Tuesday, December 3, 2013

ನನಗೀಗ ಸಮಯವಿಲ್ಲ..





   "ಈಗ ಮಾನಸ ಸರೋವರದಲ್ಲಿ ನೀರೇ ಇಲ್ಲ ಅನ್ನಿಸುತ್ತಿದೆ. ಎಲ್ಲ ಸಮುದ್ರಗಳಲ್ಲಿ ಚಂಡಮಾರುತ ಬೀಸಿ ಭರ್ಜರಿ ಅಲೆಗಳ ಪ್ರವಾಹದಂತಿವೆ.  ಆದರೆ ಮಾನಸ ಸರೋವರದಲ್ಲಿ ಮಾತ್ರ ನೀರವ ಮೌನ! ಚಿಕ್ಕ ಅಲೆಯ ಸದ್ದೂ ಇಲ್ಲ! ಏನಾದರೂ ಟ್ಯಾಂಕರ್ ನಿಂದ ನೀರು ತಂದು ಬಿಡಬೇಕಾ?" 

   ಎಷ್ಟು ಚಂದದ ಮುಗ್ಧ ಪ್ರಶ್ನೆ! ಈ ಪ್ರಶ್ನೆಗೆ ಉತ್ತರವಾಗಿಯೂ ಮೌನ ಕರಗಿ ನೀರಾಗದಿದ್ದರೆ ಸರೋವರ ಹೃದಯ ಕಳೆದುಕೊಳ್ಳಬಹುದೆಂಬ  ಭಯ ನನಗೇ ಹುಟ್ಟುತ್ತಿದೆ. ಸಾವಿರ ಜನರನ್ನು ತಲುಪದಿದ್ದರೇನಾಯಿತು? ತಲುಪಿದ ಜನರ ಮಾನಸದಲ್ಲಿ ಒಂದು ನಿರೀಕ್ಷೆ ಹುಟ್ಟಿಸಿದೆಯೆಂಬ ಪ್ರೀತಿಗೆ ಮತ್ತೆ ಅಲೆಗಳು ಮಾನಸ ಸರೋವರದ ತೀರದಲ್ಲಿ.

    
       ಮನಸಿನ ಮನೆಯಲ್ಲಿ ಮನಸಿನೊಂದಿಗೆ ಹೊರಟ ಪಯಣ ಮುಗಿದಿದೆ. ಇದು ಮತ್ತೊಂದು ಪಯಣ. ನಿಮ್ಮೊಂದಿಗಿನ ಮಾತಿನದು.  ಈ ಅಲೆಗಳು ಸ್ವಲ್ಪ ಭಿನ್ನವಾಗಿರಬಹುದು. ಆದರದು ಕೂಡ ಈ ಸರೋವರದಲ್ಲೆದ್ದ ಅಲೆಗಳು.  ಚೂರು ಚೂರು ತಾಗಿದರೆ ಸಾರ್ಥಕ.


ಬರೆಯ ಹೊರಟರೆ ಎಷ್ಟೊಂದು ಪ್ರಶ್ನೆಗಳು  ಎದುರಾಗುತ್ತವೆಯೆಂದರೆ ನಾನೇ ಕಳೆದುಹೋಗುವಷ್ಟು. ಯಾವ ಯಾರ ಹಂಗೂ ಇಲ್ಲದೆ ನಿಭರ್ೀಡೆಯಿಂದ ಮನಸಿನ ಮಾತುಗಳ ಬರೆಯತೊಡಗಿದರೆ ಅದೆಷ್ಟೋ ಮನಸುಗಳಿಗೆ ನೋವಾಗಬಹುದು! ಅದೆಷ್ಟೋ ವಿರೋಧಗಳಿಗೆ ಎಡೆಯಾಗಬಹುದು. ಯಾಕೆಂದರೆ ನನ್ನ ಭಾವ ವಿಚಾರಗಳೆಲ್ಲ ಎಲ್ಲರದ್ದೂ  ಆಗಿರಬೇಕೆಂಬ ನಿಯಮವಿಲ್ಲ. ಇತ್ತೀಚೆಗೆ ಹಲವು ಬ್ಲಾಗ್ ಓದುತ್ತಿದ್ದಂತೆ ಹಲವು ಪುಸ್ತಕಗಳ ನೋಡುತ್ತಿದ್ದಂತೆ ಇಂತ ಹಲವು ಪ್ರಶ್ನೆಗಳ ಇಟ್ಟುಕೊಂಡು  ಏನು ಬರೆಯಲಿ ಎಂದೇ ತೋಚುವುದಿಲ್ಲ. ಒಳಗಿನ ಹಸಿ ಹಸಿ ಭಾವಗಳ   ಕಾವ್ಯವಾಗಿಸುವಂತ ಮನಸ್ಥಿತಿ ಇಂದಿಗಿಲ್ಲ. ಬರೆದದ್ದೆಲ್ಲ ಪ್ರಕಟವಾಗಬೇಕೆಂಬ ತೆವಲು ಇಂದಿಗೂ ಹುಟ್ಟಿಲ್ಲ ಎಂಬುದಕ್ಕೆ ನನಗೆ ನಾನೇ ಹಲವು ಬಾರಿ ಸ್ಪಷ್ಟಪಡಿಸಿಕೊಂಡಿದ್ದೇನೆ. ಹಾಗಿದ್ದೂ ಉತೃಷ್ಟತೆಯ ಹಪಹಪಿ ಕೂಡ ಇಲ್ಲ ಅಂತಲೇ ಅಂದುಕೊಂಡಿದ್ದೇನೆ. ನನ್ನದಾದ ಬ್ಲಾಗ್ ನ
ಈ ಪಯಣದಲ್ಲಿ ನಿಮ್ಮೊಂದಿಗೆ ನಾಲ್ಕು ಮಾತು ನನ್ನದಿರಲಿ ಅಂತಷ್ಟೇ.  ಮತ್ತೆ ಬರೆಯುವ ಈ ಭಾವ ಸ್ವಾರ್ಥ ಅಂದುಕೊಂಡರೆ ಹಾಂ ಹಾಗೇ ಇರಬಹುದು.

 ಈ ಸ್ವಾರ್ಥ ನಿಸ್ವಾರ್ಥಗಳ ಬಗ್ಗೆ ಗೋಜಲು. ನಮ್ಮವರನ್ನು ಪ್ರೋತ್ಸಾಹಿಸುವುದು ಅವರನ್ನು ಮುಂದೆ ತರುವುದಕ್ಕಾಗಿ ಒಂದಿಷ್ಟು ಸಲಹೆ ಪ್ರಚಾರ ಕೊಡುವುದು ತಪ್ಪಾ? ಪ್ರತಿಯೊಬ್ಬರೂ ಅದೂ ಅಂತಜರ್ಾಲದ ಈ ಸಾಮಾಜಿಕ ಪ್ರಪಂಚದಲ್ಲಿ  ಹಾಗೆ ಒಟ್ಟೊಟ್ಟಿಗೆ ಬೆಳೆಯುವವರ ಸಲಹುವವರ ನೋಡುತ್ತೇವೆ. ಯಾರ್ಯಾರೋ ಪ್ರತಿಭಾವಂತರಿಗೆ ಇನ್ಯಾರೋ ಮಣೆ ಹಾಕಬಹುದು! ಆದರೆ ನಮ್ಮವರಿಗೆ ನಾವೇ  ಮಣೆ ಹಾಕದಿರುವ ಮತ್ತು ಮತ್ತೊಬ್ಬರು ಅವರಷ್ಟಕ್ಕೇ ಅಂತ ಪ್ರೀತಿ ಕಟ್ಟಿಕೊಂಡರೆ ಅದನ್ನು ಗುಂಪುಗಾರಿಕೆ ಅಂದುಕೊಳ್ಳುವುದು ಸರಿಯಾ?  ಎಷ್ಟೋ ಬಾರಿ ನಮ್ಮೂರಿನಲ್ಲಿ ಇಂತಹ ಅನೇಕ ವ್ಯಕ್ತಿಗಳ ನೋಡುತ್ತೇವೆ ನಾವು. ಪಕ್ಕದ ಮನೆಯಲ್ಲಿರುವ ಯಾವುದೋ ವಿಷಯ ಪಾರಂಗತ ಪ್ರತಿಭಾವಂತ ಲೋಕವಿಖ್ಯಾತಿ
ಪಡೆದಿರುತ್ತಾನೆ. ಅವನನ್ನು ಅವನವರು ಅವನೂರು ಗುರುತಿಸುವುದೇ ಇಲ್ಲ. ಒಮ್ಮೆ ನಮ್ಮೂರಿನ ಅಂಧ ಕೊಳಲು ಕಲಾವಿದ ಮಂಜಣ್ಣ ನಿಗೆ ಒಂದು ಪುಟ್ಟ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗ ಅವರೊಂದು ಮಾತು ಹೇಳಿದ್ದು ಈಗಲೂ ನೆನೆಪಿಗೆ ಬರುತ್ತಿದೆ. ಎಷ್ಟು ಪ್ರಸಿದ್ದಿ  ಪಡೆದರೇನು ನಿನ್ನವರು ನಿನ್ನ ಪ್ರತಿಭೆ ಗುರುತಿಸದಿದ್ದರೆ! ಊರಲ್ಲಿ ನಡೆಸಿದ ಈ ಸನ್ಮಾನ ರಾಜ್ಯಪ್ರಶಸ್ತಿ ಸಿಕ್ಕಿದ್ದಕ್ಕಿಂತ ದೊಡ್ಡದು ಎಂದು ಅವರನ್ನುವಾಗ ಅವರ ಕಣ್ಣಲ್ಲಿ ಅಕ್ಷರಶಃ ನೀರಿತ್ತು.  ನಮ್ಮವರನ್ನು ನಾವು ಗುರುತಿಸಿಕೊಳ್ಳುವುದು ಸನ್ಮಾನಿಸುವುದು, ಗೌರವಿಸುವುದು ಇವೆಲ್ಲ ಸ್ವಾರ್ಥವಾ ಹಾಗಾದರೆ?

ಹಲವು ಬಾರಿ ಗೆದ್ದೆತ್ತಿನ ಬಾಲ ಹಿಡಿಯುವ ಮತ್ತು ನಾವು ಪೂರ್ಣ ಸಂಭಾವಿತರೆಂದು ತೋರಿಸಿಕೊಳ್ಳುವ ಅನೇಕರನ್ನು ನಾವು ನೋಡುತ್ತಿರುತ್ತೇವೆ. ಪ್ರತಿಭೆ, ಸಾಧನೆಗಳ  ಮಾಡಿದವರ ಜೊತೆ  ನಿಂತುಕೊಂಡು ತಾನೂ ಮಾಡಿದ್ದೆಂಬ ಹಮ್ಮು ತೋರುವವರು. ಇಲ್ಲ ಅವರನ್ನು ಮಾತ್ರ ತಮ್ಮವರೆಂದುಕೊಳ್ಳುತ್ತ ಪರಿಚಯಿಸಿಕೊಳ್ಳುವವರು. ಇಂತವರ ಬಗ್ಗೆ ಇದೀಗ  ಒಂದಿಷ್ಟು ಅಸಹನೆ ಹುಟ್ಟಿಕೊಂಡಿದೆಯೆಂದರೆ ತಪ್ಪಲ್ಲ. ಅವರಿಗೆ ಬೇರೆಯವರು ಮಾಡಿದ ಯಾವ ಕೆಲಸಗಳೂ ಒಳ್ಳೆಯದು ಅನ್ನಿಸುವುದಿಲ್ಲ. ಅವರ ಮೂಗಿನ ನೇರಕ್ಕೇ ಪ್ರತಿಯೊಂದೂ ಸರಿಯೆಂಬ ಪ್ರತಿಪಾದಕರು. ಇವರ ಬಾಯಲ್ಲಿ ಕೂಡ ಎಲ್ಲರೂ ಸ್ವಾರ್ಥಿಗಳು. ಸಂಭಾವಿತರ ಸಾಲಿನಲ್ಲಿ ಅವರು ಮೊದಲಿರುತ್ತಾರೆ! ತಪ್ಪೇನೂ ಇಲ್ಲದಿದ್ದರೂ ಅವರು ಉಳಿದವರನ್ನೆಲ್ಲ
ತಪ್ಪಿತಸ್ಥರಂತೆ ಕಾಣುತ್ತಿರುತ್ತಾರೆ! ಇಂಥವರು ಪ್ರೋತ್ಸಾಹಕರಾಗಿ ತೋರುತ್ತಾರೆ. ಪ್ರೋತ್ಸಾಹದ ಹಿಂದೆಯೂ ಸ್ಮರಣೆಯಿರಲಿ ಎಂಬ ಸ್ವಾರ್ಥವೇ ಎದ್ದುನಿಲ್ಲುತ್ತದೆ. ಆಗೆಲ್ಲ ಉಪಕಾರಸ್ಮರಣೆ ಕೂಡ ಸ್ವಾರ್ಥ ಅನ್ನಿಸಿಕೊಳ್ಳುತ್ತದೆ. ಈ ಸ್ವಾರ್ಥ ಒಂದು ಹಂತದವೆರಗೆ ಸರಿಯೇ.. ಆದರೂ ಪ್ರತಿಫಲಾಕ್ಷೆಯಿಂದಲೇ ಪ್ರೋತ್ಸಾಹ ನೀಡುವುದು ಎನ್ನುವುದು ಒಂದು ತರದ ವ್ಯಾಪಾರೀ ಮನೋಭಾವ ಅನ್ನಿಸಿಕೊಳ್ಳುತ್ತದೆ. ಇಲ್ಲಿ  ಕೂಡ ಸಹಾಯ ಸಹಕಾರ ಪಡೆದವರಿಗೆ ಸ್ಮರಣೆ ಎಂಬುದು ಬೇಕೇ ಬೇಕು. ಉಪಕಾರ ಸ್ಮರಣೆ ಇಲ್ಲದವನು ಸಹಾಯ ಪಡೆದುಕೊಳ್ಳಲು ಅರ್ಹನಲ್ಲ. ಹಾಗಿದ್ದರೆ ಇಲ್ಲಿ ನ್ಯಾಯ ಯಾವುದು? ಸ್ವಾರ್ಥ ರಹಿತ ಮತ್ತು ಸ್ವಾರ್ಥ ಸಹಿತ ಇವೆರಡದರ ನಿರ್ಣಯ ಹೇಗೆ?



    ಬದುಕು ಒಂದಿಷ್ಟು ಕಾಲಘಟ್ಟದಲ್ಲಿ ಹದವಾಗುತ್ತದೆ, ಇನ್ನೊಂದು ಕಾಲಘಟ್ಟದಲ್ಲಿ ಪಕ್ವಗೊಳ್ಳುತ್ತದೆ. ಮತ್ತೊಂದು ಕಾಲಘಟ್ಟದಲ್ಲಿ ಪರಮಾನ್ನವಾಗುತ್ತದೆ ಆಗಬೇಕು ಎಂಬುದು ಸಹಜ. ಹಾಗಿದ್ದೂ ಕೆಲವರು ಮಕ್ಕಳಂತೆ ಮುಗ್ಧವಾಗಿ ಅನುಗಾಲ ಬಾಳುತ್ತಾರೆ. ತಮ್ಮ ಸಾವಿರ ಗೋಜಲುಗಳ ನಡುವೆ ಈಗಿನವರ ಕಷ್ಟ ಸುಖ ವಿಚಾರಿಸುತ್ತಾರೆ. ಎಷ್ಟೋ ಬಾರಿ ಅವರ ಅಪ್ಪ ಅಮ್ಮನಿಗೆ ಪುರುಸೊತ್ತಿಲ್ಲದವರೂ ಅಂತವರ ಬಳಿ ಬಂದು ತಮ್ಮ ಕಷ್ಟ ಸುಖ ಹೇಳಿಕೊಳ್ಳುತ್ತಾರೆ. ಅವರನ್ನು ಕೇಳಿಸಿಕೊಳ್ಳುವ ಸಹನೆಯಿದೆಯಲ್ಲ. ಅದೂ ಸಹ  ಆದರಣೀಯ ಗುಣ. ಅಂಥಹ ಅನೇಕರು ನಮ್ಮ ನಡುವೆ ಸಿಗುತ್ತಾರೆ.  ವಿಪಯರ್ಾಸವೆಂದರೆ ಹಾಗೆ ಕೇಳಿಸಿಕೊಂಡವರನ್ನೇ ಕಾಲಕ್ರಮೇಣ ಅವರೂ ಮರೆತುಬಿಡುತ್ತಾರೆ! ಬದುಕಿನ ಜಂಜಾಟಗಳ ಮಧ್ಯೆ ಯಾರಿಗೂ ಯಾರಿಗಾಗಿಯೂ ಸಮಯ ಕೊಡಲೇಬೇಕೆಂಬ ನಿಯಮವಿಲ್ಲ. ಪ್ರಪಂಚದಲ್ಲಿ ಎಲ್ಲಕ್ಕಿಂತ ಬೆಲೆಬಾಳುವುದೆಂದರೆ ಸಮಯ. ಅಂತಹ ಅಮೂಲ್ಯ ಸಮಯವನ್ನು ನಮಗೋಸ್ಕರ ಕೊಟ್ಟವರಿಗಾಗಿ ನಮ್ಮ ಬಳಿ ಐದು ಸೆಕೆಂಡಿನಷ್ಟು ಸಮಯ ಉಳಿಯದೇ ಹೋಗುವುದಿದೆಯಲ್ಲ ಇದಕ್ಕೆ ಏನನ್ನಬೇಕು ಅನ್ನುವ ಪ್ರಶ್ನೆ ಕೂಡ ಇದೆ ನನಗೆ.!

 ವಿನಾಕಾರಣ ಪ್ರೀತಿಸುವವರನ್ನು ನೋಡುತ್ತೇವೆ.  ಹೀಗೆ ಪ್ರೀತಿಸಲು ಕಾರಣಗಳು ಬೇಕಿಲ್ಲ. ಯಾವ ನಿರೀಕ್ಷೆಗಳಿಲ್ಲದೇ ನಮ್ಮ ನಡುವೆ ನಮ್ಮನ್ನು ಪ್ರೀತಿಸುವೆಷ್ಟೋ ಶಿಕ್ಷಕರಿರುತ್ತಾರೆ. ಅಭಿಮಾನಿಗಳಿರುತ್ತಾರೆ.  ಸುಮ್ಮನೆ ಸ್ನೇಹಿತರಿರುತ್ತಾರೆ. ಕೆಲವರಿಗೆ ಪ್ರೀತಿ ಎನ್ನೋದು ಕಾಮುಕ. ಆದರೆ ಇನ್ನು ಕೆಲವರಿಗೆ ಪ್ರೀತಿ ದೈವಿಕ. ಅವರಲ್ಲಿ ನಿರಪೇಕ್ಷತೆಯಿರುತ್ತದೆ ಎಂಬುದು ನಿಜವಾದರೂ ಸ್ಪಂದಿಸುವ ಮನಸ್ಸನ್ನಂತೂ ಹೊಂದಿರಬೇಕಾಗುತ್ತದೆ. ಎಲ್ಲರ ಪ್ರೀತಿಗೆ ತೆರೆದುಕೊಳ್ಳಲಾಗದು ಎಂಬುದು ಒಂದು ಸತ್ಯವಾದರೆ ಒಂದು ಸಹಜ ಒರತೆಗೆ ಒಡ್ಡಿಕೊಳ್ಳುವಷ್ಟು  ಮನಸಿನ ಕೊಳವನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು. ಸ್ನೇಹ, ಅಣ್ಣ, ತಮ್ಮ, ಅಕ್ಕ, ತಂಗಿ, ಇನ್ಯಾವುದೋ ನಂಟಿನ ಭಾವಕ್ಕೆ ಕಲ್ಮಶವಿಲ್ಲದಿದಲ್ಲಿ ಪ್ರೀತಿ ಎಷ್ಟು ಅಂದ! ಆನಂದ!ಹಾಗಿದ್ದೂ ಅವನ್ನೆಲ್ಲ ನಮ್ಮ ನಮ್ಮ ಈಗೋ ಗಳ ಮೂಲಕ ಸದಾ ಹಳದಿಕಣ್ಣಿನ ಗ್ಲಾಸಿನ ಮೂಲಕ ನೋಡುವವರು ಬೇಕಾದಷ್ಟು ಜನರಿದ್ದಾರೆ. ಇದಕ್ಕೆ ಪೂರಕವಾಗಿ
ಪ್ರೀತಿಯ ಹೆಸರಲ್ಲಿ ಸ್ನೇಹದ ಹೆಸರಲ್ಲಿ ದುರುಪಯೋಗ ಪಡಿಸಿಕೊಳ್ಳುವವವರೂ ಸಾಕಷ್ಟು ಜನರಿದ್ದಾರೆ.  ಹಾಗಾದರೆ ನಾವು ನಿರ್ಮಲವಾಗಿ ಇರಬೇಕೆಂದರೆ ಹೇಗಿರಬೇಕು ಸ್ನೇಹ? 

  ಇವತ್ತಿಗೆ ಸಾಕಲ್ಲವಾ ಇಷ್ಟು ಪ್ರಶ್ನೆ? ಮತ್ತೆ ಇದೇ ತೀರದಲ್ಲಿ ಸಿಗೋಣ  ಆಗಾಗ. ನಿಮ್ಮ ಅನಿಸಿಕೆಗಳಿಗಾಗಿ  ಮುಂದಿನ ಜಾಗ.







    


14 comments:

  1. ನನ್ನದೇ ಪ್ರಶ್ನೆಗಳು ಇವು.. ನೀವು ಕೇಳಿದ ಹಾಗಿದೆ. ಸ್ವಾರ್ಥ ಇಲ್ಲದೆಡೆ ಮನುಷ್ಯ ಏನು ಮಾಡಲಾರ. ತನ್ನ ಸ್ವಾರ್ಥ, ತನ್ನವರಿಗಾಗಿನ ಸ್ವಾರ್ಥ, ತನ್ನ ಸಮಾಜದ ಸ್ವಾರ್ಥ, ತನ್ನ ನಾಡು, ತನ್ನ ದೇಶ, ತನ್ನ ಪ್ರಪಂಚದ ಸ್ವಾರ್ಥವೇ ಈ ಜಗದ ಪ್ರತೀ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಕಾರಣ. ಮನಸ್ಸಿನ ಮಾತುಗಳನ್ನ ಬಹಳ ಸುಂದರವಾಗಿ ಹರವಿದ್ದೀರ ಸಿರಿ ಅಕ್ಕ. ಇಷ್ಟ ಆದವು.

    ReplyDelete
  2. ಧನ್ಯವಾದಗಳೆಂಬ ಪದ ಚಿಕ್ಕದು. ಅದರ ಹಿಂದೆ ಮನಸ್ವೀ ಭಾವತುಂಬಿದ ಕೃತಜ್ಞತೆಯಿದೆ. ನಿಮ್ಮ ಅನಿಸಿಕೆಗಳೆಲ್ಲವೂ ಬರೆಯುವವರನ್ನು ತಲುಪಿದೆ ಎಂಬುದಕ್ಕೆ ಮರುದನಿಯಂತ ಪ್ರೀತಿ ಇಲ್ಲಿದೆ. ಧನ್ಯವಾದಗಳು ಸತೀಶ್.

    ReplyDelete
  3. ಮನಸಿನ ಪ್ರಶ್ನೆಗಳಿಗೆ ಉತ್ತರವೆ ಈ ಲೇಖನದ ಸಾರಾಂಶ. ಎಲ್ಲ ಹಂತ, ಎಲ್ಲಾ ಸಮಯಗಳು ಎಲ್ಲರಿಗು ಬಯಸಿದ್ದನ್ನೆ, ಇಷ್ಟವಾದುದನ್ನೆ, ಬೇಕಾದುದನ್ನೆ ಮಾಡುತ್ತಿರಲು ಬಿಡುವುದಿಲ್ಲ. ಅದಕ್ಕಾಗಿ ಪರಿತಪಿಸುವ ಮೋಹ ಅಡಗಿದರೆ ಪ್ರೋತ್ಸಾಹಿಸುವ ಕುಟುಂಬದೊಂದಿದಿಗೆ ಸಮಯಸಿಗುತ್ತದೆ ಅದಲ್ಲವೇ ಸ್ವಾನುರಾಗ.? ಮತ್ತೆ ಸಿಗೋಣ ಸಾಹಿತ್ಯ ಸರೋವರದಲ್ಲಿ. ಮಾರ್ಮಿಕವಾಗಿ ಬರೆದಿದ್ದೀರಿ. ಚನ್ನಿದೆ.

    ReplyDelete
  4. ಜೀವನದ ಸಮಗ್ರತೆಯಲ್ಲಿ ಸಮಸ್ತ ಮಸಾಲಗಳು ಬೆರೆತು ಬದುಕನ್ನು ಪಕ್ವ ಮಾಡುತ್ತದೆ. ಆದರೆ ಎಲ್ಲೋ ನಮ್ಮಂತಹ ನತದುಷ್ಟರ ಬದುಕಲ್ಲಿ ಮಾತ್ರ ಸಿಹಿಗಿಂತಲೂ ಕಹಿಯೇ ಸದಾ ನಾಲಿಗೆ ಮೇಲೆ ಆಂಟಿ ಬಿಟ್ಟಿರುತ್ತದೆ!
    ಬಹಳ ಮಾರ್ಮಿಕವಾದ ಬರಹ.
    best of best :
    "ಬದುಕು ಒಂದಿಷ್ಟು ಕಾಲಘಟ್ಟದಲ್ಲಿ ಹದವಾಗುತ್ತದೆ, ಇನ್ನೊಂದು ಕಾಲಘಟ್ಟದಲ್ಲಿ ಪಕ್ವಗೊಳ್ಳುತ್ತದೆ. ಮತ್ತೊಂದು ಕಾಲಘಟ್ಟದಲ್ಲಿ ಪರಮಾನ್ನವಾಗುತ್ತದೆ ಆಗಬೇಕು ಎಂಬುದು ಸಹಜ"

    ReplyDelete
  5. ಅಕ್ಕಾ ಸಮಯವೆಂಬುದು ಅಮೂಲ್ಯ ನಿಜ... ಪುರಸೊತ್ತು ಅಂತೀವಲ್ಲಾ ಅದು ಸಮಯಕ್ಕಿಂತಲೂ ಅಮೂಲ್ಯವಾಗಿಬಿಟ್ಟಿದೆ ನೋಡು ಈಗಿನ ಕಾಲಮಾನದಲ್ಲಿ... ಎಲ್ಲೋ ಒಂದೆರಡು ಕಡೆಯಲ್ಲಿನ ಉದಾಹರಣೆ ಹೇಳುತ್ತೇನೆ.. ನಾನೊಂದು ಕಡೆ ಹೋಗಿದ್ದೆ...ಮನೆಯ ಯಜಮಾನ ಪೇಪರ್ ಓದ್ತಾ ಕುಂತಿದಾನೆ... ಮಕ್ಕಳಿಬ್ಬರು ಟಿ.ವಿ. ನೋಡ್ತಿದಾರೆ... ಅಮ್ಮ ಬಂದು ಇಲ್ಲೇ ಪಕ್ಕದಂಗಡಿಗೆ ಹೋಗಿ ಹಾಲು ತನ್ರೀ ಅಂದ್ರೆ ಆತ ಹೇಳೋ ಉತ್ತರ ನನಗೆ ಪುರಸೊತ್ತಿಲ್ಲ... ಟಿ.ವಿ. ನೋಡೋ ಮಕ್ಕಳಿಗೂ ಪುರುಸೊತ್ತಿಲ್ಲ...

    ಬರಹ ಓದಿ ಪ್ರಸಂಗ ನೆನಪಾಯ್ತು...

    ಚಂದದ ಬರಹ .....

    ReplyDelete
  6. ಪ್ರಾಯಶಃ ಈ ಬ್ಲಾಗಿಗೆ ನನ್ನ ಮೊದಲ ಭೇಟಿ....ವಂದನೆಗಳು..ಅಹ್ ಪ್ರಶ್ನೆಗಳಿಗೆ ಉತ್ತರಿಸುವಷ್ಟು ದೊಡ್ಡವ ನಾನಲ್ಲ...ಏನೋ ಹೊಳೆದದ್ದು ಹೇಳಿದರೂ ಅದು ಬರೀ ಇನ್ನೊಂದು ಕಮೆಂಟಾಗಿಯೇ ಉಳಿದೀತು ಅಷ್ಟೇ...ಉಳಿದವರ ಪ್ರತಿಕ್ರಿಯೆ ನೋಡಿ ಖುಷಿ ಪಟ್ಟೆ...ಬರೀತಾ ಇರಿ...
    ನಮಸ್ತೆ :)

    ReplyDelete
  7. ವಿನಾಯಕ್ ಭಾಗ್ವತ್, ಬದರಿ ಸರ್,ರಾಘವ್ ಭಟ್, ಚಿನ್ಮಯ್ ಭಟ್ ಎಲ್ಲರಿಗೂ ತುಂಬ ತುಂಬ ಧನ್ಯವಾದಗಳು.
    ಬದರಿ ಸರ್ "ನಮ್ಮಂತಹ ನತದುಷ್ಟರ ಬದುಕಲ್ಲಿ ಮಾತ್ರ ಸಿಹಿಗಿಂತಲೂ ಕಹಿಯೇ ಸದಾ ನಾಲಿಗೆ ಮೇಲೆ ಆಂಟಿ ಬಿಟ್ಟಿರುತ್ತದೆ! " ನಿಮ್ಮ ಈ ಮಾತು ನನಗೆ ಪೂರ್ಣ ಅರ್ಥವಾಗಲಿಲ್ಲ. ಬದುಕಲ್ಲಿ ಕಹಿ ಎಂಬುದು ವರ್ಜ್ಯ ಅಂತ ಯಾಕಂದುಕೊಳ್ಳಬೇಕು? ಕಷ್ಟಗಳು ಕಹಿಗಳು ಬದುಕನ್ನು ಇನ್ನಷ್ಟು ಪಕ್ವ
    ಆಗಿಸಲು ಸಾಧನಗಳು ಅಂದುಕೊಂಡರೆ ಕಹಿಯಾದ ಎಲ್ಲವೂ ಔಷಧವಾಗಿ ನಮ್ಮನ್ನು ಗಟ್ಟಿಗೊಳಿಸುತ್ತವೆ. ಒಂದು ಚಂದದ ಮಾತು ಇಲ್ಲಿ ನೆನಪಿಗೆ ಬರುತ್ತದೆ"ಕಷ್ಟಗಳ ಕೊಡಬೇಡ ಎನಲಾರೆ ರಾಮ. ಕಷ್ಟ ಸಹಿಸುವ ಸಹನೆ ಶಕ್ತಿ ಕೊಡು ನನಗೆ ರಾಮ" ಸರ್ ಹಾಗೆ ನೋಡಿದರೆ ಕಷ್ಟವಿಲ್ಲದ ಮನುಷ್ಯ ನೋವು, ಅಸಹನೆ, ಏನೂ ಇಲ್ಲದ ಮನುಷ್ಯರು ಸಿಗಲಾರರು. ಆ ಸಮಯಕ್ಕೆ ಅದು ಸಹಿಸಲಸಾಧ್ಯ ಎನ್ನಿಸುವುದು ಸತ್ಯವಾದರೂ ಕಾಲವೆಂಬ ಮಹಾ ವಿಸ್ಮಯದಲ್ಲಿ ಎಲ್ಲ ಕಳೆದುಹೋಗುವುದು. ನಾಳೆಗಳು ನಮ್ಮವೆಂಬ ಆಶಾವಾದವೇ ಬದುಕಿಗೆ ಸಂಜೀವಿನಿ. ಇದು ನನ್ನ ಅನಿಸಿಕೆ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

    ReplyDelete
  8. ರಾಘವ್ ಭಟ್ ನೀವು ಹೇಳಿದ್ದು ನಿಜ. ನಿಜವಾದ ಬದುಕಿನ ಒತ್ತಡಗಳು ಎಷ್ಟೇ ಇದ್ದವರೂ ತಮ್ಮವರಿಗಾಗಿ ಎರಡು ಕ್ಷಣಗಳ ಬಿಡುವು ಮಾಡಿಕೊಳ್ಳುತ್ತಾರೆ! ಆದರೆ ಈ ಪುರುಸೊತ್ತಿಲ್ಲದವರಿಗೆ ಯಾವಾಗಲೂ ಸಿಗುವುದೇ ಇಲ್ಲ ಸಮಯ! ದೇಶದ ಪ್ರಧಾನಿಗಿಂತಲೂ ಬ್ಯುಸೀ ಅವರು!

    ಚಿನ್ಮಯ್ ಭಟ್ ನಿಮ್ಮ ಬೇಟಿ ನನಗೂ ಖುಶಿಕೊಟ್ಟಿತು. ಆಗಾಗ ಬರ್ತಾ ಇರಿ ಮಾನಸ ಸರೋವರಕ್ಕೆ.

    ReplyDelete
  9. ಅಕ್ಕಾ ..



    ನೀವು ಹೇಳಿದ್ ಮೇಲು ... ನಾ ಓದಲಿಲ್ಲವೆಂದಾರೆ ಅದು ನನ್ನ ತಪ್ಪಾದಿತು ..


    ಏಕೋ ಇ ಬರಹದ ಮೇಲಿನ ಶೀರ್ಷಿಕೆ ಓದಿ ಖೇದ ವೆನಿಸಿತು ... ಇರಲಿ.


    ನನಗೀಗ ಸಮಯವಿಲ್ಲ ಎಂಬುದರಲ್ಲಿ ಎಷ್ಟು ಸತ್ಯ. .. ಉಟಕ್ಕೆ ಸಮಯವಿದೆ .. ಟೀ ಕುಡಿಯೋಕೆ ಸಮಯವಿದೆ. . ಕೊನೆಗೆ ಪ್ರಯಾಣಕ್ಕೆ ..T V ನೋಡೋಕೆ ಸಮಯವಿದೆ ಎಂದಾದರೆ ದಿನದ ೨೪ ಗಂಟೆ ಯಲ್ಲಿ ೧ ಕ್ಷಣ ವು ಇಲ್ಲವೆ..


    ತುಂಬಾ ಮುಗ್ದವಾದ ಬರಹ ... ಓದಿ ಕಣ್ಣ ಅಂಚಲ್ಲಿ ನೀರು ತುಂಬಿ ಹರಿಯಿತು .. ಇನ್ನಾದರೂ ನಿಮ್ ಮಾನಸ ಸರೋವರದಲ್ಲಿ ಅಲೆಗಳು ಸದ್ದು ಮಾಡುವುದೇನೋ ಎಂಬ ಆಶಯದಲ್ಲಿ ... ರಘು

    ReplyDelete
  10. ರಾಘು, "ನನಗೀಗ ಸಮಯವಿಲ್ಲ" ಎಂಬುದು ಮನುಷ್ಯ ಮನಸ್ಸಿನ ನೆಪಕ್ಕೆ ಕೊಟ್ಟುಕೊಳ್ಳುವ ವ್ಯಾಖ್ಯಾನವಷ್ಟೆ ಎಂಬುದನ್ನು ಈ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ನೀವು ಹೇಳಿದಂತೆ ನಮಗ ಬೇಕಾದ ಎಲ್ಲದಕ್ಕೂ ಸಮಯವಿದೆ. ಸಮಯ ಮಾಡಿಕೊಳ್ಳುತ್ತೇವೆ.ಈ ದಿನ ವಲ್ಲದಿದ್ದರೆ ಈ ವಾರದಲ್ಲಿಯಾದೂ ಸಮಯ ಮಾಡಿಕೊಳ್ಳುತ್ತೇವೆ ಅಲ್ಲವ? ಮನಸಿನ ಸುತ್ತ ಬದುಕಿನ ಸುತ್ತ ಸುತ್ತಿಕೊಳ್ಳುವ ಪ್ರಶ್ನೆಗಳೇ ಬರಹವಾಗಿದೆ. ಹಾಂ. ಮತ್ತೆ ಅಲೆಗಳು ತೇಲಿ ಬರಲಿವೆ ನಿರೀಕ್ಷಿಸಿ.

    ReplyDelete
  11. ಪುರುಸೊತ್ತು ಎಂಬುದು ಯಾರಪ್ಪನ ಸೊತ್ತೂ ಅಲ್ಲ. ಹಾಗಾಗಿ ಅದು ಪಿತ್ರಾರ್ಜಿತವಾಗಿ ಬರುವುದಿಲ್ಲ. ಸ್ವಯಂ ಅರ್ಜಿಸಿಕೊಳ್ಳಬೇಕಾದ್ದು :)

    ReplyDelete
  12. ಸಮಯ ಬದಲಾಯಿತೇ ?? ಸಮಯ ಬದಲಾಯಿಸಿತೆ? ... ನಾವೇ ಬದಲಾದವೇ ?...ಅಥವಾ ನಾವೇ ಸಮಯವನ್ನೇ ಬದಲಾಯಿಸಿದೇವೇ?.. ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ​

    ReplyDelete
  13. ಸಮಯ ಸಿಗುವುದಿಲ್ಲವೋ, ಅಥವಾ ಸಮಯ ಸಿಗದಂತೆ ನಾವಾಗಿದ್ದೇವೋ ಗೊತ್ತಿಲ್ಲ..ಯಾರನ್ನೇ ಕೇಳಿದ್ರೂ ಬ್ಯೂಸಿ ಅನ್ನೋದಂತೂ ಸತ್ಯ

    ReplyDelete