Wednesday, April 11, 2012

ಈ ಸಂಜೆಯ ತೀರದಲ್ಲಿ....


            ಸಂಜೆತೀರವೆಂಬುದು ಎಷ್ಟೊಂದು ಆಪ್ತ! ಗೊತ್ತಲ್ಲ! ವಾಕಿಂಗ್ ಅನ್ನೋದು ಪೇಟೆಜನರ ಫ್ಯಾಷನ್ ಆದರೂ ಆರೋಗ್ಯವೂ ಅದರ ಅಷ್ಟೇ ಪ್ರಮುಖ ಉದ್ದೇಶ.
 ಈ ವಾಕಿಂಗ್ ಶಬ್ಧಕ್ಕಿಂತ ಸಂಜೆಯ ತೀರದ ನಡಿಗೆ ಎಂಬುದು ಒಂದಿಷ್ಟು ಆಪ್ತ ಎಂಬುದು ಸುಳ್ಳಲ್ಲ.. ಅದೂ ನದೀತೀರದ
ಅಥವಾ ಸಮುದ್ರತೀರದ ಸಂಜೆಯ ನಡಿಗೆ ಸುಮ್ಮನೇ ಮನುಷ್ಯ ಮನಸಿನ ಒಳಗೆಲ್ಲ ಭಾವದ ರಸವ ಪುಟ್ಟ ತೆರೆಗಳಾಗಿ ಹೊಮ್ಮಿಸುತ್ತವೆ ಎಂಬುದು ಸುಳ್ಳಲ್ಲ.
 ಶುಭ ಸಂಜೆ ಹಾಗೂ ಶುಭ ಮುಂಜಾವುಗಳಲ್ಲಿ ಮೆಲ್ಲನೇ ಗಾಳಿಯಲ್ಲಿ ನಡೆಯುತ್ತಿದ್ದರೆ ಪಕ್ಕದಲ್ಲಿ ಯಾರಿಲ್ಲದಿದ್ದರೂ ನಲ್ಲನಂತೆ ತೋರುವ ನೆರಳಿರುತ್ತದಲ್ಲ. ಅದೇ ಆಪ್ತವೆನ್ನಿಸುತ್ತದೆ. ಸುಮ್ಮನೇ ಮನಸ್ಸು ಉಲ್ಲಸಿತನಿಸುತ್ತದೆ. ನಾನು ಹೇಳೋಕೆ ಹೊರಟಿರೋದು ಒಂದಿಷ್ಟು ನದೀ ತೀರದ ಇಂತದ್ದೇ ಮಾತುಗಳನ್ನಾದರೂ ಹೇಳ್ತಾ ಇರೋದರ ಹಿನ್ನಲೆ ಇನ್ನೊಂದಿಷ್ಟು ವಿಸ್ಮಯವಾದುದು.. ಕೇಳೋದಕ್ಕೆ ಬೋರಾದರೂ ಹಾಗೆಂದು ಹೇಳಬೇಡ.
ನನಗೆ ನೋವಾಗುತ್ತದೆ. ಕೇಳಿಸ್ಕೋ ನನಗಾಗಿ..


       ನಿಂಗೆ ಗೊತ್ತಾ? ಈ ಮುಸ್ಸಂಜೆಯ ಹೊತ್ತಲ್ಲಿ ತುಂಬಾ ಶಾಂತವಾದ ಮುದಿಮುದಿ ಜೋಡಿಗಳು ಕೈಕೈ ಹಿಡಿಯದಿದ್ದರೂ ಒಂದೇ ಹೆಜ್ಜೆಯ ಅಂತರದಲ್ಲಿ ಸಂಚರಿಸುವುದು ನೋಡಿದಾಗ ನನಗೆಲ್ಲೋ ಒಳಗೊಳಗೆ ತಂಪುತಂಪೆನಿಸುತ್ತದೆ. ಅವರನ್ನ ನೋಡುತ್ತಿದ್ದಂತೆ ನಾನು ಅರಿವಿಲ್ಲದೇ ನನ್ನ ಮುದಿತನಕ್ಕೆ ಧಾವಿಸುತ್ತೇನೆ!ಇಷ್ಟು ಶಾಂತ ಮುಸ್ಸಂಜೆಗಳು ನಮ್ಮ ಬದುಕಿಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮಂತೆ ದಿನದಿನದ ಹೋರಾಟದ ಬದುಕನ್ನು ಬದುಕಿಯೇ ಅವರು ಬಂದಿದ್ದಾರೆಂಬುದು ನನ್ನ ನಂಬಿಕೆ. ಪ್ರತೀ ಮನುಷ್ಯರ ಬದುಕಲ್ಲೂ ಏಳು ಬೀಳುಗಳು, ನೋವು ನಲಿವುಗಳು ಇದ್ದೇ ಇವೆ. ಏನೇನೋ ಕಾರಣಗಳಿಂದ ಮುನಿಸು, ಧಾವಂತ. ಅಸಹನೆ. ಅಪ್ರಬುದ್ಧತೆಯ ದೋಷಗಳು ಎಲ್ಲರ ಬದುಕನ್ನು ಕಾಡಿವೆ. ಸರಿತಪ್ಪುಗಳ ನಡುವೆ ಗೆರೆ ಎಳೆದಂತೆ ನಾವ್ಯಾರೂ ಬದುಕಿಲ್ಲ. ಬದುಕಲಾರೆವು. ಹಾಗೆಂದೇ ಅನುಭವಗಳ ಸಾರ ಹೊತ್ತು
ನಡೆವ ನಡಿಗೆ ತುಂಬ ಭಾರವಾಗಿಬಿಡಬಹುದೆಂದು ನನಗನ್ನಿಸುತ್ತದೆ. ಉಹೂಂ ವಿಸ್ಮಯವೆಂದರೆ ಇದೇ.... ವಯಸ್ಸಿನ ಉಡುಗೆತೊಡಿಗೆಯಂತೆ ಈ ಬದುಕಿನ ಎಲ್ಲ ಅನುಭವಗಳೂ ಒಂದು ತೆಳುವಾದ ಪರದೆ ನಿಮರ್ಿಸಿವೆಯೇನೋ ಎಂಬಂತೆ ಮನುಷ್ಯನ ಒಳಗೂ ಹೊರಗೂ ಒಂದು ಬಿಳಿಯ ಶುಭ್ರ ತೆರೆಯ ನಿಮರ್ಿತಿ ತೋರಿಬರುತ್ತದೆ. ಇಳಿ ವಯಸ್ಸಿನ
ಅಗತ್ಯಗಳೇನೋ ಎಂಬಂತೆ ಒಬ್ಬರಿಗೊಬ್ಬರು ಆಧಾರವಾಗಿ ಊರುಗೋಲಿನಂತೆ ಇರುವ ಈ ಬದುಕುಗಳಲ್ಲೂ ಒಂದು ದಿನ ಎಷ್ಟೆಲ್ಲ ಭೋರ್ಗರೆತಗೆಳಿದ್ದಿರಬಹುದು!
 ಹೋರಾಟಗಳಿದ್ದಿರಬಹುದು! ಹೀಗೆಲ್ಲ ಯೋಚಿಸುವಾಗ ತೀರದೊಳಗಿನ ಈ ನಡಿಗೆ ಮತ್ತಷ್ಟು ಗಂಭೀರವೂ ಮತ್ತಷ್ಟು ಬೆಲೆಯುಳ್ಳದ್ದೂ ಅನ್ನಿಸುತ್ತದೆ.

           ಹಾಗೇ ಖೇದವೆನಿಸುವ ಇನ್ನೊಂದಿಷ್ಟು ಅನಿಸಿಕೆಗಳನ್ನೂ ಹೇಳಿಬಿಡುತ್ತೇನೆ. ನೀನು ಅಂತಲ್ಲ. ನಾವೇ ನಾವು... ನಾವೆಲ್ಲರೂ ಬದುಕುವ ಇವತ್ತನ್ನು, ಬದುಕಿದ ನಿನ್ನೆಗಳನ್ನು ಬದುಕಬಹುದಾದ  ನಾಳೆಗಳನ್ನು  ಮನುಷ್ಯಮಿತಿಗಿಂತ ಚಿಕ್ಕದಾಗಿಸಿಕೊಂಡಿದ್ದೇವೆೆ ಯಾಕೆ ಹಾಗೆ!!  ಸಂಭ್ರಮಿಸಬಹುದಾದ ಎಷ್ಟೊಂದು ಕ್ಷಣಗಳನ್ನು ಕೇವಲ ನಮ್ಮ ಅಹಮಿನ
ಕಾರಣಕ್ಕೆ ಕಳೆದುಕೊಂಡಿದ್ದೇವೆ! ಪ್ರಪಂಚದ ತುಂಬೆಲ್ಲ ಪ್ರಕೃತಿಯಂತ ಚೆಲುವು ಇನ್ಯಾವುದು ಇದೆಯೋ ನನಗಂತೂ ಹೋಲಿಕೆಗೆ ಇನ್ನೇನು ತೋರುವುದಿಲ್ಲ. ಆದರೆ ಅಹಮಿನ ಕಾರಣಕ್ಕೆ ಸೌಂದರ್ಯವೆಂಬುದು ನೋಡಲಾರದ, ಅನುಭವಿಸಲಾರದ, ಕೇಳಲಾರದ, ವ್ಯಕ್ತಪಡಿಸಲಾರದ ಗಟ್ಟಿ ಗೋಡೆಯ ನಡುವೆ ಬಂಧಿಸಿಕೊಂಡಿದ್ದೇವೆ. ಪ್ರೀತಿಯನ್ನು ವ್ಯಕ್ತಪಡಿಸುವುದು ಒಂದು ಕಲೆ ನಿಜ.ಹಾಗೇ ಸೌಂದರ್ಯವನ್ನು  ಆರಾಧಿಸಿವುದೂ ಒಂದು ಕಲೆಯೇ...  ಪ್ರೇಮವೆಂಬುದು ನಿರರ್ಗಳವಾಗಿ ಹರಿಸಿಕೊಂಡ ಪತಿ ಪತ್ನಿಯರ ನಡುವೆಯೇ ಮತ್ತೊಂದು ದಿನ ಪ್ರೇಮವನ್ನು ವ್ಯಕ್ತಪಡಿಸಿ ಸಂಭ್ರಮಿಸಿಕೊಳ್ಳುವ ಮನಸ್ಥಿತಿಯೇ ಉಳಿಯದೇ ಹೋಗುವುದೂ ಈ ಮನಸುಗಳ ದುರಂತ! ಪ್ರೇಮಕ್ಕೆ ಸಂಭ್ರಮಕ್ಕೆ, ಆನಂದಕ್ಕೆ ಬೇಕಾದದ್ದು
ಗಂಭೀರತೆ ಪ್ರೌಢತೆಯ ಮುಖವಾಡಗಳಲ್ಲ. ವ್ಯಕ್ತಪಡಿಸಬಹುದಾದ ಉತ್ಕೃಷ್ಟ ಮಾರ್ಗವೆಂದರೆ  ತನ್ನ ಸಂಭ್ರಮವನ್ನು ಹಂಚಿಕೊಳ್ಳುವುದು. ನಮ್ಮವರ ಸಂಭ್ರಮವನ್ನು ಹೆಚ್ಚಿಸುವುದು.
                  ಬಹುಶಃ ಪ್ರೇಮಕ್ಕೆ ಇಂತಹ ಕೊಡುಗೆಗಳಿಗಿಂತ ಹೆಚ್ಚಿನ ನಿರೀಕ್ಷೆಯಿರುವುದಿಲ್ಲ.  ಒಬ್ಬೊಬ್ಬರ ಸಂಭ್ರಮ ಒಂದೊಂದರಲ್ಲಿರಬಹುದು. ಇಲ್ಲವೆನ್ನಲಾರೆ. ಆದರೆ ಮಾಮೂಲಿಯಾಗಿ ಎಲ್ಲರ ಸಂಭ್ರವೂ ಪ್ರೇಮವನ್ನು ಹಂಚಿಕೊಳ್ಳುವುದರಲ್ಲೇ ಇದೆ ಎಂಬುದು ನನ್ನ ಅನಿಸಿಕೆ.
    ಯಾವತ್ತೋ ಒಂದಿನ ಎಲ್ಲೋ ಕೇಳಿದ ವಿಷಯ. ಪ್ರೇಮವೆಂಬುದು ಪತಿ ಪತ್ನಿಯರದ್ದಷ್ಟೇ ಅಲ್ಲ. ಎಲ್ಲ ಸಂಬಂಧಗಳೂ ಪ್ರೀತಿ ಹಂಚಿಕೊಳ್ಳುವುದರಲ್ಲೇ ತಮ್ಮ ಸಂಬಂಧದ ಸಾರ್ಥಕತೆಯನ್ನು ಉಳಿಸಿಕೊಳ್ಳುತ್ತವೆ. ತಾಯಿ ಮಗುವನ್ನೆಷ್ಟೇ ಪ್ರೀತಿಸಿಕೊಳ್ಳುತ್ತಾಳೆ ಎಂದರೂ ಆ ಪ್ರೀತಿ ಕ್ರಿಯೆಯ ರೂಪದಲ್ಲೋ ಅಗತ್ಯಗಳ ಪೂರೈಕೆ ರೂಪದಲ್ಲೋ,
ಅವಳ ಸ್ಪರ್ಷದ ರೂಪದಲ್ಲೋ ಅವಳ ಮಾತಿನ ರೂಪದಲ್ಲೋ ವ್ಯಕ್ತವಾಗದುಳಿದರೆ ಆ  ತಾಯಿ ಮಗುವಿನ ನಡುವೆ ಒಂದು ಆನಂದದ ರಸೋಲಹರಿ ಯಾವತ್ತೂ ಹರಿಯಲಾರದಲ್ವ? ಹೊಕ್ಕಳು ಬಳ್ಳಿಯ ಆ ಸಂಬಂಧ ಎದೆಹಾಲಿನ ಧಾರೆಯಾಗಿ ತಾಯಿ ಮನಸ್ಸಿನ ಆನಂದಕ್ಕೆ ಕಾರಣವಾಗುವುದೂ ಒಂದು ಅಸದೃಶ ದೃಶ್ಯಕಾವ್ಯವೆನಿಸುವುದೂ  ನಡುವಿನ ವ್ಯಕ್ತತೆಯ ಕಾರಣಕ್ಕೆ.  ಇಲ್ಲಿ ಅವ್ಯಕ್ತವೆಂಬುದು ಪ್ರೀತಿಯಲ್ಲ ಎಂದು ನಾನು ಹೇಳುತ್ತಿಲ್ಲ. ನಿನಗೆ ಅರ್ಥವಾದೀತಾ? ವ್ಯಕ್ತತೆ ಮಾತ್ರ ಹೆಚ್ಚು ಸಂಭ್ರಮಿಸುವ  ಅವಕಾಶವನ್ನು ಕಟ್ಟಿಕೊಡುತ್ತದೆ. ಅದೇ ಕಾರಣಕ್ಕೆ ಪ್ರೀತಿ ಅತ್ಯದ್ಧುತ ಆನಂದವನ್ನು ಹಂಚುವ ರಾಯಭಾರಿಯೆಂದು ನನಗನ್ನಿಸುತ್ತದೆ.
             ಇಳಿವಯಸ್ಸಿನ ಈ ಯುವಕರು ತಮ್ಮ  ಸಾಲುಸಾಲು ಅದೆಷ್ಟೋ ವರ್ಷಗಳನ್ನ ರಮ್ಯವಾಗಿಸಿಕೊಂಡು ಬಂದಿರಬಹುದು!ಆದರೆ ಹೆಚ್ಚು ಜನ ತಮ್ಮ ಸಾಲುಸಾಲು ವರ್ಷಗಳನ್ನ
ಕೆಲಸ, ಕಾರ್ಯ, ದುಡಿತಾಯ, ಪ್ರೆಸ್ಟೀಜ್ ನ ನಿರ್ವಹಣೆಗಳಲ್ಲಿ ಕಳೆದವರೇ ಇದ್ದಾರೆ. ಇಪ್ಪೊತ್ತೊಂದರೆ ಹರಯದ ಕನಸುಗಳೆಲ್ಲ ಕೈಗೂಡಿ ಕೆಲಸ, ಮದುವೆ, ಮಗು ಆಗುವಷ್ಟರಲ್ಲಿ ಕಳೆದುಹೋಗುವ ಈ ಜೋಡಿಗಳು ಆ ಮೇಲೆ ಅರವತ್ತರ ಗಡಿ ದಾಟುವವರೆಗೂ ತಮ್ಮ ಸಂಭ್ರಮವನ್ನು ತಮ್ಮವರ ಸಂಭ್ರಮವನ್ನೂ ಅಗತ್ಯಗಳ ಪೂರೈಕೆಯ ಹೊಣೆ ಹೊತ್ತ
ಗಾಣದೆತ್ತಿನಂತೆ ದುಡಿಯುವುದರಲ್ಲಿ ಕಳೆಯುತ್ತಾರೆ!  ದಣಿವನ್ನು ಆರಿಸಿಕೊಳ್ಳುವ ಪ್ರೀತಿಯನ್ನು, ಉತ್ಸಾಹ ತುಂಬಿಕೊಳ್ಳುವ ಆನಂದವನ್ನು  ದಿನದಿನಕ್ಕೆ ಹಿಡಿದಿಟ್ಟುಕೊಳ್ಳುವುದು ಕೆಲವೇ ಜನರು. ಅಂತವರ ಬದುಕು ಅರವತ್ತರಲ್ಲೂ ಸಂಭ್ರಮ! ಹದಿನಾರರ ಹುಮ್ಮಸ್ಸಿನ ಯೌವ್ವನ.ಅವರನ್ನು ನೋಡುತ್ತಿದ್ದರೆ ಎಂತವರ
 ಬದುಕಿನಲ್ಲೂ ಉತ್ಸಾಹ ಚಿಮ್ಮುತ್ತದೆ. ಪ್ರತೀ ಬೆಳಗನ್ನು  ಆಹಾ! ಬೆಳಗಾಯಿತು! ಎಂದು ಸಂಭ್ರಮಿಸುವ ಬದುಕು ನಮ್ಮದಾದರೆ ನಿಜಕ್ಕೂ ಎಷ್ಟು ಚೆಂದ! ನಮ್ಮೆಲ್ಲರಿಗೂ ಬೆಳಗಾಗೋದು ಇದ್ದೇ ಇದೆ. ಅದರಲ್ಲೇನು ಅಂತ ಸಿಡಿದುಕೊಂಡೇ ಎದ್ದರೆ ಯಾವ ಬೆಳಗುಗಳೂ ಹಿತನೀಡುವುದಿಲ್ಲ. ಅಷ್ಟೇ ಅಲ್ಲ. ಎಲ್ಲರಿಗೂ ಒಂದೇ ಬೆಳಗು. ಒಂದೇ ವಿಷಯ ಅಂದುಕೊಂಡರೆ
ಅಲ್ಲಿ ಯಾವ ಸಂಭ್ರಮವೂ ಇಲ್ಲ. ಪ್ರತೀ ಬೆಳಗು ಸಂಜೆಗಳು ಶುಭವೇ ಆಗಿರಬೇಕೆಂದಿಲ್ಲ. ಆದರೆ ನಾವು ವ್ಯಕ್ತಪಡಿಸುವ ಶುಭ...ಗಳು ನಮ್ಮವರ ಮುಗುಳ್ನಗುವನ್ನೂ ನಮ್ಮೊಳಗೆ ಒಂದು ಪುಟ್ಟ ಕಿರುನಗೆಯನ್ನೂ ಹಾಯಿಸುತ್ತದೆ ಅಂತಾದರೆ ಪ್ರೀತಿಗೆ ಇದಕ್ಕಿಂತ ಹೆಚ್ಚಿನದೇನು ಕೊಡಬಹುದು?ಬಹುಶಃ ಪ್ರೀತಿ ಬಯಸುವುದು ಇಷ್ಟನ್ನೇ...

   ಮುಸ್ಸಂಜೆಯ ನದೀತೀರದ ಈ ವೃದ್ಧಜೋಡಿಗಳ ಜೊತೆ ನನ್ನ ಮಾತು ಎಲ್ಲೆಲ್ಲಿಗೋ ಹೋಯಿತಲ್ಲ. ಭಾವಲಹರಿಯ ಈ ಮನಸಿಗೆ ಕೊನೆಯೆಂಬುದಿಲ್ಲ. ಅದು ಹೀಗೆ..
ಸುತ್ತಿಬಳಸಿ ಹರಿಯುವ ನದಿಗಳಂತೆ...ಮತ್ತೆ ಸಿಗುವಾ ಮತ್ತೊಂದು ಕ್ಷಣದಲ್ಲಿ.........





2 comments: