Thursday, April 11, 2019

ಆತ್ಮಸಖನೆ

ಆತ್ಮಸಖನೆ,

ಹೊರಗೆ ಬಿರು ಬಿರು ಬಿಸಿಲುರಿ. ಒಳಗೊಂದು ತಣ್ಣನೆಯ ಎಲೆ ಗಾಳಿ!ಇದೇನು ಹೊಸ ಪರಿ ಅಂತ ಆಲೋಚಿಸುತ್ತಿದ್ದೆಯೇನೋ. ನಿನ್ನ ನೆನಪಿಗಿರುವ ಖುಶಿಯದು. ಎಷ್ಟು ಕಾಲವಾಯಿತು ಮತ್ತೆ ನಾವು ಹೀಗೆ ತಣ್ಣಗೆ ಕುಳಿತು ಮಾತನಾಡಿ. ಬೃಂದಾವನ ತುಳಸಿಯೆಲ್ಲ ಒಣಗಿ ಬೀಜ ಉದುರುವಷ್ಟು ದಿನವಾಯಿತು. ನೀ ಬರದೇ. ಹೋಗಲಿ ಒಮ್ಮೆ ನೆನಪಾಗಿಸಿಕೊಂಡು ನನ್ನ ಹೆಸರ ಕರೆಯದೇ..

ಆದರೂ ನಿನ್ನ ನೆನಪಲ್ಲೆಷ್ಟು  ತಂಪಿದೆ ನನಗೆ ನೋಡು.  ಬರದವನ ಬಗೆಗೂ ಎಂಥಾ ಮೋಹವೇ ನಿನಗೆ ಅಂತ ನಗೆಯಾಡಬೇಡ. ಬಂದಾಗೊಮ್ಮೆ ಅಂಗೈ ನೇವರಿಸಿ ಹೋಗಿದ್ದೆಯಲ್ಲ! ಅಷ್ಟೇ ಸಾಕು ನೋಡು. ನಿನ್ನ ನೇವರಿಕೆಯಲ್ಲೇ ಅಷ್ಟು ಪ್ರೀತಿಯ ಕಂಡವಳು ನಾ. ಕರೆದಾಗೊಮ್ಮೆ ಖುಷಿಪಡುವ ಭಾಗ್ಯವನ್ನು ಕೊಡಲಿಲ್ಲ ಯಾಕೋ. ಒಮ್ಮೊಮ್ಮೆ ಬೈದುಕೊಳ್ಳುವ ಅನ್ನಿಸಿಬಿಡ್ತೀಯ. ಕೆಟ್ಟ ಹಠಮಾರಿಯಂತೆ ಒಮ್ಮೆ ರಚ್ಚೆ ಹಿಡಿದು ನನ್ನ ಒಲಿಸಬಾರದೇ. ನಿನ್ನ ಒಲವು ಅರಿವ ಮುನ್ನವೇ ಮೌನಕ್ಕೆ ಹೋದವಳು ನಾನು.   ನಿನ್ನ ಕಂಗಳ ಒಲವು ಬತ್ತಿಸಿ ಬಿಟ್ಟೆಯೆನೋ. ಸಣ್ಣ ಹಠದವಳು ನಾನೆಂದು ತಿಳಿದು ಒಲಿಸದೇ ಹೋದೆ. ಬಣ್ಣ ಹಚ್ಚಿಕೊಂಡಿಲ್ಲವೋ ಸುಮ್ಮನೆ ನಿನ್ನೊಲವ ಬಣ್ಣಕ್ಕೆ ಕಾಯ್ದಿದ್ದೇನೆ ನೋಡು.

ರಾತ್ರಿಯ ನಿಶೆಗೂ ಅಂದ ಬರುತ್ತದೆಯಲ್ಲ ನಿನ್ನ ನೆನಪಾದರೆ! ನಿರೀಕ್ಷೆಗಳ ಬತ್ತಿಸಿಕೊಂಡ ಎದೆಯಲ್ಲಿ ನಿನ್ನ ಕನಸುಗಳ ಮೂಟೆ ಕಟ್ಟಿ ಬೆಳಕಿನಂತ ದೀಪ ಹೊತ್ತಿಸಿ ಮತ್ತೆ ಕಾಣದಾದೆಯಲ್ಲ!! ಹೇಳು ನಿನಗೆಂದೂ ನಮ್ಮ ನಡುವಿನ ಖುಷಿಯ ಕ್ಷಣಗಳು ಕಾಡುವುದೇ ಇಲ್ಲವಾ?  ಒಮ್ಮೆಯಾದರೂ  ಕೆನ್ನೆ ಹಿಂಡಿದ ಕೈಗಳು ಕರೆಯುವುದಿಲ್ಲವಾ! 

ಎಷ್ಟೇ ಬರೆದರೂ ಬರದವ ನೀನು. ಗೊತ್ತು ನನಗೆ. ರಾಜಕಾರ್ಯ ಕಾರಣಗಳು ನೂರು ನಿನ್ನವಿದೆ. ಕರೆದಕೂಡಲೇ ಓಡಿ ಬರದ ಬಿನ್ನಾಣವು ನಿನ್ನದಿದೆ. ಹಾಗಿದ್ದು ನಿರೀಕ್ಷೆಯಲ್ಲೇ ನನ್ನ ದಿನಗಳಿವೆ. ತೋಳಿಗೊಮ್ಮೆ ಆತು ನಿನ್ನ ಎಲ್ಲ ಕಣ್ಣೀರು ಮರೆಯಬೇಕಿದೆ ನಾನು. ಎದೆಗೊಮ್ಮೆ ತಲೆಯಿಟ್ಟು ಉಸಿರಾಡಬೇಕಿದೆ. ಎಲ್ಲ ಬಿಂಕ ಬಿಟ್ಟು  ನಿನ್ನ ಕಾಡಬೇಕಿದೆ.

ಈ ಓಲೆಗೂ ಉತ್ತರವಿಲ್ಲದಿರೆ ನಿನ್ನೊಲವಿಗೆ ನನ್ನ ಹೆಸರಿಲ್ಲ! ನವಿಲುಗರಿಯ ಮರಿಯೊಂದು ಸಾಯಬಹುದು ನೋಡು! ಕೊಳಲಾಗುವ ಬಿದಿರೊಂದು ಒಡೆಯಬಹುದು ನೋಡು! 
ಬೇಗ ಒಮ್ಮೆ ಕೂಗಿ ಬಿಡು. ಇಲ್ಲ ನೀನೇ ಬಂದುಬಿಡು.
ಮಳೆಯ ಹೆಸರಿಗೆ.. ನನ್ನ ಕನಸಿಗೆ..

#ಜೋಗಿತಿಯ_ಜೋಳಿಗೆಯಿಂದ
#ಸಿರಿ