳು ದೊಡ್ಡವಲ್ಲ. ಆದರೆ ಅದು ಕೊಡುವ ಆನಂದ ದೊಡ್ಡದು! ಆನಂದವೆಂಬುದು ಮನುಷ್ಯ ಸಹಜತೆಗಳಲ್ಲಿ ಒಂದು. ಹಾಗಿದ್ದೂ ಆನಂದದ ಬೆನ್ನು ಬೀಳಬಾರದಲ್ಲ! ಮನಸ್ಯಾಕೋ ಇತ್ತೀಚೆಗೆ ಈ ಆನಂದವೆಂಬ ನಿಜಕ್ಕು, ಆನಂದ ಸ್ವರೂಪಕ್ಕೂ ಮತ್ತೆ ಆನಂದವೆಂಬ ಮರೀಚಿಕೆಗೂ ನಡುವೆ ತೂಗಾಡುತ್ತಿದೆ. ಸತ್ಯವೆಂದರೆ ಆನಂದದ ಅಪೇಕ್ಷೆ ಸ್ವಾರ್ಥದ ರೂಪವೇ ಆಗಿದ್ದರೂ ಅಷ್ಟರಮಟ್ಟಿನ ಸ್ವಾರ್ಥ ಅಪೇಕ್ಷಣೀಯ ಅಲ್ಲವಾ? ಮನುಷ್ಯ ಆನಂದ ವೆಂಬುದು ಎಲ್ಲಿದೆ ಅಂತ ಹುಡುಕುವಾಗೆಲ್ಲ ನಿಜವಾದ ಆನಂದದ ಬೆನ್ನುಬೀಳುತ್ತೇನೆ! ಪೃಕೃತಿಯ ಸಹಜತೆಗಳಿಗಿರುವ ದಿವ್ಯಾನಂದ ಅದರ ಅನುಭೂತಿ ಬೇರೆಯೇ.. ಹಾಗಿದ್ದು ಅದನ್ನು ಹಂಚಿಕೊಳ್ಳುವ ಮನಸೊಂದಿಲ್ಲದಿದ್ದರೆ  ಆನಂದದ ಅನುಭೂತಿ ಮರುಕ್ಷಣವೇ ಒಂಟಿತನವನ್ನು ಬಾಧಿಸುತ್ತದೆ! ಹಾಗಿದ್ದರೆ ಆನಂದವೆಂಬುದು ಮನಸುಗಳ ಸಾಮಿಪ್ಯದಲ್ಲಿ ಮಾತ್ರ ಸಿಗುವ ಭೌತಿಕವೇ? ಈ ಪ್ರಶ್ನೆ ಏಳುತ್ತಿದ್ದಂತೆ ಮನುಷ್ಯ  ಸದಾ ಮತ್ತನಾಗಲು ಬಯಸುವುದೇ ಆನಂದ ಅಂದುಕೊಂಡಿದ್ದಾನೆಂಬ  ಮಾತು ಕಾಡುತ್ತದೆ! ಅದು ಅರ್ಥ, ಕಾಮ, ಮೋಹ,ಅಧಿಕಾರ, ಮದಿರೆ ಯಾವುದೂ ಇರಬಹುದು! ಇವತ್ತು ಪ್ರಪಂಚವೇ ಈ ಆನಂದಗಳ ಹೊಂದಲು ಬಯಸುವ ಧಾವಂತಕ್ಕೆ ಬಿದ್ದಿದೆ! ಇದರ ಮಧ್ಯೆ ಪ್ರಜ್ಞೆಯೆಂಬ ಮತ್ತೊಂದು   ಆನಂದವಿದೆ! ಪ್ರಜ್ಞಾಪೂರ್ವಕ ಸಾಧಿಸಿಕೊಳ್ಳುವ, ಪ್ರೀತಿಸಿಕೊಳ್ಳುವ ಅಲೌಕಿಕ ಆನಂದದ ಬೆಳಕೊಂದಿದೆ! ಅದನ್ನು ಹುಡುಕುವ ಪ್ರಯತ್ನವಷ್ಟೆ! ನಮ್ಮಂತ ಸಾಮಾನ್ಯರಿಗೆ ಅದು ನಿಲುಕುವುದಲ್ಲ! ಇಂತೆಲ್ಲ ಯೋಚನೆಗಿಳಿಯುವ ಮನಸಿನ ವೈಚಾರಿಕ ಪ್ರಪಂಚಕ್ಕೆ ಎಷ್ಟೊಂದು ತಿರುವುಗಳಿವೆ! ಅಂತದ್ದೇ ಮತ್ತೊಂದು ತಿರುವಿನಲ್ಲಿ ಮತ್ತೊಂದಿಷ್ಟು ಮಾತು....

   ಮೊನ್ನೆ ಒಬ್ಬಳು ಗೆಳತಿ ಹೇಳುತ್ತಿದ್ದಳು! ನಿನ್ನ ಇತ್ತೀಚೆಗಿನ ಮಾತು ವೈಚಾರಿಕವಾಗ್ತಿದೆಯೇ.. ಹೃದ್ಯವಾಗ್ತಿಲ್ಲ! ಅಂತ. ನಿಜ. ಕೆಲವು ಸಲ ಬದುಕು ಏನನ್ನು ಹೇಳುತ್ತದೆಯೋ ಅದನ್ನೇ ಮಾತನಾಡುವ ಹೊತ್ತಿಗೆ ಅದೊಂದಿಷ್ಟು ರಸವಿಲ್ಲದ ಮಾತುಗಳಾಗಿಬಿಡುತ್ತವೆಯೇನೋ.. ಹಾಗೆ ಪ್ರತಿ ಬಾರಿ ಮನಸಿನೊಂದಿಗೆ ಮಾತಿಗೆ ಕೂತಾಗಲೂ  ನಾನು ಬಯಸುವುದು ಮನಸಿನ ಮಾತು ಹೃದಯಕ್ಕಿಳಿಯೆಂಬ ಬಯಕೆಯಿಂದಲೇ.. ಆದರೆ ಹಾಗಾಗುವುದಿಲ್ಲ. ಸಹಜತೆಯೆಂದರೆ ಇದೇ ಇರಬಹುದು.. ಜೀವಿಸುವ ಸರಳತೆಯನ್ನೇ ಮನಸಿನೊಂದಿಗೆ ಹಂಚಿಕೊಳ್ಳುವ ಕನಸು ನನ್ನದು. ಒಮ್ಮೆ ಹಾಗೆ ಒಮ್ಮೆ ಹೀಗೆ...

  ಮುಂದ್ಯಾಕೋ ಮಾತುಗಳು ತೋಚುತ್ತಿಲ್ಲ.ಒಂದಷ್ಟು ಕ್ಷಣಗಳ ಕಾಲ ಮೌನ ಮೌನ ಮೌನವೆಂಬ ಮಾತಿಲ್ಲದ ಮನೆಯೊಳಗೆ.. ನೆಲೆಯಾಗಲಿ ಆತ್ಮದರಿವು ಬೆಳಕಾಗಲಿ ಎಲ್ಲ ಕಡೆಗೆ..
ಒಂದು ಪುಟ್ಟ ವಿರಾಮಕ್ಕೆ ಅನುಮತಿ ಕೋರುತ್ತ..




           





       


       





7 comments:

  1. ಆಹಾರ ಹುಡುಕುತ್ತಾ ಬರುವ ಕೋಳಿ ಕಾಲಿನಲ್ಲಿ ನೆಲವನ್ನು ಕೆದರುತ್ತದೆ.. ಆಹಾರ ಸಿಕ್ಕರೆ ಇನ್ನಷ್ಟು ಕೆದರುತ್ತದೆ, ನೆಲವನ್ನು ಪರಚುತ್ತದೆ, ತನ್ನ ಪುಟ್ಟ ಪುಟ್ಟ ಉಗುರುಗಳಲ್ಲಿ ಬಗೆಯಲು ಪ್ರಯತ್ನಿಸುತ್ತದೆ. ಆಮೇಲೆ ಇನ್ನೊಂದು ಕಡೆಗೆ ಹೋಗುತ್ತದೆ. ಮನುಜನು ಹಾಗೆ ಒಂದು ಕಡೆ ಆನಂದ ಸಿಕ್ಕರೆ ಇನ್ನೊಂದಿಷ್ಟು ಎಂದು ಹುಡುಕುತ್ತಾನೆ. ಹೀಗೆ ನಿರಂತರ ಸಾಗುತ್ತದೆ. ಮನದ ಸರೋವರವನ್ನು ಒಮ್ಮೆ ಕಲಕಿ ಅಲೆಗಳು ಏಳಿಸಲು ಶಕ್ತವಾಗಿರುವ ಲೇಖನಕ್ಕೆ ಅಭಿನಂದನೆಗಳು. ಸುಂದರವಾದ ಅವಲೋಕನ.

    ReplyDelete
  2. ತುಂಬಾ ಧನ್ಯವಾದಗಳು ಶ್ರೀಕಾಂತ ಮಂಜುನಾಥ್ ಅವರೆ..

    ReplyDelete
  3. ವ್ಯಕ್ತವಾಗುವ ಮಾತುಗಳಿಗಿಂತಲೂ ಅವ್ಯಕ್ತವಾಗಿ ಉಳಿದು ಹೋಗುವ ಭಾವಗಳನೇಕ. ಮಾತಿನ ಅವಶ್ಯಕತೆ ಮತ್ತು ಮೌನದ ತೂಕ ನಿಮ್ಮ ಈ ಬರಹದಿಂದ ನನಗೆ ಮನದಟ್ಟಾಯಿತು. ತುಂಬಾ ಒಳ್ಳೆಯ ಲೇಖನ.

    ReplyDelete
  4. ಮಾತು ಮೌನಗಳಲಿ ಬದುಕ ಓಲಾಟ...

    ReplyDelete
  5. ಆನಂದವೆಂಬುದು ಮನುಷ್ಯ ಸಹಜತೆಗಳಲ್ಲಿ ಒಂದು. ಹಾಗಿದ್ದೂ ಆನಂದದ ಬೆನ್ನು ಬೀಳಬಾರದಲ್ಲ! ಸತ್ಯವಾದ ಮಾತು ಸಿರಿ ಅಕ್ಕ.. ಆನಂದವನ್ನ ಹುಡುಕೋದಲ್ಲ ಹುಟ್ಟಿಸಿ ಕೊಳ್ಳಬೇಕ್ಕಾದ್ದು..ನಮ್ಮದಾವ ಪರಿಸ್ಥಿತಿ ಗಳಲ್ಲೂ ನಾವದನ್ನ ಹುಟ್ಟಿಸಿ ಕೊಳ್ಳೋದನ್ನ ಕಲಿಯಬೇಕು.. ಆನಂದವನ್ನ ಹುಡುಕ್ತಾ ಹುಡುಕ್ತಾನೆ ಮನುಷ್ಯ ಆನಂದವಾಗಿರೋದನ್ನ ಮರಿತಾ ಇದಾನೆ..!!

    ನಿಜ ನಮ್ಮ ಇತ್ತೀಚಿನ ಮಾತುಕತೆಗಳು ವೈಚಾರಿಕತೆಯ ರೂಪವನ್ನ ಧರಿಸಿಕೊಂಡಿರೋದು ಬಹುಪಾಲು ನಿಜ.. ನಮ್ಮಾಪ್ತರೊಡನೆಯ ನಮ್ಮ ಮಾತು ಕತೆಗಳು ಈ ಮೊದಲಿನಂತಿಲ್ಲ.. ಮಾತಿನ ಧಾಟಿಯೇ ಬೇರೆ ವೈಚಾರಿಕ ಹರಿವೆ ಬೇರೆಯೇನೂ ಅನ್ನಿಸುತ್ತದೆ.. ಬರಹಕ್ಕೆ.. ಓದಿಗೆ ಅಂಟಿಕೊಂಡ ಯಾರಲ್ಲಾದರೂ ಸಾಮಾನ್ಯವಾಗಿ ಆಗಬಹುದಾದ ಬದಲಾವಣೆ ಇದು.. ಕೆಲವೊಮ್ಮ ಈ ರೀತಿಯ ಮಾತುಕತೆ ಅತೀ ಅನ್ನುವಷ್ಟು ಸಮಾಧಾನ ಕೊಡುತ್ತದೆ.. ಎದುರು ಮಾತಾಡುವವರು ಕೂಡಾ ಅಷ್ಟೇ ಪ್ರಬುದ್ಧ ಮಾತುಗಾರರಾದರೆ ಆ ಮಾತುಗಳ ಸಿಹಿಯೆ ಬೇರೆ ನನಗದರ ಅನುಭವವಿದೆ.. :)

    ಮತ್ತೊಂದು ಒಳ್ಳೆಯ ಲೇಖನ ಸಿರಿ ಅಕ್ಕ.. ಇಷ್ಟ ಆಯಿತು.. ತಡವಾಗಿ ಓದಿದ್ದಕ್ಕೆ ಕ್ಷಮೆ ಇರಲಿ.. :)

    ReplyDelete
  6. ಬದರಿ ಸರ್, ಶ್ರೀವತ್ಸ ಕಂಚಿಮನೆಯವರಿಗೆ ಮತ್ತು ಸತೀಶ್ ನಾಯ್ಕ ಅವರಿಗೆ ತುಂಬ ಧನ್ಯವಾದಗಳು. ಆಗಾಗ ಬಂದು ತಮ್ಮ ಅನಿಸಿಕೆಗಳ ಹಂಚಿಕೊಳ್ಳುವುದೇ ತುಂಬ ಖುಶಿಯ ವಿಷಯ ಸತೀಶ್. ಎಲ್ಲರಿಗೂ ಸಮಯದ ಒತ್ತಡಗಳು! ಹಾಗಿದ್ದೂ ಸಮಯ ಮಾಡಿಕೊಂಡು ನಮ್ಮ ಬ್ಲಾಗ್ ಮನೆಗಳಿಗೆ ಭೇಟಿಯಿಡುವ ಎಲ್ಲ ಮನಸುಗಳಿಗೆ ತುಂಬು ಹೃದಯದ ಧನ್ಯವಾದಗಳು...

    ಪ್ರಬುಧ್ದತೆ ಗಳಿಸಿಕೊಂಡಂತೆ ಹೃದ್ಯಭಾವಗಳು ಕಳೆದುಕೊಳ್ಳಬಾರದೆಂಬುದು ನನ್ನ ಕಳವಳದ ಕನವರಿಕೆ. ಬರಹಗಳಲ್ಲಿ ಜೀವಂತಿಕೆ ಕೊಡುವ ಭಾವಗಳ ಸರಳತೆ ಉಳಿಸಿಕೊಳ್ಳುವ ಪ್ರಯತ್ನವಿರಲಿ ಅಲ್ಲವಾ?

    ReplyDelete
  7. ತುಂಬಾ ಚೆನ್ನಾಗಿದೆ ನಿಮ್ಮ ಈ ಲೇಖನ

    ReplyDelete