ಆತ್ಮಸಖನೇ,
ಒಂದ್ಕಾಲ ಇತ್ತು. ಬದ್ಕಿನ ಬಗ್ಗೆ ವಿಪರೀತ ಕಾನ್ಪಿಡೆನ್ಸ್ ಇತ್ತು. ಹೋಪ್ ಇತ್ತು. ಫರ್ಪೆಕ್ಷನ್ ನ ಹುಚ್ಚಿತ್ತು. ಪ್ರಪಂಚದ ಅಂಚಿನವರೆಗೂ ಒಂದ್ಸಲ ಹೋಗಿ ಬಂದು ಬಿಡುವ ಅನ್ನುವ ಕನಸು ಉಮೇದಿ ಇತ್ತು. ಕಾಲ ಬದಲಾದಂತೆ ಎಷ್ಟೆಲ್ಲ ಬದಲಾದವು! ನಾವೇನಾ ಇದು ಅಂದುಕೊಳ್ಳುವಷ್ಟು!
ತರತರದ ಅಡುಗೆ ತಿನ್ನುವ ಮಾಡುವ ಉಮೇದಿಯ ಹೊತ್ತಲ್ಲಿ ಯಾರದೋ ನಿರ್ಭಂದಗಳಿಗೆ ನಮ್ಮ ಬಯಕೆಗಳ ಬಲಿ ಕೊಟ್ಟೆವು. ಈಗ ಮಾಡುವ ಉಮೇದಿ ಇದ್ದರೂ ತಿನ್ನುವ ಹಪಹಪಿಯೇ ಇಲ್ಲ. ದೇಹಕ್ಕೆ ತಿಂದರೆ ದಕ್ಕುವುದೇ ಇಲ್ಲ. ಬದುಕು ಹಾಗೆ. ಬೇಡದ್ದೆಲ್ಲ ಕಲಿಸಿದೆ. ಬೇಕಾಗಿರೋದನ್ನೇ ಕಿತ್ಗೊಂಡಿದೆ. ನನಗಂತೂ ಪರ್ಫೆಕ್ಷನ್ ನ ಭೂತ ತೊಲಗಿದೆ. ಎಲ್ಲಾನೂ ನಾನೇ ಸರಿ ಮಾಡ್ಕೊಳ್ತೀನಿ ಅನ್ನೋ ಅತಿಯಾದ ಅನಿಸಿಕೆಗಳೆಲ್ಲ ಮಣ್ಣುಕಚ್ಚಿದೆ. ಎಲ್ಲರಿಗೂ ಸರಿ ಮಾಡಬೇಕು. ಎಲ್ಲರ ನಿರೀಕ್ಷೆಗಳಿಗೂ ಒದಗಬೇಕು ಎಂಬುದೇ ಹುಚ್ಚು ಅಂತ ಗೊತ್ತಾಗಿದೆ. ಕಾಲ ಮತ್ತು ಪರಿಸ್ಥಿತಿ ನಮ್ಮನ್ನ ಆಡಿಸುವ ಆಟದ ಗೊಂಬೆಗಳು. ಅದು ಬೇರೆಯವರನ್ನೂ ಆಡಿಸುತ್ತಿದೆ ಅಷ್ಟೇ. ಹಿಂತಿರುಗಿ ನೋಡಿದರೆ ನಮ್ಮದೇ ನೂರು ತಪ್ಪುಗಳು ಗೋಚರಿಸುತ್ತವೆ. ಅವು ಅವತ್ತಿನ ಕ್ಷಣಕ್ಕೆ ತಪ್ಪೆನಿಸಿದವಲ್ಲ. ಇವತ್ತಿಗೆ ಅನ್ನಿಸುತ್ತಿವೆ. ನಾಳೆಗೆ ಗೊತ್ತಿಲ್ಲ. ಹಾಗೇ ಬುದ್ದೀಪೂರ್ವಕ ಬದುಕಿನ ಅಸಡ್ಡೆ ಇರಲಿಲ್ಲ ನನಗೆಂದೂ. ನಾನು ಕೇಳಿರದ ನೂರಾರು ತಿರುವುಗಳಲ್ಲಿ ನನ್ನ ನಡೆಸಿರುವ ಅವಳಿಗೇ ಗೊತ್ತು. ನನ್ನೊಳಗಿನ ಸರಿ ತಪ್ಪುಗಳಲೆಕ್ಕ. ಇನ್ಯಾರಿಗೆ ಕೊಡಲಿ ಹೇಳು.
ಬಹುಶಃ ಹಿಂತಿರುಗಿ ನೋಡೋದು ಒಂದು ವ್ಯವಸ್ಥೆ ಅಷ್ಟೇ. ಯಾವುದೂ ಮತ್ತೆ ನಮ್ಮ ಕೈಗೆ ಸಿಗದು. ನಾಳೆಗಳಿಗೆ ಇವತ್ತೇ ಋಜು ಹಾಕಲಾಗದು.ಇವತ್ತಿನ ಅನಿವಾರ್ಯತೆ ಗಳಿಗೆ ರಾಜಿ ಮಾಡಿಕೊಳ್ಳದ ಹೊರತು ಬೇರೆ ಆಪ್ಷನ್ ಇಲ್ಲ. ಸಧ್ಯಕ್ಕೆ ನನ್ನ ನಡೆಸುವ ದಾರಿ ಅವಳದ್ದೇ. ಸಮಾಧಾನ ಕೊಡುವಾಗ ಕೊಡುತ್ತಾಳೆ. ನೀನೇ ಹೇಳಿದ ಹಾಗೆ ಇದು ನನ್ನ ಬದುಕು ಅನ್ನೋ ಕಾರಣಕ್ಕೆ ಖುಶಿಯಾಗಿರುವ ನೋಯುವ ಅಳುವ ಎಲ್ಲ ಹಕ್ಕು ನನಗಿದೆ. ಎಲ್ಲದನ್ನೂ ಬದಿಗೆ ಸರಿಸಿ ಮುಂದೆ ನಡೆಯಲೇಬೇಕಾದ ಅನಿವಾರ್ಯತೆ ಬದುಕಿನದು
ಸಮಯದ ಜೊತೆ ಒಳಮನೆಯಲ್ಲಿ ಸದೃಡ ಏಕಾಂತವೊಂದನ್ನು ಸೃಷ್ಟಿಸಲು ಬದುಕೇ ಅನುವು ಮಾಡಿ ಕೊಟ್ಟಿದೆ. ಈ ಜಗತ್ತಿನ ಮೋಹ ಮಿಥ್ಯಗಳ ರೂಪದಲ್ಲಿ. ಅದು ಅರ್ಥಮಾಡಿಸುವ ಪರಿಗೂ ನಮಗೆ ಅರ್ಥವಾಗಿಲ್ಲ ಅಂದರೆ ಅದಕ್ಕೆ ಹೊಣೆ ಅವಳಲ್ಲ. ನಾವೇ. ಒಳಗಿಳಿದು ನೋಡು. ನಮ್ಮಿಂದ ಎಲ್ಲವನ್ನೂ ಕಿತ್ಗೊಂಡು ನೋವು ಕೊಡ್ತಿದ್ದಾಳೆ ಅಂದ್ಕೊಳ್ತಿದ್ದೀವಿ ನಾವು. ಆದರೆ ಅವಳು ಇದ್ಯಾವುದು ನಿಂದಲ್ಲ. ಮೋಹ ಕಳಚು ಅಂತಿದ್ದಾಳೆ.
ವಾಸ್ತವದ ಕರ್ತವ್ಯದ ಹೊರತಾಗಿ ಯಾವುದೂ ನೋವು ನಲಿವಿಗೆ ಅಂಟಿಕೊಂಡಿರಬಾರದು. ಆ ಕ್ಷಣಕ್ಕೆ ಅನುಭವಿಸು. ಒಪ್ಪಿಕೋ. ಹಾಗೇ ಮುಗಿಯಿತು. ಮುಂದೆಜ್ಜೆ ಇಡು.ಅಲ್ಲೇ ನಿಲ್ಲಕ್ಕಾಗಲ್ಲ.
ಕತೆ ಇಲ್ಲಿಗೆ ಎಂದಿಗೂ ಮುಗಿಯೋದಿಲ್ಲ.ಮಾತು ನಿನಗೆ ಕೇಳದುಳಿದೀತು. ನನಗೆ ಹೇಳಿ ದಣಿವಾಗೋದಿಲ್ಲ. ಸಣ್ಣ ಅಲೆಗಳ ತುಂಬ ತಂಗಾಳಿಯ ತುಂಬಿಕೊಂಡು ನಿನ್ನ ಪಾದ ನೇವರಿಸುವಾಗಲಾದರೂ ನೆನಪು ದಟ್ಟವಾಗದಿರದು. ಎಷ್ಟೆಂದರೂ ಆತ್ಮಸಖನಲ್ಲವೇ!
ಈ ಬಾರಿಯ ನೆರೆಗೂ ನಿನ್ನ ಸರೋವರದಲ್ಲಿ ನೀರಾಗಿಲ್ಲವೇ ಅಂತ ನೀನೊಮ್ಮೆ ಬೈದು ಕೇಳಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುತ್ತಲೇ ಮತ್ತೆ ಮತ್ತದೆ ಮಾತಿಗಿಳಿಯುತ್ತೇನೆ.ನೀನು ಓದುವುದಿಲ್ಲ.ಏನೂ ಹೇಳುವುದೂ ಇಲ್ಲ.ಕಾಯುತ್ತಲೇ ಉಳಿದ ನಾನು ನಾನಾಗಿರದ ಹೊತ್ತಲ್ಲಿ ಮನುಷ್ಯನ ಅಗತ್ಯ ಮನುಷ್ಯನೇ ಎಂಬ ಅರಿವಿನೊಂದಿಗೆ ಮತ್ತೆ ಜೋತುಬೀಳುತ್ತೇನೆ ಜೋಗಿತಿಯಂತೆ..
#ಜೋಗಿತಿಯ_ಜೋಳಿಗೆಯಿಂದ
#ಸಿರಿ