ನಿತ್ಯಕರ್ಮಿ.. |
ಹೀಗೊಂದು ಕಾಲ ಬರತ್ತೆ......... ಯಾವ ಕರೆಗಳು ನಿನ್ನ ತಾಕದೇ ನೀ ಯಾರನ್ನೂ ಕರೆಯದೇ ಸುಮ್ಮ ಸುಮ್ಮನೇ ಉಳಿದು ಬಿಡೋ ನಿಶ್ಯಬ್ಧ. ನಿನ್ನೊಳಗೆಯೂ ಏನಿಲ್ಲ. ನಿನ್ನಾಚೆಯೂ ಏನಿಲ್ಲ. ನಾಳೆಗಳ ಕುರಿತು ಕನಸಿಲ್ಲ. ನಿನ್ನೆಯ ಕುರಿತು ನೆನಪಿಲ್ಲ. ಇಂದಿನ ಈ ದಿನ ಇದು ಜೀವಂತ... ನಿನ್ನೆದುರುಗೆ ಏನಿದೆಯೋ ಅದು ಮಾತ್ರ ಸತ್ಯ. ನೀನಿರುವ ನೆಲೆ ಅದು ಮನೆಯಿರಲಿ ಆಫೀಸ್ ಇರಲಿ. ರಸ್ತೆಯಿರಲಿ ಪೇಟೆಯಿರಲಿ ಗೆಳೆಯರಿರಲಿ... ಅದು ಮಾತ್ರ ಆ ಕ್ಷಣದ ಜೀವಂತ ಸತ್ಯ. ಓದಲು ಹೊರಟರೆ ಪುಸ್ತಕದಲ್ಲಿ ಮುಳುಗಬಹುದು. ಹಾಡಲು ಹೊರಟರೆ ಹಾಡಿನಲ್ಲಿ ಮುಳುಗಬಹುದು. ಕೆಲಸವಾದರೆ ಕೆಲಸ. ಎಂತದೇ ಕೆಲಸವಿರಲಿ. ಏನೂ ಇಲ್ಲದಿದ್ದರೆ ಸುಮ್ಮನೇ ನಿದ್ರೆ ಮಾಡಬಹುದು.
ಇಂತಹದೊಂದು ದಿನಗಳು ಬದುಕಿನಲ್ಲಿ ಸಂಭವಿಸಿದರೆ ಹೇಗಿರುತ್ತೆ!? ಮನಸೇ ನಿಂಗೊತ್ತಾ? ಮನುಷ್ಯರು 80% ಪರ್ಸೆಂಟ್ ಭೂತ ಕಾಲದಲ್ಲೂ 18% ಪರ್ಸೆಂಟ್ ಭವಿಷ್ಯದ ನಿರೀಕ್ಷೆಯಲ್ಲೂ ಬದುಕುತ್ತಾರೆ. ಉಳಿದಂತೆ ಇರೋ 2 ಪರ್ಸೆಂಟ್ ಮಾತ್ರ ವರ್ತಮಾನದಲ್ಲಿ ಬದುಕೋದು. ಹಾಗಿರೋ ಮನುಷ್ಯ ನೂರಕ್ಕೆ ನೂರು ವರ್ತಮಾನದಲ್ಲಿ ಬದುಕೋದು ಹೇಗೆ? ಆದರೆ ಹಾಗೆ ವರ್ತಮಾನದಲ್ಲಿ ಬದುಕುವ ಮನುಷ್ಯ ನಿಜಕ್ಕೂ ಅಸಾಮಾನ್ಯ ಆಗಿರಬೇಕು. ಇಲ್ಲವೇ ಅಬ್ ನಾರ್ಮಲ್ ಆಗಿರಬೇಕು.! ಕಷ್ಟ.... ಖಂಡಿತ ಜೀವನ ಪೂತರ್ಿ ಹಾಗಿರಲಾರರು ಯಾರೂ...... ಆದರೆ ನಿಜ.. ಬದುಕಿನ ಎಲ್ಲೋ ಒಂದು ಕಾಲದಲ್ಲಿ ಹಾಗೆ ಬದುಕೋದು ತುಂಬ ಸುಂದರ ಅನುಭವ.
ಯಾವ ಜವಾಬ್ಧಾರಿಯ ಹೊರೆಯಿಲ್ಲದೇ ಯಾವುದೋ ಅಪೇಕ್ಷೆ ಕನಸುಗಳ ಕೊರತೆಯಿಲ್ಲದೇ ಒಂದು ತುಂಬ ಸಾರ್ಥಕ ದಿನಗಳ ವಾಸ್ತವತೆಯಲ್ಲಿ ಬದುಕುವುದು ನಿಜಕ್ಕೂ ತುಂಬ ಚಂದ. ನಾನಿದನ್ನ ಯಾಕೆ ಹೇಳ್ತಾ ಇದೀನಿ ಗೊತ್ತಾ? ಹಾಂ... ಬದುಕಿನ ಮುಸ್ಸಂಜೆಯಲ್ಲಿ ಇಂತದ್ದೊಂದು ತೃಪ್ತಿಯ ದಿನಗಳು ಮನುಷ್ಯನ ಗುರಿಯಾಗಬೇಕಾದರೆ ಇವತ್ತು ಅಂದರೆ ಇಂದಿನ ವರ್ತಮಾನದಲ್ಲಿ ಅಂತಹ ದಿನಗಳಿಗಾಗಿ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳಬೇಕು.
ಈ ದಿನಗಳ ಆಥರ್ಿಕ ನಿರ್ವಹಣೆಯಿಂದ ಹಿಡಿದು ಮಾನಸಿಕ, ಸಾಮಾಜಿಕ ಬದುಕಿನ ವ್ಯವಸ್ಥೆಯನ್ನು ಕಟ್ಟಿಕೊಳ್ಳುವುದರ ಮೇಲೆ ಮಾತ್ರ ಇಂತಹ ದಿನಗಳು ಸಿಗಲು ಸಾಧ್ಯ. ಮನೆ, ಮನಗಳು ಸಂಕಷ್ಟದಲ್ಲಿ ಆಥರ್ಿಕ ಕಷ್ಟಗಳಲ್ಲಿ ಇದ್ದರೆ ಯಾರೂ ಹೀಗೇ ಬೀಡು ಬೀಸಾಗಿ ಇರಲಾರೆವಲ್ಲವಾ? ಹಾಗೆ ಜವಾಬ್ಧಾರಿಗಳು ಕರ್ತವ್ಯ ಅವನ್ನೆಲ್ಲ ಕಾಲ ಕಾಲಕ್ಕೆ ನಿರ್ವಹಿಸುತ್ತಾ ಹೊರೆಗಳನ್ನೆಲ್ಲ ಇಳಿಸಿಕೊಂಡರೆ ಮಾತ್ರ ನಮ್ಮೊಳಗೂ ಅಷ್ಟು ನಿರಾಳತೆಯ ಬೀಡು ಬೀಸಾಗಿ ಇರಲು ಸಾಧ್ಯ.
ಯಾಕೋ ಬದುಕಿನ ಒಂದಷ್ಟು ನಿರಂತರ ವರ್ಷಗಳು ಇಂತಹ ವಾಸ್ತವತೆಯಲ್ಲಿ ಬದುಕಲು ಒಂದಿಷ್ಟು ಕೆಲಸಗಳೂ ಅವಶ್ಯ
ಅನ್ನಿಸುತ್ತವೆ. ಹೇಗಿದ್ದರೂ ಸಮಯ ಕಳೆಯಲು ಬೇಕಲ್ಲವಾ ಕೆಲಸಗಳು! ಎಷ್ಟು ಮಾಡಿದರೂ ಏನು ಮಾಡಿದರೂ ಮನಸಿಗೆ ಇಷ್ಟವಾಗದ ನೂರು ಹಾದಿಗಳಲ್ಲಿ ಬದುಕು ತುಂಬ ಬದುಕಿನ ಅಗತ್ಯಗಳಿಗಾಗಿ ಹಾದು ಬಂದಿರುತ್ತೇವೆ. ಆದರೆ ಒಂದಷ್ಟು ದಿನ ನಮ್ಮ ಇಚ್ಛೆಯ ಕೆಲಸ ನಮ್ಮ ಸಂತೋಷದ ಕೆಲಸ ಮಾಡಬೇಕು. ಮೈ ಮುರಿಯುವಷ್ಟು ಆಗದಿರಬಹುದು. ಆದರೆ ನಮ್ಮ ಕೆಲಸದಲ್ಲಿ ನಾವು ಸಂತೃಪ್ತರಾಗುವಷ್ಟು....
ಆದರೆ ಈ ಕೆಲಸಗಳು ಮನಸಿನ ಒತ್ತಡಗಳಿಗೆ ಸಮಯದ ಒತ್ತಡಗಳ ಪೇರಿಸಿದರೆ ಮಾತ್ರ ಬದುಕು ಅಸಹನೀಯವೆನಿಸಿಬಿಡುತ್ತದೆ.ನಮ್ಮದಲ್ಲದ ಸಮಯಗಳು ನಮ್ಮನ್ನೇ ನಮಗೆ ಅಪರಿಚಿತರನ್ನಾಗಿಸಿಬಿಡುತ್ತವೆ. ಆದರೆ ಬದುಕಿನ ಸಕ್ಸಸ್ಗೆ ಬೇಕು ಕೆಲಸಗಳು. ಕೆಲಸಗಳು ಮಾತ್ರ ನಮ್ಮನ್ನ ಅತ್ಯುತ್ತಮವಾಗಿಡಬಲ್ಲವು. ಅದಕ್ಕೆ ಪ್ಲಾನಿಂಗ್ ಬೇಕು. ಸಮಯವನ್ನ ಸದುಪಯೋಗಿಸಿಕೊಳ್ಳಲು ಅನವಶ್ಯಕ ಎನಿಸುವ ಕೆಲವಷ್ಟನ್ನ ಬಿಡಬೇಕಾಗುತ್ತದೆ. ಅದರಲ್ಲಿ ಮನುಷ್ಯರೂ ಇರಬಹುದು. ಸಮಯ ಕೊಲ್ಲುವ ಹವ್ಯಾಸಗಳಿರಬಹುದು. ಬದುಕಿನ ಅತೀ ಮುಖ್ಯವಾದ ಕೆಲವು ನಿರ್ಣಯಗಳಿಗೋಸ್ಕರ ಕೆಲವರಿಂದ ಅಹಂಕಾರಿ ಅನಿಸಿಕೊಳ್ಳಬೇಕಾಗಬಹುದು. ದೂರಮಾಡಿಕೊಳ್ಳುವ ಕೆಲವು ಒಂದಿಷ್ಟು ನೋವನ್ನೂ ಕೊಡಬಹುದು. ಒಂದಷ್ಟು ಪಡೆದುಕೊಳ್ಳುವುದಕ್ಕೋಸ್ಕರ ಕೆಲವಷ್ಟನ್ನಾದರೂ ತೆರಲೇಬೇಕಲ್ಲ!
ಅಂತಹ ಒಂದು ವಾಸ್ತವ ಬದುಕಿನ ಎದುರುನಿಂತು ಇವತ್ತು ನಿನ್ನ ಬೀಳ್ಕೊಡುತ್ತೇನೆ. ಮತ್ತದೇ ಪ್ರೀತಿಯೊಡನೆ........