ಮಳೆಯೊಂದಿಗೆ ಮನ...... |
ಇವತ್ತು ಈ ವರ್ಷದ ಮೊದಲ ಮಳೆ ಬಂತು.. ಮಳೆಯೊಂದಿಗೆ ನಿನ್ನ ನೆನಪಾಯಿತು ಅನ್ನೋದು ವಿಶೇಷವಲ್ಲ.
ನಿನ್ನ ನೆನಪಾಗದಿದ್ದರೆ ಅದು ವಿಶೇಷ. ಹಾಂ ಮಳೆಯ ಈ ತಂಪುಗಾಳಿಯೊಂದಿಗೆ ಒಂದಿಷ್ಟು ಗುಡುಗೂ ಮಿಂಚೂ
ಈ ಮಳೆಯೊಂದಿಗೆ ವಾತಾವರಣವನ್ನಾಕ್ರಮಿಸಿಕೊಂಡದ್ದೂ ವಿಶೇಷವಲ್ಲ. ಆದರೆ ಮಳೆ ತಂದ ಮಣ್ಣಿನ ಸುವಾಸನೆಯಿದೆಯಲ್ಲ!!
ಅದೊಂತರಾ ಬೆವರಿನ ಕಂಪು ಕೊಡುವ ಸುಖವಿದ್ದಂತೆ.ಈ ಮಣ್ಣಲ್ಲಿ ಅದೆಷ್ಟು ರಸವಿದೆಯೇನೋ ಎಂಬಂತೆ ಭೂಮಿಯನ್ನಾವರಿಸಿಕೊಂಡ
ತಂಪಿನ ಕಂಪಿದೆಯಲ್ಲ ಅದು ಮೂಗಿನ ಹೊಳ್ಳೆಗಳನ್ನು ಸೇರಿ ಉಸಿರು ತುಂಬಿಕೊಂಡ ಜೀವದಲ್ಲೆಲ್ಲ
ಒಂದು ನವಿರಾದ ಕಂಪನವನ್ನು ಹುಟ್ಟಿಸಿದ್ದು ಸುಳ್ಳಲ್ಲ. ಅದಕ್ಕೆಂದೇ ವರ್ಷ ವರ್ಷ ನಾನು ಈ ಮಳೆಗಾಗಿ
ಕಾಯುವುದೂ ಸುಳ್ಳಲ್ಲ. ನೀನಿರದ ಎಷ್ಟೋ ವರ್ಷಗಳಲ್ಲಿ ಈ ಕಂಪು ನನ್ನ ಜೀವಂತವಾಗಿಸಿಟ್ಟ
ಸಂಜೀವಿನಿ ತಾನೆ? ನನ್ನಂತೆ ಅದೆಷ್ಟೋ ಜೀವಗಳ ಒಳಹೊರಗೆ ಈ ಮಣ್ಣ ಕಂಪಿನ ಹಸಿಯಿದೆ
ಎಂದು ನಾ ಬಲ್ಲೆ. ಅಂತವರ ಮನಸೆಲ್ಲ ಒಮ್ಮೆ ಹಸಿಯಾಗಲೆಂದೇ ಈ ನೆನಪು.. ಈ ಬರಹ..
ಈ ಭಾವಗಳ ಪ್ರಪಂಚದಲ್ಲಿ ಅಚಾನಕ್ ಒಂದು ದಿನ, ಒಂದು ಕ್ಷಣ, ತುಂಬ ಆಪರೂಪದ
ಕ್ಷಣವೊಂದರಲ್ಲಿ ಅವಳ ಪರಿಚಯವಾಯಿತು. ಅವಳೇ ಮಾನವೀಯ ಮೌಲ್ಯ. ಅವಳ ಕುರಿತು
ಯಾರ್ಯಾರು ಎಷ್ಟೆಷ್ಟು ದೊಡ್ಡ ದೊಡ್ಡ ಮಾತು ಹೇಳಿದ್ದಾರೆ ಅದೆಲ್ಲ ಇಲ್ಲಿ ಹೇಳಹೊರಟರೆ ಅದು
ಶಾಲಾ ಮೇಷ್ಟ್ರು ಒಬ್ಬರ ಭಾಷಣವಾದೀತು. ಆದರೆ ಆ ಸಖೀಯ ಪರಿಚಯ ನನಗಾದುದು ನನ್ನ
ಸೌಭಾಗ್ಯವೆಂದೇ ಹೇಳಬೇಕು ಎಲ್ಲೆಲ್ಲೋ ಅಲ್ಲ. ನನ್ನ ಒಡನಾಡಿಯಾಗಿ ನನ್ನ ಸುತ್ತಮುತ್ತಲ
ಬದುಕಿನೊಂದಿಗೆ ಸಹನೆಯಿಂದ, ಪ್ರೀತಿಯಿಂದ ಬದುಕಲು ಕಲಿಸಿದ್ದೇ ಆ ಮಾನವೀಯತೆ ಯೆಂಬ
ಆಪ್ತ ಸಖೀ. ಬದುಕಿನ ವಾಸ್ತವದಲ್ಲಿರುವ ಸಾವಿರ ಸಂಕಷ್ಟಗಳನ್ನು ನೋಡಲು ಮತ್ತದನ್ನು
ಅನುಭವಿಸಲು ಆ ನೋವನ್ನು ಸಂತೈಸಲು ಕಣ್ಣುತುಂಬಾ ನೀರು ತುಂಬಿಕೊಂಡು
ನೊಂದವರ ಬದುಕಿನ ಸಾಂತ್ವನವಾಗಲು ಹೇಳಿಕೊಟ್ಟ ಅವಳನ್ನು ನಾನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಸಾವಿರ ಜನರಿಗೆ ಆಧಾರವಾಗೋ ಶಕ್ತಿ ನನ್ನಲ್ಲಿ ಇಲ್ಲದಿರಬಹುದು.
ಪಕ್ಕದಲ್ಲಿರುವ ನನ್ನ ಗೆಳತಿಯ ಕೈಗೆ ಕೈನೀಡೋ ಶಕ್ತಿಯಿದ್ದರೆ ಅದಷ್ಟನ್ನಾದರೂ ಮಾಡುವ ಮನಸ್ಸು ಕೊಟ್ಟದ್ದು ಈ ಮಾನವೀಯತೆಯೇ............
ನನ್ನದೇ ತಪ್ಪುಒಪ್ಪುಗಳ ಬದುಕಲ್ಲಿ ನೋವುಗಳನ್ನು ಬದುಕಲು ಕಲಿಸಿದ್ದು ನೋಯುವ ರೋಗವಲ್ಲ
ಎಂಬುದು ನಿನಗೆ ಅರ್ಥವಾಗಿಸಲಾರೆ ನಾನು. ನೋವನ್ನು ನೋವು ಅಂತ ಒಪ್ಪಿಕೊಂಡರೆ
ಸಾಕು, ಅರ್ಧ ನೋವಿನ ಭಾರ ಕಮ್ಮಿಯಾಗುತ್ತದೆಯೆಂಬ ಸತ್ಯ ಗೊತ್ತಿರೋದ್ರಿಂದಲೇ ಇನ್ನೊಬ್ಬರ
ನೋವನ್ನೂ ಒಪ್ಪಿಕೊಳ್ಳುತ್ತ ಅನುಭವಿಸುತ್ತೇನೆ ನಾನು. ಪ್ರಪಂಚದ ತುಂಬಾ ನೋವು ಮಾತ್ರವಲ್ಲ.
ನಲಿವೂ ಇದೆ ಬೇಕಾದಷ್ಟು. ನನಗೇನೋ ನೋವನ್ನು ಹಂಚಿಕೊಳ್ಳಲಾರದ ಒಪ್ಪಿಕೊಳ್ಳಲಾರದವರೊಂದಿಗೆ
ನಲಿವನ್ನು ಹಂಚಿಕೊಳ್ಳೆಲೆಂಬುದು ಒಂದು ಅರ್ಧ ಸತ್ಯದಂತೆ ತೋರುತ್ತದೆ. ನಲಿವನ್ನು ಹಂಚುವುದೂ ಸಹ ಒಂದು
ಸುಂದರ ಕಲೆಯೇ..... ಮನುಷ್ಯ ತನ್ನೆಲ್ಲ ನೋವುಗಳನ್ನು. ಕಷ್ಟ ಸುಖಗಳನ್ನು ಅನುಭವಿಸುವುದು ಮತ್ತದನ್ನ ಹೇಳಿಕೊಳ್ಳುವುದೂ
ಸಾಮಾನ್ಯ ವಿಷಯ. ಇನ್ನೊಬ್ಬರ ಬದುಕನ್ನ ಸಂಭ್ರಮದಿಂದ ಇಟ್ಟುಕೊಳ್ಳೋದಕ್ಕಾಗಿ, ನಮ್ಮ ನಮ್ಮ
ಕಷ್ಟ ಮರೆತು ನಗುವನ್ನು ನಲ್ಮೆಯನ್ನು ಹಂಚುವವರಿರುತ್ತಾರಲ್ಲ.ಅವರನ್ನು ನೋಡಿ ನಾನು ತುಂಬ
ಕಲಿಯುತ್ತೇನೆ. ಮತ್ತವರ ಪ್ರೌಢತೆಗೆ ಬೆರಗಾಗುತ್ತೇನೆ.
ಉದಾಹರಣೆಗೆ ಪುಟ್ಟ ಪುಟ್ಟ ಗುಬ್ಬಚ್ಚಿಗಳು... ನಮ್ಮ ಮನೆಯ ನಾಯಿ ಮರಿಗಳು..
ನೀರಲೆಯ ಮೇಲಿನ ಮಳೆ ಹನಿಗಳು.....ಏನನ್ನೂ ಕೇಳದ ತಾಯಂದಿರು...ಪೃಕೃತಿಯ
ತುಂಬಾ ಇಂಥ ನೂರು ಉದಾಹರಣೆಗಳಿವೆ ........ಸ್ವಾರ್ಥವೇ ಪ್ರಪಂಚದ ದೃಷ್ಟಿಕೋನವಾದರೆ
ಯಾವುದೂ ಒಳಗಣ್ಣ ತೆರೆದು ಕಾಣಲಾಗದು. . ಭಾವಗಳೆಂಬುದು ಬರೀ ಭ್ರಮೆಯಾದರೆ
ಜೀವಂತಿಕೆ ಎಂಬುದಕ್ಕೆ ಅರ್ಥವಿರದೇ ಹೋಗುತ್ತದೆ.. ಮನುಷ್ಯ ನಂಬಿಕೆಗಳೆಂದರೆ ಭಾವಗಳ
ಜೀವಗಳ ಒಂದು ಸಮ್ಮೇಳನ. ಮಾನವೀಯ ಮೌಲ್ಯವೆಂಬುದು ಈ ಎಲ್ಲ ಜೀವಂತಿಕೆಯ
ಒಡನಾಡಿ. ಎಲ್ಲ ಪ್ರೀತಿಗಳೂ ಮನಸಿನ ವ್ಯಾಪಾರಗಳೆಂಬುದನ್ನೇ ಒಪ್ಪುವುದಾದರೆ 'ಕೊಡುವುದೇನು
ಕೊಂಬುದೇನು?' ಬೇಡಿಕೆಗಳೇನು ಅಂಥ ಗೊತ್ತಿರದೇ ವ್ಯಾಪಾರ ಮಾಡಲಾರೆ. ಬೇಡಿಕೆಗಳ ಪೂರೈಸದೇ
ನಿನ್ನ ವ್ಯಾಪಾರ ಪೂರ್ಣವಾಗದಲ್ಲ! ನಿನ್ನ ಅಗತ್ಯಗಳನ್ನು ಎದುರಿಗಿಟ್ಟು, ಅವರ ಅಗತ್ಯಗಳ
ಅರಿವಾಗಿಸಿಕೊಂಡಾಗಲ್ಲವೇ ವ್ಯಾಪಾರ ಪೂರ್ಣವಾಗೋದು!ಎಲ್ಲಿಯ ವರೆಗೆ ಎದುರಿನವರ
ಅಗತ್ಯ ನಮಗೆ ಅರಿವಾಗದೋ ಅಲ್ಲಿಯವರೆಗೂ ನಾವು ಪೂರ್ಣ ಪ್ರಮಾಣದ ವ್ಯಾಪಾರಿಗಳಾಗಲು
ಸಾಧ್ಯವಿಲ್ಲವಲ್ಲ. ಕೇವಲ ನಮ್ಮ ಅಗತ್ಯಗಳೊಂದೇ ಈ ಬದುಕಿನ ವ್ಯಾಪಾರ ಮುಗಿಸುವುದಿಲ್ಲ.
ನೋವು ನಲಿವುಗಳು ಸಂಬಂಧಗಳಿಗೆ ರಾಯಭಾರಿಗಳಿದ್ದಂತೆ.. ಮಾನವೀಯತೆ, ಖಾಳಜಿ ಅವುಗಳ
ಜೊತೆಗೆ ಇರುವ ಕೊಂಡಿಗಳು. ಎಲ್ಲವೂ ಸೇರಿ ಬದುಕು.. ಬದುಕಿನ ದೋಣಿಯಲ್ಲಿ ಹೀಗೊಂದು
ಸುಮ್ಮನೇ ಬರಹ. ಈ ಮಳೆಯೊಂದಿಗೆ ಮಣ್ಣಿನ ಕಂಪಿನೊಂದಿಗೆ ಎಷ್ಟೆಲ್ಲ ಮಾತು ಹರಿದು
ಬಂದಿತಲ್ಲವಾ? ಹಾಂ ಮೊದಲ ಮಳೆಗೆ ಒಂದಿಷ್ಟು ಮಣ್ಣು ಕರಡಿ ಕರಡಿ ಕೆಂಪು ನೀರು ಹರಿಯುವಂತೆ..
ಈ ಹೊತ್ತಿನ ಕಾಗದದ ದೋಣಿಗಳು ಅದೇ ಕೆಂಪು ಮಣ್ಣಿನ ನೀರಿನಲ್ಲಿ ತೇಲಿ ಬಿಡುತ್ತಿರುವೆ.
ಈ ತೀರದಲ್ಲಿ ನಾನು ಮತ್ತು ನನ್ನ ದೋಣಿಗಳು!! ಅದೋ ಅಲ್ಲಿ ನೀನು ಮತ್ತು ನಿನ್ನ ಪ್ರಪಂಚ.
ತಲುಪುವುದಾ ಈ ಕಾಗದದ ದೋಣಿಗಳು!!
ಮತ್ತೆ ಸಿಗುತ್ತೇನೆ ಇದೇ ತೀರದಲ್ಲಿ............
ಪ್ರತಮ ಮಳೆಯ ಮಣ್ಣಿನ ಸುವಾಸನೆಯೊಂದಿಗೆ ಶುರುವಾದ ಸುಂದರ ಬರವಣಿಗೆ.. ಮಳೆ ನೀರು ಗುಡ್ಡದ ಮುಳ್ಳು ಕಲ್ಲು ಗಳನು ದಾಟಿ ನದಿ ಸೇರುವಂತೆ.. ನಿಮ್ ಎ ಬರವಣಿಗೆ ಜೀವನದ ಏಳು ಬಿಳು , ಕಷ್ಟ ಸುಖ ಗಳನು ನೆನಪಿಸಿ ಮಾನಸ ಸರೋವರದ ಸುಂದರ್ ಬರಹ ಪ್ರಪಂಚಕ್ಕೆ ಕರೆದೊಯ್ದು ಬಿಟ್ಟಿತು ..ಸುಂದರ ಬಾವನೆಯ ಸುಂದರ ಕಲ್ಪನಾ ಪ್ರಪಂಚ..ಮುಂದಿನ ದಿನಗಳಲಿ ನಿಮ್ಮಿಂದ ಇನ್ನು ಉತ್ತಮ್ ಬರಹ ಗಳು ಎ ಮಾನಸ ಸರೋವರದಿಂದ ಹರಿದು ಬರಲಿ..
ReplyDeleteರಘು
mbraghumb@gmail.com
ನಿಮ್ಮ ಆಶಯಕ್ಕೆ ಧನ್ಯವಾದಗಳು... ಪ್ರಯತ್ನ ನಿರಂತರವಾಗಿರುತ್ತದೆ.
ReplyDeleteಇಲ್ಲಿಯ ಭಾವಗಳ ಚಂದವ ಹೇಳಲು ಮಾತುಗಳಿಲ್ಲ ನನ್ನಲ್ಲಿ...
ReplyDeletenimma preetige dhanyavadagalu...:)
ReplyDelete