Saturday, May 23, 2015

ಮನಸೇ......


       ಮನಸೇ......

        ಬರೆಯುವುದಕ್ಕೆ ನೂರಾರು ನೆಪ, ಬರೆಯದಿರುವುದಕ್ಕೆ ಸಾವಿರಾರು ನೆಪ! ನೆಪಗಳಾಚೆ ಇಣುಕಿದರೆ ಮತ್ತೆ ಮನಸಿನೊಂದಿಗೆ ಮೌನದಲ್ಲೂ ಮಾತಿದೆ, ಪ್ರೀತಿಯಿದೆ, ಅಚ್ಚಟೆಯ ಆಲಿಂಗನವಿದೆ, ತಲೆತುಂಬ ವಿಷಯಗಳಿವೆ. ಬೆಳದಿಂಗಳ ಬಯಲೂ ಮಳೆ ಹನಿಯ ತಪವೂ  ಹಾಗೇ ಇದೆ..
       ಇವತ್ತು ಮತ್ತೊಮ್ಮೆ ಅಂತದ್ದೇ ಮಳೆ ಮನಸಿನ ನಡುವೆ ಪುಟ್ಟ ಮಾತು-ಕತೆ.
      ನಿನ್ನೆ ಹಚ್ಚಿಟ್ಟ ಭಾವದ ತೋರಣಗಳಲ್ಲಿ ಇನ್ನೂ ಬೆಳಕಿನ ಪುಟ್ಟ ಹಣತೆ ಹಾಗೇ ಇದೆ. ನೀ ಬರುವಿಯೆಂಬ ಕಾತರಕ್ಕೆ ಕಿವಿಯಾಗಿ, ಎಲ್ಲೋ ಇಟ್ಟ ನಿನ್ನ ದೃಡ ಹೆಜ್ಜೆಗಳು  ಮತ್ತೊಮ್ಮೆ ಹೊರಳೀತೆಂಬ ಪುಟ್ಟ ಬಯಕೆಯಾಗಿ, ಜಗತ್ತಿನ ಘನಘೋರ ಕ್ರೌರ್ಯಗಳೆಲ್ಲ ಕಳೆದು ಹೃದಯಕ್ಕೆ ತಂಪಾಗಿಸಿವ ವೀಣಾ ನಾದವೊಂದು ಎದೆಯಲ್ಲಿ ಹರಿಯುತ್ತಿದೆಯಲ್ಲ!ಒಮ್ಮೆ ಝೇಂಕರಿಸಲಿ ಎಂಬ ಒಲವಿನಿಂದ.. ಮೌನವಾಗಿರಬಹುದು. ಮಾತು ಮರೆತಿರಬಹುದು.  ಮತ್ತೆಲ್ಲೋ ಕಳೆದುಹೋಗಲಾಗದ  ಚಿತ್ತವೊಂದಿದೆ ನೋಡು. ಒಮ್ಮೆ ಬರಬಾರದೇ ಈ ಜುಮುರು ಮಳೆಯೊಂದಿಗೆ..
    ಒಮ್ಮೆ ನಾ ಎತ್ತಿ ಮುಚ್ಚಿಟ್ಟ ಹಾಳೆ ಪೆನ್ನುಗಳಲ್ಲಿ ಇಂಕು ಖಾಲಿಯಾಯಿತೇಕೆ ಎಂದು ನೋಡಬಾರದೇ.. ಬರೆಯದೇ ಉಳಿಸಿರುವ ಸಾಲು ಸಾಲುಗಳಲ್ಲಿ ನಿನ್ನೆಸೆರು ಅಳೀಸಿತೇ ಹುಡುಕಬಾರದೇ? ಕತೆ ಕಾವ್ಯ ಭಾವ, ಬಂಧ ಎಲ್ಲ ಮಾತುಗಳು ಮೌನವಾಗಿರಬಹುದು,  ನಿನ್ನೆಯ ಪುಟಗಳಲ್ಲಿ ನಾನಿಟ್ಟ ನವಿಲುಗರಿಯಿನ್ನೂ  ಹಾಗೇ ಇದೆಯಲ್ಲ! ಈ ವರುಷವೂ ಮತ್ತೆ ಧುಮುಗುಡುತ ಧಗಿಸುತ್ತ ಮಳೆರಾಯ ಬಂದನಲ್ಲ! ಪುಟ್ಟ ಹೂವಿನ ನಡುವೆ ನಿನ್ನ ಬೆರಳಿನ ಅಚ್ಚು ನನ್ನ ಗ್ಯಾಲರಿಯಲ್ಲಿ ಉಳಿದಿದೆಯಲ್ಲ! ಕವಲು ದಾರಿಯ ನಡುವೆ ನಿನ್ನ ಬೀಳ್ಕೊಡುವ ನೋವು ಸುಮ್ಮನಿದೆಯಲ್ಲ! ಕಿವಿಯಂಚಲ್ಲಿನ್ನೂ ಬೆಚ್ಚನುಸಿರಿನ ಗಾಳಿ ಹಾಗೇ ಇದೆಯಲ್ಲ!
     ಹೆಸರೆಂಬ ಬಂಧನವೇ ಇಲ್ಲದಿರೋ ಬಂಧವೇ ಬದುಕಿಸು ನೀ ನನ್ನ ನಾಳೆಗಳ ನಡುವೆ.. ಬರೆಯಿಸು ಇನ್ನಿಲ್ಲದೇ ಬೆರಳು ದಣಿವಂತೆ..
ಇರದಿರುವ ನಿನ್ನೆ ನಾಳೆಗಳ ನಡುವೆ ಮತ್ತೊಮ್ಮೆ ಹುಟ್ಟಿಸು ಈ ದಿನದ ನಗುವ, ನೇವರಿಸಿ ತಣಿಸು ಈ ನಿನ್ನ ಮನವ..

ಮತ್ತೆ ಮಾನಸ ಸರೋವರದಲ್ಲಿ ಮಳೆಯಾಗಿದೆ. ಪುಟ್ಟ ದೋಣಿಗಳೊಂದಿಗೆ ನಿಮ್ಮ ಜೊತೆ..