Wednesday, December 11, 2013

ವ್ಯಾವಹಾರಿಕ ಪ್ರಪಂಚದಲ್ಲಿ ಸಾತ್ವಿಕ ಪ್ರತಿಭಾವಂತ..



              ಸಾತ್ವಿಕ ಚಿಂತನೆಗಳ ಹಂಚಿಕೊಳ್ಳಲೆಂದೇ ಒಂದಷ್ಟು ಸ್ನೇಹಗಳು ಹುಟ್ಟಿಕೊಳ್ಳುತ್ತವೆ. ಅಂತಹ ಸ್ನೇಹಗಳಿಗೆ
ಋಣಿ ನಾನು.      ಬದುಕಿನ ಅಸಮ್ಮತಿಗಳ ನಡುವೆ ಸಮ್ಮತಿಯೆಂಬುದು ಹುಟ್ಟುವುದೇ ಇಲ್ಲಿ. ಸಾತ್ವಿಕ ಚಿಂತನೆಗಳು
ಹರಡಿಕೊಂಡು   ಅವುಗಳಿಗೆ ಸರಿಯಾದ ಆಧಾರವನ್ನು, ಬಲವನ್ನು ಪಡೆದುಕೊಳ್ಳುವುದು ಸಮಾನ ಮನಸ್ಕರ ಸ್ನೇಹ
ಗಳಿಂದಾಗಿ ಕಾವ್ಯ,ಕಥನ, ಭಾವ, ಭಜನೆ, ಲಲಿತ ಕಲೆಗಳ ಯಾವುದೇ ಪ್ರಕಾರಗಳು ಹಾಗೂ ಎಲ್ಲಾ ಜೀವಂತ ಪ್ರತಿಭೆಗಳು
ರಸೋತ್ಪನ್ನಗೊಳ್ಳುವ ಎಲ್ಲ ಭಾವಕಲೆಗಳಿಗೂ ಬಲಕೊಡುವುದು ಸಮಾನ ಆಸಕ್ತಿ ಹಾಗೂ ವಿಮರ್ಶೆಯ ಒರೆಹಚ್ಚುವಿಕೆ.
ಹಾಗೆ ಆರಂಭವಾದ ಎಲ್ಲ ಸ್ನೇಹಗಳೂ ಹಂತ ಹಂತವಾಗಿ ಬೆಳವಣಿಗೆಯನ್ನು ಕಾಣಬೇಕು. ಹಾಗಾದಾಗ
ನಾವೂ ಬೆಳೆಯುತ್ತೇವೆ. ನಮ್ಮೊಂದಿಗೆ ಎಲ್ಲರೂ ಬೆಳೆಯುತ್ತಾರೆ.

 ದುರದೃಷ್ಟವಶಾತ್  ಇವತ್ತು ಹೀಗಾಗುತ್ತಿಲ್ಲ. ಹುಟ್ಟಿಕೊಳ್ಳುವಾಗ ಸಾತ್ವಿಕವಾಗಿರುವ ಸ್ನೇಹ ಬೆಳೆಯುತ್ತ ಬೆಳೆಯುತ್ತ
ಸ್ವಾರ್ಥವಾಗುತ್ತದೆ. ಎಲ್ಲಿ ಯಾರನ್ನು ಎಷ್ಟು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳಬಹುದೆಂಬ ಮಾನದಂಡದ ಮೇಲೆ ಸ್ನೇಹ
ನಿಲ್ಲುತ್ತದೆ. ಯಾರು ಎಷ್ಟು ಸಹಾಯ ಸಹಕಾರ ನೀಡಬಲ್ಲರೆಂಬುದು(ಲೆಕ್ಕಾಚಾರವಾಗಿ) ಸ್ನೇಹದ ತಳಪಾಯವಾಗುತ್ತದೆ.
ಋಣ ಸಂದಾಯ ಕೂಡ ಬಹಳ ದೊಡ್ಡ ಮೊತ್ತದ ಏನನ್ನೋ ನಿರೀಕ್ಷಿಸುತ್ತದೆ. ಅದು ಹಣ ಹೆಸರು ಇನ್ನೇನೂ ಆಗಿರಬಹುದು!
ಇದು ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ನಾಟ್ಯ, ಸಂಗೀತ, ಅಭಿನಯ, ಚಿತ್ರಕಲೆ, ಯಾವುದೇ ಇರಬಹುದು. ಕಲಾಕಾರ ವ್ಯಾವಹಾರಿಕ ಮೋಸಕ್ಕೆ ಪದೇ ಪದೇ ಒಳಗಾಗುವುದು ನೋಡುತ್ತೇವೆ. ಯಾಕೆಂದರೆ ಪ್ರತೀ ಕಲಾವಿದನೂ ಭಾವಜೀವಿಯಾಗಿದ್ದಾನೆ. ಬದುಕು ಅವನಿಗೆ ನಿರಂತರ  ವ್ಯಾವಹಾರಿಕ ಪಾಠಗಳನ್ನು ಹೇಳಿಕೊಡುತ್ತದೆ. ಹಾಗೆ ಹೇಳಿಕೊಡುವವರಲ್ಲಿ ಸುತ್ತ ಮುತ್ತಲಿನವರೇ ಹೆಚ್ಚು ಪ್ರಮುಖ ಪಾತ್ರ  ವಹಿಸುತ್ತಾರೆ.

            ಸಾಹಿತಿಯ ಪುಸ್ತಕಗಳು ಅವನ ಮತ್ತು ಅವನ ಸಂಸಾರದ ಹೊಟ್ಟೆತುಂಬಿಸುವುದಿಲ್ಲ.  ಆಸಕ್ತ ಪ್ರಕಾಶಕರು ಕೈ ಸುಟ್ಟುಕೊಳ್ಳುತ್ತಾರೆ    ಆದರೆ ವೃತ್ತಿನಿರತ ಪ್ರಕಾಶಕರು ಪುಸ್ತಕವನ್ನೇ ಬಂಡವಾಳವಾಗಿಸಿಕೊಂಡು ಬೇಕಾದಷ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಅವರಿಗೆ ಪುಸ್ತಕದಲ್ಲಿ ಏನಿದೆ ಎಂಬ ಮಾಹಿತಿಯೂ ಬೇಕಾಗುವುದಿಲ್ಲ ಕೆಲವು ಬಾರಿ. ಸಂಗೀತವನ್ನೇ ಉಸಿರಾಗಿಸಕೊಂಡು ಹಾಡುವವರು  ಕೆಲವೇ ಪ್ರೋಗ್ರಾಂಗಳಿಗೆ ತೃಪ್ತಿಪಟ್ಟುಕೊಳ್ಳಬೇಕು. ದೇವಸ್ಥಾನ  ಸಭೆ ಸಮಾರಂಭಗಳಿಗೆ ಹಾಡಿ ಖುಶಿ ಪಡಬೇಕು ಸಂಗೀತವನ್ನು  ವೃತ್ತಿಯಾಗಿಸಿಕೊಂಡವರಿಗೆ ಹಣದ ಹೊಳೆ. ನಿಜಕ್ಕೂ ಕಲಾವಿದನಾದವನು ವೃತ್ತಿಯಾಗಿ ಆಯ್ದುಕೊಂಡಾಗ ಅವನಿಗೆ ಯಾವುದೇ ಕಲೆಯನ್ನು ಪೂರ್ಣ ನೂರಕ್ಕೆ ನೂರು ತೊಡಗಿಸಿಕೊಳ್ಳಲಾಗದು ಹಾಗೆ ತೊಡಗಿಸಿಕೊಂಡವನನನ್ನೂ ಕೂಡ ಅವರನ್ನೂ ಉಪಯೋಗಿಸಿಕೊಂಡು ಹಣ ಹೆಸರು ಮಾಡಿಕೊಳ್ಳುವ ಅನೇಕರನ್ನು ನೋಡಬಹುದು.


         ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತಗಳು ಇಂದು ಬಹಳ ದುಬಾರಿಯಾಗುತ್ತಿವೆ ಎಂಬದು ಸದ್ಯದ ಒಳನೋಟ ಬಲ್ಲವರ ಮಾತು. ಗುರುಕುಲ ಮಾದರಿಯ ಈ ಶಾಲೆಗಳು   ಕೂಡ  ಹಣ  ಮಾಡುವ   ಕೇವಲ   ಹಣ ಮಾಡುವ ಇಂದಿನ ವಿದ್ಯಾಸಂಸ್ಥೆಗಳ ದಾರಿ ಹಿಡಿದಿವೆ. ಈ ನೃತ್ಯಪಟುಗಳು, ಸಂಗೀತ ಸಾಧಕರು ಮತ್ತು ಸಾಹಿತ್ಯದ ಉನ್ನತ ಹೆಸರು ಪಡೆದವರು ಸಹ ಕಲೆಯನ್ನು ಮೊದಲಿನಂತೆ ಸರಸ್ವತಿಯಾಗಿ ಆರಾಧಿಸುವ ಬದಲು ಲಕ್ಷ್ಮಿಯನ್ನು ಕೊಡುವ ಸಾಧನವಾಗಿ  ಬಳಸಿ  ಕೊಳ್ಳುತ್ತಿರುವುದು  ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ತಿಳಿಯುತ್ತಿಲ್ಲ. ನಮ್ಮ ಸಂಸ್ಕೃತಿಯ ಕೊಡುಗೆಯಂತಿರುವ ಈ ವಿದ್ಯೆಗಳು ಸಹ ಇಂದು ಕೇವಲ ಹಣ ಇರುವವರ ಸೊತ್ತಾಗುತ್ತಿರುವುದು  ದೌರ್ಭಾಗ್ಯವಲ್ಲವೆ? ದೊಡ್ಡ ದೊಡ್ಡ ಸಿಟಿಗಳಲ್ಲಿ ಹಣವಂತರ ಮಕ್ಕಳಿಗೆ ನೃತ್ಯ ಶಾಲೆಗಳಿಗೆ ಸೇರಿಸುವುದು ಮತ್ತು ಸಂಗೀತಕ್ಕೆ ಕಲಿಸುವುದೆಂಬದು ಪ್ರೆಸ್ಟೀಜ್ ನ ಪ್ರಶ್ನೆಯಷ್ಟೆ. ಮಕ್ಕಳಲ್ಲಿಯ ಪ್ರತಿಭಾವಂತರ ಗುರುತಿಸಬೇಕಾದ ಗುರುಸ್ಥಾನಿಗಳು ಇದನ್ನು ಯೋಚಿಸಬೇಕಾಗಿದೆ.

  ಸರಕಾರಗಳಿಗಂತೂ ಸಂಸ್ಕೃತಿಯ ಉಳಿಸಿ ಬೆಳೆಸುವದರಲ್ಲಿ ಆಸಕ್ತಿಯಿಲ್ಲ. ಒಂದೊಂದು ಇಲಾಖೆಗಳೂ ಒಂದಿಷ್ಟು ಜನರ
ಹೊಟ್ಟೆತುಂಬಿಸುವ ಸಾಧನಗಳಷ್ಟೆ. ಉಳಿಸಿ ಬೆಳೆಸುವ ಗುರು ಸ್ಥಾನದ ಪ್ರತಿಯೊಬ್ಬರೂ ಯೋಚಿಸಬೇಕಿದೆ ಸಂಸ್ಕೃತಿಗೆ ಈ ತಲೆಮಾರಿನ ಕೊಡುಗೆಗಳೇನು ಅಂತ.  ಅದು ಕೇವಲ ವ್ಯಾಪಾರವಾಗಿ ಉಳಿಯದೇ ಪ್ರತಿಭೆಯ ಮೌಲ್ಯ ಮಾಪನ ವಾಗಲಿ ಎಂದಷ್ಟೇ ಕೋರಬಹುದು ನಮ್ಮಂತವರು.


         ವಿಷಯ ಆರಂಭವಾದದ್ದು ಸಾತ್ವಿಕ ಚಿಂತನೆಗಳ ಸ್ನೇಹದ ಕುರಿತು. ಎಲ್ಲಿಂದ ಎಲ್ಲಿಗೋ ತಲುಪಿತು. ಆದರೆ  ವಾಸ್ತವದಲ್ಲಿ ಯೋಚನೆ ಮಾಡಿದರೆ ಇಂತಹ ಸಂದರ್ಭದಲ್ಲಿ  ಮನುಷ್ಯನ ಒಳಗಿರುವ ನಿಜವಾದ ಪ್ರತಿಭೆ ಅರಳುವುದು ಸ್ನೇಹವಲಯದಲ್ಲಿ. ಜೀವಂತಿಕೆಯ ಒಳ ತುಡಿತಗಳು ಕಲೆಯ ರೂಪದಲ್ಲಿ ಮೊದಮೊದಲು ತಾಗುವುದು ಸ್ನೇಹಗಳಲ್ಲೇ. ಅದರಲ್ಲೂ ಆಸಕ್ತ ಮನಸ್ಸಿನವರ ನಡುವೆ ಮಾತ್ರ ಕಲಾವಿದ ತನ್ನೊಳಗಿನ ಪ್ರತಿಭೆಯನ್ನು ಹೊರಗಿಡಬಲ್ಲ. ಅದು ಒಳ್ಳೆಯ ಸಾತ್ವಿಕ ಚಿಂತನೆ, ಮಂಥನಗಳ ಮೂಲಕ  ಒರೆಹಚ್ಚಿಕೊಳ್ಳುತ್ತ ಬೆಳೆಯುವ ಮೊದಲ ಹೆಜ್ಜೆ. ಈ ಹೆಜ್ಜೆಗೆಷ್ಟು ಬಲವಿದೆ ಎಂಬುದು  ಗುರುವಿಲ್ಲದೇ ಅರಳಿದ ಇಂತ ನೂರಾರು ನವ ನವೀನ ಪ್ರತಿಭೆಗಳ, ಹಳ್ಳೀ ಮರೆಯಲ್ಲಿ ಹರಡಿದ ಕುಸುಮ ಗಂಧಗಳ ನಾವು ನೋಡುತ್ತೇವೆ. ಅವೇನೂ  ಯಾವ ದೊಡ್ಡ ವಿದ್ವಾಂಸನ ವಂಶಸ್ಥನಾಗಲೀ ಯಾವ ಗಾಡ್ ಪಾದರ್ ಗಳ ನೆರಳಾಗಲೀ ಕಂಡಿರುವುದಿಲ್ಲ. ಎಷ್ಟೋ ಬಾರಿ ಮಕ್ಕಳಲ್ಲಿರುವ ಪ್ರತಿಭೆ ತಂದೆ ತಾಯಿಗಳ ಗಮನಕ್ಕೂ ಬಂದಿರುವುದಿಲ್ಲ. ಅಂತ ಅನೇಕ ಜನ ನಮ್ಮೊಡನೆ
ಆಡುತ್ತ ಹಾಡುತ್ತ ನಲಿಯುತ್ತ ಅನೇಕ ವಿಸ್ಮಯಗಳ ಕಟ್ಟಿಕೊಡುತ್ತಾರೆ ಅಂಥ ಎಲ್ಲ ಜೀವ ಭಾವ ತುಂಬಿದ ಕಲಾವಿದರೂ ಸಾಹಿತಿಗಳೂ ಬಹುತೇಕ ಭಾವುಕ ಮನದವರಿರುತ್ತಾರೆ. ಅವರನ್ನು ಸಾತ್ವಿಕವೆಂದು ನಂಬಿದ್ದ ಸ್ನೇಹವಲಯದಲ್ಲಿ ದುರುಪಯೋಗ ಮಾಡಿಕೊಳ್ಳಲು ಒಬ್ಬ ಬುದ್ದಿವಂತ ಸಿಕ್ಕರೆ ಸಾಕು. ಎಷ್ಟೋ ಬಾರಿ ಇಂದಿನ ಕಾರ್ಪೋರೇಟ್ ಪ್ರಪಂಚ ಕೂಡ
ಇಂತಹ ಕೆಲಸ ಮಾಡುತ್ತಿರುವುದು ಕಂಡರೆ ಬೇಸರವಾಗುತ್ತದೆ. ಇಲ್ಲಿ ಎಲ್ಲರೂ ಅಂಥವರೇ ಎಂದು ಹೇಳುತ್ತಿಲ್ಲ ನಾನು. ಆದರೆ ಸಮಾನ ಮನಸ್ಕರೆಂದು ಕಂಡು ಆದರಿಸಿ ಹರಡಿ ಹಂಚಿಕೊಂಡ ಪ್ರತಿಭೆಗಳು ಇಂಥ ಮೋಸಗಳಿಗೆ ಬಲಿಯಾದಾಗ ನೋವಾಗುವುದು ಸಹಜವಲ್ಲವೇ?  ಬರಹಗಳನ್ನು ಬ್ಲಾಗ್ಗಳಿಗೆ ಹಾಕಿಕೊಂಡರೆ ಬರಹಗಳನ್ನು ಕದ್ದು ಬೇರೆ ಹೆಸರಲ್ಲಿ ಹಾಕಿಕೊಳ್ಳುವ ಪತ್ರಿಕೆಗಳು, ಫೇಸ್ಬುಕ್ಕ್ ಪ್ರತಿಭಾವಂತರು, ಕವಿತೆಗಳ ಕದ್ದು ಓದುವ ಕವಿಪಲ್ಲವರು ಇವರೂ ಕೂಡ ಈ ಸಾಲಿಗೆ ಸೇರುತ್ತಾರೆ ಅಲ್ಲವೆ? ಯಾವ ರಾಜಕೀಯ ಪಕ್ಷಕ್ಕೂ ಕಡಿಮೆಯಿಲ್ಲದಂತೆ ರಾಜಕೀಯ, ಸ್ವಾರ್ಥ ಈ ಕಲಾವಿದರ ಸಾಹಿತಿಗಳ ಪ್ರಪಂಚದಲ್ಲಿ ಕಂಡರೆ ಅಸಹನೆ ತನ್ನಂತಾನೇ ಹುಟ್ಟಿಕೊಳ್ಳುತ್ತದೆ. ಒಳ್ಳೆಯವರು ಇಲ್ಲ ಅಂತೇನಿಲ್ಲ. ಆದರೆ ಪ್ರಮಾಣ ಯಾವುದು ಹೆಚ್ಚಾಯಿತು ಎಂಬುದರ ಮೇಲೆ ಆ ರಂಗದ ಭವಿಷ್ಯ ನಿಲ್ಲುತ್ತದೆ. ಈ ಕುರಿತಾದ ನಿಮ್ಮ ಅನಿಸಿಕೆಗಳಿಗಾಗಿ ಕಾಯುತ್ತ..




   

8 comments:

  1. ಸರ್ವಕಾಲೀನ ಬರಹ. ಮುದ್ರಿತ ಪಠ್ಯ ಕ್ರಮದ ಜೊತೆ ಮಕ್ಕಳಲ್ಲಿ ಸಂಸ್ಕಾರ, ಕಲೆ, ಸಂಸ್ಕೃತಿ ಹಾಗೂ ಕನ್ನಡತನ ಬೆಳೆಸುವ ಮುಖ್ಯ ಜವಾಬ್ದಾರಿ ಶಾಲೆಗಳದು. ಈ ನಿಟ್ಟಿನಲ್ಲಿ ನಾನು ನಂದಿ ಬೆಟ್ಟದ ತಪ್ಪಲಿನ ಮುದ್ದೇನಹಳ್ಳಿ ಸತ್ಯ ಸಾಯಿ ಶಾಲೆಯ ವಿದ್ಯಾರ್ಥಿ ಎಂದು ನೆನಸಿಕೊಳ್ಳುವುದೇ ಎನಗೆ ಗಿರಿಮೆ.

    ReplyDelete
  2. ಧನ್ಯವಾದಗಳು ಬದರೀ ಸರ್ ಹಾಗೂ ಶ್ರೀವತ್ಸ ಕಂಚೀಮನೆ..

    ReplyDelete
  3. ಅಕ್ಕಾ ಏನೇ ಓದಲಿ ಏನೇ ಕಲಿಯಲಿ ಎಲ್ಲಾ ಬರುವ ಪರೀಕ್ಷೆಗೆ ತಯಾರಿಯಾಗಿ ಮಾತ್ರ....
    exam purpose ಮಾತ್ರ ಕಲಿತರೆ ಏನುಪಯೋಗವಾದೀತು....

    ಎಲ್ಲಾ ಹಣಕ್ಕಾಗಿಬಿಟ್ಟಿದೆ...

    ಆತ್ಮ ಸಂತೃಪ್ತಿಗಾಗುವ ಶಿಕ್ಷಣ... ನಿಜವಾದ ಜ್ಞಾನಕ್ಕಾಗುವ ಶಿಕ್ಷಣ
    ತುಂಬಾ ಕಡಿಮೆಯಾಗಿಬಿಟ್ಟಿದೆ...

    ಒಳ್ಳೆಯ ಬರಹ....

    ReplyDelete
  4. ಭಟ್ರೇ,,, ಕಳಕಳಿಯುಕ್ತ ಬರಹ,,, ಈ ರೀತಿಯ ವ್ಯವಸ್ತೆ ನಿಮ್ಮ ಮನದಲ್ಲಿ ಅದೆಷ್ಟು ನೋವನ್ನುಂಟು ಮಾಡಿರಬಹುದು ಎಂದು ತಿಳಿಸಿಕೊಡುತ್ತದೆ,,,

    ಆದರೆ ಆಧುನಿಕತೆ ಎನ್ನುವ ಕುದುರೆ ಹತ್ತಿರುವ ನಾವು ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ, ಈ ರೀತಿಯ ಪರಿಸ್ತಿತಿಯಲ್ಲಿ ಬೆಳೆದ ಮಕ್ಕಳಿಂದ ದೇಶಕ್ಕೆ ಸಹಾಯವಾಗುತ್ತದೆ ಎನ್ನುವ ಭರವಸೆಯಂತು ಸಂಪೂರ್ಣ ಸುಳ್ಳು,,,

    ಮನಮುಟ್ಟುವ ಬರಹ,,,,

    -- ನವೀನ್ ಜೀ ಕೇ

    ReplyDelete
  5. ಬಹಳ ಇಷ್ಟವಾಯ್ತು ಬರಹ ಸಿರಿ ಅಕ್ಕ. ನೀವು ಬರೆದದ್ದು ಸಮಸ್ಯೆಯನ್ನಲ್ಲ ವ್ಯವಸ್ಥೆಯನ್ನ. ಇವತ್ತು ಕಲೆ ಸಾಹಿತ್ಯ ಸಂಸ್ಕೃತಿಯ ಪ್ರತಿಭೆಗಳು ಕೇವಲ ಸಿರಿತನದ ಹಾದಿಗೊಂದು ಮೆಟ್ಟಿಲಾಗಿರೋದು ನಿಜಕ್ಕೂ ನೋವಿನ ಸಂಗತಿ.

    ReplyDelete
  6. ರಾಘವ್ ಭಟ್, ನವೀನ್ ಜಿ ಮತ್ತು ಸತೀಶ್ ಎಲ್ಲರಿಗೂ ಅನಿಸಿಕೆಗಳಿಗಾಗಿ ತುಂಬಾ ತುಂಬಾ ಧನ್ಯವಾದಗಳು.

    ReplyDelete
  7. ಸುಮಾರಿ ದಿನ ಆದ ಮೇಲೆ ನಿಮ್ಮ ಬ್ಲಾಗಿಗೆ ಭೇಟಿ :-)
    ಚೆನ್ನಾಗಿದ್ದು ಬರಹ.. ನೀವೇ ಹೇಳಿದ ಹಾಗೆ ಸಾತ್ವಿಕತೆಯ ಬಗ್ಗೆ ಶುರುವಾಗಿದ್ದ ಬರಹ ವಾಸ್ತವದ ಬಗ್ಗೆಯೆಲ್ಲಾ ಹರಿದಾಡಿ ಮತ್ತೆ ತನ್ನ ಗಮ್ಯ ಸೇರಿದಂತೆ ಅನಿಸಿತು.. ಚೆನ್ನಾಗಿದೆ

    ReplyDelete