ನಾನು ಸೋತಾಗೆಲ್ಲ ನಿನ್ನ ಅರಸುತ್ತೇನೆ.
ಪಕ್ಕದಲ್ಲಿ ನೀನಿದ್ದರೆ ಅದೇನೋ ನೆಮ್ಮದಿ
ಹುಡುಕುವ ಹಾಗಿಲ್ಲ
ಗೊತ್ತು ಬುದ್ದಿಗೆ ಅಲ್ಲಿ ನೀನಿರುವುದಿಲ್ಲ.
ನಾ ಒಂಟಿ ಅಂದುಕೊಳ್ಳುವ ಸತ್ಯ
ಮನಸ್ಸಿಗೆ ಹಿತವಲ್ಲ.
ಅದಕ್ಕೆಂದೇ ಸತ್ಯಕ್ಕೆ ಕುರುಡಾಗಿ
ಕಣ್ಣು ಮುಚ್ಚಿಬಿಡುತ್ತೇನೆ.
ನೀನಿದ್ದಿ ಎಂಬ ಭ್ರಮೆಯಿಂದ ಬದುಕುತ್ತೇನೆ.
ಬದುಕಿಸುವುದು ಭ್ರಮೆಯಾದರೇನು?
ಎಲ್ಲಕ್ಕಿಂತ ದೊಡ್ಡದು ಬದುಕುವುದೇ ಅಲ್ಲವಾ?
ಉದ್ದೇಶ ವಿಲ್ಲದಿದ್ದರೂ ಬದುಕುವುದು
ಅನಿವಾರ್ಯ!!
ಅವತ್ತೆಲ್ಲ ಒಂಟಿತನವೇ ಬದುಕಾಗಿದ್ದಾಗ
ಬದುಕಲ್ಲಿ ಇಂತ ನಿರೀಕ್ಷೆಗಳಿಗೆ
ಜಾಗವೇ ಇರಲಿಲ್ಲ!!
ಇದೀಗ ನಿರೀಕ್ಷೆಗಳಿಗೆ ಜೀವವಿದೆ!
ನೀನಿಲ್ಲ ಎಂಬ ಸತ್ಯಕ್ಕೂ
ಜೀವವಿದೆ!
ಅದಕ್ಕೆಂದೇ ಅಳುವಿದೆ.
ಕಂಬನಿಯಿದೆ.
ಹಠವಿದೆ.
ಮತ್ತೆ ಮಡಿಲಾಗು ಅಂತ ಕೇಳಲಾಗದ ಅಸಹಾಯಕತೆಯಿದೆ.
ಮಡಿಲಾಗಬೇಕಾದ ಮನಸುಗಳಿಗೆಲ್ಲ
ಅವರದ್ದೇ ಆದ ಬದುಕಿದೆ.
ಕನಸಿದೆ. ಸಂಭ್ರಮವಿದೆ.
ಅದರಲ್ಲಿ
ನನ್ನೀ ಅಳುವಿನ ಸಾಂತ್ವನವಿಲ್ಲ.
ನನ್ನ ಸೋತ ಸೊರಗುವಿಕೆಯ ಕಹಿ
ನಗುವಿಲ್ಲ.
ಬೇಡ... ಬದುಕು ಒಂಟಿಯೇ....
ನನಗೆ ಯಾರಿಲ್ಲ.
ಯಾರಿಲ್ಲ ನನಗೆ.
ಯಾರೂ ಬೇಡ..
ಬೇಡ ನನಗ್ಯಾರೂ...................