Thursday, January 30, 2014

ಬಿಕ್ಕುಗಳ ಸದ್ದಡಗಿ..


ಕಾಯ್ದ ಕನಸುಗಳ ಮೇಲೆ
ಸುರಿದ ವಿರಹದ ಉರಿಗೆ
ಸತ್ವಗಳ ತತ್ವಗಳ 
ಹೇಳಿಕೊಟ್ಟವರಾರು?
ಮರುಳೆ!
ಮತ್ತಷ್ಟು ಕಾಯುತ್ತಿದೆ
ನಿನ್ನ ಸಹಾನುಭೂತಿಯ 
ನಗು,
ನಗುವಿನಾಚೆಯ 
ಒಣ ಬಿಗು!

ಬರೀ ಬಿಕ್ಕುಗಳ ಸದ್ದಡಗಿ,
ಸಂಗದ ಅಮಲಿನ ಒಳಗೆ
ಎಲ್ಲೋ ಅಡಗಿ, 
ಮತ್ತಡಗಿ
ಮತ್ತೂ ಅಡಗಿದೆ. ಕಾಣದಾದೆ!
ಕಡೆಗೂ ಸಿಗಲಿಲ್ಲ
ಅಡಗಲು ತಾಣ
ಒಳಗಿಂದ ಎದ್ದ
ಉರಿಗೆ ಹೊರಗಿಂದ
ಯಾವ ತಂಪು ಸೊಂಪು?

ಚಿಗುರೆಲೆಯ  ಕಂಪಿಗೆ
ಕರಗಿದೆ, 
ಕಲ್ಲಾಗಿ ಕರಗಿದ್ದ
ಲಾವಾರಸಗಳೆಲ್ಲ...
ಹೊಸಕಿದ್ದ ಹೂವು
ತೆನೆ ಹೊತ್ತ ಬಂಗಾರ!
ಗೊಂಚಲ ತೊನೆಯುವ
ಕಾಲ ಗರ್ಭ!


ಬೆಳಕು ಕತ್ತಲೆಯ ಒಳಗೊಳಗೆ
ಹುಟ್ಟಿಕೊಂಡಿದೆ
ಮತ್ತೆರಡು ಕಣ್ಣುಗಳು
ಕಾವ್ಯದ್ದೋ ಕಲ್ಲಿನದ್ದೋ!
ನಗು
ಮುಗುಳ್ನಗು
ಮತ್ತೊಮ್ಮೆ 
ಸಾಕು ಅದನ್ನು 
ಮೂರು ಹೊತ್ತು..

ಯುಗ ಸಾವಿರ
ಮತ್ತೆ ಸಾವಿರ
ಒಮ್ಮೆ ಮಿಂಚು
ಯಾವತ್ತೋ ಮಳೆ
ಮತ್ತೆಲ್ಲಾ ಸಿಡಿಲು ಗುಡುಗಿನ
ನಡುವೆ
ಭಾವೋನ್ಮಾದ!
ಲಯ-ಸೃಷ್ಟಿ ನಿರಂತರ..

ಒಂದು ಕವಿತೆ ಬರೆಯುವಾಗ ಭಾವೋನ್ಮಾದ ಹೇಗಿರುತ್ತದೆಂದರೆ ಅದರ ಒಳಗಡೆ ನಾವೇ ಜೀವಂತವಾಗಿಬಿಡುತ್ತೇವೆ. ಈ ಕವಿತೆಯೊಂದಿಗೆ ಅಂತದ್ದೊಂದು ಭಾವದ ಜೊತೆ ಈ ಹೊತ್ತಿನ ಮಾತು.

   ಕವಿತೆಗಳು ಜೀವ ಭಾವ ಸಂಚಲನಗಳೆಂಬದು ಸತ್ಯ. ಬರಹಗಳಿಗೆ ಜೀವ ಬರುವುದೇ ಬರೆಯುವವನೊಳಗೆ ಪಾತ್ರ ಎಷ್ಟು ಜೀವಂತವಾಗಿದೆ ಎಂಬ ಅಂಶದಿಂದ. ಹಾಗೆ ಪಾತ್ರಗಳನ್ನೆಲ್ಲ ವಾಸ್ತವದಲ್ಲಿ ಜೀವಿಸಿರದಿದ್ದರೂ  ಅನುಭವಿಸಿ ಬರೆಯುವ ತಾಕತ್ತಿರುವವ ಒಳ್ಳೆಯ ಬರಹಗಾರ ಎನಿಸಿಕೊಳ್ಳುತ್ತಾನೆಂಬುದು ಒಂದು ಅನಿಸಿಕೆ. ಇನ್ನು ಕೆಲವರ ಬದುಕೇ ಬಹಳಷ್ಟು ನೋವು ನಲಿವುಗಳ ಅನುಭವದ ಸಂಗಮ. ಅವರದನ್ನು ಅಷ್ಟೇ ತಾದಾತ್ಮ್ಯದಿಂದ ಬರೆದಾಗ ಆ ಬರಹಗಳು ಹೃದಯ ತಲುಪುತ್ತವೆ. ಎದೆಗಿಳಿಯುತ್ತವೆ. ಯಾವ ಒತ್ತಡಗಳಿಲ್ಲದೇ.. ಹಾಗಿದ್ದೂ  ಅನುಭವದ ಬದುಕನ್ನೇ ಎಲ್ಲರೂ ಬರೆಯಲಾಗದೆಂಬುದು ನಿಜ. ಇಂದು ಒಂದಿಷ್ಟು ನೋವು, ರೊಚ್ಚು, ಮನಸಿನೊಳಗಿನ ಅಸಹನೆಯನ್ನೆಲ್ಲ ಬರಹಕ್ಕಿಳಿಸಿದರೆ ಅಥವಾ ಅದೇ ಭಾವಗಳ ಬಿಚ್ಚಿಟ್ಟರೆ ಸಾಕು ಬರಹಗಾರ ಸದ್ದಿಲ್ಲದೇ ಪ್ರಸಿದ್ದಿಗೆ ಬಂದು ಬಿಡುತ್ತಾನೆ. ಅನ್ಯಾಯ, ಬಲಾತ್ಕಾರ, ಅಕ್ರಮಗಳ ವಿರುದ್ಧ ಒಂದಿಷ್ಟು ದನಿ ಎತ್ತಿದರೆ ಅದು  ಯಾವುದೋ ಎದೆಯ ಕೂಗಾಗಿ ಪರಿಣಮಿಸಿ ಬಹುಬೇಗ ಅವನ ಕೂಗು ಆಲಿಸುವ ಒಂದು ಸಮುದಾಯ ಎಚ್ಚೆತ್ತುಕೊಳ್ಳುತ್ತದೆ. ಮತ್ತೆ ಕೆಲವು ಬಾರಿ ಪ್ರತಿಭೆಗಳಿಗಿಂತ ಇವು ಹೆಚ್ಚು ಆತ್ಮೀಯವೂ ಸ್ಪಂದನೀಯವೂ ಆಗಿರುವ ಕಾರಣಕ್ಕೆ ಸಾಹಿತ್ಯದಲ್ಲಿ ಈ ಪ್ರಕಾರಕ್ಕೆ ಹೆಚ್ಚು ಮನ್ನಣೆ ದೊರೆತರೆ ತಪ್ಪಲ್ಲ. ಹಾಗಿದ್ದೂ ಈ ಒಳಗಿನ ಕೂಗು ಒಂದು ಸ್ವಂತಿಕೆಯೊಂದಿಗೆ ಸಾರ್ವಜನಿಕವಾಗಬೇಕೆಂಬುದು ಆಶಯ.  ಕಣ್ಣಿಗೆ ಕಾಣುವ ಯಾವುದೇ ಪಾತ್ರಗಳು ಒಂದು ಹಂತದಲ್ಲಿ ಸ್ವತಂತ್ರವಾಗಿ ನಿಲ್ಲಬೇಕೆಂದರೆ ಅದು ಲೇಖಕನ ಒಳಗಿಂದ ಹೊರಟ ಅವನ ಕೂಗಾಗದೇ  ಪಾತ್ರದ ಕೂಗು ಅನ್ನಿಸಬೇಕು. ಹೀಗೆ ಬರೆಯುವ ಹಂತದಲ್ಲಿ ನಿಜಕ್ಕೂ ಪ್ರತಿಭೆ ಪಾತ್ರವಾಗುತ್ತದೆ. ಮತ್ತು ಮನುಷ್ಯ ಭಾವಗಳು, ಬದುಕುಗಳನ್ನು ಚಿತ್ರಿಸ ಹೊರಟ ಬರಹಗಾರ ನಿಸ್ಪೃಹತೆಯಿಂದ ನಿಂತು ನೋಡುವ  ನಿರೂಪಕನಾಗುತ್ತಾನೆ. ಇದು ಸತ್ವಶೀಲ ಬರಹಕ್ಕೆ ಮುನ್ನುಡಿ.

   ಇವೆಲ್ಲ ವಿಚಾರಕ್ಕೆ  ಬರಲು ಒಂದು ಚಿಕ್ಕ ಕಾರಣವಿದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಏನೋ ಒಂದು ಪುಟ್ಟ  ಮೊಟ್ಟ ಮೊದಲ ಬಾರಿಗೆ ಬರೆದಿದ್ದೆ ನಾನು."ಗೃಹಿಣಿ ಗೃಹಮುಚ್ಯತೆ" ಅನ್ನುವ ತುಂಬ ಚಿಕ್ಕ ಬರಹ ಅದು. ಅವತ್ತು ಅದೇ ಬರಹಕ್ಕೆ ನನಗೆ ಬಂದ ಪ್ರತಿಕ್ರಿಯೆ ಎಷ್ಟು ತೀವ್ರವಾಗಿತ್ತೆಂದರೆ ಇವತ್ತೂ ಆಶ್ಚರ್ಯವಾಗುತ್ತದೆ. ಪೋನ್, ಅಂತಜರ್ಾಲ ಹಾಗು  ಮೊಬೈಲ್ಗಳ ಕಾಲವಲ್ಲ ಅದು. ಹಾಗಿದ್ದೂ ಬರಹ ಸ್ತ್ರೀ ಪರ ಎಂಬ ಕಾರಣಕ್ಕೆ ಒಂದು ಪುಟ್ಟ ಸಂಚಲನ ಹುಟ್ಟುಹಾಕಿತ್ತು.. ಅದಾದ ನಂತರ ಯಾಕೋ ಈ ಪರ ಮತ್ತು ವಾದಗಳನ್ನು ಹಿಂದೆಬಿಟ್ಟು ಕೇವಲ ಓದು ಮತ್ತು ಬರಹ ಅಷ್ಟನ್ನೇ ರೂಢಿಸಿಕೊಳ್ಳಲು ಮನಸು ಮಾಡಿದ ಮೇಲೆ  ಬಹುಶಃ ಎಷ್ಟೋ ಬರಹಗಳು ಪ್ರಕಟವಾದರೂ ಆ ಸಂಚಲನವನ್ನು ಹುಟ್ಟಿಸಲಿಲ್ಲ ನನ್ನ ಸುತ್ತ ಮುತ್ತ.  ಅದಾದ ಇತ್ತೀಚಿನ ವರ್ಷಗಳಲ್ಲಿ ತುಂಬಾ ಲೇಖಕರನ್ನು ವಿದ್ವಾಂಸರನ್ನು ಭೇಟಿಯಾಗಿ ನನ್ನ ಬರಗಳನ್ನು ಓದಲು ಕೊಟ್ಟಿದ್ದೇನೆ. ಮೊದಲ ಓದಿಗೆ ಮೆಚ್ಚಿಕೊಂಡ ಕೆಲವರು, ತಪ್ಪು ಒಪ್ಪುಗಳನ್ನು ತಿದ್ದಿದ ಅನೇಕರಿದ್ದಾರೆ. ಹಾಗೇ ಬಹಳಷ್ಟು ಬಾರಿ ಯಾವುದೋ ಗೊತ್ತಿಲ್ಲದ ಅಥವಾ ಸ್ಪಷ್ಟವಾಗಿ ಹೇಳದೇ ಇರುವ ಸತ್ಯವನ್ನು ಬರೆಯಬೇಕೆಂಬ ಒತ್ತಡ ಹೇರಿದವರಿದ್ದಾರೆ. " ನೀವು ಮಹಿಳೆಯರು, ಮಹಿಳೆಯರ ದನಿಯಾಗಬೇಕು. ಅವರ ಕುರಿತು, ಅವರ ಸಮಸ್ಯೆಗಳ ಕುರಿತು ಬರೆಯಬೇಕು. ನಿಮ್ಮಲ್ಲಿರುವ ಲೋಪ ದೋಷಗಳ ಎತ್ತಿ ತೋರಿಸಬೇಕು" ಒಟ್ಟಾರೆ ಅರ್ಥ ಸ್ತ್ರೀ ಪರ ಕಾಳಜಿಯುಳ್ಳ ಬರಹಗಳನ್ನು ಬರೆ ಎಂಬುದನ್ನು ನೇರವಾಗಿಯಲ್ಲದೆ ಅಸ್ಪಷ್ಟವಾಗಿ ಹೇಳಿದ್ದಾರೆ. ಹಾಗೆ  ಅಂತಹ ಬರಹಗಳ ಬರೆಯಬಾರದೆಂಬ ಕಟ್ಟಳೆಗಳೇನೂ ನನಗಿರಲಿಲ್ಲ. ಹಾಗಿದ್ದೂ ಯಾವುದೇ ಒಂದು ವಾದಗಳಿಗೆ ಬ್ರಾಂಡ್ ಆಗುವುದನ್ನು  ಮನಸು ಒಪ್ಪಿರಲಿಲ್ಲ. ಅದಕ್ಕೆಂದೇ ಎಷ್ಟೋ ಬಾರಿ ಸ್ತ್ರೀ ಪರವಾದ ನನ್ನ ನಿಲುವನ್ನು ತಡೆಹಿಡಿದದ್ದಿದೆ. ಮುಖ್ಯವಾಗಿ ನಾವು ಬದುಕುವ ಸಮಾಜದಲ್ಲಿ ನಾವು ಹಾಗೆ ಯಾರ ಪರ ಆಗುವುದನ್ನು ಮನಸು ಒಪ್ಪುವುದಿಲ್ಲ. ಎಲ್ಲರಲ್ಲೂ ಕೆಟ್ಟದ್ದಿದೆ. ಎಲ್ಲರಲ್ಲೂ ಒಳ್ಳೆಯದಿದೆ. ಒಳ್ಳೆಯತನ ಮತ್ತು ಕೆಟ್ಟತನ, ಕ್ರೌರ್ಯ ಮತ್ತು ಪ್ರೀತಿ ಎಲ್ಲ ಸಮಾಜದಲ್ಲೂ ಇರುವುದನ್ನು ನೋಡುತ್ತಿದ್ದೇನೆ. ಹೆಣ್ಣು ಗಂಡು ಬೇಧವಿರದೇ ಎಲ್ಲ ಜಾತಿ ಪಂಥ ಧರ್ಮಗಳಲ್ಲೂ ಇವೆರಡೂ ಇವೆ. ಸಾಹಿತ್ಯ ಸಮಾಜದ ಈ ಮುಖವಾಗಬೇಕೆಂಬ ಹಂಬಲದಲ್ಲಿ ಎಲ್ಲೋ ಒಳಗಿನ ಒತ್ತಡಗಳಿಗೆ ಬೇಲಿ ಕಟ್ಟಿದ್ದಿದೆ.
  
    ಮೇಲಿನ ಕವಿತೆಯ ಒಳಗೆ ಇಂತದ್ದೊಂದು ಪರಭಾವ ತತ್ವವಿದೆ. ಕವಿತೆ ಓದುಗರ ಭಾವಕ್ಕೆ ಬಿಟ್ಟಿದ್ದು. ಹಾಗಿದ್ದೂ ಸ್ಪಷ್ಟನೆ ಕೊಡುತ್ತಿರುವುದಕ್ಕೆ ಕ್ಷಮಿಸಿ. ಒಬ್ಬಳು ಬಲಾತ್ಕಾರಕ್ಕೊಳಗಾದ ಹೆಣ್ಣುಮಗಳ ಬದುಕಿನ ಭಾವ ಅದರಲ್ಲಿದೆ. ಪ್ರತಿ ಬಾರಿ ಕವಿತೆ ಬರೆದಾಗ, ಕಥೆಗಳು ಪ್ರಕಟವಾದಾಗಲೂ ಇದು ನಿಮ್ಮದೇ? ಎನ್ನುವ ಅಥವಾ ಅಂದುಕೊಳ್ಳುವ ಮಿತ್ರರಿಗೆ ಹೀಗೊಂದು ಮನವಿ ಮಾಡಬಹುದೇನೋ ಈ ಸಂದರ್ಭದಲ್ಲ. ಬರೆಯುವಾಗ ಎಲ್ಲ ಪಾತ್ರಗಳೂ ನಾವೇ.. ಆದರೆ ಬರಹಗಾರ ಮತ್ತು ಬರಹಗಳಿಗೆ ಬೇರೆಯದೇ ವ್ಯಕ್ತಿತ್ವವಿರುತ್ತದೆ. ಎಲ್ಲ ಪಾತ್ರಗಳನ್ನೂ ಜೀವಿಸಲು ಸಾಧ್ಯವಿಲ್ಲವಲ್ಲ! ಹಾಗಾಗಿ ಸೃಷ್ಟಿಸುವ ಪಾತ್ರಗಳ ಜೀವಂತಿಕೆ ಎಷ್ಟು ಎಂಬುದು ಬರಹಗಾರನ ಪ್ರತಿಭೆಯನ್ನು ನಿರ್ಣಯಿಸುವ ಪರೀಕ್ಷೆ. ಕೇವಲ ಜ್ಞಾನವನ್ನು ಬಿತ್ತರಿಸುವ ಬರಹಗಾರರಿಗೆ ಇದು ಅನ್ವಯವಾಗುವುದಿಲ್ಲ. ಪ್ರತೀ ಪಾತ್ರದ ಒಳಹೋಗುವ ಸೂಕ್ಷ್ಮತೆ ಇರುವ ಮತ್ತು ಪ್ರತಿಸೃಷ್ಟಿ ಮಾಡುವ ಬರಹಗಾರನಲ್ಲಿ
ಒಬ್ಬ ವಿಮರ್ಶಕ, ಒಬ್ಬ ನಿರೂಪಕ, ಮತ್ತು ಹೊರನಿಂತು ತನ್ನ ಪಾತ್ರಗಳ ವೀಕ್ಷಿಸಬಲ್ಲ ಒಬ್ಬತತ್ವಜ್ಞಾನಿಯ ನಿಲರ್ಿಪ್ತತೆಯೂ ಇರಬೇಕಿದೆ. ಈ ಎಲ್ಲವನ್ನೂ ರೂಢಿಸಿಕೊಂಡವ ಕಾಲ ದೇಶಗಳ ಮೀರಿ ನಿಲ್ಲುವ ಸಾಹಿತಿಯಾಗುತ್ತಾನೆ. ಮತ್ತು ಕುವೆಂಪು ಅಡಿಗರಂತ ವೇದಾಂತಿಯೂ ಮಾನವತಾವಾದಿಯೂ ಆಗುತ್ತಾನೆ. ಅಂತಹ ಸಾಹಿತಿಗಳಲ್ಲಿ ಹೆಣ್ಣಿನೊಳಗಿನ ಕಣ್ಣೀರು, ಅಸಹಾಯತೆ, ದ್ವಂದ್ವ, ಗೊಂದಲ ಗಳು, ಬಡತನ, ಹಿಂಸೆ, ಕ್ರೌರ್ಯ ಎಲ್ಲವೂ ಪಾತ್ರಗಳಾಗುತ್ತವೆ.  ಸಮಾಜದ ಅತಿ ಸೂಕ್ಷ್ಮ ಸಂಗತಿಗಳು ಕಥೆಗಳಾಗುತ್ತವೆ, ಎಲ್ಲೋ ನೊಂದರೆ, ರಕ್ತಪಾತಗಳಾದರೆ ಇವರ ಹೃದಯಗಳು ಮಿಡಿಯುತ್ತವೆ, ಮರುಗುತ್ತವೆ, ಕಂಬನಿ ಸುರಿಸುತ್ತವೆ. ಇಂತಹ ಸ್ವಾತಂತ್ರ್ಯ, ಲೇಖಕನದ್ದಾಗಿರಬೇಕು.  ಒಂದು ಕಡೆ ಕಟ್ಟಿಕೊಳ್ಳದ ಮುಕ್ತ ತತ್ವದ ಮನಸು ಮಿಡಿಯುವ ಹೃದಯವಂತರ ಬರಹಗಳು ಪ್ರೌಢಿಮೆಯ ಹೊರತಾಗಿ ಸರಳತೆಯಿಂದಲೇ ಅನುಗಾಲ ಬಾಳುತ್ತವೆ.

   ಈ ಸಂಜೆಗೆ ಇಷ್ಟು ಮಾತು. ನಿಮ್ಮ ಅನಿಸಿಕೆಗಳಿಗೆ ಸ್ವಾಗತ..

9 comments:

  1. ಕವಿತೆ ಮತ್ತು ಬರಹಕ್ಕೂ ಸೇರಿಸಿ ನೂರಕ್ಕೆ ನೂರು ಅಂಕಗಳು.
    highlights :
    " ಚಿಗುರೆಲೆಯ ಕಂಪಿಗೆ
    ಕರಗಿದೆ,
    ಕಲ್ಲಾಗಿ ಕರಗಿದ್ದ
    ಲಾವಾರಸಗಳೆಲ್ಲ...
    ಹೊಸಕಿದ್ದ ಹೂವು
    ತೆನೆ ಹೊತ್ತ ಬಂಗಾರ!
    ಗೊಂಚಲ ತೊನೆಯುವ
    ಕಾಲ ಗರ್ಭ!"

    "ಎಲ್ಲ ಪಾತ್ರಗಳನ್ನೂ ಜೀವಿಸಲು ಸಾಧ್ಯವಿಲ್ಲವಲ್ಲ! ಹಾಗಾಗಿ ಸೃಷ್ಟಿಸುವ ಪಾತ್ರಗಳ ಜೀವಂತಿಕೆ ಎಷ್ಟು ಎಂಬುದು ಬರಹಗಾರನ ಪ್ರತಿಭೆಯನ್ನು ನಿರ್ಣಯಿಸುವ ಪರೀಕ್ಷೆ. ಕೇವಲ ಜ್ಞಾನವನ್ನು ಬಿತ್ತರಿಸುವ ಬರಹಗಾರರಿಗೆ ಇದು ಅನ್ವಯವಾಗುವುದಿಲ್ಲ."

    ReplyDelete
  2. ಪಾತ್ರಗಳನ್ನು ಸೃಷ್ಟಿಸುವ ಬರಹಗಾರನಾಗುವಲ್ಲಿನ ಸಣ್ಣ ಹುಳುಕು ಎಂದರೆ ’ಆ ಪಾತ್ರಗಳೇ ಇವರೇನೋ’ ಎಂಬ ಓದುಗಸಾಮಾನ್ಯ ಫ಼್ಯಾಂಟಸಿಗೆ ಆಹಾರವಾಗಬೇಕಿರುವುದು. ಇದಕೆ ಮದ್ದಿಲ್ಲ ಬಿಡಿ. ಅದೇ ವಿಷಯವಿಟ್ಟುಕೊಂಡ ಬರಹ ಇಷ್ಟವಾಯ್ತು. ಕವಿತೆ ಅದಕ್ಕಿಂತ ಮೆಚ್ಚುಗೆಯಾಯ್ತು. ಚಂದ ಕವಿತೆ.

    ReplyDelete
  3. ನಾಗರಾಜ ವೈದ್ಯ, ಬದರಿ ಸರ್ ಹಾಗೂ ನವೀನ್ ಗಂಗೋತ್ರಿಯವರಿಗೆ ಧನ್ಯವಾದಗಳು.

    ReplyDelete
  4. Pratiyondu barahagaluu namma patalakke baruvante maaduvude ee"kaala" ennuva sutradhaara... Ava andante barevudaste aa bhava aa samayakke bandante... Haneyalli barediddare kuvempu bendre thara gurutisi jagadvikyaati siguvudu.. Pratibhe este iddaruu kaalavonde tirpugaara. Nadevudonde nadevaaga anubhavisi aswaadisi barevudonde namma dharma

    ReplyDelete
  5. ಕವಿತೆ ಹಾಗೂ ಬರಹ ಇಷ್ಟವಾಯಿತು. ಬರಹಕ್ಕೆ ಸೀಮಿತ ಅರ್ಥ ವ್ಯಾಪ್ತಿ, ಕವನ ತೆರೆದ ಬಯಲು...

    ಹೆಚ್ಚು ಇಷ್ಟವಾದದ್ದು ಕವನ...

    ReplyDelete
  6. Dhanyavadagalu medam....
    barahada modalige irabekada manasthiya bagge heliddu ishtavaytu :) :)

    ReplyDelete
  7. ಅಂತರಂಗದ ಮಾರ್ದನಿಗೆ ಒಂದು ಕನ್ನಡಿ.........
    ಮಿತವಾದ ಹಿತವಾದ ಶಬ್ಧ ಪ್ರಯೋಗ...

    ಇಷ್ಟವಾಯಿತು ಬರಹ.....

    ReplyDelete
  8. :) ಧನ್ಯವಾದಗಳು ಎಲ್ಲರಿಗೂ

    ReplyDelete