Friday, December 27, 2013

ಗೋವಿಂದ ಕತೆಯೊಳಗಿಂದ..

.

         ಭಾವನಾತ್ಮಕವಾದ ಮನಸು ಹೊತ್ತು ಬರೆಯಹೊರಟರೆ ಬುದ್ಧಿ ಸೋಲುತ್ತದೆ ಕೆಲವೊಮ್ಮೆ. ಪ್ರಜ್ಞೆ ಮಸುಕಾಗುತ್ತದೆ. ಹಾಗಾಗಬಾರದೆಂದರೆ ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಲೇಬೇಕು. ಈ ಕ್ಷಣದಲ್ಲಿ  "ಗೋವಿಂದ" ಎಂಬುದು ಒಂದು ಭಾವನದಿ. ಅಲ್ಲಿಯ
ಜೈಗೋಮಾತಾ, ಜೈಗೋಪಾಲಾ, ಎಂಬುವ ಜೈಕಾರಗಳಾಗಲಿ, ಅಂಬರಕೇರಲಿ ಅಂಬಾರವ ಎಂಬ ಅಮೃತ ನುಡಿಗಾನವಾಗಲೀ ಮೈ ಮನಸುಗಳ ಒಳಗೆ ನಶೆಯೋಪಾದಿಯಲ್ಲಿ ತುಂಬಿಕೊಂಡಿದೆ. ಅದು ನಶೆಯಲ್ಲ.  ಐದು ದಿನಗಳು ಝೇಂಕರಿಸಿದ ನಾದಪ್ರಪಂಚದ ಅಮಲೆನ್ನಬಹುದು. ಈ ಅಮಲು ನಾಲ್ಕು ದಿನಕ್ಕೆ
ಇಳಿದುಹೋಗಬಾರದೆಂಬ ಪ್ರಜ್ಞೆಯಲ್ಲಿ ಇದು ನರನಾಡಿಗಳಲ್ಲಿ ಹರಿಯಬೇಕಾದ ರಕ್ತವಾಗಲೀ ಎಂಬ ಆಶಯದೊಂದಿಗೆ ಮಾನಸ ಸರೋವರದಲ್ಲಿ ಪುಟ್ಟದೊಂದು ಅಲೆ. ಗುರುಚರಣಕ್ಕೆ ನುಡಿನಮನ. ಗೋವಿನ ಗೋವಿಂದನ ಪದತಲಕ್ಕೆ ಈ ಕುಸುಮ.
ಚಿತ್ರ ಕೃಪೆ ಅಂತರ್ಜಾಲ


   ಕಡಿಮೆಯೆಂದರೆ ಪ್ರತಿ ದಿನ ಸಾವಿರ ಸಾವಿರ ಸಾವಿರ ಜನ ಸಾಗರೋಪಾದಿಯಲ್ಲಿ ಆಗಮಿಸಿ ಜಗಜನನಿ
ಗೋ ಕತೆಯ ಆಲಿಸಿದರು. ಕಥೆಯ ಕೇಳೋ ಅಭ್ಯಾಸವಿಲ್ಲದವರೂ ಕೂತು ಕಥೆಯನ್ನಾಲಿಸಿದರು. ಹಾಡುಗಾರರ ಘನ ಕಂಠದಲ್ಲಿ  ಮೊಳಗಿದ ಗೋ ಮಾತೆಯ ಕೂಗು ಕೇಳಿದರು. ಕೆಲವೊಮ್ಮೆ ಭಾವುಕರಾಗಿ
ಕಂಗಳು ತೇವವಾದರೆ ಇನ್ನು ಕೆಲವೊಮ್ಮ ರಕ್ತ ಬಿಸಿಯಾಗಿ ಕುದಿದರು.  ಗೋವಿನ ಹತ್ತು ಹಲವು ರೂಪಗಳ
ಚಿತ್ರ, ಗಾನ, ಶ್ರವಣ ಹೀಗೆ ಆನಂದಿಸಿದರು. ಎಲ್ಲ ಮುಗಿಯಿತು. ಗುರು ಪೀಠದ ಮುಂದೆ ಸಂಕಲ್ಪವೂ ನಡೆಯಿತು. ಗೋ ಕಥೆ ಸಂಪನ್ನವಾಯಿತು.ಮಕ್ಕಳು ಮಹಿಳೆಯರು ಹಿರಿಯರು, ಕಿರಿಯರು ಗೋ ಜೈ ಜೈ
ಧೇನು ಕಥಾ  ಎಂದು ಕುಣಿದು ಕುಪ್ಪಳಿಸಿ ಎದೆ ಭಾವ ಜೀವದಲ್ಲಿ ಅದೊಂದು ಲಹರಿಯನ್ನು ತುಂಬಿಕೊಂಡು ಮನೆಯೆಡೆಗೆ  ಮುಖಮಾಡಿದರು. ಹಲವರ ನಿರಂತ ಶ್ರಮ ಸೇವೆ ಅದೆಷ್ಟೋ ಜನರ
ಕನಸು ಏನೇನೆಲ್ಲ ನನಸಾಗಿ ಈ ಗೋ ಕತೆಯೊಡನೆ ಸಂಪನ್ನವಾಯಿತೆಂಬುದಕ್ಕೆ ಲೆಕ್ಕವಿಲ್ಲ. ಆದರೆ ಇದೆಷ್ಟು ದಿನದ ನಶೆ? ಹೀಗೊಂದು ಪ್ರಶ್ನೆ ನನ್ನೊಳಗೆ  ಏಳುವುದಕ್ಕೆ ಕಾರಣವಿದೆ.


  ಒಬ್ಬ ಸಾಮಾನ್ಯ  ಗೃಹಿಣಿಯಾಗಿ, ಒಂದು ಸಮಾಜದ ಪ್ರತಿನಿಧಿಯಾಗಿ,  ಸಹಜ ಮನೆಮನೆಗಳಲ್ಲಿ
ಗೋವಿನೊಡನೆ ಹುಟ್ಟಿ ಒಡನಾಡಿ ಬೆಳೆದು ಇದೀಗ ಇದೇ ಗೋವಿನ ಬಗ್ಗೆ ಬರೆಯುವಾಗ ನನ್ನ ಮನೆಯಲ್ಲಿ
ಒಂದು ಗೋವು ಕಟ್ಟಿ ಸಾಕಲಾಗದ ಸ್ಥಿತಿಯಲ್ಲಿ ನಾನೇನಾದರೂ ಮಾತನಾಡಿದರೆ ತಪ್ಪಾದೀತೇನೋ ಎನ್ನುವ ಒಳಗಿನ ತಾಕಲಾಟದಲ್ಲೇ  ಗೋವೆಂಬ ಗೋವಿಂದನ ಕುರಿತು ನನ್ನೆರಡು ಮಾತುಗಳ ತಂದಿದ್ದೇನೆ ಈ ಸರೋವರದ ಅಂಚಿನಲ್ಲಿ. ಗೋವನ್ನು ಸಾಕಬೇಕೆಂಬುದು ಈ ಕ್ಷಣಕ್ಕೂ ಮನಸ್ಸಿನ ಭಾವ. ಆದರೆ ವಾಸ್ತವ?

     ಆಕಳು ತಂದರಾಯಿತೆ? ಅವುಗಳಿಗೆ  ಬೇಕಾದ ಹುಲ್ಲು, ಹಿಂಡಿ, ಸಮಯ ಇವನ್ನೆಲ್ಲ ಎಲ್ಲಿಂದ
ತರುವುದು? ಒಂದು ವೇಳೆ ಇದು ಸಾಮಾನ್ಯ ಮನುಷ್ಯನೊಬ್ಬನ ಪ್ರಶ್ನೆ. ಎಲ್ಲವೂ ಗೊತ್ತಿರುವಷ್ಟು ಸುಲಭಕ್ಕೆ ಬಗೆಹರಿಯಲಾಗದ ಪ್ರಶ್ನೆಕೂಡ. ಮನೆಯಲ್ಲಿ ಆಕಳೊಂದನ್ನು ಸಾಕುವುದು ಮೊದಲಿನ ಕಾಲದಲ್ಲಿ ಅಷ್ಟೊಂದು
ಕಷ್ಟವೇನಿರಲಿಲ್ಲ. ಸಮೃದ್ಧ ಅಕ್ಕಿ ಮನೆಯಲ್ಲಿ ಬೆಳೆಯುವ ಕಾಲಕ್ಕೆ ಕೊನೆಗೆ ಊರಲ್ಲಾದರೂ ಬೆಳೆಯುವ
ಕಾಲಕ್ಕೆ ಮನುಷ್ಯನಂತೆ ದನಗಳ ಮೇವು ಕೂಡ ಸಮಸ್ಯೆ ಆಗಿರಲಿಲ್ಲ. ಇವತ್ತು ಅಕ್ಕಿ ಬೆಳೆಯುವವರೇ ಇಲ್ಲವಾಗಿರುವಾಗ ಹುಲ್ಲು ಬೆಳೆಯುವವರ ಎಲ್ಲಿ ಹುಡುಕುವುದು ನಾವು? ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಮೊದಲಾದರೆ  ದನಕರುಗಳ ಮೇವಿಗೆಂದು ಹೊರಗೆ ಬಿಡಬಹುದಿತ್ತು. ಈಗ ಅವು ಎಲ್ಲಿ ಬಿಟ್ಟರೂ ಹೋಗಲು ಜಾಗವೇ ಇಲ್ಲ. ಮೇವಿನ ಬದಲು ಪ್ಲಾಸ್ಟಿಕ್, ಕಾಗದಗಳ ತಿನ್ನುವಂತಾಗಿದೆ. ಅದು ಕೂಡ  ಘೋರ ಪಾಪವೆನ್ನಿಸುತ್ತದೆ. ಗೋವನ್ನು ಕೇವಲ ಲಾಭದೃಷ್ಟಿಯಿಂದ ನೋಡಲಾರಂಭಿಸಿದರೆ ಜರ್ಸಿ ತಳಿಗಳು ಹಾಕುವ ಹಿಂಡಿಗೆ ಸಮನಾದ ಹಾಲು ಕೊಡುತ್ತವೆ ಎಂಬುದು ದೊಡ್ಡ ವಿಷಯವಾಗುತ್ತದೆ. ಇಷ್ಟೇ ಅಲ್ಲ.ಅದು ಲೆಕ್ಕಾಚಾರದಲ್ಲಿ ಸಮ ತೋರುವುದರಿಂದ ಹಾಲಿನೊಳಗಿನ ಅಂಶಗಳಿಗಿಂತ ಹಾಲಿನ ಉತ್ಪನ್ನದ ಬಗ್ಗೆಯಷ್ಟೇ
ಯೋಚಿಸುವುದು ಸಾಮಾನ್ಯ.

  ಎಲ್ಲವೂ ರೂಪಾಯಿಗಳ ಲೆಕ್ಕಾಚಾರಕ್ಕಿಳಿದಮೇಲೆ ಮನುಷ್ಯ ಹೆತ್ತವರನ್ನೂ ಲೆಕ್ಕಾಚಾರದ ತಕ್ಕಡಿಯಲ್ಲಿಟ್ಟು
ತೂಗಿದ ಮೇಲೆ  ಗೋವಿನಂತ ಗೋವು ಕೂಡ  ಭಾರವಾಗುತ್ತದೆ ಎಂಬುದು ಇವತ್ತಿನ ನಿದರ್ಶನ. ಗೋ ಪ್ರೇಮಿಗಳು ಸಾಗರೋಪಾದಿಯಲ್ಲಿ ಬಂದು ಗೋ ಕಥೆ ಕೇಳಿದವರೆಲ್ಲ ಒಂದೊಂದೇ ರೂಪಾಯಿಯಷ್ಟು
ಗೋ  ಸೇವೆಯೆಂಬ ಭಾವಕ್ಕೆ ಬಿದ್ದರೆ ಇಂಥ ಗೋ ಕಥೆ ಮಾಡುವವರ ಕೇಳುವವರ ಶ್ರಮ ಸಾರ್ಥಕವೆನ್ನಿಸುತ್ತದೆ. ಇವತ್ತು ಸಮಾಜದಲ್ಲಿ ಬರ ಬಿದ್ದಿರುವುದು ಹಣಕ್ಕಲ್ಲ, ಹೊನ್ನಿಗಲ್ಲ, ಶ್ರಮಕ್ಕೆ ಮತ್ತು
ಭಾವಕ್ಕೆ. ಯಾರಿಗೆ ಯಾರ ಕುರಿತಾಗಿಯೂ ಶುದ್ಧ ಭಾವ ಹುಟ್ಟುವುದು ಸಾಧ್ಯವೇ  ಇಲ್ಲದ ಸ್ಥಿತಿ ಇಂದಿನದು. ಪ್ರತಿಯೊಬ್ಬರನ್ನೂ ಅನುಮಾನದ ದೃಷ್ಟಿಯಿಂದ ನೋಡುವುದು ಅನಿವಾರ್ಯವೂ ಆಗಿ ಹೋಗಿದೆ. ಹೀಗಿರುವಾಗ ಗೋ ಪ್ರೇಮದ ಕಥೆ ಕೇಳಿ ಬಂದ ಮನಸಿನ ಸರೋವರದಲ್ಲಿ ಇಂತದ್ದೊಂದು ಗೋವಿಂದಾ ಎನ್ನುವ ಅಲೆ ಏಳುವ ಸಾಧ್ಯತೆ ಹುಟ್ಟಿಕೊಂಡರೆ ...


 ಸತ್ಯವನ್ನೇ ನುಡಿ ಸತ್ಯವನ್ನೇ ನಡೆ  ಸತ್ಯ ವಾಕ್ಯಕೆ ತಪ್ಪಿ ನಡೆಯಬೇಡ ಎನ್ನುವುದು ಬಾಲ್ಯದಿಂದ ಇಂದಿನವರೆಗೆ ಗೋವಿನ ಕಥೆಯಿಂದಲೇ ಕಲಿತೆವು ನಾವೆಲ್ಲ. ಇಂದು  ಅದೇ ಗೋವಿಗಾಗಿ ನಾವೇನು ಮಾಡಬಲ್ಲೆವು ಎಂದು ಕೇಳಿಕೊಂಡರೆ ಕನಿಷ್ಟ ಸತ್ಯ ದ ನಡೆನುಡಿ ಕೂಡ ಬಿಟ್ಟೆವಲ್ಲ!ನಮ್ಮಲ್ಲಿ ಒಂದು ಮಾತಿದೆ. ಬಯಲು ಸೀಮೆಯ ಜನ ನಡೆನುಡಿಗಳಿಂದ  ಒರಟರೆಂಬುದು ಅದರ ಅರ್ಥ. ಆದರೆ ಈ ವಿಚಾರದಲ್ಲಿ   ಸುಸಂಸ್ಕೃತರಿಗಿಂತಲೂ ಈ ಶ್ರಮಜೀವಿಗಳ ಬದುಕು ಮತ್ತು ಭಾವದಲ್ಲಿ ಗೋವಿಗೊಂದು
ಅಮೂಲ್ಯ  ಸ್ಥಾನವಿರುವುದ ನೋಡುತ್ತೇವೆ. ಕೃಷಿಗೆ ಗೋವು ಆಧಾರ, ಗೋವಿಗೆ  ಮೇವು ಆಧಾರ ಇನ್ನೂ
ಗೋವಿನ ಜಾತ್ರೆಗಳು ಗೋವಿನ ತಳಿಗಳನ್ನು ನಾವು ಈ ಬಯಲುಸೀಮೆಯಲ್ಲಿ  ನೋಡಬಹುದೇನೋ.
ಹಳ್ಳಿಗರ ಬದುಕಿನಲ್ಲಿ ಗದ್ದೆ ಗೋಮಾಳಗಳು ಇರುವವರೆಗೂ ದನಗಳ ಕುರಿತು ನಾವು ಇಷ್ಟೊಂದು
ನಿಷ್ಕರುಣಿಗಳಾಗಿರಲಿಲ್ಲ.  ಗದ್ದೆ ತೋಟವಾಯಿತು. ಉಳುವ ಅಗತ್ಯವಿಲ್ಲದೇ ಎತ್ತುಗರುಗಳು ಮಾರಲ್ಪಟ್ಟವು
ಜಾತಿ ಸಂಕರಣ ಅಲ್ಲಿಂದ ಆರಂಭವಾಯಿತು. ಇಂಜೆಕ್ಷನ್ ಕರುಗಳು ಜನಿಸಲಾರಂಭಿಸಿದವು.  ಗೋವು
ಉದ್ಯಮವಾಯಿತು.  ಭಾವನಾತ್ಮಕ  ಸಂಬಂಧ ಹೋಗಿ ಅಲ್ಲಿ ಕೇವಲ ಲಾಭನಷ್ಟಗಳು ಉಳಿದಕೊಂಡವು.
ಅದು ಇಂದಿನ ಘೋರ ರೂಪ ತಳೆಯಿತು. ಪಟ್ಟಣಗಳ ವಿಷಯ ಅವರ ಅನಿವಾರ್ಯತೆಗಳನ್ನು ಬಿಟ್ಟರೆ
ಹಳ್ಳಿಗಳಲ್ಲಿ ಇಂದಿಗೂ ಕೆಲವರು ದನ ಸಾಕಿಕೊಳ್ಳುತ್ತಾರೆ. ಇಲ್ಲವೆಂದಲ್ಲ. ಆದರೆ ಅದು ಸಹ ಹೆಚ್ಚು ಹಾಲುಕೊಡುವ ತಳಿಗಳನ್ನು ಮಾತ್ರ. ಇಲ್ಲಿ ಸಮೃದ್ಧಿಯ ವಿಷಯ ಬಂದಾಗೆಲ್ಲ ಹಾಲು ಎಲ್ಲ ಒಂದೇ
ಅನ್ನಿಸಿಬಿಡುತ್ತದೆ. ದೀರ್ಘ ಪರೀಕ್ಷೆಯ ವಿಚಾರಗಳ ಒತ್ತಡಕ್ಕೆ ಬೀಳುವವರಲ್ಲ.ನಮ್ಮ ದನಕರುಗಳ ಕುರಿತು
ಸಾಮಾನ್ಯ ಪ್ರಜ್ಞೆ ಕೂಡ ಇರುವುದಿಲ್ಲ. ಹಾಗೆ ನೋಡಿದರೆ ಗೋವು ಪ್ರತೀ ಮನೆಯ ಅಗತ್ಯ. ಆದರೂ ಕೂಡ
ಅದೊಂದು  ಬಲಿಷ್ಟ ಉದ್ಯಮವಾಗಿಯಷ್ಟೇ ಪ್ರಚಲಿತವಾಗುತ್ತಿರುವುದು ದುರಂತ.

  ಒಮ್ಮೊಮ್ಮೆ ಅನ್ನಿಸುತ್ತದೆ. ಮನುಷ್ಯ ಮನುಷ್ಯನ ಕುರಿತಾಗಿಯೇ ಸಂವೇದನೆ ಕಳೆದುಕೊಂಡು ಮೃಗೀಯವಾಗುತ್ತಿರುವ ಈ ದಿನಗಳಲ್ಲಿ ನಾವು ಮನುಷ್ಯನಿಂದ ಪ್ರಾಣಿಗಳ ಕುರಿತು ಸಂವೇದನೆ
ಬಯಸುವುದು ಸ್ವಲ್ಪ ಹೆಚ್ಚಿನ ನಿರೀಕ್ಷೆ ಅನ್ನಿಸಬಹುದು. ಆದರೆ ಮನುಷ್ಯ ಮತ್ತು ಪ್ರಾಣಿಗಳ ಒಡನಾಟ
ಅದೆಷ್ಟೋ ಕಾಲದಿಂದ ಉಳಿದುಕೊಂಡು ಬಂದಿದೆಯೆಂದರೆ ಅದು ಮಾನವ ಸಂಬಂಧಗಳಿಗಿಂತ ಬಲಿಷ್ಠವಾಗಿ ತೋರುತ್ತದೆ. ಮನುಷ್ಯರ ಜೊತೆ ಸಂಬಂಧ ಅಹಂಗಳಿಂದಾಗಿ ಬಹಳ ಬೇಗ ಶಿಥಿಲಗೊಳ್ಳುತ್ತಿದೆ ಇಂದು.
ಆದರೆ ಪ್ರಾಣಿಗಳು ಹಾಗಲ್ಲ. ಅವುಗಳಿಗೆ ಅಹಂ ಕಾಡುವುದಿಲ್ಲ. ಸ್ವಾರ್ಥ ಇರುವುದಿಲ್ಲ ಅವುಗಳಿಗೆ. ಪ್ರೀತಿ
ಮತ್ತು ಅನ್ನ ಕೊಟ್ಟವನಿಗಾಗಿ ಜೀವ ಕೊಡುತ್ತವೆ. ಅವುಗಳು ಮಾತು ಬರದೇ ಪ್ರೀತಿಸುವ ಪರಿಗೆ ಮನುಷ್ಯ
ಮೂಕವಾಗುತ್ತಾನೆ. ಪ್ರಾಣಿಗಳ ಪ್ರೀತಿಸುವ ಮನುಷ್ಯ ಹೃದಯಗಳು  ಸದಾ ಜೀವಂತಿಕೆಯಿಂದ ಇರುತ್ತವೆ.
ಎಲ್ಲೋ ಓದಿದ ನೆನಪಿನಂತೆ ಸಾಕು ಪ್ರಾಣಿಗಳ ಪ್ರೀತಿಸುವವರಲ್ಲಿ ಹೃದಯದ ಕಾಯಿಲೆ ಕಡಿಮೆಯಂತೆ.
ಇಷ್ಟೆಲ್ಲಾ ತಿಳಿದೇ ಅಲ್ಲವಾ  ಎಷ್ಟೋ ಸಾವಿರ ಜೀವ ಜಂತುಗಳಲ್ಲಿ  ಕಣಕಣವೂ ಪವಿತ್ರವಾಗಿರುವ
ಉಪಯುಕ್ತವಾಗಿರುವ ಗೋವನ್ನು ನಮ್ಮ ಪೂಜನೀಯ ದೇವರಂತೆ ಕಂಡಿರುವುದು ನಮ್ಮ ಹಿರಿಯರು.
ಜ್ಞಾನ ಬೆಳೆದಂತೆ ಪ್ರಪಂಚ  ಚಿಕ್ಕದಾದಂತೆ ವಿಸ್ತಾರವಾಗಬೇಕಿದ್ದ  ಜೀವ, ಭಾವ, ಔದಾರ್ಯ, ಪ್ರೀತಿಗಳು,
ಸಂಕೀರ್ಣತೆ ಕಳೆದುಕೊಂಡು ಮೃದುವಾಗಬೇಕಿದ್ದ ಮನಸುಗಳು ಮನುಷ್ಯ ಸ್ವಾರ್ಥವೊಂದೇ ಮುಖ್ಯವಾಗಿಬಿಡುತ್ತಿರುವುದು ಎಂಥ ವಿಪರ್ಯಾಸ!  ಆದರೂ ಅನ್ನಿಸುತ್ತದೆ. ಎಲ್ಲ ಬದಲಾವಣೆಗಳಿಗೂ ಒಂದು
ಸಂಕ್ರಮಣ ಕಾಲ ಬರುತ್ತದೆ.  ವಿನಾಶದ ಬಿಸಿ ತಟ್ಟಿದಾಗ ಮಾತ್ರ ಎಚ್ಚರಿಕೆಯ ಪೃಕೃತಿ ಮೊಳಗುತ್ತದೆ.
ಅಂತದ್ದೊಂದು ವಿನಾಶ ಕಾಲದಲ್ಲಿ  ಇಂಥ ಮಹಾನುಭಾವರ ದರ್ಶನವಾಗುತ್ತದೆ.  ಹಿಂದೂ ಧರ್ಮವೇ
ಒಡೆದು ವಿನಾಶದ ದಾರಿ ಹಿಡಿದಾಗ ಶಂಕರರ ಅವತಾರವಾಯಿತು. ಇಂದು ಗೋವು ತಳಿಗಳೇ ನಿನರ್ಾಮವಾಗಿ  ಜನ ದನ ದ ಬದುಕು ಅಳಿಯುವಾಗ ಹೀಗೊಂದು ಜಾಗೃತಿಯ ಸಂಸ್ಥಾಪನೆಗಾಗಿ
ಆ ಗೋವಿಂದನೇ ಗೋವಿಗಾಗಿ  ಜನ್ಮತಳೆದಿರಬಹುದೆಂಬ ಭಾವ ಮೂಡುತ್ತದೆ! ಮತ್ತೆ ಮತ್ತೆ ಗೋವಿಗಾಗಿ
ಮಡಿವ ಮಿಡಿವ ಹಲವು ಗೋ ಪ್ರೇಮಿಗಳೆಲ್ಲ ಗೋಪಾಲಂದಿರೇ....

ಚಿತ್ರ ಕೃಪೆ ಅಂತರ್ಜಾಲ


 ಇದು ಸಾಧ್ಯವಾ ಅಂತಂದುಕೊಂಡರೆ ಯಾವುದೂ ಸಾಧ್ಯವಿಲ್ಲ. ಸಾಧ್ಯ ಅಂದುಕೊಂಡರೆ ಎಲ್ಲವೂ ಸಾಧ್ಯ.
ಸಾಧ್ಯವಾಗಿಸಿದ ನೂರಾರು ನಿದರ್ಶನಗಳಿವೆ ಇಲ್ಲಿ. ಗೋವನ್ನು ಕೇವಲ ಪ್ರಾಣೀ ಅಂತಾಗಲೀ, ಹಿಂದೂ ಧರ್ಮದ ಪೂಜನೀಯ  ದೇವತೆ ಅಂತಾಗಲೀ ನೋಡಲಾಗದಿದ್ದರೆ  ಗೋವನ್ನು ಮನುಷ್ಯ ಜನ್ಮಸಾರ್ಥಕಗೊಳಿಸುವ ಪ್ರಾಣೀ ಅಂತಾದರೂ ನೋಡಬಹುದಲ್ಲ! ವೈಜ್ಞಾನಿಕವಾಗಿಯೇ ಸಾಬೀತಾಗಿದೆ ಭಾರತೀಯ ತಳಿಗಳ ಗೋವುಗಳು ಎಷ್ಟು ಸಂಪದ್ಭರಿತವಾದವು ಎಂಬುದು. ಹಾಗಿದ್ದಾಗ ನಮ್ಮ ದೇಶ ನಮ್ಮ ಜನರ  ಬದುಕು ಭಾವ ಎಲ್ಲ ಆಗಿರುವ ಗೋವನ್ನು ಕಾನೂನು ರೀತ್ಯ ಹತ್ಯೆಗೈಯ್ಯುವ ಸರಕಾರವನ್ನು
ನಾವು ಆರಿಸಿಕೊಂಡಿದ್ದೇವೆ ಎಂಬುದು ಕೂಡ ಯೋಚಿಸುವ ವಿಷಯ!   ನಿಂದಕರು ಇರಬೇಕೆಂದಿದ್ದಾರೆ
ದೊಡ್ಡವರು. ಆದರೆ ಹಂತಕರು ಇದ್ದಾರೆ ಇಲ್ಲೆಲ್ಲ. ಇವತ್ತು ಗೋವು, ನಾಳೆ ನಾವು. ಇವೆರಡನ್ನೂ ಯೋಚಿಸುವ
ಸಮಯ ಬಂದಿದೆ ಅನ್ನಿಸುವುದಿಲ್ಲವೆ?

ನಿಮ್ಮ ಅನಿಸಿಕೆಗಳಿಗಾಗಿ.

ಹೊತ್ತು ಹೆತ್ತ ಮಾತೆಗೆ, ಹಾಲುಕೊಟ್ಟ ಹಸುವಿಗೆ, ನಿಮ್ಮ ಭಾವದ ಒಂದು ಅರ್ಪಣೆ  ಹೇಗೆ ಹೇಳುತ್ತೀರಿ?   

7 comments:

 1. ಗೋವಿನ ಬಗ್ಗೆ ಒಂದು ಉತ್ತಮ ಲೇಖನ....

  ಕಾಮಧೇನು ಅನ್ನುವುದು ಸುಮ್ಮನೇ ಅಲ್ಲ.....
  ಗೋಮಾತೆ ಕೊಟ್ಟಿದ್ದು ಬಿಟ್ಟಿದ್ದು ಎಲ್ಲವೂ ಔಷಧವೇ.......

  ರಕ್ಷಣೆಯ ಜವಾಬ್ದಾರಿ ನಮ್ಮದಿದೆ...
  ಗೋ ಹತ್ಯೆ ಮಾಡುವುದರ ಬಗ್ಗೆ ಮಾಡುವವರ ಬಗ್ಗೆ ನಮ್ಮದೊಂದು
  ಆಜನ್ಮ ಧಿಕ್ಕಾರವಿರಲಿ......
  ಗೋ ಹತ್ಯೆ ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನವಿರಲಿ....

  ಒಳ್ಳೆಯ ಬರಹ ಅಕ್ಕಾ..........

  ReplyDelete
 2. ಹೇಳಲೇನೂ ತೋಚುತ್ತಿಲ್ಲ... ಯಾವುದೋ ಅಸಹಾಯಕ ಪಾಪಪ್ರಜ್ಞೆ ನನ್ನಲ್ಲಿ... :(

  ReplyDelete
 3. ಧನ್ಯವಾದಗಳು. ರಾಘವ ಭಟ್, ಗೋವಿಗಾಗಿ ಸ್ಪಂದನೆಯಿರಲಿ ಮನಸಿನಲ್ಲಿ ಸದಾ.. ಶ್ರೀವತ್ಸ, ಆ ಅಸಹಾಯಕ ಪ್ರಜ್ಞೆ ನನ್ನಲ್ಲೂ ಇದೆ. ಈ ಪ್ರಜ್ಞೆ ಹುಟ್ಟಿಕೊಂಡರೂ ಎಲ್ಲೋ ಪುಟ್ಟ ಸ್ಪಂದನೆ ಹುಟ್ಟಿಕೊಂಡೀತೆಂಬ ಆಶಯ.

  ReplyDelete
 4. ಒಂದೊಳ್ಳೆ ಕಾರ್ಯಕ್ರಮದ ಬಗ್ಗೆ ಚೆನ್ನಾಗಿ ಬರದ್ದಿ . ನೀವು ಹೇಳಿದಂತೆ ಭಾವಗಳಿಗೆ ಬಂದಿಯಾದಾಗ ಪ್ರಜ್ನಾಪೂರ್ವಕ ಬರಹ ಸಾಧ್ಯವಾಗೋದಿಲ್ಲ ಅನ್ನೋದು ಸತ್ಯದ ಮಾತೇ. ಭಾವಗಳಿಗೆ ಕಟ್ಟಿಕೊಳ್ಳದೆಯೂ ಓದುಗರನ್ನು ಭಾವುಕರಾಗುವಂತೆ ಮಾಡೋದು ನಿಜಕ್ಕೂ ಕಷ್ಟದ ಕೆಲಸವೇ..

  ಲೇಖನದ ವಿಷಯಕ್ಕೆ ಬರೋದಾದ್ರೆ: ನೀವೆಂದಂತೆ ಮುಂಚಿನ ಪರಿಸ್ಥಿತಿ ಈಗಿಲ್ಲ. ಪೇಟೆಯಲ್ಲಿ ಹಸು ಕಟ್ಟುವುದು ಹೋಗಲಿ, ಹಳ್ಳಿಯಲ್ಲೇ ಕಷ್ಟದ ಪರಿಸ್ಥಿತಿ ಆಗಿದೆ. ಮುಂಚೆಯಿದ್ದಂತೆ ಜನರಿಲ್ಲ. ಪ್ರತೀ ಮನೆಯಲ್ಲೂ ಒಬ್ಬರೋ ಇಬ್ಬರೋ. ಒಂದೋ ಎರಡೋ ಹಸು ಕಟ್ಟಿದರೆ ಅವಕ್ಕೆ ವಿಪರೀತ ರೇಟಿನ ಹುಲ್ಲು ಹಿಂಡಿಯನ್ನೆಲ್ಲಿಂದ ತರೋದಪ್ಪಾ ಅನ್ನೋದಕ್ಕಿಂತಲೂ ಅವುಗಳಿಗೆ ಕೊಡಬೇಕಾದ ನಿಗಾ, ಸಮಯದ್ದೇ ಮುಖ್ಯ ಸಮಸ್ಯೆ. ಎರಡು ದಿನ ಎಲ್ಲಿಗಾದರೂ ಹೋಗಬೇಕೆಂದರೆ ಆಗೋಲ್ಲ. ಹಸು ಕಟ್ಟಿದ ತಪ್ಪಿಗೆ ಸಂಜೆಗೇ ವಾಪಾಸ್ಸಾಗಬೇಕಾದ ಸೆರೆವಾಸ!! ಯಾರಿಗೆ ಬೇಕಪ್ಪಾ ಈ ಸಹವಾಸ. ಇಷ್ಟೆಲ್ಲಾ ಖರ್ಚು ಮಾಡಿ ಒಂದು ಲೀಟರ್ ಹಾಲು ಕರೆದುಕೊಳ್ಳೋಕಿಂತ ಒಂದು ಲೀಟರ್ ಹಾಲು ಕೊಳ್ಳೋದೇ ಮೇಲು ಅಂತ ಸುಮಾರಷ್ಟು ಹಳ್ಳಿಮನೆಗಳಲ್ಲಿ ಕೊಟ್ಟಿಗೆ ಖೈದಾಗ್ತಾ ಇದೆ. ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡೋದು ಸರಿಯಲ್ಲ. ತಂದೆ ತಾಯಿಯರನ್ನು ತೊಟ್ಟಿಲಲಿಟು ವ್ಯವಹಾರ ಮಾಡಬಾರದು ಎನ್ನುವುದು ಸರಿಯಾದರೂ ಖಾಲಿ ಹೊಟ್ಟೆಯಲ್ಲಿ ವೇದಾಂತ ಮಾತಾಡೋದು ಎಲ್ಲರಿಂದಲೂ ಸಾಧ್ಯವಿಲ್ಲ. ಹಣವಿದ್ದರೇ ಬದುಕು. ಹಳ್ಳಿಗಳ ಎಲ್ಲಾ ದುರ್ವ್ಯವಸ್ಥೆಗಳಿಗೆ ಗೋವನ್ನೇ ದೂರ್ತಾ ಇದ್ದಿ ಅಂತಲ್ಲ. ಆದರೆ ಕೆಲವೊಂದು ಅಂಶಗಳು ಕಾಡ್ತು.. ಹಿಂಗೆ ಮಾಡಿದ್ರೆ ಹೆಂಗೆ ಅನುಸ್ತು.
  ಅ)ಆದರೆ ಗೋ ಉತ್ಪನ್ನಗಳಿಗೆ ಪೇಟೆಯಲ್ಲಿ ದಕ್ತಾ ಇರೋ ವಿಪರೀತ ಬೆಲೆಯ ಕೆಲ ಅಂಶವಾದರೂ ಹಳ್ಳಿಗರಿಗೆ ದಕ್ಕಿದರೆ ಗೋಸಾಕಣೆಗೆ ಮತ್ತೆ ಮಹತ್ವ ಬರಬಹುದು ಅನುಸ್ತು. ಉದಾ: ಪೇಟೆಯಲ್ಲಿ ೨೫-೩೦ ರೂಗೆ ಲೀಟರ್ ಹಾಲು ಮಾರಾಟವಾದರೆ ಹಳ್ಳಿಗನಿಗೆ ಹದಿನೈದರಿಂದ ಹದಿನೆಂಟು ಸಿಕ್ಕರೆ ಹೆಚ್ಚು :-(
  ಆ)ಇನ್ನು ಆ ಭಾಗ್ಯ ಈ ಭಾಗ್ಯ ಅನ್ನೋ ಸರ್ಕಾರದವರೂ "ಗೋ ಭಾಗ್ಯ" ಅನ್ನೋ ತರದ ಒಂದು ಯೋಜನೆ ತಂದು ಗೋಸಾಕಣೆಗೆ ಒಂದಿಷ್ಟು ನೆರವು ನೀಡಿದ್ರೆ ಅದೆಷ್ಟೋ ನಿರುದ್ಯೋಗಿಗಳು ತಮ್ಮ ಬದುಕು ಕಟ್ಟಿಕೊಳ್ಳಬಹುದು.
  ಇ)ಮೊನ್ನೆ ಪತ್ರಿಕೆಯಲ್ಲಿ ಓದಿದ ಒಂದು ಸಂಗತಿ ಯಾಕೋ ಮನಸ್ಸಿಗೆ ಕುಟುಕಿತು. ಗೋಕರ್ಣೇಶ್ವರನಿಗೆ ಪ್ಯಾಕೇಟ್ ಹಾಲಿನ ಅಭಿಷೇಕ ಹೇಳಿ! ಎಲ್ಲ ಸತ್ಸಂಪ್ರದಾಯಗಳೂ ಮನೆಯಿಂದನೇ ಶುರುವಾಗಕ್ಕು ಹೌದು. ಆದ್ರೆ ದೇವಸ್ಥಾನಗಳಿಂದ ಶುರು ಆಗ್ಲಾಗ ಹೇಳಿ ಎಂತೂ ಇಲ್ಲೆ. ದೇವಾಲಯಗಳಲ್ಲಿ ಅನ್ನ ಸಂತರ್ಪಣೆ , ಹೋಮ ಹವನ,ಅಭಿಷೇಕಾದಿಗಳು ಹೇಳಿ ಸುಮಾರಷ್ಟು ಹಾಲಿನ ಬಳಕೆ ಇದ್ದೇ ಇರ್ತು. ಹಂಗಾಗಿ ದೇವಸ್ಥಾನದ ವತಿಯಿಂದ ತೀರಾ ದೊಡ್ಡದಲ್ಲದಿದ್ದರೂ ಒಂದೆರಡೇ ಹಸುಗಳಿರೋ ಗೋಶಾಲೆಯನ್ನ ಎಂತಕ್ಕೆ ತೆರೆಲಾಗ ?

  ಹೇಳ್ತಾ ಹೋದ್ರೆ ನಮ್ಮ ಜವಾಬ್ದಾರಿಯನ್ನು ಹಿಂಗೆ ಬೇರೆ ಅವ್ರ ಮೇಲೆ ಹೊರಿಸಿ ನಾವು ಬಚಾವಾಗೋ ಹಲದಾರಿ ಹೊಳಿತು . ಆದ್ರೆ ನೀವು ಹೇಳಿದ ಹಾಗೆ ಎಲ್ಲಾ ಶುರುವಾಗಕ್ಕಾಗಿದ್ದು ನಮ್ಮಿಂದನೇ . ವೈಯುಕ್ತಿಕವಾಗಿ ಈ ಬಗ್ಗೆ ಏನು ಮಾಡ್ಲಕ್ಕು ಅಂತ ಅಂದ್ಕಂಡ್ರೆ ಸದ್ಯಕ್ಕೆಂತೂ ನನ್ನ ಬಳಿಯ ಉತ್ರ ಅಸಹಾಯಕತೆನೇ :-(

  ReplyDelete
 5. ಗೋ ಪ್ರೇಮಿಗಳೆಲ್ಲ ಗೋಪಾಲಂದಿರೇ ಎರಡು ಮಾತಿಲ್ಲ ಮೇಡಂ. ತುಂಬಾ ಉತ್ತಮ ಲೇಖನ.

  ReplyDelete
 6. tumbaa chennaagide madam... odugara manassanna hiDidiTTukoLLuvashTu sogasaagi baritiri.. idu heege munduvareyali..

  ReplyDelete
 7. ಇಷ್ಟವಾಯ್ತು :)

  ReplyDelete