Sunday, May 27, 2012

ತೀರದಲ್ಲೊಂದು ಮನವಿ.........

 

ಬರೆಯಬೇಕೆನಿಸಿದರೂ ಬರೆಯಲಾಗದಷ್ಟು ದೂರ! ಹೇಳಬೇಕೆನಿಸಿದ್ದನ್ನು ಹೇಳಲಾಗದಷ್ಟು ದೂರ! ಅಳಬೇಕೆನಿಸಿದರೆ ಅಳಲಾಗದಷ್ಟು ದೂರ,!
 ನಗಬೇಕನಿಸಿದರೆ ನಗಲಾರದಷ್ಟು ದೂರ! ಮನಸಿನ ಭಾವಗಳಿಗೇ ದೂರ ನಿಂತು ಹತ್ತಿರ ಹತ್ತಿರ ಎಂಬುದಕ್ಕೆ ಅರ್ಥವೇ  ಉಳಿಯದಷ್ಟು ದೂರ ನಿಂತು
ಸಮಾಧಾನ ಸಂಬಂಧಗಳಿಗೆ ಅರ್ಥ ಹುಡುಕುವ ಈ ಪ್ರಯತ್ನಗಳೇ ಅತೀವ ಹಿಂಸೆ ಅಲ್ಲವ? ಮನಸ್ಯಾಕೆ ಹೀಗೆ! ಇಲ್ಲ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ.
ಹಾಗೇ ಇರುವುದನ್ನು ಒಪ್ಪಿಕೊಳ್ಳುವುದಿಲ್ಲ.ಇದ್ದುದೆಲ್ಲವ ಬಿಟ್ಟು ಇರದಿದ್ದುರೆಡೆಗೆ ತುಡಿವುದೇ ಜೀವನ ಎಂದು ದಾರ್ಶನಿಕರು ಹೇಳಿದ್ದು ಇದಕ್ಕಾಗೇ ಏನೋ..

         ನನ್ನ ಕೃಷ್ಣ ಭ್ರಮೆಗಳನ್ನು ತೊಲಗಿಸುವವ.! ಬೆಳಕಿನತ್ತ ನಡೆಸುವವ.!...... ಮೋಹದ ಪರದೆಯ ಹರಿದು ನಿವರ್ಿಕಾರ ಪ್ರಪಂಚಕ್ಕೆ
ನಡೆಸುವವ. ಅವನಿಗ್ಯಾಕೆ ಅಥರ್ೈಸುವ ಹುಚ್ಚು ನನಗೆ!   ಆದರೂ ಕೃಷ್ಣ ನನ್ನಂತೆ ಮನುಷ್ಯನಲ್ಲ! ಅವನಿಗೆ ಮನುಷ್ಯ ಬಯಕೆಗಳ ನಿರೀಕ್ಷೆಗಳ
ಕುರಿತು ಗೊತ್ತಿಲ್ಲ! ಅಹಂಕಾರದ ದಮನವಷ್ಟೇ ಗೊತ್ತು. ಅಹಂನ ಪೋಷಿಸಿಕೊಂಡ ಪ್ರೇಮದ ಕುರಿತು ಗೊತ್ತಿಲ್ಲ! ಏನಂತ ಬರಲಿ ನನ್ನ ನೋವು ನಲಿವುಗಳಿಗೆ
ಅರ್ಥವೇ ಇಲ್ಲದವನ ಬಳಿ!  ಹಾಂ ಪ್ರೇಮವಿದೆ ಆ ಕಂಗಳ ಕೊಳದಲ್ಲಿ! ಇಲ್ಲ ಅನ್ನುವುದಿಲ್ಲ.. ಆದರೆ  ಆ ಪ್ರೇಮ ನನ್ನ ತಲುಪುವದಕ್ಕೆಂದೇ ಅಲ್ಲ! ಅಂದರೆ
ನನ್ನದಲ್ಲ! ನನ್ನ ತಲುಪುವ ಪ್ರೇಮವೆಂದರೆ ಅದು ನನ್ನ ನೋವು ನಲಿವುಗಳ ನನ್ನ ಕೋಪ ಅಸಹನೆಗಳ ಜೊತೆ ತುಂಬ ಸಹಜವಾದ ಸಂವಹನ ಬಯಸುವಂತದ್ದು!
ನಾ ಇದ್ದ ಹಾಗೆ ನನ್ನ ಸ್ವೀಕರಿಸಬೇಕಾದದ್ದು! ಅವನ ಕುರಿತಾಗಿ ನಾ ಇಟ್ಟಂತದ್ದೇ ಒಂದು ಆದರದ ನಂಬಿಕೆಯ ಎಳೆಯನ್ನು ಹಿಡಿದುಕೊಂಡಾದರೂ ಒಂದಿಷ್ಟು
ಮಾನವಸಹಜ ಸಂವಹನದ ಜೊತೆಯಿರಬೇಕಾದದ್ದು! ನಾ ಅತ್ತರೆ ಅಂಜಲಿಯಾಗಬೇಕಾದಂತದ್ದು! ನಾ ನಕ್ಕರೆ ಸಿಹಿಯಾಗಬೇಕಾದಂತದ್ದು!
ನನ್ನ ಸಂಭ್ರಮವಾಗಲಿ ದುಃಖವಾಗಲಿ ಹೇಗೆ ಹಂಚಿಕೊಳ್ಳಬೇಕೆಂಬುದನ್ನು ನಾನೇ ಹೇಳಿಕೊಡಬೇಕೆಂದರೆ ಅವನ ಬಳಿ ನಾನು ಹೇಗೆ ಹೋಗಲು ಸಾಧ್ಯ? ಆ ಕೃಷ್ಣ
ಎಲ್ಲವನ್ನು ಬಲ್ಲವನಂತೆ! ನನಗೇನೋ ಬಲ್ಲವನನ್ನಿಸುವುದಿಲ್ಲ! ನನ್ನಂತ ಭಾವುಕ ಮನಸುಗಳನ್ನಿಟ್ಟು ಆಟವಾಡುವ ಪುಟ್ಟ ಮಗುವಿನಂತೆ ತೋರುತ್ತಾನೆ!
ಹೇಳಬೇಕೆಂದರೆ ನನ್ನಂತ ಅಮ್ಮನ ವಾತ್ಸಲ್ಯವೂ ಅವನಿಗೆ ಅರ್ಥವಾಗುವುದಿಲ್ಲ!  ಹಾಗಿದ್ದಮೇಲೆ ನನಗಲ್ಲಿ ಜಾಗ ಎಲ್ಲಿ?

                ಅವನಬಳಿಯೂ ನಿನ್ನ ಅಹಂ ಏನೇ? ಅನ್ನಬೇಡ ಮನವೇ? ಈ ಕೃಷ್ಣನಿಗೆ ಅರ್ಥವಾಗದ ನಾನು ನನ್ನ ಅಥರ್ೈಸಲೆಂದೇ ಹೋಗಲಾರೆ ಅವನಬಳಿ..
ಅವನೋ ಜಗದ್ಪಾಲಕ! ನಾನೋ ಮನುಷ್ಯಮಾತ್ರಳು! ನನ್ನ ಮನುಷ್ಯಬುದ್ದಿ ಬಿಡುವುದಾದರೂ ಹೇಗೆ? ನನಗೆ ನನ್ನ ಸುತ್ತ ಕಾಲುಸುತ್ತುವ ಮನುಷ್ಯಜೀವಗಳ ಮೋಹ!ನನ್ನ
ಸೆರಗಿನಂಚಿಗೆ ಜೋತುಕೊಳ್ಳುವ, ನನ್ನ ಕಿರುಬೆರಳ ತುದಿಯಲ್ಲಿ ಅಂಗೈಹಿಡಿದಿರುವ, ಅಷ್ಟೇ ಅಲ್ಲ ನನಗೆ ನೋವಾದರೆ ತಾನು ಹಾ! ಎನ್ನುವ, ನನಗೆ ಕುಶಿಯಾದರೆ
ತಾನು ನೆಲಬಿಟ್ಟು ಕುಣಿಯುವ, ತನ್ನ ವಿಜಯಗಳ ಜೊತೆ ಗಂಭೀರ ನಗೆ ಚೆಲ್ಲುವ, ತುಟಿಯಂಚ ಕೊನೆಯಲ್ಲಿ ಸದಾ ನನ್ನ ಕರೆಯಬಲ್ಲ ಮನುಷ್ಯ ಜೀವಗಳ ಮೋಹ ನನಗೆ!
ಹೇಗೆ ತೊರೆಯಲಿ ಆ ಜಗದ್ಫಾಲಕನ ಮೌನದಲ್ಲಿ ಮನುಷ್ಯಜೀವಗಳ ಈ ಮೋಹವ! ನಾನೇ ಮೌನವಾದರೆ ನನ್ನ ಮೌನಕ್ಕೂ ಅರ್ಥ ಕಾಣದವನಬಳಿ ಏನಂತ ಅರುಹಲಿ ನನ್ನ ಪ್ರೇಮವ?
ಇದು ಮಾತಿಗೂ ಮೌನಕ್ಕೂ ನಿಲುಕದ್ದು! ಆಕಾರಕ್ಕೂ ನಿರಾಕಾರಕ್ಕೂ ನಡುವಿನದ್ದು! ಅವನಿಲ್ಲದೇ ನಾನಿಲ್ಲ! ನಾನವನಿಗೆ ಏನೂ ಅಲ್ಲ. ಈ ವಿಶಾಲ ಸೃಷ್ಟಿಯಲ್ಲಿ
ಅಣುಮಾತ್ರದ ನಾನು! ಮತ್ತು ಪ್ರಪಂಚವೇ ಅವನು!
              ಯಾಕೋ ಒಮ್ಮೆ ಒದರಿಬಿಡಬೇಕನ್ನಿಸುತ್ತದೆ!   ಸದಾ ನಗುತ್ತಿರು, ನನ್ನನ್ನೇ "ಆನಂದಿಯಾಗಿರು" ಅಂತ ಬಯಸುವ ನಿನಗೆ ನನ್ನ ಆನಂದದ ಮೂಲವೇ
ಗೊತ್ತಿಲ್ಲ! ನನ್ನ ಆನಂದಿಯಾಗಿಸಬಲ್ಲ ಯಾವುದೂ ನಿನ್ನಲ್ಲಿಲ್ಲವಾ? ಉಹೂಂ ನಿಜಕ್ಕೂ ನಿನಗದು ಬೇಕಾಗಿದೆ ಅಂತಲೂ ನನಗನ್ನಿಸದ ಹಾಗೆ ನೀ ಇರುವಾಗ ನನ್ನ ಆನಂದದ ಮೂಲವೆಲ್ಲಿ!
 ನಿನಗೆ ಬೇಕಾಗಿದ್ದು ನಿನ್ನೆಡೆಗಿನ ನನ್ನ ಪ್ರೀತಿ,ಭಕ್ತಿಯಲ್ಲಿ ವ್ಯತ್ಯಾಸವಿಲ್ಲದ ಜಲಪಾತದಂತೇ ಹರಿಯಬೇಕೆಂಬುದಷ್ಟೇ.. ನಿನ್ನನ್ನು ನಂಬುವ, ನಿನ್ನನ್ನು ಪ್ರಶ್ನಿಸದಿರುವ,
ನಿನಗೆ ಎಲ್ಲಿಯೂಸುತ್ತಿಕೊಳ್ಳಲಾರದ, ನಿನ್ನನ್ನು ಬಂಧಿಸದಂತ ಪ್ರೀತಿಯ ನಿರೀಕ್ಷೆ ನಿಂದಲ್ಲವಾ ಕೃಷ್ಣ! ಉಹೂಂ... ನಾನು ನಿನ್ನಂತೆ ದೇವರಲ್ಲ! ದೇವರಾಗಲು ಮನಸೂ ಇಲ್ಲ.
ನನಗೆ ಮನುಷ್ಯಳಾಗಲು ಬಯಕೆ! ಮನುಷ್ಯ ಪ್ರೀತಿಯ ಎಲ್ಲ ಮಜಲುಗಳನ್ನು ಹಾಯ್ದು ಬರುವ ತವಕ... ನೋವು ನಲಿವುಗಳ ಕಂಬನಿಯ ಜೊತೆಬೆರೆಸಿ ಕುಡಿಯುತ್ತ ಬದುಕುತ್ತೇನೆ.
ಎಲ್ಲ ಕಷ್ಟಗಳ ನನ್ನದೇ ನಂಬಿಕೆಗಳಡಿಯಲ್ಲಿ ಗೆದ್ದು ಬರುತ್ತೇನೆ! ಬಿದ್ದು ಬಿದ್ದು ತಪ್ಪುಗಳ ಜೊತೆಜೊತೆಗೆ ಕಲಿಯುತ್ತ ಸಾಗುತ್ತೇನೆ. ಮನುಷ್ಯಳಾಗೇ ಮನುಷ್ಯಳಂತೇ
ನಿನ್ನ ಪ್ರೀತಿಸುತ್ತೇನೆ! ದೇವರಾಗುವುದು ಬೇಡ ನನಗೆ! ಕೃಷ್ಣ ಮನುಷ್ಯರಂತೇ ಇರಲು ನನ್ನ ಬಿಡು. ಅದೇ ನನ್ನ ಸಹಜತೆಯ ಮಂತ್ರ... ಸಾಧ್ಯವಾದರೆ ನನ್ನ ಹೀಗೇ ಮನುಷ್ಯಳಂತೇ
ಸ್ವೀಕರಿಸು. ಇಲ್ಲ ನೀ ದೇವರಾಗು. ನಾ ದೂರವೇ ನಿಂತು ನಿನ್ನ ಪೂಜಿಸುವ ಭಕ್ತಳಾಗುತ್ತೇನೆ!
         


Friday, May 25, 2012

ನನ್ನ ಸಾಮ್ರಾಜ್ಯದಲ್ಲಿ ನೀನಿರುವುದಿಲ್ಲ! ಮತ್ತು ನಿನ್ನ ಸಾಮ್ರಾಜ್ಯದಲಿ ನಾನಿರುವುದಿಲ್ಲ!

   ಹೀಗಾದರೆ ಹೇಗೆ? ಸ್ತ್ರೀ ಪುರುಷ ಸಾಮ್ರಾಜ್ಯದಲಿ ಒಬ್ಬರೊಬ್ಬರು ಇರದೇ ಹೋಗುವುದೆಂದರೆ ಸೃಷ್ಟಿಯ ವಿನಾಶವಲ್ಲವೆ?
ಪೃಕೃತಿಯ ವಿರುದ್ಧವಲ್ಲವೆ? ಪೃಕೃತಿ ಎಂಬುದು ಈ ಪ್ರಪಂಚದ ಅತಿದೊಡ್ಡ ಸತ್ಯ ಮತ್ತು ವಾಸ್ತವ. ಸ್ತ್ರೀ ಪ್ರಪಂಚದ ಎಲ್ಲ ವಾಸ್ತವಗಳನ್ನು  ಅರಿಯುತ್ತ ಹೋದಂತೆ ಅಲ್ಲಿರುವ ಅಸಹಾಯಕತೆ, ಬದುಕಿನ ಕಂಡೂ ಕಾಣದಂತ, ಹೇಳಲಾಗದ ಬದುಕಲಾಗದಂತ ಅನಿವಾರ್ಯತೆಗಳನ್ನು ನೋಡುತ್ತ ನೋಡುತ್ತ ಅವಳೊಳಗಿನ ಜೀವಂತಿಕೆಯ ಹುಡುಕುತ್ತ ಹೊಟ್ಟೆತುಂಬಿದವರನ್ನೂ ಹಸಿದವರನ್ನೂ ಕಾಡುವ ಕೊಲ್ಲುವ ಆ ಪ್ರಪಂಚದ ಸತ್ಯಗಳನ್ನು
ಕಂಡವಳಾಗಿ ನನಗೆ ನಾನೇ ಈ ಮಾತು ಹೇಳುವಾಗ ಭಯವೂ  ಆವರಿಸಿಕೊಳ್ಳುತ್ತದೆ! ಅಂದರೆ ಅದೆಷ್ಟು ನೋವು ಅವಮಾನಗಳು ತುಂಬಿರಬೇಡ ಅಲ್ಲಿ! ಸ್ತ್ರೀ ಸಮಾನತೆ ಅಂತ ಹೇಳೋವಷ್ಟು ಸುಲಭದ್ದಲ್ಲ ಈ ಸಮಾನತೆ ಎಂಬುದು!
ಅಥವಾ ಸಮಾನತೆಯ ಹೊಣೆ ಹೊತ್ತ ನೊಗದಂತೆ ಹೋರಾಡುತ್ತಿರುವ ಎಲ್ಲ ಸ್ತ್ರೀ ವಾದಿಗಳ ಕೂಗಿನ  ದನಿಯೂ ಅಲ್ಲ!. ಹೋರಾಟ ಬೇಕೇ ಬೇಕು! ಹೋರಾಟವಿಲ್ಲದೇ ಇಲ್ಲಿ ಏನೂ ಸಿಗದು. ಆದರೆ ಹೋರಾಟ ಎಂಬುದು ಸ್ತ್ರೀ ಪರವಾದ ಕಾಳಜಿ ಮತ್ತು ಸ್ತ್ರೀ ತನದ ಗೌರವಕ್ಕಾಗೇ ವಿನಃ ಸ್ತ್ರೀ ತನ್ನನ್ನು ಸ್ತ್ರೀ ಎಂದುಕೊಳ್ಳೋದೇ ಅವಮಾನ ಎಂಬಂತಾಗಬಾರದು.   ಸ್ತ್ರೀ ಯರ ಮೇಲೆ ನಡೆಯುತ್ತಿರುವ ಎಲ್ಲಾ ದೌರ್ಜನ್ಯವನ್ನು ವಿರೋಧಿಸುತ್ತಲೇ ಸ್ತ್ರೀ ಸ್ತ್ರೀಯಾಗಿರುವುದು
ಅವಮಾನವಲ್ಲ ಎಂಬುದು ನನಗನ್ನಿಸುತ್ತಿರುವ ಮುಖ್ಯ ವಿಷಯ.

               ಈ ದೇಶದ ಅಷ್ಟೇ ಏಕೆ ಪ್ರಪಂಚದ ಯಾವ ಮೂಲೆಗೆ ಹೋದರು ಸ್ತ್ರೀ ಎಂಬುವವಳು ಮಾತ್ರ ಮಮತಾಮಯಿ ಅಮ್ಮ. ಅವಳು ತಾನೆ ನಮ್ಮನ್ನೆಲ್ಲ ಹೆತ್ತು ಹೊತ್ತು ಪೊರೆವವಳು! ಯಾವ ಸತ್ಯಗಳೂ ಯಾವ ಕ್ರೌರ್ಯಗಳೂ ಇದನ್ನು ಬದಲಾಯಿಸಲಾರವು!ಅವಳಂತಹ ಶ್ರೇಷ್ಟ  ತಾಯಿ ಮತ್ತೊಬ್ಬಳಿಲ್ಲ. ಅಷ್ಟೇ
 ಅಲ್ಲ ಪ್ರಪಂಚದ ಎಲ್ಲ ಸುಖಗಳಿಗೂ ಬೇಕಾದವಳು ಸ್ತ್ರೀ. ಸೌಂದರ್ಯವೇ ಅವಳು!ಎಲ್ಲರಿಗೂ ಎಲ್ಲದಕ್ಕೂ ಬೇಕಾದವಳು! ಅಮ್ಮ, ಅಕ್ಕ, ತಂಗಿ, ಸ್ನೇಹಿತೆ, ಪತ್ನಿ ಮಗಳು ಅಷ್ಟೇ ಅಲ್ಲ ಪ್ರೇಯಸಿಯಾಗಿಯೂ ಬೇಕಾದವಳು!
 ಅವಳ ಸ್ತ್ರೀ ತನಕ್ಕೆ ಸಲ್ಲುವ ಈ ಗೌರವ ಉಳಿಸಿಕೊಳ್ಳಬೇಕಾದರೂ ಹೋರಾಡಬೇಕಾದ ಪಾಡು ಅವಳದ್ದು! ನಾನಂತೂ ಸ್ತ್ರೀ ತಾನು ಸ್ತ್ರೀ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ವಿಷಯವೆಂದು ನಂಬುತ್ತೇನೆ.
ಸ್ತ್ರೀ ಯಾಗಿಯೇ ಬದುಕಿನ ಹಾಗೂ ಸಮಾಜದ ಎಲ್ಲ ಹೋರಾಟಗಳ ನಡೆಸಬೇಕೆಂದುಕೊಳ್ಳುತ್ತೇನೆ. ಇದನ್ನು ಯಾಕೆ ಹೇಳಬೇಕೆನ್ನಿಸಿತು ಗೊತ್ತಾ? ನಮ್ಮ ಸ್ತ್ರೀಯರೇ ಪುರುಷರಾಗಲು ಹೊರಟಿದ್ದಾರೆ!
 ಅವರಂತೆ ವೇಷ ಭೂಷಣ ಧರಿಸುವವರನ್ನು ನಾನು ವಿರೋಧಿಸುತ್ತಿಲ್ಲ.
ಆದರೆ ಸಮಾಜದಲ್ಲಿ ಒಳ್ಳೆಯದರಲ್ಲಿ ಮಾತ್ರ ಮುಂದಾಗುತ್ತಿದ್ದ ಸ್ತ್ರೀಯರು ಏನೇನು ಕೆಟ್ಟದ್ದಿದೆಯೋ ಅದರಲ್ಲೆಲ್ಲ ಭಾಗಿಯಾಗುತ್ತಿದ್ದಾರೆ!
 ಪರುಷ ಸಮಾನತೆಯ ಹೆಸರಲ್ಲಿ ತನ್ನ ಸ್ತ್ರೀ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ! ನೋವಾಗುತ್ತದೆ ನನಗೆ. ಒಬ್ಬಳು ಸ್ತ್ರೀ ತನ್ನನ್ನು ತಾಯಿಯೆಂದು ಗುರುತಿಸಿಕೊಳ್ಳಲು ಇಷ್ಟಪಡದಿರುವವರನ್ನು ನೋಡಿ ಖೇದವೆನ್ನಿಸುತ್ತದೆ!
           
      ಎಷ್ಟೋಸಲ ಸಮಾಜದ ಒಳ ಹಾಗೂ ಹೊರವಲಯಗಳು  ಎಷ್ಟು ಗಾಢ ಪರದೆಯಿಂದ ಮುಚ್ಚಿಬಿಡುತ್ತವೆ ಎಂದರೆ  ನಾವು ಕಣ್ಣಿಗೇ ಪರದೆ ಕಟ್ಟಿಕೊಂಡುಬಿಡುತ್ತೇವೆ.ಯಾವ ಸಮಾಜದಲ್ಲಿಯೂ ಸಂಪೂರ್ಣ ಸುಖಿಗಳಿಲ್ಲ. ಮತ್ತೆ ಯಾವ ಸಮಾಜದಲ್ಲಿಯೂ ಸಂಪೂರ್ಣ ದುಃಖಿಗಳಿಲ್ಲ. ಸ್ತ್ರೀ ಸಮಾಜ ಸಹ ವಿದ್ಯೆ ಓದು ಬರಹವಿಲ್ಲದವರುಸಾರ್ಥಕ ಬದುಕನ್ನು ಬದುಕಿದ ಸಾವಿರ ಉದಾಹರಣೆಗಳಿವೆ ಇಲ್ಲಿ. ಎಷ್ಟೋ ಕಷ್ಟಗಳ ನಡುವೆ ಸಂಸಾರದ ನೊಗಹೊತ್ತು ರಥ ಎಳೆದ ಸ್ತ್ರೀ ಯರಿದ್ದಾರೆ ಇಲ್ಲಿ. ಅವರನ್ನು ಗೌರವದಿಂದಲೇ ನಡೆಸಿಕೊಂಡಿದೆ ಸಮಾಜ.. ಆದರೆ ಇದೇ ಸಮಾಜದಲ್ಲಿ ಹೆಣ್ಣಿನ ಸ್ಥಿತಿ ಎಂಥ ಅಭದ್ರತೆ ಹಾಗು ಅಪಾಯದಿಂದ ಕೂಡಿದೆ ಎಂದರೆ ಎಷ್ಟೋ ವಿದ್ಯಾವಂತರು,
 ಬುದ್ದಿವಂತರು ಹಾಗೂ ಉತ್ತಮ ಕುಲಸ್ಥ ಹೆಣ್ಣುಮಕ್ಕಳು ಸಹ ಇಂದು ಸಾಕ್ಷಾತ್ ನರಕವನ್ನೇ ಅನುಭವಿಸುತ್ತಿದ್ದಾರೆ.! ಅವಿದ್ಯಾವಂತರಲ್ಲಿರುವ ಮಾನವೀಯತೆಯೂ ಕೆಲವೊಮ್ಮೆ ವಿದ್ಯಾವಂತ
ಮಹಿಳೆಯರಲ್ಲೂ ಇರದೇ ಹೋಗುವುದು ಈ ಸಮಾಜದ ಅತಿದೊಡ್ಡ ದುರಂತವಲ್ಲವೆ?

          ಬರೆಯಲೆಂದೇ ಹೊರಟರೆ ಮುಗಿಯದ ಕತೆ ಇದು.  ಮುಖ್ಯವಾಗಿ ಹೇಳಬೇಕೆನ್ನಿಸಿದ್ದೆಂದರೆ ಸ್ತ್ರೀ ತನ್ನ ಸ್ತ್ರೀತನದ ಗೌರವವನ್ನೇ ಉಳಿಸಿಕೊಂಡು ಅದಕ್ಕಾಗಿಯೇ ಹೋರಾಡುವಂತಾಗಲಿ. ಸಮಾನತೆಯ ಹೆಸರಲ್ಲಿ ಸ್ವೇಚ್ಛಾ ಪ್ರಪಂಚ ಸೃಷ್ಠಿಯಾಗದಿರಲಿ. ಆಧುನಿಕತೆ ಹೆಣ್ಣಿಗೆ ಮತ್ತಷ್ಟು ಮುಳುವಾಗದಿರಲಿ.ಸ್ತ್ರೀ ಹಾಗೂ ಪುರುಷ ಇಬ್ಬರೂ
ಈ ಬದುಕಿಗೆ ಜೊತೆ ಪಯಣಿಗರು. ನನ್ನ ಸಾಮ್ರಾಜ್ಯದಲಿ ನೀನಿರುವುದಿಲ್ಲ ಮತ್ತು ನಿನ್ನ ಸಾಮ್ರಾಜ್ಯದಲಿ ನಾನಿರುವುದಿಲ್ಲ ಎಂಬಂತಾಗುವುದು ಸಾಧ್ಯವೂ ಇಲ್ಲ. ಹಾಗಾಗುವುದೂ ಬೇಡ. ನಾವಿಬ್ಬರೂ ಸೇರಿ ನಮ್ಮ ಸಾಮ್ರಾಜ್ಯವನ್ನು ಕಟ್ಟಬೇಕಾಗಿದೆ! ಮತ್ತು ಕಟ್ಟಿದ ಸಾಮ್ರಾಜ್ಯವನ್ನು ನಾವೇ ಉಳಿಸಬೇಕಾಗಿದೆ.! ಇದು ಈ ಬದುಕಿನ ಸತ್ಯ....
          ಮಾನಸ ಸರೋವರದಲ್ಲಿ ಹೀಗೊಂದು ಗಂಭೀರ ಚಿಂತನೆಯ ಹೊತ್ತು!!! ನನ್ನೆದೆಯಾಳದಲ್ಲಿ ಅಲೆಗಳ ಸದ್ದು!! ನಿನ್ನೆದೆಗೆ ಕೇಳೀಸೀತಾ? ಗೊತ್ತಿಲ್ಲ..
 ಯಾಕೆಂದರೆ ಕಿವಿಯಿರುವುದು ತಲೆಗೆ ಅಂದರೆ ಬುದ್ದಿಗೆ! ಹೃದಯಕ್ಕಲ್ಲ. ಈ ಅಲೆಗಳ ಹದ ಅರಿಯಲು ಹೃದಯ ಬೇಕು... ಅದಿದ್ದರೆ ಖಂಡಿತ ಕೇಳೀಸೀತು!
ಅದೇ ಭರವಸೆಯಿಂದ ಈ ಪುಟ್ಟ ದೋಣಿಗಳು ನಿಮ್ಮ ಮನೆಬಾಗಿಲಿಗೆ.....
            





 

Monday, May 7, 2012

ಮತ್ತದೇ ತೀರದಲಿ .............

ಮತ್ತೊಮ್ಮೆ ಉರಿ ಉರಿ ಬಿಸಿಲಿನ ದಿನ ಕಳೆದು 
ಸಂಜೆಯ ತೀರಕ್ಕೆ ಬಂದು ಕುಳಿತಿದ್ದೇನೆ. ಕಳೆದ ಕೆಲವೇ ದಿನಗಳಲ್ಲಿ ಒಳಗೆಲ್ಲ ಒಂದು ವಿಚಿತ್ರ
ಮಾಯೆಯಂತಹ ಉದ್ವಿಗ್ನತೆ ಆವರಿಸಿಕೊಂಡುಬಿಟ್ಟಿತು. ಬರೆಯಬೇಕು ನಿನ್ನೊಂದಿಗೆ ಎಲ್ಲವನ್ನು ಹಂಚಿಕೊಳ್ಳಬೇಕೆಂಬ
ಆ ತುಡಿತಕ್ಕೆ ಸಮಯದ ಅಭಾವ ಎಂಬುದು ಅದೆಷ್ಟು ಭಾವನೆಗಳು ತೀವ್ರವಾಗಿ ಒತ್ತಡವನ್ನು ಉಂಟುಮಾಡುತ್ತವೆ ಎಂದರೆ
ಅದೊಂದು ವಿಚಿತ್ರ ಸಂಕಟ ಕೊಡುವ ಸುಖದಂತದ್ದು! ಸರಿಯಾಗಿ ಹೇಳಬೇಕೆಂದರೆ ಪ್ರಸವದ ನೋವಿನಂತಹ ಒತ್ತಡದ್ದು. ಅಂತಹ ಒತ್ತಡದ
ಹರಿವಲ್ಲೇ ಉಳಿದೆಲ್ಲವನ್ನ ಈ ಕ್ಷಣಕ್ಕೆ ಬದಿಗಿರಿಸಿ ನಿನ್ನೊಂದಿಗೆ ಮನಸಾಗಿ ಕುಳಿತಿದ್ದೇನೆ. ಮನಸು ಮನಸಿನ ಮಾತಿಗೆ ಸರೋವರಗಳು ಸಾಕ್ಷಿಯಾಗಲಿ..

           ಸ್ವಾತಂತ್ರ್ಯದ ಸುಖವೆಂದರೆ ಎಷ್ಟು ಅದ್ಭುತ! ಇದು ಎಲ್ಲರಿಗೂ ಅಗತ್ಯಕೂಡ.. ಸ್ವಾತಂತ್ರ್ಯದ ಸುಖದಡಿಯಲ್ಲೇ ಮನುಷ್ಯ ಸಂಬಂಧಗಳ
ಬಂಧನವ ಕಟ್ಟಿಕೊಳ್ಳುತ್ತಾನೆ!! ಆಶ್ಚರ್ಯ ಅಲ್ಲವಾ!! ಸಂಸಾರವೆಂಬುದು ಬಂಧನವೆಂದೂ  ಹೆಣ್ಣು ಮೋಹವೆಂದೂ ಮಾಯೆಗಳಿಂದ ಮುಕ್ತನಾಗಲು ಬಯಸುವ ಇದೇ
ಮಾನವ ಕುಲವೇ ಇವೆಲ್ಲವನ್ನು ಕಟ್ಟಿಕೊಳ್ಳುತ್ತದೆ!! ಮನುಷ್ಯ ಒಂಟಿಯಾಗಿ ಸುಖಪಡುವುದಕ್ಕಿಂತಲೂ ಜಂಟಿಯಾಗಿ ಬದುಕಿನ ಸುಖ ಪಡೆಯುತ್ತಾನೆ ಎನ್ನುವುದಕ್ಕೆ ಇದು
ಉದಾಹರಣೆಯೇನೋ ಅನ್ನಿಸುತ್ತದೆ!! ಬದುಕೆಂದರೆ ಒಂದು ಅಸಾಮಾನ್ಯ ವಿಶ್ವವಿದ್ಯಾನಿಲಯ. ಎಷ್ಟು ಕಲಿತರೂ ಮುಗಿಯದ ವಿಶ್ವಕೋಶ! ಇಲ್ಲಿ ಬಂಧನಗಳಿಂದ
ಮುಕ್ತವಾಗುವುದೆಂದರೆ ಜವಾಬ್ದಾರಿಗಳಿಂದ ದೂರ ಓಡುವುದಲ್ಲ! ಜವಾಬ್ದಾರಿಗಳು ಇಂದು ನಾಳೆ ಮುಗಿಯುವ ಸರಕೂ ಅಲ್ಲ. ಎಲ್ಲವೂ ನಿಯೋಜಿತವಾದ ಸೃಷ್ಟಿಕರ್ತನ
ಸೂತ್ರದಲ್ಲಿ ನಡೆಯಬೇಕಾದ ಗೊಂಬೆಯಾಟದಂತದ್ದು. ಅಂತಹ ಒಂದು ರಂಗದಲ್ಲಿ ನಾವು ಪಾತ್ರಧಾರಿಗಳೆಂಬ ಅರಿವು ಸಾಕು... ತುಂಬ ಶಾಂತವಾಗಿ ಬದುಕನ್ನು ಎದುರಿಸಲು,
ಬದುಕನ್ನು ಪ್ರೀತಿಸಲು....

      ಎಷ್ಟು ಬಾರಿ ಅಂದುಕೊಳ್ಳುತ್ತೇನೆ. ಮನಸಿಗೆ ಅನಿಸಿದ್ದನ್ನ ಅನಿಸಿದಂತೆ ಹೇಳಿಕೊಳ್ಳಬಹುದಾದ ಒಂದು ಸ್ನೇಹವಿರಬೇಕು. ಜೀವನ ಪೂತರ್ಿ ಯಾವ
 ಕೋರಿಕೆಗಳು ಕಂಡೀಷನ್ಸ್ ಇಲ್ಲದ ಸಂಭ್ರಮ, ಸುಖ, ದುಃಖ, ನೋವು ನಲಿವು, ಸಿಟ್ಟು ಸೆಡವು. ಕೊನೆಗೆ ಅಸಹನೆಗಳನ್ನು ಉಗಿದು ಸಮಾಧಾನ ಕಂಡುಕೊಳ್ಳುವ
ಸ್ನೇಹವಿರಬೇಕು! ನನಗೆ ನೀ ಇದ್ದೀಯೆಲ್ಲ ಹಾಗೆ! ನಿನಗೆ ನಾ ಇದ್ದೆ ಅಲ್ಲ ಹಾಗೆ! ಗೊತ್ತಾ ನಿನಗೆ ಮನುಷ್ಯ ಸಂಬಂಧಗಳು ಅದು ಎಂತದ್ದೇ ಆಗಿರಲಿ, ನಿಭಾವಣೆಯ
ಅಗತ್ಯವಿದ್ದೇ ಇದೆ ಅಲ್ಲಿ. ಪತಿ ಪತ್ನಿಯರ ಸಂಬಂಧಗಳಿರಲಿ, ರಕ್ತ ಸಂಬಂಧಗಳಿರಲಿ ಜೀವಕ್ಕೆ ಜೀವ ಕೊಡೋ ಸ್ನೇಹಗಳಿರಲಿ ಎಲ್ಲ ಕಡೆಗೂ ಒಂದು ಹಂತದ ನಿಬಾವಣೆಯ
 ಅಗತ್ಯವಿದ್ದೇ ಇದೆ. ಪ್ರೀತಿ ಕಮ್ಮಿ ಆಗದಿದ್ದರೂ ಮುಕ್ತತೆಗೆ ಸಾಧ್ಯವಿಲ್ಲ. ಅಂತಹ ಪ್ರೀತಿ ನಿನ್ನೊಂದಿಗೆ ಮಾತ್ರ ಸಾಧ್ಯ!! ನನ್ನ ಮನಸೇ, ಮನುಷ್ಯರಿಗೆ ಅರ್ಥವಾಗದ  ಮಾತಾಡುತ್ತಿದ್ದೆನಾ ನಾನು!
ಗೊತ್ತಿಲ್ಲ.. ಆದರೆ ನಿಜಕ್ಕೂ ಹಾಗೆ ನನ್ನೊಳಗೆ ನೀ ಇದ್ದೀ ಎಂಬುದೇ ಇವತ್ತಿಗೆ ತುಂಬ ಖುಷಿ ವಿಷಯ ಗೊತ್ತಾ? ಒಂದು ವ್ಯಕ್ತಿಯಾಗಿದ್ದರೆ ಇದು ಖಂಡಿತ ಸಾಧ್ಯವಾಗುತ್ತಿರಲಿಲ್ಲ ಮನಸೇ  ಮನುಷ್ಯನ ಮಿತಿ ಅದು..!! 
ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು! ಶಕ್ತಿ ದೊಡ್ಡದು!ನನ್ನ ಮನಸಿನೊಂದಿಗೆ ನನ್ನ ಸಂಬಂಧ ಅಂತದ್ದು.
ಯಾವ ಕೋರಿಕೆಗಳಿಲ್ಲ. ಯಾವ ದೂರುಗಳಿಲ್ಲ. ಯಾವ ಅಹಂ ಇಲ್ಲ. ನಾಳೆ ನಾ ಹಂಚಿಕೊಂಡ ಯಾವುದೋ ಒಂದು ಮಾತು ನನ್ನನ್ನೇ ದೌರ್ಬಲ್ಯವಾಗಿ ಕಾಡುವ ಭಯವಿಲ್ಲ.
ನನ್ನ ನೋವುಗಳು ನನ್ನನ್ನೇ ಅಪಹಾಸ್ಯ ಮಾಡೀತೆಂಬ ಅಳುಕುಗಳಿಲ್ಲ. ಯಾವುದೋ ಒಂದು ದುರ್ಬಲ ಕ್ಷಣದಲ್ಲಿ ನಾ ಮಾಡಿದ ತಪ್ಪುಗಳು ನನ್ನ ಚೂರಿಯಾಗಿ ಜೀವನವೆಲ್ಲ
ಇರಿಯುವುದಿಲ್ಲ. ಮತ್ತೆಂದೋ ಕಾಡಿದ ಕನಸುಗಳು ನನ್ನ ಅಣಕಿಸುವುದಿಲ್ಲ.  ನೀ ಇಲ್ಲವೆಂಬ ಅಳುಕಾಗಲಿ, ನೀ ನನ್ನ ಬಿಟ್ಟುಬಿಡುತ್ತೀಯೆಂಬ ಭಯವಾಗಲಿ ಕಾಡಲು ಸ್ಥಳವೇ ಇಲ್ಲ.
 ಇದು ನನ್ನೊಳಗಿನದ್ದು. ಡೈರಿಯಂತೇ ನೀನಿದ್ದೀ. ಓ ಸ್ನೇಹಿ ಮನಸೇ ನಿನಗೆಷ್ಟು ಋಣಭಾರಿ ನಾನು!!

            ಈ ದಿನಗಳಲ್ಲಿ ಕಾಡಿದ ಒತ್ತಡಗಳನ್ನ ಹೇಳಲು ಹೊರಟ ನಾನು ನಿನ್ನ ಗುಣಗಾನ ಮಾಡುತ್ತ ಕುಳಿತೆ ಅಲ್ಲವಾ? ಹಾಂ ಸಮಾನತೆಯೆಂಬ ಕೂಗಿನ ನಡುವೆ
ನೂರೆಂಟು ಪ್ರಶ್ನೆಗಳು ಎದ್ದುಬಿಟ್ಟವು! ಏನುಮಾಡಲಿ? "ಸ್ತ್ರೀ" ಸ್ತ್ರೀ ಅಂತ ಹೇಳಿಕೊಳ್ಳಲು ಅವಮಾನವಾ? ಸ್ತ್ರೀ ತನವೆಂಬುದು  ಸ್ತ್ರೀಯಾಗಿರಲು ಬಯಸದಷ್ಟು ಅಥವಾ
ಹಾಗೆ ತೋರ್ಪಡಿಸಿಕೊಳ್ಳಲು  ಬಯಸದಂತ ವಿಷಯವಾ? ಯಾಕೋ ಈ ವಿಷಯವಾಗಿ ತುಂಬಾ ಕಾಡುತ್ತಿದೆ.. ಒಳಗೆಲ್ಲ.. ಇದು ಇನ್ನೂ ಒಂದು ಸ್ಪಷ್ಟ ರೂಪಕ್ಕೆ ಬರದಿರುವ
ಭ್ರೂಣದಂತಹುದು.. ಇನ್ನಷ್ಟು ಸಮಯದ ಚಿಂತನೆಯೊಡನೆ ಮತ್ತೆ ಬೇಗ ಬಂದು ಕೂರುತ್ತೇನೆ.. ಬರುವಾಗ ಖಂಡಿತ ಅಂತ ಹೇಳಲಾಗದಿದ್ದರೂ ಒಂದೆರಡು ಗುಟುಕು
ಎಲೆಅಡಿಕೆ ಜಗಿಯುವಂತ ವಿಚಾರಗಳ ಪ್ರಶ್ನೆಗಳ ತಗೆದುಕೊಂಡು ಬರುವ ಪ್ರಯತ್ನ ಮಾಡುತ್ತೇನೆ..
  

 ಮುಸ್ಸಂಜೆ ಕೂಡುತ್ತಿದೆ. ಕತ್ತಲು ಆವರಿಸಿದೆ. ಬುದ್ಧಪೂಣರ್ಿಮೆಯ ಪ್ರಶಾಂತ ಚಂದಿರ ಇಣುಕುತ್ತಿದ್ದಾನೆ! ಈ ಚಂದ್ರಮನೊಂದಿಗೆ ಬೆಳದಿಂಗಳೊಂದಿಗೆ ಒಂದು ದಿವ್ಯ
ಶಾಂತಿಯನ್ನು ಕಂಡುಕೊಳ್ಳುವ..ಪುಟ್ಟ ಪುಟ್ಟ ನೆನಪಿನ ಕನಸಿನ ದೋಣಿಗಳ ತೇಲಿ ಬಿಡುವಾ...
ಮತ್ತದೇ ತೀರದಲಿ ಸಂಜೆಗೆ ಕಾಯುತ್ತಿರುವ.....