Saturday, August 1, 2015

ಬದುಕು ನಡೆಸಿದತ್ತ ಪಯಣ...




ಚಿತ್ರಕೃಪೆ: ಅಂತರ್ಜಾಲ.


        ಮಾನಸ ಸರೋವರದಲ್ಲಿ  ವೈಚಾರಿಕ ಮಾತಿಗಿಂತ ಮನಸಿನ ಮಾತಿಗೆ ಹೆಚ್ಚು ಒಲವು ಅಲ್ಲವಾ ಮನಸೇ?  ಮನಸೆಂಬ ಒಲವಿನ ಮೂಟೆಯೆದುರು ಮತ್ತೊಮ್ಮೆ ಹರವಿಕೊಳ್ಳುವ ಭಾವಸಾಗರದಲ್ಲಿ ನೀನು ಬಂದು ಕೂರುವುದೇನೂ ಬೇಡಬಿಡು. ಒಮ್ಮೊಮ್ಮೆಯಾದರೂ ಒಂಟಿಯಾಗಿ ಕೂತು ಮಾತನಾಡಿಕೊಳ್ಳಬೇಕೆನ್ನಿಸಿದೆ. ಹೀಗೆ...

    ಯಾವ ಚೆಲುವಿನೊಳಗೂ ನಮ್ಮೊಳಗಿನ ಸಮ್ಮೋಹನಗೊಳಿಸುವ ನಶೆಯಿರಲಿಲ್ಲ. ಹೂವುಗಳೆದೆಯಲ್ಲಿ ಗಂಧ ಹರಡಿಕೊಂಡಂತೆ  ಭಾವದ ಹೂ ಅರಳಿಕೊಂಡಿತಿಲ್ಲಿ. ಮನಸಿನಂಗಳದಲ್ಲಿ.. ನಿನ್ನ ಒಲಿಸುವ ನನ್ನ ರಮಿಸುವ ಮಾತಿಗೆ ಎಂದಿಗೂ ಎಡೆಯಿರಲಿಲ್ಲ.  ಮುಗಿಲಂತೆ ಚಾಚಿಕೊಂಡಿತು ಒರವಶರಧಿಯಲ್ಲಿ... ಮಾತು ಮಾತಿಗೆ ಮುನಿಸು ನಿತ್ಯ ನಿರೀಕ್ಷೆಯ ಕನಸು ಯಾವುದೂ ಇರಲಿಲ್ಲ.  ನಾದವಾಯಿತು ನಮ್ಮೊಳಗಿನ ಚಿಂತನೆಗಳೆಲ್ಲ! ಎಲ್ಲ ಮೀರಿರುವಾಗ ಎಲ್ಲಿ  ಅಡಗಲಿ ಹೇಳು? ಮಾಧವನೆಡೆಗೆ ಮೀರೆಯ ಒಲವಿರುವಂತೆ ಕೊಳಲಿನ ಕರೆಗೆ ಗಂಗೆ ಗೌರಿ ಬರುವಂತೆ ಈ ಮನಸು ನಿನ್ನದಾಯಿತಲ್ಲ! 

 ನೀನೊಂದು ಕ್ಷಣ ಮನಸಿಂದ ಮರೆಯಾದರೆ ಸಾಕು ಯಾಕೋ  ಮಾತು ಮೌನ ಪ್ರೀತಿ ಕಾವ್ಯ ಬರಹ, ಬದುಕು ಎಲ್ಲವೂ ಮುಗಿಸಿಬಿಡಬೇಕೆಂದು ಹಟ ಹಿಡಿದಿಯುತ್ತಿದೆ ಮನಸು.. ಅದೇ ಮನಸು ಬೆಳದಿಂಗಳಲ್ಲಿ ಈಗ ತಾನೇ ಹೊಯ್ತಾ ಇರೋ ಮಳೆ ನೀರಲ್ಲಿ ರಮಿಸಿ ಆನಂದಿಸುತ್ತದೆ. ಕವಿತೆ ಬರೆಯುತ್ತದೆ. ಸುಡುವ ವಿರಹದ ಚಂದ್ರನಿಗಾಗಿ ಅಳಲಿಕೆಯಿದೆ ಈ ಬುವಿಯ ಕಳವಳದಲ್ಲಿ. ಕತ್ತಲಿಗೆ ಬೆಳಕಿಗೆ ಸಾಂಗತ್ಯಕ್ಕೆ ತೊರೆಯಿದೆ ಇಲ್ಲಿ... ಹೌದು  ಪ್ರೀತಿಸದೇ ಉಳಿಯಲಾರೆ ನಾನು. ನೀ ಕೂಡ. ಆದರೆ ವ್ಯಕ್ತವಾಗುವಿಕೆಯನ್ನು ಕಟ್ಟಿ ಹಾಕಬೇಕೀಗ. ನಾನೂ ಹಾಗೆ ಮಾಡಿದರೆ  ನಮ್ಮ ನಡುವೆ ಸಂವಹನ ಯಾವತ್ತೋ ನಿಂತುಹೋಗುತ್ತಿತ್ತು. ಮಾನಸಿಕ ಸಂವಹನದ ಜೊತೆ ಭೌತಿಕ ಸಂವಹನವೂ ನಿಂತು ಹೋಗುತ್ತಿತ್ತಲ್ಲವಾ! ನನ್ನ ನಿನ್ನ ಹಾದಿ ಎಷ್ಟೇ ಬೇರೆಯಾಗಲೀ ಅದು  ಸಂಧಿಸಲೇ ಬೇಕು ನಾವು ಮತ್ತೆಮತ್ತೆ. ಕೃಷ್ಣಾ ಉರಿದು ಹೋಗಲಿ ಎಲ್ಲ ಕಾಯ ಎಂದುಕೊಂಡ ಭಾವಕ್ಕೆ ಬದುಕನ್ನೇ ದೀಕ್ಷೆಯಜ್ಞವಾಗಿಸಿಬಿಟ್ಟಿದ್ದೀ. ಸಾಕು ಅಂದರೆ ಬಿಡುವುದಲ್ಲ. ಬೇಕು ಅಂದರೆ ಸಿಗುವುದಲ್ಲ! ಎಂಥಾ ಜಾಗದಲ್ಲಿ ನನ್ನ ನಿಲ್ಲಿಸಿದೆ ನೀ! ನಗಲಾಗದ ಅಳಲಾಗದ ಮರುಗಲಾಗದ, ಖುಶಿಪಡಲಾಗದ ಬೇರೆ ಎಲ್ಲೋ ಏನೋ ಖುಶಿ ಕಂಡುಕೊಳ್ಳಲಾಗದ ನನ್ನ ಸ್ಥಿತಿ ನಿನಗೇ ಪ್ರೀತಿ. ಬಯಸಿದರೆ ಏನೆಲ್ಲವನ್ನೂ ಬೇಕಾದಲ್ಲಿ ಪಡೆಯಬಲ್ಲೆ ನಾನು. ಉಹುಂ. ಬಯಕೆಗಳೇ ಇಲ್ಲ. ಭಾವಗಳೂ ಇಲ್ಲ. ಎಷ್ಟೆಲ್ಲ ಬರಿದಾಗಿಸಿಕೊಂಡೆ ನನ್ನ ಒಳಗನ್ನು... ಬರಿದಾಗಿಸಿಕೊಂಡಷ್ಟೂ ನೀನೇ ತುಂಬಿಕೊಂಡುಬಿಟ್ಟೆ. ನನಗೆ ಗೊತ್ತಿಲ್ಲದೇ. ನನ್ನ ಅರಿವಿಲ್ಲದೇ.. ನನ್ನ ಬದುಕಿನ ಈ ಅಂಕವನ್ನು ಹಂಚಿಕೊಳ್ಳುವ ಕವಿತೆ ಕೂಡ ಬರೆಯಲಾರೆ ಇವತ್ತಿಗೆ ನಾನು. ಅದಕ್ಕೆಂದೇ ಇವನ್ನೆಲ್ಲ ಹೀಗೆ ಬರೆದು ಮನಸು ಹಗುರಾಗಿಸಿಕೊಳ್ಳುತ್ತಿದ್ದೇನೆ. ನನ್ನ ಕಣ್ಣಲ್ಲಿ ಹನಿ ನೀರಿಲ್ಲ, ಕನಸಿಲ್ಲ, ಖುಶಿಯಿಲ್ಲ. ಕತೆಯಿಲ್ಲ, ಕವಿತೆಯಿಲ್ಲ, ಆದರೆ ಎಲ್ಲವನ್ನೂ ಮರುಸೃಷ್ಟಿಸಿಕೊಳ್ಳುತ್ತೇನೆ. ಮತ್ತೆ ಜೀವನ್ಮುಖಿಯಾಗುತ್ತೇನೆ. ನನ್ನ ಭಾವಗಳ ನಾನು ಜೀವಂತ ಪೋಷಿಸಿಕೊಳ್ಳ್ಳುತ್ತೇನೆ. ಮತ್ತೆ ನಾನು ಜೀವಂತಿಕೆಯ ಉಸಿರು ಹಿಡಿಯುತ್ತೇನೆ. ತೊರೆಯುವಿಯಾದರೆ ಎಲ್ಲಿಯವರೆಗೆ?  ಈ ಭೂಮಿ ಆಕಾಶಗಳು ಮುಗಿಯುವವರೆಗೆ...  ನಿರೀಕ್ಷೆಯಾದರೂ ಏನಿತ್ತು ಇಲ್ಲಿ? ಪ್ರೀತಿ ತಾನೇ? ನನ್ನ ಪ್ರೀತಿಸಲು ನೀನ್ಯಾಕೆ ಬೇಕು ನನಗೆ? ನಾನೇ ನೀನೆಂಬ ಮನಸಾಗಿ ನನ್ನೊಳಗೆ ನೀನಿರುವವರೆಗೆ ಭೌತಿಕವಾದ ಯಾವ ಅಗತ್ಯಗಳೂ ನನ್ನ ಕಾಡದಿರುವವರೆಗೆ ನೀನೆಂಬ ನೀನು ನಾನೇ ಆಗಿ ನನ್ನ ಬದುಕೆಲ್ಲ ನಿನ್ನ ಸುಗಂಧವೇ ಪಸರಿಸಿ ಪ್ರೀತಿಸಿಕೊಳ್ಳುತ್ತಲೇ ಬದುಕುತ್ತೇನೆ. ಜೀವನ್ಮುಖಿಯಾಗಿ..ಇದು ನನ್ನ ಹಟ ಮಾತ್ರವಲ್ಲ. ಭಾವಗಳ ಮರುಸೃಷ್ಟಿಸಿಕೊಳ್ಳುವ ಮನಸ್ಸಿನ ನಿರಂತರ ಪ್ರಯತ್ನವೂ ಹೌದು. ಒಳಗನ್ನು ತುಂಬಿಕೊಂಡ ಅಗತ್ಯಗಳು ಮೀರಿದ ಒಲವಿದು.. ಇಷ್ಟಕ್ಕೂ ನೀ ನನಗೆ ಒಲವಿನ ಒರತೆ..ನಿನ್ನೊಳಗೆ ಎಲ್ಲವನ್ನೂ ನಾನೇ ಪಡೆದುಕೊಳ್ಳುವ ನಿರಂತರ ಜ್ಯೋತಿ..  ಪ್ರೀತಿ, ಭಕ್ತಿ, ಆನಂದ, ಪ್ರಜ್ಞೆ, ಮನಸು ಎಲ್ಲದರ ನೆಲೆ ನೀನು..ನಿನ್ನ ಹೊರತು ನಾನು ಏನು? ಇದಕ್ಕಿಂತ ಹೆಚ್ಚಿನ ತೃಪ್ತಿ ಬದುಕಿಗೆ ಏನು ಬೇಕು ಹೇಳು. ಏನು ಬೇಕು ನನಗೆ? ಇದೇ   ನನ್ನದೇ ಮನಸಿನ ಜೊತೆ  ಈ ಪಯಣ ನಿರಂತರ. ಇದು ನನ್ನ ಭ್ರಮೆಯಲೋಕವೆನ್ನಿಸದರೆ ಹೌದು. ಬದುಕಿಸುವುದು ಭ್ರಮೆಯಾದರೇನು ಕನಸಾದರೇನು? ನೀನೇ ಹಚ್ಚಿಟ್ಟ ಹಣತೆಯಿದೆ. ನನ್ನೊಲವಿನ ಕೈದೀಪವಿದೆ. ಸಾಕು ಬಿಡು. ಇನ್ನೆಂತ ಬರೆಯಲೀ... ಬದುಕ ಪ್ರೀತಿಸಲು ಹಟವೊಂದಿರಲೀ...
ಮೌನಕ್ಕೆ ಧ್ಯಾನಕ್ಕೆ ಆತ್ಮಶಕ್ತಿ ಕೊಡಲಿ.. ಕೃಷ್ಣ ನನ್ನ ಹೋರಾಟಕ್ಕೆ ಬಲವನ್ನೀಯಲಿ.. ಬದುಕು ತೋರಿದತ್ತ.. 
  

No comments:

Post a Comment