Wednesday, August 6, 2014

ಚೌಕಟ್ಟಿನೊಳಗಿನ ಚಿತ್ರ...

ಚಿತ್ರ ಕೃಪೆ: ಅಂತರ್ಜಾಲ


     ಇತ್ತೀಚೆಗೆ ತುಂಬಾ ವಿಷಯಗಳ ಗೋಜಲು ತುಂಬಿಕೊಳ್ಳುತ್ತಿದೆ! ಅಧ್ಯಾತ್ಮ, ಆತ್ಮ, ಕರ್ಮ, ನಂಬಿಕೆ, ಶೃದ್ಧೆ, ಪೃಕೃತಿ, ಭೌತಿಕ ಬದುಕು, ಸಮಾಜ, ನೈತಿಕ ಪ್ರಜ್ಞೆ, ಕಷ್ಟ, ಸುಖ, ಮಾನವತೆ, ಮಾನವೀಯ ಮೌಲ್ಯಗಳು, ಧರ್ಮಕರ್ಮ ಸಂಬಂಧ, ನಿರ್ವಹಣಾ ಕೌಶಲ, ಅಂತಿಮ ಸತ್ಯ, ಸಾವು, ಮುಕ್ತಿ, ಬ್ರಹ್ಮತ್ವ ಹೀಗೆ ನೂರಾರು...  ಇಷ್ಟೊಂದು ವಿಷಯಗಳ ತರ್ಕಬದ್ಧ ವಿಶ್ಲೇಷಣೆಯಾಗಲೀ ಅಧ್ಯಯನವಾಗಲೀ ಒಮ್ಮೇಲೆ ಸಾಧ್ಯವಿರುವ ಮಾತಲ್ಲ. ಶಾಸ್ತೃಗಳ ಓದತೊಡಗಿದರೆ ಬದುಕು ಅಸ್ತವ್ಯಸ್ತವಾಗುವಷ್ಟು ಅಗಾಧ ಮುಳುಗುವಿಕೆಯಿದೆ ಅಲ್ಲಿ. ಹಲವು ಬಾರಿ ಬದುಕಿಗೆ ಅನ್ವಯಿಸಿ ಕೂಡ ಅನ್ವಯಿಸಲಾಗದ ವಿಚಿತ್ರ ಸನ್ನಿವೇಶಗಳ ಎದುರಲ್ಲಿಟ್ಟುಕೊಂಡು ಯಾವ ತಾತ್ವಿಕ ನೆಲೆಯಲ್ಲಿ ಕೊನೆಗೊಳ್ಳಬೇಕೆಂಬುದು ನಾವು  ಹಾಕಿಕೊಳ್ಳಬೇಕಾದ ಚೌಕಟ್ಟು.

  ಪೃಕೃತಿಯನ್ನು ಅನಂತವಾಗಿ ಆರಾಧಿಸುವ  ಧ್ಯಾನ ನೆಲೆಯಾಗಿಸುವ ಮನಸ್ಸಿಗೆ  ಪೃಕೃತಿಯೇ ಎಲ್ಲ  ನೆಲೆಗಳ ಮೂಲ ಎನ್ನಿಸುತ್ತದೆ.ಹಾಗಾಗಿ ಅಧ್ಯಯನಕ್ಕೆ ಪೃಕೃತಿಗಿಂತ ಬೇರೆ ಏನು ಬೇಕು? ಎಲ್ಲ ತತ್ವಜ್ಞಾನಗಳು ಪೃಕೃತಿಯಲ್ಲೇ ನೆಲೆಯಾಗಿವೆ!  ಸಣ್ಣದೊಂದು ಹುಳ ಕೀಟದಿಂದ ಹಿಡಿದು ಬೃಹ್ಮಾಂಡದ ಸೃಷ್ಟಿಯವರೆಗೆ ಎಲ್ಲವೂ ಪೃಕೃತಿದತ್ತವಾದುದು. ಕಾಲ ದೇಶ, ಭಾಷೆಗನುಗುಣವಾಗಿ ಎಷ್ಟೆಲ್ಲ ತತ್ವಜ್ಞಾನಗಳು ಇಲ್ಲಿ ನೆಲೆಯಾಗಿದ್ದರೂ ಪೃಕೃತಿ ತತ್ವ ಈ ಎಲ್ಲ ಕಾಲಕ್ಕೂ ಬದಲಾಗಿಲ್ಲ ಎಂಬುದು ಅದರ ನಿದರ್ಿಷ್ಟತೆಗೆ ಸಾಕ್ಷಿ ಎನ್ನಬಹುದು. ಅದಕ್ಕೆಂದೇ ವೇದಗಳು ಪೃಕೃತಿಯನ್ನೇ ಮೂಲವಾಗಿಟ್ಟುಕೊಂಡಿವೆ ಎಂಬುದು ವೇದಾಭ್ಯಾಸ ಮಾಡಿದವರಿಗೆ ಗೊತ್ತು.

  ಹೆಣ್ಣು ಹೊನ್ನು ಮಣ್ಣು, ಮದ ಮೋಹ ಮತ್ಸರ, ಕಾಮ ಕ್ರೋದ, ಲೋಭ ಇವೆಲ್ಲವೂ ಸಹ ಪೃಕೃತಿಯಲ್ಲಿ ಒಂದಲ್ಲ ಒಂದು ವಿಧದಲ್ಲಿ ಸೇರಿಕೊಂಡಿವೆ. ಇವೆಲ್ಲದರಿಂದ ಮುಕ್ತವಾಗುವುದೆಂದರೆ ಪಂಚಭೂತಗಳಿಂದ ಮುಕ್ತವಾಗಿ ಅಂತಲರ್ೀನವಾಗುವುದು.  ಅಷ್ಟು ಸಮಸ್ಥಿತಿ ಪೃಜ್ಞೆಯನ್ನು ಕಂಡುಕೊಳ್ಳುವ ಹಂಬಲಿಸಿದವರಿಗೆ ಈ ಪ್ರಪಂಚದ ಯಾವ ಬಂಧಗಳೂ ಕಾಡುವುದಿಲ್ಲ. ಇಲ್ಲಿ ಕಾಡುವಿಕೆ, ಚಿಂತನೆಯ ಹಂಬಲವಿದೆ ಅಂದರೆ ಅದು ಸಜೀವ ಲಕ್ಷಣ.  ಚಂಚಲತೆಯ ಚಿತ್ತದಲ್ಲಿ ಹೊತ್ತಿಕೊಳ್ಳುವ ಸಾವಿರ ಕೋಟಿ ಭಾವನೆಗಳೇ ಇಲ್ಲಿಯ ಸರ್ವಕ್ಕೂ ಕಾರಣ ಈ ನಿಟ್ಟಿನಲ್ಲಿ ಯೋಚನೆ ಮಾಡುವಾಗೆಲ್ಲ ಗೀತೆ ನನಗೆ ತುಂಬಾ ಆದರ್ಶವೆನ್ನಿಸುತ್ತದೆ.   ಅದು ಪ್ರಪಂಚದ ಯಾವ ಭಾವಗಳನ್ನೂ ನಿರ್ಲಜ್ಜವೆಂದು ಸಾರುವುದಿಲ್ಲ. ನಿಷೇಧೀಸುವುದೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಏನು ಮಾಡಬೇಕು ಏನು ಮಾಡಬಾರದು ಯಾಕಾಗಿ ಮಾಡಬೇಕು ಮತ್ತು ಯಾಕಾಗಿ ಮಾಡಬಾರದು ಎಂಬುದನ್ನು ದೃಷ್ಟಾಂತ ಸಹಿತವಾಗಿ ವಿವರಿಸುತ್ತದೆ. ಮತ್ತೆ ಕರ್ತವ್ಯವನ್ನೂ ಕರ್ಮವನ್ನೂ ಮಾಡುವುದರ ಉದ್ದೇಶ ಫಲಾಫಲಗಳ ನಿರೀಕ್ಷೆಯಲ್ಲ. ಫಲಾಫಲಗಳು ನಿರಪೇಕ್ಷತೆಯಿಂದಲೇ ಸಿದ್ದಿಸುವ  ಬಗೆಯನ್ನು ಹೇಳುತ್ತದೆ. ಎಲ್ಲಿಯೂ ಬೃಹ್ಮತ್ವಕ್ಕಾಗಿ ಕರ್ಮವನ್ನು ತೊರೆಯುವುದನ್ನು ಹೇಳುವುದಿಲ್ಲ.  ಎಲ್ಲಾ ಕರ್ಮಗಳೂ ಬೃಹ್ಮತ್ವ ಸಿದ್ಧಿಗಾಗೇ ಎಂಬುದನ್ನು ಹೇಳುತ್ತದೆ. ಮುಕ್ತಿ ಮಾರ್ಗವನ್ನು ಕರ್ತವ್ಯದ ದಾರಿಯಲ್ಲಿ ನಡೆಸುವ ಗೀತೆ ಎಲ್ಲ ಧರ್ಮದವರಿಗೂ ಆದರ್ಶ, ಎಲ್ಲ ಕಾಲಕ್ಕೂ ಅನ್ವಯ, ಎಲ್ಲ ಮನುಷ್ಯರಿಗೂ ನೆಮ್ಮದಿ ಕೊಡಬಲ್ಲ ಶಕ್ತಿ.


      ಯಾವ ಕೆಲಸವಾಗಲೀ ಯಾವ ಜಾತಿಯಾಗಲೀ ಯಾವ ನೀತಿಯಾಗಲೀ ಸತ್ಯ ಮಾರ್ಗವನ್ನು ಬಿಡಬೇಡ ಅನ್ನುವ ಭೌತಿಕ ಬದುಕಿನ ಸೂತ್ರ ಅದು. ಪಾಪ ಪುಣ್ಯಗಳ ಹೊರೆಯಿಳಿಸಿ ಮನಸು ಹಗುರಾಗಿಸಕೊಳ್ಳುವ ಗಂಗಾ ನದಿಯಂತೆ ಅದು. ಗೀತೆ ಯಲ್ಲಿ ಸ್ವಯಂ ಶ್ರೀ ಕೃಷ್ಣ ನೇ ಅಪೂರ್ವವಾದ ಭೌತಿಕ ಬದುಕಿನ ಎಲ್ಲ ಕೊಳೆಗಳ ತೊಳೆದುಕೊಳ್ಳುವ ಮಾರ್ಗ ತೋರುತ್ತಾನೆ. ಮತ್ತು ಕರ್ಮಫಲಗಳ ಎಲ್ಲವನ್ನೂ ದೈವ ಸಂಭೂತನಲ್ಲಿ ಅಪರ್ಿಸಿ ನಿರಾಳವಾಗುವ  ದಾರಿಯಿದೆ ಅಲ್ಲಿ..

   ಇಷ್ಟಕ್ಕೂ   ಪ್ರಪಂಚವೆಲ್ಲ ಅರಿಯದ ಯಾವುದೋ ಒಂದು ಶಕ್ತಿಯ ಹಿಂದೆ ಓಡುತ್ತಿದೆ ಎಂಬುದು ನಿಜ. ಅದು ವಿಜ್ಞಾನ ಹುಡುಕುತ್ತಿರುವ  ಸೃಷ್ಟಿಯ ಮೂಲವಾಗಿರಬಹುದು ಸಾಮಾನ್ಯ ಮನುಷ್ಯ ಹುಡುಕುತ್ತಿರುವ ನೆಮ್ಮದಿಯ ಮೂಲವಾಗಿರಬಹುದು. ಮೂಲತಃ  ಅರಿವು ಎಂಬುದು ಮುಗಿಯದ ನಿಧಿ. ಯಾವುದನ್ನೋ ನಂಬಿಬಿಟ್ಟರೆ ಅದು ನೆಮ್ಮದಿಗೆ ದಾರಿ ಅಭೌತಿಕವಾದ ಯಾವುದನ್ನಾದರೂ ದೇವರ ಹೆಸರಿನಲ್ಲಿ ನಂಬಿಕೊಂಡರೆ ಅದು ನೆಮ್ಮದಿಯ ಮೂಲವಾದರೆ ಆ ದೇವರಿಗೆ ಯಾವ ಹೆಸರಿಟ್ಟರೇನು? ಒಬ್ಬೊಬ್ಬರ ಧ್ಯಾನಕ್ಕೆ ಒಂದೊಂದು ರೀತಿ ತೆರೆದುಕೊಳ್ಳುವ ಪೃಕೃತಿಯೇ ಅದನ್ನು ಸಾಕ್ಷೀಕರಿಸಿದೆ. ಉರಿಯುತ್ತಿರುವ ಕಲಿಕಾಲವೆಂಬುದು ಒಂದಷ್ಟು ಸಂಕರಗಳ ಬೆಂಕಿ ಹೊತ್ತಿಸಿದೆ! ವಿಚಿತ್ರವೆಂದರೆ ಕಾಲ ಕೆಟ್ಟಷ್ಟೂ ಸತ್ಯದ ಮೌಲ್ಯ ಹೆಚ್ಚು. ಉಳಿಸಿಕೊಳ್ಳುವ ಮನೋಬಲವೊಂದಿದ್ದರೆ ಸಾಧನೆಗೆ ವಯಸ್ಸು ಜಾತಿ ಲಿಂಗ ಬೇಧಗಳ ಕಟ್ಟುಪಾಡಿಲ್ಲ ಇಂದು. ಆದರೆ ಮೌಲ್ಯ ನಿಧರ್ಾರ ಮಾಡಿಕೊಳ್ಳಬಹುದಾದ  ಮನುಷ್ಯರಿಗೆ ಮೌಲ್ಯದ ಶಿಕ್ಷಣವೇ ಇಲ್ಲ ಎನ್ನುವುದು  ದುರಂತ.

    ತತ್ವಾದರ್ಶಗಳ ಅಧ್ಯಯನಕ್ಕಿಂತ ಬದುಕಿನ ಅಧ್ಯಯನವೇ ಹೆಚ್ಚು ಆಪ್ತ ಅನ್ನಿಸುವುದಾಗ. ನೋವು ನಲಿವುಗಳಿಗೆ ಮುಕ್ತನಾಗುವುದಕ್ಕಿಂತ ನೋವು ನಲಿವುಗಳ ಅನುಭವಿಸಿ ಗೆಲ್ಲುವುದು ಹೆಚ್ಚು ಅರ್ಥಪೂರ್ಣ ಅನ್ನಿಸತೊಡಗಿದಾಗ ಬದುಕಿನ ಜೀವಂತಿಕೆಗೆ ಮತ್ತೆ  ಬೆರಗಾಗುತ್ತೇನೆ. ಅಹಂಗಳ ನೋಯಿಸಿಕೊಂಡು ಬದುಕಿಸಿಕೊಳ್ಳುವ ಪ್ರೀತಿಯ ಕುರಿತು ಚಿಂತಿಸುತ್ತೇನೆ, ಎಲ್ಲವನ್ನೂ ಮೀರಿ ನಗುವಾಗ ಒಳಗೆಲ್ಲೋ ಮತ್ತೆ ಪೃಕೃತಿಯ ಧ್ಯಾನ ತೆರೆದುಕೊಳ್ಳುತ್ತದೆ. ಆನಂದವೆಂಬ ಬೆಳದಿಂಗಳಿಗೆ ತೆರೆದುಕೊಂಡರೆ ಮತ್ತೆ ಅಹಂನ ಪರದೆ ಹರಿಯುತ್ತದೆ. ಮೌನ ಮಾತು ಎಲ್ಲವೂ ಹರಿಯುವ ನದಿಯಾಗುತ್ತದೆ... ಎಲ್ಲವನ್ನೂ ದೂರೀಕರಿಸಿ ಯಾವುದೋ ಗುಹೆಯಲ್ಲಿ ಅಡಗಿ ಕಂಡುಕೊಳ್ಳುವ ಶಾಂತಿಗಿಂತ ಪ್ರಜ್ಞಾಸ್ಥಿತಿಯಲ್ಲಿ
ಯುದ್ಧಭೂಮಿಯಲ್ಲಿ ನಿಂತು ಸ್ಥಿತಪ್ರಜ್ಞತೆಯ ಹುಡುಕುವ ಈ ಯತ್ನವೇ ಸಾಕು ಎನ್ನಿಸುತ್ತದೆ! ದಾರಿ ದುರ್ಗಮವಾದಷ್ಟೂ ಪಯಣ ರೋಚಕ...