Friday, February 21, 2014

ವ್ಯಕ್ತಿತ್ವವೆಂಬ ಹೂ ಅರಳುವಾಗ..

              


ಚಿತ್ರಕೃಪೆ: ಅಂತರ್ಜಾಲ

       ಬದುಕೆಂಬ ಬಣ್ಣ ಬದಲಿಸುವ ಗೋಸುಂಬೆಯ ಎದುರು ಸ್ವಾಥರ್ಿ ಮನಸ್ಸಿನ ಮಾತುಗಳನ್ನು ಬಿಚ್ಚಿಡತೊಡಗಿದರೆ ಅದು ಕೇಳುಗರಿಗೆ ಅಸಹನೀಯವೋ ಗೊತ್ತಿಲ್ಲ. ಒಮ್ಮೊಮ್ಮೆ ಹೀಗನ್ನಿಸುತ್ತದೆ. ಇಷ್ಟು ವರ್ಷಗಳಲ್ಲಿ ನನಗಾಗಿ ನಾನು ಬದುಕಿದ ಎಷ್ಟು ಕ್ಷಣಗಳಿವೆ? ಪ್ರತಿಯೊಬ್ಬರೂ ಸ್ವಾಥರ್ಿಗಳೇ ಆದರೂ ನಮಗಾಗಿ ನಾವು ಬದುಕುವ ಕ್ಷಣಗಳ ಮಾತ್ರ ಹುಡುಕಾಡಬೇಕು! ಅದೂ ಈ ಹೆಣ್ಣುಕುಲದಲ್ಲಂತೂ  ಯಾವಾಗ ನೋಡಿದರೂ ಇನ್ನೊಬ್ಬರಿಗಾಗಿಯೇ ಬದುಕುವ ಮತ್ತು ಅದರಲ್ಲೇ ಸಾರ್ಥಕತೆಯ ಹುಡುಕುವ ಹುಚ್ಚು ಭ್ರಮೆಯಲ್ಲೇ  ಕಳೆದುಬಿಡುವ ದಿನಗಳೇ ಹೆಚ್ಚು. ನನ್ನನ್ನೂ ಸೇರಿಸಿಯೇ ಈ ಮಾತನ್ನು ಹೇಳುತ್ತಿದ್ದೇನೆ. ನಮಗೆ ನಮಗಾಗಿ ಬದುಕಲು ಬರುವುದಿಲ್ಲ. ನಮ್ಮ ಕುಶಿಗಳೆಲ್ಲ ನಮ್ಮ ಭಾವಗಳೆಲ್ಲ ಅಪ್ಪ ಅಮ್ಮನ ಮೇಲೆ, ಅಣ್ಣ ತಮ್ಮಂದಿರ ಮೇಲೆ,  ಅಕ್ಕ ತಂಗಿಯರ ಮೇಲೆ, ಪ್ರೀತಿಸಿದವನ ಮೇಲೆ, ಗಂಡನ ಮೇಲೆ, ಮಕ್ಕಳ ಮೇಲೆ, ಒಟ್ಟೂ ಅವರಿವರ ಮೇಲೆ ಡಿಪೆಂಡೆಡ್ ಕುಶಿಗಳು. ಎಲ್ಲ ಭಾವಗಳಲ್ಲಿ ಯಾರೋ ನಮ್ಮನ್ನು ಕುಶಿಪಡಿಸಬೇಕಾಗಿದೆ ವಿನಃ ಅವರು ಮುನಿದರೆ ನಮಗೆ ನೋವು! ಅವರು ಸೋತರೆ ನಮಗೆ ಹಿಂಸೆ, ಅವರು ಅವಮಾನಿಸಲ್ಪಟ್ಟರೆ ನಾವು ಕುದಿಯುತ್ತೇವೆ! ಹೀಗೇ ಹೀಗೇ ಈ ಪಟ್ಟಿ ಬೆಳೆಯುತ್ತದೆ. ಕೊನೆಗೊಂದು ದಿನ ನನಗಾಗಿ ಯಾರಿಲ್ಲ ಮತ್ತು ನನಗಾಗಿ ನಾ ಒಂದು ದಿನವೂ ಬದುಕಲೇ ಇಲ್ಲ ಎಂಬ ಹಳಹಳಿಕೆಯೊಂದು ಹಾಗೇ ಉಳಿದುಬಿಡುತ್ತದೆ.



 ಕೆಲವರ ಅಭಿಪ್ರಾಯದಲ್ಲಿ ಸಂಸಾರದಲ್ಲಿ ಹೆಣ್ಣು ಸ್ವಲ್ಪ ಅಧಿಕಾರಯುತವಾಗಿ ಮಾತನಾಡುತ್ತಿದ್ದರೆ ಅವಳದ್ದೇ ದಬರ್ಾರು ಎಂಬ ಮಾತು ಉಳಿಯುಯತ್ತದೆ. ಹಾಗಿದ್ದೂ ಯಾಕೋ ಈ ದಬರ್ಾರು ಅವಳ ಸಂಭ್ರಮವಾಗಲು ಸಾಧ್ಯವಿಲ್ಲ. ಅದೂ ಕೂಡ ಜವಾಬ್ಧಾರಿ ಅಷ್ಟೇ. ಮತ್ತೆಲ್ಲೋ ಅವಳು ಕುಶಿಯೆಂದರೆ ಇದೇ ಎಂಬ ಭ್ರಮೆಗೆ ಒಳಗಾಗುತ್ತ ಅದನ್ನೇ ಆಯ್ಕೆ ಮಾಡಿಕೊಂಡುಬಿಡುತ್ತಾಳೆ. ನಮ್ಮ ನಡೆ ನುಡಿ, ಬಟ್ಟೆ ಬರೆ, ನಮ್ಮ ಕೇಶ ವಿನ್ಯಾಸದಿಂದ ಹಿಡಿದು ಕಾಲಿನ ಚಪ್ಪಲಿಯವರೆಗೆ ಇನ್ನೊಬ್ಬರಿಗೆ ಚಂದ ಕಾಣಲೆಂಬ ಬಯಕೆಯ ಬೆನ್ನಲ್ಲೇ ಸಂತಸ ಹುಡುಕುತ್ತೇವೆ  ವಿನಃ ನನ್ನ ಇಷ್ಟ ಎಂಬುದುಹೇಗಿರುತ್ತದೆ ಎಂದು  ಬಹಳ ಬಾರಿ ಯೋಚನೆಯೂ ಮಾಡಿರುವುದಿಲ್ಲ.

ಕೊಂಡುಕೊಳ್ಳುವ ಪ್ರತೀ ವಸ್ತುವಿನ ಜೊತೆಗೂ ಪಕ್ಕದಲ್ಲಿರುವವರ ಸಮ್ಮತಿಯ ನೋಟಕ್ಕೆ ನಾವು ಅಪೇಕ್ಷಿಸುತ್ತೇವೆ. ಮತ್ತು ನಮ್ಮ ವ್ಯಕ್ತಿತ್ವಕ್ಕೆ ನಮಗೆ ಕಂಫರ್ಟ ಯಾವುದು ಕೊಡುತ್ತದೆಂಬುದನ್ನು ಆಮೇಲೆ ಯೋಚನೆ ಮಾಡುತ್ತೇವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಇಷ್ಟಾನಿಷ್ಟಗಳು ಇರುತ್ತವೆ. ಜೊತೆಗೆ ಒಂದು ಒಪ್ಪ ಓರಣ ಎನ್ನಿಸುವ ವ್ಯಕ್ತಿತ್ವಕ್ಕೊಂದು ಪೂರಕ ಬಾಹ್ಯ ಬೆಡಗೂ ಇರುತ್ತದೆ. ಇವೆರಡನ್ನೂ ಒಟ್ಟಾಗಿ ಅಲಂಕರಿಸಿದಾಗ ಒಳಗಿನ ಕುಶಿ ಇಮ್ಮಡಿಯಾಗುತ್ತದೆ. ಬದುಕು ರಮ್ಯವೆನ್ನಿಸುತ್ತದೆ. ಇದು ಎಲ್ಲರಿಗೂ ಅನ್ವಯಿಸುವ ಮಾತು. ಮದುವೆಯವರೆಗೂ ಹುಡುಗಿಯರು ಅಷ್ಟೋ ಇಷ್ಟೋ ಅಂದಚಂದ ಅಂತ ಬಣ್ಣ ಬಳಿಯುವುದುಂಟು. ಒಂದು ಮಗುವಾಗುವವರೆಗೂ ಈ ಸಂಭ್ರಮ ಮುಂದುವರೆಯುತ್ತದೆ. ಆಮೇಲೆ ಮತ್ತೆ ಶುರು, ಜವಾಬ್ದಾರಿ ಹೆಚ್ಚುತ್ತದೆ ಎಂಬುದನ್ನು ಒಪ್ಪುತ್ತೇನಾದರೂ ಜವಾಬ್ಧಾರಿ ನಮ್ಮ ವ್ಯಕ್ತಿತ್ವದ ಸೌಂದರ್ಯಹರಣವನ್ನಂತೂ ಕೇಳುವುದಿಲ್ಲ. ಕೆಲವರ ಲೆಕ್ಕದಲ್ಲಿ ಸೌಂದರ್ಯ ಎನ್ನುವುದು ಮೂರೂ ಹೊತ್ತು ಕನ್ನಡಿಯ ಮುಂದೆ ನಿಲ್ಲುವ ನಮ್ಮ ಸೀರಿಯಲ್ಗಳ ನಾಯಕಿಯರ ತರ ಎಂದುಕೊಂಡುಬಿಡುತ್ತಾರೆ. ನಾನು ಹೇಳುತ್ತಿರುವುದು ಎಷ್ಟು ಜನರಿಗೆ ಅರ್ಥವಾಗುತ್ತದೆ ಎಂದು ತಿಳಿಯದಿದ್ದರೂ ಸೌಂದರ್ಯ ಕೆಲಸಗಳ ಒಪ್ಪ ಓರಣ ಹಾಗೂ ನಮ್ಮ ನಮ್ಮ ವ್ಯಕ್ತಿತ್ವ ಸಮಯ ಸಂದರ್ಭಕ್ಕೆ ತಕ್ಕಂತ ವೇಷಭೂಷಣ,ಸರಳತೆ, ಕ್ರಿಯಾಶೀಲತೆಯಲ್ಲಿ ಮಿಳಿತವಾಗಿರುತ್ತದೆ. ಗಾಢವಾದ ಡಾಳಾದ ಮೇಕಪ್ ಬಳಸಿದಾಕ್ಷಣ ಸುಂದರವಾಗಿ ಕಾಣುತ್ತೇವೆ ಎಂಬುದು ಮತ್ತೊಂದು ಹುಚ್ಚುಕಲ್ಪನೆ. ಹಿತ ಮಿತವಾದ ಮೇಕಪ್ ಮತ್ತು ಅಲ್ಪ ಸ್ವಲ್ಪ ಬದಲಾವಣೆ ಇವು ದಿನ ನಿತ್ಯದ ಬದುಕನ್ನು ಕುಶಿ ಕುಶಿಯಾಗಿಡುತ್ತವೆ. ವಿನಾಕಾರಣ ಎದುರಾಗುವ ಯಾರೋ ಒಬ್ಬರು ಕಣ್ಣರಳಿಸಿ ನಮ್ಮನ್ನು ನೋಡಿ ಮುಗುಳ್ನಗುತ್ತ  ಸಾಗಿದರೆ ಆ ದಿನ ಉಲ್ಲಾಸವೆನ್ನಿಸುತ್ತದೆ. ಹಾಗೆ ನಾವಿರಬೇಕೆಂದರೆ ನಾವು ಇನ್ನೊಬ್ಬರಿಗಾಗಿ ಬದುಕುವುದು ಅಲಂಕರಿಸಿಕೊಳ್ಳುವುದಕ್ಕಿಂತ ನಮಗಾಗಿ ಅಲಂಕರಿಸಿಕೊಳ್ಳಲು ಕಲಿಯಬೇಕು. ನಮ್ಮಲ್ಲಿ ಇನ್ನೊಂದು ಗುಣವಿದೆ. ಬೇರೆಯವರು ಅಲಂಕರಿಸಿಕೊಂಡ ಪರಿಗೆ ಅವರ ಅಂದಕ್ಕೆ ನಾವು ಬೆರಗಾಗುತ್ತೇವೆ. ವಾಹ್! ಎಂಬ ಉದ್ಘಾರ ತೆಗೆಯುತ್ತೇವೆ. ಅದನ್ನೇ ನಾವು ಮಾಡಲು ಹಿಂಜರಿಯುತ್ತೇವೆ. ಒಳಗೊಳಗೇ ಇಷ್ಟವಿದ್ದರೂ ಇನ್ಯಾರೋ ಏನೋ ಅಂದುಕೊಳ್ಳಬಹುದೆಂಬ ಭಯಕ್ಕೆ ಮುಖವಾಡ ಹಾಕಿಕೊಳ್ಳುತ್ತೇವೆ!! 


   ಇನ್ನಷ್ಟು ಜನರಿಗೆ ಸಮಯಪ್ರಜ್ಞೆ ಕಡಿಮೆ. ಅವರಿಗೆ ಯಾವ ಸಂದರ್ಭಕ್ಕೆ ಯಾವ ಬಟ್ಟೆ ಧರಿಸಬೇಕೆಂಬ ಅಲ್ಪ ಜ್ಞಾನವಿರುವುದಿಲ್ಲ. ಮದುವೆಯಂತ ಸಾಂಪ್ರದಾಯಿಕ ಸಮಾರಂಭಗಳಿಗೆ ಝೀನ್ಸ್ ಧಾರಿಯಾಗಿ ಪ್ರವೇಶಿಸುತ್ತಾರೆ. ತಪ್ಪಲ್ಲ. ಅಲ್ಲಿ ಎಲ್ಲರೂ ತನ್ನನ್ನೇ ನೋಡುತ್ತಾರೆ ಎಂಬುದಕ್ಕೆ  ಅನ್ ಕಂಪರ್ಟ ಅನುಭವಿಸುತ್ತಾರೆ! ಬೆಟ್ಟ ಗುಡ್ಡ ಹತ್ತುವ ಸಾಹಸಕಾರೀ ಪ್ರವಾಸಗಳಲ್ಲಿ ಸೀರೆಯುಡುತ್ತಾರೆ. ಅಲ್ಲಿಯೂ ಅನ್ಕಂಪರ್ಟ  ಅನುಭವಿಸುತ್ತಾರೆ.  ಇನ್ನು ಕೆಲವರು ಶಾಪಿಂಗ್ ಹೋಗುವಾಗ ಭರ್ಜರಿ ರೇಶ್ಮೆ ಸೀರೆ ಹಾಗೂ ದೇವಸ್ಥಾನಗಳಿಗೆ ಪ್ಯಾಂಟು ಶರ್ಟ ಧರಿಸಿ ಇಂಥದ್ದೇ ಪಾಡು ಪಡುತ್ತಾರೆ. ನಿಶೇಧವೇನಿಲ್ಲ. ಆದರೆ ಸಮಯ,ಋತುಮಾನಹಾಗೂ ಸಂದರ್ಭಗಳಿಗೆ ತಕ್ಕಂತೆ ಉಡುಗೆ ತೊಡುಗೆ, ಅಲಂಕಾರವಿರುವುದರಿಂದ ಹೆಚ್ಚು ಆರಾಮಾವಾಗಿ ಇರಬಹುದು.

       ಪ್ರೆಶ್ ಆಗಿ ಕಾಣುವುದು ಅಪರಾಧವೇನಲ್ಲ. ಮನೆಯಲ್ಲಂತೂ ಸಾದಾ ಸೀದಾ ಎನ್ನುತ್ತ ಗಬ್ಬಾಗಿ ಇರುವವರ ಮುಖದಲ್ಲಿ ಈ ಪ್ರೆಶ್ ನೆಸ್ ಹುಡುಕಿದರೂ ಸಿಗುವುದಿಲ್ಲ.  ಬಹುಶಃ ತೀರಾ ತೀರಾ ಮೇಕಪ್ ಮಾಡಿಕೊಳ್ಳುವವರು ಹಾಗೂ ತೀರಾ ಗಬ್ಬಾಗಿ ಇರುವವರು ಇಬ್ಬರನ್ನೂ ಯಾರೂ ಇಷ್ಟಪಡುವುದಿಲ್ಲ. ಈ ಸಂದರ್ಭದಲ್ಲಿ ಇನ್ನೊಂದು ಮಾತು ಸೇರಿಸಲೇ ಬೇಕು. ಮಕ್ಕಳು ದೊಡ್ಡವರಾಗುತ್ತಿದ್ದಂತೆ ನಾವೇನೂ ಮುದುಕಿಯರಾಗಿಬಿಡುವುದಿಲ್ಲ. ವಯಸ್ಸಿಗನುಗುಣವಾಗಿ ಸ್ವಲ್ಪ ಸಂತೋಷವಾಗಿ ನಗುಮೊಗದ, ಸರಳ ಅಲಂಕಾರದ ಅಮ್ಮಂದಿರನ್ನು ಇಂದಿನ ಮಕ್ಕಳು ಇಷ್ಟಪಡುತ್ತಾರೆ. ಈ ಸಂದರ್ಭದಲ್ಲಿ ಪುರುಷರಿಗೂ ಒಂದು ಮಾತು ಹೇಳಲೇಬೇಕು. ಅಲಂಕಾರದಲ್ಲಿ ಅವರೇನು ಕಮ್ಮಿಯಿಲ್ಲ. ಡೀಸೆಂಟ್ ಅನ್ನಿಸೋ ಅಲಂಕಾರ ಅವರ ವ್ಯಕ್ತಿತ್ವವನ್ನೂ ಚಂದವಾಗಿಡುತ್ತದೆ.  ಯಾವುದೇ ಇರಲಿ. ನಮ್ಮ ಮನಸ್ಸಿಗೆ ಕುಶಿಕೊಡುವ ಅಲಂಕಾರ ನಮ್ಮದಾಗಿರಲಿ. ಸಣ್ಣ ಪುಟ್ಟ ಬಯಕೆಗಳನ್ನೂ ಯಾರಿಗಾಗಿಯೋ ಅದುಮಿಟ್ಟು ಕನವರಿಸುವುದ ಬಿಟ್ಟು ಚಂದವಾಗಿರಿ ಎಂಬುದಷ್ಟೆ ಇಂದಿನ ಮಾತು.

ಸಿಗೋಣ ಮತ್ತೆ.