Sunday, December 4, 2016

ಭಾಷೆ -ಬಳಕೆ.

ಮತ್ತೊಮ್ಮೆ ನಿಮ್ಮೆದುರಿನಲ್ಲಿ....



 ಈಗಷ್ಟು ಬರೆಯೋದಕ್ಕೆ ನೂರು ಕನಸುಗಳಿವೆ. ಹೇಳೋದಕ್ಕೆ ಸಾವಿರ ಮಾತುಗಳಿವೆ. ಆದರೆ ಕೇಳೋರೊಬ್ಬರು ಬೇಕಲ್ಲ!! ಯಾರಿಲ್ಲದಿದ್ದರೂ ಏನಂತೆ. ಊದೋ ಶಂಖ ಊದೋದೆ. ಬಾರ್ಸೊ ಜಾವಟೆ ಬಾರ್ಸೋದೆ. ಹಂಗನ್ಕೊಂಡ್ಮೇಲೆ ಬರವಣಿಗೆ ಹಗುರ ಅನ್ನಿಸಿದೆ. ಓದು ಆಪ್ತ ಅನ್ನಿಸಿದೆ. ಸುತ್ತ ಮುತ್ತ ಸಿಕ್ಕಾಪಟ್ಟೆ ಬುದ್ದಿವಂತರು ಬುದ್ದಿಜೀವಿಗಳು ಪಂಡಿತರು
ಎಲ್ಲ ತುಂಬ್ಕೊಂಡು ನಾನೇ ನನ್ನಷ್ಟೊತ್ತಿಗೆ ಗಿಲ್ಟ್ ಫೀಲ್ ಮಾಡ್ತಾ ಬರೀಲೋ ಬೇಡ್ವೋ ಯಾರನ್ಕೊತಾರೋ ಅನ್ಕೊಳ್ತಾ ಒಳಗೊಳಗೆ ಸಣ್ಣಗೆ ಬೆವರ್ತಾ ಬದ್ಕು ಒಂಥರಾ ಕಟ್ಟಿ ಹಾಕ್ಕೊಂಡಿರೋ ಹೊತ್ತಿಗೆ ಹೀಗೆಲ್ಲ ಜ್ಞಾನೋದಯ ಆಗಿ ನಿಮಗೆಲ್ಲಾ ಕಷ್ಟ ಕೊಡ್ತಿದ್ದೀನಿ ಅನ್ನಿಸ್ತಿದ್ರೂ ಸ್ವಸ್ವಲ್ಪ ಸಹಿಸ್ಕೋಳ್ತ ಸ್ವಸ್ವಲ್ಪ ಬೈಕೊಳ್ತ  ಓದ್ತಾ ಇರುವಾಗ ಇವತ್ತಿನ ವಿಷಯಕ್ಕೆ ಬಂದ್ಬಿಡೋಣ.


 ಇತ್ತೀಚೆಗೆ  ಭಾಷಾ ಸಂಸ್ಕೃತಿ ನೆ ಮರ್ತು ಹೋಗಿರೋ ಹಾಗೆ ಅನ್ನಿಸ್ತಾ ಇರತ್ತೆ ನನಗೆ ಆಗಾಗ. ನನಗೊಬ್ಬಳಿಗೆ ಹೀಗಾ ಅಥವಾ ನಿಮಗೆಲ್ಲರಿಗೂ ಹೀಗಾ ಗೊತ್ತಿಲ್ಲ. ಬಯಲ ಸೀಮೆ ಅಜ್ಜಪ್ಪ ಬಸ್ಯಾ ಕರ್ಯಾ ಮತ್ತೆ ಅದೆಂತೆಂತದೋ ಆ ಮಗನೆ ಈ ಮಗ್ನೆ ಅಂದ್ರೆ ಏನೂ ಅನ್ಸಲ್ಲ. ಕೆಲಸಕ್ಕೋಸ್ಕರ ಎಲ್ಲೆಂದಿದ್ಲೋ ಬಂದಿರೋ ಜನ ಕುಡ್ಕೊಂಡು ರಸ್ತೆ ಬದಿಯಲ್ಲಿ ಬಾಯಿಗೆ ಬಂದಂತೆ ಮಾತಾಡೋ ಜನ, ಬೀದಿ ಅಂಚಲ್ಲಿ ಬೋರಿಂಗ್ ಬಾವಿ ನೀರಿಗೆ ನಿಂತ ಹೆಂಗಸರು ಕಿತ್ತಾಡೋ  ಭಾಷೆ ಎಲ್ಲ ಸಹನೀಯ. ಭಾಷೆ ಕೂಡ ಮನುಷ್ಯನ ಹುಟ್ಟು ಪರಿಸರದೊಂದಿಗೆ ಅವಿನಾಭಾವದ ಸಂಬಂಧ. ಕನ್ನಡವನ್ನ ಕೆಟ್ಟಕೆಟ್ಟದಾಗಿ ಆಡೋ ಬೇರೆ ಬೇರೆ ಜನರನ್ನೂ ನಾವು ಸಹಿಸ್ಕೊಳ್ತೇವೆ. ಉತ್ತರಕರ್ನಾಟಕ, ಮೈಸೂರ ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಹವ್ಯಕ ಕನ್ನಡ ಅಂತೆಲ್ಲ ಸಾವಿರ ವಿಂಗಡಣೆಯ ಮಾಡಿಯೂ ನಾವೆಲ್ಲ ಭಾಷೆಯ ವಿಷಯದಲ್ಲಿ  ಭಾವ ನೋಡಿ ಸಮಾಧಾನ ಪಟ್ಟುಕೊಳ್ತೇವೆ. ಅನಕ್ಷರಸ್ತರು ಕಾಡು ಜನರು ಹೇಗೆ ಮಾತನಾಡಿದರೂ ಅವರ ಅಭ್ಯಾಸ ಅದು ಅಂತ ಬಿಟ್ಟುಬಿಡ್ತೇವೆ. ಆದರೆ ಈ ನಾಗರಿಕರು, ವಿದ್ಯಾವಂತರು, ಸುಸಂಸ್ಕೃತರು ಅನ್ನೋರು ಬಳಸುವ ಭಾಷೆಗಳನ್ನ, ಉಪಯೋಗಿಸುವ ಶಬ್ಧಗಳು ಮಾತ್ರ ತುಂಬಾ ಕಸಿವಿಸಿಯುಂಟುಮಾಡುತ್ತದೆ! ಯಾಕೆ? ಅಂತ ನಾನೇ ನೂರಾರುಬಾರಿ ಅನ್ಕೊಳ್ತೇನೆ!


 ಶಬ್ಧಗಳ ವಿಷಯದಲ್ಲಿ ಮಡಿವಂತಿಕೆ ಸಲ್ಲದು ಎಂಬುದು ನಿಜವಾದರೂ ಸಾಮಾಜಿಕ ಸ್ಥಳಗಳಲ್ಲಿ ವಿದ್ಯಾವಂತರು ಉಪಯೋಗಿಸುವ ಭಾಷೆಗೆ ಸೌಜನ್ಯವಿರಬೇಕು ಎಂಬುದು ಅಲಿಖಿತ ಮನಸ್ತಿತಿಯೇನೋ.  ಅಥವಾ ವಿದ್ಯೆ ಅಷ್ಟಾದರೂ ಸೌಜನ್ಯ, ಸಂಸ್ಕಾರ ಕಲಿಸಿರಬೇಕೆಂಬುದು ಕೂಡ ನಮ್ಮಂತವರ ರಿಸ್ಟ್ರಿಕೆಡ್ ಮನಸ್ತಿಯೇ ಇರಬಹುದು. ಮನೆಯಲ್ಲಿ ಕೂತು ಓದುವ ಪುಸ್ತಕಗಳಲ್ಲಿ ಶಬ್ಧಗಳು ಹೇಗಿದೆ ಎಂಬುದಕ್ಕಿಂತ ವಿಷಯವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹಾಗಿದ್ದೂ   ಸಾರ್ವಜನಿಕ ಮಾತು, ಸಭೆ,  ಎಪ್ ಬಿ ಅಂತ ಜಾಗಗಳಲ್ಲಿ  ಭಾಷಾ ಸಭ್ಯತೆಯನ್ನು ಗಮನಿಸಲಾಗುತ್ತದೆ. ಅದು ಅವರ ನಾಗರಿಕ ಮನಸ್ತಿತಿಯ ಮುಖವಾಣಿಯೆಂದೇ ನಂಬಲಾಗುತ್ತದೆ. ಇವೆಲ್ಲ ಎಷ್ಟು ಸರಿ ಎಷ್ಟು ತಪ್ಪು ಎಂದು ಇನ್ನೊಬ್ಬರು ಲೆಕ್ಕ 
ಹಾಕಲು ಸಾಧ್ಯವಾಗದು. ಅವರವರದ್ದೇ  ಗುಣಾಕಾರಗಳು ಅಲ್ಲಿರೋದು. 

   ಇಷ್ಟೆಲ್ಲ ಹೇಳೋಕ್ ಮುಂಚೆ ನನಗೂ ಗೊತ್ತಿಲ್ಲ. ಯಾವುದು ಸರಿ ಯಾವ್ದು ತಪ್ಪು ಅಂತೆಲ್ಲ. ಮಾತಿನಾಚೆಗೆ ಮನಸೇ ಮುಖ್ಯ ಅನ್ನೋ ನನ್ನನ್ನು ಮಾತು ಹರ್ಟ್ ಮಾಡತ್ತೆ .  ಭಾಷೆಯ ಬಳಕೆ ತಪ್ ತಪ್ಪಾಗಿ  ಮಾತಾಡಿದ್ರೆ ಮೈ ಉರಿಯತ್ತೆ
ಅನ್ನೋದು ನೂರಕ್ಕೆ ನೂರು ಸತ್ಯ. ಮಾತು ಕೃತಿ ಎರಡೂ ಒಂದಷ್ಟು ಸಾಮ್ಯತೆ ಕಾಣದಿದ್ದರೆ ಅದೊಂದು ನಾಟಕೀಯ ಅನ್ನಿಸೋಕೆ ಎಷ್ಟೊತ್ತು ಬೇಡ. ಆಮೇಲಿಂದು ಅವರವರಿಗೆ  ಬಿಟ್ಟ ವಿಷಯ. 

 ಇವತ್ತಿಗೆ ಇದಿಷ್ಟೇ, ನಿಮಗೂ ನನ್ನಂಗೆ ಹೀಗೆಲ್ಲಾ ಅನ್ನಿಸ್ತಾ ಇದ್ರೆ ಹೇಳದೆ ಇರ್ಬೇಡಿ. ಮುಕ್ತಾಯಕ್ಕೊಂದು ಶರಾ ಬರೆಯೋ ವಿಷಯ ಅಂತೂ ಇದಲ್ಲ.

ಸಿಗುವಾ ಮತ್ತೊಮ್ಮೆ ನಾಳೆಗಳಿದ್ದರೆ..