.
ಕವಿತೆಗಳು ಎಲ್ಲೆಲ್ಲೂ ಕುಣಿದಾಡುವಾಗ ಮನಸು ಕಥೆ ಬರೆಯೋಕೆ ಹೊರಟಿದೆ. ಕಥೆಯೆಂದರೆ ಅದು ಕಥೆಯಲ್ಲ. ಕಾವ್ಯವೆಂದರೆ ಕಾವುವೂ ಅಲ್ಲ.
ಸುಮ್ಮನೇ ಬರೆದುಕೊಂಡ ಸಾಲು ಸಾಲು ಭಾವಗಳು. ಯಾಕೋ ಇತ್ತೀಚೆಗೆ ಬರೆಯೋದು ಓದೋದು ಎಷ್ಟು ಆಪ್ತವೋ ಅದಕ್ಕಿಂತ ಬದುಕು ಹೆಚ್ಚು ಆಪ್ತ ಎನಿಸುತ್ತದೆ.
ನೀವೂ ಯೋಚನೆಮಾಡಿ. ನಿಮ್ಮ ಬದುಕನ್ನ ನಿಮ್ಮದೇ ಶೈಲಿಯಲ್ಲಿ ಬದುಕುತ್ತಿದ್ದರೆ ಅದೂ ತುಂಬಾ ಆಪ್ತವಾಗಿರುತ್ತದೆ. ಯಾರೂ ಇಲ್ಲದ ನಮ್ಮದೇ ಪ್ರಪಂಚ ಕಟ್ಟಿಕೊಳ್ಳುವ ಸುಖ ನಿಮಗೆ ಗೊತ್ತಾ? ಆಶ್ಚರ್ಯವಾ? ಸ್ವಲ್ಪ ಕಷ್ಟವಿರಬಹುದು. ಆದರೆ ಇದು ನಿಜಕ್ಕೂ ತುಂಬಾ ಸುಂದರವಾಗಿದೆ.
ಜೋಗಿಯಂತೆ ಬದುಕೋದು ಅಂದರೆ ಇದೇನಾ? ಹಾಂ. ಯಾರ ಬಗ್ಗೆಯೂ ಯೋಚಿಸದೇ ಯಾರ ಒಳಿತು ಕೆಡಕುಗಳ, ಸುಳ್ಳು ಸತ್ಯಗಳ ಹೊರೆಯಿಲ್ಲದೇ
ಯಾವ ಜವಾಬ್ಧಾರಿಯೆಂಬ ಮುಸುಕಿಲ್ಲದೇ ಎಲ್ಲವನೂ ಕಳೆದುಕೊಂಡು ಆ ಗಿರಿಧರನ ನಂಬಿ ಬದುಕೋದು ಮತ್ತು ಬದುಕಿನ ಎಲ್ಲ ಆಗು ಹೋಗುಗಳ ಅವನಿಗೆ ಬಿಟ್ಟು ಆತ್ಮದ ಅನುಸಂಧಾನಕ್ಕೆ ತೊಡಗಿಕೊಳ್ಳೋದು ಎಂದಾದರೂ ಸಾಧ್ಯವಾಗಬಲ್ಲದಾದರೆ ಅದು ಇಂತಹ ಧ್ಯಾನದ ದಿನಗಳಲ್ಲಿ. ತಪಸ್ಸಿಗೆ ಯಾವ ಬೆಟ್ಟ ಕಾಡುಗಳು, ಹಿಮಾಲಯಗಳೂ ಬೇಕಾಗಿಲ್ಲ. ಇದ್ದಕ್ಕಿದ್ದಲ್ಲೇ ಹಿಮವಾಗುವ ಮೌನ.. ಶಿಲೆಯಾಗುವ ಜೀವ, ಕರಗಿದರೆ ಶುದ್ಧ ಗಂಗೆ, ಗಟ್ಟಿಯಾದರೆ ಹಿಮಶಿಲೆ. ಇಂತಹ ಬದುಕಿನ ಸಾಕಾರ
ಸಾಧ್ಯವಾದರೆ ಬದುಕು ಸಾರ್ಥಕ ಅಲ್ಲವಾ?
ನಾನು ಭೌತಿಕ ಬದುಕಿನ ತೊರೆಯುವಿಕೆಯನ್ನು ಮಾತಾಡುತ್ತಿದ್ದೇನೆ ಅಂದುಕೊಂಡಿರಾ? ಇಲ್ಲ. ಇದು ಬದುಕಿನೊಳಗಿನ ಸಂತೆ ಎಂಬ ಅರಿವಿನೊಂದಿಗೆ ಬರೆಯುತ್ತಿದ್ದೇನೆ. ಕರ್ಮಗಳಿಗೆಲ್ಲ ನಾವು ಹೊಣೆಯಾದರೆ ಧರ್ಮಗಳಿಗೂ ನಾವೇ ಹೊಣೆ. ಪ್ರೀತಿಯೆಂಬ ಭಾವದ ಬಂಧಕ್ಕೆ ಬೀಳುವ ನಾವೆಲ್ಲ ನಮ್ಮನ್ನು ಪ್ರೀತಿಸುವಷ್ಟು ಇನ್ಯಾರನ್ನೂ ಪ್ರೀತಿಸುವುದಿಲ್ಲ. ಹಾಗೇ ನಮ್ಮನ್ನ ನಾವು ನೋಯಿಸಿಕೊಳ್ಳುವಷ್ಟು ನಮ್ಮನ್ನು ಇನ್ಯಾರೂ ನೋಯಿಸೋದಿಲ್ಲ. ಒಂದಿನವಿತ್ತು. ನಂಬಿಕೆ ಸ್ನೇಹ ಪ್ರೀತಿ ಅಂದರೆ ಬದುಕು ಅನ್ನೋದು ನನ್ನ ಮನಸಲ್ಲೂ ತುಂಬ್ಕೊಂಡಿತ್ತು. ಈ ಬದುಕಿಗೆ ಅನಿವಾರ್ಯ ಈ ಪ್ರೀತಿ ಅಂತ ನಾನಂದುಕೊಂಡಿದ್ದೆ. ಇಲ್ಲ ನನ್ನೊಳಗಿನ ಭಗವದ್ಪ್ರೀತಿಯ ಹೊರತಾಗಿ ಯಾವ ಪ್ರೀತಿಯೂ ಬದುಕಿಗೆ ಅನಿವಾರ್ಯ ಅಲ್ಲ. ನನ್ನೊಳಗೆ ಅದಿರುವವರೆಗೆ ಮಾತ್ರ ನಾನಿರುತ್ತೇನೆ. ಯಾರಿರಲಿ ಇಲ್ಲದಿರಲಿ ಬದುಕು ಸಾಗುತ್ತದೆ. ಉದಾಹರಣೆಗೆ ಎಷ್ಟೋ ಕಾಲ ನಮ್ಮನ್ನ ಹೆತ್ತು ಹೊತ್ತು ಪ್ರೀತಿ ಪಾಲನೆ ಮಾಡಿದ ಹೆತ್ತವರೇ ಇರದಿದ್ದಾಗಲೂ ನಾವು ಕೆಲವು ದಿನಗಳ ವ್ಯಸ್ಥತೆಯ ಆಚೆಗೆ ಸಖಲ ಸುಖ ಬೋಗಗಳ ಜೊತೆ ಬದುಕುತ್ತೇವೆ. ಅಂದರೆ ನಮ್ಮ ಬದುಕಿನ ಆ ಭಾಗ ನನಗಿಂತ ಯಾವತ್ತೂ ದೊಡ್ಡದಾಗೋದಿಲ್ಲ. ಮತ್ತು ಶಾಶ್ವತ ನೋವಿಗೆ ಗುರಿಮಾಡೋದಿಲ್ಲ. ಅದೊಂದು ಬದುಕಿನ ಸತ್ಯ ಎಂಬುದ ಮನಸಿಗೆ ಒಪ್ಪಿಕೊಳ್ಳುತ್ತೇವೆ.
ಮತ್ತೊಂದಷ್ಟು ಮನಸಿಗನ್ನಿಸಿದ್ದನ್ನ ಹಂಚಿಕೊಳ್ಳುತ್ತೇನೆ.ನಿಮಗೆ ಇಷ್ಟವಾಗಬಹುದು, ಆಗದಿರಬಹುದು. ಇದು ಸಾರ್ವಕಾಲಿಕ ಸತ್ಯಗಳಲ್ಲ. ಇವತ್ತಿಗೆ ತೋರುವ ಮುಖಗಳಷ್ಟೇ. ಪ್ರೀತಿ ಮನುಷ್ಯನನ್ನಾಳುವ ಬಲ. ಅದಕ್ಕಿರೋ ಶಕ್ತಿ ಊಹಿಸಲಸಾಧ್ಯ. ಏನೆನೆಲ್ಲಾ ಮಾಡೋದು ಹಿಡಿ ಪ್ರೀತಿಗಾಗಿ, ಅದು ಅಪ್ಪ ಅಮ್ಮಂದಾಗಲಿ, ಅಣ್ಣ, ತಮ್ಮಂದಾಗಲೀ, ಅಕ್ಕ ತಂಗಿಯರದ್ದಾಗಲೀ, ಪತಿ ಪತ್ನಿಯರದ್ದರಿಲೀ, ಸ್ನೇಹ, ಪ್ರೇಮದ್ದಿರಲಿ. ಎಲ್ಲರಿಗೂ ಪ್ರೀತಿ ಬೇಕು. ಎಲ್ಲಾ ತರದ ಪ್ರೀತಿ ಬೇಕು. ಪ್ರೀತಿ ಇಲ್ಲಾಂದರೆ
ನೋವು ಸಹಜ. ನಾವು ಎಲ್ಲರನ್ನೂ ಎಲ್ಲ ಸಮಯದಲ್ಲೂ ಪ್ರೀತಿಸೋದಿಲ್ಲ. ಮತ್ತು ಪ್ರೀತಿಸದಿರೋದೂ ಇಲ್ಲ. ಇದೂ ಕೂಡ ಸತ್ಯ. ಎಂತದ್ದೇ ಪ್ರೀತಿ ಬದುಕಿನ ವಾಸ್ತವಕ್ಕೆ ಬಂದಾಗ ಬೆಲೆ ಕಳೆದುಕೊಳ್ಳುತ್ತೋ ಆ ಪ್ರೀತಿಗೆ ಯಾವ ಅರ್ಥವೂ ಇರೋದಿಲ್ಲ. ಪ್ರೀತಿ ಇದೆ ತುಂಬಾ... ಅಂದ ಮಾತ್ರಕ್ಕೆ ಕಟು ವಾಸ್ತವ ಬದುಕಿನಲ್ಲಿ ಕೈ ಬಿಡೋ ಪ್ರೀತಿಗಾಗಿ ನಿಜಕ್ಕೂ ಅರ್ಥವಿಲ್ಲದ್ದು. ಆದರೂ ನೋಯ್ತೇವೆ. ಯಾಕೆಂದರೆ ನಾವು ಪ್ರೀತಿಸಿರುತ್ತೇವೆ. ನಂಬಿರುತ್ತೇವೆ ಅಷ್ಟು.
ಇದಕ್ಕೊಂದು ಚಿಕ್ಕ ಕಥೆಯ ಉದಾಹರಣೆ ಹೇಳಬೇಕೆಂದರೆ, ಒಬ್ಬ ಅಜ್ಜ ಮೊಮ್ಮಗನ ತುಂಬಾ ಪ್ರೀತಿಸುತ್ತಿದ್ದ. ಅವನೇ ಸಾಕಿ ಸಲಹಿ ಉನ್ನತ ವಿದ್ಯಾಭ್ಯಾಸ ಪಡೆದು
ದೂರದ ಊರಲ್ಲಿ ನೌಕರಿ ಹಿಡಿದು ಅಜ್ಜನ ತುಂಬಾ ಖುಶಿಪಡಿಸಿದ. ಕಷ್ಟ ಪಟ್ಟ ಅಜ್ಜ ಮೊಮ್ಮಗನ ದೂರದ ದೇಶಕ್ಕೆ ಕಳಿಸಿ ಸಂಭ್ರಮಪಟ್ಟ. ಕೆಲವು ದಿನಗಳ ನಂತರ ಅಜ್ಜ ಕಾಯಿಲೆ ಬಿದ್ದ. ಮತ್ತು ಮೊಮ್ಮಗನಿಗೆ ಒಮ್ಮೆ ಬಂದು ನೋಡುವಂತೆ ಪತ್ರ ಬರೆದ. ಮೊಮ್ಮಗನಿಗೂ ಅಜ್ಜನೆಂದರೆ ಬಲು ಪ್ರೀತಿಯೇ.. ಆದರೆ ಅವನ ಒತ್ತಡಗಳಲ್ಲಿ ಅವನಿಗೆ ಬರಲು ಆಗಲಿಲ್ಲ. ಹಾಗೇ ಹೇಳುತ್ತಿದ್ದ ಕೂಡ. ಅಜ್ಜನೆಂದರೆ ನನಗೆ ಬಹಳ ಪ್ರೀತಿ ಅಂತಾ ಎಲ್ಲರ ಕಡೆ ಹೇಳ್ಕೊಂಡ. ಹೀಗೇ ಅಜ್ಜ, ಮೊಮ್ಮಗ ಇಬ್ಬರೂ ಪ್ರೀತಿ ಪ್ರೀತಿ ಅಂತ ಹೇಳಿಕೊಳ್ಳುತ್ತಲೇ ದಿನಕಳೆಯಿತು. ಕೊನೆಗೂ ಮೊಮ್ಮಗ ಬರುವ ಮುನ್ನವೇ ಅಜ್ಜ ಪ್ರಾಣ ಬಿಟ್ಟ. ನಂತರ ಬಂದ ಮೊಮ್ಮಗ ಅಜ್ಜನ ಚಿತೆಗೆ ಬೆಂಕಿಯಿಟ್ಟು
ನನಗೆ ಅವನೆಂದರೆ ಬಹಳ ಪ್ರೀತಿ ಇತ್ತು. ಅಜ್ಜನ ಆತ್ಮ ನೋಡ್ತಾ ಇದೆ ಅಜ್ಜ ಸತ್ತು ಹೋದರೂ ಅಂತ ಸಮಾಧಾನ ಮಾಡ್ಕೊಂಡ. ಆದರೆ ನಿಜಕ್ಕೂ ಬದುಕಿದ್ದಾಗ ಒಂದೇ ಒಂದು ಸಲ ಬಂದು ನೋಡದ ಅಜ್ಜನ ಮನಸ್ಸಿಗೆ ಒಳಗೊಳಗಾದ ನೋವಿಗೆ ಮೊಮ್ಮಗನಿಗೆ ಅರ್ಥ ಆಗುವುದೇ? ಅಜ್ಜ ಸತ್ತ ಮೇಲೆ ಲಕ್ಷಾಂತರ ರೂಪಾಯಿಕೊಟ್ಟು ದಾನ ಧರ್ಮ ಮಾಡಿದರೂ ಅಜ್ಜನ ಆತ್ಮಕ್ಕೆ ಸಮಾಧಾನ ಸಿಗಬಲ್ಲದೇ? ಸಾಯೋಕ್ಕಿಂತ ಮೊದ್ಲು ಅದನ್ನ ವ್ಯಕ್ತಪಡಿಸಿದ್ರೆ ಅಜ್ಜ ನೆಮ್ಮದಿಯಾಗಿ ಕಣ್ಮುಚ್ಚುತ್ತಿದ್ದ. ಅದು ಅವನ ಪ್ರೀತಿಯ ತೋರಿಸಬೇಕಾದ ರೀತಿಯಾಗಿತ್ತು. ಬದಲಾಗಿ ಸತ್ತು ಹೋದ ಮೇಲೆ ನಂಗೆ ಬಹಳ ಪ್ರೀತಿಯಿತ್ತು! ಅನ್ನೋ ಪ್ರೀತಿಗಳಲ್ಲಿ ಯಾವ ಅರ್ಥವಿದೆ ನೀವೇ ಹೇಳಿ. ಅದಕ್ಕೆಂದೇ ನನಗನ್ನಿಸಿದ್ದು ನನ್ನೊಳಗಿನ ಪ್ರೀತಿ ಮಾತ್ರ ನನ್ನದು. ಉಳೀದದ್ದೆಲ್ಲ ಕಟ್ಟಿಗೆ ಬಾರದ ಕೈಗೆ ನಿಲುಕದ ಪ್ರೀತಿ. ನಿನಗೆ ಪ್ರೀತಿಸೋ ಮನಸಿದ್ದರೆ ಪ್ರೀತಿಸು. ಅದನ್ನ ನಿಭಾಯಿಸೋ ತಾಕತ್ತಿದ್ದರೆ ಅದನ್ನ ವ್ಯಕ್ತಪಡಿಸು ಇಲ್ಲಂದ್ರೆ ಸುಮ್ಮನೇ ಉಳಿದುಬಿಡು. ಬೇರೆಯವರ ಪ್ರೀತಿನ ನಂಬಿ ಯಾವತ್ತೂ ನಿನ್ನ ಪ್ರೀತಿನ ನೋಯಿಸ್ಕೋಬೇಡ ಅಂತ ಮನಸು ಹೇಳಿದ್ದನ್ನೇ ಬರೆದೆ ಇಲ್ಲಿ.
ಹೇಳಿದಷ್ಟು ಸುಲಭವಾಗಿ ಬದುಕಲಾಗುವ ಸತ್ಯಗಳಲ್ಲ ಇವು. ಆದರೆ ಸಧ್ಯಕ್ಕೆ ಮಾನಸ ಸರೋವರ ಈ ಸತ್ಯದೆಡೆಗೆ ನೆಲೆಯಾಗುತ್ತಿದೆ. ಭೌತಿಕ ಒತ್ತಡಗಳ ಹೊರತಾಗಿ ಮನಸು ನೆಲೆನಿಂತ ಶಾಂತ ಸರೋವರದ ನೆಲೆಯಾಗುತ್ತಿದೆ. ನೋಡುತ್ತಿರೋ ಮನಸುಗಳಿಗೆಲ್ಲ ಇದೊಂದು ವೈಪರೀತ್ಯವಾ? ಅಥವಾ ಗಜಿಬಿಜಿ ಅಲೆಗಳ
ಕೊಳವಾ ಅನ್ನಿಸಬಹುದು. ಮೇಲೆ ನಿಂತಂತೆ ತೊರ್ತಾ ಇರೋ ಅಗ್ನಿ ಸರೋವರವಾ ಅನ್ನೋ ಪ್ರಶ್ನೆ ಕೂಡ ಏಳಬಹುದು. ಆದರೆ ಹೀಗೆ ಶಾಂತವಾಗುವ ಮುನ್ನ ಒಂದಿಷ್ಟು ಅಲೆಗಳು ಕುಣಿದಾಡಿ ನತರ್ಿಸಿ ದಣಿದು ವಿಶ್ರಮಿಸುವುದು ಮಾನಸ ಸರೋವರದ ಮೂಲಗುಣವೇ ಆಗಿದೆ. ಅಮನಸಿನ ನರ್ತನದಲೆಗಳ ಜೊತೆ ನೀವೂ ಹೆಜ್ಜೆ ಹಾಕಿ.
ಮತ್ತೆ ವಿಶ್ರಮಿಸಿ... ಶಾಂತ ಶಾಂತವಾಗಿ... ಆ ಶಿವಾಲಯವು ನೆಲೆಗೊಳ್ಳಲಿ ಅಂತರಂಗದ ಪರ್ವತಗಳಲಿ...
No comments:
Post a Comment