Tuesday, November 19, 2019

ಬೆಳಗಿನ ಕತೆ

ಆತ್ಮಸಖನೇ, 

ಅನಾಮಿಕ ಸ್ಥಳದಲ್ಲಿ ಕುಳಿತು ಬೆಳಗು ನನ್ನ ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಸುಮ್ಮನೇ ಇರುವುದ ಬಿಟ್ಟು ಮನಸು ಅತ್ತ ಇತ್ತ ಹರಿದಾಡುತ್ತಿದೆ. ಹಿಂದೆ ಮುಂದೆ ಜೋಕಾಲಿಯಾಡುತ್ತಿದೆ. ಭೂತದ ನೆರಳು ಭವಿಷ್ಯತ್ತಿಗೆ ಬೆರಳ ತೋರಿಸುತ್ತಿದೆ. ನಾನೇನು ನಿನ್ನಷ್ಟು ವೇದಾಂತಿಯಲ್ವಲ್ಲ.ಆದರೂ ಎಲ್ಲಿ ಹೋದರೂ ಬೆನ್ನು ಬಿಡದ ಭೂತ ನೀನು. ಕತ್ತಲಿರಲಿ ಬೆಳಕಿರಲಿ. ಕಣ್ಣು ಮುಚ್ಚಿದರೂ ಕಣ್ಣು ಬಿಟ್ಟರೂ ನಿನ್ನ ಕಣ್ಣು ತಪ್ಪಿಸಲಾಗದು.

ಏನು ಯೋಚನೆ ಅಷ್ಟೆಲ್ಲ ಅಂತ ಕೇಳ್ತಿದೆ ನಿನ್ನ ಕಂಗಳು. ಹೇಳಿದರೆ ನೀನು ಬಿದ್ದು ಬಿದ್ದು ನಗೋದು ಗ್ಯಾರಂಟಿ ಅಂತ ನನಗೆ ಗೊತ್ತು. ಆದರೂ ಹೇಳ್ತೀನಿ ಕೇಳು.  ಇಷ್ಟು ವರ್ಷದಲ್ಲಿ ಏನು ಗಳಿಸಿದೆ ಅಂತ ನನಗೆ ನಾನೇ ಕೇಳ್ಕೊಳ್ತಿದ್ದೆ. ಗಳಿಕೆಯೆಂದರೆ ಹಣದ್ದಲ್ಲ.‌ಎಷ್ಟೆಲ್ಲ ಪ್ರೀತಿ ವಿಶ್ವಾಸ, ಸ್ನೇಹ ಲೆಕ್ಕ ಹಾಕ್ತಿದ್ದೆ. ಎಟ್ ಪ್ರೆಸೆಂಟ್ ಕಣ್ಮುಚ್ಕೊಂಡ್ರೆ ಒಳಗಿರೋದು ನಾನು ಮತ್ತೆ ನೀನು ಇಬ್ಬರೇ.. ನಂಗೆ ಬುದ್ದಿ ಬಂದಾಗ ಹೀಗೇ ಕಣ್ಮುಚ್ಕೊಳ್ತಿದ್ದೆ. ಆವಾಗ್ಲೂ ಇದ್ದಿದ್ದು ನಾವಿಬ್ರೇ. ಮತ್ತೆ ಮಧ್ಯೆ ಅದೆಷ್ಟು ಜನ ಬಂದಿದ್ದಾರೆ! ನಾನಿದ್ದೀನಿ ನಾನಿದ್ದೀನಿ ಅನ್ನೋದಕ್ಕೆ. ಮೊನ್ನೆ ಯಾರೋ ಹೇಳ್ತಿದ್ರು. ನಾನಿದ್ದೀನಿ ನಿನ್ ಜೊತೆ. ಯಾವತ್ತೂ ಇರ್ತೀನಿ. ಇಲ್ಲೇ. ಹೀಗೆ. ಇಪ್ಪತ್ತು ವರ್ಷಾದ ನಂತರವೂ ಇರ್ತೀನಿ ಅಂತೇನೋ. ನಗಲಿಲ್ಲ ಮಾರಾಯಾ ನಾನು. ಅದರೆ ಒಳಗೊಳಗೆ ನಗು ಬರ್ತಿತ್ತು ಸುಳ್ಳಲ್ಲ. ಇವತ್ತಿನ ಇಡೀ ದಿನಕ್ಕೆ ನನಗೆ ಕೊಡೋಕೆ ಐದು ನಿಮಿಷ ಸಮಯ‌ ಇಲ್ದಿರೋರೆಲ್ಲ ಜೀವನ ಪೂರ್ತಿ ನಿನ್ ಜೊತೆ ನಾನಿದ್ದೇನೆ ಅನ್ನೋದಿದೆಯಲ್ಲ ಅದರಂತ ದೊಡ್ಡ ಜೋಕು ಇನ್ನೊಂದಿಲ್ಲ ಅನ್ನಿಸ್ತಾ ಇತ್ತು! ನಾಳೆ ಬೆಳಿಗ್ಗೆ ನಾನೇ ಇರ್ತೇನೆ ಇಲ್ವೋ ಗೊತ್ತಿಲ್ಲ ಮಾರಾಯಾ ಇವತ್ತಿನದಷ್ಟೇ ನಿಜ. ಹೌದಾ ಅಲ್ವಾ ನೀನೇ ಹೇಳು.


ನೋಡು ಈ ಸಂಬಂಧಗಳೇ ವಿಚಿತ್ರ. ನಿಭಾವಣೆಯ ಹೊರೆ ಬೇಡ ಅಂದ್ಕೊಳ್ತೇವೆ. ನಿಭಾಯಿಸದೇ ಇದ್ರೆ ನಾವೇ ನೊಂದ್ಕೊಳ್ತೇವೆ. ಸಮಯ, ಮಾತು, ಕಷ್ಟ ಸುಖ ಎಲ್ಲಕ್ಕೂ ಸಣ್ಣ ಒಂದೊಂದು ಸ್ಪಂದನದ ನಿರೀಕ್ಷೆಯಲ್ಲೇ ಇರ್ತೇವೆ. ಮತ್ತೆ  ಅದನ್ನ ನಿಭಾಯಿಸಕ್ಕಾಗದೇ ಇದ್ದಾಗ ದೊಡ್ಡ ದೊಡ್ಡ ಡೈಲಾಗ್ ಎತ್ಗೊಳ್ತೇವೆ. ಇದಕ್ಕಿಂತ ನಾವ್ಯಾರಿಗೂ ಯಾವುದೇ ನಿರೀಕ್ಷೆ ಹುಟ್ಟಿಸುವಂತ ಮಾತುಗಳ ಆಡದೇ ಇರೋದು ಒಳ್ಳೆಯದಲ್ವ?   ಇವತ್ತಿಗೆಷ್ಟು ಸಾಧ್ಯವೋ ಅಷ್ಟೇ ಬದುಕಿಗಿರಲಿ.  ನಾಳೆಗಳು ನಮ್ಮವೆಂಬ ಖಾತರಿ ಏನಿಲ್ಲ. ನೊಂದುಕೊಳ್ಳೋದಿಲ್ಲ ಅನ್ನೋ ಗ್ಯಾರಂಟಿ ನನ್ನೊಳಗೆ ಇರೋದು ಈ ಕಾರಣಕ್ಕೆ. ಇತ್ತೀಚೆಗೆ ಯಾರಾದ್ರೂ ನನಗೋಸ್ಕರ ಏನಾದ್ರು ಮಾಡ್ತೀನಂದ್ರೆ ಬೇಡ. ನಿಮಗೆ ಬೇಕಿದ್ರೆ ಮಾತ್ರ ಮಾಡಿ ಅಂತ ನಿರ್ದಾಕ್ಷಿಣ್ಯ ಹೇಳಿ ಬಿಡೋಣ ಅನ್ನಿಸತ್ತೆ. ಸುಮ್ನೆ ಅವರ ಕಂಗಳಲ್ಲಿ  ನನ್ನ ಒರಟು ನಡವಳಿಕೆಯ ಬಗೆಗೆ ಅಸಹನೆ ನೋಡಕ್ಕೆ ಇಷ್ಟವಾಗದೇ ಸುಮ್ನಿದ್ದುಬಿಡ್ತೇನೆ. ಮೌನ ಅನ್ನೋದು ಎಷ್ಟೆಲ್ಲ ಅರ್ಥಗರ್ಭಿತ! ಅದಕೇ  ನೀ ನನಗೆ ಇಷ್ಟವಾಗೋದು. ಮಾತಾಡದೇ ಮಾತಾಡುವ ನಿನ್ನ ನಗು ನನ್ನ ಖುಶಿಯಾಗಿಡೋದು. ನಾನು ಒಂಟಿ ಅನ್ನಿಸದಷ್ಟು ನನ್ನೊಳಗೆ ನೀನು ಇರೋದ್ರಿಂದಲೇ ಬಾಹ್ಯ ಸಂಬಂಧಗಳು ನನ್ನ ಎಷ್ಟು ನಲುಗಿಸಿದರೂ ನಾನು ಸ್ಥಿರವಾಗಿ ನಿಲ್ಲೋಕೆ ಸಾಧ್ಯವಾದದ್ದು.   ನನ್ನ ಗಳಿಕೆ ಏನೂ ಇಲ್ಲ ಇಲ್ಲಿ ಅಂತ ಅರ್ಥವಾಗಿಸಿದ್ದು ಕೂಡ ನೀನೇ.   ಇವತ್ತಿಗೆ ಸಾಕು ಮಾರಾಯಾ. ಈ ಬೆಳಗು ಮತ್ತೆ ಒಳಗಿಳಿಯಲಿ. ಇಲ್ಲಿ ಚೆಲ್ಲಿದ‌ ಮಂಜಿನ ಹನಿಗಳಂತೆ...




No comments:

Post a Comment