Tuesday, April 30, 2013

ಅಮ್ಮನೆಂದರೆ........



ಚಿತ್ರ ಕೃಪೆ: ಅಂತರ್ಜಾಲ.

              ತುಂಬಾ ವರ್ಷಗಳಿಂದ ನೋಡುತ್ತಿದ್ದೇನೆ. ಇವತ್ತಿನ ಯುವ ಜನಾಂಗದ ಮನಸ್ಥಿತಿಯ ಕುರಿತು ಭಯವಾಗುತ್ತದೆ.
ಶಾಲಾ ಕಾಲೇಜು ದಿನಗಳಲ್ಲಿ ಗುರು ಹಿರಿಯರ ಕುರಿತು ಒಂದಿಷ್ಟು ಭಯವನ್ನೂ ಒಂದಿಷ್ಟು ಸಂಸ್ಕಾರವನ್ನೂ ತುಂಬಿಕೊಂಡ ನಮ್ಮ ಹುಡುಗರಿಂದು ಮಾನವೀಯತೆಯನ್ನೂ ಮರೆಯುತ್ತಿದ್ದಾರೆ. ಯಾಕೆ ಈ ಮಾತು ಹೇಳಬೇಕೆನಿಸಿತು ಗೊತ್ತಾ?  ನಿನ್ನೆ ಒಂದು ಘಟನೆ ನಡೆಯಿತು.ಅದನ್ನೂ ಅದರ ಹಿನ್ನೆಲೆಯನ್ನೂ ಹೇಳಿಕೊಳ್ಳಬೇಕು ನಾ.

      ತುಂಬಾ ಹಿಂದೆ ಅಂದರೆ ಹತ್ತು ವರ್ಷಗಳ ಹಿಂದಿನ ಮಾತಿದು. ಪುಟ್ಟ ಮಗುವನ್ನೆತ್ತಿಕೊಂಡು ಒಬ್ಬಳು ಸ್ತ್ರೀ ಬಸ್ಸೇನಿರುವಾಗ ವಿಪರೀತ ರಶ್ಶು. ನಮ್ಮ ಹಳ್ಳಿಗಳ ಬಸ್ಸಿನ ದಿನದ ಹಣೆಬರಹ ಇದೇ. ಎಲ್ಲರಿಗೂ ಗೊತ್ತಿರೋದೇ. ಇಂದಿಗೂ ಅದು ಹಾಗೇ ಇದೆ. ಹಾಗೆ ಹತ್ತುವ ಮೊದಲು ಕಿಟಕಿಯಂಚಿನಿಂದ  ತನ್ನ ಬಳಿ ಇರೋ ಏನೋ ಚೀಲ  ಒಬ್ಬರ ಬಳಿ ಕೊಟ್ಟು  ಒಂದು ಸೀಟು ಹಿಡಿಯಲು ವಿನಂತಿಸಿಕೊಂಡಳು.  ಆ ಮಹನೀಯರು ಅವಳಿಗಾಗಿ ಒಂದು ಸೀಟನ್ನೂ ಇಟ್ಟು ಇಳಿದು ಹೋದರು. ಬಸ್ಸಿನ ರಶ್ಶಿನಲ್ಲಿ ವಿಪರೀತ ಸೆಕೆಯಿಂದ ಅಳುತ್ತಿದ್ದ ಮಗುವನ್ನೆತ್ತಿಕೊಂಡು ಮೇಲೇರಿದರೆ ಅವಳ ಬ್ಯಾಗಿನ ಸಹಿತ ಸೀಟು ನಾಪತ್ತೆ. ಇಡೀ ಬಸ್ಸಲ್ಲಿ ಅವಳ ಬ್ಯಾಗೂ ಇರಲಿಲ್ಲ. ಅವಳಿಗೊಂದು ಸೀಟು ಯಾರೂ ಕೊಡಲಿಲ್ಲ. ಅದೇ ಸೀಟಿನ ಮೇಲೆ ಮೂವರು ಕಾಲೇಜು ಹುಡುಗಿಯರು ಕುಳಿತು ತಮಗೇನೂ ಗೊತ್ತಿಲ್ಲದೇ ಇರೋರ ಹಾಗೇ ಹರಟುತ್ತಿದ್ದರು. ಅವಳು ಕೇಳಿಕೊಂಡರೂ ಒಂಚೂರು ಜಾಗ ಇಡೀ ಬಸ್ಸಲ್ಲಿ ಎಲ್ಲಯೂ ಅವಳಿಗೆ ದೊರೆಯಲಿಲ್ಲ. ಬಸ್ಸಿನ ತುಂಬಾ ತುಂಬಿದ್ದ ಹೈಸ್ಕೂಲು ಮತ್ತು ಕಾಲೇಜು ಮಕ್ಕಳೇ ಅವಳೆಡೆಗೆ ಕನಿಕರವನ್ನೂ ತೋರಲಿಲ್ಲ. ಆಮೇಲೆ ವೃದ್ಧರೊಬ್ಬರು ಅವಳನ್ನು ತಮ್ಮ ಸೀಟು ಬಿಟ್ಟು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟರು. ಹಾಲಿಗಾಗಿ ರಚ್ಚೆಹಿಡಿದ ಮಗು ಅವಳ ಮಡಿಲಲ್ಲಿ ಶಾಂತ ಮಲಗಿತು.  ನಿನ್ನೆ ಮತ್ತದೇ ಅನುಭವ. ತಿಂಗಳು ತುಂಬಿದ ಗರ್ಭಿಣಿಗೆ ನಾನೊಂದು ಸೀಟು ಹಿಡಿದುಕೊಂಡರೆ ಯಾವ ಮುಲಾಜಿಲ್ಲದೇ ಪೇಪರ ಇಟ್ಟಲ್ಲೇ ಚೂರೂ ಬೇಸರವಿಲ್ಲದೇ ಕೂರುವ ಇದೇ ಹುಡುಗಿಯರು ಇಡೀ ಬಸ್ಸು ತುಂಬ ತಮ್ಮ ಬ್ಯಾಗ ಇಟ್ಟು ಬುಕ್ ಮಾಡಿಕೊಳ್ಳುವವರಂತೆ ಸೀಟು ಹಿಡಿದುಕೊಂಡಾಗ ಅವರ ಬ್ಯಾಗು ಸ್ವಲ್ಪ ಸರಿಸಿದರೆ ಕೆಂಡಾ ಮಂಡಲವಾಗುತ್ತಾರೆ! ನನಗ್ಯಾಕೆ ಉಸಾಬರಿ ಅಂತವಾ ಮನಸೇ.. ನಿಜಕ್ಕೂ ನೋವಾಗುತ್ತದೆ. ಹುಡುಗರ ಬಗ್ಗೆ ನಾನು ಹೇಳೋದಿಲ್ಲ. ಆದರೆ ಇವರು ಹುಡುಗಿಯರು. ಇನ್ನೊಂದು ದಿನ ಇವರು ತಾಯಿಯಾಗುವವರು. ಯಾವುದೋ ತಾಯಿಯ ಮಗ್ಗುಲಲ್ಲಿ ಹೀಗೇ ಜೋತಾಡಿಕೊಂಡು ಬೆಳೆದವರು. ಯಾವುದೋ ತಾಯಿಯ ಗರ್ಭದಲ್ಲಿ ಕುಳಿತೇ ಧರೆಗಿಳಿದವರು. ನಾಳೆಯ ಮಕ್ಕಳಿಗೆ ಹಾಲುಣಿಸುವವರು. ಯಾಕಿಷ್ಟು ಮಾನವೀಯತೆ ಮರೆತ ಕ್ರೂರರಾಗುತ್ತಾರೆ! ಮನಸ್ಸು ರೋಧಿಸುತ್ತದೆ. ಭಗವಂತ ಹೆಣ್ಣಿಗೆ ಕೊಟ್ಟಿರೋ ವರ ತಾಯ್ತನ ಎನ್ನುವುದು. ಅದು ಪ್ರತೀ ಹೆಣ್ಣಿಗೆ ಒಂದಲ್ಲ ಒಂದು ದಿನ ನಿಲ್ಲಲೇಬೇಕಾದ ಸ್ಥಾನ. ಅಂಥವಳಿಗೇ ನಮ್ಮ ತಾಯಂದಿರ ಬಗ್ಗೆ ಗಭರ್ಿಣಿ ಹೆಣ್ಣಿನ ಬಗ್ಗೆ ಒಂದಿಷ್ಟು ಸಹಾನುಭೂತಿಯೂ ಇಲ್ಲದಂತಾಗುತ್ತಿದೆಯೆರಂದರೆ ಎಂಥ ನೋವು.!! 
                  ನಾನು ಸಮಾಜ ಸುಧಾರಕಳಾಗಿ ಹೇಳ್ತಿಲ್ಲ ಈ ಮಾತನ್ನು. ತುಂಬ ನೋವಿನಿಂದ ಹೇಳುತ್ತಿದ್ದೇನೆ. ಯಾರನ್ನೂ ಗೌರವದಿಂದ ಕಾಣುವ ಮನೋಭಾವವೇ ಉಳಿಯುತ್ತಿಲ್ಲ. ಸಹಾಯ ಮಾಡುವುದು ದೂರ ಉಳಿಯಿತು. ಒಂದಿನ ನನ್ನ ಕಣ್ಣಲ್ಲೇ ಕಂಡಿದ್ದೇನೆ. ಇಂತದೇ ಸಂದರ್ಭದಲ್ಲಿ ಒಬ್ಬಳು ಗರ್ಭಿಣಿ ಹೆಣ್ಣಿಗೆ ಜಾಗ ಬಿಟ್ಟುಕೊಟ್ಟ ತನ್ನದೇ ಗೆಳತಿಯ ಕುರಿತಾಗಿ ಆಡಿಕೊಂಡು ನಗುವುದನ್ನ. ಒಳ್ಳೆಯ ಮನಸಿನವರಿಲ್ಲ  ಅನ್ನುತ್ತಿಲ್ಲ. ಆದರೆ ಅಂತಹ ಒಳ್ಳೆಯತನವನ್ನೂ ಕೆಟ್ಟದಾಗಿಸುವಂತೆ ನಗುತ್ತಿದ್ದಾರೆ
ನಮ್ಮ ಭಾವೀ ತಾಯಂದಿರು.! ಬದುಕಲ್ಲಿ ಯಾವತ್ತಾದರೂ ಇಂತಹ ದಿನಗಳು ಅವರ್ಯಾರಿಗೂ ಬಾರದಿರಲಿ. ಯಾಕಂದರೆ ಎಲ್ಲರಿಗೂ ಕಾರಲ್ಲೇ ಮೆರೆಸುವ ಗಂಡಂದಿರು ಸಿಗುವುದಿಲ್ಲ. ಬಸ್ಸುಗಳಲ್ಲೂ ಓಡಾಡುವ ದಿನಗಳು ಅವರಿಗೂ ಬರಬಹುದು. ಭಗವತೀ ಆ ದಿನ ಅವರಿಗೆ ಅರಿವಾಗಿಸಲೀ ಹೊರತೂ ಆ ಕಷ್ಟಗಳ ಅವರಿಗೆ ಕೊಡೋದು ಬೇಡ.

              ತಾಯ್ತನ ಎಂದರೆ ಸುಲಭದ್ದಲ್ಲ. ನೋಡೋವಷ್ಟು ಅಂದ್ಕೊಂಡಷ್ಟು ಸರಳದ್ದಲ್ಲ. ಒಂದು ಜೀವವನ್ನು ತನ್ನುಡಿಯೊಳಗೆ ಹೊತ್ತು ಆಜೀವ ಎರಡಾಗುವವರೆ ಜೀವ ಉಸಿರಾಗಿಸಿಕೊಂಡು ರಕ್ತ ಮಾಂಸಗಳ ಜೊತೆ ಬೆರೆತುಕೊಂಡ  ಹೆಣ್ಣಿನ ದೇಹ ಭಾವ ಎಲ್ಲವೂ ತಾಯ್ತನಕ್ಕೆ ಕೇಳೋದು ಅವಳ ಜೀವಿತದ  ಒಂದು ಹೊಸ ಉಸಿರನ್ನ. ತಾಯಿಯಾಗದ ಹೆಣ್ಣಿಗೆ ಅದರ ಅರಿವಾಗೋದು ಕಷ್ಟವಿರಬಹುದು. ಆದರೆ ಹೆಣ್ಣಾಗಿ ಹುಟ್ಟಿ ತಾಯ್ತನದ ಕುರಿತು ಒಂದಿಷ್ಟೂ ಗೌರವ ಆದರ ಪ್ರೀತಿ ಇಲ್ಲದಿದ್ದರೆ ಅಂತಹ  ಸ್ತ್ರೀ ಬಗ್ಗೆ ಏನನ್ನಬೇಕೋ ತಿಳಿಯುತ್ತಿಲ್ಲ. ಯಾಕೋ ಈ ಘಟನೆ ನನ್ನ ತುಂಬ ನೋಯಿಸಿತು. ಅದಕ್ಕೇ ನಿನ್ನೊಂದಿಗೆ ಹಂಚಿಕೊಂಡೆ. ಯಾರು ಏನೂ ಸಹಾಯ ಮಾಡದಿದ್ದರೂ ತಾಯಿ ತನ್ನ ಮಗುವನ್ನು ಸಲಹುತ್ತಾಳೆ. ಎಂತ ನೋವು ಸಂಕಟಗಳಲ್ಲೂ ಸಹಿಸುತ್ತಾಳೆ. ಆದರೆ ನಮ್ಮದೇ  ಹುಡುಗಿಯರಿಗೆ ತಾಯ್ತನವೆಂದರೆ ಅಪಹಾಸ್ಯದ ಸಂಗತಿಗಳಾ! ನೋವಾಗೋದಿಲ್ಲವಾ?

       " ಅಮ್ಮ " ಎಷ್ಟಾಪ್ತ ಶಬ್ಧ! ಎಷ್ಟು ಆಪ್ತ ವ್ಯಕ್ತಿ. ಅವಳ ಒಡಲಿಂದ ಇಳಿದು ಬಂದ ಮಾಂಸದ ಮುದ್ದೆಯಂತ ನಮ್ಮನ್ನ ಬೆಳೆಸಿದ ಪೋಷಿಸಿದ ಅವಳ ಮಮತೆಗೆ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಾ? ಅಮ್ಮ ಅನ್ನೋ ಶಬ್ಧವೇ ಸಾಕು ಎಂಥ ಕಲ್ಲು ಮನಸನ್ನೂ ಕರಗಿಸುವ ಶಕ್ತಿಯಿದೆ ಅದಕ್ಕೆ. ಹಾಗಿದ್ದೂ ಮೊನ್ನೆ ನಮ್ಮ ನಡುವೆ ಮಾತು ಬಂತಲ್ವಾ? ಅಮ್ಮನ ಪ್ರೇಮವೂ ಸ್ವಾರ್ಥದ್ದು ಅನ್ನೋ ವಿಷಯವಿರಬೇಕು.ನೀ ಇದಕ್ಕೆ ಏನಂತೀಯ? ನನಗಿಲ್ಲಿ ಯಾವುದೇ ಒಂದು ಕೋನ ಮಾತ್ರ ಸರಿ ಅನಿಸಲ್ಲ. ಅಮ್ಮ ಅನ್ನೋಳು ಸದಾ ಮಕ್ಕಳ ಹಿತ ಬಯಸ್ತಾಳೆ ನಿಜ. ಅಮ್ಮನಿಗೆ ಹೋಲಿಕೆ ಅಮ್ಮ ಮಾತ್ರ ಅದೂ ನಿಜ. ಆದರೆ ಅಮ್ಮ ಅನ್ನೋಳು ಸಹ ಒಂದು ಜೀವ. ಅದು ಮನುಷ್ಯ ಸಹಜ ಎಲ್ಲ ಭಾವಗಳ ಹೊತ್ತಂತ ಒಂದು ಮಾನವ ಜೀವ. ಅಮ್ಮ ಮಕ್ಕಳನ್ನ ತನ್ನ ಮಡಿಲಲ್ಲಿ ಅನುಗಾಲವೂ ಇಟ್ಕೊಳ್ಳೋಕೆ ಸಾಧ್ಯವಿಲ್ಲ. ಬೆಳೆಯುತ್ತ ಬೆಳೆಯುತ್ತ  ರಕ್ತಗತವಾದ ಮತ್ತು ಪರಿಸರಗತವಾದ ನೂರೆಂಟು ರೂಪಗಳ ಮನುಷ್ಯ ಪಡೆದುಕೊಳ್ಳುತ್ತಾನೆ. ಮತ್ತು ಅದು ತಾಯಿ ಮತ್ತು ಮಕ್ಕಳ ಸಂಬಂಧದ ಮೇಲೂ ತನ್ನದೇ ಆದ ಪರಿಣಾಮ ಬೀರುತ್ತದೆ. ಒಂದಿಷ್ಟು ಅಂತರವನ್ನೂ ಸೃಷ್ಟಿಸುತ್ತದೆ. ಹಾಗಾಗಿ ತಾಯಿ  ತನ್ನ ಮಮತೆಯನ್ನು ಹಲವು ಬಾರಿ ಅಧಿಕಾರವಾಗಿಯೂ ಚಲಾಯಿಸ್ತಾಳೆ.  ಮತ್ತು ಮಕ್ಕಳು ತನ್ನ ಅಂಗೈಯನ್ನ ಬಿಟ್ಟು ಹೋಗುವುದು ಎಂತಹ ತಾಯಿಗಾದರೂ ಸಂಕಟವೇ... ಅಷ್ಟು ಮಾತ್ರದ ಹಕ್ಕೂ ಅವಳ ಸ್ವಾರ್ಥ ಅನಿಸಿದರೆ ನಿಜಕ್ಕೂ ತಾಯಿಯ ಪ್ರೇಮ ಸ್ವಾರ್ಥವೆನಿಸಿದ್ರಲ್ಲಿ ಯಾವ ತಪ್ಪೂ ಇಲ್ಲ. ಆದರೆ ತನ್ನದನ್ನು ತನ್ನದು ಅನ್ನುವುದು ಮತ್ತು ಅದನ್ನ ತನ್ನದೇ ಆಗಿ ಉಪಯೋಗಿಸುವುದು ಸಾಮಾನ್ಯ ಎಲ್ಲರೂ ಬಯಸುವ ಸ್ವಾರ್ಥ. ಒಬ್ಬ  ವಿರಾಗಿ ಯೋಗಿ ಸಹ ಅವನದಾದ ಅನುಷ್ಟಾನ, ಅವನದಾದ ಪ್ರಪಂಚ. ಖಾವಿ, ಮತ್ತು ಕಮಂಡಲಗಳ ತನ್ನದೆಂದೇ ಉಪಯೋಗಿಸುತ್ತಾನೆ. ಮತ್ತು ಅದು ತನ್ನದೇ ಆಗಿರಲಿ ಎಂದು ಬಯುಸುತ್ತಾನೆ. ಹಾಗಿದ್ದಮೇಲೆ ತನ್ನದೇ ಕರುಳಕುಡಿಯ ಮೇಲೆ ತಾಯಿಗಿರುವ ಅಧಿಕಾರಯುಕ್ತ ಪ್ರೇಮ ಸ್ವಾರ್ಥ ಎಂದು ಅನ್ನಿಸಿಕೊಳ್ಳಬಹುದಾ?

              ಹಾಂ.. ಅಮ್ಮ ಅನ್ನೋ ಶಬ್ಧದಡಿಯಲ್ಲಿ ತಮ್ಮದಲ್ಲದ ಜೀವಗಳನ್ನ ತಮ್ಮದೆಂದೇ ನಂಬಿ ಪ್ರೀತಿಸುವ ಜೀವಗಳು ಇಲ್ಲಿವೆ.ಅಲ್ಲಿ ಮಾತ್ರ ಸ್ವಾರ್ಥ ಇರಕೂಡದು. ಅಮ್ಮನ ಪ್ರೇಮ ಅಧಿಕಾರವಾಗಿ ಹಕ್ಕಾಗಿ ಚಲಾಯಿಸಹೋದರೆ ಅದು ಮಕ್ಕಳ ಮನಸಿನ ಮೇಲೆ ನಿರ್ದಿಷ್ಟ  ಪರಿಣಾಮ ಬೀರುತ್ತದೆ.ಬೆಳೆದು ನಿಂತ ಜೀವಗಳಿಗೆ ಪ್ರೇಮ ಬೇಕು. ಆದರೆ ಅದು ಆಪ್ತವಾಗಿರುವಷ್ಟು ಕಾಲ ಅಧಿಕಾರ ಹಕ್ಕೂ ಎಲ್ಲವೂ ಆಪ್ತ ಅನಿಸುತ್ತದೆ.  ಮಕ್ಕಳು ಸ್ವತಂತ್ರಪಕ್ಷಿಗಳಾದಮೇಲೆ ಈ ಅಧಿಕಾರ ಹಕ್ಕು ಎಲ್ಲಾ ಮರೆತು ಒಂದು ಸುಂದರ ಸ್ನೇಹದಂತ ಪ್ರೀತಿಯ ನಿರೀಕ್ಷೆ ಮಾತ್ರ ಮಕ್ಕಳಿಗೆ ಉಳಿದಿರುತ್ತದೆ. ಹಾಗಾಗೇ ಸ್ವಂತದ್ದೇ ಮಕ್ಕಳಾದರೂ ಬೆಳೆದಂತೆ ಅವರ ಜೊತೆ ಸ್ನೇಹವೇ ಹೆಚ್ಚು ಇಷ್ಟವಾಗುವುದು ಅವರಿಗೆ. ಅಲ್ಲಿ ಇರುವ ವಾತ್ಸಲ್ಯದ ಎಳೆ ಖಂಡಿತ ಮಕ್ಕಳ ಮನಸನ್ನ ತಲುಪುತ್ತದೆ.ಅಮ್ಮನ ಕುರಿತು ಮಾತನಾಡುವಾಗ ಈ ಜಗತ್ತಲ್ಲಿ ದಾದಿ (ನರ್ಸ್) ಗಳ ಸೇವೆ ನೆನೆಯಬೇಕು.  ನಮ್ಮದೇ ದೇಶದಲ್ಲಿ ಎಷ್ಟೋ ಸಾವಿರ ಸಾವಿರ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ದಾದಿಯರಿದ್ದಾರೆ! ಇತ್ತೀಚೆಗೆ ಇದು ಸಹ ಒಂದು ಹಣ ಮಾಡುವ ವೃತ್ತಿಯಾಗುತ್ತಿದೆ ಅಂತ ಗೊತ್ತು ನಂಗೆ. ಆದರೂ ನಿಸ್ವಾರ್ಥ ಮನಸ್ಸಿನಿಂದ ರೋಗಿಗಳ ಸೇವೆ  ಮಾಡುವ  ಆ ದಾದಿಯರಲ್ಲಿ ಎಂತಹ ತಾಯಿಯಿದ್ದಾಳೆ! ಒಬ್ಬ ಮದರ್ ಥೆರೆಸಾ ನಮಗೆ ಕಾಣುತ್ತಾರೆ. ಅಂತಹ ಸಾವಿರ ಸಾವಿರ ಅಮ್ಮಂದಿರು ಈ ನೆಲದಲ್ಲಿದ್ದಾರೆ. ಅವರಿಗೆ ಅವರ ಸೇವೆಗೆ ಯಾವ ಮಿತಿಯೂ ಇಲ್ಲ. ಮತ್ತವರಲ್ಲಿನ ಅಮ್ಮನಿಗೆ ಮತ್ಯಾರೂ ಸಾಟಿಯಲ್ಲ. ಹಾಗಾಗಿ ಸ್ತ್ರೀ ಯೊಳಗಿನ ಇಂತಹ ತಾಯ್ತನಕ್ಕೆ ಅದನ್ನಿಟ್ಟ ಆ ಭಗವತಿಗೆ ನೂರು ನಮನಗಳೊಂದಿಗೆ.

ಸಿಗೋಣ ಮತ್ತೊಂದು ತೀರದ ಸಂಜೆಯಲಿ...

Thursday, April 4, 2013

ಮೌನ ಮೌನ ಮೌನವೆಂಬ ಮಾತಿಲ್ಲದ ಮನೆಯೊಳಗೆ....

ಚಿತ್ರಕೃಪೆ: ಅಂತರ್ಜಾಲ


 

        ಕಳೆದು ಹೋಗುವ ಕಾಲವೆಂಬ ವಿಸ್ಮಯದಲ್ಲಿ ಒಂದು ಪುಟ್ಟ ಕಲಾಕೃತಿಯಂತೆ ಜೀವಿಸುವ  ಭಾಗ್ಯವಿದ್ದರೆ ಅದು
ಜೀವನದ ಸಾರ್ಥಕತೆ! ಉತ್ಕೃಷ್ಟವಾದದ್ದೇನೋ ಸೃಷ್ಟಿಸಿಬಿಡಬೇಕೆಂಬ ಹಂಬಲದಿಂದ ಹೊರಟ ಚಿತ್ರಕಾರನ ನೈಜತೆ ಮತ್ತು ಪ್ರತಿಭೆಗೆ ಸವಾಲುಗಳಿವೆ!
ಮನೆಯ ಮಗುವಿನ ಬಾಲ ಕೈಗಳಲ್ಲಿ ಮೂಡಿ ಬಂದ ಸಹಜ ರಂಗೋಲಿಗೆ ಅಂತಹ ಯಾವ ಸವಾಲುಗಳಿಲ್ಲ. ಈ ಮಾತಿನ ಹೋಲಿಕೆ ಯಾಕೆಂದರೆ
ನಾವು ಯಾವುದೋ ಗೊತ್ತಿಲ್ಲದ ಅಥವಾ ಅದು ಸವಾಲೊಡ್ಡುವ ಉತ್ಕೃಷ್ಟವೆಂಬ ಮಾಯಾಜಿಂಕೆಯ ಹಿಂದೆ ಬಿದ್ದುಬಿಟ್ಟಿದ್ದೇವೆ ಇತ್ತೀಚೆಗೆ! ಅದು
ಅರಿವಿಲ್ಲದ ಮಾಯಾಜಿಂಕೆ ಕೂಡ ಅಲ್ಲ. ಅರಿವು ತಂದುಕೊಟ್ಟ ಮಾಯಾಜಿಂಕೆ!

     ಸಮಾಜದ ಮಾತನಾಡುತ್ತ ಸಮಾಜಕ್ಕೆ ನಾವು ಹೊರತೆಂಬಂತೆ ಸೊಲ್ಲನ್ನೆತ್ತುತ್ತೇವೆ! ನಮ್ಮಿಂದಲೇ ಸಮಾಜ ಎಂಬುದು  ಕ್ಷಣದ ಮರೆವಿಗೆ ಸಾಕ್ಷಿಯಾಗುತ್ತದೆ!  ಮನಸೇ ಯಾಕೆ ಹೀಗೆ? ಎದೆಬಗೆಯುವಂತ ಕಟುಸತ್ಯಗಳನ್ನು,ಹೋಗಲಿ ನಮ್ಮದೇ ಬದುಕನ್ನು ಬೆತ್ತಲೆಗೊಳಿಸುವ ಸಮಾಜದ ಮುಂದೆ ಅನಾವರಣ ಗೊಳಿಸುವ ಸಾಮಥ್ರ್ಯ ನಮ್ಮಲ್ಲಿ ಎಷ್ಟು ಜನರಿಗಿದೆ?  ಸ್ಟಾರ್ ಪ್ಲಸ್ ನಲ್ಲಿ "ಸಚ್ ಕಾ ಸಾಮನಾ" ಎಂಬುದೊಂದು ಕಾರ್ಯಕ್ರಮ ಪ್ರಕಟವಾಗುತ್ತಿತ್ತು!  ಆ ಕಾರ್ಯಕ್ರಮದ ಕುರಿತು ನಾನಿಲ್ಲಿ ಹೇಳುತ್ತಿಲ್ಲ. ಆದರೆ ಆ ಕಾನ್ಸೆಪ್ಟ್ ಇದೆಯಲ್ಲ! ಅದು ಅದ್ಭುತ! ಬದುಕಲ್ಲಿ ಹಾಗೆ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಮಾಡುತ್ತ ಹೋದರೆ ಸಂಬಂಧಗಳು ಕರಕಲಾಗುವುದು ತಪ್ಪುತ್ತದೆ! ಸಮಾಜ ಸ್ವಸ್ಥವಾಗುತ್ತದೆ! ತಪ್ಪುಗಳನ್ನು ಒಪ್ಪಿಕೊಂಡಾಕ್ಷಣ ಅದನ್ನು ತಿದ್ದಿಕೊಳ್ಳುವ ಹೊಣೆಗಾರಿಕೆ ಕೂಡ ಶುರುವಾಗುತ್ತದೆ.  ಸುತ್ತಲು ಗಮನಿಸುವ ನೂರು ಕಣ್ಣುಗಳು ಮತ್ತು ನಮ್ಮನ್ನು ನಾವು
ತಿದ್ದಿಕೊಳ್ಳಬೇಕೆಂಬ ಚಿಕ್ಕ ಸಂಕಲ್ಪ ಮನುಷ್ಯನಿಗೆ ಯಾವ ಗುರು, ದೇವರು, ಹಾಗೂ ಶಿಕ್ಷಣ ಕೊಡದ ಆತ್ಮಿಕ ಶಕ್ತಿಯನ್ನು ನೀಡುತ್ತದೆ.  ಹಾಗಾಗಿ ಬದಲಾವಣೆಗೆ ಬದುಕಿನ ವಿಶಾಲತೆಗೆ ಮನಸು ತೆರೆದುಕೊಳ್ಳುತ್ತದೆ.

    ಅಂತರಾಳದ ಒಳಗಿಂದ ಒಮ್ಮೊಮ್ಮೆ ಸ್ಪುರಿಸುವ ಭಾವಸ್ಪುರಣಗಳಿಗೆ ಕಾರಣಗಳು ದೊಡ್ಡವಲ್ಲ. ಆದರೆ ಅದು ಕೊಡುವ ಆನಂದ ದೊಡ್ಡದು! ಆನಂದವೆಂಬುದು ಮನುಷ್ಯ ಸಹಜತೆಗಳಲ್ಲಿ ಒಂದು. ಹಾಗಿದ್ದೂ ಆನಂದದ ಬೆನ್ನು ಬೀಳಬಾರದಲ್ಲ! ಮನಸ್ಯಾಕೋ ಇತ್ತೀಚೆಗೆ ಈ ಆನಂದವೆಂಬ ನಿಜಕ್ಕು, ಆನಂದ ಸ್ವರೂಪಕ್ಕೂ ಮತ್ತೆ ಆನಂದವೆಂಬ ಮರೀಚಿಕೆಗೂ ನಡುವೆ ತೂಗಾಡುತ್ತಿದೆ. ಸತ್ಯವೆಂದರೆ ಆನಂದದ ಅಪೇಕ್ಷೆ ಸ್ವಾರ್ಥದ ರೂಪವೇ ಆಗಿದ್ದರೂ ಅಷ್ಟರಮಟ್ಟಿನ ಸ್ವಾರ್ಥ ಅಪೇಕ್ಷಣೀಯ ಅಲ್ಲವಾ? ಮನುಷ್ಯ ಆನಂದ ವೆಂಬುದು ಎಲ್ಲಿದೆ ಅಂತ ಹುಡುಕುವಾಗೆಲ್ಲ ನಿಜವಾದ ಆನಂದದ ಬೆನ್ನುಬೀಳುತ್ತೇನೆ! ಪೃಕೃತಿಯ ಸಹಜತೆಗಳಿಗಿರುವ ದಿವ್ಯಾನಂದ ಅದರ ಅನುಭೂತಿ ಬೇರೆಯೇ.. ಹಾಗಿದ್ದು ಅದನ್ನು ಹಂಚಿಕೊಳ್ಳುವ ಮನಸೊಂದಿಲ್ಲದಿದ್ದರೆ  ಆನಂದದ ಅನುಭೂತಿ ಮರುಕ್ಷಣವೇ ಒಂಟಿತನವನ್ನು ಬಾಧಿಸುತ್ತದೆ! ಹಾಗಿದ್ದರೆ ಆನಂದವೆಂಬುದು ಮನಸುಗಳ ಸಾಮಿಪ್ಯದಲ್ಲಿ ಮಾತ್ರ ಸಿಗುವ ಭೌತಿಕವೇ? ಈ ಪ್ರಶ್ನೆ ಏಳುತ್ತಿದ್ದಂತೆ ಮನುಷ್ಯ  ಸದಾ ಮತ್ತನಾಗಲು ಬಯಸುವುದೇ ಆನಂದ ಅಂದುಕೊಂಡಿದ್ದಾನೆಂಬ  ಮಾತು ಕಾಡುತ್ತದೆ! ಅದು ಅರ್ಥ, ಕಾಮ, ಮೋಹ,ಅಧಿಕಾರ, ಮದಿರೆ ಯಾವುದೂ ಇರಬಹುದು! ಇವತ್ತು ಪ್ರಪಂಚವೇ ಈ ಆನಂದಗಳ ಹೊಂದಲು ಬಯಸುವ ಧಾವಂತಕ್ಕೆ ಬಿದ್ದಿದೆ! ಇದರ ಮಧ್ಯೆ ಪ್ರಜ್ಞೆಯೆಂಬ ಮತ್ತೊಂದು   ಆನಂದವಿದೆ! ಪ್ರಜ್ಞಾಪೂರ್ವಕ ಸಾಧಿಸಿಕೊಳ್ಳುವ, ಪ್ರೀತಿಸಿಕೊಳ್ಳುವ ಅಲೌಕಿಕ ಆನಂದದ ಬೆಳಕೊಂದಿದೆ! ಅದನ್ನು ಹುಡುಕುವ ಪ್ರಯತ್ನವಷ್ಟೆ! ನಮ್ಮಂತ ಸಾಮಾನ್ಯರಿಗೆ ಅದು ನಿಲುಕುವುದಲ್ಲ! ಇಂತೆಲ್ಲ ಯೋಚನೆಗಿಳಿಯುವ ಮನಸಿನ ವೈಚಾರಿಕ ಪ್ರಪಂಚಕ್ಕೆ ಎಷ್ಟೊಂದು ತಿರುವುಗಳಿವೆ! ಅಂತದ್ದೇ ಮತ್ತೊಂದು ತಿರುವಿನಲ್ಲಿ ಮತ್ತೊಂದಿಷ್ಟು ಮಾತು....

   ಮೊನ್ನೆ ಒಬ್ಬಳು ಗೆಳತಿ ಹೇಳುತ್ತಿದ್ದಳು! ನಿನ್ನ ಇತ್ತೀಚೆಗಿನ ಮಾತು ವೈಚಾರಿಕವಾಗ್ತಿದೆಯೇ.. ಹೃದ್ಯವಾಗ್ತಿಲ್ಲ! ಅಂತ. ನಿಜ. ಕೆಲವು ಸಲ ಬದುಕು ಏನನ್ನು ಹೇಳುತ್ತದೆಯೋ ಅದನ್ನೇ ಮಾತನಾಡುವ ಹೊತ್ತಿಗೆ ಅದೊಂದಿಷ್ಟು ರಸವಿಲ್ಲದ ಮಾತುಗಳಾಗಿಬಿಡುತ್ತವೆಯೇನೋ.. ಹಾಗೆ ಪ್ರತಿ ಬಾರಿ ಮನಸಿನೊಂದಿಗೆ ಮಾತಿಗೆ ಕೂತಾಗಲೂ  ನಾನು ಬಯಸುವುದು ಮನಸಿನ ಮಾತು ಹೃದಯಕ್ಕಿಳಿಯೆಂಬ ಬಯಕೆಯಿಂದಲೇ.. ಆದರೆ ಹಾಗಾಗುವುದಿಲ್ಲ. ಸಹಜತೆಯೆಂದರೆ ಇದೇ ಇರಬಹುದು.. ಜೀವಿಸುವ ಸರಳತೆಯನ್ನೇ ಮನಸಿನೊಂದಿಗೆ ಹಂಚಿಕೊಳ್ಳುವ ಕನಸು ನನ್ನದು. ಒಮ್ಮೆ ಹಾಗೆ ಒಮ್ಮೆ ಹೀಗೆ...

  ಮುಂದ್ಯಾಕೋ ಮಾತುಗಳು ತೋಚುತ್ತಿಲ್ಲ.ಒಂದಷ್ಟು ಕ್ಷಣಗಳ ಕಾಲ ಮೌನ ಮೌನ ಮೌನವೆಂಬ ಮಾತಿಲ್ಲದ ಮನೆಯೊಳಗೆ.. ನೆಲೆಯಾಗಲಿ ಆತ್ಮದರಿವು ಬೆಳಕಾಗಲಿ ಎಲ್ಲ ಕಡೆಗೆ..
ಒಂದು ಪುಟ್ಟ ವಿರಾಮಕ್ಕೆ ಅನುಮತಿ ಕೋರುತ್ತ..