ಮನುಷ್ಯ ತನ್ನ ವೈಚಾರಿಕ ವಿಚಾರಗಳನ್ನೆಲ್ಲ ಇನ್ನೊಬ್ಬರ ಮೇಲೆ ಹೇರಲು ಅವಕಾಶ ಸಿಕ್ಕಾಗೆಲ್ಲ ಪ್ರಯತ್ನಿಸುತ್ತಲೇ ಇರುತ್ತಾನೆ, ಒಂದು ಸೃಷ್ಟಿ ಇನ್ನೊಂದು ಪ್ರತಿಸೃಷ್ಟಿಯಂತ ಕಲಾತ್ಮಕ ವಿಚಾರಗಳನ್ನೇ ಇಟ್ಟುಕೊಂಡರೂ ತನ್ನದಾದ ಯಾವುದೋ ಒಂದು ನಿಲುವಿಗೆ ಬದ್ಧನಾದಂತೆ ತೋರುತ್ತಾ ಇನ್ನೊಂದಷ್ಟು ನಿಲುವುಗಳ ವಿರೋಧಿಸುತ್ತಿರುತ್ತಾನೆ. ಹೌದು ವೈಚಾರಿಕತೆಯೆಂಬ ಬಿಸಿ ತುಪ್ಪವೇ ಹಾಗೇ.. ಅದು ಒಳಗೂ ಸುಡುವ ಹೊರಗೂ ಸುಡುವ ಬೂದಿಮುಚ್ಚಿದ ಕೆಂಡದಂತೆ. ಅದನ್ನು ಬಾಯಿಬಿಟ್ಟು ಆಡಿದರೆ ಬಹಳಷ್ಟು ಜನರ ವಿರೋಧ ಕಟ್ಟಿಕೊಳ್ಳಬೇಕು. ಸುಮ್ಮನಿದ್ದರೆ ಯಾವುದೂ ಹಿತವೆನ್ನಿಸದಂತ ಕುದಿ ಒಳಗಿಂದ ಕುದಿಯುತ್ತಲೇ ಇರುತ್ತದೆ. ಅದು ಸುಮ್ಮನೆ ಕುಳಿತಿರಲಾಗದಷ್ಟು ಸುಡುತ್ತದೆ. ಒಂದಲ್ಲ ಒಂದು ದಿನ ಅದು ಲಾವಾದಂತೆ ಉರಿದು ಹೊರಬೀಳುತ್ತದೆ.. ಯಾವುದೋ ಒಂದನ್ನು ಸುಡುವುದಂತೂ ಸತ್ಯ.
ಒಂದುಕಾಲಕ್ಕೆ ವೈಚಾರಿಕತೆಯೊಂದು ಬೆಳವಣಿಗೆಯ ಸಾಧನ. ಇನ್ನೊಂದು ಕಾಲಕ್ಕೆ ವೈಚಾರಿಕತೆ ಎಂಬುದು ಬದುಕುವ ಸಾಧನ, ಮತ್ತೂ ಒಂದು ಕಾಲಕ್ಕೆ ವೈಚಾರಿಕತೆಯ ಪಾಠ ಮತ್ತಷ್ಟು ಕಾಲಕ್ಕೆ ಅದೊಂದು ಅನುಭವ. ಎಲ್ಲ ಕಾಲಕ್ಕೂ ಬದುಕಿಗೆ ನಿಲ್ಲುವುದು ಬರೀ ಅವರವರದ್ದೇ ಆದ ಒಂದು ಕಟು ಕಟು ವಾಸ್ತವ ಮತ್ತದರ ಆಗು ಹೋಗುಗಳಾಚೆ ಮನಸ್ಸಿನ ಆವೇಗಗಳ ನಿರ್ಧರಿಸುವ ಭಾವತೀವ್ರತೆಯ ಅಲೆಗಳಷ್ಟೆ. ಅತ್ಯಾಚಾರ ಕೂಡ ಇಂತದ್ದೇ ಒಂದು ಮನಸ್ಸಿನ ಒಂದು ವಾಸ್ತವದ ಘಟನೆ ಒಬ್ಬರಿಗಾದರೆ ಇನ್ನೊಬ್ಬರಿಗೆ ಅದು ಬದುಕಿಡೀ ಮಾಯದ ಗಾಯ.. ಚಿತ್ರ ವಿಚಿತ್ರವೆನ್ನಿಸುವ ನೂರೆಂಟು ಸತ್ಯಗಳಿಗೆಲ್ಲ ವೈಚಾರಿಕತೆಯಾಗಲೀ ತರ್ಕವಾಗಲೀ ಸ್ಪಷ್ಟನೆ ಕೊಡದು. ಮತ್ತದನ್ನು ನಿಯಂತ್ರಿಸಲಾಗದು. ಎಲ್ಲವನ್ನೂ ತನ್ನ ಕೈಯೊಳಗೇ ಅಂದುಕೊಳ್ಳುವ ಮಾನವ ಅಸಹಾಯಕನಾಗುವುದು ಇಂತ ಪ್ರತೀ ಸಂದರ್ಭಗಳಲ್ಲೂ. ಬೇಡ ಬೇಡವೆಂದರೂ ವಿಜ್ಞಾನದ ಸ್ಪೋಟಗಳಲ್ಲೂ, ಚಂದ್ರ ಗ್ರಹ ಯಾತ್ರೆಯಲ್ಲೂ, ರಾಕೆಟ್ಟು ಉಡ್ಡಯನದಲ್ಲೂ, ಅಮೇರಿಕ ಇಂಗ್ಲೆಂಡಲ್ಲೂ, ಗ್ರೀಕ್ ರೋಮನ್ನುಗಳಲ್ಲೂ ಮುಂದುವರಿದ ಎಲ್ಲ ಪ್ರಪಂಚದಲ್ಲೂ ಮಾನವ ಈ ನಿಸ್ಸಾಹಯಕ ಸ್ಥಿತಿಯಲ್ಲಿ ದೇವರೇ! ಎನ್ನುತ್ತಾನೆ!! ಮತ್ತೆ ಅದು ಯಾವುದೋ ಒಂದು ಹೆಸರಿಲ್ಲದ ಕಣ್ಣಿಗೆ ಕಾಣದ ಪ್ರಪಂಚವನ್ನೆಲ್ಲ ನಿಯಂತ್ರಿಸುವ ಇಂದ್ರಿಯಗಳಿಗೆ ನಿಲುಕದ ಶಕ್ತಿಯನ್ನು ನಂಬುತ್ತಾನೆ. ದೇವರೆಂದರೆ ಧರ್ಮ ಜಾತಿ, ಶಬ್ಧ, ವಾಕ್ಯಗಳಿಗೆ ಮೀರಿದ್ದು. ಅದನ್ನು ವಿವರಿಸುವ ಮೂರ್ಖತನ ಬೇಡ. ದೇವರ ಹೆಸರಿನಲ್ಲಿ ನೆಮ್ಮದಿಯ ಕಂಡುಕೊಳ್ಳುವ ಮನಸುಗಳನ್ನೂ ಮತ್ತದರ ವೈಚಾರಿಕ ಮುಖಗಳನ್ನೂ ನೋಡಿ ತಿಳಿಯಬೇಕಷ್ಟೆ.
ಬರಹಗಾರ ಅಥವಾ ಓದುಗ, ಕಲೆಗಾರ ಅಥವಾ ಕಲೋಪಾಸಕ, ಯಾವುದೇ ವಿಷಯತಜ್ಞ ಮತ್ತು ವಿಷಯಗ್ರಾಹಕ ಇಬ್ಬರೂ ಒಂದು ಸಂಪೂರ್ಣ ಸತ್ವಯುತವಾದದ್ದನ್ನು ಆಯ್ದುಕೊಳ್ಳಬೇಕಾದರೆ, ನಿಜವಾದ ಸತ್ಯ ತಿಳಿಯಬೇಕಾದರೆ, ರಸಸ್ವಾದನೆ ಸಾಧ್ಯವಾಗಬೇಕಾದರೆ ಅವನ್ನು ಪೂರ್ಣ ಅರಿತಿರಬೇಕು. ಕೇವಲ ಉತ್ತಮವನ್ನು ಆಯ್ಕೆ ಮಾಡಿಕೊಳ್ಳುತ್ತೇನೆಂಬುದು ಸಾಧ್ಯವಾಗುವುದಿಲ್ಲ. ಎರಡೂ ಮುಖಗಳ ಅರಿವು ಮಾತ್ರ ಸರಿ/ತಪ್ಪು, ಒಳ್ಳೆಯದು/ ಕೆಟ್ಟದ್ದು ನಿರ್ಣಯಿಸಬಲ್ಲದು. ಹಾಗೇ ಒಬ್ಬ ಮನುಷ್ಯ ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿ ಇರಲಾರ ಯೋಚಿಸಲಾರ ಎಂಬುದು ಸತ್ಯವಾದಲ್ಲಿ ಇನ್ನೊಬ್ಬರ ಆಸ್ವಾದನ ಮಟ್ಟವನ್ನು, ಬೇರೆಯವರ ಪರಿಕಲ್ಪನೆಗೆಷ್ಟೇ ನಿಲುಕಿದ ಅಲ್ಪ ವಿಷಯಗಳನ್ನೂ ಗೌರವಿಸಲೇ ಬೇಕು. ಈ ಪ್ರಪಂಚದಲ್ಲಿ ಎಲ್ಲರೂ ಶೇಕ್ಸ್ ಪಿಯರ್ ಆಗಲಾರರು. ಎಲ್ಲರೂ ರವಿವರ್ಮ ಆಗಲಾರರು, ಎಲ್ಲರೂ ಪಂಡಿತ್ ರವಿಶಂಕರ್ ಆಗಲಾರರು. ಅವರಂತಾಗುವ ಪ್ರಯತ್ನದಲ್ಲಿ ಇನ್ನೊಬ್ಬರು ಹುಟ್ಟಬಹುದಷ್ಟೆ ಹೊರತು ಕಾಪಿ ಪೇಸ್ಟ್ ಸಾಧ್ಯವಾಗದು. ಅದಕ್ಕೆಂದೇ ಇದು ದೇವರ ನಿರ್ಮಿತಿ!
ಒಂದೇ ಮನೆಯಲ್ಲಿರುವ ಮೂರು ನಾಲ್ಕು ಜನ ಒಂದೇ ರೀತಿ ಇರುವುದಿಲ್ಲ. ಹೊಟ್ಟೆಯಲ್ಲಿ ಹಂಚಿಕೊಂಡ ಮಕ್ಕಳು ತಂದೆ ತಾಯಿ ಎಲ್ಲವೂ ಬೇರೆಬೇರೆಯೇ ವ್ಯಕ್ತಿ, ಬೇರೆ ಬೇರೆ ವ್ಯಕ್ತಿತ್ವ. ಹಾಗಿರುವಾಗ ನಮ್ಮಂತೆ ಜಗತ್ತೆಲ್ಲ ಯೋಚಿಸಬೇಕೆನ್ನುಂದುಕೊಳ್ಳುವುದು ಮೂರ್ಖತನವಲ್ಲವೆ? ಸಮಾನ ಮನಸ್ಕರು ಎಂದರೆ ಸಮಾನ ಆಸಕ್ತಿಯುಳ್ಳವರಾಗಬಹುದೇ ಸಮಾನ ವಿಚಾರಗಳುಳ್ಳವರು ಆಗುವುದಿಲ್ಲ. ಯಾವುದೋ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಈ ಸಮಾನತೆ ಕಾಣಬಹುದಾದರೂ ಉಳಿದಂತೆ ಪ್ರತಿಯೊಬ್ಬರಲ್ಲೂ ವಿಭಿನ್ನ ವಿಚಾರಗಳಿದ್ದೇ ಇವೆ. ಹಾಗೆ ನೋಡಿದರೆ ಈ ವೈಚಾರಿಕತೆ, ಯೋಚನೆಗಳು, ಭಾವನೆಗಳು ಪ್ರತಿಯೊಂದೂ ವ್ಯಕ್ತಿಗೂ ಕಾಲಕ್ಕೂ ದೇಶಕ್ಕೂ ಬೇರೆ ಬೇರೆಯೇ. ಮನುಷ್ಯ ವಿಶ್ವಾಸದ ಮೇಲೆ ಮಾತ್ರ ಸ್ನೇಹ, ಸಂಬಂಧಗಳು ನಿಲ್ಲುತ್ತವೆ. ಅಥವಾ ಅವುಗಳನ್ನು ಕಾಯ್ದುಕೊಳ್ಳಲೇಬೇಕಾದ ಒಂದು ವ್ಯವಸ್ಥೆಯಲ್ಲಿ ಬಂಧಿಸಿಕೊಂಡು ಬದುಕುತ್ತೇವೆ. ಬೇಡ ಎಂದುಕೊಂಡ ಮರುಕ್ಷಣ ಮನಸು ಎಲ್ಲದರಿಂದ ಹೊರನಿಲ್ಲಬಲ್ಲ ಸಾಮಥ್ರ್ಯವನ್ನೂ ಹೊಂದುತ್ತದೆ.
ಸಾಮಾಜಿಕ ಬದುಕು ಮತ್ತು ವೈಚಾರಿಕ ಪ್ರಪಂಚದ ಅಬ್ಬರದ ಭರಾಟೆಯಲ್ಲಿ ಸ್ವಲ್ಪ ಸಂಯಮವಿಲ್ಲದ ಮನಸುಗಳು ಅಥವಾ ಪ್ರಜ್ಞೆ ಕಳೆದುಕೊಳ್ಳುವ ಬಲಹೀನ ಮನಸುಗಳು ಈಗ ಬಹುತೇಕ ದ್ವಂದ್ವದಲ್ಲಿ ಸಿಲುಕಿಕೊಂಡಿವೆ. ಯಾವುದು ಹಿತ ಯಾವುದು ಅಹಿತ ಎನ್ನುವುದರ ನಡುವೆ ಬುದ್ದಿ ಮತ್ತು ಮನಸಿನ ನೇರ ಹೋರಾಟವನ್ನೇ ಇಂದು ಎದುರಿಸುತ್ತಿವೆ. ಬರಹಗಾರ ಪ್ರತಿಯೊಬ್ಬನೂ ತನ್ನನ್ನು ತಾನು ಅತ್ಯುತ್ತಮನೆಂದು ಜಗತ್ತಿಗೆ ಏನೋ ಕೊಡುವ ಮಹಾನ್ ಎಂದುಕೊಳ್ಳುವ ಮೊದಲು ಈ ಮೊದಲು ಜಗತ್ತಿಗೆ ಏನೆಲ್ಲ ಕೊಟ್ಟವರ ಅಸ್ತಿತ್ವ, ಅವರ ಅಸ್ಮಿತೆಯನ್ನು ಅರಿಯಬೇಕು. ಇದ ಮಿತ್ಥಂ ಅನ್ನುವುದಕ್ಕೆ ಹೊರತಾಗಿಯೂ ಯೋಚಿಸುವ ಕಲ್ಪಿಸುವ ಮತ್ತು ಸೃಜಿಸುವ ವಿಶಾಲತೆಯನ್ನು ಹೊಂದಿರಬೇಕು. ನಾನು ನೋಡಿದ್ದು ಸತ್ಯವೆಂಬುದಾದರೆ ನೋಡದಿರುವ ನೂರು ಸತ್ಯಗಳೂ ಇರಬಹುದು. ನನ್ನೆಣಿಕೆಗೆ ಸಿಗದಿರುವ ಅಗಣಿತ ತಾರಾಗಣಗಳಿವೆ ಇಲ್ಲಿ ಎಂಬುದು ಅರಿವಿನ ಮೊದಲ ಹೆಜ್ಜೆ, ವೈಚಾರಿಕ ವಿರೋಧವೆಂಬುದು ವಿರೋಧಿಸುವುದು ಮತ್ತು ಮುಗಿಬೀಳುವುದರ ಮೇಲೇ ನಿಂತುಹೋಗುವ ಅಪಾಯವಿದೆ. ವಿಷಯದ ಮಂಥನವಾದಲ್ಲಿ ವಿಷ ಅಮೃತಗಳು ಹೊರಚೆಲ್ಲುವವರೆಗೂ ಕಾಯುವ ತಾಳ್ಮೆ ಬೇಕು. ಎಲ್ಲಕ್ಕಿಂತ ವಿಶಾಲತೆಯ ಅರಿವು ಬೇಕು. ಇಷ್ಟೆಲ್ಲದರ ನಡುವೆ ಕಳೆದುಹೋಗದ ಭಾವಗಳು, ಬದುಕಿನ ಕಟು ಸತ್ಯಗಳು, ವಾಸ್ತವದ ನೆಲೆಯ ಮೇಲೆ ನಿರಂತರದ ಹೋರಾಟದ ಈ ಯುದ್ಧಗಳೇ ನಮ್ಮನ್ನು ಬೆಳೆಸುವಂತದ್ದು. ಕಾಡುವಂತದ್ದು, ಕೊಡುವಂತದ್ದು.
ಇಂದಿಗಿಷ್ಟು ಮಳೆ...
ಮತ್ತೆ ಸಿಗುವಾ.
ವಿಚಾರಶೀಲ ಬರಹ...
ReplyDeleteಇಷ್ಟವಾಯಿತು...:)