ಭಯಪಡುವಂತದ್ದೇನಿದೆ ಅಂತ ನೂರು ಭಾರಿ ಅಂದುಕೊಳ್ಳುತ್ತೇನೆ. ಸಾವಿನ ಬಾಗಿಲು ಮನೆಯೆದುರೆ ನಿಂತಿದೆ. ಅಲ್ಲೆಲ್ಲೋ ಯಾವುದೋ ದೇಶದಲ್ಲಿ ಅಂದುಕೊಂಡದ್ದು ರಾಜಧಾನಿಯಲ್ಲಿ ಅಂದುಕೊಂಡಿದ್ದು ಯಾವುದೋ ಊರಲ್ಲಿ ಅಲ್ಲಿ ಇಲ್ಲಿ ಅಂದುಕೊಂಡದ್ದೆಲ್ಲ ಹೋಗಿ ಇದೀಗ ಮನೆಯಲ್ಲೇ ಂದು ನಿಂತಿದೆ ಅನ್ನುವಾಗ ಗಾಭರಿ ಅಂತಲ್ಲದಿದ್ದರೂ ಒಂದಿಷ್ಟು ಭಂಡ ಧೈರ್ಯ ಬಂದಿರುವುದಂತೂ ಸುಳ್ಳಲ್ಲ. ಮೊದಲಿನ ಕೊರೋನಾ ಭಯ ಈಗ ಕಾಡ್ತಿಲ್ಲ. ಎಷ್ಟು ಜನ ಆರಾಮಾಗಿ ಬಂದಿಲ್ಲ ಎಷ್ಟು ಜನ ಕ್ವಾರಂಟೈನ್ ಲಿದ್ರೂ ಕೊರೋನಾ ಬರದೇ ಹಾಗೇ ಸುರಳೀತ ಇದ್ದಾರಲ್ಲ ಅಂತೆಲ್ಲ ಒಂದಷ್ಟು ಒಳ್ಳೆಯ ವಿಚಾರಗಳನ್ನೇ ತಲೆಯಲ್ಲಿ ತುಂಬಿಕೊಂಡರೂ 100 ರಲ್ಲಿ ಹತ್ತು ಪರ್ಸೆಂಟ್ ಆದರೂ ಬಂದುಬಿಡಬಹುದಾದ ಎಲ್ಲ ಭಯ ಒಳಗೊಳಗೆ ಕಾಡುತ್ತಿರುವುದು ಸುಳ್ಳಲ್ಲ. ಹೌದು ಬಹಳಷ್ಟು ಓದಾಯಿತು, ಕೊರೋನ ಕಾಲದ ಸತ್ಯಗಳು ಅಂತೆಲ್ಲ ಪೇಜುಗಟ್ಟಲೆ ಓದಿದ್ದು ಕೇಳಿದ್ದು ಆಯಿತು. ಬದುಕಿನ ಈದಡಲ್ಲಿ ಸಾವಿನ ಕುರಿತಾದ ಅಂತಹ ಭಯವೇನೂ ಇಲ್ಲ ಅಂದುಕೊಳ್ಳಬಹುದು. ಇತ್ತೀಚೆಗೆ ಸಾವು ಮೊದಲಿನಷ್ಟು ನನ್ನನ್ನು ಅಧೀರಳನ್ನಗಿಸುವುದಿಲ್ಲ. ಬಹುಶಃ ಬದುಕಿಗೆ ಬೀಳುವ ಪೆಟ್ಟುಗಳೇ ಮನುಷ್ಯನ ಇಷ್ಟು ನಿರುದ್ವಗ್ನವಾಗಿ ನಿಲ್ಲಿಸಿರಬಹುದು. ಯಾವ ಪಾಠಗಳೂ ಕಲಿಸದ ಜೀವನ ಸತ್ಯಗಳನ್ನ ಬದುಕು ಕಲಿಸುತ್ತದೆ. ಇದು ವೇದಾಂತವೋ ಇನ್ನೇನೋ ಅಲ್ಲ. ಒಂದು ನಿರ್ವಾತದಂತ ಶೂನ್ಯದಲ್ಲಿ ಕರ್ತವ್ಯಪ್ರಜ್ಞೆಯೊಂದಿಗೆ ನಿಲ್ಲಬಹುದಾದ ಗಟ್ಟಿತನ ಅಂತಲೇ ನಾನು ಅಂದುಕೊಳ್ಳುತ್ತೇನೆ.
ಹೀಗೇ ನಾಳೆಯೇ ನನ್ನ ಸಾವಿನ ಬಾಗಿಲಿನಲ್ಲಿ ನಿಲ್ಲಿಸಿದರೆ ನನ್ನ ಅಪೇಕ್ಷೆಗಳೇನು ಅಂತ ಒಮ್ಮೆ ಕೇಳಿಕೊಂಡೆ. ತಕ್ಷಣ ಮುಗಿಸಬಹುದಾದ ಅಥವಾ ಮುಗಿಸಲೇಬೇಕಾದ ಯಾವ
ಅನಿವಾರ್ಯತೆ ಈ ಬದುಕಿನೆಡೆಗೆ ನನಗಿದೆ ಅಂದರೆ ಇದ್ದರೆ ಮಾಡಬೇಕಾದ ಸಾವಿರ ಕೆಲಸಗಳಿವೆ. ಹಾಗಂತ ಇಲ್ಲದಿದರೆ ಅವ್ಯಾವುದೂ ನಡೆಯುವುದಿಲ್ಲ ಅಂತೇನಿಲ್ಲ. ಈ ವಿಶಾಲ ಜಗತ್ತಿಗೆ ನಾನೆಂಬುದು ಏನೇನು ಅನಿವಾರ್ಯವಲ್ಲ.ಹಾಗಂತ ನಾನಿರುವುದಾದರೆ ಈ ವಿಶಾಲ ವಿಶ್ವದ ಎಲ್ಲ ಅನಿವಾರ್ಯತೆಗಳೂ ನನಗಿವೆ. ಪ್ರತಿಯೊಬ್ಬರಿಗೂ ಇನ್ನೊಬ್ಬರಿಂದ ನಿರೀಕ್ಷೆಗಳಿವೆ. ಸುತ್ತಲಿನವರ ಯಾರ ನಿರೀಕ್ಷೆಯನ್ನು ನಾನು ಎಷ್ಟು ಪೂರೈಸಬಲ್ಲೆ ಎಂದು ಯೋಚಿಸಿದರೆ ಬಹುಶಃ ಅದರ ಲೆಕ್ಕ ಪ್ರತಿಶತಃ ಹತ್ತಕ್ಕೂ ಕಡಿಮೆ ಇರಬಹುದು. ಹಾಗೇ ನನ್ನ ನಿರೀಕ್ಷೆಗಳಿಗೆ ಇನ್ನೊಬ್ಬರು ಸಿಗಬಹುದಾದ ಪ್ರಮಾಣ ಕೂಡ ಅಷ್ಟೇ. ಆದರೆ ನಾವು ಇದನ್ನು ಅರ್ಥಮಾಡಿಕೊಳ್ಳದೇ ಸದಾ ನಮ್ಮ ನಿರೀಕ್ಷೆಯನ್ನು ಪ್ರತಿಶತಃ ತೊಂಬತ್ತರ ಪ್ರಮಾಣದಲ್ಲಿ ನಿರೀಕ್ಷಿಸುತ್ತೇವೆ. ಮತ್ತು ನಾವು ಸದಾ ಪ್ರತಿಶತಃ 10 ಕ್ಕೂ ಕಡಿಮೆ ಪ್ರಮಾಣದಲ್ಲಿ ಬೇರೆಯವರಿಗೆ ಒದಗುತ್ತೇವೆ.
ಸಾವಿನೆದುರಿನ ಸತ್ಯಗಳು ಬಹಳ. ನಮ್ಮ ಸಾವಿನ ಭಯಕ್ಕಿಂತ ನಮ್ಮವರ ಕಷ್ಟದ ಭಯ ನಮ್ಮನ್ನು ಕಾಡುತ್ತದೆ. ಬಹುಶಃ ಬೇರೆಲ್ಲ ರೋಗಕ್ಕಿಂತ ಜಾಸ್ತಿ ಕೊರೋನಾ ಇದನ್ನು ಹೇಳುತ್ತಿದೆ. ನಮ್ಮವರ ಖಾಳಜಿಯೇ ಮುಖ್ಯ ಅನ್ನುವ ಮನಸ್ಥಿತಿ ಸಾಮಾನ್ಯರನ್ನು ಎಚ್ಚರಿಸುತ್ತಿದೆ. ಆದರೆ ಬಹುಶಃ ನಮ್ಮೊಳಗಿನ ಭಯ, ನೋವು, ಕಾಳಜಿ ಇದೆಲ್ಲ ಬಹುಶಃ ನಮ್ಮವರಿಗೂ ಅರ್ಥ ಮಾಡಿಸಲು ಸೋಲುತ್ತೇವೆ. ನಮ್ಮಿಂದ ನಿಮ್ಮ ಜೀವ ರಿಸ್ಕಿನಲ್ಲಿಡುತ್ತಿದ್ದೇವೆ ಅನ್ನುವ ಗಿಲ್ಟ್ ಎಷ್ಟೊಂದು ಗಾಢವಾಗಿ ಕೊರೆಯುತ್ತಿದ್ದರೂ ಅದನ್ನು ತೋರಿಸಲಾಗುವುದಿಲ್ಲ. ಕೊರೊನಾ ಕಾಲದಲ್ಲಿ ಇದರೊಂದಿಗೆ ಕೆಲಸ ಮಾಡುತ್ತಿರುವವರ ಮನಸ್ಥಿತಿ ಹೇಗಿಬಹುದು ಅಂತ ಸಾವಿರ ಸಲ ಯೋಚನೆ ಮಾಡುತ್ತೇನೆ. ಸುರಕ್ಷತೆಯ ಸಾವಿರ ಕ್ರಮಗಳಿರಬಹುದು. ಆದರೂ ರಿಸ್ಕ್ ಇದ್ದೇ ಇದೆ. ಅಂಕಿ ಅಂಶಗಳ ನೋಡುತ್ತಿದ್ದರೆ ಈ ರಿಸ್ಕ್ ಎಷ್ಟು ದೊಡ್ಡದು ಅಂತ ಅನ್ನಿಸುತ್ತಲೇ ಇರುತ್ತದೆ.
ಶ್ರೀಮಂತರಿಗೆ ಒಳ್ಳೆಯ ಟ್ರೀಟ್ಮೆಂಟ್ ಬಡವನಿಗೆ ಅದಿಲ್ಲ ಭಯ, ಮಧ್ಯಮ ವರ್ಗದವರಿಗೆ ಬಿಲ್ಲುಗಳ ಯೋಚನೆ ಆದರೆ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸಾವಿನ ಕರಿ ನೆರಳು ಕಾಣದಿರದು. ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಯಾವುದೋ ಒಂದು ಕ್ಷಣದಲ್ಲಿ ಎದುರಾಗಿ ನಿಂತೇಬಿಡುತ್ತೇವೆ. ನನಗಲ್ಲ ಅನ್ನುವ ರೋಗದ ಎದುರೇ ಅಚಾನಕ್ಕ ನಿಂತಾಗ ದೇವರಿದ್ದಾನೆ ಅನ್ನುವ ಧೈರ್ಯವೊಂದೇ. ಎಲ್ಲವನ್ನೂ ಮೀರಿದ ಕೈಯೊಂದಿದೆ. ಯಾವತ್ತು ಅದು ನಮ್ಮ ಬದುಕಿನ ಕೊನೆಗೆ ನೆಪ ಬರೆದಿರತ್ತೆ ಯಾರಿಗೆ ಗೊತ್ತು?
ಈ ಕ್ಷಣ ಹೇಳಬೇಕಾದ ಮಾತುಗಳಿವೆ ಅಂತ ಬಂದು ಕೂತರೂ ಏನೂ ಇಲ್ಲದ ಮೌನವೊಂದೇ ನನ್ನಲ್ಲಿದೆ ಅಂದರೆ ಅದು ಸುಳ್ಳಲ್ಲ. ನಿನ್ನ ಒತ್ತಾಯದ ಮೇರೆಗೆ ಬರೆಯಲು ಕುಳಿತರೂ ಮನಸಿನ ಮಾತುಗಳನ್ನಷ್ಟೇ ಇಲ್ಲಿ ನೇರವಾಗಿ ಅಕ್ಷರಕ್ಕಿಳಿಸಬೇಕಾಗಿದೆ. ಹೌದು ಇಷ್ಟೊಂದು ಅಗಾಧವಾದ ಸ್ಥಿರತೆ ಗೆ ಕಾರಣವಾದರೂ ಏನು ಅಂತ ನೀನು ಕೇಳುತ್ತಿ. ನನಗೆ ಗೊತ್ತು. ಹೇಳಬೇಕಾದ ಜವಾಬ್ಧಾರಿ ನನ್ನದು ಹೇಳುತ್ತೇನೆ ಕೇಳು.
ಬದುಕು ಯಾವತ್ತೂ ನನಗೆ ಅನ್ನಿಸೋದು ನನ್ನನ್ನ ನಿರಪೇಕ್ಷದೆಡೆಗೆ ನಡೆಸುವ ಗುರು ಅನ್ನೋದು. ನಾನು ಮೊದಲೂ ಬಹುಶಃ ಹಾಗೇ ಇದ್ದೆ. ನನಗೆ ನನ್ನದೆಂಬ ಅಸ್ತಿತ್ವಕ್ಕೆ ಏನೂ ಇರಲಿಲ್ಲ. ಎಲ್ಲ ಅವರಿವರ ಖುಶಿ ಅವರ ಅಗತ್ಯ ಅವರ ಸಂಭ್ರಮ ಅವರ ನೋವುಗಳೇ ನನ್ನ ಬದುಕಾಗಿತ್ತು ಅಥವಾ ನನ್ನ ಒಳಗೊಂಡಿತ್ತು. ಬದುಕು ನೀನು ಹೀಗಿದ್ದರೆ ಆಗದು ಅಂತ ನನ್ನ ಮಗ್ಗಲು ಹೊರಳಿಸಿ ನನ್ನದೇ ಕನಸುಗಳ ಕಟ್ಟಿಕೊಟ್ಟಿತು. ನನ್ನದೇ ದಾರಿಯ ಹುಟ್ಟು ಹಾಕಿತು. ನನ್ನದೇ ಅಡಿಪಾಯ ನನ್ನದೇ ಅರಮನೆ ಎಲ್ಲ ಆಯಿತು. ಅದರಲ್ಲೇ ನಡೆದು ನಡೆದು ಇದು ನನ್ನದು ಎಂಬ ಮೋಹ ಶುರುವಾಯಿತು. ನನ್ನವರು ನನ್ನದು ನಾನು ಎಂಬುದನ್ನು ಹೇಳೀಕೊಟ್ಟ ಬದುಕೇ ಇಲ್ಯಾವುದೂ ನಿನ್ನದಲ್ಲ ನೀನು ಎಂದಿಗೂ
ಶೂನ್ಯವೇ ಎನ್ನುವುದ ಮತ್ತೆ ಹೇಳತೊಡಗಿತು. ಬಹುಶಃ ಈಗ ನನಗೆ ಅರ್ಥವಾಗುವ ಮಟ್ಟಿಗೆ ಎಲ್ಲವೂ ಬದಲಾಗಿದ್ದರೂ ನನಗೆ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ನಾನೆಷ್ಟು ಮುಳುಗಿ ಹೋಗಿದ್ದೆ ಈ ನನ್ನದೆಂಬ ಅಹಂಕಾರದ ನಶೆಯಲ್ಲಿ ಮೋಹದಲ್ಲಿ! ನನ್ನ ನಶೆಯ ಇಳಿಸಲು ಬದುಕು ಬಲವಾದ ಪೆಟ್ಟು ಕೊಡಲೇಬೇಕಿತ್ತು. ಬದುಕು ಕೂಡ ಅಮ್ಮನಂತೆ. ಅವಳ ಛಡಿಯೇಟಿಗೆ ಹತ್ತಿದ್ದ ನಶೆಯೆಲ್ಲ ಇಳಿಯಿತು ನೋಡು. ಈ ಪ್ರಪಂಚದಲ್ಲಿ ಕಾಯಕವೊಂದೇ ನನ್ನ ಕರ್ಮ. ಉಳಿದದ್ದೆಲ್ಲ ಅವನದೇ ಮರ್ಮ. ಅರ್ಥವಾಗುವ ಹೊತ್ತಲ್ಲಿ ಬಹಳ ತಡವಾಗಿತ್ತು. ಹೌದು ಬದುಕಿನ ಪೆಟ್ಟುಗಳು ಹೇಗಿರುತ್ತವೆ ಅಂದರೆ ಯಾರು ಕಲಿಯದಿದ್ದರೂ ಯಾವುದನ್ನು ಕಲಿಯದಿದ್ದರೂ ಕಲಿಸುತ್ತದೆ ಅದು. ಸುಪ್ಪತ್ತಿಗೆಯಲ್ಲಿ ಹುಟ್ಟಿದವನಿಗೂ ಟಾಯ್ಲೆಟ್ ತೊಳೆಯುವುದು ಕಲಿಸುತ್ತದೆ! ಭಿಕಾರಿ ಬದುಕಲ್ಲೂ ಆತ್ಮಾಭಿಮಾನ ಕಲಿಸುತ್ತದೆ, ಸೋತವನಿಗೆ ಗೆಲ್ಲುವುದ ಕಲಿಸುತ್ತದೆ, ಗೆದ್ದವನಿಗೆ ಸೋಲುವುದ ಕಲಿಸುತ್ತದೆ.
ನಾನೆಂಬ ಅಹಂಕಾರ ಇಳಿಸುತ್ತದೆ, ನಾವೆಂಬ ಮಮಕಾರ ಬೆಳೆಸುತ್ತದೆ. ಬದುಕನ್ನು ಕಟ್ಟುವುದೂ ಗೊತ್ತು, ಬದುಕನ್ನು ಕೆಡುವುದೂ ಗೊತ್ತು, ಮಕ್ಕಳಲ್ಲಿ ಮುಗ್ಧತೆ ಹಾಳಾಗದಿಲಿ ಅಂತ ನಾವು ಮುಚ್ಚಟೆ ಮಾಡಿದರೆ ನಾಳೆ ಸೂರ್ಯನ ಬೆಳಕೂ ನೋಡಲು ಕಷ್ಟವಾಗಬಹುದು. ಹಾಗೇ ಬದುಕು ಕಲಿಸುವ ಪಾಠಗಳಿಗೆ ತೆರೆದುಕೊಳ್ಳದಿದ್ರೆ ಅದರ ಫಲ ಘೋರವಾಗಬಹುದು. ಸಂತೋಷವನ್ನು ಹುಡುಕಿ ಹೊರಡುವವದಕ್ಕಿಂತ ಸಿಕ್ಕ ಎಲ್ಲದರಲ್ಲೂ ಸಂತೋಷ ಕಾಣುವವನ ಮನಸು ಹೆಚ್ಚು ಆರೋಗ್ಯವಾಗಿರಬಲ್ಲುದು. ಕನಸುಗಳ ಸಾವಿರ ಕಾಣುವುದಕ್ಕಿಂತ ಒಂದೆರಡು ವಾಸ್ತವದ ಕೆಲಸ ಜಾಸ್ತಿ ಖುಶಿ ಕೊಡಬಹುದು. ಹಾಗಂತ ಕನಸು ಗುರಿ ಇರಬಾರದೆಂದೇನೂ ಅಲ್ಲ. ಕ್ರಿಯೆಗೆ ಇಳಿಯದ ಕನಸುಗಳಿಗೂ ರಾತ್ರಿ ಬೀಳೋ ಕನಸುಗಳಿಗೂ ಅಂತ ವ್ಯತ್ಯಾಸಗಳೇನೂ ಇಲ್ಲ. ದೊಡ್ಡ ದೊಡ್ಡದರ ಬೆನ್ನು ಹತ್ತಿದವರೆಲ್ಲ ಖುಶೀಯಾಗಿಯೇ ಇದ್ದಾರೆಂದಲ್ಲ. ಒಳಗಿನ ಅಗತ್ಯಗಳ ಅರಿತುಕೊಂಡವರು ಹೆಚ್ಚು ಖೂಶಿಯಾಗಿಯೂ ಹೆಚ್ಚು ಸ್ಥಿತಪ್ರಜ್ಞರೂ ಆಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಕನಸು ಮತ್ತು ವಾಸ್ತವದ ನಡುವಿನ ಬಹುದೊಡ್ಡ ಅಂತರವನ್ನು ಕಲಿಸುವುದೇ ಬದುಕು. ಕರ್ಮ ಸಿದ್ಧಾಂತದ ಸುಖ ಕಲಿಸುವುದೂ ಬದುಕು.
ನಮ್ಮವರೆಂದುಕೊಳ್ಳುವವರ ಸಂತೋಷದಲ್ಲಿ ನಮ್ಮ ಎಲ್ಲ ಸಂತೋಷಗಳು ತನ್ನಂತಾನೇ ಅಡಕವಾಗಿಬಿಡುತ್ತವೆ. ಹಾಗಂತ ಸಂತೋಷದ ಬೆನ್ನು ಬಿದ್ದು ಪ್ರಜ್ಞೆಯ ಹಾಗೂ ಮೌಲ್ಯದ ಮಾರ್ಗ ತೋರದಿದ್ದರೆ ತಪ್ಪಾಗುತ್ತದೆ ಯಲ್ಲವೆ? ನಮ್ಮ ನಮ್ಮ ಕೆಲಸ ನಾವು ಮಾಡಲೇಬೇಕು. ಅರಿತುಕೊಳ್ಳುವ ಸಾಮಥ್ರ್ಯ ಇದ್ದವರು ಅರಿತುಕೊಳ್ಳುತ್ತಾರೆ. ಅರಿಯದಿದ್ದವರು ನಮ್ಮನ್ನೂ ದೂರಮಾಡುತ್ತಾರೆ. ಇದು ಕೂಡ ಪ್ರಕೃತಿಯದೇ ನಿಯಮ. ಈ ಬದುಕಿಗೆ ಯಾರು ಏನು ಮಾಡಬಹುದು ಮಾಡಬೇಕು ಎಂಬುದನ್ನು ಅವನೇ ನಿರ್ಣಯಿಸುತ್ತಾನೆ ಅಂದಮೇಲೆ
ನಮ್ಮದಲ್ಲದ ಕಡೆ ಮೂಗು ತೂರಬಾರದು ಎಂಬುದು ಕೂಡ ಅರ್ಥಮಾಡಿಕೊಂಡು ಸುಮ್ಮನಿರಬೇಕು. ವಿವೇಕ ಮತ್ತು ಪ್ರಜ್ಞೆಯ ಮೂಲದಲ್ಲಿ ಹುಟ್ಟಿಕೊಳ್ಳುವ ಸಂತೋಷ ನಮ್ಮದಿರಬೇಕೆ ವಿನಃ ಮೋಹದ ಮಮಕಾರದ ಸಂಭ್ರಮಗಳು ಬಹಳ ಕಾಲ ಬಾಳಲಾರದು.
ಈ ಸಾವೆಂಬುದು ಎಷ್ಟೆಲ್ಲ ಎಚ್ಚರಿಕೆ ನೀಡುತ್ತದೆ. ನನ್ನ ಸಾವಿನ ಎದುರು ನಾನಿಂತರೆ ನನಗದು ಗಿಲ್ಟ್ ಅಲ್ಲ, ಭಯ ಅಲ್ಲ, ಪಾಪವಲ್ಲ. ಅದೇ ನಿನ್ನನೋ ಇನ್ಯಾರನ್ನೋ ನನ್ನ ಜೊತೆ ನಿಲ್ಲಿಸಿಕೊಂಡರೆ ಅದು ಘೋರ ಪಾಪ, ಅದು ನನ್ನ ಪಾಲಿನ ಶಾಪ ಕೂಡ. ಎಂತದೇ ಸಂದರ್ಭದಲ್ಲೂ ಈ ಗಿಲ್ಟ್ ನನ್ನೊಳಗೆ ಕಾಡದಂತೆ ನಾನು ನಡೆದುಕೊಳ್ಳುವುದೇ ನನಗೆ ವಿಹಿತ. ಇದನ್ನು ಅರಿವಾಗಿಸುವುದೇ ಈ ಕ್ಷಣ. ಬಹುಶಃ ಬಹಳ ಜನರಿಗೆ ಇದು ಕೂಡ ಅರ್ಥವಾಗವುದೇ ಇಲ್ಲವೇನೋ. ಅಥವಾ ಅಂತಹ ಆತ್ಮಗಳ ಅಹಂಕಾರ ಇದನ್ನೂ ಮೀರಿದ್ದಾಗಿರಬಹುದು. ಬೆಳಕು ಅವರ ಒಳಗೆ ಸುಳಿಯದು.ಕತ್ತಲೆಗೆ ಇನ್ಯಾರನ್ನೋ ಹೊಣೆಯಾಗಿಸಿಕೊಂಡೇ ತಳ್ಳಿಬಿಡುತ್ತಾರೆ ಅನ್ನೋದು ಕೂಡ ಸತ್ಯ.
ಬಹಳ ಸಲ ಯೋಚಿಸುತ್ತೇನೆ ಯಾರನ್ನೂ ಬಿಡದ ಸಾವು ಅದರೆದುರು ನಿಂತು ಇಷ್ಟೆಲ್ಲ ಅರ್ಥವಾಗುವ ಹೊತ್ತಿಗೆ ಬದುಕೇ ಮುಗಿದಿರುತ್ತದೆಯಲ್ಲ!!?ಏನು ಪ್ರಯೋಜನ ಅರ್ಥವಾಗಿ ಅಂತ.ಗೊತ್ತಿಲ್ಲ. ನನಗಂತೂ ವಿಷಯಾಸಕ್ತಿಗಿಂತ ವಿಷಯ ವಿಚಾರಗಳೇ ಆಸಕ್ತಿಯುತ ಅನ್ನಿಸುತ್ತಿವೆ ಇತ್ತೀಚೆಗೆ. ಯಾರನ್ನಾದರೂ ದ್ವೇಷಿಸುವುದೆಂದರೆ ನನ್ನನ್ನೇ ದ್ವೇಷಿಸಿಕೊಂಡ ಭಾವ ಒಳಗೆ ಅಹಿತ ಅನ್ನಿಸಬಿಡುತ್ತದೆ. ಪರಮಾತ್ಮ ಎಲ್ಲರಿಗೂ ಒಳ್ಳೆಯದನ್ನೇ ಮಾಡಹೊರಟರರೆ ಈ ಕರ್ಮಗಳಿಗೂ ಬೆಲೆಯಿರುತ್ತಿರಲಿಲ್ಲವೇನೋ. ಹಾಗಾಗಿ ಒಂದು ನಿಶಾಂತ ಮನಸ್ತಿತಿಯ
ಕಪ್ಪಿನೊಂದಿಗೆ ಕೂಡ ಬೆಳಕಿನಷ್ಟೇ ಸ್ಥಿರವಾಗಿ ನಿಲ್ಲಬೇಕೆಂಬುದು ಒಳಗಿನಿಂದ ದೃಡವಾಗಿಸುತ್ತಿದೆ. ಸಾವು ನೋವುಗಳಿಗೆ ಸಮಾಧಾನವೇ ಇಲ್ಲ ಅಂದುಕೊಳ್ಳುತ್ತಿದ್ದ ನಾನು ಸಾವಿನೊಂದಿಗೂ ಅನಿವಾರ್ಯವಲ್ಲ, ನೋವಿನೊಂದಿಗೂ ಅನಿವಾರ್ಯವಲ್ಲ ಎಂಬ ಸತ್ಯ ನಿಧಾವಾಗಿ ಒಳಗಿಳಿಸಿಕೊಳ್ಳುತ್ತಿದ್ದೇನೆ. ಬಹುಶಃ ಪ್ರಪಂಚದ ಮೋಹ ಮತ್ತು ಮಾಯೆಗಳಿಂದ ಸಂಪೂರ್ಣ ತೊರೆದುಕೊಳ್ಳಲು ಸಾಧ್ಯವಾಗದಿದ್ದರೂ ಇದು ನನಗೆ ನನ್ನ ಜಾಗದಲ್ಲಿ ನೆಮ್ಮದಿ ಕೊಡಬಹುದು. ಬಹಳಷ್ಟು ಸಲ ನಾವು ನಮ್ಮ ಸುತ್ತಮುತ್ತಲಿರುವವರನ್ನೂ ನಮ್ಮವರನ್ನೂ ಅಂಡರ್ ಎಸ್ಟಿಮೇಟ್ ಮಾಡಿಬಿಡುತ್ತೇವೆ. ಅವರಿಗೆ ನಮ್ಮ ಸತ್ಯಗಳು ತಿಳಿಯುವುದೇ ಇಲ್ಲ ಅನ್ನುವುದು ಅದರ ಭಾಗದಲ್ಲೊಂದು. ಬಹುಶಃ ನಮ್ಮ ಬಗ್ಗೆಯೂ ಬಹಳ ಜನ ಇದನ್ನೇ ಮಾಡುತ್ತಿರುತ್ತಾರೆ. ಇದರಿಂದಾಗಿ ಮೌನ ಅಥವಾ ಸಹನೆಯಿಂದುರುವವರು ದಡ್ಡರೂ ಉಪೇಕ್ಷಿತರು ಅಥವಾ ಸಾಮಥ್ರ್ಯವಿಲ್ಲದವರೂ ಅನ್ನಿಸಿಕೊಳ್ಳುತ್ತಾರೆ. ಪ್ರಪಂಚ ದೊಡ್ಡ
ದನಿಯಿಂದಾಗಿ ಹೆಚ್ಚು ಗುರುತಿಸಿಕೊಳ್ಳುತ್ತದೆ. ಆದರೆ ದೊಡ್ಡವರಾಗುವುದು ದನಿಯಿಂದ ಸಾಧ್ಯವಿಲ್ಲ, ದೊಡ್ಡವರಾಗಲು ಬೆಟ್ಟದಷ್ಟು ಶ್ರಮ ಬೇಕು, ಸಾಗರದಷ್ಟು ಸಹನೆ ಬೇಕು, ಆಕಾಶದಷ್ಟು ವೈಶಾಲ್ಯತೆ ಬೇಕು. ತಪ್ಪುಗಳ ಕ್ಷಮಿಸಬೇಕು, ನಮ್ಮ ನಾವೇ ತಿದ್ದಿಕೊಳ್ಳಬೇಕು ಎಲ್ಲಕ್ಕಿಂತ ಜಾಸ್ತಿ ಸಮಯ ಅನ್ನುವ ಈ ಚಿಕ್ಕ ಅಂತರದಲ್ಲಿ ನಾವು ಕಳೆದೇಹೋಗುತ್ತೇವೆ ಎನ್ನುವ ಪ್ರಜ್ಞೆ ಬೇಕು. ಇವೆಲ್ಲದರ ಜೊತೆ ಮಾತ್ರ ದೊಡ್ಡವರಾಗಬಹುದು. ವಯಸ್ಸು ಕೊಡುವುದಿಲ್ಲ ಇದನ್ನು ಪುಸ್ತಕಗಳು ಕೊಡುವುದಿಲ್ಲ ಇದಕ್ಕೆ ಮನಸ್ಸು
ನಮಗೆ ನಾವೇ ಸಿದ್ದಿಸಿಕೊಳ್ಳಬೇಕು. ತನ್ನಿಂದ ತಾನೇ ನಡೆಯುವ ಪ್ರಕ್ರಿಯೆಗಳೆಲ್ಲ ಇವೆಲ್ಲ. ಪ್ರತಿಯೊಂದನ್ನೂ ಶ್ರಮದಿಂದಲೇ ಸಿದ್ಧಿಸಿಕೊಳ್ಳಬೇಕು. ಬಾಯಲ್ಲಿ ಹೇಳುವ ಆಚಾರಕ್ಕಿಂತ ಬದುಕುವ ವಿಚಾರ ಬಹಳ ದೊಡ್ಡದು. ಇದನ್ನು ಅರ್ಥಮಾಡಿಕೊಂಡರೆ ಪ್ರಪಂಚ ಹೇಗಿದ್ದರೂ ಕಹಿ ಅನ್ನಿಸುವುದಿಲ್ಲ. ಅದಕ್ಕೇ ಸಾವು ಭಯಭೀತರಾಗಿಸುವುದಿಲ್ಲ. ಬದುಕು ಹೊರೆಯೆನ್ನಿಸುವುದಿಲ್ಲ.
ಬದುಕಿನ ಎಂತದ್ದೇ ಸ್ವಾರ್ಥ ಗಳಿರಲಿ. ಪ್ರತಿಯೊಬ್ಬರಿಗೂ ಇರುವಂತದ್ದೇ. ಅವರವರ ಬದುಕಿನ ಹೋರಾಟದ ಜೊತೆ ಅವರವರೆ ಹೀಗೆ ಬಂದು ನಿಲ್ಲಲೇಬೇಕು ಒಂದಲ್ಲ ಒಂದು ದಿನ.ಒಳಗಿನ ಆತ್ಮದ ಪಶ್ಚಾತ್ತಾಪದ ಬೆಂಕಿ ಬೇಯಿಸದಷ್ಟು ನಮ್ಮ ಬದುಕಿನ ದಾರಿ ಶುದ್ಧವಾಗಿದ್ದರೆ ಈ ಯಾತ್ರೆಗೆ ಅಂತಿಮ ಹೇಳಲು ಹಿಂಜರಿಕೆಯಿಲ್ಲ. ಹೀಗೆ ಇವತ್ತು ನಮ್ಮನ್ನು ನಿಲ್ಲಿಸಿ ಬದುಕಿನ ಸಮಯದ ಅಮೂಲ್ಯತೆ ಸಾರಿದ ಕೊರೊನಾಕ್ಕೆ ಧನ್ಯವಾದ ಹೇಳಲೇಬೇಕಲ್ಲವಾ?
😊😊
--ಪ್ರಿಯಾ