Monday, May 7, 2012

ಮತ್ತದೇ ತೀರದಲಿ .............

ಮತ್ತೊಮ್ಮೆ ಉರಿ ಉರಿ ಬಿಸಿಲಿನ ದಿನ ಕಳೆದು 
ಸಂಜೆಯ ತೀರಕ್ಕೆ ಬಂದು ಕುಳಿತಿದ್ದೇನೆ. ಕಳೆದ ಕೆಲವೇ ದಿನಗಳಲ್ಲಿ ಒಳಗೆಲ್ಲ ಒಂದು ವಿಚಿತ್ರ
ಮಾಯೆಯಂತಹ ಉದ್ವಿಗ್ನತೆ ಆವರಿಸಿಕೊಂಡುಬಿಟ್ಟಿತು. ಬರೆಯಬೇಕು ನಿನ್ನೊಂದಿಗೆ ಎಲ್ಲವನ್ನು ಹಂಚಿಕೊಳ್ಳಬೇಕೆಂಬ
ಆ ತುಡಿತಕ್ಕೆ ಸಮಯದ ಅಭಾವ ಎಂಬುದು ಅದೆಷ್ಟು ಭಾವನೆಗಳು ತೀವ್ರವಾಗಿ ಒತ್ತಡವನ್ನು ಉಂಟುಮಾಡುತ್ತವೆ ಎಂದರೆ
ಅದೊಂದು ವಿಚಿತ್ರ ಸಂಕಟ ಕೊಡುವ ಸುಖದಂತದ್ದು! ಸರಿಯಾಗಿ ಹೇಳಬೇಕೆಂದರೆ ಪ್ರಸವದ ನೋವಿನಂತಹ ಒತ್ತಡದ್ದು. ಅಂತಹ ಒತ್ತಡದ
ಹರಿವಲ್ಲೇ ಉಳಿದೆಲ್ಲವನ್ನ ಈ ಕ್ಷಣಕ್ಕೆ ಬದಿಗಿರಿಸಿ ನಿನ್ನೊಂದಿಗೆ ಮನಸಾಗಿ ಕುಳಿತಿದ್ದೇನೆ. ಮನಸು ಮನಸಿನ ಮಾತಿಗೆ ಸರೋವರಗಳು ಸಾಕ್ಷಿಯಾಗಲಿ..

           ಸ್ವಾತಂತ್ರ್ಯದ ಸುಖವೆಂದರೆ ಎಷ್ಟು ಅದ್ಭುತ! ಇದು ಎಲ್ಲರಿಗೂ ಅಗತ್ಯಕೂಡ.. ಸ್ವಾತಂತ್ರ್ಯದ ಸುಖದಡಿಯಲ್ಲೇ ಮನುಷ್ಯ ಸಂಬಂಧಗಳ
ಬಂಧನವ ಕಟ್ಟಿಕೊಳ್ಳುತ್ತಾನೆ!! ಆಶ್ಚರ್ಯ ಅಲ್ಲವಾ!! ಸಂಸಾರವೆಂಬುದು ಬಂಧನವೆಂದೂ  ಹೆಣ್ಣು ಮೋಹವೆಂದೂ ಮಾಯೆಗಳಿಂದ ಮುಕ್ತನಾಗಲು ಬಯಸುವ ಇದೇ
ಮಾನವ ಕುಲವೇ ಇವೆಲ್ಲವನ್ನು ಕಟ್ಟಿಕೊಳ್ಳುತ್ತದೆ!! ಮನುಷ್ಯ ಒಂಟಿಯಾಗಿ ಸುಖಪಡುವುದಕ್ಕಿಂತಲೂ ಜಂಟಿಯಾಗಿ ಬದುಕಿನ ಸುಖ ಪಡೆಯುತ್ತಾನೆ ಎನ್ನುವುದಕ್ಕೆ ಇದು
ಉದಾಹರಣೆಯೇನೋ ಅನ್ನಿಸುತ್ತದೆ!! ಬದುಕೆಂದರೆ ಒಂದು ಅಸಾಮಾನ್ಯ ವಿಶ್ವವಿದ್ಯಾನಿಲಯ. ಎಷ್ಟು ಕಲಿತರೂ ಮುಗಿಯದ ವಿಶ್ವಕೋಶ! ಇಲ್ಲಿ ಬಂಧನಗಳಿಂದ
ಮುಕ್ತವಾಗುವುದೆಂದರೆ ಜವಾಬ್ದಾರಿಗಳಿಂದ ದೂರ ಓಡುವುದಲ್ಲ! ಜವಾಬ್ದಾರಿಗಳು ಇಂದು ನಾಳೆ ಮುಗಿಯುವ ಸರಕೂ ಅಲ್ಲ. ಎಲ್ಲವೂ ನಿಯೋಜಿತವಾದ ಸೃಷ್ಟಿಕರ್ತನ
ಸೂತ್ರದಲ್ಲಿ ನಡೆಯಬೇಕಾದ ಗೊಂಬೆಯಾಟದಂತದ್ದು. ಅಂತಹ ಒಂದು ರಂಗದಲ್ಲಿ ನಾವು ಪಾತ್ರಧಾರಿಗಳೆಂಬ ಅರಿವು ಸಾಕು... ತುಂಬ ಶಾಂತವಾಗಿ ಬದುಕನ್ನು ಎದುರಿಸಲು,
ಬದುಕನ್ನು ಪ್ರೀತಿಸಲು....

      ಎಷ್ಟು ಬಾರಿ ಅಂದುಕೊಳ್ಳುತ್ತೇನೆ. ಮನಸಿಗೆ ಅನಿಸಿದ್ದನ್ನ ಅನಿಸಿದಂತೆ ಹೇಳಿಕೊಳ್ಳಬಹುದಾದ ಒಂದು ಸ್ನೇಹವಿರಬೇಕು. ಜೀವನ ಪೂತರ್ಿ ಯಾವ
 ಕೋರಿಕೆಗಳು ಕಂಡೀಷನ್ಸ್ ಇಲ್ಲದ ಸಂಭ್ರಮ, ಸುಖ, ದುಃಖ, ನೋವು ನಲಿವು, ಸಿಟ್ಟು ಸೆಡವು. ಕೊನೆಗೆ ಅಸಹನೆಗಳನ್ನು ಉಗಿದು ಸಮಾಧಾನ ಕಂಡುಕೊಳ್ಳುವ
ಸ್ನೇಹವಿರಬೇಕು! ನನಗೆ ನೀ ಇದ್ದೀಯೆಲ್ಲ ಹಾಗೆ! ನಿನಗೆ ನಾ ಇದ್ದೆ ಅಲ್ಲ ಹಾಗೆ! ಗೊತ್ತಾ ನಿನಗೆ ಮನುಷ್ಯ ಸಂಬಂಧಗಳು ಅದು ಎಂತದ್ದೇ ಆಗಿರಲಿ, ನಿಭಾವಣೆಯ
ಅಗತ್ಯವಿದ್ದೇ ಇದೆ ಅಲ್ಲಿ. ಪತಿ ಪತ್ನಿಯರ ಸಂಬಂಧಗಳಿರಲಿ, ರಕ್ತ ಸಂಬಂಧಗಳಿರಲಿ ಜೀವಕ್ಕೆ ಜೀವ ಕೊಡೋ ಸ್ನೇಹಗಳಿರಲಿ ಎಲ್ಲ ಕಡೆಗೂ ಒಂದು ಹಂತದ ನಿಬಾವಣೆಯ
 ಅಗತ್ಯವಿದ್ದೇ ಇದೆ. ಪ್ರೀತಿ ಕಮ್ಮಿ ಆಗದಿದ್ದರೂ ಮುಕ್ತತೆಗೆ ಸಾಧ್ಯವಿಲ್ಲ. ಅಂತಹ ಪ್ರೀತಿ ನಿನ್ನೊಂದಿಗೆ ಮಾತ್ರ ಸಾಧ್ಯ!! ನನ್ನ ಮನಸೇ, ಮನುಷ್ಯರಿಗೆ ಅರ್ಥವಾಗದ  ಮಾತಾಡುತ್ತಿದ್ದೆನಾ ನಾನು!
ಗೊತ್ತಿಲ್ಲ.. ಆದರೆ ನಿಜಕ್ಕೂ ಹಾಗೆ ನನ್ನೊಳಗೆ ನೀ ಇದ್ದೀ ಎಂಬುದೇ ಇವತ್ತಿಗೆ ತುಂಬ ಖುಷಿ ವಿಷಯ ಗೊತ್ತಾ? ಒಂದು ವ್ಯಕ್ತಿಯಾಗಿದ್ದರೆ ಇದು ಖಂಡಿತ ಸಾಧ್ಯವಾಗುತ್ತಿರಲಿಲ್ಲ ಮನಸೇ  ಮನುಷ್ಯನ ಮಿತಿ ಅದು..!! 
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು! ಶಕ್ತಿ ದೊಡ್ಡದು!ನನ್ನ ಮನಸಿನೊಂದಿಗೆ ನನ್ನ ಸಂಬಂಧ ಅಂತದ್ದು.
ಯಾವ ಕೋರಿಕೆಗಳಿಲ್ಲ. ಯಾವ ದೂರುಗಳಿಲ್ಲ. ಯಾವ ಅಹಂ ಇಲ್ಲ. ನಾಳೆ ನಾ ಹಂಚಿಕೊಂಡ ಯಾವುದೋ ಒಂದು ಮಾತು ನನ್ನನ್ನೇ ದೌರ್ಬಲ್ಯವಾಗಿ ಕಾಡುವ ಭಯವಿಲ್ಲ.
ನನ್ನ ನೋವುಗಳು ನನ್ನನ್ನೇ ಅಪಹಾಸ್ಯ ಮಾಡೀತೆಂಬ ಅಳುಕುಗಳಿಲ್ಲ. ಯಾವುದೋ ಒಂದು ದುರ್ಬಲ ಕ್ಷಣದಲ್ಲಿ ನಾ ಮಾಡಿದ ತಪ್ಪುಗಳು ನನ್ನ ಚೂರಿಯಾಗಿ ಜೀವನವೆಲ್ಲ
ಇರಿಯುವುದಿಲ್ಲ. ಮತ್ತೆಂದೋ ಕಾಡಿದ ಕನಸುಗಳು ನನ್ನ ಅಣಕಿಸುವುದಿಲ್ಲ.  ನೀ ಇಲ್ಲವೆಂಬ ಅಳುಕಾಗಲಿ, ನೀ ನನ್ನ ಬಿಟ್ಟುಬಿಡುತ್ತೀಯೆಂಬ ಭಯವಾಗಲಿ ಕಾಡಲು ಸ್ಥಳವೇ ಇಲ್ಲ.
 ಇದು ನನ್ನೊಳಗಿನದ್ದು. ಡೈರಿಯಂತೇ ನೀನಿದ್ದೀ. ಓ ಸ್ನೇಹಿ ಮನಸೇ ನಿನಗೆಷ್ಟು ಋಣಭಾರಿ ನಾನು!!

            ಈ ದಿನಗಳಲ್ಲಿ ಕಾಡಿದ ಒತ್ತಡಗಳನ್ನ ಹೇಳಲು ಹೊರಟ ನಾನು ನಿನ್ನ ಗುಣಗಾನ ಮಾಡುತ್ತ ಕುಳಿತೆ ಅಲ್ಲವಾ? ಹಾಂ ಸಮಾನತೆಯೆಂಬ ಕೂಗಿನ ನಡುವೆ
ನೂರೆಂಟು ಪ್ರಶ್ನೆಗಳು ಎದ್ದುಬಿಟ್ಟವು! ಏನುಮಾಡಲಿ? "ಸ್ತ್ರೀ" ಸ್ತ್ರೀ ಅಂತ ಹೇಳಿಕೊಳ್ಳಲು ಅವಮಾನವಾ? ಸ್ತ್ರೀ ತನವೆಂಬುದು  ಸ್ತ್ರೀಯಾಗಿರಲು ಬಯಸದಷ್ಟು ಅಥವಾ
ಹಾಗೆ ತೋರ್ಪಡಿಸಿಕೊಳ್ಳಲು  ಬಯಸದಂತ ವಿಷಯವಾ? ಯಾಕೋ ಈ ವಿಷಯವಾಗಿ ತುಂಬಾ ಕಾಡುತ್ತಿದೆ.. ಒಳಗೆಲ್ಲ.. ಇದು ಇನ್ನೂ ಒಂದು ಸ್ಪಷ್ಟ ರೂಪಕ್ಕೆ ಬರದಿರುವ
ಭ್ರೂಣದಂತಹುದು.. ಇನ್ನಷ್ಟು ಸಮಯದ ಚಿಂತನೆಯೊಡನೆ ಮತ್ತೆ ಬೇಗ ಬಂದು ಕೂರುತ್ತೇನೆ.. ಬರುವಾಗ ಖಂಡಿತ ಅಂತ ಹೇಳಲಾಗದಿದ್ದರೂ ಒಂದೆರಡು ಗುಟುಕು
ಎಲೆಅಡಿಕೆ ಜಗಿಯುವಂತ ವಿಚಾರಗಳ ಪ್ರಶ್ನೆಗಳ ತಗೆದುಕೊಂಡು ಬರುವ ಪ್ರಯತ್ನ ಮಾಡುತ್ತೇನೆ..
  

 ಮುಸ್ಸಂಜೆ ಕೂಡುತ್ತಿದೆ. ಕತ್ತಲು ಆವರಿಸಿದೆ. ಬುದ್ಧಪೂಣರ್ಿಮೆಯ ಪ್ರಶಾಂತ ಚಂದಿರ ಇಣುಕುತ್ತಿದ್ದಾನೆ! ಈ ಚಂದ್ರಮನೊಂದಿಗೆ ಬೆಳದಿಂಗಳೊಂದಿಗೆ ಒಂದು ದಿವ್ಯ
ಶಾಂತಿಯನ್ನು ಕಂಡುಕೊಳ್ಳುವ..ಪುಟ್ಟ ಪುಟ್ಟ ನೆನಪಿನ ಕನಸಿನ ದೋಣಿಗಳ ತೇಲಿ ಬಿಡುವಾ...
ಮತ್ತದೇ ತೀರದಲಿ ಸಂಜೆಗೆ ಕಾಯುತ್ತಿರುವ.....



2 comments:

  1. Hmm...Nim barevanigegaagi..Kayta..idde..Tumba sundarvaagide.. Mansina stiti yarige helodu..Namge arth agde irovaage innobrige adra bagge hega tilisodu..

    ReplyDelete
  2. tumbaa dhanyavadagalu.. manasige manasu arthavagatte anthalee mattobbarigintha priyavaguva nannade mansina jote hegondu heege maatige kulitiddu....

    ReplyDelete