Tuesday, January 4, 2011

    ಸ್ನೇಹಿತರೇ ಇದೊಂದು ಸ್ತ್ರೀ ಚಿಂತನೆಯ  ಬರಹವಾದರೂ ಸ್ತ್ರೀ ವಾದಿಯ  ಬರಹ ಅಲ್ಲ ಎಂಬ ಸ್ಪಷ್ಟನೆಯೊಂದಿಗೆ ವಿಚಾರಗಳ ಮಟ್ಟದಲ್ಲಿ ಇದನ್ನು
ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕಾರಣ ಸ್ತ್ರೀ ಮನಸಿನ ಯಾವುದೇ ನೋವು ನಲಿವುಗಳನ್ನು ಬರೆದರು ಅದಕ್ಕೆ ಸ್ತ್ರೀವಾದಿಯೆಂಬ ಹಣೆಪಟ್ಟಿಯೊಂದಿಗೆ
ಅದಕ್ಕಿಂತ ಮುಂದೆ ಎಂದೂ ನಮ್ಮ ಆಲೋಚನೆಗಳು ಸಾಗದೇ ನಿಂತುಹೋಗುತ್ತಿವೆ ಇಂದು. ನನಗೆ ಯಾವುದೇ ಇಸಂ ಗಳ ಅಥವಾ ವಾದಿಗಳ ಕುರಿತು ಆಸಕ್ತಿಯಿಲ್ಲ.
ಆದರೆ ನನಗೆ ಮಾನವೀಯ ಮೌಲ್ಯಗಳ ಕುರಿತು ಆಸಕ್ತಿಯಿದೆ. ಅದು ಸ್ತ್ರೀ ಯಿರಲಿ ಪುರುಷ, ದಲಿತ ಬಂಡಾಯ ಯಾರೇ ಇರಲಿ. ಹಾಗಾಗಿ ನನ್ನ ಬರಹದ ಮುಂದಿನ ಎಲ್ಲ ಬರಹಗಳಿಗೂ ಮುನ್ನುಡಿಯಾಗೇ ಈ ಮಾತನ್ನು ಹೇಳಬಯಸುತ್ತೇನೆ. ದಯವಿಟ್ಟು ಇದನ್ನು ಗಮನದಲ್ಲಿಟ್ಟುಕೊಂಡೇ ನಿಮ್ಮ ಪ್ರತಿಕ್ರಿಯೆಗಳಿರಲಿ ಎಂಬ ವಿನಂತಿಯೊಂದಿಗೆ...



          ಮೊನ್ನೆ ಟೀವಿ ಸೀರಿಯಲ್ ನ ಒಂದು ಭಾಗದಲ್ಲಿ ಹುಡುಗಿಯೊಬ್ಬಳು ಹೇಳುತ್ತಾಳೆ. ತನ್ನ ಪ್ರೇಮಿಯೊಂದಿಗೆ. "ನನ್ನ ಬದುಕಿನ ಎಲ್ಲ ಯೋಚನೆಗಳು ಯೋಜನೆಗಳು ಆಸೆಗಳು ನಿನ್ನಿಂದ ಆರಂಭವಾಗಿ ನಿನ್ನಲ್ಲಿಗೇ ಮುಗಿದುಹೋಗುತ್ತವೆ. ನಿನ್ನ ಸಂತೋಷಕ್ಕಾಗಿ ಪ್ರಾಣವನ್ನೇ ಬಿಡ್ತೀನಿ." ಟೀವಿ ಸೀರಿಯಲ್ ನ ಮಾತುಗಳು ಅಂತ ಹಗುರವಾಗಿ ಪರಿಗಣಿಸಬೇಡಿ. ಇವತ್ತಿಗೂ ಸಮಾಜದ ಪ್ರತೀ ಹಂತದಲ್ಲೂ ಸ್ತ್ರೀ ಹೀಗೆ ತನ್ನ ಬದುಕನ್ನು ಪುರುಷನ ಕುಶಿಯಾಗಿಡುವುದಕ್ಕೋಸ್ಕರ ಬದುಕುತ್ತಿರುವ ಸಾವಿರ ಉದಾಹರಣೆಗಳಿವೆ ನಮ್ಮಲ್ಲಿ. ಅದು ತಪ್ಪು ಅಂತಾನೂ ನಾನು ಹೇಳ್ತಿಲ್ಲ. ತನ್ನ ಬದುಕಿನ ಸಾರ್ಥಕತೆಯನ್ನು ಆಮೂಲಕವೇ ಕಂಡುಕೊಳ್ಳುವ ಸಂಸ್ಕೃತಿ ನಮ್ಮದು. ಗಂಡನ ಬದುಕಿನ ಸಹಚಾರಿಣಿಯಾಗುವುದು ಹೆಣ್ಣಿಗೆ ಅವಮಾನವೂ ಅಲ್ಲ. ಕೆಲವೇ ಸ್ತ್ರೀಯರು ಇದನ್ನು ದೌರ್ಜನ್ಯ ಎಂದು ಕೂಗಾಡಿಕೊಂಡರೂ ಬಹುತೇಕ ಸ್ತ್ರೀಯರು ಇಂತಹ ಹಿಡಿ ಪ್ರೀತಿಗಾಗೇ ಬದುಕುತ್ತಾರೆ. ಮತ್ತು ಬದುಕಿಂದ ಅವರಿಗೆ ಇನ್ನೇನೂ ಅಪೇಕ್ಷೆಗಳಿರುವುದಿಲ್ಲ.
      ಕವಲು ಪ್ರಕಟವಾದಾಗ  ಸ್ತ್ರೀಯರು ಅದನ್ನು ಸಾರಾಸಗಟಾಗಿ ವಿರೋಧಿಸಿದರು. ಇಲ್ಲ. ಕೆಲವರು ಅದರ ಸತ್ಯವನ್ನೂ ಒಪ್ಪಿಕೊಂಡವರಿದ್ದಾರೆ. ಏನೇ ಓದಲಿ, ಮಾತಾಡಲಿ, ನಮ್ಮ ಸಮಾಜ ಆಗುವ ಹಾಗೇ ಆಗುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಅನ್ಯಾಯಕ್ಕೊಳಗಾದ ಪುರುಷಪ್ರಪಂಚವೂ ಇದೆ. ದೌರ್ಜನ್ಯಕ್ಕೊಳಗಾದ ಸ್ತ್ರೀ ಪ್ರಪಂಚವೂ ಇದೆ. ದಲಿತರೊಂದೇ ಅಲ್ಲ ಬ್ರಾಹ್ಮಣರೂ ಇಂದು ಬೇಕಾದಷ್ಟು ಅನ್ಯಾಯಕ್ಕೊಳಗುತ್ತಿದ್ದಾರೆ. ಎಲ್ಲ ಕಡೆ ಎಲ್ಲವೂ ಇದೆ. ಆದರೆ ನಮ್ಮ ಹೋರಾಟ ಮಾತ್ರ
ಏಕಮುಖ ನ್ಯಾಯವಾಗಿಲ್ಲ. ಅದು ಅನ್ಯಾಯದ ವಿರುದ್ಧ ಅಂತಿಲ್ಲ. ಅದು ಇಸಂಗಳ ಆಧಾರದ ಮೇಲೆ ನಿಂತಿದೆ. ಮಾನವತೆಯನ್ನು ಪ್ರೀತಿಸುವ ಮಾತು ನಾವು ಆಡುವುದಿಲ್ಲ
ಕೇವಲ ಮಾತು ಬಲ್ಲವರಂತೆ ಆಡುತ್ತೇವೆ.ಇದಕ್ಕೆಂದೇ ಸ್ತ್ರೀ ಪರ ಚಿಂತನೆಗಳಿಗೆ ಇವತ್ತು ಯಾವ ಬೆಲೆಯೂ ದೊರೆಯುತ್ತಿಲ್ಲ. ಯಾಕೆಂದರೆ ನಿಜವಾದ ಚಿಂತನೆ ದಾರಿ ತಪ್ಪಿದೆ.



        ನಿನ್ನಿಂದ ಆರಂಭವಾಗಿ ನಿನ್ನಲ್ಲಿಗೇ ಮುಗಿದುಹೋಗುವ ದಿನ ಬದಲಾಗಿದೆ ಇಂದು. ಸ್ತ್ರೀ ಭಾವನೆಗಳು ಈಗ ವಿಚಾರವಾಗಿ ಬದಲಾಗಿವೆ. ಬದುಕು ವಿಸ್ತಾರವಾಗಿದೆ. ನಾವು ಪ್ರಜ್ಞಾವಂತರಾಗಿದ್ದೇವೆ. ಆದರೆ ಭಾವಗಳ ಲೋಕವಿನ್ನೂ ಹಾಗೇ ಇದೆ. ಪುರುಷ ಸ್ತ್ರೀಗಾಗಿ ಸ್ತ್ರೀ ಪುರುಷನಿಗಾಗಿ ಬದುಕುವ ನಿಯಮಗಳು ನಿಯತಿಯಂತಿವೆ. ಆದರೂ  ಸಮಾಜದ ಬೇರೆ ಬೇರೆ ಹಂತಗಳಲ್ಲಿ ನಾವು ಸ್ತ್ರೀ ಯನ್ನು ಹೀಗೇ ನೋಡಬಹುದಾಗಿದೆ.
     ಶ್ರೀಮಂತರ ಮನೆಯ ಸುಸಂಸ್ಕೃತ ಗೃಹಿಣಿಯರು ಹೊರಗೆ ದುಡಿಯುವುದಕ್ಕಿಂತ ಖಚರ್ು ಮಾಡುವುದನ್ನು ರೂಢಿಸಿಕೊಳ್ಳುತ್ತಾರೆ. ಅವರಿಗೆ ಬದುಕು ಎಷ್ಟೇ ಶ್ರೀಮಂತಿಕೆ ಕೊಟ್ಟಿರಲಿ ಅವರೂ ತನ್ನ ಮನೆಯ ಗಂಡನ ಜೊತೆ ಒಂದಿಷ್ಟು ನೆಮ್ಮದಿಯ ಬದುಕು ಬಯಸುತ್ತಾರೆ. ಕೊನೆಯ ಇಚ್ಚೆ ಪತಿಯ ಪ್ರೇಮವೇ.ಒಂದು ಹಿತ ಸಂಸಾರವೇ. ಇನ್ನು ಮಧ್ಯ ವರ್ಗದ ಸ್ತ್ರೀ ತನ್ನ ಬದುಕಿನ ಹೋರಾಟಕ್ಕಾಗಿ ಗಂಡನಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಕ್ಕಾಗಿ ಹೋರಾಡುತ್ತಾಳೆ. ಹೊರಗೂ ಒಳಗೂ ದುಡಿಯುತ್ತಾಳೆ. ಮಕ್ಕಳಿಗೋಸ್ಕರ ಕನಸು ಕಟ್ಟುತ್ತಾಳೆ. ತನಗಿಂತ ಹೆಚ್ಚು ಹಣಕ್ಕೇ ಪ್ರಾಮುಖ್ಯತೆ ಕೊಟ್ಟುಕೊಳ್ಳುತ್ತ ತನ್ನ ಸಂಸಾರ ತನ್ನ ಬದುಕಿಗೋಸ್ಕರ ಇರುವ ಬಂಧು ಬಾಂಧವರನ್ನು ಸಹ ವಿರೋಧಿಸಿ ತನ್ನ ಮನೆಗಾಗಿ ಬದುಕುತ್ತಾಳೆ. ಅವಳಿಗೆ ಬದುಕು ನಿತ್ಯ ಹೋರಾಟ. ಇನ್ನು ಬಡವರು.. ಇನ್ನೂ ಅವಿದ್ಯಾವಂತರು, ಕುಡುಕರು ಕೂಲಿಗಳಿಂದ ತುಂಬಿದ ನಮ್ಮವರು ಅಲ್ಲಿನ ಸ್ತ್ರೀಯರ ಪರಿಸ್ತಿತಿ ನೋಡಿದರೆ ಭಯವಾಗುತ್ತದೆ. ಕಲಿತ ಮಹಿಳೆಯರ ಕುರಿತು ಬರೆದ ಬೈರಪ್ಪನವರು ಒಮ್ಮೆ ಈ ಕೂಲಿ ಮಹಿಳೆಯರ ಬದುಕಿನ ಮಜಲುಗಳನ್ನು ಬಿಚ್ಚಿಟ್ಟರೆ ದೌರ್ಜನ್ಯದ ಅರ್ಥ ಇನ್ನಷ್ಟು ಜನರಿಗೆ ಇನ್ನೂ ಹೆಚ್ಚಾಗಿ ಆದೀತು. ಹಗಲಿಡೀ ದುಡಿತ , ರಾತ್ರಿ ಗಂಡನ ಬಡಿತ, ಮೇಲಿಂದ ಸಂಸಾರದ ಹೊರೆ ಹೊರೆ ಭಾರ ಇವನ್ನೆಲ್ಲ ಸಾಗಿಸುವ ಮಹಿಳೆಯರು ನೈತಿಕತೆಯ ಕುರಿತು ಯೋಚನೆ ಮಾಡಲು ಅವರ ಬದುಕಿಗೆ ಬಿಡುವೇ ಇಲ್ಲ. ಅವರು ಬದುಕಿನ ಸುಖವನ್ನು ಕಂಡಲ್ಲಿ ಸಿಕ್ಕಂಗೆ ಸುರಿದುಕೊಳ್ಳಬೇಕೇ ವಿನಃ ನಮ್ಮಂತೆ ಕೂತು ಮಾತನಾಡಲು ಅವರಿಗೆ ಬದುಕು ಅವಕಾಶ ಕೊಟ್ಟಿಲ್ಲ. ಆದರೂ ಅವರು ಬದುಕುತ್ತಾರೆ.
ಮತ್ತು ಬದುಕನ್ನ ಪ್ರೀತಿಸುತ್ತಾರೆ. ಯಾರಿಗಾಗಿ ಗೊತ್ತಾ? ತನ್ನ ಗಂಡ ಮನೆ ಮಕ್ಕಳಿಗಾಗಿ. ಸ್ವಾಥರ್ಿಗಳಾಗಿ ತನ್ನ ಸ್ವಾರ್ಥಕ್ಕೆ ಕಾನೂನು ಬಳಸಿಕೊಳ್ಳುವ ಮತ್ತು ಪಬ್ ಬಾರ್ ಸಂಸ್ಕೃತಿಗಳಿಗೆ ಮಾರುಹೋದ ಸಾವಿರಾರು ಹುಡುಗಿಯರು ನಮ್ಮಲ್ಲಿರಬಹುದು. ಆದರೆ ಹೀಗೇ ತನ್ನೆಲ್ಲ ಸಂಕಟಗಳನ್ನ ಮೌನವಾಗಿ ಅನುಭವಿಸುತ್ತ ತನ್ನ ಬದುಕನ್ನೇ ಮನೆ ಗಂಡ ಮಕ್ಕಳಿಗಾಗಿ ಸವೆಸುತ್ತಿರುವ ಕೋಟ್ಯಾಂತರ ಹೆಣ್ಣುಮಕ್ಕಳ ತವರು ಈ ಭಾರತೀಯ ನೆಲ. ಅವರ ಸಹನೆಗೆ, ಆ ಬದುಕಿನ ಗಟ್ಟಿತನಕ್ಕೆ ಅವರ ಶ್ರಮತೆಗೆ ನಾನು ಹ್ಯಾಟ್ಸಪ್ ಹೇಳಬಯಸುತ್ತೇನೆ.

       ವಿದ್ಯಾವಂತರೆನಿಸಿಕೊಂಡು ಕಾಲೇಜಿನಲ್ಲಿ ಲೆಕ್ಚರ್ ಬೈದನೆಂದು, ಯಾರೋ ಲವರ್ ಕೈಕೊಟ್ಟನೆಂದು ಯಾವುದೋ ಬಸ್ಸಲ್ಲಿ ಯಾರೋ ಚುಡಾಯಿಸಿದರೆಂದು,
ಪ್ರೀತಿ ಮಾಡ್ತೀವಿ ಅಂತ ಹೆತ್ತ ತಂದೆ ತಾಯಿಯರನ್ನೂ ಬಂಧು ಬಾಂಧವರನ್ನು  ದೂರ ಮಾಡುವವರನ್ನು ಚಿಕ್ಕ ಪುಟ್ಟದ್ದಕ್ಕೆ ಮನಸು ಕೆಟ್ಟೋಯ್ತು ಅಂತ ಅಳುತ್ತ ಕೂರುವ ಇವತ್ತಿನ ವಿದ್ಯಾವಂತ ನಾಗರಿಕರಿಗೆ ಇದೆಯಾ ನಮ್ಮ ನಾಡಿನ ಮನೆ ಮನೆಗಳಲ್ಲಿ ತಮ್ಮವರಿಗೋಸ್ಕರ ಬದುಕುತ್ತಿರುವ ಆ ಸ್ತ್ರೀಯರ ಸಹನೆ?
ಅತೀ ಸೂಕ್ಷ್ಮತೆಯನ್ನು ಪಡೆದುಕೊಳ್ತಿರೋ ಇವತ್ತಿನ ಜನಾಂಗಕ್ಕೆ ಆ ಸೂಕ್ಮತೆಗೆ ಬೇಕಾದ ಸ್ಥೈರ್ಯ, ಅದನ್ನು ಎದುರಿಸುವ ಜಾಣ್ಮೆ, ಅದರ ಹಿಂದಿನ ವಾಸ್ತವ ಯಾವುದಾದರೂ ಅರಿವಿದೆಯಾ? ನಮ್ಮಲ್ಲಿ ದಿನ ದಿನ ಆತ್ಮಹತ್ಯೆಗಳು, ಡೈವೋರ್ಸಗಳು ಹೆಚ್ಚುತ್ತಿವೆ. ಮನಸಿಗೆ ಬಂದಂತೆ ಬದುಕುವ ಸ್ವಾತಂತ್ರ್ಯ ತಂದುಕೊಟ್ಟ ಅನಾಹುತವಿದು. ನಿನಗಾಗಿ ಬದುಕಲು ಬಾರದ ದುರಂತವಿದು. ಎಲ್ಲವೂ ತನಗಾಗಿ, ತನ್ನ ಸ್ವಾರ್ಥಕ್ಕಾಗಿ.... ಒಂದಿಷ್ಟೂ ಸಹನೆಯಿರದ ನಮ್ಮದೇ ಬದುಕಿನ ದುರಂತವಿದು.



    ಟೀವಿ ಸೀರಿಯಲ್ಗಳನ್ನು ಹಿಗ್ಗಾ ಮುಗ್ಗಾ ಬೈಯುವ ಜನರನ್ನು ಇವತ್ತು ನಾವು  ನೋಡ್ತಿದ್ದೇವೆ. ಯಾಕೆಂದರೆ ಸೀರಿಯಲ್ಗಳು ಅಷ್ಟು ಕೆಟ್ಟದಾಗಿವೆ ಅಂತ. ಆದರೆ
ಸಮಾಜದ ಸ್ಥಿತಿ ಕೂಡ ಅದಕ್ಕಿಂತ ಸುಧಾರಿಸಿಲ್ಲ. ಮನೆ ಮನೆಯ ರಾಮಾಯಣವೇ ಅಲ್ಲಿ ತೋರ್ತಿದೆ. ಮತ್ತೂ ಒಂದು ವಿಚಾರ ಗಮನಿಸಬೇಕು. ಟೀವಿ ಸ್ತ್ರೀಯರ ಬದುಕಿನ ಅವಿಭಾಜ್ಯ ಅಂಗ ಆಗ್ತಿದೆ. ಮುದುಕರು, ಮಹಿಳೆಯರು ಕೆಲಸವಿಲ್ಲದ ಎಲ್ಲರೂ ಟೀವಿಯ ವೀಕ್ಷಕರಾಗುತ್ತಿದ್ದಾರೆ. ಅಷ್ಟೇ ಆದರೆ ಪರ್ವಾಗಿಲ್ಲವಾಗಲೀ ಇದ್ದ ಕೆಲಸ ಬಿಟ್ಟು ಟೀವಿ ನೋಡುವ ಹಂತಕ್ಕೆ ತಲುಪ್ತಾ ಇರೋದು ದುರಂತ. ಇದಕ್ಕೆಂದೇ ಹಿರಿಯರು ಹೇಳಿದ್ದೇನೋ ಅತಿಯಾದರೆ ಅಮೃತವೂ ವಿಷವೇ ಅಂತ.



             ಒಂದು ಕಾಲಕ್ಕೆ ಬದುಕಿನ ಸಹನೆಯನ್ನು ಹೇಳಿಕೊಡುತ್ತಿದ್ದ ನಮ್ಮ ತಾಯಂದಿರು  ಈಗ ಅಸಹನೆಯನ್ನೇ ಹೇಳಿಕೊಡುತ್ತಿದ್ದಾರೆ! ಪ್ರೀತಿ ಒಂದು ಕನವರಿಕೆ ಆಗಿದೆ. ಪ್ರೀತಿ ಎಂಬ ಒಂದು ಪದಕ್ಕೋಸ್ಕರವೇ ಜನನ, ಮರಣಗಳಾಗುತ್ತಿವೆ. ಪ್ರೀತಿಗಾಗಿ ಏನೆಲ್ಲ ಮಾಡಲು ಹಿಂಜರಿಯುವುದಿಲ್ಲ. ಪ್ರೀತಿ ಎಂಬ ಭಾವುಕತೆಗಾಗಿ
ಮನಸು, ದೇಹ, ಬದುಕು ಯಾವುದನ್ನೂ ವಿಚಾರಿಸದೇ ನಡೆಯುತ್ತಾರೆ. ನಿಜಕ್ಕೂ ಅದು ಪ್ರೀತಿಯಾ!!??. ಪ್ರೀತಿಯ ಹೆಸರಿನ ಮೋಸಗಳಿಗೆ ಬಲಿಯಾಗುತ್ತಾರೆ.
ಭಾವಗಳ ನಾವೆಯ ಜೊತೆ ಆಡುವವರ ಕುತಂತ್ರಗಳಿಗೆ ಬಲಿಯಾಗುತ್ತಾರೆ. ಅರ್ಥ ಆಗುವವರೆಗೆ ಕಾಲ ಮೀರಿ ಹೋಗಿರುತ್ತದೆ. ಇದರಲ್ಲಿ ಹೆಣ್ಣು ಗಂಡು ಬೇಧವಿಲ್ಲ. ಯಾರೂ ಇಂತಹ ಮೋಸಗಳಿಗೆ ಒಳಗಾದವರಿರಬಹುದು.  ಇದು ಪ್ರತಿಯೊಬ್ಬರೂ ಇರುವ ಇಂದಿನ ಸಮಾಜ. ನಾವಿದರ ರೂವಾರಿಗಳು. ಮತ್ತಿಲ್ಲಿ ನಾವೇ ಅನುಭವಿಸುವವರು.

          ಪ್ರೀತಿಯನ್ನ ನಿವರ್ಾಜ್ಯ ಮನಸಿಂದ ಹಂಚಬಲ್ಲ ಪಾಲಕರು, ಸಮಾಜದ ಕಟ್ಟುಪಾಡುಗಳನ್ನ ಅಥರ್ೈಸಿಕೊಳ್ಳುತ್ತ ಅದನ್ನ ಕಾಲಕಾಲಕ್ಕೆ ಗೌರವಿಸುತ್ತ, ಸಮಾಜದ ಹಿತರಕ್ಷಣೆಗೆ ಬೇಕಾದ ಹಾಗೆ ನಮ್ಮ ಮಕ್ಕಳನ್ನು ನಾವು ಬೆಳೆಸಿದರೆ ಸಾಕು. ಒಂದು ಸಂಸ್ಕೃತಿ ಉಳಿಯುತ್ತದೆ. ನಾವು ಉಳಿಯುತ್ತೇವೆ.ಸ್ತ್ರೀ ಪರ ಹೋರಾಟಮಾಡುವ  ಯಾರೇ ಇರಲಿ ಸ್ತ್ರೀಯರ ಸ್ವಾವಲಂಭಿ ಬದುಕಿನ ದಾರಿ ತೋರಿಸಬೇಕಾದ ಅಗತ್ಯವಿದೆಯೇ ವಿನಃ ಭಾಷಣಗಳಲ್ಲ. ಆ ನಿಟ್ಟಿನಲ್ಲಿ ಉಲ್ಲೇಕಿಸಬಹುದಾದ ಹೆಸರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯದು. ಅದು ಮಾಡ್ತಿರೋ ಕೆಲಸಗಳು ನಿಜಕ್ಕೂ ಸ್ತ್ರೀಯ ರ ಮನೆ ಮನೆ ತಲುಪಿವೆ. ಮತ್ತವರ ಕಷ್ಟ ಸುಖಗಳಿಗೆ ಸ್ಪಂದಿಸಿವೆ. ಆ ಜನರ ಅನುಭವಗಳ ಕೇಳಿದರೆ ಈ ನಾಡಿನ ಸ್ತ್ರೀಯರ ಕುರಿತು ತುಂಬಾ ಮಾಹಿತಿ ದೊರೆಯುತ್ತದೆ.


         ಈ ಎಲ್ಲ ಮಾತುಗಳ ಹೇಳಿದ ಕಾರಣವಿಷ್ಟೇ. ನೋವು ನಲಿವು ಎಲ್ಲ ಕಡೆ ಇದೆ. ಅಥರ್ೈಸಿಕೊಳ್ಳುವ ಸಹನೆ ತಾಳ್ಮೆ ಎಲ್ಲರಿಗೂ ಬೇಕು. ಬಲವಿದ್ದಲ್ಲಿ ದೌರ್ಜನ್ಯವಿದ್ದೇ ಇದೆ. ಹಣ, ಅಧಿಕಾರ ಅಂತಸ್ತು  ಇದ್ದು ಮದ ಇದ್ದಲ್ಲಿ ಜಾತಿ ಮತ ಬೇಧವಿಲ್ಲದೆ ದೌರ್ಜನ್ಯ ಹುಟ್ಟಿಕೊಳ್ಳುತ್ತದೆ. ಮಾನವೀಯತೆ ಮಾತ್ರ ನಮ್ಮನ್ನೆಲ್ಲ ಪ್ರೀತಿಯಿಂದ ಇಡುವ ಮಂತ್ರ. ಮನುಷ್ಯರನ್ನ ಮನುಷ್ಯರಂತೆ ಪ್ರೀತಿಯಿಂದ ನೋಡುವ ಕಾಲ ಸಾಕು.
    ಸ್ನೇಹಿತರೇ  ಹೇಳ್ತಾನೇ ಹೋದ್ರೆ ಮುಗಿಯದು. ಸಾಕಿಷ್ಟು ಇವತ್ತಿಗೆ. ಮತ್ತೊಮ್ಮೆ  ನನ್ನ ವಿಚಾರಗಳೊಂದಿಗೆ ಬರುವವರೆಗೆ ನಿಮ್ಮ ಅಭಿಪ್ರಾಯ ತಿಳಿಸ್ತೀರಲ್ಲ.
ವಂದನೆಗಳು.


           
         
      

4 comments:

  1. ಉತ್ತಮ ವಿಚಾರಗಳಿ೦ದ ಕೂಡಿದ ಬರಹ.
    ಬಗ್ಗುವವರಿರುವ ವರೆಗೆ ಗುದ್ದು ಹೇರುವವರು ಇದ್ದೇ ಇರುತ್ತಾರೆ.ಹೆಣ್ಣು ಸಹನೆಯ ಪ್ರತೀಕ ಖ೦ಡಿತ. ಅದು ಸ್ತ್ರೀಯರ ಧನಾತ್ಮಕ ಅ೦ಶವಾಗಿದ್ದರೂ ಹೆಚ್ಚಿನ ಪರಿಸ್ಥಿತಿಯಲ್ಲಿ ಅದು ದುರ್ಬಳಕೆಯಾಗುತ್ತಿದೆ. ಪ್ರತಿಯೊಬ್ಬರೂ ಯಾವುದೇ ವಿಚಾರಗಳಿಗೆ ಬ್ರಾ೦ಡ್ ಆಗದೆ ವಿವೇಕದಿ೦ದ ವರ್ತಿಸಬೇಕಾಗಿದೆ. ಗುದ್ದಿಸಿ ಕೊಳ್ಳುವವರೂ ಒಮ್ಮೆ ಸಾಕಾಗಿ ಎದ್ದು ನಿಲ್ಲುವುದು ಅನಿವಾರ್ಯ. ಆಗ ಅನೇಕ ವ್ಯತ್ಯಯಗಳು ಉ೦ಟಾಗುತ್ತವೆ. ಅದರ ಪರಿಣಾಮ ಈಗಾಗಲೇ ಅಲ್ಲಲ್ಲಿ ವಿಪರೀತವಾಗುತ್ತಿರುವುದು ನೋಡುತ್ತಿದ್ದೇವೆ.
    ಮಗು ಗ೦ಡೇ ಇರಲಿ ಹೆಣ್ಣೇಇರಲಿ ವಿವೇಕವ೦ತರನ್ನಾಗಿ ಬೆಳೆಸುವ ಕೆಲಸ ನಮ್ಮಿ೦ದಾಗಬೇಕಾಗಿದೆ.

    ವ೦ದನೆಗಳು.

    ReplyDelete
  2. ನಿಜ. ಬದಲಾವಣೆಯ ಸಂಕ್ರಮಣ ಕಾಲವಿದು. ಒಂದಿಷ್ಟು ಏಳುಬೀಳುಗಳು ಎದುರಿಸುವುದು ಅನಿವಾರ್ಯ. ಧನ್ಯವಾದಗಳು ಚುಕ್ಕಿ ಯವರೇ.

    ReplyDelete
  3. ನಿಜಕ್ಕೂ ಉತ್ತಮ ವಿಚಾರವನ್ನು ಅವಲೋಕನ ಮಾಡಿದ್ದೀರಿ. ಎಲ್ಲರೂ ಇದನ್ನು ಗಂಭೀರವಾಗಿ ಯೋಚಿಸಬೇಕಾದ ವಿಚಾರವಿದು. ಹೆಣ್ಣುಮಕ್ಕಳು ಕೂಡ ಈ ನಿಟ್ಟಿನಲ್ಲಿ ಕೊಂಚ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕೆನ್ನಿಸುತ್ತದೆ. ಉತ್ತಮ ಬರಹಕ್ಕಾಗಿ ಅಭಿನಂದನೆಗಳು.

    ReplyDelete
  4. ಧನ್ಯವಾದಗಳು ಶಿವು ಕೆ. ಅವರೇ.. ಸ್ವಲ್ಪ ತಡವಾಗಿ ಹೆಳ್ತಾ ಇರೊದೆಕ್ಕೆ ಕ್ಷಮೆಯಿರಲಿ... ಆಗಾಗ ಬರ್ತಾ ಇರಲಿ ತಮ್ಮ ಅಮೂಲ್ಯ ಅಭಿಪ್ರಾಯಗಳು..

    ReplyDelete