Sunday, November 18, 2012

ಈ ತೀರದಲ್ಲಿ..............



ಕೃಪೆ:ಅಂತರ್ಜಾಲ



    ಈ ತೀರದಲ್ಲಿ ಮತ್ತೆ ಬರೆಯುತ್ತಿದ್ದೇನೆ. ಮನಸಿನರಮನೆಯಲ್ಲಿ ಒಂದಿಷ್ಟು ನೆನಪುಗಳ ತೋರಣವಿದೆ. ಬರೆಯುವುದು ಅನ್ನುವುದು ಬರವಣಿಗೆಯಾಗದೇ ಮನಸೇ ಆಗಿರಬೇಕೆಂಬ ಬಯಕೆ ನನ್ನದು. ಬದುಕಿನ ಅನುಭವಗಳ ಜೊತೆ ಒಂದಿಷ್ಟು ಭಾವಗಳ ಹಂಚಿಕೊಳ್ಳುವ ದಿನಚರಿ ನಮ್ಮದು.
       ದಿನ ದಿನಗಳು ಎಂಥ ಬದಲಾವಣೆ ಬದುಕಿಂದು! ಪೃಕೃತಿ ಪೊರೆಕಳೆಚಿದಂತೆ ಬದುಕಿನ ಬಣ್ಣ ಬದಲಾಗುತ್ತಿದೆ. ಬದುಕೊಂದು ದೀರ್ಘ ಪಯಣವೆಂದುಕೊಂಡರೆ ಇದೊಂದು ರೋಮಾಂಚನಪೂರ್ಣ ಪ್ರಯಾಣವೇ.. ಜೊತೆ ಬರುವ ದಾರಿಹೋಕ ಪ್ರಯಾಣಿಕರೂ ಬದುಕಿಗೆ ಸಾಥ್ ನೀಡುತ್ತಾರೆ! ನಾವು ನಾವೇ ನಮ್ಮೊಳಗೆ ಅವರ ಸೇರಿಸಿಕೊಂಡು ನಮ್ಮವರಾಗಿಸಿಕೊಂಡು ಮರೆತುಬಿಡುತ್ತೇವೆ ವಾಸ್ತವದ ಈ ಪ್ರಯಾಣವನ್ನೇ. ಅಲ್ಲೇ ಮನೆಕಟ್ಟಿಕೊಂಡವರಂತೆ ನಮ್ಮದೇ ಬದುಕಿನ ಭಾಗದಂತೆ ಆವರಿಸಿಕೊಂಡುಬಿಡುತ್ತೇವೆ. ಎಲ್ಲ ಭ್ರಮೆ ಮನಸಿನದು. ಯಾವತ್ತೋ ನಿಂಗೆ ಹೇಳಿದ್ದೆ ನೆನಪಿದೆಯಾ? ಈ ಬದುಕಿನ ಜೊತೆಯಲ್ಲಿ ಯಾರೂ ಶಾಶ್ವತವೆಂಬ ಭ್ರಮೆಗಳಿಲ್ಲ ನನಗೆ ಅಂತ.  ಬುದ್ಧಿ ನಂಬುವ  ನಿಲುಕುವ ಸತ್ಯವಿದು. ಆದರೆ ಭಾವ ಹಾಗಲ್ಲ. ಅದು ಭ್ರಮೆಯನ್ನೂ ನಿಜವೆಂದೇ ತಿಳಿದು ನಂಬುತ್ತದೆ. ಪ್ರೀತಿಸುತ್ತದೆ. ಅದಕ್ಕೇ ಅಗಲಿಕೆಯ ನೋವು ಅನಿವಾರ್ಯ ಬದುಕಿಗೆ.

 ಏನೂ ನೋವೂ ನಲಿವುಗಳೇ ಇಲ್ಲದಿದ್ದರೆ ಹೇಗೆ ಸಾಧ್ಯ ಬದುಕೆಂಬುದು ರಸಪೂರ್ಣವಾಗಲು? ಅನುಭವಗಳ ಬಿಸಿಗೆ ಕರಗುವ ಮೇಣ ಮಾತ್ರ
ಬತ್ತಿಯಾಗಿ ಉರಿದು ಬೆಳಕಾಗುವುದು. ಅಂದ ಚಂದದ ಗೊಂಬೆಯಾಗುವುದು. ಬಿಸಿ ತಾಗದ, ತಂಪಿಗೆ ಬೆದರುವ, ಗಾಳಿಗೆ ಅದರುವ ಯಾವ ಬದುಕೂ ಅನುಭವಗಳ ತೊಟ್ಟಿಯಾಗುವುದಿಲ್ಲ. ಹಾಗೇ ಎಲ್ಲ ಬದುಕಿಗೂ ಅದರದ್ದೇ ಆದ ಒಂದಿಷ್ಟು ಅನುಭವಗಳ ತೊಟ್ಟಿಯಿದೆ. ಅದನ್ನು ತುಂಬಿಕೊಳ್ಳುವ ಬದುಕಿನ ಬುಟ್ಟಿಗೆ ಬಣ್ಣದ ಮೆರಗಿನ ಹೊಳಪಿಡುವ ಬಯಕೆ ನನ್ನದು.. ಹಾಗಾಗಿ ಭಯ, ಕೋಪ, ನೋವು, ನಲಿವುಗಳ ಆಚೆಗೆ ನಾನಿಲ್ಲುವುದು
ನನ್ನದೇ ಮನಸಿನ ಮನೆಯಲ್ಲಿ. ಮತ್ತಲ್ಲಿ ಬೆಳದಿಂಗಳ ಹಾಗೇ ಕಡುಗಪ್ಪು ಕತ್ತಲೆಯೂ ಇದೆ. ನಲಿವಿನ ಹಾಗೇ ನಿಟ್ಟುಸಿರಿನ ಬಿಸಿ ಕಂಬನಿಗಳೂ ಇವೆ.

      ಒಂದು ವಿಷಯ ನಿನ್ನಲ್ಲಿ ಹೇಳಬೇಕೆಂದು ಅಂದುಕೊಳ್ಳತ್ತಲೇ ಇದ್ದೇನೆ. ಒಂದಿನ ನಮ್ಮಿಬ್ಬರ ಕನಸಿತ್ತು. ನೊಂದ ಮನಸುಗಳಿಗೆ ಸಾಂತ್ವನ ಹೇಳುವ ಎತ್ತರಕ್ಕೆ ಬೆಳೆಯಬೇಕೆಂಬುದು. ಹಾಗೇ ಬದುಕಿನ ಎಷ್ಟೋ ಭಾಗಗಳಲ್ಲಿ ನಾನು ಕಾಣುತ್ತಿದ್ದೇನೆ. ನೊಂದ ಮನಸುಗಳ ನೋವಿನ ದನಿಯನ್ನ. ಕೇಳುತ್ತಿದ್ದೇವಲ್ಲವಾ? ನಾನಂತೂ ದಿನ ಬೆಳಗಾದರೆ ಅಂತ ಮನಸುಗಳ ಕಾಣುತ್ತೇನೆ. ಅದಕ್ಕೆಂದೇ ನನಗೆ ನನ್ನ ಮನಸಿನ ನೋವು ಅನ್ನೋದಕ್ಕಿಂತ ಮೊದಲು ಎದುರಿಗಿರು ಯಾವುದೇ ಮನಸಿನ ಮೇಲಾಗುವ ಪರಿಣಾಮ ಮತ್ತದರ ಸಾಂತ್ವನ ಮುಖ್ಯವೆನಿಸಿಬಿಡುತ್ತದೆ. ಈ ವಿಷಯದಲ್ಲಿ ಸ್ವ ಹಿಂಸೆ ಅಂದುಕೊಳ್ಳುವ ಎಷ್ಟೋ ನೋವನ್ನು ನಾನು ಮೌನವಾಗಿ ಸಹಿಸಬೇಕಾಗಬಹುದು. ಆದರೆ ಒಂದಂತೂ ಸತ್ಯ. ಕಷ್ಟ ನೋವುಗಳು ನಾವು ಮತ್ತೊಬ್ಬರನ್ನು ನೋಡಲು ಕಲಿತಾಗ ಅವರಿಗೆ ಕಿಂಚಿತ್ ಕೈಲಾದ ಸಹಾಯ ಮಡುವ ಮನಸು ಇಟ್ಟುಕೊಂಡಾಗ ಮಾತ್ರ ನಮ್ಮ ಮನಸಿನ ಈ ಭಾಗವೆಷ್ಟು ಗೌಣ ಅಂತ ಗೊತ್ತಾಗೋದು. ಆಗ ಮಾತ್ರ ನನ್ನ ನೋವು ನನಗೆ ಅಲ್ಪ ಅನ್ನಿಸೋದು. ಮತ್ತೆ ಮತ್ತೆ ನನಗೆ ಎದುರಿನ ಮನಸಿನ ಸೌಖ್ಯಕ್ಕೆ ನಾಏನು ಮಾಡಬಹುದು ಅಂತ ಯೋಚಿಸೋದು. ಅದನ್ನ ಕ್ರಿಯೆಗಿಳಿಸೋದು. ಆದರೆ ಎಲ್ಲೋ ಒಂದುಕಡೆಯಾದರೂ ನಾವು ಸ್ವಾಥರ್ಿಯಾಗುತ್ತೇವೆ... ಭಗವತಿಯಲ್ಲಿ ಕೇಳುತ್ತೇವೆ. ಎಷ್ಟೊಂದು ಜನರಿಗೆ ಕಿವಿಯಾಗಿದ್ದೇನೆ ನಾನು! ನನಗೂ ನನ್ನ ಮನಸ್ಸೆಲ್ಲ ಬರಿದಾಗಿಸುವಂತ ಒಂದು ಕಿವಿ ಕೊಡು. ಸುರಿಯಬಲ್ಲ ಮನಸಿನೊಂದು ಪಾತ್ರೆ ಕೊಡು. ಅಂತ. ಹೌದು ಸ್ವಾರ್ಥವೇ ಇದು. ಆದರೆ ಮನಸಿದನ್ನ ಬಯಸೋದು ಅಷ್ಟೇ ಸತ್ಯ. ಅದಕ್ಕೆಂದೇ ಮನಸಿನ ಮಾತು ಕೇಳಿಸುಕೊಳ್ಳುವ
ಮನಸುಗಳಿಗಾಗಿ ಈ ಭೂಮಿಯಮೇಲೆ ಒಂದಿಷ್ಟು ಆರ್ತ ಮನಗಳು ಸದಾ ಇರುತ್ತವೆ.ಮತ್ತದರಲ್ಲಿ ನಾವೂ ಸೇರುತ್ತೇವೆ.


     ಈ ಮನಸಿನ ತೀರದಲ್ಲಿ ಏನೇನೋ ಅಲೆಗಳು. ಅರಿವಾಗದಿದ್ದರೆ ಹೇಳಿಬಿಡು. ಮೌನ ಯಾಕೋ ಅಸಹನೀಯವೆನ್ನಿಸುತ್ತಿದೆ. ಮಾತಾಗು........ ಒಂದಿಷ್ಟು ಮಾತು ಚಚರ್ೆ ನಮ್ಮನ್ನ ಬೆಳೆಸಲಿ...ಮನದ ಮಾತುಗಳಿವೆಯಾದಲ್ಲಿ ಅದಕ್ಕೆ ಜೀವ ತುಂಬಲಿ. ಬೇಗ ಸಿಗುತ್ತೇನೆ ಮತ್ತಿದೇ ತೀರದಲ್ಲಿ.




3 comments:

  1. ಜೊತೆ ಬರುವ ದಾರಿಹೋಕ ಪ್ರಯಾಣಿಕರೂ ಬದುಕಿಗೆ ಸಾಥ್ ನೀಡುತ್ತಾರೆ! ನಾವು ನಾವೇ ನಮ್ಮೊಳಗೆ ಅವರ ಸೇರಿಸಿಕೊಂಡು ನಮ್ಮವರಾಗಿಸಿಕೊಂಡು ಮರೆತುಬಿಡುತ್ತೇವೆ ವಾಸ್ತವದ ಈ ಪ್ರಯಾಣವನ್ನೇ. ಅಲ್ಲೇ ಮನೆಕಟ್ಟಿಕೊಂಡವರಂತೆ ನಮ್ಮದೇ ಬದುಕಿನ ಭಾಗದಂತೆ ಆವರಿಸಿಕೊಂಡುಬಿಡುತ್ತೇವೆ. ಎಲ್ಲ ಭ್ರಮೆ ಮನಸಿನದು. ಯಾವತ್ತೋ ನಿಂಗೆ ಹೇಳಿದ್ದೆ ನೆನಪಿದೆಯಾ?...

    ತುಂಬಾ ಸತ್ಯವಾದ ಮಾತುಗಳು... ನಾವು ಎಲ್ಲವರನ್ನು ನಮ್ಮವರೇ ಎಂದು ತಿಲಿದುಕೊಂಡ್ ಎಲ್ಲವನ್ನು ಹೇಳಿಬಿಟ್ಟು ಹಗುರ ಆಗುತ್ತೇವೆ.. ಆದರೆ ಅ ಬದುಕೇ..ಅದು ಅಂದಿಗೆ ಕೊನೆಯಾದರು ಯಾದಿತು..

    ನಿಮ್ಮ ಇ ಬರವಣೆಗೆಯ ಸರೋವರದ ಅಲೆಗಳು ನಮ್ಮ ನಿಜ ಜೀವನದ ಅಲೆಯೇ ಎಂದು ಎನಿಸುತ್ತಿದೆ,,

    ReplyDelete
  2. ತು೦ಬಾ ಅರ್ಥಪೂರ್ಣವಾದ ಬರಹ. ಬಿಸಿ ತಾಗದ, ತಂಪಿಗೆ ಬೆದರುವ, ಗಾಳಿಗೆ ಅದರುವ ಯಾವ ಬದುಕೂ ಅನುಭವಗಳ ತೊಟ್ಟಿಯಾಗುವುದಿಲ್ಲ... ತು೦ಬಾ ಸತ್ಯವಾದ ಮಾತು. ಮನಸ್ಸಿನ ಮಾತುಗಳನ್ನೆಲ್ಲ ಹೇಳಿ ಹಗುರಾಗಬಹುದಾದ ಕಿವಿ ಸಿಗುವುದು ಅದೃಷ್ಟದ ಸ೦ಗತಿ! ಹಾಗ೦ತ ಹೇಳದೆ ಹೆಪ್ಪುಗಟ್ಟುವುದು ಕೂಡ ಕೆಲವೊಮ್ಮೆ ಆ೦ತರಿಕ ಬೆಳವಣಿಗೆಯ ದೃಷ್ಟಿಯಿ೦ದ ಅತ್ಯಾವಶ್ಯಕ. ಮನಸ್ಸಿನ ಅಲೆಗಳ ಈ ನರ್ತನ ನಿರ೦ತರವಾಗಿರಲಿಯೆ೦ಬ ಹಾರೈಕೆಯೊ೦ದಿಗೆ....

    ReplyDelete