Sunday, February 27, 2011

ಕತ್ತಲೆಯೇ......



 ಕಡು ಕಪ್ಪು ಕತ್ತಲೆಯೇ
ಕ್ಷಣ ನಿಂತು ನೇವರಿಸು
ನನ್ನೆದೆಗೆ...
ತಂಪು ಸುರಿಸು..
ಹನಿ ಹನಿಯ ಮಳೆ ಸಾಕು
ಈ ಮನದ ತೇವಕ್ಕೆ..


ನಕ್ಷತ್ರಗಳು ನಗದ
ಈ ರಾತ್ರಿಯಂತದ್ದು
ಇನ್ನೊಂದು ಈಬದುಕು
ಮತ್ತೆ ಸುರುಳಿ ಸುತ್ತಿದ
ನಿಟ್ಟುಸಿರ ಬಿಗಿಯಲ್ಲಿ
ಅವಡುಗಚ್ಚಿದರೆ ಸೆರಗು ಒದ್ದೆ.


ಯಾರ್ಯಾರೋ ಬದುಕುವರು ಹೇಗೆ ಹೇಗೋ..
ನನಗ್ಯಾಕೆ ನೋವಿಲ್ಲಿ ನಿಟ್ಟುಸಿರು!
ಬೆತ್ತಲೆಯ ಬಯಕೆಯಿರದ
ಕತ್ತಲೆಗಳೇ ನನ್ನ ಅಣುಕಿಸುತ್ತೀರಾ
ನೀವು! ನನಗ್ಯಾಕೆ ಬಯಕೆಗಳು
ಸುಡಲಿಲ್ಲ ಎಂದು!


Tuesday, February 1, 2011

ಗೆಳೆಯಾ..


ನಾನೊಂದು ಪುಟ್ಟ ಚಿಗುರು,
ಮೊಗ್ಗು, ಅರಳಿ ನಿಂತ ಹೂ.
ನೀನೋ ಆಕಾಶದಲ್ಲಿ
ಸ್ವಪ್ರಭೆಯ ಬೀರುತಿರೋ ಭಾನು....


ನಿನ್ನ ಕಿರಣಗಳ ಸ್ಪರ್ಶ
ಸಾಕು ನನ್ನ ಜೀವಂತಿಕೆಗೆ
ನಿನ್ನ ಪ್ರೇಮದೊಂದು ನೋಟ
ನನ್ನ ಎದೆಯ ಪಲ್ಲವಕ್ಕೆ.

ಎದೆ ತುಂಬ ನೂರು ಮಾತು
ಏನ ಹೇಳಲಿ?
ಏನ ಬರೆಯಲಿ ಗೆಳೆಯಾ
ಯಾವುದು ಮೊದಲು ಮತ್ತು
ಯಾವುದು ಕೊನೆ?

ಎಲ್ಲೆಲ್ಲೋ ಸುಳಿದು ಮತ್ತೆ
ನನ್ನೊಳಗೆ ಹರಿವ ತೊರೆ
ಅದ್ಯಾವ ನೀರು!
ನನಗೂ ನಿನಗೂ ಗೊತ್ತು
ಅದರ ಹೆಸರು!